ರಾಘವ ಶರ್ಮ ನಿಡ್ಲೆ, ನವದೆಹಲಿಕರ್ನಾಟಕ ವಿಧಾನಸಭೆ ಚುನಾವಣೆ ಗೆದ್ದ ನಂತರ ರಾಷ್ಟ್ರವ್ಯಾಪಿ ಹಿಗ್ಗಿದ್ದ ಕಾಂಗ್ರೆಸ್ ಕಾರ್ಯಕರ್ತರ ಆವೇಗ ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್​ಗಢ ರಾಜ್ಯಗಳಲ್ಲಿ ಹೀನಾಯ ಸೋಲಿನ ಬಳಿಕ ಕುಸಿದುಬಿಟ್ಟಿದೆ. ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಪಕ್ಷದ ಬಹುಪಾಲು ನಾಯಕರ ಒಟ್ಟಾರೆ ಚುನಾವಣಾ ಸಾಮರ್ಥ್ಯಗಳ ಬಗ್ಗೆ ಮತ್ತೆ ಪ್ರಶ್ನೆಗಳೆದ್ದಿವೆ. ಭಾರತ್ ಜೋಡೋ ಯಾತ್ರೆ ಮೂಲಕ ದೇಶದ ನಾಡಿಮಿಡಿತ ಅರಿಯಲು ಮುಂದಾಗಿದ್ದ ರಾಹುಲ್​ರನ್ನು, ಚುನಾವಣಾ ರಾಜಕೀಯಕ್ಕೆ ಒಪ್ಪಿತ ನಾಯಕನಲ್ಲ ಎನ್ನುವುದನ್ನು ಫಲಿತಾಂಶಗಳು ಒತ್ತಿಹೇಳಿವೆ.
ಮಧ್ಯಪ್ರದೇಶದಲ್ಲಿ ಕಳೆದ 20 ವರ್ಷಗಳ ಅವಧಿಯಲ್ಲಿ 18 ವರ್ಷ ಬಿಜೆಪಿ ಆಡಳಿತ ನಡೆಸಿದೆ. ಆದರೂ, ಪರ್ಯಾಯ ರಾಜಕೀಯ ಶಕ್ತಿಯಾಗಿ ರೂಪುಗೊಳ್ಳಲು ಕಾಂಗ್ರೆಸ್​ಗೆ ಸಾಧ್ಯವಾಗಿಲ್ಲ. ಕಮಲ್​ನಾಥ್, ದಿಗ್ವಿಜಯ ಸಿಂಗ್​ರಂತಹ ನಾಯಕರನ್ನು ಕಟ್ಟಿಕೊಂಡು ಚುನಾವಣೆ ಎದುರಿಸಿದ್ದಕ್ಕೆ ‘ಕೈ’ ಸುಟ್ಟುಕೊಂಡಿದ್ದೇವೆ ಎಂಬ ಮಾತುಗಳು ಪಕ್ಷದ ನಡುಮನೆಯಲ್ಲೇ ಕೇಳಿಬರುತ್ತಿವೆ. 2024ರ ಲೋಕಸಭೆ ಚುನಾವಣೆಯಲ್ಲಿ 100ರ ಗಡಿ ದಾಟಲೇಬೇಕೆಂದು ತಂತ್ರಗಾರಿಕೆ ರೂಪಿಸುತ್ತಿರುವ ನಡುವೆ ಈ ಚುನಾವಣೆ ಸೋಲು ಪಕ್ಷಕ್ಕೆ ದೈತ್ಯ ಸಮಸ್ಯೆಯಾಗಿ ಕಾಡಲಿದೆ.
ಪ್ರಧಾನಿ ಮೋದಿ ವಿರುದ್ಧ ವೈಯಕ್ತಿಕ ದಾಳಿ ನಡೆಸುವ ಬದಲಾಗಿ, ಬಿಜೆಪಿ ಎಂಬ ರಾಜಕೀಯ ಶಕ್ತಿಯನ್ನು ಎದುರಿಸಲು ಹೊಸ ರಾಜಕೀಯ ನಿರೂಪಣೆ ಕಾಂಗ್ರೆಸ್​ಗೆ ತೀರಾ ಅಗತ್ಯವಿದೆ. ನಿತ್ಯವೂ ಮೋದಿ-ಅದಾನಿ ಎಂದು ರಾಗ ಎಳೆಯುವ ಬದಲು ಸಂಘಟನಾತ್ಮಕವಾಗಿ ಪಕ್ಷವನ್ನು ಗಟ್ಟಿಗೊಳಿಸುವ ಬಗೆ ಹೇಗೆ ಎಂಬ ಬಗ್ಗೆ ರಾಹುಲ್, ಪ್ರಿಯಾಂಕಾ, ಖರ್ಗೆ ದೃಷ್ಟಿಹಾಯಿಸಬೇಕು ಎನ್ನುತ್ತಾರೆ ಒಬ್ಬ ಕಾಂಗ್ರೆಸ್ ಸಂಸದರು.
2019ರಲ್ಲಿ ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್​ಗಢ ಮೂರೂ ಚುನಾವಣೆಗಳಲ್ಲಿ ಕಾಂಗ್ರೆಸ್ ಗೆದ್ದರೂ, 4 ತಿಂಗಳ ಬಳಿಕದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಪ್ರಾಬಲ್ಯ ಮೆರೆದಿತ್ತು. ಅಂದರೆ, ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗೆ ಯಾರನ್ನು ಆಯ್ಕೆ ಮಾಡಬೇಕು ಎನ್ನುವುದು ಮತದಾರನಿಗೆ ಗೊತ್ತಿತ್ತು. ನಂತರದ 5 ವರ್ಷ ದೇಶದ ರಾಜಕೀಯದಲ್ಲಿ ಸಾಕಷ್ಟು ಬದಲಾವಣೆಗಳಾಗಿ, ಕಾಂಗ್ರೆಸ್​ಗೂ ಅವಕಾಶದ ಬಾಗಿಲುಗಳು ತೆರೆದಿದ್ದವು. ಹೀಗಾಗಿ, ಲೋಕಸಭೆಗೆ ದಿಕ್ಸೂಚಿಯಾಗಿದ್ದ ಚುನಾವಣೆಯಲ್ಲಿ ಉತ್ತಮ ನಿರ್ವಹಣೆಯ ಅಗತ್ಯ ಪಕ್ಷಕ್ಕಿತ್ತು. ಮೇಲಾಗಿ, ಇಂಡಿಯಾ ಮೈತ್ರಿಕೂಟವನ್ನು ಮುನ್ನಡೆಸಲು ಸಂಖ್ಯಾಬಲದ ಶಕ್ತಿ ಬೇಕಿತ್ತು. ಆದರೆ, ಅತ್ಯಂತ ಮಹತ್ವದ ಘಟ್ಟದಲ್ಲಿ ಕಾಂಗ್ರೆಸ್ ದೌರ್ಬಲ್ಯಗಳು ಮತ್ತೊಮ್ಮೆ ಬಹಿರಂಗವಾಗಿವೆ. ಮೈತ್ರಿಕೂಟದ ಮೂಲಕವೇ ಚುನಾವಣೆ ಎದುರಿಸುವುದಾದರೆ, ಪ್ರಾದೇಶಿಕ ಪಕ್ಷಗಳು ಪ್ರಬಲವಾಗಿರುವ ರಾಜ್ಯಗಳಲ್ಲಿ ಕಾಂಗ್ರೆಸ್ ನಾಯಕರು ತಲೆಬಗ್ಗಿಸಿ ನಿಲ್ಲುವುದು ಅನಿವಾರ್ಯ.
ಮಧ್ಯಪ್ರದೇಶದಲ್ಲಿ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ನ್ಯಾಯಯುತ ಸೀಟು ಹಂಚಿಕೆ ನಿರೀಕ್ಷಿಸಿದ್ದರು. ಆದರೆ, ಕಮಲ್​ನಾಥ್ ಅತ್ಯುತ್ಸಾಹ ಹಾಗೂ ಎಸ್​ಪಿಯನ್ನು ಕಡೆಗಣಿಸುವ ನಿರ್ಧಾರದಿಂದಾಗಿ ಎಸ್​ಪಿ ಏಕಾಂಗಿಯಾಗಿ 46 ಕ್ಷೇತ್ರಗಳಲ್ಲಿ ಸ್ಪರ್ಧಿಸಿತು. ಒಂದು ವೇಳೆ ಇಂಡಿಯಾ ಮೈತ್ರಿಕೂಟ ಒಗ್ಗಟ್ಟಾಗಿ ಸ್ಪರ್ಧಿಸಿದ್ದರೆ ಮತವಿಭಜನೆ ತಪ್ಪಿಸಬಹುದಿತ್ತು. ಆದರೆ, ಪ್ರಾದೇಶಿಕ ಪಕ್ಷಗಳು ಆರೋಪಿಸುವಂತೆ ಕಾಂಗ್ರೆಸ್ ಮತ್ತೆ ‘ಜಮೀಂದಾರಿ’ ಮನಸ್ಥಿತಿ ಪ್ರದರ್ಶಿಸಿತು. ಫಲಿತಾಂಶದ ನಂತರ ವ್ಯಗ್ರರಾಗಿರುವ ಅಖಿಲೇಶ್, ಉತ್ತರ ಪ್ರದೇಶದಲ್ಲಿ ಲೋಕಸಭೆ ಚುನಾವಣೆಗೆ ಕಾಂಗ್ರೆಸ್​ಗೆ ಬೆರಳೆಣಿಕೆ ಸೀಟು ಪಡೆದುಕೊಳ್ಳಲೂ ಅರ್ಹವಲ್ಲ ಎಂಬ ಸಂದೇಶ ಕೊಟ್ಟಿದ್ದಾರೆ. ಅಲ್ಲಿಗೆ, ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಮತ್ತೊಮ್ಮೆ ಮಕಾಡೆ ಮಲಗುವುದು ನಿಶ್ಚಿತವಾದಂತಿದೆ. ಮಧ್ಯಪ್ರದೇಶದಲ್ಲಿ ಹೊಂದಾಣಿಕೆ ಮಾಡಿಕೊಳ್ಳದ ಪರಿಣಾಮ ಉತ್ತರ ಪ್ರದೇಶದಲ್ಲಿ ಸಮಸ್ಯೆ ಸೃಷ್ಟಿಯಾಗಿದೆ. ಬಿಹಾರ, ಪಶ್ಚಿಮ ಬಂಗಾಳ, ಪಂಜಾಬ್, ದಿಲ್ಲಿ, ಉತ್ತರಾಖಂಡ ಸೇರಿ ಹಲವು ರಾಜ್ಯಗಳಲ್ಲಿ ಇಂಥದ್ದೇ ಪರಿಸ್ಥಿತಿಯನ್ನು ಕಾಂಗ್ರೆಸ್ ಎದುರಿಸಬೇಕಿದೆ.
ಕರ್ನಾಟಕದಲ್ಲೂ ‘ಕೈ’ಗೆ ಬಿಸಿ:ಕೆಲ ದಿನಗಳ ಹಿಂದಿನತನಕ ರಾಜ್ಯ ಕಾಂಗ್ರೆಸ್ ನಾಯಕರು ಈ ಸಲ ಲೋಕಸಭೆ ಚುನಾವಣೆಯಲ್ಲಿ 20ಕ್ಕಿಂತಲೂ ಹೆಚ್ಚು ಸೀಟು ಗೆಲ್ಲುತ್ತೇವೆ ಎನ್ನುತ್ತಿದ್ದರು. ಆದರೆ, 3 ರಾಜ್ಯಗಳ ಫಲಿತಾಂಶದಿಂದ ದೇಶದ ಒಟ್ಟಾರೆ ರಾಜಕೀಯ ಗ್ರಹಿಕೆ ಬದಲಾಗುವ ಸೂಚನೆ ಸಿಕ್ಕಿದ್ದು, ಕರ್ನಾಟಕದಲ್ಲೂ ಕಾಂಗ್ರೆಸ್ಸಿಗರ ಸ್ಥೈರ್ಯ ತಗ್ಗುವ ಸಾಧ್ಯತೆಯಿದೆ. ರಾಜ್ಯ ಚುನಾವಣೆಯಲ್ಲಿ ಸೋತು ಕಂಗೆಟ್ಟಿದ್ದ ರಾಜ್ಯ ಬಿಜೆಪಿಯ ಕಾರ್ಯಕರ್ತ ವರ್ಗಕ್ಕೆ 3 ರಾಜ್ಯಗಳ ಫಲಿತಾಂಶ ನೆಮ್ಮದಿ ತಂದಿದೆ. ಅದಕ್ಕೆ ಪೂರಕವಾಗಿ, ಬಿವೈ ವಿಜಯೇಂದ್ರರ ಯುವ ನಾಯಕತ್ವ ಕೂಡ ಕಾರ್ಯಕರ್ತರಲ್ಲಿ ಹುಮ್ಮಸ್ಸು ಹೆಚ್ಚಿಸುವ ನಿರೀಕ್ಷೆಯಿದೆ. ಬಹುಶಃ ರಾಜ್ಯದ ಚುನಾವಣಾ ರಾಜಕೀಯದಲ್ಲಿ ‘ಉತ್ತಮ ಆರಂಭ’ ಕಂಡುಕೊಳ್ಳಲು ವಿಜಯೇಂದ್ರರಿಗೂ ಇಂಥದ್ದೊಂದು ಫಲಿತಾಂಶದ ಅಗತ್ಯವಿತ್ತು.
ಸಭೆ ಮುಂದೂಡಿಕೆ:ಇಂಡಿಯಾ ಮೈತ್ರಿಕೂಟದ ಅಂಗಪಕ್ಷಗಳ ನಾಯಕರ ಸಭೆ ಡಿ. 6ಕ್ಕೆ ನಿಗದಿಯಾಗಿತ್ತು. ಆದರೆ ತಮಗೆ ಬೇರೆ ಪೂರ್ವನಿಗದಿತ ಕೆಲಸ ಇದ್ದು ಆ ದಿನ ಸಭೆಗೆ ಬರಲಾಗುವು ದಿಲ್ಲವೆಂದು ಅಖಿಲೇಶ್ ಯಾದವ್, ಮಮತಾ ಬ್ಯಾನರ್ಜಿ, ಸ್ಟಾಲಿನ್ ಮುಂತಾದವರು ಹೇಳಿದ್ದರಿಂದ ಸಭೆಯನ್ನು ಡಿಸೆಂಬರ್ 3ನೇ ವಾರಕ್ಕೆ ಮುಂದೂಡಲಾಗಿದೆ. ಆದರೆ ಪಕ್ಷಾಧ್ಯಕ್ಷರ ಸಭೆ ಬುಧವಾರ ನಡೆಯಲಿದೆ. ಅದಕ್ಕೂ ಕೆಲವರು ಗೈರಾಗುವ ಸಾಧ್ಯತೆಗಳಿದ್ದು, ಮೈತ್ರಿಕೂಟದಲ್ಲಿ ‘ಕಾಂಗ್ರೆಸ್ ಸ್ಥಾನಮಾನ’ ಏನು ಎನ್ನುವುದನ್ನು ಪರೋಕ್ಷವಾಗಿ ತಿಳಿಸುತ್ತಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 + 18 =
Remember me
