ಅಫ್ಘಾನಿಸ್ತಾನದಲ್ಲಿ ಇತ್ತೀಚೆಗೆ ಸಂಭವಿಸಿದ ಭೂಕಂಪದಲ್ಲಿ ಸಾವಿರಕ್ಕೂ ಅಧಿಕ ಸಂಖ್ಯೆಯ ಜನರು ಸಾವನ್ನಪ್ಪಿದರು; ಸಾವಿರಾರು ಮಂದಿ ಗಾಯಗೊಂಡರು. ರಿಕ್ಟರ್ ಮಾಪಕದಲ್ಲಿ ಇದರ ಕಂಪನ 5.9ರಷ್ಟಿದ್ದು, ಜಪಾನಿನ ಹಿರೋಷಿಮಾದಲ್ಲಿ ಹಾಕಲಾದ ಅಣು ಬಾಂಬ್​ನಿಂದ ಉತ್ಪತ್ತಿಯಾದ ಶಕ್ತಿಯ 37 ಪಟ್ಟು ಆಗಿತ್ತು. ಈ ರೀತಿ ಆಗಾಗ್ಗೆ ಭೂಕಂಪಗಳು ಸಂಭವಿಸಿ ಸಾವು-ನೋವು ಹಾಗೂ ಆಸ್ತಿ ಹಾನಿ ಆಗುತ್ತಲೇ ಇರುತ್ತದೆ. ಭೂಕಂಪದಿಂದ ನಷ್ಟವನ್ನು ತಪ್ಪಿಸುವ ನಿಟ್ಟಿನಲ್ಲಿ ಅತ್ಯುತ್ತಮ ಮುನ್ನೆಚ್ಚರಿಕೆ ವ್ಯವಸ್ಥೆ ರೂಪಿಸಲು ತಜ್ಞರು ಶ್ರಮಿಸುತ್ತಲೇ ಇದ್ದಾರೆ.
ಭೂಕಂಪವು ಭೂಮಿಯ ಹೊರಪದರದ ಕಂಪನದಿಂದ ಉಂಟಾಗುವ ವಿದ್ಯಮಾನ. ಈ ಹಿಂದೆ ಇಡೀ ಭೂಮಿಯು ಗೊಂಡ್ವಾನ ಎಂಬ ಏಕೈಕ ಖಂಡವಾಗಿತ್ತು. ಕಾಲಾನಂತರದಲ್ಲಿ ತುಂಡುತುಂಡಾಗಿ ಚಲಿಸಿದ ಪರಿಣಾಮ ಈಗ ಪ್ರತ್ಯೇಕ ಖಂಡಗಳಾಗಿವೆ. ಈ ಚಲನೆಯ ಕಾರಣ ಭೂಪದರಗಳು ಒಂದರ ಮೇಲೊಂದು ಜಾರುತ್ತಾ ಹೋಗಿವೆ. ಭೂಮಿಯ ಆಳದಲ್ಲಿ ಈ ಪದರಗಳ ಚಲನೆ ಇಂದಿಗೂ ಜೀವಂತವಾಗಿದೆ. ಈ ಪದರಗಳು ನಯವಾಗಿದ್ದು ಜಾರುತ್ತಾ ಮುನ್ನಡೆಯುತ್ತವೆ. ಕೆಲ ಸಂದರ್ಭಗಳಲ್ಲಿ ಈ ಚಲನೆಗೆ ತಡೆಯುಂಟಾಗುತ್ತದೆ. ಆಗ, ನಿಧಾನವಾಗಿ ಒತ್ತಡ ಹೆಚ್ಚುತ್ತಾ ಹೋಗುತ್ತದೆ. ಈ ಒತ್ತಡ ಭೂಮಿಯ ಹೊರಪದರಕ್ಕೂ ವ್ಯಾಪಿಸಿ ಕಂಪನ ಉಂಟಾಗುತ್ತದೆ. ಭೂಕಂಪ ಪ್ರಾರಂಭವಾಗುವ ಭೂಮಿಯ ಒಳಗಿನ ಬಿಂದುವನ್ನು ಫೋಕಸ್ ಅಥವಾ ಹೈಪೋಸೆಂಟರ್ ಎಂದು ಕರೆಯಲಾಗುತ್ತದೆ. ಇದಕ್ಕೆ ನೇರವಾಗಿ ಭೂಮಿಯ ಮೇಲ್ಮೈಯಲ್ಲಿ ಇರುವ ಬಿಂದುವನ್ನು ಎಪಿಸೆಂಟರ್ (ಕೇಂದ್ರಬಿಂದು) ಎಂದು ಹೇಳಲಾಗುತ್ತದೆ.
ರಿಕ್ಟರ್ ಮಾಪಕ ಎಂದರೇನು?:ಇದು ಭೂಕಂಪದ ಪ್ರಮಾಣದ ಅಳತೆಯಾಗಿದೆ. ಇದನ್ನು ಮೊದಲು ಅಮೆರಿಕದ ಕ್ಯಾಲಿಫೋರ್ನಿಯಾ ಇನ್​ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಚಾರ್ಲ್ಸ್ ಎಫ್. ರಿಕ್ಟರ್ ಅವರು 1935 ರಲ್ಲಿ ಶೋಧಿಸಿದರು. ಭೂಕಂಪದ ಪ್ರಮಾಣವು ಭೂಕಂಪನ ಅಲೆಗಳನ್ನು ಅಳೆಯುವ ಲೆಕ್ಕಾಚಾರವಾಗಿದೆ. ರಿಕ್ಟರ್ ಮಾಪಕದ ಪ್ರಮಾಣವನ್ನು ಸಂಪೂರ್ಣ ಸಂಖ್ಯೆ ಮತ್ತು ದಶಮಾಂಶ ಭಾಗವಾಗಿ ವ್ಯಕ್ತಪಡಿಸಲಾಗುತ್ತದೆ, ಉದಾಹರಣೆಗೆ 6.3 ಅಥವಾ 5.2. ಇದು ಲಘುಗಣಕ ಮಾಪಕವಾಗಿರುವುದರಿಂದ, ಒಂದು ಪೂರ್ಣಸಂಖ್ಯೆಯ ಹೆಚ್ಚಳವು ಅಲೆಯ ಪ್ರಮಾಣವನ್ನು ಹತ್ತು ಪಟ್ಟು ಹೆಚ್ಚು ಹಾಗೂ ಬಿಡುಗಡೆಯಾದ ಶಕ್ತಿಯನ್ನು 31 ಪಟ್ಟು ಅಧಿಕ ಎಂಬುದನ್ನು ಸೂಚಿಸುತ್ತದೆ. ಕಂಪನದ ಪ್ರಮಾಣ, ಭೂಕಂಪಗಳ ಅನುಭವದ ತೀವ್ರತೆ, ಆಯಾ ಪ್ರದೇಶದ ಭೂವೈಜ್ಞಾನಿಕ ಮತ್ತು ಭೂಪದರ ರಚನೆ ಆಧಾರದ ಮೇಲೆ ಭೂಕಂಪ ವಲಯಗಳಾಗಿ ವಿಂಗಡಿಸಲಾಗಿದೆ. ವಲಯ 2ರಿಂದ ವಲಯ 5ರವರೆಗೆ ಒಟ್ಟು ನಾಲ್ಕು ವಲಯಗಳು ಭಾರತದಲ್ಲಿವೆ. ಇವುಗಳಲ್ಲಿ ವಲಯ 5 ಅತ್ಯಂತ ಅಪಾಯಕಾರಿ ಮತ್ತು ವಲಯ 2 ಕಡಿಮೆ ಅಪಾಯಕಾರಿ.
ಮೃತರ ಸಂಖ್ಯೆ 24 ಸಾವಿರಕ್ಕೆ:ದಕ್ಷಿಣ ಟರ್ಕಿ ಮತ್ತು ಸಿರಿಯಾದ ವಾಯವ್ಯದಲ್ಲಿ ಸಂಭವಿಸಿದ ಭೀಕರ ಭೂಕಂಪದಲ್ಲಿ ಸಾವನ್ನಪ್ಪಿದವರ ಸಂಖ್ಯೆ 24 ಸಾವಿರ ದಾಟಿದೆ. ವಿವಿಧ ದೇಶಗಳ ಮಾನವೀಯ ನೆರವಿನೊಂದಿಗೆ ರಕ್ಷಣಾ ಕಾರ್ಯಗಳು ಯುದ್ಧೋಪಾದಿಯಲ್ಲಿ ಮುಂದುವರಿದಿವೆ. ಆದರೆ, ಮಳೆ ಹಾಗೂ ತೀವ್ರ ಚಳಿಯು ರಕ್ಷಣಾ ಕಾರ್ಯಗಳಿಗೆ ಅಡಚಣೆ ಉಂಟು ಮಾಡುತ್ತಿವೆ. ಟರ್ಕಿಯಲ್ಲಿ 20,665 ಮತ್ತು ಸಿರಿಯಾದಲ್ಲಿ 3,553 ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭೂಕಂಪದ ಅಲೆಗಳ ಉತ್ಪತ್ತಿ ಹೇಗೆ?:ಯಾವುದೇ ಸ್ಥಿತಿಸ್ಥಾಪಕ (ಇಲ್ಯಾಸ್ಟಿಕ್) ವಸ್ತುವು ಒತ್ತಡಕ್ಕೆ ಒಳಗಾದಾಗ, ಸ್ಥಿತಿಸ್ಥಾಪಕ ಮಿತಿಯನ್ನು ತಲುಪುವವರೆಗೆ ವಿಸ್ತರಿಸುತ್ತದೆ. ಸ್ಥಿತಿಸ್ಥಾಪಕ ಮಿತಿಯನ್ನು ದಾಟಿದಾಗ ಅದು ತುಂಡಾಗುತ್ತದೆ. ಅಂತೆಯೇ, ಭೂಮಿಯು ಒಂದು ಸ್ಥಿತಿಸ್ಥಾಪಕ ಮಿತಿಯನ್ನು ಹೊಂದಿದೆ. ಒತ್ತಡವು ಈ ಮಿತಿಗಿಂತ ಹೆಚ್ಚಾದಾಗ, ಅದು ತುಂಡಾಗುತ್ತದೆ. ಇದಲ್ಲದೆ, ಈ ಹಂತದಲ್ಲಿ ಶಾಖ ಮತ್ತು ಶಕ್ತಿಯು ಬಿಡುಗಡೆಯಾಗುತ್ತದೆ. ವಸ್ತುವು ಸ್ಥಿತಿಸ್ಥಾಪಕವಾಗಿರುವುದರಿಂದ, ಶಕ್ತಿಯು ಸ್ಥಿತಿಸ್ಥಾಪಕ ಅಲೆಗಳ ರೂಪದಲ್ಲಿ ಬಿಡುಗಡೆಯಾಗುತ್ತದೆ. ಇವುಗಳು ನಿರ್ದಿಷ್ಟ ದೂರದವರೆಗೆ ಹರಡುತ್ತವೆ. ಇವುಗಳನ್ನು ಭೂಕಂಪನ ಅಲೆಗಳು (ಸಿಸ್ಮಿಕ್ ವೇವ್ಸ್) ಎಂದು ಕರೆಯಲಾಗುತ್ತದೆ.
ಭೂಕಂಪಗಳನ್ನು ಹೇಗೆ ಅಳೆಯಲಾಗುತ್ತದೆ?:ಭೂಕಂಪಗಳನ್ನು ಭೂಕಂಪನಮಾಪಕ (ಸಿಸ್ಮೊಗ್ರಾಫ್ ಅಥವಾ ಸಿಸ್ಮೊಮೀಟರ್) ಜಾಲಗಳಿಂದ ಅಳೆಯಲಾಗುತ್ತದೆ. ಭೂಕಂಪನ ಕೇಂದ್ರಗಳಿಂದ ಈ ಜಾಲವನ್ನು ರೂಪಿಸಲಾಗಿರುತ್ತದೆ. ಪ್ರತಿಯೊಂದೂ ಕೇಂದ್ರ ತನ್ನ ಕೆಳಗಿರುವ ನೆಲದ ಅಲುಗಾಡುವಿಕೆಯನ್ನು ಅಳೆಯುತ್ತದೆ. ಅಲೆಯ ಪ್ರಮಾಣವನ್ನು ಅಳೆಯಲಾಗುತ್ತದೆ ಹೊರತು, ಎಷ್ಟು ಶಕ್ತಿ ಬಿಡುಗಡೆಯಾಗಿದೆ ಎಂಬುದನ್ನು ಅಳೆಯುವುದಿಲ್ಲ. ಇದರ ಮೂಲಕ ಭೂಕಂಪದ ತೀವ್ರತೆ ಎಷ್ಟೆಂಬುದನ್ನು ಗುರುತಿಸಲಾಗುತ್ತದೆ. ಭಾರತದಲ್ಲಿ, ರಾಷ್ಟ್ರೀಯ ಭೂಕಂಪಶಾಸ್ತ್ರದ ಜಾಲವು ಈ ಕೆಲಸವನ್ನು ಮಾಡುತ್ತದೆ. ಇದು ಸುಮಾರು 120 ವರ್ಷಗಳ ಇತಿಹಾಸ ಹೊಂದಿದೆ. ಇದರ ಸಂವೇದಕಗಳು 5ರಿಂದ 10 ನಿಮಿಷಗಳಲ್ಲಿಯೇ ಭೂಕಂಪವನ್ನು ಪತ್ತೆ ಮಾಡುವ ಸಾಮರ್ಥ್ಯ ಹೊಂದಿವೆ.
ಜಪಾನ್ ವ್ಯವಸ್ಥೆ:ಸಾಕಷ್ಟು ಯಶಸ್ಸು ಕಂಡ ಮುನ್ನೆಚ್ಚರಿಕೆ ವ್ಯವಸ್ಥೆಗಳು ಜಪಾನ್​ನಲ್ಲಿವೆ. ಅವರು ನೂರಾರು ಸಾವಿರ ರೆಕಾರ್ಡಿಂಗ್ ಸಾಧನಗಳನ್ನು ಹೊಂದಿದ್ದಾರೆ. ಈ ಸಾಧನಗಳಿಂದ ಬರುವ ಪ್ರತಿಕ್ರಿಯೆಗಳನ್ನು ಪ್ರಧಾನ ಕೇಂದ್ರವೊಂದಕ್ಕೆ ಕಳುಹಿಸಲಾಗುತ್ತದೆ, ಈ ದತ್ತಾಂಶಗಳ ಅಧ್ಯಯನ ಕೈಗೊಂಡು, ಇವು ಅಪಾಯವನ್ನು ರೂಪಿಸುವಷ್ಟು ದೊಡ್ಡದಾಗಿದೆಯೇ ಎಂದು ಅಂದಾಜು ಮಾಡುತ್ತಾರೆ. ಅಪಾಯಕಾರಿಯಾಗಿದ್ದಲ್ಲಿ, ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ. ಭೂಕಂಪಗಳಿಂದ ಉಂಟಾಗುವ ಹಾನಿ ತಗ್ಗಿಸಲು ಇನ್ನೂ ಉತ್ತಮ ಮುನ್ನೆಚ್ಚರಿಕೆ ವ್ಯವಸ್ಥೆಯನ್ನು ಕಂಡುಹಿಡಿಯಲು ತಜ್ಞರು ಪ್ರಯತ್ನಿಸುತ್ತಿದ್ದಾರೆ.
ಅಹಮದಾಬಾದ್:ಗುಜರಾತ್ ರಾಜ್ಯದ ಸೂರತ್ ಜಿಲ್ಲೆಯಲ್ಲಿ ಶನಿವಾರ ನಸುಕಿನಲ್ಲಿ 12 ಗಂಟೆ 52 ನಿಮಿಷಕ್ಕೆ ಭೂಮಿಯು ಅಲ್ಪ ಪ್ರಮಾಣದಲ್ಲಿ ಕಂಪಿಸಿದೆ. ಈ ಕಂಪನದ ಪ್ರಮಾಣವು ರಿಕ್ಟರ್ ಮಾಪಕದಲ್ಲಿ 3.8 ಇತ್ತು ಎಂದು ಭೂಕಂಪಶಾಸ್ತ್ರ ಸಂಶೋಧನಾ ಸಂಸ್ಥೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸೂರತ್​ನಿಂದ ಆಗ್ನೇಯ ದಿಕ್ಕಿನಲ್ಲಿ 27 ಕಿ.ಮೀ. ಅಂತರದಲ್ಲಿ ಹಜಿರಾದಲ್ಲಿನ ಅರಬ್ಬಿ ಸಮುದ್ರದಲ್ಲಿ ಈ ಕಂಪನದ ಕೇಂದ್ರಬಿಂದು ಇತ್ತು. ಈ ಕಂಪನದಿಂದ ಯಾವುದೇ ಸಾವು-ನೋವು ಸಂಭವಿಸಿಲ್ಲ; ಆಸ್ತಿಪಾಸ್ತಿಗೆ ಹಾನಿ ಉಂಟಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದೇಶದಲ್ಲಿಯೇ ಅತಿಹೆಚ್ಚು ಭೂಕಂಪ ಅಪಾಯ ಎದುರಿಸುವ ರಾಜ್ಯವಾಗಿದೆ ಗುಜರಾತ್. 1819, 1845, 1847, 1848, 1864, 1903, 1938, 1956 ಮತ್ತು 2001ರಲ್ಲಿ ಈ ರಾಜ್ಯದಲ್ಲಿ ಭೂಕಂಪಗಳು ಸಂಭವಿಸಿವೆ.
2001ರಲ್ಲಿ ಗುಜರಾತ್​ನ ಕಛ್​ನಲ್ಲಿ ಸಂಭವಿಸಿದ ಭೂಕಂಪವು ಕಳೆದ ಎರಡು ಶತಮಾನಗಳಲ್ಲಿ ಭಾರತದಲ್ಲಿನ ಮೂರನೇ ಅತಿದೊಡ್ಡ ಮತ್ತು ಎರಡನೇ ಅತ್ಯಂತ ವಿನಾಶಕಾರಿಯಾಗಿತ್ತು. ಇದರಿಂದಾಗಿ 13,800ಕ್ಕೂ ಹೆಚ್ಚು ಜನರು ಸಾವನ್ನಪ್ಪಿ, 1.67 ಲಕ್ಷ ಮಂದಿ ಗಾಯಗೊಂಡಿದ್ದರು.
ಭೂಕಂಪದ ಮಾನದಂಡಗಳು ಪೂರ್ಣವಾಗಿ ತಿಳಿದಿಲ್ಲವಾದ್ದರಿಂದ ಭೂಕಂಪವನ್ನು ಊಹಿಸಲು ಬಹುತೇಕ ಅಸಾಧ್ಯ. ಭೂಕಂಪಗಳ ಸಮಸ್ಯೆಯೆಂದರೆ ಅವು ಭೌತಿಕ ಲಕ್ಷಣಗಳ ಮೇಲೆ ಹೆಚ್ಚು ಅವಲಂಬಿತವಾಗಿದ್ದು, ಇದು ಸ್ಥಳದಿಂದ ಸ್ಥಳಕ್ಕೆ ಬದಲಾಗುತ್ತದೆ ಎಂದು ತಜ್ಞರು ಹೇಳುತ್ತಾರೆ. ಭೂಕಂಪದಲ್ಲಿ ಎರಡು ರೀತಿಯ ತರಂಗಗಳಿವೆ. ಮೊದಲು ತಲುಪುವ ಅಲೆಯನ್ನು ಪ್ರಾಥಮಿಕ ತರಂಗ ಮತ್ತು ನಂತರ ಬರುವ ಅಲೆಯನ್ನು ದ್ವಿತೀಯ ತರಂಗ ಎನ್ನಲಾಗುತ್ತದೆ. ದ್ವಿತೀಯ ತರಂಗವು ಹೆಚ್ಚು ವಿನಾಶಕಾರಿಯಾಗಿದೆ. ನಮ್ಮಲ್ಲಿರುವ ದಕ್ಷ ಕಂಪ್ಯೂಟರ್ ವ್ಯವಸ್ಥೆ, ಅತ್ಯುತ್ತಮ ದತ್ತಾಂಶ ಸಂಗ್ರಹಣೆ ಮೂಲಕ ಪ್ರಾಥಮಿಕ ತರಂಗವನ್ನು ಅಳೆಯಬಹುದಾಗಿದೆ. ಈ ಮೂಲಕ ಇಷ್ಟೊಂದು ಪ್ರಮಾಣದ ಮತ್ತು ಶಕ್ತಿಯ ಭೂಕಂಪ ಸಂಭವಿಸಬಹುದಾಗಿದೆ ಎಂದು ಹೇಳಬಹುದು. ಭಾರಿ ಭೂಕಂಪ ಸಂಭವಿಸಬಹುದು ಎಂದು ತಿಳಿದುಬಂದರೆ, ರೈಲುಗಳು ಮತ್ತು ವಿದ್ಯುತ್ ಗ್ರಿಡ್​ಗಳನ್ನು ಸ್ಥಗಿತಗೊಳಿಸಿ, ಹಾನಿಯನ್ನು ಕಡಿಮೆ ಮಾಡಬಹುದು. ಇದು ಕೆಲವು ಸ್ಥಳಗಳಲ್ಲಿ ಇದು ಅಲ್ಪ ಪ್ರಮಾಣದಲ್ಲಿ ಕಾರ್ಯರೂಪಕ್ಕೆ ಬಂದಿದೆ. ಆದರೆ, ದೊಡ್ಡ ಪ್ರಮಾಣದಲ್ಲಿ ಕಾರ್ಯಸಾಧ್ಯವಾಗಿಲ್ಲ ಎಂದೂ ತಜ್ಞರು ಹೇಳುತ್ತಾರೆ.
|ಡಾ. ದಿವ್ಯ ಎಸ್.
ಕಳೆದ ಸೋಮವಾರ ದಕ್ಷಿಣ ಟರ್ಕಿಯಲ್ಲಿ ಬೆಳಗ್ಗೆ 4.17ಕ್ಕೆ ಸಂಭವಿಸಿದ ಭೂಕಂಪನ ಪ್ರಮಾಣ ರಿಕ್ಟರ್ ಮಾಪಕದಲ್ಲಿ 7.8 ಇತ್ತು. ಈ ಭೂಕಂಪದ ಕೇಂದ್ರುಬಿಂದುವು ಕಹ್ರಮನ್ಮರಸ್ ಪ್ರಾಂತ್ಯದ ಪಜಾರ್ಕ್ ಜಿಲ್ಲೆಯಲ್ಲಿದೆ. ಟರ್ಕಿಯ ವಿಭಾಗ ಮತ್ತು ಸ್ಥಿರಭಂಗ ರೇಖೆಗಳೇ ಈ ಭೂಕಂಪಕ್ಕೆ ಪ್ರಾಥಮಿಕ ಕಾರಣಗಳಾಗಿವೆ. ಎರಡು ಪ್ರಮುಖ ಭೂವಿಭಾಗಗಳ ಚಲನೆಯ ಛೇದಕದಲ್ಲಿ ಟರ್ಕಿ ಇರುವುದರಿಂದ ಇದು ಅತ್ಯಂತ ಸಕ್ರಿಯವಾದ ಭೂಕಂಪನ ರಾಷ್ಟ್ರಗಳಲ್ಲಿ ಒಂದಾಗಿದೆ. ಅರೇಬಿಯನ್ ಭೂವಿಭಾಗಗಳು ಉತ್ತರಕ್ಕೆ ಚಲಿಸುವಾಗ ಯುರೇಷಿಯನ್ ಭೂವಿಭಾಗದೊಂದಿಗೆ ಘರ್ಷಣೆಯಾಗುತ್ತಿದೆ. ಇದರ ಪರಿಣಾಮವಾಗಿ ಟರ್ಕಿಯನ್ನು ಬಲವಂತವಾಗಿ ತಳ್ಳುತ್ತಿವೆ. ಎರಡು ಬೃಹತ್ ವಿಭಾಗಗಳು ಒಂದೇ ದಿಕ್ಕಿನಲ್ಲಿ ಚಲಿಸುತ್ತಿದ್ದು, ಮಧ್ಯದಲ್ಲಿ ಟರ್ಕಿಯು ಸಿಲುಕಿಕೊಂಡಿದೆ. ಇನ್ನು ಸ್ಥರಭಂಗ ರೇಖೆಗಳು ಭೂಮಿಯ ಮೇಲ್ಮೈಯಲ್ಲಿನ ಬಿರುಕುಗಳಾಗಿದ್ದು, ಇವುಗಳ ಉದ್ದಕ್ಕೂ ಭೂಕಂಪ ಸಂಭವಿಸುವುದು ಸಾಮಾನ್ಯವಾಗಿದೆ. ಟರ್ಕಿಯು ಅನಾಟೋಲಿಯನ್ ಸ್ಥರಭಂಗ ಮತ್ತು ಏಜಿಯನ್ ಸಮುದ್ರದ ಛೇದಕದಲ್ಲಿ 932 ಮೈಲಿಗಳಷ್ಟು ವ್ಯಾಪಿಸಿದೆ.
ನಂತರದ ಆಘಾತಗಳು ಯಾವುವು?: ದೊಡ್ಡ ಭೂಕಂಪಗಳ ನಂತರ, ಒತ್ತಡದಲ್ಲಿನ ಬದಲಾವಣೆಗಳಿಗೆ ಹೊರಪದರವು ಮರು ಹೊಂದಾಣಿಕೆ ಆಗುವುದರಿಂದ ಹಲವಾರು ನಂತರದ ಆಘಾತಗಳು ಉಂಟಾಗುತ್ತವೆ. ಮೊದಲ ಘಟನೆಯ ನಂತರ, ಇದು ಹಲವಾರು ದಿನಗಳು ಅಥವಾ ವರ್ಷಗಳವರೆಗೆ ಹೋಗಬಹುದು. ಟರ್ಕಿಯಲ್ಲಿ ಆರಂಭಿಕ ಕಂಪನದ ನಂತರ ಮೊದಲ 12 ಗಂಟೆಗಳಲ್ಲಿ ರಿಕ್ಟರ್ ಮಾಪಕದಲ್ಲಿ 6 ತೀವ್ರತೆಗಿಂತ ಹೆಚ್ಚಿನ ಭೂಕಂಪಗಳು ದಾಖಲಾಗಿವೆ. ಕಡಿಮೆ ಪ್ರಮಾಣದಲ್ಲಿ ನೂರಾರು ಕಂಪನಗಳು ಸಂಭವಿಸಿವೆ. ಅದರಲ್ಲಿ ಮೊದನೆಯದ್ದು 6.7 ತೀವ್ರತೆ ಹೊಂದಿದ್ದು, ಮೊದಲ ಭೂಕಂಪದ ಕೇವಲ 11 ನಿಮಿಷಗಳ ನಂತರ ಸಂಭವಿಸಿದೆ.
(ಲೇಖಕರು ಸಹಾಯಕ ಪ್ರಾಧ್ಯಾಪಕರು)
40 ಸಾವಿರ ರೂ. ವಂಚಿಸಿ 15 ವರ್ಷ ತಲೆಮರೆಸಿಕೊಂಡಿದ್ದವ 2 ಚಿನ್ನದ ಹಲ್ಲುಗಳಿಂದಾಗಿ ಸಿಕ್ಕಿಬಿದ್ದ!

110ನೇ ವರ್ಷದಲ್ಲಿ ಹೊಸ ಕೇಶ, ಹೊಸ ಹಲ್ಲು: ‘ಮರುಹುಟ್ಟನ್ನು’ ಸಂಭ್ರಮಿಸಿದ ಮಹಿಳೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 + 11 =
Remember me
