ನವದೆಹಲಿ:ಒಡಿಶಾಕ್ಕೆ ಪ್ರಾಕೃತಿಕ ವಿಕೋಪಗಳೇನೂ ಹೊಸತಲ್ಲ. ನೈಸರ್ಗಿಕ ದುರಂತಕ್ಕೆ ರಾಜ್ಯ ಮೊದಲೇ ಸಿದ್ಧಗೊಂಡಿರುತ್ತದೆ. ಕರೊನಾ ವೈರಸ್ ವಿಚಾರದಲ್ಲೂ ಒಡಿಶಾ ಇತರೆ ರಾಜ್ಯಗಳಿಗೆ ಮಾದರಿ ಎನ್ನಬಹುದು. ಕೇಂದ್ರ ಸರ್ಕಾರಕ್ಕಿಂತ ಮುನ್ನವೇ ರಾಜ್ಯಾದ್ಯಂತ ಲಾಕ್​ಡೌನ್ ಘೊಷಿಸಿದ್ದ ಸಿಎಂ ನವೀನ್ ಪಟ್ನಾಯಕ್, ವಿಸ್ತರಣೆ ವಿಷಯದಲ್ಲೂ ಕೇಂದ್ರದ ನಿರ್ಧಾರಕ್ಕೆ ಕಾಯಲಿಲ್ಲ. ಇಲ್ಲಿ ವೈರಸ್ ಸೋಂಕಿತರ ಪ್ರಮಾಣ ಕಡಿಮೆಯಿದ್ದರೂ, ಸೋಂಕು ನಿಯಂತ್ರಣದ ಬಳಿಕವೇ ಲಾಕ್​ಡೌನ್ ಸಡಿಲಿಕೆ ಎಂದು ರಾಜ್ಯ ಸರ್ಕಾರ ಸ್ಪಷ್ಟಪಡಿ ಸಿದೆ. ಹಾಲಿ ಕೋವಿಡ್-19 ಬಿಕ್ಕಟ್ಟನ್ನು ರಾಜ್ಯ ಸರ್ಕಾರ 1999ರ ಸೂಪರ್ ಸೈಕ್ಲೋನ್​ಗೆ (ಚಂಡಮಾರುತ) ಹೋಲಿಸಿದೆ.
ಒಡಿಶಾದಲ್ಲಿ ಮೊದಲ ಕೇಸು ಗೊತ್ತಾಗಿದ್ದು ಮಾರ್ಚ್ 16ರಂದು. ಇದಾದ 35 ದಿನಗಳಲ್ಲಿ ಬೆಳಕಿಗೆ ಬಂದ ಒಟ್ಟು ಕೇಸುಗಳು 60 ಮಾತ್ರ. ಕಳೆದೊಂದು ವಾರದಲ್ಲಿ 12 ಕೇಸುಗಳು ಪತ್ತೆಯಾಗಿವೆ. ಒಟ್ಟು 24 ಮಂದಿ ಗುಣಮುಖರಾಗಿದ್ದಾರೆ. ಸದ್ಯ 61 ಸೋಂಕಿತರಿದ್ದಾರೆ. ಏಪ್ರಿಲ್ 6ರಂದು 72 ವರ್ಷದ ವೃದ್ಧ ಸೋಂಕಿಗೆ ಮೃತಪಟ್ಟಿದ್ದಾರೆ.
ಗಡಿ ಭಾಗಗಳನ್ನು ಮಾರ್ಚ್ ಆರಂಭದಿಂದಲೇ ಮುಚ್ಚುವ ಮೂಲಕ ಕರೊನಾ ವ್ಯಾಪಕ ಹರಡುವಿಕೆಯನ್ನು ಸರ್ಕಾರ ತಪ್ಪಿಸಿದೆ. 30 ಜಿಲ್ಲೆಗಳಿರುವ ರಾಜ್ಯದಲ್ಲಿ 21 ಜಿಲ್ಲೆಗಳಲ್ಲಿ ಯಾವುದೇ ಕೇಸು ದಾಖಲಾಗಿಲ್ಲ! ಮುಖ್ಯ ಕಾರ್ಯದರ್ಶಿ ಅಸಿತ್ ತ್ರಿಪಾಠಿ ಸೇರಿದಂತೆ ಕೋವಿಡ್ ನಿಯಂತ್ರಣದಲ್ಲಿ ತೊಡಗಿಸಿಕೊಂಡಿರುವ ಉನ್ನತಾಧಿಕಾರಿಗಳೆಲ್ಲರೂ ಮೂವತ್ತೂ ಜಿಲ್ಲೆಗಳಿಗೆ
ಪ್ರವಾಸ ಮಾಡುತ್ತಾ ಪರಿಸ್ಥಿತಿ ಅವಲೋಕಿ ಸುತ್ತಿದ್ದಾರೆ. ವಿದೇಶ ಪ್ರವಾಸದಿಂದ ವಾಪಸಾದ ಅನೇಕರು ತಮ್ಮ ಪ್ರವಾಸದ ಹಿನ್ನೆಲೆಯನ್ನು ಸರ್ಕಾರದೊಂದಿಗೆ ಹೇಳಿಕೊಳ್ಳುತ್ತಿಲ್ಲ. ಹೀಗಾಗಿ ಹಲವು ರಾಜ್ಯಗಳಲ್ಲಿ ಕರೊನಾ ಕೇಸುಗಳನ್ನು ಪತ್ತೆ ಹಚ್ಚುವುದೂ ಅಧಿಕಾರಿಗಳಿಗೆ ಹರಸಾಹಸವೆನಿಸಿದೆ. ಇದೇ ಕಾರಣಕ್ಕಾಗಿ, ಜನರು ತಮ್ಮ ಪ್ರವಾಸ ಹಿನ್ನೆಲೆ ಬಗ್ಗೆ ಸರ್ಕಾರಕ್ಕೆ ಮಾಹಿತಿ ನೀಡಿದರೆ ಅವರಿಗೆ 15,000 ರೂ. ಪೋ›ತ್ಸಾಹಧನ ನೀಡಲಾಗುವುದು ಎಂದೂ ಒಡಿಶಾ ಸರ್ಕಾರ ಘೊಷಿಸಿದೆ. ಈ ಮಾಹಿತಿ ಹಂಚಿಕೆಗೆಂದೇ ಪ್ರತ್ಯೇಕ ವೆಬ್​ಸೈಟ್ ತೆರೆಯಲಾಗಿದೆ. ಫೆಬ್ರವರಿ ಅಂತ್ಯ ಹಾಗೂ ಮಾರ್ಚ್ ಮಧ್ಯಾವಧಿವರೆಗೆ ಅಂದಾಜು 5,000 ಮಂದಿ ವಿದೇಶದಿಂದ ರಾಜ್ಯಕ್ಕೆ ಬಂದಿದ್ದಾರೆ. ಹಾಗೇ, 35,000 ಮಂದಿ ಬೇರೆ ಬೇರೆ ರಾಜ್ಯಗಳಿಂದ ತಮ್ಮ ರಾಜ್ಯಕ್ಕೆ ವಾಪ ಸಾಗಿದ್ದಾರೆ. ಅವರೆಲ್ಲರನ್ನೂ ಗುರುತಿಸಿ ಕಡ್ಡಾಯ ದಿಗ್ಬಂಧನದಲ್ಲಿರಿಸಲಾಗಿದೆ.
ತುರ್ತು ಪರಿಸ್ಥಿತಿ ನಿರ್ವಹಿಸಲು ರಾಜ್ಯದಲ್ಲಿರುವ ಸಿದ್ಧ ವ್ಯವಸ್ಥೆ, ಪ್ರತಿವರ್ಷವೂ ಕಾಡುವ ಪ್ರವಾಹ, ಚಂಡಮಾರುತಗಳಿಂದಾಗಿ ವಿಕೋಪ ಗಳನ್ನು ನಿಭಾಯಿಸುವುದು ಆಡಳಿತಶಾಹಿ ಮತ್ತು ಅಧಿಕಾರಶಾಹಿಗೆ ತೀರಾ ಕಷ್ಟ ಎನಿಸಿಲ್ಲ ಎಂದು ಅಧಿಕಾರಿಯೊಬ್ಬರು ಹೇಳುತ್ತಾರೆ. ಗುಜರಾತ್​ನಲ್ಲಿ ಕರೊನಾ ಕೇಸು ಪತ್ತೆಯಾಗುವ ಮುನ್ನವೇ ಒಡಿಶಾದಲ್ಲಿ ಹಲವು ಕೇಸುಗಳು ಬೆಳಕಿಗೆ ಬಂದಿದ್ದವು. ಆದರೆ ಈಗ ಗುಜರಾತ್​ನಲ್ಲಿ ಕರೊನಾ ಸೋಂಕಿತರ ಸಂಖ್ಯೆ 700 ದಾಟಿದೆ. ಒಡಿಶಾದಲ್ಲಿ 65 ದಾಟಿಲ್ಲ. ಇದು ಒಡಿಶಾ ಮತ್ತು ಇತರೆ ರಾಜ್ಯಗಳಿಗಿರುವ ವ್ಯತ್ಯಾಸ.
ಕೋವಿಡ್-19 ಕೇಸುಗಳನ್ನು ನಿರ್ವಹಿಸಲೆಂದೇ ಪ್ರತ್ಯೇಕ ಸುಸಜ್ಜಿತ ಆಸ್ಪತ್ರೆಗಳನ್ನು ಮೊದಲು ಸ್ಥಾಪಿಸಿದ್ದು ಒಡಿಶಾ. ಈಗ ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ಇಂಥ ಆಸ್ಪತ್ರೆಗಳನ್ನು ವಿಸ್ತರಿಸಲಾಗಿದೆ. ಖಾಸಗಿ ಆಸ್ಪತ್ರೆಗಳು, ಬಹುರಾಷ್ಟ್ರೀಯ ಕಂಪನಿಗಳೂ ರಾಜ್ಯ ಸರ್ಕಾರದ ಹೋರಾಟಕ್ಕೆ ಸಾಥ್ ನೀಡಿವೆ. ಬೇರೆ ರಾಜ್ಯಗಳಲ್ಲಿ ಕರೊನಾ ಚಿಕಿತ್ಸೆಗೆ ಒಳಗಾಗಿರುವ ಒಡಿಶಾ ಮೂಲದ ರೋಗಿಗಳ ಖರ್ಚನ್ನು ರಾಜ್ಯ ಸರ್ಕಾರವೇ ನೀಡಲಿದೆ ಎಂದು ಘೊಷಿಸಿದ್ದ ಸಿಎಂ ಪಟ್ನಾಯಕ್, ಆ ಮೂಲಕ, ವೈರಸ್ ಸೋಂಕಿತರು ಸದ್ಯದ ಮಟ್ಟಿಗೆ ರಾಜ್ಯಕ್ಕೆ ವಾಪಸಾಗುವುದು ಬೇಡ ಎಂಬ ಪರೋಕ್ಷ ಸಂದೇಶ ರವಾನಿಸಿದ್ದರು. ಏತನ್ಮಧ್ಯೆ, ರಾಜ್ಯದ 28 ಲಕ್ಷ ಪಿಂಚಣಿದಾರರಿಗೆ ಸರ್ಕಾರ ಮುಂಗಡವಾಗಿ 4 ತಿಂಗಳ ಪಿಂಚಣಿ ಹಣವನ್ನು ಬಿಡುಗಡೆ ಮಾಡಿರುವುದಕ್ಕೂ ಜನರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ನಿರಾಶ್ರಿತ ಕೇಂದ್ರ ನಿರ್ಮಾಣ:ವಲಸಿಗರ ಸಮಸ್ಯೆಗೆ ತಕ್ಷಣವೇ ಸ್ಪಂದಿಸಿದ ಸರ್ಕಾರ, ಸಾವಿರಾರು ನಿರಾಶ್ರಿತ ಕೇಂದ್ರಗಳನ್ನು ನಿರ್ಮಾಣ ಮಾಡಿ, ಆಹಾರ ಪೂರೈಕೆ ಮಾಡುತ್ತಿದೆ. ಲಾಕ್​ಡೌನ್ ನಿಂದಾಗಿ ಭವಿಷ್ಯದ ಬಗ್ಗೆ ಚಿಂತಿತರಾದವರಿಗೆ ಮಾನಸಿಕ ತಜ್ಞರಿಂದ ಕೌನ್ಸೆಲಿಂಗ್ ನೀಡಲಾಗುತ್ತಿದೆ. 1882 ನಿರಾಶ್ರಿತ ಕೇಂದ್ರದಲ್ಲಿ ಸುಮಾರು 57,000 ವಲಸಿಗರಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen + fourteen =
Remember me
