ಏಕರೂಪ ನಾಗರಿಕ ಸಂಹಿತೆ ಕುರಿತು ದೇಶದಲ್ಲಿ ಮತ್ತೆ ಪರ-ವಿರೋಧದ ಚರ್ಚೆ ಶುರುವಾಗಿದೆ. ಎಲ್ಲ ಧರ್ಮದವರಿಗೂ ಒಂದೇ ರೀತಿಯ ವೈಯಕ್ತಿಕ ಕಾನೂನುಗಳನ್ನು ಜಾರಿ ಮಾಡುವ ಕುರಿತು ಸಂವಿಧಾನದಲ್ಲಿ ಏನು ಹೇಳಲಾಗಿದೆ? ಸುಪ್ರೀಂ ಕೋರ್ಟ್ ನಿಲುವೇನು? ಕಾನೂನು ಆಯೋಗದ ಅಭಿಪ್ರಾಯವೇನು ಎಂಬುದರತ್ತ ಕಿರುನೋಟ.
ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಯು ವ್ಯಾಪಕವಾದ ಚರ್ಚೆಯನ್ನು ಮತ್ತೆ ಹುಟ್ಟುಹಾಕಿದೆ. ಭಾರತವು ಎರಡು ಕಾನೂನುಗಳ ಮೇಲೆ ನಡೆಯಲು ಸಾಧ್ಯವಿಲ್ಲ ಮತ್ತು ಏಕರೂಪ ನಾಗರಿಕ ಸಂಹಿತೆ ಸಂವಿಧಾನದ ಭಾಗವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ‘ಇಂದು ಜನರನ್ನು ಯುಸಿಸಿ ಹೆಸರಿನಲ್ಲಿ ಪ್ರಚೋದಿಸಲಾಗುತ್ತಿದೆ. ಸಂವಿಧಾನವು ಸಮಾನ ಹಕ್ಕುಗಳ ಬಗ್ಗೆ ಮಾತನಾಡುತ್ತದೆ. ಯುಸಿಸಿ ಜಾರಿಗೊಳಿಸಬೇಕೆಂದು ಸುಪ್ರೀಂ ಕೋರ್ಟ್ ಕೂಡ ಹೇಳಿದೆ. ವಿರೋಧ ಪಕ್ಷದವರು ಮತಬ್ಯಾಂಕ್ ರಾಜಕೀಯ ಮಾಡುತ್ತಿದ್ದಾರೆ’ ಎಂದೂ ಪ್ರಧಾನಿ ಹರಿಹಾಯ್ದಿದ್ದಾರೆ.
ಹಲವು ರಾಜ್ಯಗಳಲ್ಲಿ ಚುನಾವಣೆಗಳು ಸಮೀಪಿಸುತ್ತಿರುವಾಗ ರಾಜಕೀಯ ಲಾಭಕ್ಕಾಗಿ ಪ್ರಧಾನಿ ಮೋದಿ ಯುಸಿಸಿ ವಿಷಯ ಎತ್ತುತ್ತಿದ್ದಾರೆ ಎಂದು ವಿರೋಧ ಪಕ್ಷಗಳ ನಾಯಕರು ಆರೋಪಿಸಿದ್ದು, ಪ್ರಧಾನಿ ಹೇಳಿಕೆಯು ರಾಷ್ಟ್ರವ್ಯಾಪಿ ಚರ್ಚೆಗೆ ಕಾರಣವಾಗಿದೆ. ಹಣದುಬ್ಬರ, ನಿರುದ್ಯೋಗ ಮತ್ತು ಮಣಿಪುರದ ದಂಗೆಯಂತಹ ನೈಜ ಸಮಸ್ಯೆಗಳಿಂದ ದಿಕ್ಕು ತಪ್ಪಿಸುವ ತಂತ್ರವಾಗಿ ಪ್ರಧಾನಿಯವರು ಯುಸಿಸಿ ವಿಷಯ ಬಳಸುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದಾರೆ.
ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಮುಖ್ಯಸ್ಥ ಅಸಾದುದ್ದೀನ್ ಓವೈಸಿ, ‘ಪ್ರಧಾನಿಯವರು ಭಾರತದ ವೈವಿಧ್ಯತೆ ಮತ್ತು ಅದರ ಬಹುತ್ವವನ್ನು ಸಮಸ್ಯೆ ಎಂದು ಪರಿಗಣಿಸುತ್ತಾರೆ. ಹಾಗಾಗಿ, ಅವರು ಇಂತಹ ಮಾತುಗಳನ್ನು ಹೇಳುತ್ತಾರೆ. ಬಹುಶಃ ಸಂವಿಧಾನದ 29ನೇ ವಿಧಿಯು ಭಾರತದ ಪ್ರಧಾನಿಗೆ ಅರ್ಥವಾಗುವುದಿಲ್ಲ. ಯುಸಿಸಿ ಹೆಸರಿನಲ್ಲಿ ನೀವು ದೇಶದ ಬಹುತ್ವ ಮತ್ತು ವೈವಿಧ್ಯತೆಯನ್ನು ಕಸಿದುಕೊಳ್ಳುವಿರಾ?’ ಎಂದು ಪ್ರಶ್ನಿಸಿದ್ದಾರೆ. ಏಕರೂಪ ನಾಗರಿಕ ಸಂಹಿತೆಯು ಬುಡಕಟ್ಟು ಸಾಂಪ್ರದಾಯಿಕ ಕಾನೂನುಗಳನ್ನು ದುರ್ಬಲಗೊಳಿಸುತ್ತದೆ ಎಂದು 30 ಬುಡಕಟ್ಟು ಸಂಘಟನೆಗಳು ಆತಂಕ ವ್ಯಕ್ತಪಡಿಸಿವೆ. ‘ನಾವು ವಿವಿಧ ಕಾರಣಗಳಿಗಾಗಿ ಯುಸಿಸಿಯನ್ನು ಪ್ರತಿಭಟಿಸುತ್ತೇವೆ. ಎರಡು ಬುಡಕಟ್ಟು ಕಾನೂನುಗಳಾದ ಚೋಟಾ ನಾಗ್ಪುರ ಟೆನೆನ್ಸಿ ಆಕ್ಟ್ ಮತ್ತು ಸಂತಾಲ್ ಪರಗಣಾಸ ಟೆನೆನ್ಸಿ ಆಕ್ಟ್ ಮೇಲೆ ಯುಸಿಸಿ ಪರಿಣಾಮ ಬೀರಬಹುದಾಗಿದೆ ಎಂಬ ಭೀತಿ ನಮಗಿದೆ. ಈ ಎರಡು ಕಾನೂನುಗಳು ಬುಡಕಟ್ಟು ಭೂಮಿಯನ್ನು ರಕ್ಷಿಸುತ್ತವೆ’ ಎನ್ನುತ್ತಾರೆ ಆದಿವಾಸಿ ಜನ ಪರಿಷತ್ ಅಧ್ಯಕ್ಷ ಪ್ರೇಮ್ ಸಾಹಿ ಮುಂಡಾ.
2019ರ ಲೋಕಸಭಾ ಚುನಾವಣಾ ಪ್ರಣಾಳಿಕೆಯಲ್ಲಿಯೇ ಬಿಜೆಪಿಯು ತಾನು ಅಧಿಕಾರಕ್ಕೆ ಬಂದರೆ ಯುಸಿಸಿ ಅನುಷ್ಠಾನಗೊಳಿಸುವ ಭರವಸೆ ನೀಡಿತ್ತು.
ಸುಪ್ರೀಂ ಕೋರ್ಟ್ ವಿವಿಧ ತೀರ್ಪಗಳಲ್ಲಿ ಯುಸಿಸಿ ಅನುಷ್ಠಾನಕ್ಕೆ ಕರೆ ನೀಡಿದೆ. 1985ರಲ್ಲಿ ‘ಮೊಹಮ್ಮದ್ ಅಹ್ಮದ್​ಖಾನ್ ವಿರುದ್ಧ ಶಾ ಬಾನೋ ಬೇಗಂ’ ಪ್ರಕರಣದಲ್ಲಿ ವಿಚ್ಛೇದಿತ ಮುಸ್ಲಿಂ ಮಹಿಳೆ ಮಾಜಿ ಪತಿಯಿಂದ ಜೀವನಾಂಶಕ್ಕೆ ಒತ್ತಾಯಿಸಿದ್ದರು. ಈ ಪ್ರಕರಣದಲ್ಲಿ, ಕ್ರಿಮಿನಲ್ ಪ್ರೊಸಿಜರ್ ಕೋಡ್​ಗೆ (ಅಪರಾಧ ದಂಡ ಸಂಹಿತೆ) ಒತ್ತು ನೀಡಬೇಕೋ ಅಥವಾ ಮುಸ್ಲಿಂ ವೈಯಕ್ತಿಕ ಕಾನೂನಿಗೆ ಮಹತ್ವ ನೀಡಬೇಕೋ ಎಂದು ನಿರ್ಧರಿಸುವ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್, ಯುಸಿಸಿ ಅನುಷ್ಠಾನದ ಪರ ನಿಂತಿತ್ತು. 1995ರಲ್ಲಿ ಸರಳಾ ಮುದ್ಗಲ್ ಪ್ರಕರಣದ ತೀರ್ಪಿನಲ್ಲಿ ಮತ್ತು ‘ಪಾಲೊ ಕೌಟಿನ್ಹೋ ವಿರುದ್ಧ ಮಾರಿಯಾ ಲೂಯಿಜಾ ವ್ಯಾಲೆಂಟಿನಾ ಪೆರೇರಾ’ ಪ್ರಕರಣದಲ್ಲಿ (2019) ಕೂಡ ಯುಸಿಸಿಯನ್ನು ಜಾರಿಗೆ ತರಲು ನ್ಯಾಯಾಲಯವು ಹೇಳಿತ್ತು.
2018ರಲ್ಲಿ ಮೋದಿ ಸರ್ಕಾರದ ಕೋರಿಕೆಯ ಮೇರೆಗೆ ಕೌಟುಂಬಿಕ ಕಾನೂನಿನ ಸುಧಾರಣೆಯ ಕುರಿತು ಕಾನೂನು ಆಯೋಗವು 185 ಪುಟಗಳ ಸಮಾಲೋಚನಾ ಪತ್ರವನ್ನು ಸಲ್ಲಿಸಿತು. ಈ ಹಂತದಲ್ಲಿ ಯುಸಿಸಿಯ ಅಗತ್ಯವೂ ಇಲ್ಲ ಅಥವಾ ಅಪೇಕ್ಷಣಿಯವೂ ಅಲ್ಲ ಎಂದು ಆಯೋಗ ಹೇಳಿತ್ತು. ನಿರ್ದಿಷ್ಟ ಧರ್ಮದೊಳಗಿನ ತಾರತಮ್ಯದ ಆಚರಣೆಗಳು, ಪೂರ್ವಾಗ್ರಹಗಳು ಮತ್ತು ರೂಢ ಮಾದರಿಗಳ ಕುರಿತಂತೆ ವೈಯಕ್ತಿಕ ಕಾನೂನುಗಳನ್ನು ಅಧ್ಯಯನ ಮಾಡಿ, ತಿದ್ದುಪಡಿ ಮಾಡಬೇಕು ಎಂದು ವರದಿ ಶಿಫಾರಸು ಮಾಡಿದೆ. ಇದೀಗ 22ನೇ ಕಾನೂನು ಆಯೋಗವು ಯುಸಿಸಿ ಕುರಿತು ಸಾರ್ವಜನಿಕ ಅಭಿಪ್ರಾಯಗಳನ್ನು ಆಹ್ವಾನಿಸಿದೆ.
ಹೌದು, ಸಂವಿಧಾನದ 4ನೇ ಭಾಗದಲ್ಲಿ ಇದನ್ನು ಉಲ್ಲೇಖಿಸಲಾಗಿದೆ. ಭಾರತದ ಭೂಪ್ರದೇಶದಾದ್ಯಂತ ನಾಗರಿಕರಿಗೆ ಏಕರೂಪದ ನಾಗರಿಕ ಸಂಹಿತೆಯನ್ನು ಅನುಷ್ಠಾನಗೊಳಿಸಲು ಸರ್ಕಾರ ಪ್ರಯತ್ನಿಸುತ್ತದೆ ಎಂದು ಇದರಲ್ಲಿ ಹೇಳಲಾಗಿದೆ. ಮದುವೆ, ವಿಚ್ಛೇದನ, ಉತ್ತರಾಧಿಕಾರ ಮತ್ತು ದತ್ತು ಸ್ವೀಕಾರಕ್ಕೆ ಸಂಬಂಧಿಸಿದಂತೆ ಪ್ರತಿ ಧರ್ಮದ ಪ್ರಾಚೀನ ವೈಯಕ್ತಿಕ ಕಾನೂನುಗಳನ್ನು ಬದಲಿಸುವ ಏಕರೂಪದ ಕಾನೂನುಗಳ ಕುರಿತಂತೆ ಸಂವಿಧಾನದ ರಚನೆಕಾರರು ಮುನ್ನೋಟ ಹೊಂದಿದ್ದರು. ಯುಸಿಸಿಯು ರಾಜ್ಯನೀತಿಯ ನಿರ್ದೇಶನ ತತ್ವಗಳ ಭಾಗ ಕೂಡ ಆಗಿದೆ.
ಭಾರತದಲ್ಲಿ ಪ್ರಸ್ತಾಪಿಸಲಾಗಿರುವ ಏಕರೂಪ ನಾಗರಿಕ ಸಂಹಿತೆಯು ಧರ್ಮಗಳು, ಪದ್ಧತಿಗಳು ಮತ್ತು ಸಂಪ್ರದಾಯಗಳನ್ನು ಆಧರಿಸಿದ ವೈಯಕ್ತಿಕ ಕಾನೂನುಗಳಿಗೆ ಬದಲಾಗಿ ಧರ್ಮ, ಜಾತಿ, ಪಂಥ, ಲೈಂಗಿಕ ದೃಷ್ಟಿಕೋನ ಮತ್ತು ಲಿಂಗವನ್ನು ಪರಿಗಣಿ ಸದೆಯೇ ಎಲ್ಲರಿಗೂ ಒಂದೇ ರೀತಿಯ ವೈಯಕ್ತಿಕ ಕಾನೂನು ಜಾರಿಗೊಳಿಸುವ ಗುರಿ ಹೊಂದಿದೆ.
ಗೋವಾದಲ್ಲಿ ಪೋರ್ಚುಗೀಸ್ ಕಾಲದಿಂದಲೂ ಸಿವಿಲ್ ಕೋಡ್ ಜಾರಿಯಲ್ಲಿದೆ. ಇದನ್ನು ಏಕರೂಪ ನಾಗರಿಕ ಸಂಹಿತೆ ಎಂದು ಪರಿಗಣಿಸಲಾಗಿದೆ. 1867ರಲ್ಲಿ ಪೋರ್ಚುಗಲ್ ಆಡಳಿತವು ಪೋರ್ಚುಗೀಸ್ ನಾಗರಿಕ ಸಂಹಿತೆಯನ್ನು ಜಾರಿಗೊಳಿಸಿತು. ಇದನ್ನು 1869ರಲ್ಲಿ ಪೋರ್ಚುಗಲ್​ನ ಸಾಗರೋತ್ತರ ಪ್ರಾಂತ್ಯಗಳಿಗೆ (ಗೋವಾ ಸೇರಿದಂತೆ) ವಿಸ್ತರಿಸಲಾಯಿತು. ಆದರೆ, ವಾಸ್ತವದಲ್ಲಿ ಈ ಸಂಹಿತೆಯು ಸಂಕೀರ್ಣವಾಗಿದೆ. ಉತ್ತರಾಖಂಡ ಸರ್ಕಾರವು ರಾಜ್ಯದಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೊಳಿಸುವ ನಿರ್ಧಾರವನ್ನು ಕಳೆದ ವರ್ಷ ಮೇ 27ರಂದು ಪ್ರಕಟಿಸಿತು. ಯುಸಿಸಿ ಅನುಷ್ಠಾನಕ್ಕೆ ಕರಡು ಪ್ರಸ್ತಾವನೆಯನ್ನು ತಯಾರಿಸಲು ದೇಸಾಯಿ ನೇತೃತ್ವದ ಐವರು ಸದಸ್ಯರ ಸಮಿತಿಯನ್ನು ಸರ್ಕಾರ ರಚಿಸಿದೆ. ಇದಕ್ಕೂ ಮೊದಲು, ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು, ರಾಜ್ಯದಲ್ಲಿ ಏಕರೂಪ ನಾಗರಿಕ ಸಂಹಿತೆಯ ಅನುಷ್ಠಾನದ ಅಗತ್ಯವನ್ನು ಒತ್ತಿ ಹೇಳಿದ್ದರು. ಎಲ್ಲಾ ಮುಸ್ಲಿಂ ಮಹಿಳೆಯರಿಗೆ ನ್ಯಾಯ ಒದಗಿಸಲು ಇದು ಅಗತ್ಯ ಎಂದು ಹೇಳಿದ್ದರು. ಯುಸಿಸಿ ಜಾರಿಯನ್ನು ಗುಜರಾತ್ ಸರ್ಕಾರವೂ ಬೆಂಬಲಿಸಿದೆ.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:eighteen + 3 =
Remember me
