ವಾರಾಣಸಿ:ಕಾಶಿಯ ವಿಶ್ವನಾಥ ದೇಗುಲದ ಬಳಿ ಇರುವ ಜ್ಞಾನವಾಪಿ ಮಸೀದಿಯ ಸಮೀಕ್ಷೆಯನ್ನು ಮೇ 17ರೊಳಗೆ ಮುಗಿಸಿ ವರದಿ ಸಲ್ಲಿಸುವಂತೆ ವಾರಾಣಸಿಯ ಕೋರ್ಟ್ ಆದೇಶಿಸಿದೆ. ಜತೆಗೆ ಈ ಕಾರ್ಯಕ್ಕೆ ನಿಯೋಜಿಸಲಾಗಿರುವ ಕಮಿಷನರ್ ಅಜಯ್ ಕುಮಾರ್ ಮಿಶ್ರಾರನ್ನು ಬದಲಾವಣೆ ಮಾಡುವುದಿಲ್ಲ ಎಂದೂ ಹೇಳಿದೆ. ಸರ್ವೆ ಸಮಿತಿಗೆ ವಕೀಲರಾದ ವಿಶಾಲ್ ಸಿಂಗ್ ಮತ್ತು ಅಜಯ್ ಸಿಂಗ್ ಅವರನ್ನು ಹೆಚ್ಚುವರಿಯಾಗಿ ನೇಮಿಸಿದೆ. ಕೋರ್ಟ್ ಆದೇಶದಿಂದ ಕಮಿಷನರ್ ಬದಲಾವಣೆ ಕೋರಿದ್ದ ಜ್ಞಾನವಾಪಿ ವ್ಯವಸ್ಥಾಪನಾ ಸಮಿತಿಗೆ (ಅಂಜುಮನ್ ಇಂತಜಾಮಿಯಾ ಮಸೀದಿ) ಹಿನ್ನೆಡೆಯಾಗಿದೆ. ಅಜಯ್ ಕುಮಾರ್ ಮಿಶ್ರಾ ಹಿಂದುಗಳ ಪರವಾಗಿದ್ದಾರೆ. ಆದ್ದರಿಂದ ಅವರನ್ನು ಬದಲಿಸಬೇಕು ಎಂದು ಅರ್ಜಿಯಲ್ಲಿ ದೂರಲಾಗಿತ್ತು.
ಕಳೆದ ಶುಕ್ರವಾರ ಸರ್ವೆ ಕಾರ್ಯಕ್ಕೆಂದು ಕೋರ್ಟ್ ಕಮಿಷನರ್ ಅಜಯ್ ಕುಮಾರ್ ಮಿಶ್ರಾ ಅವರ ತಂಡ ತೆರಳಿದ್ದಾಗ ವಿಡಿಯೋ ಮಾಡದಂತೆ ಪ್ರತಿಭಟನೆ ನಡೆಸಲಾಯಿತು. ತಂಡವನ್ನು ತಡೆಯಲಾಯಿತು. ಇದರಿಂದ ಜ್ಞಾನಿವಾಪಿ ಮಸೀದಿ ಬಳಿ ಉದ್ವಿಗ್ನ ಸ್ಥಿತಿ ಉಂಟಾಯಿತು. ಮರುದಿನ ಕೂಡ ಇದೇ ಪರಿಸ್ಥಿತಿ ಮುಂದುವರಿಯಿತು. ಈ ಮಧ್ಯೆ, ಮಸೀದಿ ಆವರಣದಲ್ಲಿ ಸ್ವಸ್ತಿಕ್ ಚಿಹ್ನೆ ಕಂಡಿದೆ ಎಂದು ಕೆಲವು ಮೂಲಗಳು ಹೇಳಿದ್ದವು.
ಹಿನ್ನೆಲೆ ಏನು?:ಮಹಾರಾಜ ವಿಕ್ರಮಾಧಿತ್ಯ ನಿರ್ವಿುಸಿದ್ದ ಕಾಶಿ ವಿಶ್ವನಾಥನ ಪುರಾತನ ಮಂದಿರದ ಒಂದು ಭಾಗವನ್ನು ಮೊಘಲರ ದೊರೆ ಔರಂಗಜೇಬ್ 17ನೇ ಶತಮಾನದಲ್ಲಿ ನಾಶ ಮಾಡಿ, ಜ್ಞಾನವಾಪಿ ಮಸೀದಿ ನಿರ್ವಿುಸಿದ. ಮಸೀದಿ ಆವರಣದ ಪಶ್ಚಿಮದ ಗೋಡೆಯಲ್ಲಿ ಶೃಂಗಾರ ಗೌರಿ ವಿಗ್ರಹ ಸೇರಿ ಅನೇಕ ದೇವತೆಗಳ ಪ್ರತಿಮೆಗಳಿವೆ. ಇವಕ್ಕೆ ನಿತ್ಯ ಪೂಜೆ ಸಲ್ಲಿಸಲು ಅವಕಾಶ ನೀಡಬೇಕು ಎಂದು ಕೋರಿ ಐವರು (ರಾಖಿ ಸಿಂಗ್, ಲಕ್ಷ್ಮಿ ದೇವಿ, ಸೀತಾ ಸಾಹು, ಮಂಜು ವ್ಯಾಸ್ ಮತ್ತು ರೇಖಾ ಪಾಠಕ್) ಮಹಿಳೆಯರು ಏಪ್ರಿಲ್​ನಲ್ಲಿ ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ವಿವಾದಿತ ಮಸೀದಿಯಲ್ಲಿ ಸಮೀಕ್ಷೆಗೆ ಆದೇಶಿಸಲಾಗಿತ್ತು. ಜ್ಞಾನವಾಪಿ ಮಸೀದಿಯನ್ನು ವರ್ಷಕ್ಕೊಮ್ಮೆ ಪ್ರಾರ್ಥನೆಗಾಗಿ ತೆರೆಯಲಾಗುತ್ತದೆ.
ಶ್ರೀಕೃಷ್ಣ ಜನ್ಮಸ್ಥಾನ ಕೇಸ್​ಗೆ ಗಡುವು:ಮಥುರಾದ ಶ್ರೀಕೃಷ್ಣ ಜನ್ಮಭೂಮಿ ಮತ್ತು ಶಾಹಿ ಈದ್ಗಾ ಮಸೀದಿ ವಿವಾದಕ್ಕೆ ಸಂಬಂಧಿಸಿ ದಾಖಲಾ ಗಿರುವ ಪ್ರಕರಣಗಳನ್ನು 4 ತಿಂಗಳಲ್ಲಿ ಇತ್ಯರ್ಥ ಪಡಿಸುವಂತೆ ಅಧೀನ ನ್ಯಾಯಾಲಯಕ್ಕೆ ಅಲಹಾಬಾದ್ ಹೈಕೋರ್ಟ್​ನ ಸೂಚಿಸಿದೆ. ವಿಚಾರಣೆ ತ್ವರಿತಗೊಳಿಸುವಂತೆ ಕೋರಿ ಹಿಂದು ಸೇನಾದ ಮುಖ್ಯಸ್ಥ ಮನಿಷ್ ಯಾದವ್ ಅರ್ಜಿ ಸಲ್ಲಿಸಿದ್ದರು.
ತಾಜ್​ಮಹಲ್​ ಕುರಿತ ಅರ್ಜಿ ವಜಾ:ಆಗ್ರಾದ ತಾಜ್​ಮಹಲ್​ನಲ್ಲಿನ ಮುಚ್ಚಲಾಗಿರುವ 22 ಕೋಣೆಗಳ ಬಾಗಿಲನ್ನು ತೆರೆಯುವಂತೆ ನಿರ್ದೇಶನ ನೀಡಬೇಕು ಎಂದು ಕೋರಿದ್ದ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್​ನ ಲಖನೌ ಪೀಠ ಗುರುವಾರ ವಜಾ ಮಾಡಿದೆ. ‘ಈ ವಿಷಯದಲ್ಲಿ ಸ್ನಾತಕೋತ್ತರ ಪದವಿ ಇಲ್ಲವೆ ಪಿಚ್.ಡಿ ಅಥವಾ ಸಂಶೋಧನೆ ಮಾಡಿ. ಅದನ್ನು ಬಿಟ್ಟು, ಪಿಐಎಲ್ ಅವಕಾಶವನ್ನು ಅಪಹಾಸ್ಯ ಮಾಡಬೇಡಿ’ ಎಂದು ಎಂದು ಅರ್ಜಿದಾರರಿಗೆ ನ್ಯಾಯಪೀಠ ಕಟುವಾಗಿ ಹೇಳಿದೆ. ’ತಾಜ್ ಮಹಲ್ ಅನ್ನು ಕಟ್ಟಿದ್ದು ಯಾರು, ಅದನ್ನು ನಿರ್ವಿುಸಿ ಎಷ್ಟು ವರ್ಷವಾಯಿತು ಎಂಬುದನ್ನು ನಮ್ಮಿಂದ ಹೇಳಿಸಲು ನೀವು (ಅರ್ಜಿದಾರರು) ಬಯಸಿರುವಿರೇನು? ನೀವು ನಂಬಿರುವ ಇತಿಹಾಸವನ್ನು ಅನುಮೋದಿಸುವಂತೆ ನಮ್ಮನ್ನು ಕೋರಬೇಡಿ. ಇತಿಹಾಸಕಾರರು ಅವರ ಅನ್ವೇಷಣೆಯ ಮಾರ್ಗದಲ್ಲಿ ಶೋಧಿಸಲಿ. ಇದಕ್ಕೆ ಕೋರ್ಟ್ ಎಳೆದು ತರಬೇಡಿ’ ಎಂದು ನ್ಯಾಯಮೂರ್ತಿಗಳಾದ ಡಿ.ಕೆ.ಉಪಾಧ್ಯಾಯ ಮತ್ತು ಸುಭಾಷ್ ವಿದ್ಯಾರ್ಥಿ ಅರ್ಜಿ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದರು. ತಾಜ್​ವುಹಲ್​ನ 22 ಕೋಣೆ ತೆರೆಯಲು ಬಿಜೆಪಿ ಮುಖಂಡ ಡಾ. ರಜನೀಶ್ ಸಿಂಗ್ ಅರ್ಜಿ ಸಲ್ಲಿಸಿದ್ದರು.
ಸರ್ವೆಗೆ ಅಡ್ಡಿ ಪಡಿಸಿದವರ ವಿರುದ್ಧ ಕ್ರಮಕ್ಕೆ ಕೋರ್ಟ್ ಸೂಚನೆ ಇದೆ. ಹೀಗಾಗಿ ಸಮೀಕ್ಷೆಗೆ ಯಾರೂ ಅಡ್ಡಿ ಪಡಿಸುವಂತಿಲ್ಲ. ಸಮೀಕ್ಷಾ ತಂಡದಲ್ಲಿ ಹಿಂದು ಮತ್ತು ಮುಸ್ಲಿಂ ಸಮುದಾಯದ ವಕೀಲರು ಇದ್ದಾರೆ. ಇವರು ಮಸೀದಿಯಲ್ಲಿ ಪರಿಶೀಲನೆ ನಡೆಸಲಿದ್ದಾರೆ.
|ಸುಭಾಷ್ ನಂದನ್ ಚತುರ್ವೇದಿಅರ್ಜಿದಾರರ ಪರ ವಕೀಲ
ಸಮೀಕ್ಷೆಗೆ ಸಂಬಂಧಸಿದಂತೆ ಮತ್ತು ಸರ್ವೆಯರ್ ಬದಲಾವಣೆ ಅರ್ಜಿ ಕುರಿತಂತೆ ಕೋರ್ಟ್​ನ ಆದೇಶ ಕಾನೂನಾತ್ಮಕವಾಗಿಲ್ಲ. ಇದನ್ನು ಪ್ರಶ್ನಿಸಿ ಮತ್ತೊಂದು ಅರ್ಜಿ ಸಲ್ಲಿಸಲಾಗುವುದು.
|ಅಭಯನಾಥ ಯಾದವ್ಜ್ಞಾನವಾಪಿ ಮಸೀದಿ ವ್ಯವಸ್ಥಾಪನಾ ಸಮಿತಿ ಪರ ವಕೀಲ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 + fourteen =
Remember me
