ನವದೆಹಲಿ/ಮಾಸ್ಕೊ/ಕಿಯೆವ್:ಯೂಕ್ರೇನ್ ಮೇಲೆ ರಷ್ಯಾ ದಾಳಿ ಆರಂಭವಾಗಿ ಎರಡು ವಾರವಾಗುತ್ತಿದೆ. ಸಮರ ಭೂಮಿಯಾಗಿರುವ ಯೂಕ್ರೇನ್​ನಲ್ಲಿ ಸಿಲುಕಿದ್ದ ಭಾರತೀಯರ ರಕ್ಷಣೆಗೆ ಭಾರತ ಸರ್ಕಾರ ನಡೆದುಕೊಂಡ ರಾಜತಾಂತ್ರಿಕ ರೀತಿಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ಬುಚಾರೆಸ್ಟ್​ನಿಂದ 700 ಭಾರತೀಯರನ್ನು ಒಳಗೊಂಡ ಕೊನೆಯ ವಿಮಾನ ಬುಧವಾರ ಹೊರಟಿದೆ. ಇದರೊಂದಿಗೆ ಆಪರೇಷನ್ ಗಂಗಾ ಕಾರ್ಯಾಚರಣೆ ಮುಕ್ತಾಯ ಹಂತ ತಲುಪಿದೆ. ಯುದ್ಧ ಪೀಡಿತ ಯೂಕ್ರೇನ್​ನಿಂದ ಭಾರತೀಯರನ್ನು ಸ್ಥಳಾಂತರಿಸುವ ಆಪರೇಷನ್ ಗಂಗಾ ಕಾರ್ಯಾಚರಣೆ ಗುರುವಾರ ಸಂಜೆಯೊಳಗೆ ಮುಕ್ತಾಯವಾಗಲಿದೆ. ಫೆ.24ರಿಂದ ಇದುವರೆಗೆ 18,000ದಷ್ಟು ಭಾರತೀರಯನ್ನು ಸ್ಥಳಾಂತರಿಸಲಾಗಿದೆ. ಇವರಲ್ಲಿ ಬಹುತೇಕರು ವಿದ್ಯಾರ್ಥಿಗಳು. ರಷ್ಯಾ ಗಡಿ ಭಾಗದ ಸುಮಿಯಲ್ಲಿ ಸಿಲುಕಿದ್ದ 700ರಷ್ಟು ಭಾರತೀಯರ ಕೊನೆಯ ತಂಡ ಪೋಲೆಂಡ್​ಗೆ ಹೊರಟಿದೆ. ಅಲ್ಲಿಂದ ಇವರನ್ನು ಕರೆತರುವ ವಿಮಾನವೇ ಕೊನೆಯದ್ದು ಎಂದು ಸರ್ಕಾರ ತಿಳಿಸಿದೆ.
ಧನ್ಯವಾದ ಹೇಳಿದ ಬಾಂಗ್ಲಾ ಪ್ರಧಾನಿ:ಯೂಕ್ರೇನ್​ನಿಂದ ಭಾರತ ಸರ್ಕಾರ 13 ಬಾಂಗ್ಲಾದೇಶೀಯ ರನ್ನು ಕಾಪಾಡಿದೆ. ಅದೇ ರೀತಿ ನೇಪಾಳ ಒಬ್ಬ ಮತ್ತು ಟುನೀಷ್ಯಾದ ಇಬ್ಬರು ವಿದ್ಯಾರ್ಥಿಗಳನ್ನು ಅಲ್ಲಿಂದ ಪಾರು ಮಾಡಿದೆ. ಬಾಂಗ್ಲಾದೇಶದ ವಿದ್ಯಾರ್ಥಿಗಳನ್ನು ಕಾಪಾಡಿದ್ದಕ್ಕಾಗಿ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ಹೇಳಿದ್ದಾರೆ.
ವಾಯುಮಾರ್ಗ ಬಂದ್ ಮಾಡಿ…:ವಾಯುಮಾರ್ಗ ಮಾತ್ರ ಬಂದ್ ಮಾಡಿಕೊಡಿ. ರಷ್ಯಾ ಸೇನೆಯನ್ನು ನಾವು ಎದುರಿಸುತ್ತೇವೆ. ಅಷ್ಟು ಸಾಮರ್ಥ್ಯ ನಮ್ಮಲ್ಲಿ ಇದೆ ಎಂದು ಯೂಕ್ರೇನ್ ಫಸ್ಟ್ ಲೇಡಿ ಒಲೆನಾ ಝೆಲೆನ್​ಸ್ಕ ಇನ್​ಸ್ಟಾ ಗ್ರಾಂ ಪೋಸ್ಟ್​ನಲ್ಲಿ ಹೇಳಿಕೊಂಡಿದ್ದಾರೆ. ನ್ಯಾಟೊ ರಾಷ್ಟ್ರಗಳು ಯೂಕ್ರೇನ್​ನ ಈ ಬೇಡಿಕೆಯನ್ನು ತಿರಸ್ಕರಿಸುತ್ತ ಬಂದಿವೆ. ಇದರಿಂದ ಯೂಕ್ರೇನ್​ಗೆ ಹಿನ್ನಡೆಯಾಗಿದೆ.
ಭಾರತಕ್ಕೆ ಕೃತಜ್ಞತೆ ಸಲ್ಲಿಸಿದ ಪಾಕ್ ವಿದ್ಯಾರ್ಥಿನಿ ಅಸ್ಮಾ:ಯೂಕ್ರೇನ್​ನಿಂದ ಭಾರತೀಯ ವಿದ್ಯಾರ್ಥಿಗಳ ಜತೆಗೆ ತನ್ನನ್ನೂ ಪಾರು ಮಾಡಿದ್ದಕ್ಕೆ ಪಾಕಿಸ್ತಾನದ ವಿದ್ಯಾರ್ಥಿನಿ ಅಸ್ಮಾ ಶಫೀಕ್, ಭಾರತದ ರಾಯಭಾರ ಕಚೇರಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೃತಜ್ಞತೆ ಸೂಚಿಸಿ ವಿಡಿಯೋ ಸಂದೇಶ ರವಾನಿಸಿದ್ದಾಳೆ. ಸಂಕಷ್ಟದ ಸನ್ನಿವೇಶದಲ್ಲಿ ಕಿಯೆವ್​ನಲ್ಲಿದ್ದ ಭಾರತದ ರಾಯಭಾರ ಕಚೇರಿ ನೆರವು ನೀಡಿದೆ. ನಾವು ಸುರಕ್ಷಿತವಾಗಿ ಮನೆ ತಲುಪುತ್ತಿದ್ದೇವೆ ಎಂದಾದರೆ ಅದಕ್ಕೆ ಭಾರತ ಕಾರಣ. ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಭಾರತದ ರಾಯಭಾರ ಕಚೇರಿಗೆ ಧನ್ಯವಾದವನ್ನು ಅರ್ಪಿಸುತ್ತೇನೆ ಎಂದು ಶಫೀಕ್ ಹೇಳಿದ್ದಾಳೆ.
ಗಡಿಯಲ್ಲಿ ನ್ಯಾಟೋ ಪಡೆ ವಿರೋಧ ವ್ಯಕ್ತಪಡಿಸಿದ್ದ ರಷ್ಯಾ:ರಷ್ಯಾದ ಗಡಿಭಾಗದಲ್ಲಿ ನ್ಯಾಟೋ ಪಡೆ ನಿಯೋಜಿಸುವುದಕ್ಕೆ ಅನುಕೂಲವಾಗುವ ಯೂಕ್ರೇನ್ ಸರ್ಕಾರದ ನಡೆಗೆ ರಷ್ಯಾ ಸರ್ಕಾರ ವಿರೋಧ ವ್ಯಕ್ತಪಡಿಸುತ್ತಲೇ ಬಂದಿತ್ತು. ಇದ್ಯಾವುದಕ್ಕೂ ವೊಲೊಡಿಮಿರ್ ಝೆಲೆನ್​ಸ್ಕಿ ಮಣಿಯದ ಕಾರಣ, ದಾಳಿ ನಡೆಸುವ ತೀರ್ವನವನ್ನು ರಷ್ಯಾ ಕೈಗೊಂಡಿತ್ತು. ದಾಳಿಗೆ ಕೆಲವು ದಿನಗಳ ಮುನ್ನ ಪೂರ್ವ ಯೂಕ್ರೇನ್​ನ ಡೊನೆಟ್​ಸ್ ಮತ್ತು ಲುಗಾನ್​ಸ್ ಪ್ರಾಂತ್ಯಗಳನ್ನು ಸ್ವತಂತ್ರ ರಿಪಬ್ಲಿಕ್​ಗಳು ಎಂದು ಪುತಿನ್ ಸರ್ಕಾರ ಮಾನ್ಯಮಾಡಿತ್ತು. ಈ ಎರಡೂ ಪ್ರಾಂತ್ಯಗಳು ರಷ್ಯಾ ಪರ ಇದ್ದವು. ಇವು 2014ರಿಂದಲೇ ಯೂಕ್ರೇನ್ ಸರ್ಕಾರದ ವಿರುದ್ಧ ತಿರುಗಿಬಿದ್ದಿವೆ.
ಯೂಕ್ರೇನ್ ಸರ್ಕಾರವನ್ನು ಉರುಳಿಸಲ್ಲ:ಯೂಕ್ರೇನ್ ಸರ್ಕಾರವನ್ನು ಉರುಳಿಸುವ ಯಾವುದೇ ಉದ್ದೇಶ ನಮಗಿಲ್ಲ. ಯೂಕ್ರೇನ್ ನ್ಯಾಟೋ ಸೇರ್ಪಡೆ ನಮಗೆ ಇಷ್ಟ ಇಲ್ಲ. ಅದರಿಂದ ಅದು ಹಿಂದೆ ಸರಿಯಬೇಕು ಮತ್ತು ರಷ್ಯಾದ ಹಿತಕ್ಕೆ ವಿರುದ್ಧ ವರ್ತಿಸಬಾರದು ಎಂದು ರಷ್ಯಾ ಸರ್ಕಾರ ಎಎಫ್​ಪಿ ಸುದ್ದಿ ಸಂಸ್ಥೆಗೆ ತಿಳಿಸಿದೆ.
ಭಾರತದ ವಜ್ರೋದ್ಯಮಕ್ಕೆ ಹೊಡೆತ:ರಷ್ಯಾದ ಮೇಲೆ ಅಮೆರಿಕ ಮತ್ತು ಇತರೆ ರಾಷ್ಟ್ರಗಳು ನಿರ್ಬಂಧ ಹೇರಿದ ಕಾರಣ ಭಾರತದ ವಜ್ರೋದ್ಯಮ ತಲ್ಲಣಕ್ಕೆ ಒಳಗಾಗಿದೆ. ಭಾರತದ ಮಟ್ಟಿಗೆ ವಜ್ರಗಳನ್ನು ಪೂರೈಸುವುದು ರಷ್ಯಾದ ಅಲ್ರೋಸಾ ಗಣಿ. ಈ ಕಂಪನಿ ಮೇಲೆ ನಿರ್ಬಂಧ ಇಲ್ಲ. ಆದರೆ ರಷ್ಯಾದ ಬ್ಯಾಂಕುಗಳ ಮೇಲೆ ನಿರ್ಬಂಧ ಹೇರಿದ ಕಾರಣ, ವಹಿವಾಟು ನಡೆಸುವುದು ಕಷ್ಟವಾಗಿದೆ ಎಂದು ವಜ್ರೋದ್ಯಮದ ಪ್ರಮುಖರು ತಿಳಿಸಿದ್ದಾರೆ.
ನಾಗರಿಕರ ಸಾಮೂಹಿಕ ಹತ್ಯೆ:ಯೂಕ್ರೇನ್​ನ ಸುಮಿಯಲ್ಲಿ ವಿದೇಶೀಯರ ಸ್ಥಳಾಂತರವಾದ ಬೆನ್ನಿಗೆ ರಷ್ಯಾ ಸೇನೆ ಕ್ಷಿಪಣಿ ಮತ್ತು ಬಾಂಬ್ ದಾಳಿ ನಡೆಸಿದೆ. ಇಲ್ಲಿ ಮಂಗಳವಾರ ರಾತ್ರಿ 22 ನಾಗರಿಕರ ಸಾಮೂಹಿಕ ಹತ್ಯೆ ಆಗಿದೆ. ಇದೇ ರೀತಿ, ಸೆವೆರೊಡೊನೆಟ್​ಸ್ ಪ್ರದೇಶದಲ್ಲಿ 10 ನಾಗರಿಕರು ಹತರಾಗಿದ್ದಾರೆ. ಇದು ರಷ್ಯಾ ಸೇನೆಯ ಕೃತ್ಯ ಎಂದು ಯೂಕ್ರೆನ್ ಆರೋಪಿಸಿದೆ.
ಕಿಯೆವ್​ನಲ್ಲಿ ಏರ್ ಅಲರ್ಟ್:ಕಿಯೆವ್​ನಲ್ಲಿ ಬುಧವಾರ ಬೆಳಗ್ಗೆ ಏರ್ ಅಲರ್ಟ್ ಘೋಷಣೆ ಆಗಿತ್ತು. ಎಲ್ಲರೂ ಬಂಕರ್ ಸೇರುವಂತೆ ಸ್ಥಳೀಯಾಡಳಿತ ಎಚ್ಚರಿಕೆ ಸಂದೇಶ ನೀಡಿತ್ತು. ರಷ್ಯಾ ಸೇನೆ ಕ್ಷಿಪಣಿ ದಾಳಿ ನಡೆಸುವ ಮುನ್ಸೂಚನೆ ಹಿನ್ನೆಲೆಯಲ್ಲಿ ಈ ಎಚ್ಚರಿಕೆ ನೀಡಲಾಗಿತ್ತು. ಈ ಪ್ರದೇಶವನ್ನು ರಷ್ಯಾ ಸೇನೆ ಸುತ್ತುವರಿದಿದ್ದು, 4 ಲಕ್ಷಕ್ಕೂ ಹೆಚ್ಚು ಜನ ಇಲ್ಲಿ ಸಿಲುಕಿಕೊಂಡಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 + nine =
Remember me
