ನವದೆಹಲಿ:ಐಎನ್​ಡಿಐಎ ಒಕ್ಕೂಟದ ನಾಯಕರು ಜಾರ್ಖಂಡ್​ನ ರಾಂಚಿಯಲ್ಲಿ ಭಾನುವಾರ ಹಮ್ಮಿಕೊಳ್ಳಲಾದ ‘ನ್ಯಾಯ ರ್ಯಾಲಿ’ಯಲ್ಲಿ ಭಾಗವಹಿಸಿ, ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಸ್ವಾತಂತ್ರ್ಯ ಹೋರಾಟಗಾರ, ಬುಡಕಟ್ಟು ನಾಯಕ ಬಿರ್ಸಾ ಮುಂಡ ಬುಡಕಟ್ಟು ಜನಾಂಗದ ಹಕ್ಕುಗಳಿಗಾಗಿ ಬ್ರಿಟಿಷರ ವಿರುದ್ಧ ನಡೆಸಿದ್ದ ಹೋರಾಟಕ್ಕೆ ಬಳಸಿದ್ದ ‘ಉಲ್ಗುಲನ್’ ಅಥವಾ ‘ಕ್ರಾಂತಿ’ ಎಂಬರ್ಥದ ಪದವನ್ನೇ ಇರಿಸಿಕೊಂಡು ಈ ರ‍್ಯಾಲಿ ಹಮ್ಮಿಕೊಳ್ಳಲಾಗಿತ್ತು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಐಎನ್​ಡಿಐಎ ಒಕ್ಕೂಟದ ಭಾಗವಾದ ಆಪ್ ನಾಯಕ ಅರವಿಂದ ಕೇಜ್ರಿವಾಲ್ ಪತ್ನಿ ಸುನೀತಾ ಕೇಜ್ರಿವಾಲ್, ಜೆಎಂಎಂ ಪಕ್ಷದ ನಾಯಕ ಹೇಮಂತ್ ಸೊರೇನ್ ಪತ್ನಿ ಕಲ್ಪನಾ ಸೊರೇನ್, ಆಪ್ ರಾಜ್ಯಸಭಾ ಸದಸ್ಯ ಸಂಜಯ್ ಸಿಂಗ್, ಪಂಜಾಬ್ ಮುಖ್ಯಮಂತ್ರಿ ಭಗವಂತ ಮಾನ್, ಸಮಾಜವಾದಿ ಪಕ ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, ಬಿಹಾರದ ಮಾಜಿ ಡಿಸಿಎಂ ತೇಜಸ್ವಿ ಯಾದವ್ ಹಾಗೂ ಜಾರ್ಖಂಡ್ ಸಿಎಂ ಚಂಪೈ ಸೊರೇನ್ ಮುಂತಾದ ಪ್ರಮುಖ ನಾಯಕರು ಈ ರ್ಯಾಲಿಯಲ್ಲಿ ಭಾಗವಹಿಸಿದ್ದು, ಬಿಜೆಪಿ ಹಾಗೂ ಬಿಜೆಪಿ ನೇತೃತ್ವದ ಎನ್​ಡಿಎ ವಿರುದ್ಧ ವಾಗ್ದಾಳಿ ನಡೆಸಿದರು. ಈ ರ್ಯಾಲಿಯಲ್ಲಿ ಐಎನ್​ಡಿಐಎ ಒಕ್ಕೂಟದ 28 ಪಕ್ಷಗಳು ಭಾಗಿ ಆಗಿದ್ದವು.
‘ನರೇಂದ್ರ ಮೋದಿ ಭ್ರಷ್ಟಾಚಾರದ ವಿರುದ್ಧ ಮಾತನಾಡುತ್ತಾರೆ. ಅವರು ಹೇಮಂತ್ ಸೊರೇನ್ ಹಾಗೂ ಅರವಿಂದ ಕೇಜ್ರಿವಾಲ್ ಅವರನ್ನು ಸುಳ್ಳು ಆಪಾದನೆ ಮೇರೆಗೆ ಜೈಲಿಗೆ ಹಾಕಿದ್ದಾರೆ. ಮೋದಿ ಭ್ರಷ್ಟಾಚಾರದ ವಿರುದ್ಧ ಮಾತನಾಡುವುದು ಒಸಾಮಾ ಬಿನ್ ಲಾಡೆನ್ ಮತ್ತು ಗಬ್ಬರ್ ಸಿಂಗ್ ಅಹಿಂಸೆಯ ಕುರಿತು ಭಾಷಣ ಮಾಡಿದಂತಿರುತ್ತದೆ’ ಆಪ್ ನಾಯಕ ಸಂಜಯ್ ಸಿಂಗ್ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಪ್ರಧಾನಿ ಮೋದಿ ಐಎನ್​ಡಿಐಎ ಒಕ್ಕೂಟದ ಬಗ್ಗೆ ಹೆದರಿದ್ದಾರೆ. ಬಿಜೆಪಿ ನೇತೃತ್ವದ ಎನ್​ಡಿಎ ಈ ಸಲ 400ಕ್ಕೂ ಅಧಿಕ ಸ್ಥಾನ ಎಂದು ಘೋಷಣೆಗಳನ್ನು ಕೂಗುತ್ತಿದೆ. ಆದರೆ ಪ್ರಧಾನಿ ಮೋದಿಯ ‘400 ಪಾರ್’ ಸಿನಿಮಾ ಚುನಾವಣೆಯ ಮೊದಲ ದಿನವೇ ಪ್ಲಾಫ್ ಆಗಿದೆ ಎಂದು ಬಿಹಾರ ಮಾಜಿ ಡಿಸಿಎಂ ತೇಜಸ್ವಿ ಯಾದವ್ ಹೇಳಿದರು.
ಬಿಜೆಪಿ ನೇತೃತ್ವದ ಎನ್​ಡಿಎ ಬೇರೆ ಪಕ್ಷಗಳನ್ನು ಮುಗಿಸುವ, ಬೇರೆ ಪಕ್ಷಗಳ ಚಿಹ್ನೆ ದೋಚುವ, ಬೇರೆಯವರ ಖಾತೆಗಳನ್ನು ಸ್ಥಗಿತಗೊಳಿಸುವ, ಬೇರೆಯವರ ಶಾಸಕರು-ಸಂಸದರನ್ನು ಖರೀದಿಸುವಂಥ ಕೆಲಸಗಳಲ್ಲಷ್ಟೇ ತೊಡಗಿದೆ. ಹೀಗಾಗಿ ಜನರು ಐಎನ್​ಡಿಐಎ ಒಕ್ಕೂಟಕ್ಕೇ ಮತ ಚಲಾಯಿಸಿ ಎಂದು ಪಂಜಾಬ್ ಸಿಎಂ ಭಗವಂತ ಮಾನ್ ಹೇಳಿದರು
ಮಲತಾಯಿ ಧೋರಣೆ:ಈ ಲೋಕಸಭಾ ಚುನಾವಣೆಯಲ್ಲಿ ಒಂದು ಕಡೆ ಐಎನ್​ಡಿಐಎ ಇದ್ದರೆ ಇನ್ನೊಂದು ಕಡೆ ಬಂಡವಾಳಶಾಹಿ ಎನ್​ಡಿಎ ಇದೆ. ಬಿಜೆಪಿಯೇತರ ಸರ್ಕಾರಗಳಿರುವ ರಾಜ್ಯಗಳಿಗೆ ಮಲತಾಯಿ ಧೋರಣೆ ತೋರುತ್ತಿದೆ ಎಂದು ಜಾರ್ಖಂಡ್ ಮಾಜಿ ಸಿಎಂ ಹೇಮಂತ್ ಸೊರೇನ್ ಪತ್ನಿ ಕಲ್ಪನಾ ಸೊರೇನ್ ಹೇಳಿದರು.
ರಾಹುಲ್ ಗಾಂಧಿ ಗೈರು :ಜಾರ್ಖಂಡ್ ರ್ಯಾಲಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗೈರಾಗಿದ್ದಾರೆ. ಇದ್ದಕ್ಕಿದ್ದಂತೆ ಅಸ್ವಸ್ಥಗೊಂಡ ಹಿನ್ನೆಲೆಯಲ್ಲಿ ಅವರು ರ್ಯಾಲಿಗೆ ಆಗಮಿಸಲಿಲ್ಲ ಎಂದು ಕಾಂಗ್ರೆಸ್​ನ ನಾಯಕ ಜೈರಾಂ ರಮೇಶ್ ಮಾಹಿತಿ ಹಂಚಿಕೊಂಡಿದ್ದಾರೆ. ‘ರಾಹುಲ್ ಗಾಂಧಿ ಸಾರ್ವಜನಿಕ ರ್ಯಾಲಿಯಲ್ಲಿ ಭಾಗವಹಿಸಬೇಕಿತ್ತು. ಆದರೆ ಹಠಾತ್ ಅನಾರೋಗ್ಯದ ಹಿನ್ನೆಲೆಯಲ್ಲಿ ಅವರು ನವದೆಹಲಿಯ ತಮ್ಮ ನಿವಾಸದಿಂದ ಹೊರಡಲು ಆಗಲಿಲ್ಲ’ ಎಂದು ಜೈರಾಂ ರಮೇಶ್ ತಿಳಿಸಿದ್ದಾರೆ.
ಅರವಿಂದ ಕೇಜ್ರಿವಾಲ್​ಗಿಲ್ಲ ಅಧಿಕಾರದ ಆಸೆ:ಕೇಜ್ರಿವಾಲ್​ಗೆ ಅಧಿಕಾರದ ಆಸೆ ಇಲ್ಲ. ಅವರು ದೇಶ ಸೇವೆ ನಡೆಸಲು ಬಯಸುತ್ತಾರೆ. ಕೇಜ್ರಿವಾಲ್ ಯೋಚನೆಗಳು ಹಲವರಿಗೆ ಅರ್ಥವಾಗುತ್ತಿಲ್ಲ. ಕೇಜ್ರಿವಾಲ್ ಅತಿ ಜಾಣ, ಅವರು ಜೈಲಿನಲ್ಲಿದ್ದರೂ ಭಾರತ ಮಾತೆಯ ಕುರಿತೇ ಚಿಂತೆ ಮಾಡುತ್ತಿದ್ದಾರೆ ಎಂದು ಕೇಜ್ರಿವಾಲ್ ಪತ್ನಿ ಸುನೀತಾ ಕೇಜ್ರಿವಾಲ್ ಹೇಳಿದರು.
ಕೇಜ್ರಿವಾಲ್, ಸೊರೇನ್​ಗೆ ಕುರ್ಚಿ:ಜಾರ್ಖಂಡ್​ನ ರಾಂಚಿಯಲ್ಲಿ ಐಎನ್​ಡಿಐಎ ಹಮ್ಮಿಕೊಂಡಿದ್ದ ರ್ಯಾಲಿಯಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಜಾರ್ಖಂಡ್​ನ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರಿಗೆ ಕುರ್ಚಿ ಮೀಸಲಿಟ್ಟಿದ್ದು ಗಮನ ಸೆಳೆಯಿತು. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸೊರೇನ್, ದೆಹಲಿ ಅಕ್ರಮ ಮದ್ಯನೀತಿ ಹಗರಣದಲ್ಲಿ ಕೇಜ್ರಿವಾಲ್ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಿರುವ ಹಿನ್ನೆಲೆಯಲ್ಲಿ ಪ್ರತಿಭಟನಾತ್ಮಕವಾಗಿ 2 ಕುರ್ಚಿಗಳನ್ನು ಖಾಲಿ ಇರಿಸಲಾಗಿತ್ತು.
11 ಮತಗಟ್ಟೆಗಳಿಗೆ ಮರುಮತದಾನ :ನವದೆಹಲಿ: ಹಿಂಸಾಚಾರ ವರದಿಗಳ ಹಿನ್ನೆಲೆಯಲ್ಲಿ ಮಣಿಪುರದ 11 ಮತಗಟ್ಟೆಗಳಲ್ಲಿ ಮರು ಮತದಾನ ನಡೆಸುವಂತೆ ಚುನಾವಣಾ ಆಯೋಗ ಆದೇಶಿಸಿದೆ. ಗುಂಡಿನ ದಾಳಿ, ಬೆದರಿಕೆ, ಎವಿಎಂಗಳಿಗೆ ಹಾನಿ ಮುಂತಾದವುಗಳು ನಡೆದ ಹಿನ್ನೆಲೆಯಲ್ಲಿ ಆಯೋಗ ಮರು ಮತದಾನದಕ್ಕೆ ಆದೇಶ ಮಾಡಿದೆ. ಇನ್ನರ್ ಮಣಿಪುರ ಲೋಕಸಭಾ ಕ್ಷೇತ್ರದ 11 ಮತಗಟ್ಟೆಗಳಲ್ಲಿ ಏ. 22ರಂದು ಮರು ಮತದಾನ ನಡೆಯಲಿದೆ ಎಂದು ಮಣಿಪುರದ ಮುಖ್ಯ ಚುನಾವಣಾಧಿಕಾರಿ ಶನಿವಾರ ಘೋಷಿಸಿದ್ದಾರೆ. ಅಲ್ಲದೆ ಏ. 19ರಂದು ಇಲ್ಲಿ ಚಲಾವಣೆಯಾದ ಮತಗಳನ್ನು ಅಸಿಂಧು ಎಂದೂ ಅವರು ಘೋಷಣೆ ಮಾಡಿದ್ದಾರೆ. ಇನ್ನರ್ ಮಣಿಪುರ ಹಾಗೂ ಔಟರ್ ಮಣಿಪುರ ಲೋಕಸಭಾ ಕ್ಷೇತ್ರಗಳಲ್ಲಿ ಶೇ. 72 ಮತ ಚಲಾವಣೆ ಆಗಿತ್ತು.
ಮುಂಬೈ:ಶಿವಸೇನೆ (ಯುಬಿಟಿ) ಪಕ್ಷದ ಥೀಮ್ ಸಾಂಗ್​ನಲ್ಲಿ ದೇವಿ ಭವಾನಿಯನ್ನು ಬಳಸಿಕೊಂಡಿದ್ದಕ್ಕೆ ಚುನಾವಣಾ ಆಯೋಗವು ನೋಟಿಸ್ ಜಾರಿ ಮಾಡಿದೆ. ಪಕ್ಷದ ಹೊಸ ಚಿಹ್ನೆ ‘ಪ್ರಜ್ವಲಿಸುವ ಪಂಜು’ವನ್ನು ಪ್ರಚುರಗೊಳಿಸುವ ಸಲುವಾಗಿ ಕಳೆದ ವಾರ ಬಿಡುಗಡೆ ಮಾಡಿದ್ದ ಥೀಮ್ ಸಾಂಗ್​ನಲ್ಲಿ ‘ಭವಾನಿ’ ಪದ ಇದ್ದಿದ್ದರಿಂದ ಆಯೋಗ ಭಾನುವಾರ ನೋಟಿಸ್ ನೀಡಿದೆ. ಈ ಹಾಡಿನಲ್ಲಿ ಪಕ್ಷದ ಸಂಸ್ಥಾಪಕ ಬಾಳಾ ಸಾಹೇಬ್ ಠಾಕ್ರೆ ಉರಿಯುವ ಪಂಜನ್ನು ಹಿಡಿದುಕೊಂಡ ದೃಶ್ಯ, ಆದಿತ್ಯ ಹಾಗೂ ಉದ್ಧವ್ ಠಾಕ್ರೆ ಶಿವಸೇನೆ ಕಾರ್ಯಕರ್ತರೊಂದಿಗೆ ರ್ಯಾಲಿಯಲ್ಲಿರುವ ದೃಶ್ಯದ ಜತೆಗೆ ಹಿನ್ನೆಲೆಯಲ್ಲಿ ‘ಜೈ ಭವಾನಿ, ಜೈ ಶಿವಾಜಿ’ ಎಂಜ ಜಯಘೋಷವೂ ಇದೆ. ನೋಟಿಸ್ ಕುರಿತು ಪ್ರತಿಕ್ರಿಯಿಸಿರುವ ಶಿವಸೇನೆ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ, ಹಾಡಿನಲ್ಲಿ ಜೈ ಭವಾನಿ ಪದ ಬಳಸಿದ್ದಕ್ಕೆ ಆಯೋಗ ನಮಗೆ ಫತ್ವಾ ಹೊರಡಿಸಿದೆ. ಯಾವುದೇ ಪರಿಸ್ಥಿತಿಯಲ್ಲೂ ನಾವು ಈ ಪದ ಹಿಂಪಡೆಯುವುದಿಲ್ಲ. ಅದಾಗ್ಯೂ ಆಯೋಗ ನಮ್ಮ ವಿರುದ್ಧ ಕ್ರಮಕೈಗೊಳ್ಳಬೇಕಿದ್ದರೆ ಮೊದಲು ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಷಾ ವಿರುದ್ಧ ಕ್ರಮಕೈಗೊಳ್ಳಬೇಕು. ಆಯೋಗವು ಮಹಾರಾಷ್ಟ್ರದ ದೇವರಿಗೆ ಅಗೌರವ ತೋರುತ್ತಿದೆ ಎಂದು ನಾನು ಹೇಳಿದರೆ ಅವರ ಬಳಿ ಅದಕ್ಕೆ ಉತ್ತರ ಇದೆಯೇ?’ ಎಂದಿದ್ದಾರೆ. ರಾಜ ಛತ್ರಪತಿ ಶಿವಾಜಿಯು ಭವಾನಿ ದೇವಿ ಆರಾಧಕರಾಗಿದ್ದು, ಶಿವಸೇನೆಯು ಆರಂಭದಿಂದಲೂ ‘ಜೈ ಭವಾನಿ, ಜೈ ಶಿವಾಜಿ’ಯನ್ನು ತನ್ನ ರಾಜಕೀಯ ಘೋಷಣೆ ಆಗಿಸಿಕೊಂಡಿದೆ.

ಬೆಳಗಾವಿ: ಅಕ್ರಮ ಗೋ ಸಾಗಾಟ ಮಾಡ್ತಿದ್ದ ಲಾರಿ ಚಾಲಕ, ಕ್ಲೀನರ್​ ಮೇಲೆ ಹಿಂದೂ ಕಾರ್ಯಕರ್ತರಿಂದ ಹಲ್ಲೆ!


ಹಿಂದೂ ಹುಡುಗಿಯರನ್ನು ಲವ್ ​ಯಾಕೆ ಮಾಡ್ತೀರಿ..? ನಿಮ್ಮ ಧರ್ಮದಲ್ಲೇ 5 ಮದುವೆ ಮಾಡಿಕೊಳ್ಳಿ: ಪ್ರಥಮ್​ ಆಕ್ರೋಶ


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen − 7 =
Remember me
