ನವದೆಹಲಿ:ಯಾವುದೇ ಅಂಕುಶವಿಲ್ಲದೆ, ಸೆನ್ಸಾರ್​ಗೂ ಒಳಪಡದೆ ಹಿಂಸಾತ್ಮಕ, ಅಶ್ಲೀಲ ಹಾಗೂ ರಾಷ್ಟ್ರವಿರೋಧಿ ವಿಚಾರಗಳನ್ನು ಪ್ರಸಾರ ಮಾಡುತ್ತಿರುವ ಆರೋಪಕ್ಕೆ ಗುರಿಯಾಗಿರುವ ಒಟಿಟಿ ವೇದಿಕೆಗಳು ಹಾಗೂ ವಸ್ತುನಿಷ್ಠತೆ, ವಿಶ್ವಾಸಾರ್ಹತೆ ಇಲ್ಲದೆ ಸುಳ್ಳು ಸುದ್ದಿ ಪ್ರಸಾರಕ್ಕೆ ಅವಕಾಶ ನೀಡುತ್ತಿರುವ ಆನ್​ಲೈನ್ ಪೋರ್ಟಲ್​ಗಳಿಗೆ ಮೂಗುದಾರ ಹಾಕುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ವೆಬ್​ಪೋರ್ಟಲ್​ಗಳು, ಒಟಿಟಿ ವೇದಿಕೆಗಳು ಮತ್ತು ಫೇಸ್​ಬುಕ್, ಟ್ವಿಟರ್, ಇನ್​ಸ್ಟಾಗ್ರಾಂನಂಥ ಸಾಮಾಜಿಕ ಜಾಲತಾಣಗಳನ್ನು ಮಾಹಿತಿ ಮತ್ತು ಪ್ರಸಾರ ಸಚಿವಾಲಯ (ಐಬಿ)ದ ವ್ಯಾಪ್ತಿಗೆ ತರಲಾಗಿದೆ.
ಪ್ರಸ್ತುತ ಡಿಜಿಟಲ್ ಕಂಟೆಂಟ್​ಗಳ ನಿಯಂತ್ರಣಕ್ಕೆ ಯಾವುದೇ ಕಾನೂನು ಅಥವಾ ಸ್ವಾಯತ್ತ ಸಂಸ್ಥೆಯಾಗಲಿ ಅಸ್ತಿತ್ವದಲ್ಲಿಲ್ಲವಾದ್ದರಿಂದ ಕೇಂದ್ರ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಈ ಸಂಬಂಧ ಭಾರತ ಸರ್ಕಾರದ ವ್ಯವಹಾರಿಕ ಹಂಚಿಕೆ ನಿಯಮ ಗಳು-1961ಕ್ಕೆ ತಿದ್ದುಪಡಿ ತರಲಾಗಿದ್ದು, ಇದಕ್ಕೆ ರಾಷ್ಟ್ರಪತಿ ರಾಮನಾಥ ಕೋವಿಂದ ಸಹಿ ಹಾಕಿದ್ದಾರೆ.
ಈ ಅಧಿಸೂಚನೆ ಅನ್ವಯ ಇನ್ನು ಮುಂದೆ ಆನ್​ಲೈನ್ ವೇದಿಕೆಗಳಲ್ಲಿನ ಎಲ್ಲ ಸಿನಿಮಾ, ದೃಶ್ಯ-ಶ್ರಾವ್ಯ ವಿಚಾರಗಳು, ಸುದ್ದಿ ಮತ್ತು ಸಮಕಾಲೀನ ವಿಚಾರಗಳ ಮಾಹಿತಿಗಳು ಸಚಿವಾಲಯದ ಸುಪರ್ದಿಗೆ ಬರುತ್ತವೆ. ಇದುವರೆಗೆ ಡಿಜಿಟಲ್ ಕಂಟೆಂಟ್ ನಿಯಂತ್ರಣಕ್ಕೆ ಯಾವುದೇ ಕಾನೂನು ಅಥವಾ ಸ್ವಾಯತ್ತ ಸಂಸ್ಥೆ ಇರಲಿಲ್ಲ. ಭಾರತೀಯ ಪತ್ರಿಕಾ ಮಂಡಳಿ (ಪಿಸಿಐ) ಮುದ್ರಣ ಮಾಧ್ಯಮ ಹಾಗೂ ಸುದ್ದಿ ಪ್ರಸಾರಕರ ಸಂಘ (ಎನ್​ಬಿಎ) ಸುದ್ದಿ ಚಾನೆಲ್​ಗಳ ಮೇಲುಸ್ತುವಾರಿ ನಡೆಸುತ್ತದೆ. ಭಾರತೀಯ ಜಾಹೀರಾತು ಮಾನಕ ಮಂಡಳಿಯು ಜಾಹೀರಾತುಗಳು ಹಾಗೂ ಕೇಂದ್ರೀಯ ಸಿನಿಮಾ ಪ್ರಮಾಣೀಕರಣ ಮಂಡಳಿ (ಸಿಬಿಎಫ್​ಸಿ) ಸಿನಿಮಾಗಳ ಉಸ್ತುವಾರಿ ನೋಡಿಕೊಳ್ಳುತ್ತದೆ. ಆದರೆ, ವೆಬ್ ಪೋರ್ಟಲ್​ಗಳು ಹಾಗೂ ಜಾಲತಾಣಗಳನ್ನು ನಿಯಂತ್ರಿಸುವ ಯಾವುದೇ ವ್ಯವಸ್ಥೆ ಇರಲಿಲ್ಲ.
ಸುಪ್ರೀಂ ಕೋರ್ಟ್ ನಿರ್ದೇಶನ:ಓವರ್-ದ-ಟಾಪ್ (ಒಟಿಟಿ) ವೇದಿಕೆಗಳ ನಿಯಂತ್ರಣಕ್ಕೆ ಒಂದು ಸ್ವಾಯತ್ತ ಸಂಸ್ಥೆ ಇರಬೇಕೆಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯೊಂದರ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್, ಕಳೆದ ತಿಂಗಳು ಈ ವಿಚಾರದಲ್ಲಿ ಕೇಂದ್ರದ ಅಭಿಪ್ರಾಯ ಕೇಳಿತ್ತು. ಅಲ್ಲದೆ ಕೇಂದ್ರ ಸರ್ಕಾರ, ವಾರ್ತೆ ಮತ್ತು ಪ್ರಸಾರ ಸಚಿವಾಲಯ ಹಾಗೂ ಭಾರತೀಯ ಇಂಟರ್​ನೆಟ್ ಮತ್ತು ಮೊಬೈಲ್ ಸಂಸ್ಥೆಗೆ ನೋಟಿಸ್ ಜಾರಿ ಮಾಡಿತ್ತು. ಇದಕ್ಕೂ ಮುನ್ನ, ಡಿಜಿಟಲ್ ಮಾಧ್ಯಮವನ್ನು ನಿಯಂತ್ರಿಸುವುದು ಅಗತ್ಯ ಎಂದು ವಾರ್ತೆ ಮತ್ತು ಪ್ರಸಾರ ಸಚಿವಾಲಯ ಬೇರೊಂದು ಪ್ರಕರಣದಲ್ಲಿ ಸುಪ್ರೀಂ ಕೋರ್ಟ್​ಗೆ ತಿಳಿಸಿತ್ತು.
ಕೇಂದ್ರದ ನಿಲುವೇನು?:ಮಾಧ್ಯಮ ಸ್ವಾತಂತ್ರ್ಯವನ್ನು ಹತ್ತಿ ಕ್ಕುವ ಉದ್ದೇಶವಿಲ್ಲವಾದರೂ ಡಿಜಿಟಲ್ ಮಾಧ್ಯಮಗಳನ್ನು ನಿಯಂತ್ರಿಸುವ ಅಗತ್ಯವನ್ನು ಸಚಿವ ಪ್ರಕಾಶ್ ಜಾವಡೇಕರ್ ಪ್ರತಿಪಾದಿಸಿದ್ದರು. ಒಟಿಟಿ ವೇದಿಕೆಗಳ ಮೇಲೆ ನಿಯಂತ್ರಣ ಅಗತ್ಯ ಎಂಬುದು ಕೇಂದ್ರದ ನಿಲುವಾಗಿತ್ತು.
ಯಾರಿಗೆ ಅನ್ವಯ?:ಆನ್​ಲೈನ್ ಸುದ್ದಿ ಪೋರ್ಟಲ್, ಅಮೆಜಾನ್ ಪ್ರೖೆಮ್ ನೆಟ್​ಫ್ಲಿಕ್ಸ್, ಹಾಟ್​ಸ್ಟಾರ್​ನಂಥ ಒಟಿಟಿ ವೇದಿಕೆ, ಫೇಸ್​ಬುಕ್, ಟ್ವಿಟರ್, ಇನ್​ಸ್ಟಾಗ್ರಾಂನಂಥ ಸಾಮಾಜಿಕ ಜಾಲತಾಣಗಳು.
ನೆಟ್​ಫ್ಲಿಕ್ಸ್, ಅಮೆಜಾನ್ ಪ್ರೖೆಂ, ಹಾಟ್​ಸ್ಟಾರ್​ನಂತಹ ಪ್ರಮುಖ ಜಾಲತಾಣಗಳು ಒಟಿಟಿ ವೇದಿಕೆಯಲ್ಲಿ ಬರುತ್ತವೆ. ಲಾಕ್​ಡೌನ್ ಬಳಿಕವಂತೂ ಈ ಜಾಲತಾಣಗಳು ವೆಬ್​ಸೀರೀಸ್, ಸಿನಿಮಾಗಳ ಬಿಡುಗಡೆಗೆ ದೊಡ್ಡ ವೇದಿಕೆಯಾಗಿ ಮಾರ್ಪಟ್ಟಿದೆ. ಸೆನ್ಸಾರ್​ಗೂ ಒಳಪಡದೆ ಬಿಡುಗಡೆ ಆಗುವ ವೆಬ್​ಸೀರಿಸ್, ಸಿನಿಮಾಗಳಲ್ಲಿ ಹಿಂಸೆ, ದೇಶವಿರೋಧಿ ಸಂಭಾಷಣೆ, ಅಶ್ಲೀಲ ದೃಶ್ಯಗಳಿಗೆ ಯಾವುದೇ ಕಡಿವಾಣ ಇಲ್ಲ ಎಂಬ ಆರೋಪ ಇತ್ತೀಚೆಗೆ ಹೆಚ್ಚಾಗಿತ್ತು.
ಸಚಿವಾಲಯದ ವ್ಯಾಪ್ತಿಗೆ:ಕೇಂದ್ರದ ಹೊಸ ಅಧಿಸೂಚನೆ ಅನ್ವಯ ಇನ್ಮುಂದೆ ಆನ್​ಲೈನ್ ವೇದಿಕೆ ಗಳಲ್ಲಿನ ಎಲ್ಲ ಸಿನಿಮಾ, ದೃಶ್ಯ-ಶ್ರಾವ್ಯ ವಿಚಾರಗಳು, ಸುದ್ದಿ, ಸಮ ಕಾಲೀನ ವಿಚಾರಗಳ ಮಾಹಿತಿಗಳು ಸಚಿವಾಲಯದ ಸುಪರ್ದಿಗೆ ಬರುತ್ತವೆ.
1. ಆನ್​ಲೈನ್ ವಿಡಿಯೋ ಸ್ಟ್ರೀಮಿಂಗ್ ವೇದಿಕೆಗಳು 2019ರ ಮಾರ್ಚ್ ವೇಳೆಗೆ 500 ಕೋಟಿ ರೂ.ವ್ಯವಹಾರ ಹೊಂದಿದ್ದವು. 2025ರ ಹೊತ್ತಿಗೆ 4000 ಕೋಟಿ ರೂ.ವರೆಗೆ ವ್ಯವಹಾರ ಆಗಬಹುದೆಂಬ ನಿರೀಕ್ಷೆ ಇದೆ.
2. 2019ರ ಅಂತ್ಯದ ಹೊತ್ತಿಗೆ ಭಾರತದಲ್ಲಿ 17 ಕೋಟಿ ಓಟಿಟಿ ವೇದಿಕೆ ಬಳಕೆದಾರರಿದ್ದರು.
3. ತಿದ್ದುಪಡಿ: 1961ರ ವ್ಯವಹಾರಗಳಿಗೆ ಅನುಮತಿ ನೀಡುವ ಭಾರತ ಸರ್ಕಾರದ ನಿಯಮಗಳ ಕಾನೂನಿಗೆ ತಿದ್ದುಪಡಿ ತಂದು ಓಟಿಟಿಗಳನ್ನು ವಾರ್ತೆ ಮತ್ತು ಪ್ರಸಾರ ಖಾತೆ ಸಚಿವಾಲಯದ ಸುಪರ್ದಿಗೆ ತರಲಾಗಿದೆ. ಇದು ತಕ್ಷಣದಿಂದಲೇ ಜಾರಿಗೆ ಬರಲಿದೆ.
ಸಾಮಾಜಿಕ ಜಾಲತಾಣಗಳು ಐಟಿ ಸಚಿವಾಲಯದ ಕಾಯ್ದೆಗೆ ಒಳಪಡಲಿವೆ. ಒಟಿಟಿ ವೇದಿಕೆಗಳಲ್ಲಿ ಪ್ರಸಾರವಾಗುತ್ತಿದ್ದ ಆಕ್ಷೇಪಾರ್ಹ ಕಾರ್ಯ ಕ್ರಮಗಳ ಕುರಿತು ಪ್ರತಿ ದಿನ 100ಕ್ಕೂ ಹೆಚ್ಚು ದೂರುಗಳು ಬರುತ್ತಿದ್ದವು. ಇದಕ್ಕೆಲ್ಲ ಇನ್ಮುಂದೆ ಕಡಿವಾಣ ಬೀಳಲಿದೆ.
|ಪ್ರಕಾಶ್ ಜಾವಡೇಕರ್ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ
ನಿಜಕ್ಕೂ ಇದೊಂದು ಮಹತ್ವದ ನಿರ್ಧಾರವಾಗಿದ್ದು, ಎಷ್ಟರ ಮಟ್ಟಿಗೆ ಜಾರಿಗೆ ಬರುತ್ತದೆ ಎಂಬುದನ್ನು ಕಾದು ನೋಡಬೇಕಿದೆ. ಸಿನಿಮಾ ನೋಡುವವರ ಸಂಖ್ಯೆ ಕಡಿಮೆಯಾಗುತ್ತಿದ್ದು, ವೆಬ್​ನಲ್ಲಿ ಸಿಗುವ ಕಂಟೆಂಟ್​ಗೆ ಹೆಚ್ಚು ಪ್ರೇಕ್ಷಕರಿದ್ದಾರೆ. ಸಿನಿಮಾಗೆ ಮಾತ್ರ ಸೆನ್ಸಾರ್ ಬೇಕು, ವೆಬ್​ನಲ್ಲಿ ಸಿಗುವ ಕಂಟೆಂಟ್​ಗೆ ಮಾತ್ರ ಯಾವುದೇ ಸೆನ್ಸಾರ್ ಇಲ್ಲ. ಬರೀ ಕ್ರೖೆಮ್ ಮತ್ತು ಲೈಂಗಿಕತೆಯಷ್ಟೇ ಅಲ್ಲ, ಮನಸ್ಸನ್ನು ಕಲುಷಿತಗೊಳಿಸುವ ಹಲವು ವಿಷಯಗಳು ಒಟಿಟಿಯಲ್ಲಿ ಹೆಚ್ಚಾಗುತ್ತಿದೆ. ಹಾಗಾಗಿ ಇದನ್ನೆಲ್ಲ ನಿಯಂತ್ರಿಸುವುದಕ್ಕೆ ಮುಂದಾಗಿದ್ದು ಸ್ವಾಗತಾರ್ಹ. ಮುಂದಿನ ದಿನಗಳಲ್ಲಿ ಯೂಟ್ಯೂಬ್​ನಂತಹ ಓಪನ್ ಸೋರ್ಸ್ (ಯಾರು ಬೇಕಾದರೂ ಅಪ್​ಲೋಡ್ ಮಾಡುವ) ಮಾಧ್ಯಮಗಳನ್ನು ಸಹ ನಿಯಂತ್ರಣಕ್ಕೆ ಒಳಪಡಿಸಿದರೆ ಚೆನ್ನಾಗಿರುತ್ತದೆ.
|ಪಿ.ಶೇಷಾದ್ರಿನಿರ್ದೇಶಕ
ಬೆಂಗಳೂರು:ಡಿಜೆ ಹಳ್ಳಿ ಗಲಭೆ ಪ್ರಕರಣದ ಬಳಿಕ ಫೇಸ್​ಬುಕ್ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣದಲ್ಲಿ ಸಮಾಜದಲ್ಲಿ ಅಶಾಂತಿಯುಂಟುಮಾಡುವ ಪೋಸ್ಟ್ ಗಳನ್ನು ನಿಯಂತ್ರಿಸಲು ಸರ್ಕಾರ ವಿಶೇಷ ಗಮನ ಹರಿಸಿದೆ. ಇಂತಹ ಪ್ರಕರಣಗಳು ಮರುಕಳಿಸದಂತೆ ಎಚ್ಚರ ವಹಿಸುತ್ತಿದ್ದೇವೆ. ಈ ಹಿನ್ನೆಲೆಯಲ್ಲಿ ಫೇಸ್​ಬುಕ್ ಮುಖ್ಯಸ್ಥರ ಜತೆ ಮಾತುಕತೆ ನಡೆಸಲಾಗಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಫೇಸ್​ಬುಕ್, ವಾಟ್ಸ್​ಆಪ್, ಟ್ವಿಟರ್ ಸೇರಿ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಕೆಲವು ಕಿಡಿಗೇಡಿಗಳು ಸುಳ್ಳುಸುದ್ದಿ ಹಬ್ಬಿಸಿ ಸಮಾಜದಲ್ಲಿ ಅಶಾಂತಿ ಉಂಟು ಮಾಡುವ ಹುನ್ನಾರ ನಡೆಸುತ್ತಿದ್ದಾರೆ. ಇದನ್ನು ತಡೆಗಟ್ಟಲು ಈಗಾಗಲೇ ಕೆಲವು ಸಾಮಾಜಿಕ ಜಾಲತಾಣಗಳ ಸಿಇಒ ಜತೆ ಮಾತುಕತೆ ನಡೆಸಲಾಗುತ್ತಿದೆ ಎಂದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 + 2 =
Remember me
