ಬೆಂಗಳೂರು:ಕುಟುಂಬಕ್ಕೆ ಒಂದೇ ಟಿಕೆಟ್ ಎಂಬ ನಿರ್ಣಯ ಅಂಗೀಕರಿಸಲು ರಾಜಸ್ಥಾನದ ಉದಯಪುರದಲ್ಲಿ ನಡೆದಿರುವ ಕಾಂಗ್ರೆಸ್ ಚಿಂತನಾ ಶಿಬಿರದಲ್ಲಿನ ಚಿಂತನೆ ರಾಜ್ಯ ಕಾಂಗ್ರೆಸ್ ನಾಯಕರಲ್ಲಿ ಆತಂಕವನ್ನು ಸೃಷ್ಟಿಸಿದೆ.ಕುಟುಂಬ ರಾಜಕಾರಣಕ್ಕೆ ಬ್ರೇಕ್ ಹಾಕಲು ಕಾಂಗ್ರೆಸ್ ಪ್ರಯತ್ನ ಆರಂಭಿಸುತ್ತಿದೆ. ಆದರೆ ರಾಜ್ಯದಲ್ಲಿನ ಬಹುತೇಕ ನಾಯಕರು ಕುಟುಂಬ ರಾಜಕಾರಣವನ್ನೇ ಮಾಡುತ್ತಿದ್ದಾರೆ. ವಿಧಾನಸಭೆ ಚುನಾವಣೆಗೆ ಕುಟುಂಬಕ್ಕೆ ಎರಡು ಟಿಕೆಟ್ ಪಡೆಯುವ ಉದ್ದೇಶವನ್ನು ಹೊಂದಿದ್ದ ಬಹುತೇಕ ನಾಯಕರಿಗೆ ಪಕ್ಷದಲ್ಲಿನ ಈ ಚಿಂತನೆ ಆತಂಕ ಸೃಷ್ಟಿಸಿದೆ. ಕಾಂಗ್ರೆಸ್ ಎಂದರೆ ಕುಟುಂಬ ರಾಜಕಾರಣಕ್ಕೆ ಮತ್ತೊಂದು ಹೆಸರು ಎಂಬ ಟೀಕೆಗಳಿದ್ದವು. ಹೊಸ ನಾಯಕತ್ವದ ಸೃಷ್ಟಿಗೆ ಕುಟುಂಬ ರಾಜಕಾರಣ ಅವಕಾಶ ನೀಡುತ್ತಿಲ್ಲವೆಂದೇ ದೂರುಗಳಿದ್ದವು. ಮುಂದಿನ ದಿನಗಳಲ್ಲಿ ಹೊಸ ನಾಯಕತ್ವ ತರುವ ಮೂಲಕ ಪಕ್ಷಕ್ಕೆ ಪುನಶ್ಚೇತನ ನೀಡಲು ಪಕ್ಷದ ಮುಖಂಡರು ಉದ್ದೇಶಿಸಿದ್ದಾರೆ.
ಯಾರಿಗೆಲ್ಲ ಆತಂಕ?: ಪಕ್ಷದ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ರಾಜ್ಯಸಭಾ ಸದಸ್ಯ. ಅವರ ಪುತ್ರ ಪ್ರಿಯಾಂಕ್ ಖರ್ಗೆ ಶಾಸಕ. ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಪುತ್ರ ಡಾ. ಯತೀಂದ್ರ ಇಬ್ಬರೂ ಶಾಸಕರಾಗಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಶಾಸಕರಾದರೆ, ಅವರ ಸಹೋದರ ಡಿ.ಕೆ. ಸುರೇಶ್ ಸಂಸದರು. ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಹಾಗೂ ಅವರ ಪುತ್ರಿ ಸೌಮ್ಯಾ ರೆಡ್ಡಿ ಇಬ್ಬರೂ ಶಾಸಕರು. ಮಾಜಿ ಸಚಿವ ಎಂ. ಕೃಷ್ಣಪ್ಪ ಶಾಸಕರಾದರೆ, ಅವರ ಪುತ್ರ ಪ್ರಿಯಕೃಷ್ಣ ಮಾಜಿ ಶಾಸಕರಾಗಿದ್ದು ಮುಂದಿನ ಚುನಾವಣೆಗೆ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಕೇಂದ್ರದ ಮಾಜಿ ಸಚಿವ ಕೆ.ಎಚ್.ಮುನಿಯಪ್ಪ ಈ ಬಾರಿ ವಿಧಾನಸಭೆಯ ಟಿಕೆಟ್ ಬಯಸುತ್ತಿದ್ದಾರೆ, ಅವರ ಪುತ್ರಿ ರೂಪಕಲಾ ಕೆಜಿಎಫ್​ನ ಶಾಸಕಿ. ತುಮಕೂರಿನ ಮಧುಗಿರಿಯಿಂದ ಟಿಕೆಟ್ ಆಕಾಂಕ್ಷಿ ಕೆ.ಎನ್. ರಾಜಣ್ಣ ಅವರ ಪುತ್ರ ರಾಜೇಂದ್ರ ವಿಧಾನ ಪರಿಷತ್ ಚುನಾವಣೆ ಗೆದ್ದಿದ್ದಾರೆ. ಮಾಜಿ ಸಚಿವ ಜಯಚಂದ್ರ ಹಾಗೂ ಅವರ ಪುತ್ರ ಸಂತೋಷ್ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಮಾಜಿ ಸಚಿವ ಡಾ. ಎಚ್.ಸಿ. ಮಹದೇವಪ್ಪ ಹಾಗೂ ಅವರ ಪುತ್ರ ಬೋಸ್ ಈ ಬಾರಿ ಟಿಕೆಟ್ ಆಕಾಂಕ್ಷಿಗಳು.
ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ಅವರ ಸಹೋದರ ಚನ್ನರಾಜ್ ಹಟ್ಟಿಹೊಳ್ಳಿ ಶಾಸನಸಭೆಯ ಸದಸ್ಯರು. ದಿವಂಗತ ಮುಖ್ಯಮಂತ್ರಿ ಧರ್ಮಸಿಂಗ್ ಪುತ್ರರಾದ ಅಜಯ್ ಸಿಂಗ್ ಹಾಗೂ ವಿಜಯ ಸಿಂಗ್ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಬೀದರ್ ಜಿಲ್ಲೆಯ ರಾಜಶೇಖರ ಪಾಟೀಲ್ ಶಾಸಕರಾಗಿದ್ದರೆ, ಅವರ ಸಹೋದರ ಭೀಮರಾವ್ ಪಾಟೀಲ್ ವಿಧಾನ ಪರಿಷತ್ ಸದಸ್ಯರು. ದಾವಣಗೆರೆಯಲ್ಲಿ ಶ್ಯಾಮನೂರು ಶಿವಶಂಕರಪ್ಪ ಹಾಗೂ ಅವರ ಪುತ್ರ ಎಸ್.ಎಸ್. ಮಲ್ಲಿಕಾರ್ಜುನ್ ಇಬ್ಬರೂ ಟಿಕೆಟ್ ಆಕಾಂಕ್ಷಿಗಳು. ಶಾಸಕ ಎನ್.ಎ. ಹ್ಯಾರೀಸ್ ಪುತ್ರ ನಲಪಾಡ್ ಯುವ ಕಾಂಗ್ರೆಸ್ ಅಧ್ಯಕ್ಷ. ಮಾಜಿ ಸಚಿವ ಪ್ರಕಾಶ್ ಹುಕ್ಕೇರಿ ಅವರಿಗೆ ವಿಧಾನ ಪರಿಷತ್​ಗೆ ಟಿಕೆಟ್ ನೀಡಲಾಗಿದೆ. ಅವರ ಪುತ್ರ ಗಣೇಶ್ ಹುಕ್ಕೇರಿ ಶಾಸಕರು. ಮಾಜಿ ಸಚಿವ ಆರ್.ವಿ. ದೇಶಪಾಂಡೆ ವಿಧಾನಸಭೆ ಟಿಕೆಟ್ ಕೇಳಿದರೆ ಅವರ ಪುತ್ರ ಪ್ರಶಾಂತ್ ಅವರನ್ನು ಲೋಕಸಭೆಗೆ ಕಳುಹಿಸಲು ಆಸಕ್ತರಾಗಿದ್ದಾರೆ. ಕೇಂದ್ರದ ಮಾಜಿ ಸಚಿವ ಎಂ. ವೀರಪ್ಪ ಮೊಯಿಲಿ ಹಾಗೂ ಅವರ ಪುತ್ರ ಹರ್ಷ ಮೊಯಿಲಿ ಇಬ್ಬರು ಟಿಕೆಟ್ ಬಯಸುತ್ತಿದ್ದಾರೆ.
ವಿಧಾನ ಪರಿಷತ್​ನ ಪ್ರತಿಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್ ಸಹೋದರನ ಪುತ್ರ ರಕ್ಷಿತ್ ಬೆಳ್ತಂಗಡಿಯಿಂದ ಟಿಕೆಟ್ ಬಯಸಿ ಅಲ್ಲಿ ಪಕ್ಷ ಸಂಘಟನೆಯಲ್ಲಿ ತೊಡಗಿದ್ದಾರೆ. ಶಾಸಕ ಅಮರೇಗೌಡ ಬಯ್ಯಾಪುರ ಮತ್ತೆ ಟಿಕೆಟ್ ಆಕಾಂಕ್ಷಿ, ಅವರ ಸಹೋದರನ ಪುತ್ರ ಶರಣಗೌಡ ಬಯ್ಯಾಪುರ ವಿಧಾನ ಪರಿಷತ್ ಸದಸ್ಯರಾಗಿದ್ದಾರೆ. ಪಕ್ಷದ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್ ಬಬಲೇಶ್ವರ ಕ್ಷೇತ್ರದ ಶಾಸಕರು ಹೌದು, ಅವರ ಸಹೋದರ ಸುನಿಲ್​ಗೌಡ ಪಾಟೀಲ್ ವಿಧಾನ ಪರಿಷತ್​ಗೆ ಎರಡನೇ ಬಾರಿ ಆಯ್ಕೆಯಾಗಿದ್ದಾರೆ.
ಪಕ್ಷ ಬಿಡುವ ಸಾಧ್ಯತೆ:ಒಂದು ಕುಟುಂಬಕ್ಕೆ ಒಂದೇ ಟಿಕೆಟ್ ಎಂಬುದು ಜಾರಿಗೆ ಬಂದರೆ ಕೆಲವರು ಪಕ್ಷ ಬಿಡಬಹುದೆಂದು ಹೇಳಲಾಗುತ್ತಿದೆ. ತಮಗೆ ಮತ್ತು ಪುತ್ರ ಅಥವಾ ಸಹೋದರರಿಗೆ ಟಿಕೆಟ್ ಕೇಳುವವರ ಸಂಖ್ಯೆ ಹೆಚ್ಚಾಗುತ್ತಿದೆ. ಅಂಥವರು ಪಕ್ಷದಿಂದ ದೂರ ಸರಿಯಬಹುದೆಂದು ಮೂಲಗಳು ಹೇಳಿವೆ. ಪಕ್ಷಕ್ಕೆ ಬರಲು ಸಿದ್ಧವಿರುವ ಜಿ.ಟಿ. ದೇವೇಗೌಡ ಅವರ ಜತೆಗೆ ಪುತ್ರ ಹರೀಶ್ ಗೌಡಗೂ ಟಿಕೆಟ್ ನೀಡಬೇಕೆಂದು ಕೇಳಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 2 =
Remember me
