ನವದೆಹಲಿ:ಒಮಿಕ್ರಾನ್​ನ ಉಪತಳಿ ಬಿಎ.2.12 ಪ್ರಸರಣ ಹೆಚ್ಚಾಗಿರುವ ಕಾರಣ ಇದರ ಬಗ್ಗೆ ನಿಗಾ ಇರಿಸುವುದು ಅಗತ್ಯ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. ಬಿಎ.2.12 ಸೋಂಕಿತರು ಆಸ್ಪತ್ರೆಗೆ ದಾಖಲಾಗುವ ಪ್ರಕರಣ ಕೂಡ ಹೆಚ್ಚಾಗಿದೆ. ಆದರೆ, ಈ ಉಪತಳಿಯ ಬಗ್ಗೆ ಇರುವ ಮಾಹಿತಿ ಸೀಮಿತವಾಗಿದೆ. ಶಂಕಿತ ಸ್ಯಾಂಪಲ್​ಗಳ ಜಿನೋಮ್ ಸಿಕ್ವೆನ್ಸ್ ವಿಶ್ಲೇಷಣೆಯನ್ನು ಮಾಡಲಾಗುತ್ತಿದೆ. ದೆಹಲಿಯಲ್ಲಿ ಸಂಗ್ರಹಿಸಲಾದ ಸ್ಯಾಂಪಲ್​ನಲ್ಲಿ ಬಿಎ.2.12.1 ತಳಿ ಕೂಡ ಪತ್ತೆಯಾಗಿದೆ ಎಂದು ಹೇಳಲಾಗಿದೆ. ಆದರೆ ಇದು ಖಚಿತಗೊಂಡಿಲ್ಲ. ಬಿಎ.2.12 ಉಪತಳಿಯ ಅಮೆರಿಕದಲ್ಲಿ ವೇಗವಾಗಿ ಹರಡುತ್ತಿದೆ. ಕರೊನಾದ ಒಮಿಕ್ರಾನ್ ಮೂಲ ತಳಿಗಿಂತ ಬಿಎ.1 ಉಪತಳಿ 10 ಪಟ್ಟು ಪ್ರಸರಣ ವೇಗ ಹೊಂದಿದ್ದರೆ, ಬಿಎ.2 ಮತ್ತು ನಂತರದ ತಳಿಗಳು 20 ಪಟ್ಟು ವೇಗದ್ದಾಗಿವೆ ಎಂದು ವೈರಾಲಜಿಸ್ಟ್ ಡಾ. ಶಾಹಿದ್ ಹೇಳಿದ್ದಾರೆ.
ಶಾಂಘೈ ಲಾಕ್​ಡೌನ್ ವಿಸ್ತರಣೆ:ಒಮಿಕ್ರಾನ್ ಉಪತಳಿಗಳ ಪ್ರಸರಣದಿಂದ ಕಂಗೆಟ್ಟಿರುವ ಚೀನಾದ ಶಾಂಘೈ ನಗರದಲ್ಲಿ ಲಾಕ್​ಡೌನ್​ನ್ನು ಏ.26ರವರೆಗೆ ವಿಸ್ತರಿಸಲಾಗಿದೆ. ಇದರಿಂದ ನಿರ್ಬಂಧ ಕ್ರಮ ನಾಲ್ಕನೇ ವಾರಕ್ಕೆ ಕಾಲಿರಿಸಿದೆ. ಈ ಮಧ್ಯೆ, ನಗರದಲ್ಲಿ 11 ಮಂದಿ ಸಾವನಪ್ಪಿದ್ದು, ಇತ್ತೀಚಿನ ದಿನದಲ್ಲಿ ಮೃತರಾದವರ ಸಂಖ್ಯೆ 36ಕ್ಕೆ ಏರಿದೆ. ಚೀನಾದಲ್ಲಿ ಗುರುವಾರ 2,119 ಹೊಸ ಪ್ರಕರಣಗಳು ದೃಢಪಟ್ಟಿದ್ದು, ಈ ಪೈಕಿ ಶಾಂಘೈ ನಗರದಲ್ಲೇ 1,931 ಕೇಸ್​ಗಳು ವ್ಯಕ್ತವಾಗಿವೆ. ಮಾರ್ಚ್ 1ರ ನಂತರ ಶಾಂಘೈನಲ್ಲಿ 4,43,500 ಕೇಸ್​ಗಳು ಕಂಡು ಬಂದಿವೆ. ರೋಗದ ಗುಣಲಕ್ಷಣ ಹೆಚ್ಚು ಇರುವ 30,813 ಮಂದಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ರಾಷ್ಟ್ರೀಯ ಆರೋಗ್ಯ ಆಯೋಗ ಹೇಳಿದೆ. ಸೋಂಕು ಹರಡುವ ಸರಪಳಿಯನ್ನು ತಡೆಯಲು ಶಾಂಘೈನ ಸ್ಥಳೀಯ ಆಡಳಿತ ಶುಕ್ರವಾರದಿಂದ ತೀವ್ರ ತರಹದಲ್ಲಿ ಅಭಿಯಾನವನ್ನು ಕೈಗೊಂಡಿದೆ.
505 ದಿನ ಸೋಂಕಿತನಾಗಿದ್ದ ಬ್ರಿಟನ್ ಪ್ರಜೆ!:ಬ್ರಿಟನ್​ನ ವ್ಯಕ್ತಿಯೊಬ್ಬ ಸೋಂಕು ಪೀಡಿತರಾಗಿದ್ದು, 505 ದಿನ ಈ ವೈರಸ್​ನಿಂದ ನರಳಿರುವ ಅಂಶ ವಿಜ್ಞಾನ ನಿಯತಕಾಲಿಕೆಯಲ್ಲಿ ಪ್ರಕಟವಾಗಿದೆ. ಸುಮಾರು ಒಂದೂವರೆ ವರ್ಷ ಕರೊನಾ ಸೋಂಕಿಗೆ ಒಳಪಟ್ಟಿರುವುದು ದಾಖಲೆಯಾಗಿದೆ. ಆದರೆ, ಈ ಪ್ರಕರಣವು ದುರ್ಬಲ ವರ್ಗದವರನ್ನು ಸೋಂಕಿನಿಂದ ರಕ್ಷಿಸುವಲ್ಲಿನ ವಿಫಲತೆಯನ್ನು ಎತ್ತಿತೋರುತ್ತದೆ. ಪರೀಕ್ಷೆಗಳನ್ನು ಹೆಚ್ಚು ಹೆಚ್ಚು ನಡೆಸದಿರುವುದು ಕೂಡ ಸೋಂಕಿತರನ್ನು ಸಕಾಲದಲ್ಲಿ ಗುರುತಿಸಲು ವಿಫಲವಾಗುವುದಕ್ಕೆ ಕಾರಣ ಎಂದು ಎನ್​ಎಚ್​ಎಸ್ ಪ್ರತಿಷ್ಠಾನ ಟ್ರಸ್ಟ್​ನ ಡಾ.ಲ್ಯೂಕ್ ಬ್ಲಾಗ್ಡನ್ ಸ್ನೇಲ್ ಹೇಳಿದ್ದಾರೆ.
ಲಸಿಕೆ ಉತ್ಪಾದನೆ ನಿಲ್ಲಿಸಿದ ಸೆರಂ:ಕೋವಿಡ್ ತಡೆ ಲಸಿಕೆ ಉತ್ಪಾದನೆಯಲ್ಲಿ ಜಾಗತಿಕವಾಗಿ ಮುಂಚೂಣಿಯಲ್ಲಿರುವ ಪುಣೆ ಮೂಲದ ಸೆರೆಂ ಇನ್​ಸ್ಟಿಟ್ಯೂಟ್ ಲಸಿಕೆಗಳ ಉತ್ಪಾದನೆಯನ್ನು ನಿಲ್ಲಿಸಿದೆ. 20 ಕೋಟಿ ಡೋಸ್ ಲಸಿಕೆಯ ಬಳಕೆಯಾಗದೆ ಸಂಗ್ರಹದಲ್ಲಿರುವ ಕಾರಣ ಈ ನಿರ್ಧಾರವನ್ನು ಸೆರಂ ಕೈಗೊಂಡಿದೆ.
ಮದ್ರಾಸ್ ಐಐಟಿಯಲ್ಲಿ 30 ಮಂದಿಗೆ ಸೋಂಕು:ಚೆನ್ನೈನ ಮದ್ರಾಸ್ ಐಐಟಿಯಲ್ಲಿ ಶುಕ್ರವಾರ 18 ಮಂದಿಗೆ ಸೋಂಕು ಕಾಣಿಸಿಕೊಳ್ಳುವ ಮೂಲಕ ಎರಡು ದಿನಗಳಲ್ಲಿ 30 ಜನರಲ್ಲಿ ಕರೊನಾ ಪಾಸಿಟಿವ್ ಕಂಡುಬಂದಿದೆ. ಈಗಾಗಿ ಐಐಟಿ ಕ್ಯಾಂಪಸ್ ಕೋವಿಡ್ ವಲಯ ಎಂದು ಘೋಷಿಸಲಾಗಿದೆ. ಕ್ಯಾಂಪಸ್​ನಲ್ಲಿ ನಿತ್ಯ 365 ಸ್ಯಾಂಪಲ್​ಗಳನ್ನು ಪಡೆಯಲಾಗುತ್ತಿದ್ದು, ಇದನ್ನು 1,500ಕ್ಕೆ ಏರಿಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ತಮಿಳುನಾಡಿನಲ್ಲಿ 39 ಹೊಸ ಪ್ರಕರಣಗಳು ಕಾಣಿಸಿಕೊಂಡಿದ್ದು, ರಾಜ್ಯದಲ್ಲಿ ಒಟ್ಟು ಕರೊನಾ ಪೀಡಿತರ ಸಂಖ್ಯೆ 34,53,390ಕ್ಕೆ ಏರಿದೆ. ನಿತ್ಯ ಸ್ಯಾಂಪಲ್ ಸಂಗ್ರಹವನ್ನು 18 ಸಾವಿರದಿಂದ 25 ಸಾವಿರಕ್ಕೆ ಹೆಚ್ಚಿಸಲಾಗಿದೆ. 24 ತಾಸಿನಲ್ಲಿ ಯಾವುದೇ ರೋಗಿ ಮರಣಿಸಿಲ್ಲ. ಒಟ್ಟು ಸಾವಿನ ಸಂಖ್ಯೆ 38,025 ಇದೆ.
ಶಾಲೆಗಳಲ್ಲಿ ಕ್ವಾರಂಟೈನ್ ಕೊಠಡಿ:ದೆಹಲಿ ಕೋವಿಡ್ ಪ್ರಸರಣ ಏರುತ್ತಿರುವ ಹಿನ್ನೆಲೆಯಲ್ಲಿ ಶಾಲೆಗಳಲ್ಲಿ ಕ್ವಾರಂಟೈನ್ ಕೋಣೆ ಕಡ್ಡಾಯ ಮಾಡಲಾಗಿದೆ. ಶಾಲೆಗೆ ಬರುವ ಪ್ರತಿಯೊಬ್ಬರನ್ನು ಥರ್ಮಲ್ ಸ್ಕಾ್ಯನಿಂಗ್ ಒಳಪಡಿಸಬೇಕು, ಮಕ್ಕಳು ಆಹಾರವನ್ನು ಹಂಚಿಕೊಳ್ಳುವಂತಿಲ್ಲ ಎಂದು ರಾಜ್ಯ ಸರ್ಕಾರ ಶುಕ್ರವಾರ ಹೊರಡಿಸಿರುವ ಪರಿಷ್ಕೃತ ಮಾರ್ಗದರ್ಶಿಯಲ್ಲಿ ಸೂಚಿಸಿದೆ. ಈ ಮಧ್ಯೆ ದೆಹಲಿಯಲ್ಲಿ 965 ಹೊಸ ಪ್ರಕರಣಗಳು ವ್ಯಕ್ತವಾಗಿದ್ದು, ದೈನಿಕ ಪಾಸಿಟಿವಿಟಿ ದರ ಶೇ. 4.71ಕ್ಕೆ ಏರಿದೆ. ಓರ್ವ ವ್ಯಕ್ತಿ ಮೃತಪಟ್ಟಿದ್ದಾನೆ.
ಮಾಸ್ಕ್ ಹಾಕದವರಿಗೆ ದಂಡ:ಮಾಸ್ಕ್ ಧರಿಸದವರಿಗೆ 500 ರೂ. ದಂಡವಿಧಿಸುವುದನ್ನು ತಮಿಳುನಾಡು ಸರ್ಕಾರ ಮರುಜಾರಿ ಮಾಡಿದೆ. ದೆಹಲಿ, ಹರಿಯಾಣ, ಉತ್ತರ ಪ್ರದೇಶಗಳಲ್ಲಿ ಈಗಾಗಲೇ ಜಾರಿಯಲ್ಲಿದೆ.
ಪೆಟ್ರೋಲ್ ಟ್ಯಾಂಕ್​ ಮೇಲೆ ಪ್ರೇಯಸಿ, ಬೈಕ್ ಚಲಾಯಿಸುತ್ತಲೇ ರೊಮ್ಯಾನ್ಸ್​: ಪ್ರೇಮಿ ಮೇಲೆ 3 ಕೇಸ್​…
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven + eight =
Remember me
