ಬೆಂಗಳೂರು:ಪ್ರಧಾನಿ ನರೇಂದ್ರ ಮೋದಿಯವರನ್ನು ಕಟ್ಟಿಹಾಕಲು ಚುನಾವಣೆಗೆ ಒಂದು ವರ್ಷ ಮುಂಚಿತವಾಗಿ ಕಾಂಗ್ರೆಸ್ ನೇತೃತ್ವದಲ್ಲಿ ಸಂಘಟಿತ ಸಮರಾಭ್ಯಾಸ ಆರಂಭವಾಗಿದ್ದು, ನಗರದಲ್ಲಿ ಇಂದು, ನಾಳೆ 24 ಪಕ್ಷಗಳ 80 ಮುಖಂಡರು ಗೇಮ್ ಪ್ಲಾನ್ ಸಿದ್ಧಪಡಿಸಲಿದ್ದಾರೆ.
ಬಿಜೆಪಿ ನೇತೃತ್ವದ ಎನ್​ಡಿಎ ಕೂಡ ಜುಲೈ 18ರಂದು ದೆಹಲಿಯಲ್ಲಿ ಮಹತ್ವದ ಸಭೆ ಕರೆದಿದ್ದು, ಚುನಾವಣಾಪೂರ್ವ ತಂತ್ರಗಾರಿಕೆ ರೂಪಿಸುತ್ತಿದೆ. ಹೀಗಾಗಿ ಎರಡು ದಿನಗಳ ಸಭೆ ಸಾಕಷ್ಟು ಮಹತ್ವ ಪಡೆದುಕೊಂಡಿದೆ. ಈಗಾಗಲೇ ಬಿಹಾರ ಮುಖ್ಯಮಂತ್ರಿ ನಿತೀಶ್​ಕುಮಾರ್ ನೇತೃತ್ವದಲ್ಲಿ ಪಟನಾದಲ್ಲಿ ಪ್ರತಿಪಕ್ಷಗಳ ಮೊದಲ ಸಭೆ ನಡೆದಿತ್ತು.
367 ಕ್ಷೇತ್ರಗಳನ್ನು ಕೇಂದ್ರೀಕರಿಸಿ ಒಟ್ಟಾಗಿ ಹೋರಾಡುವ ಸಂಕಲ್ಪ ಮಾಡಲಾಗಿತ್ತು. ಈ ಚರ್ಚೆಯ ಮುಂದುವರಿದ ಭಾಗವಾಗಿ ಬೆಂಗಳೂರಲ್ಲಿ ನಿರ್ಣಯಗಳನ್ನು ಕೈಗೊಳ್ಳಲಾ ಗುತ್ತದೆ. ದಕ್ಷಿಣದಲ್ಲಿ ಬಿಜೆಪಿ ಅಧಿಕಾರದ ಬಾಗಿಲು ಬಂದ್ ಮಾಡಿಸಿ ಹೊಸ ಸರ್ಕಾರ ರಚಿಸಿದ ಹುಮ್ಮಸ್ಸಿನಲ್ಲಿರುವ ಕಾಂಗ್ರೆಸ್ ಸರ್ಕಾರ ಸಭೆಯ ಆತಿಥ್ಯ ವಹಿಸಿಕೊಂಡಿದೆ.
ತಾಜ್ ವೆಸ್ಟ್​ಎಂಡ್ ಹೋಟೆಲ್​ನಲ್ಲಿ ಕಾಂಗ್ರೆಸ್ ನೇತೃತ್ವದಲ್ಲಿ ಪ್ರತಿಪಕ್ಷಗಳ ಸಭೆ ನಡೆಯಲಿದ್ದು, ಸಭೆಯ ಕಾರ್ಯಸೂಚಿಯನ್ನು ಕೈ ಪಾಳಯವೇ ಅಂತಿಮಗೊಳಿಸಿದೆ.
ಎಐಸಿಸಿ ಪ್ರಧಾನಕಾರ್ಯದರ್ಶಿಗಳ ಜತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ಜಿ. ಪರಮೇಶ್ವರ್, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಹಿರಿಯ ನಾಯಕರು ಪರಿವೀಕ್ಷಣೆ ನಡೆಸಿದರು. ಹಿರಿಯ ಸಚಿವರಿಗೆ ಸ್ವಾಗತ, ವಸತಿ, ಆತಿಥ್ಯ, ಸಭೆಯ ನಿರ್ವಹಣೆ ಕುರಿತು ವಿವಿಧ ಜವಾಬ್ದಾರಿ ವಹಿಸಲಾಗಿದೆ.
ಕಾಂಗ್ರೆಸ್ ಅಧಿನಾಯಕಿ ಸೋನಿಯಾಗಾಂಧಿ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ಬಿಹಾರ ಸಿಎಂ ನಿತೀಶ್​ಕುಮಾರ್, ಮಹಾರಾಷ್ಟ್ರದ ಮಾಜಿ ಸಿಎಂ ಉದ್ಧವ್ ಠಾಕ್ರೆ ಸೇರಿ ಹಲವು ಪಕ್ಷಗಳ ನಾಯಕರ ಪೋಸ್ಟರ್​ಗಳನ್ನು ಅಳವಡಿಸಲಾಗಿದೆ. ಭವ್ಯ ಸ್ವಾಗತಕ್ಕೆ ತಂಡಗಳು ತಯಾರಾಗಿವೆ.
ಹೊಸ ಸೇರ್ಪಡೆ?:ಯುಪಿಎ ಮತ್ತು ಎನ್​ಡಿಎ ಮರು ಸಮೀಕರಣ ನಡೆಯುತ್ತಿದೆ. ಪ್ರಾದೇಶಿಕ ಪಕ್ಷಗಳು ಗುಂಪನ್ನು ಬದಲಿಸುವ ಚಟುವಟಿಕೆಯಲ್ಲಿ ಚುರುಕಾಗಿವೆ. ಪಟನಾದಲ್ಲಿ ನಡೆದ ಪ್ರತಿಪಕ್ಷಗಳ ಸಭೆಯಲ್ಲಿ 15 ಪಕ್ಷಗಳು ಹಾಜರಾಗಿದ್ದವು. ಬೆಂಗಳೂರು ಸಭೆಯಲ್ಲಿ ಯುಪಿಎ ಪಾಳಯ ಬಲವರ್ಧನೆಯಾಗಿರುವ ಸಂದೇಶ ಕಳಿಸುವ ಪ್ರಯತ್ನ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಬಿಜೆಪಿಯ ವಿರುದ್ಧ ಒಗ್ಗಟ್ಟನ್ನು ಪ್ರದರ್ಶಿಸುವ ವಿಪಕ್ಷಗಳ ಸಭೆಗೆ ಒಂಬತ್ತು ಸಣ್ಣ ಪಕ್ಷಗಳು ಬೆಂಬಲ ನೀಡಿವೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
ಖರ್ಗೆ ಆಹ್ವಾನ:ಪಟನಾ ಜೆಡಿಯು ಆಯೋಜಿಸಿದ್ದ ಬಿಜೆಪಿಯೇತರ ಪಕ್ಷಗಳ ಸಭೆ ಯಶಸ್ವಿಯಾಗಿತ್ತು. ಹಲವು ವಿಷಯ ರ್ಚಚಿಸಲು ಅವಕಾಶ ಸಿಕ್ಕಿತ್ತಲ್ಲದೇ ಚುನಾವಣೆಯನ್ನು ಒಗ್ಗಟ್ಟಾಗಿ ಎದುರಿಸುವ ತೀರ್ವನಕ್ಕೆ ಬರಲಾಗಿತ್ತು. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಿತ್ರಪಕ್ಷಗಳ ಮುಖ್ಯಸ್ಥರಿಗೆ ಪತ್ರ ಬರೆದು ಬೆಂಗಳೂರಿನ ಸಭೆಗೆ ಆಹ್ವಾನಿಸಿದ್ದರು.
ಕರ್ನಾಟಕ ಸೂತ್ರ ಪ್ರಸ್ತಾಪ:ಕರ್ನಾಟಕ ವಿಧಾನಸಭೆ ಚುನಾವಣೆಯನ್ನು ಎದುರಿಸಿದ ಬಗೆ, ಬಿಜೆಪಿಯನ್ನು ಹಿಮ್ಮೆಟ್ಟಿಸಿದ ತಂತ್ರಗಾರಿಕೆ ಕುರಿತು ಈ ಸಭೆಯಲ್ಲಿ ಪ್ರಸ್ತಾಪವಾಗಲಿದೆ. ಗೆಲುವಿಗೆ ಅನೇಕ ಸೂತ್ರಗಳಿವೆ, ಅದರಲ್ಲಿ ಪ್ರಮುಖವಾಗಿ ಬಿಜೆಪಿಯ ಸಿದ್ಧಸೂತ್ರಗಳನ್ನು ಕೆಡವಿ ಹಾಕುವಂತಹ ರಣತಂತ್ರವನ್ನು ರೂಪಿಸುವುದು, ಜಾತಿ ಸಮೀಕರಣದಲ್ಲಿ ಬಿಜೆಪಿ ಲೆಕ್ಕಾಚಾರ ತಲೆಕೆಳಗೆ ಮಾಡುವುದು, ಗೊಂದಲಗಳಿಗೆ ಆದ್ಯತೆ ಮೇರೆಗೆ ಪರಿಹಾರ ಕಂಡುಕೊಳ್ಳುವುದು ಮತ್ತು ಮುಖ್ಯವಾಗಿ ಜನರಲ್ಲಿರುವ ಬಿಜೆಪಿ ಸರ್ಕಾರದ ಕುರಿತ ನಕಾರಾತ್ಮಕ ಅಭಿಪ್ರಾಯ ಪತ್ತೆ ಮಾಡಿ ಅದನ್ನು ಬಂಡವಾಳವಾಗಿಸಿಕೊಳ್ಳುವುದು. ಈ ಬಗ್ಗೆ ಸಭೆಯಲ್ಲಿ ಚರ್ಚೆಯಾಗಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಮೋದಿ, ಅಮಿತ್ ಷಾ ಜೋಡಿಯನ್ನು ಸೋಲಿಸಲು ಸಾಧ್ಯವೇ ಇಲ್ಲ ಎಂಬ ಮಾತನ್ನು ಕರ್ನಾಟಕದಲ್ಲಿ ಸುಳ್ಳುಮಾಡಲಾಗಿದೆ. ಇದನ್ನೇ ಲೋಕಸಭೆ ಚುನಾವಣೆಯಲ್ಲಿ ಸಾಧ್ಯಮಾಡಬಹುದು, ಆದರೆ ಎಲ್ಲರೂ ಒಟ್ಟಾಗಿ ಹೋದಾಗ ಬಿಜೆಪಿ ಶಕ್ತಿಯನ್ನು ಕುಂದಿಸಲು ಸಾಧ್ಯವಿದೆ ಎಂಬ ಸಂಗತಿಯನ್ನು ಸಭೆಯಲ್ಲಿ ಪ್ರಸ್ತಾಪಿಸಲಾಗುತ್ತಿದೆ.
ಪಾಲ್ಗೊಳ್ಳುವವರು…
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಅಧಿನಾಯಕಿ ಸೋನಿಯಾಗಾಂಧಿ, ಪುತ್ರ ರಾಹುಲ್ ಗಾಂಧಿ, ಪ್ರಿಯಾಂಕಾ ವಾಡ್ರಾ, ಮುಖ್ಯಮಂತ್ರಿಗಳಾದ ಬಿಹಾರದ ನಿತಿಶ್ ಕುಮಾರ್, ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ, ತಮಿಳುನಾಡಿನ ಸ್ಟಾಲಿನ್. ಮುಖಂಡರಾದ ಮೆಹಬೂಬಾ ಮುಫ್ತಿ, ಹೇಮಂತ್ ಸುರೇನ್, ಉದ್ಧವ್ ಠಾಕ್ರೆ, ಶರದ್ ಪವಾರ್, ಲಾಲೂ ಪ್ರಸಾದ್ ಯಾದವ್, ಸೀತಾರಾಮ್ ಯಚೂರಿ, ಅಖಿಲೇಶ್ ಯಾದವ್, ದೀಪಂಕರ್ ಭಟ್ಟಾಚಾರ್ಯ ಸೇರಿ ಪ್ರಮುಖರು ಭಾಗಿಯಾಗಲಿದ್ದಾರೆ. ಮರುಮಲರ್ಚಿ ದ್ರಾವಿಡ ಮುನ್ನೇತ್ರ ಕಳಗಂ, ಕೊಂಗು ದೇಸ ಮಕ್ಕಳ್ ಕಚ್ಚಿ, ವಿದುತಲೈ ಚಿರುತೈಗಲ್ ಕಚ್ಚಿ , ಕ್ರಾಂತಿಕಾರಿ ಸಮಾಜವಾದಿ ಪಕ್ಷ, ಆಲ್ ಇಂಡಿಯಾ ಫಾರ್ವರ್ಡ್ ಬ್ಲಾಕ್, ಮುಸ್ಲಿಂ ಲೀಗ್, ಕೇರಳ ಕಾಂಗ್ರೆಸ್ (ಜೋಸೆಫ್) ಮತ್ತು ಕೇರಳ ಕಾಂಗ್ರೆಸ್ (ಮಣಿ) ಯುಪಿಎ ಸೇರುವ ಪಕ್ಷಗಳಾಗಿವೆ.
ಪ್ರಾಮುಖ್ಯತೆ ಪಡೆಯುವ ಜೆಡಿಎಸ್ ನಿಲುವು:2018ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಜತೆ ಹೊಂದಾಣಿಕೆ ಮಾಡಿಕೊಂಡು ಸ್ಪರ್ಧಿಸಿದ್ದ ಜಾತ್ಯತೀತ ಜನತಾದಳದ ನಿಲುವು ಈ ಹೊತ್ತಿನಲ್ಲಿ ಕರ್ನಾಟಕದ ಪಾಲಿಗೆ ಅತಿ ಮುಖ್ಯ ಎನಿಸಲಿದೆ. ಕಾಂಗ್ರೆಸ್ ಕಡೆಯಿಂದ ಆಹ್ವಾನ ಹೋಗಿದೆ ಎಂಬ ಮಾಹಿತಿ ಇದೆಯಾದರೂ ಜೆಡಿಎಸ್ ಖಚಿತಪಡಿಸಿಲ್ಲ. ಎನ್​ಡಿಎ ಸೇರಿಸಿಕೊಳ್ಳುವ ನಿಟ್ಟಿನಲ್ಲಿ ಹೆಚ್ಚು ಒಲವಿದೆ ಎಂದು ಹೇಳಲಾಗುತ್ತಿದ್ದು, ಆ ಪಕ್ಷದ ನಾಯಕರ ಮಾತುಗಳೂ ಸಹ ಅದೇ ದಾಟಿಯಲ್ಲಿವೆ. ಪಾಟ್ನಾದ ಮೊದಲ ಸಭೆಯಲ್ಲೂ ಜೆಡಿಎಸ್ ಭಾಗಿಯಾಗಿರಲಿಲ್ಲ.
ಕಾರ್ಯಸೂಚಿ
ನಾಳೆ ಎನ್​ಡಿಎ ಸಭೆ:ಎನ್​ಡಿಎ ಕೂಡ ಜು.18ರಂದು ಮಹತ್ವದ ಸಭೆ ಕರೆದಿದೆ. ಮಿತ್ರ ಪಕ್ಷಗಳಿಗೆ ಆಹ್ವಾನ ನೀಡಿದ್ದು, ಒಕ್ಕೂಟದ ಬಲ ಹೆಚ್ಚಿಸಿಕೊಳ್ಳುವಲ್ಲಿ ಸಫಲವಾಗಿದೆ. ಈಗಾಗಲೇ ಎನ್​ಸಿಪಿ ಅಜಿತ್ ಪವಾರ್ ಬಣ, ಬಿಜೆಪಿ ಸರ್ಕಾರದ ಭಾಗವಾಗಿದ್ದರೆ, ಶಿವಸೇನೆಯ ಒಂದು ಬಣ ಎನ್​ಡಿಎ ಜತೆಗಿದೆ. ಇನ್ನೂ ಎರಡು ಸಣ್ಣ ಪಕ್ಷಗಳು ಎನ್​ಡಿಎ ಸೇರುತ್ತಿವೆ.
ಪ್ರತಿಪಕ್ಷಗಳ ಒಕ್ಕೂಟದ ಸಭೆಯಿಂದ ಯಾವುದೇ ರಾಜಕೀಯ ಲಾಭವಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಸೋಲಿಸಬೇಕೆಂದು ಒಗ್ಗಟ್ಟಾಗುತ್ತಿದ್ದಾರೆ. ಇದು ಸಲೀಸಲ್ಲ. ಪ್ರತಿಪಕ್ಷಗಳಿಗೆ ಯಾವುದೇ ಸ್ವಂತ ಬಲವಿಲ್ಲ.
| ಬಸವರಾಜ ಬೊಮ್ಮಾಯಿ ಮಾಜಿ ಸಿಎಂ
ವಿರೋಧ ಪಕ್ಷಗಳ ಸಭೆ ಲೋಕಸಭೆ ಚುಣಾವಣೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen + twenty =
Remember me
