ನವದೆಹಲಿ:ದೇಶದೊಳಗಿನ ವಲಸಿಗರಿಗೆ ತಾವಿರುವ ರಾಜ್ಯದಲ್ಲೇ ಅಥವಾ ತಮ್ಮ ರಾಜ್ಯದ ಅನ್ಯ ಜಿಲ್ಲೆಯಲ್ಲೇ ಮತದಾನಕ್ಕೆ ಅವಕಾಶ ಕಲ್ಪಿಸುವ ಕ್ರಮಕ್ಕೆ ಚುನಾವಣಾ ಆಯೋಗ ಮುಂದಾಗಿದ್ದು, ಈ ನಿಮಿತ್ತ ಮೂಲಮಾದರಿಯ ರಿಮೋಟ್ ವಿದ್ಯುನ್ಮಾನ ಮತಯಂತ್ರ (ಆರ್​ವಿಎಂ)ವನ್ನು ಅಭಿವೃದ್ಧಿ ಪಡಿಸಿದೆ. ಇದು ಬಹುಕ್ಷೇತ್ರಗಳನ್ನು ಸಮನ್ವಯಗೊಳಿಸುವ ಆರ್​ವಿಎಂಗಳಾಗಿದ್ದು, ಏಕ ಮತಗಟ್ಟೆಯಲ್ಲಿ ಕಾರ್ಯನಿರ್ವಹಿಸುವಂತಹದ್ದಾಗಿದೆ.
ಹೊಸ ಮಾದರಿಯ ಆರ್​ವಿಎಂಗಳ ಬಗ್ಗೆ ರಾಜಕೀಯ ಪಕ್ಷಗಳಿಗೆ ಜನವರಿ 16ರಂದು ಚುನಾವಣಾ ಆಯೋಗ ಪ್ರಾತ್ಯಕ್ಷಿಕೆ ಹಮ್ಮಿಕೊಂಡಿದ್ದು, ಎಂಟು ರಾಷ್ಟ್ರೀಯ ಪಕ್ಷಗಳು ಮತ್ತು 57 ಪ್ರಾದೇಶಿಕ ಪಕ್ಷಗಳನ್ನು ಈ ಕಾರ್ಯಕ್ರಮಕ್ಕೆ ಆಹ್ವಾನಿಸಿದೆ. ಆರ್​ವಿಎಂ ಕಾರ್ಯನಿರ್ವಹಣೆಯ ವಿಧಾನ, ಕಾನೂನಾತ್ಮಕ, ಆಡಳಿತಾತ್ಮಕ, ತಾಂತ್ರಿಕ ಸವಾಲು, ಸುರಕ್ಷತೆ, ವಲಸಿಗ ಮತದಾರರು ಎಂದರೆ ಯಾರು ಎಂಬ ಬಗ್ಗೆ ಕಿರು ಟಿಪ್ಪಣಿಯನ್ನು ರಾಜಕೀಯ ಪಕ್ಷಗಳಿಗೆ ಒದಗಿಸಿರುವ ಆಯೋಗ, ಪ್ರಾತ್ಯಕ್ಷಿಕೆಯ ದಿನ ಈ ಬಗ್ಗೆ ಸಂಪೂರ್ಣ ವಿವರ ನೀಡಲಿದೆ. ಜತೆಗೆ ಹೊಸ ಆರ್​ವಿಎಂಗಳ ಸಾಧಕ- ಬಾಧಕ ಕುರಿತ ರ್ಚಚಿಸಲಿದೆ. ಜನವರಿ 31ರೊಳಗೆ ಆರ್​ವಿಎಂ ಕುರಿತ ಅಭಿಪ್ರಾಯವನ್ನು ಲಿಖಿತವಾಗಿ ತಿಳಿಸುವಂತೆಯೂ ರಾಜಕೀಯ ಪಕ್ಷಗಳಿಗೆ ಆಯೋಗ ಮನವಿ ಮಾಡಿದೆ.
ಈ ಅಭಿಪ್ರಾಯಗಳನ್ನು ಪರಿಶೀಲಿಸಿ, ಕಾನೂನಾತ್ಮಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡು 2023ರಲ್ಲಿ ನಡೆಯುವ ಕೆಲವು ರಾಜ್ಯಗಳ ವಿಧಾನಸಭಾ ಚುನಾವಣೆ ಯಲ್ಲಿ ಆರ್​ವಿಎಂಗಳನ್ನು ಪ್ರಾಯೋಗಿಕವಾಗಿ (ಪೈಲಟ್) ಪರಿಚಯಿಸಲು ಆಯೋಗ ಬಯಸಿದೆ. ಇದರ ಯಶಸ್ಸನ್ನು ನೋಡಿಕೊಂಡು, ಅಗತ್ಯ ಸುಧಾರಣೆಗಳನ್ನು ಅಳವಡಿಸಿಕೊಳ್ಳುವ ಮೂಲಕ 2024ರ ಲೋಕಸಭಾ ಚುನಾವಣೆಯಲ್ಲಿ ಆರ್​ವಿಎಂಗಳನ್ನು ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಕ್ಕೆ ತರುವುದು ಆಯೋಗದ ಚಿಂತನೆ ಆಗಿದೆ.
ಬಹುದೊಡ್ಡ ಬದಲಾವಣೆ
ಮತದಾರ ರಿಗೆ ಮತದಾನದ ಹಕ್ಕು ನಿರಾಕರಣೆಯ ಆಯ್ಕೆ ಆಗಬಾರದು ಎಂಬ ಕಾರಣದಿಂದ ಆರ್​ವಿಎಂ ಉಪಕ್ರಮ ಕೈಗೊಳ್ಳಲಾಗಿದೆ. 2019ರ ಸಾರ್ವತ್ರಿಕ ಚುನಾವಣೆಯಲ್ಲಿ ಶೇ. 67.4ರಷ್ಟು ಮತದಾನ ಆಗಿದೆ. ಅಂದರೆ ಇನ್ನೂ 30 ಕೋಟಿ ಜನರು ತಮ್ಮ ಹಕ್ಕನ್ನು ಚಲಾಯಿಸಿಯೇ ಇಲ್ಲ. ಇದಕ್ಕೆ ವಲಸೆ ಕೂಡ ಮುಖ್ಯ ಕಾರಣಗಳಲ್ಲಿ ಒಂದಾಗಿದೆ. ಇಂಥ ಸಮಸ್ಯೆಯನ್ನು ತಡೆಯಲು ಆರ್​ವಿಎಂ ಬಹುದೊಡ್ಡ ಬದಲಾವಣೆಗೆ ಕಾರಣವಾಗಲಿದೆ ಎಂದು ಆಯೋಗ ಹೇಳಿಕೆಯಲ್ಲಿ ತಿಳಿಸಿದೆ. ವಲಸಿಗ ಮತದಾರರು ತಾವು ಉದ್ಯೋಗ ಅಥವಾ ಇನ್ಯಾವುದೇ ನಿಮಿತ್ತವಾಗಿ ಇರುವ ಸ್ಥಳದ ಮತದಾರರ ಪಟ್ಟಿಗೆ ಸೇರಲು ಇಷ್ಟ ಪಡುವುದಿಲ್ಲ. ತಮ್ಮ ಅಸ್ತಿತ್ವದ ಗುರುತನ್ನು ತವರು ನೆಲದಲ್ಲೇ ಉಳಿಸಿಕೊಳ್ಳಲು ಬಯಸುತ್ತಾರೆ. ಈ ಕಾರಣದಿಂದ ಅನೇಕರು ಮತದಾನದ ಹಕ್ಕಿನಿಂದ ವಂಚಿತರಾಗುತ್ತಿದ್ದಾರೆ. ವಲಸೆಗೆ ಮುಖ್ಯವಾಗಿ ಉದ್ಯೋಗ, ಮದುವೆ, ಶಿಕ್ಷಣದಂತಹ ಕಾರಣಗಳೂ ಇವೆ. ಸಾಮಾನ್ಯವಾಗಿ 85ರಷ್ಟು ವಲಸೆ ರಾಜ್ಯದೊಳಗೇ ಇರುತ್ತದೆ ಎಂದು ಆಯೋಗ ಹೇಳಿದೆ.
ಕಾರ್ಯ ನಿರ್ವಹಣೆ ಹೇಗೆ?
ಆರ್​ವಿಎಂ ಸಾಮಾನ್ಯ ಇವಿಎಂ (ವಿದ್ಯುನ್ಮಾನ ಮತಯಂತ್ರ)ನ ಸುಧಾರಿತ ರೂಪವಾಗಿದ್ದು, ಭಿನ್ನವಾಗಿ ಮತ್ತು ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತದೆ. ಇದರಲ್ಲಿ ಏಕಕಾಲಕ್ಕೆ 72 ಕ್ಷೇತ್ರಗಳನ್ನು ನಿರ್ವಹಿಸಬಹುದು. ಆರ್​ವಿಎಂಗಳನ್ನು ಸರ್ಕಾರಿ ಸ್ವಾಮ್ಯದ ಸಂಸ್ಥೆಯ ಮೂಲಕ ಅಭಿವೃದ್ಧಿ ಪಡಿಸಲಾಗಿದ್ದು, ಸುಧಾರಿತ ಎಂ-3 (ಮಾರ್ಕ್ 3) ತಂತ್ರಜ್ಞಾನದ ಸಮಯ ಪರೀಕ್ಷಿತ ಮಾದರಿಯದ್ದಾಗಿದೆ.
ಆರ್​ಎಂವಿಗೆ ಕಾಂಗ್ರೆಸ್ ವಿರೋಧ
ಚುನಾವಣಾ ಆಯೋಗ ಪ್ರಸ್ತಾಪಿಸಿರುವ ವಲಸಿಗರ ಮತದಾರರಿಗೆ ಆರ್​ಎಂವಿ ಸೌಲಭ್ಯಕ್ಕೆ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿದೆ. ಇವಿಎಂಗಳ ತಿರುಚುವಿಕೆಯ ಬಗ್ಗೆ ಚುನಾವಣಾ ಆಯೋಗ ಮೊದಲು ಸಮರ್ಪಕವಾದ ಸ್ಪಷ್ಟನೆ ನೀಡಲಿ ನಂತರವಷ್ಟೆ ಬೇರೆ ವಿಚಾರಗಳನ್ನು ಹೇಳಲಿ ಎಂದು ಕಾಂಗ್ರೆಸ್ ಹೇಳಿದೆ. ಇತ್ತೀಚೆಗೆ ನಡೆದ ಗುಜರಾತ್ ಚುನಾವಣೆಯಲ್ಲಿ ಅವ್ಯವಹಾರ ನಡೆದಿದೆ. ಹೀಗಿರುವಾಗ ಬಹುಕ್ಷೇತ್ರಗಳನ್ನು ಒಟ್ಟಿಗೆ ನಿರ್ವಹಿಸುವಂತಹ ಸಂದೇಹಾಸ್ಪದವಾದ ಆರ್​ವಿಎಂ ಜಾರಿಗೆ ಬಂದರೆ ಚುನಾವಣಾ ವ್ಯವಸ್ಥೆಯ ವಿಶ್ವಾಸಾರ್ಹತೆ ಬಗ್ಗೆ ಗಂಭೀರವಾದ ಪ್ರಶ್ನೆ ಏಳುತ್ತದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್ ಹೇಳಿದ್ದಾರೆ.
ಚುನಾವಣಾ ಪ್ರಕ್ರಿಯೆ ಬಲಗೊಳ್ಳಬೇಕಾದರೆ ಅರ್ಹ ಮತದಾರರೆಲ್ಲರೂ ಅದರಲ್ಲಿ ಒಳಗೊಳ್ಳಬೇಕು ಎಂಬ ಉದ್ದೇಶದಿಂದ ಹೊಸ ಉಪಕ್ರಮಕ್ಕೆ ಆಯೋಗ ಮುಂದಾಗಿದೆ. ವಲಸಿಗರ ರಿಮೋಟ್ ಮತದಾನವೂ ಸಾಮಾಜಿಕವಾಗಿ ದೊಡ್ಡ ಪರಿವರ್ತನೆಗೆ ಕಾರಣವಾಗಲಿದೆ. ಉದ್ಯೋಗದ ನಿಮಿತ್ತ ಪದೇ ಪದೇ ಸ್ಥಳ ಬದಲಾಯಿಸುವ ವಲಸಿಗರು ತಮ್ಮ ಮೂಲ ಕ್ಷೇತ್ರದ ನಂಟನ್ನು ಕಳೆದುಕೊಳ್ಳುವುದಿಲ್ಲ ಎಂಬುದು ಇದರ ವಿಶೇಷ.| ರಾಜೀವ್ ಕುಮಾರ್ ಮುಖ್ಯ ಚುನಾವಣಾ ಆಯುಕ್ತ
ಕಾಯ್ದೆ ತಿದ್ದುಪಡಿ ಅಗತ್ಯ
ಆರ್​ವಿಎಂ ಜಾರಿಯಾಗಬೇಕಾದರೆ 1950 ಮತ್ತು 1951ರ ಪ್ರಜಾಪ್ರತಿನಿಧಿ ಕಾಯ್ದೆ, 1960ರ ಮತದಾರರ ನೋಂದಣಿ ನಿಯಮ, 1961ರ ಚುನಾವಣಾ ಪ್ರಕ್ರಿಯಾ ನಿಯಮಗಳಿಗೆ ತಿದ್ದುಪಡಿಯಾಗಬೇಕು. ಇದನ್ನು ಸಂಸತ್ ಮಾಡಬೇಕು. ‘ವಲಸಿಗ ಮತದಾರರು’ ಎಂಬ ವ್ಯಾಖ್ಯೆಯನ್ನು ಮರುಅರ್ಥೈಸಬೇಕಾಗುತ್ತದೆ. ಅಂದರೆ ಇಂಥ ಮತದಾರನ ನೋಂದಣಿಯು ಕಾನೂನಾತ್ಮಕವಾಗಿ ಅವರ ಮೂಲ ರಾಜ್ಯದ ಸಂಬಂಧಿತ ಕ್ಷೇತ್ರದಲ್ಲಿ ‘ಸಾಮಾನ್ಯ ನಿವಾಸಿ’ ಮತ್ತು ‘ತಾತ್ಕಾಲಿಕ ನಿವಾಸಿ’ ಎಂಬ ಹಿನ್ನೆಯಲ್ಲಿ ಸ್ಪಷ್ಟಪಡಿಸಬೇಕಾಗುತ್ತದೆ. ‘ರಿಮೋಟ್ ಮತದಾನ’ ಎಂಬುದು ಚುನಾವಣಾ ಕ್ಷೇತ್ರದಿಂದ ಹೊರಗೆ ಎಂಬ ಅರ್ಥವನ್ನು ಸೂಚಿಸುತ್ತದೆ. ಅದು ಜಿಲ್ಲೆಯಿಂದ ಹೊರಗೆ ಅಥವಾ ರಾಜ್ಯದಿಂದ ಹೊರಗೆ ಕೂಡ ಆಗಿರಬಹುದು. ಹೀಗಾಗಿ ಪ್ರಾದೇಶಿಕ ಕ್ಷೇತ್ರದ ಪರಿಕಲ್ಪನೆಯನ್ನು ವಿವೇಚಿಸಬೇಕಾಗುತ್ತದೆ.
ಆಡಳಿತಾತ್ಮಕ ಸವಾಲು
ವಲಸಿಗ ಮತದಾರರಿಂದ ಸ್ವಯಂ ಘೋಷಣೆ ಪಡೆಯುವುದು ಮತ್ತು ಅವರು ಗುರುತನ್ನು ಖಾತ್ರಿ ಗೊಳಿಸಿಕೊಳ್ಳುವುದು, ರಿಮೋಟ್ ಪ್ರದೇಶದ ಗೌಪ್ಯತೆ ಕಾಯ್ದುಕೊಳ್ಳುವುದು, ಮತಗಟ್ಟೆ ಏಜೆಂಟ್​ಗಳ ನೇಮಕ, ಮುಖ್ಯವಾಗಿ ಮತದಾರನ ಸೋಗಿನಲ್ಲಿ ನಡೆಯುವ ನಕಲಿ ಮತದಾನ ತಡೆಯುವುದು ಆಡಳಿತಾತ್ಮಕ ಸವಾಲು ಗಳಾಗಿವೆ. ಆರ್​ವಿಎಂ ಮತಗಟ್ಟೆಗಳಿಗೆ ಚುನಾವಣಾ ಸಿಬ್ಬಂದಿ ಮತ್ತು ಮೇಲ್ವಿಚಾರಕರ ನೇಮಕ, ಈ ರೀತಿಯ ಎಷ್ಟು ಮತಗಟ್ಟೆಗಳನ್ನು ಎಲ್ಲೆಲ್ಲಿ ಸ್ಥಾಪಿಸಬೇಕು ಎಂಬ ನಿರ್ಧಾರ, ರಿಮೋಟ್ ಮತಗಟ್ಟೆಗಳಲ್ಲಿ ಮಾದರಿ ನೀತಿ ಸಂಹಿತೆಯನ್ನು ಜಾರಿ ಮಾಡುವಿಕೆಯ ಪ್ರಶ್ನೆಗಳೂ ಇವೆ. ರಿಮೋಟ್ ಮತದಾನದ ವಿಧಾನ, ಬಹುಕ್ಷೇತ್ರಗಳ ಆರ್​ವಿಎಂಗಳಿದ್ದಾಗ ಮತದಾರರ ಪರಿಚಯ ಮತ್ತು ಆರ್​ವಿಎಂಗಳಲ್ಲಿ ದಾಖಲಾದ ಮತ ಎಣಿಕೆ ಹೇಗೆ ಎಂಬ ತಾಂತ್ರಿಕ ಸವಾಲುಗಳಿವೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × three =
Remember me
