ಜೀವನದಲ್ಲಿ ಕಷ್ಟ, ಹೋರಾಟಗಳೇ ಇದ್ದರೂ ಪರಾಭವದಿಂದ ಹಿಂದಡಿ ಇಡದೆ ಗೆಲುವಿನ ನಗೆ ಬೀರಿದವರು ಇವರು. ವನಸುಮಗಳಂತೆ ಅವರ ಪಾಡಿಗೆ ಅವರಿದ್ದರು. ಶಿಕ್ಷಣ, ಕಲೆ, ಸಾಹಿತ್ಯ, ವೈದ್ಯಕೀಯ ಹೀಗೆ ಮಹತ್ವದ ಕ್ಷೇತ್ರಗಳಲ್ಲಿ ಸಾಮಾನ್ಯರು ಅಸಾಮಾನ್ಯ ಸಾಧನೆ ಮಾಡಿ, ಪ್ರೇರಣೆ ನೀಡುವಂತಾದಾಗ ಪ್ರತಿಷ್ಠಿತ ಪದ್ಮ ಗೌರವವೇ ಅರಿಸಿಕೊಂಡು ಬಂದಿದೆ. ಕಳೆದ ಕೆಲ ವರ್ಷಗಳಿಂದ ಕೇಂದ್ರ ಸರ್ಕಾರ ತೆರೆಮರೆ ಸಾಧಕರನ್ನು ಗುರುತಿಸಿ, ಪದ್ಮ ಪುರಸ್ಕಾರ ನೀಡುತ್ತಿದೆ. ಈ ವರ್ಷವೂ ಅದು ಮುಂದುವರಿದಿದೆ. ಅಂಥ ಅಪರೂಪದ ಕೆಲ ಸಾಧಕರ ಸಂಕ್ಷಿಪ್ತ ಪರಿಚಯ, ಸಾಧನೆಯ ಅವಲೋಕನ ಇಲ್ಲಿದೆ.
ಬದುಕಿಗೇ ಬಣ್ಣ ತುಂಬಿದ ದುಲಾರಿ
ಬಿಹಾರದ ಮಧುಬನಿ ಜಿಲ್ಲೆಯ ರಾಂಟಿ ಎಂಬ ಪುಟ್ಟಗ್ರಾಮದಲ್ಲಿ ನೆಲೆಸಿರುವ ದುಲಾರಿ ದೇವಿ (54) ಜೀವನದ ಪ್ರತೀಹಂತದಲ್ಲೂ ಬಡತನ, ನೋವು, ಅವಮಾನದೊಂದಿಗೆ ಹೋರಾಡಿದವರು. ಆದರೆ, ಇವರ ನೋವನ್ನು ಸ್ವಲ್ಪ ಮರೆಸಿದ್ದು ಬಣ್ಣ! ಹೌದು, ದುಲಾರಿ ದೇವಿ ಅವರು ಬಿಡಿಸಿರುವ ಪೇಂಟಿಂಗ್​ಗಳನ್ನು ನೋಡಿದವರು ಬೆರಗಾಗುತ್ತಾರೆ, ಕಲಾವಿಸ್ಮಯಕ್ಕೆ ತಲೆಬಾಗುತ್ತಾರೆ. ಈವರೆಗೆ ಏಳು ಸಾವಿರ ಮಿಥಿಲಾ ಪೇಂಟಿಂಗ್​ಗಳನ್ನು ರಚಿಸಿರುವ ಇವರು ಇನ್ಮುಂದೆ ‘ಪದ್ಮಶ್ರೀ ದುಲಾರಿ ದೇವಿ’! 12ನೇ ವರ್ಷಕ್ಕೆ ಮದುವೆಯಾದಾಗ ಇವರ ಜತೆಗೆ ಬಂದಿದ್ದು ಬಡತನ ಮಾತ್ರ! ಗಂಡನ ಮನೆಯಲ್ಲಿ ನಿತ್ಯವೂ ಕಿರುಕುಳ. ಹಾಗೂಹೀಗು ಸಹಿಸಿಕೊಂಡು ಏಳು ವರ್ಷ ಸಂಸಾರ ಮಾಡಿದ ದುಲಾರಿಗೆ, ಆರು ತಿಂಗಳ ಮಗು ಮೃತಪಟ್ಟಾಗ ಸಹಿಸಲಾಗಲಿಲ್ಲ. ಗಂಡನ ಮನೆ ತೊರೆದು ತವರು ಸೇರಿದರು. ಎಲ್ಲಾದರೂ ಕೆಲಸ ಮಾಡಬೇಕೆಂದರೆ ಓದು-ಬರಹ ಗೊತ್ತಿರಲಿಲ್ಲ. ಅವರಿವರ ಮನೆಯಲ್ಲಿ ಕಸ ಗುಡಿಸುವುದು, ನೆಲ ಒರೆಸುವ ಕೆಲಸ ಮಾಡುತ್ತಿದ್ದರು. ದಣಿವು ಸುಧಾರಿಸಿಕೊಳ್ಳಲು ಪೊರಕೆ ಇಟ್ಟು ಕೈಗೆ ಎತ್ತಿಕೊಂಡಿದ್ದು ಕುಂಚ! ಆವರೆಗೂ ಅಂಥದ್ದೊಂದು ಪ್ರತಿಭೆ ತಮ್ಮಲ್ಲಿ ಅಡಗಿದೆ ಎಂದು ದುಲಾರಿಗೂ ಗೊತ್ತಿರಲಿಲ್ಲ. ಮಾಜಿ ರಾಷ್ಟ್ರಪತಿ ಡಾ.ಎ.ಪಿ.ಜೆ ಅಬ್ದುಲ್ ಕಲಾಂ ದುಲಾರಿ ಪೇಂಟಿಂಗ್​ಗಳನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದರು.
ಟರ್ನಿಂಗ್ ಪಾಯಿಂಟ್!:ಮಿಥಿಲಾ ಪೇಂಟಿಂಗ್​ನ ಖ್ಯಾತ ಕಲಾವಿದೆ ಕರ್ಪರಿ ದೇವಿ ಮನೆಯಲ್ಲಿ ಕಸ ಗೂಡಿಸುವ ಕೆಲಸ ಸಿಕ್ಕಿತು ದುಲಾರಿಗೆ. ಕರ್ಪರಿ ದೇವಿ ಇವರ ಪ್ರತಿಭೆ ಗುರುತಿಸಿ, ತರಬೇತಿ ನೀಡಿ ಪ್ರೋತ್ಸಾಹಿಸಿದರು.
106 ವರ್ಷದ ಕೃಷಿ ಸಾಧಕಿ!
ತಮಿಳುನಾಡಿನ ಕೊಯಮತ್ತೂರ್ ಬಳಿಯ ತೆಕ್ಕಮಪಟ್ಟಿ ಗ್ರಾಮದಲ್ಲಿ 2.5 ಎಕರೆ ಜಮೀನಿನಲ್ಲಿ ಸಾವಯವ ಕೃಷಿಮಾಡುತ್ತಿರುವುದು 106 ವರ್ಷದ ಅಜ್ಜಿ ಪಾಪಮ್ಮಾಳ್ (ರಂಗಮ್ಮಾಳ). 1914ರಲ್ಲಿ ಜನಿಸಿರುವ ಪಾಪಮ್ಮಾಳ್ ಬಾಲ್ಯದಲ್ಲೇ ತಂದೆ-ತಾಯಿಯನ್ನು ಕಳೆದುಕೊಂಡು ಅಜ್ಜಿಯ ಆಶ್ರಯದಲ್ಲಿ ಬೆಳೆದರು. 50 ವರ್ಷದ ಹಿಂದೆ ಅಜ್ಜಿಯನ್ನು ಕಳೆದುಕೊಂಡಾಗ ಜೀವನಾಧಾರಕ್ಕಾಗಿ ದಿನಸಿ ಅಂಗಡಿ ಆರಂಭಿಸಿದರು. ಮುಂಚೆಯಿಂದಲೇ ಕೃಷಿಯಲ್ಲಿ ಆಸಕ್ತಿ ಹೊಂದಿದ್ದ ಪಾಪಮ್ಮಾಳ್ ಸಣ್ಣ ವ್ಯಾಪಾರದಲ್ಲೇ ಉಳಿಸಿದ ಹಣದಿಂದ 10 ಎಕರೆ ಕೃಷಿಜಮೀನು ಖರೀದಿಸಿದರು. ಹಣ್ಣು, ತರಕಾರಿ ಬೆಳೆಯಲು ಆರಂಭಿಸಿದರು. ಕ್ರಮೇಣ ತಮಿಳುನಾಡು ಕೃಷಿ ವಿಶ್ವವಿದ್ಯಾಲಯದಿಂದ ಸಾವಯವ ಕೃಷಿ ವಿಧಾನವನ್ನೂ ಕಲಿತುಕೊಂಡು, ಅಳವಡಿಸಿದರು. ಕಳೆದ ಆರು ದಶಕಗಳಿಂದ ಇವರು ಕೃಷಿಯಲ್ಲಿ ಹಲವು ಪ್ರಯೋಗ, ಸಾಧನೆ ಮಾಡಿದ್ದು ಕೃಷಿ ವಿವಿಯ ಮಹತ್ವದ ಕಾರ್ಯಾಗಾರ, ತರಬೇತಿ ಶಿಬಿರಗಳಿಗೆ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದಾರೆ. 1958ರಲ್ಲಿ ತಮಿಳುನಾಡು ಪಂಚಾಯಿತಿ ಕಾಯ್ದೆಯನ್ನು ಅಳವಡಿಸಿಕೊಂಡ ಬಳಿಕ, 1959ರಲ್ಲಿ ಪಾಪಮ್ಮಾಳ್ ಗ್ರಾಮ ಪಂಚಾಯಿತಿ ಸದಸ್ಯರಾಗಿಯೂ ಆಯ್ಕೆಯಾದರು.
10 ಎಕರೆ ನಿರ್ವಹಿಸುವುದು ಕಷ್ಟವಾಗುತ್ತಿದ್ದಂತೆ ಒಂದಿಷ್ಟು ಜಮೀನನ್ನು ಮಾರಿ, 2.5 ಎಕರೆ ಜಮೀನಿನಲ್ಲಿ ಸಾವಯವ ಕೃಷಿ ಮಾಡುತ್ತಿದ್ದಾರೆ. ಈ ಅಜ್ಜಿಯ 100ನೇ ಜನ್ಮದಿನವನ್ನು ಇಡೀ ಗ್ರಾಮವೇ ಸಂಭ್ರಮದಿಂದ ಆಚರಿಸಿದ್ದು, 3 ಸಾವಿರ ಜನರು ಅದರಲ್ಲಿ ಪಾಲ್ಗೊಂಡಿದ್ದರು.
ಜಾನಪದ ಸಂಗೀತದ ಸಿರಿ
ರಾಜಸ್ಥಾನದ ಜೋಧಪುರ ಜಿಲ್ಲೆಯ ರನೇರಿ ಗ್ರಾಮದ ಲಾಖಾ ಖಾನ್ ಅದ್ಭುತ ಪ್ರತಿಭೆ. ಗ್ರಾಮೀಣ ಸಂಸ್ಕೃತಿಯ ನಿಜವಾದ ರಾಯಭಾರಿಯೂ ಹೌದು. 60-70ರ ದಶಕದಲ್ಲಿ ಸಾರ್ವಜನಿಕ ಸಂಗೀತ ಕಾರ್ಯಕ್ರಮಗಳನ್ನು ಆರಂಭಿಸಿದ ಲಾಖಾ ಜಾನಪದ ಸಂಗೀತದ ಸಿರಿಯನ್ನು ಜಗದಗಲ ವಿಸ್ತರಿಸುತ್ತಿದ್ದಾರೆ. ಖ್ಯಾತ ಗಾಯಕ ಕೋಮಲ್ ಕೋಠಾರಿ ಮಾರ್ಗದರ್ಶನದಲ್ಲಿ ಯುರೋಪ್, ಬ್ರಿಟನ್, ರಷ್ಯಾ, ಜಪಾನ್ ಸೇರಿ ಹಲವು ದೇಶಗಳಲ್ಲಿ ತಮ್ಮ ಕಲೆಯನ್ನು ಪ್ರದರ್ಶಿಸಿ, ಕೇಳುಗರ ಮನ ಗೆದ್ದಿದ್ದಾರೆ. ಹಿಂದಿ, ಮಾರವಾಡಿ, ಸಿಂಧಿ, ಪಂಜಾಬಿ, ಮುಲ್ತಾನಿ ಸಹಿತ ಆರು ಭಾಷೆಗಳಲ್ಲಿ ಹಾಡುವ ಇವರು ಸಿಂಧಿ ಸಾರಂಗಿ ನುಡಿಸುವಲ್ಲಿ ನಿಪುಣರು.
ಜ್ಞಾನದ ಬೆಳಕು ಹರಡುತ್ತಿರುವ ಶುಕ್ಲ
ಉತ್ತರಪ್ರದೇಶದ ಬನಾರಸ್​ನಲ್ಲಿ ಜನಿಸಿದ ಹಿರಿಯ ವಿದ್ವಾಂಸ ಆಚಾರ್ಯ ರಾಮಯತ್ನ ಶುಕ್ಲ ಅವರ ವಯಸ್ಸು 89. ಆದರೆ ಉತ್ಸಾಹ ತರುಣರನ್ನೂ ನಾಚಿಸುವಂಥದ್ದು. ಕಾಶಿ ವಿದ್ವತ್ ಪರಿಷದ್​ನ ಅಧ್ಯಕ್ಷರಾಗಿರುವ ಶುಕ್ಲ ಈ ವಯಸ್ಸಲ್ಲೂ ಯುವಕರಿಗೆ ಉಚಿತವಾಗಿ ಸಂಸ್ಕೃತ ಮತ್ತು ವೇದವಿಜ್ಞಾನವನ್ನು ಹೇಳಿಕೊಡುತ್ತಿದ್ದಾರೆ. ಕಾಶಿ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ, ನಿವೃತ್ತರಾಗಿರುವ ಇವರು ಸಾವಿರಾರು ಜನರಿಗೆ ಸಂಸ್ಕೃತ ಕಲಿಸಿಕೊಟ್ಟಿದ್ದಾರೆ. ಹೊಸ ಪೀಳಿಗೆ ಸಂಸ್ಕೃತದತ್ತ ಆಕರ್ಷಿತವಾಗಲು ಹಲವು ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ. ಸಂಸ್ಕೃತ ಕಲಿಕೆಯ ವಿಡಿಯೋಗಳನ್ನು ಕೂಡ ಮಾಡಿದ್ದು. ಅವು ಭಾರಿ ಜನಪ್ರಿಯತೆ ಗಳಿಸಿವೆ. ರಾಮಯತ್ನ ಅವರ ತಂದೆ ರಾಮನಿರಂಜನ ಶುಕ್ಲ ಕೂಡ ಸಂಸ್ಕೃತದ ದೊಡ್ಡ ವಿದ್ವಾಂಸರಾಗಿದ್ದರು.
ವಿದ್ಯಾದಾನ ಮಾಡುವ ಬಡವರ ಮೇಷ್ಟ್ರು
ಪಶ್ಚಿಮ ಬಂಗಾಳದ ವರ್ಧಮಾನ್ (ಪೂರ್ವ) ಜಿಲ್ಲೆಯ ಅಸಗ್ರಾಮ್ ಎಂಬ ಹಳ್ಳಿಯಲ್ಲಿ 76 ವರ್ಷದ ಸುಜಿತ್ಚಟ್ಟೋಪಾಧ್ಯಾಯ ತಮ್ಮ ಮನೆಯಲ್ಲೇ ಬಡ ಮತ್ತು ಮಧ್ಯಮವರ್ಗದ ಮಕ್ಕಳಿಗೆ ಪಾಠಶಾಲೆ ನಡೆಸುತ್ತಿದ್ದಾರೆ. ಇಡೀ ವರ್ಷಕ್ಕೆ ಸಾಂಕೇತಿಕವಾಗಿ 2 ರೂಪಾಯಿ ಶುಲ್ಕ ಸ್ವೀಕರಿಸುತ್ತಾರೆ. ಈ ಪೈಕಿ ಶೇಕಡ 80ರಷ್ಟು ಬಡ ಕುಟುಂಬ ಹಾಗೂ ಗ್ರಾಮೀಣ ಭಾಗಕ್ಕೆ ಸೇರಿದ ಹೆಣ್ಣುಮಕ್ಕಳು. ವೃತ್ತಿಯಲ್ಲಿ ಶಿಕ್ಷಕ, ಮುಖ್ಯೋಪಾಧ್ಯಾಯರಾಗಿದ್ದ ಸುಜಿತ್ ನಿವೃತ್ತರಾಗಿ 16 ವರ್ಷಕ್ಕೂ ಹೆಚ್ಚು ಅವಧಿ ಕಳೆದಿದೆ. ಆದರೆ, ಗ್ರಾಮೀಣ ಭಾಗದ ಮತ್ತು ಬಡ ಕುಟುಂಬಗಳ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದೆಂಬ ಉದ್ದೇಶದಿಂದ ವಿದ್ಯಾದಾನವನ್ನು ಜೀವನವ್ರತವಾಗಿಸಿಕೊಂಡಿದ್ದಾರೆ. ಇವರ ಪಾಠಶಾಲೆ ‘ಸದಾಯಿ ಫಕೀರ್ ಪಾಠಶಾಲಾ’ ಎಂದೇ ಖ್ಯಾತಿ ಪಡೆದುಕೊಂಡಿದೆ. ಇವರ ಶಾಲೆ ಬೆಳಗ್ಗೆ 6.30ಕ್ಕೆ ಆರಂಭವಾಗಿ ಸಂಜೆ 6 ಗಂಟೆಯವರೆಗೆ ನಡೆಯುತ್ತದೆ. 2004ರಲ್ಲಿ ಮೂರು ಮಕ್ಕಳಿಂದ ಶುರುವಾದ ಈ ಶಾಲೆಯಲ್ಲಿ ಪ್ರಸಕ್ತ 350 ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಚಟ್ಟೋಪಾಧ್ಯಾಯ ಸೋದರನ ಪುತ್ರ ಉತ್ಸವ್ ಈ ಶಾಲೆ ನಡೆಸಲು ನೆರವಾಗಿದ್ದಾರೆ.
ಲಕ್ಷಾಂತರ ಜನರ ಸೇವೆ ಮಾಡಿದ ಹಳ್ಳಿ ವೈದ್ಯ
ವೈದ್ಯರಾದ ಬಳಿಕ ನಗರಗಳಲ್ಲಿ ನೆಲೆಸಿ, ಗಳಿಕೆ ಹೆಚ್ಚಿಸಿಕೊಳ್ಳುವ ಮಾರ್ಗ ಹುಡುಕುವವರೇ ಹೆಚ್ಚು. ಆದರೆ, ಇವರುಗ್ರಾಮೀಣ ಭಾಗದಲ್ಲಿ ಉತ್ತಮ ಆರೋಗ್ಯ ಸೇವೆ ಕಲ್ಪಿಸಲೆಂದೇ ಸ್ವಗ್ರಾಮದಲ್ಲಿ ಉಳಿದುಕೊಂಡು ಈವರೆಗೆ ಲಕ್ಷಾಂತರ ಜನರಿಗೆ ಉಚಿತವಾಗಿ ಚಿಕಿತ್ಸೆ ನೀಡಿದ್ದಾರೆ. ರಾಜಸ್ಥಾನದ ಭಾಗಲಪುರ್ ಜಿಲ್ಲೆಯ ಪಿರ್​ಪೈಂತಿ ಗ್ರಾಮದ ಡಾ.ದಿಲೀಪ್ ಕುಮಾರ್ ಸಿಂಗ್ 95ನೇ ವಯಸ್ಸಿನಲ್ಲೂ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ (ಜನನ 1926 ಜೂನ್ 26). 1953ರಲ್ಲಿ ಭಾಗಲಪುರ್ ಮತ್ತು ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಕಾಲರಾ ಕಾಣಿಸಿಕೊಂಡಾಗ ದಿನರಾತ್ರಿ ಸಂಚರಿಸಿ ಜನರಿಗೆ ಉಚಿತ ಚಿಕಿತ್ಸೆ ನೀಡಿದ ಹೆಗ್ಗಳಿಕೆ ಇವರದ್ದು. ಹೀಗೆ ಕಳೆದ 68 ವರ್ಷಗಳಲ್ಲಿ ಲಕ್ಷಾಂತರ ಜನರಿಗೆ ಉಚಿತವಾಗಿ ಚಿಕಿತ್ಸೆ ನೀಡಿರುವ ಸಿಂಗ್ ಹಳ್ಳಿಗರ ಪಾಲಿಗೆ ಗಾಡ್​ಫಾದರ್ ಎನಿಸಿಕೊಂಡಿದ್ದಾರೆ. ದಿಲೀಪ್​ಕುಮಾರ್ ಸಿಂಗ್ ಅವರ ಮಗ ಸಂಜಯ ಸಿಂಗ್, ಸೊಸೆ ಪ್ರತಿಭಾ ಕೂಡ ವೈದ್ಯರಾಗಿದ್ದು, ಹಳ್ಳಿಯಲ್ಲಿ ಆರೋಗ್ಯ ಸೇವೆ ಸಲ್ಲಿಸುತ್ತಿದ್ದಾರೆ.
ಮೌಢ್ಯದ ವಿರುದ್ಧ ಹೋರಾಟದ ಜ್ವಾಲೆ
ಜಾರ್ಖಂಡ್​ನ ಸರಾಯ್ಕೇಲಾ-ಖರಸಾಂವಾ ಜಿಲ್ಲೆಯ ಬಿರ್​ಬಾಂಸ್ ಎಂಬ ಹಳ್ಳಿಯಲ್ಲಿ ವಾಸಿಸುತ್ತಿರುವ ಛುಂಟನಿ ದೇವಿಮೌಢ್ಯದ ವಿರುದ್ಧ ಹೋರಾಟದ ಜ್ವಾಲೆಯನ್ನೇ ಹೊತ್ತಿಸಿದ್ದು, ಅದು ರಾಜ್ಯಾದ್ಯಂತ ತಲುಪಿದೆ. 25 ವರ್ಷದ ಹಿಂದೆ ಛುಂಟನಿ ದೇವಿ ಅವರನ್ನು ‘ಡಾಯನ್’ (ಮಾಟಮಂತ್ರ ಮಾಡಿ ನವಜಾತ ಶಿಶುಗಳನ್ನು ಬಲಿಕೊಡುವ ದುಷ್ಟಶಕ್ತಿ ಎಂದರ್ಥ) ಎಂದು ಕರೆದು ಅವರನ್ನು ಮನೆಯಿಂದ ಹೊರಹಾಕಲಾಯಿತು. ಜಾರ್ಖಂಡ್​ನಲ್ಲಿ ಈ ಮೌಢ್ಯ ವ್ಯಾಪಕವಾಗಿದ್ದು, ಇದರಿಂದ ಅದೆಷ್ಟೋ ಅಮಾಯಕ ಹೆಣ್ಣುಮಕ್ಕಳು ಸಮಾಜದ ಕ್ರೌರ್ಯ ಎದುರಿಸುತ್ತಿದ್ದಾರೆ. ಇದು ಕೊನೆಗಾಣಲೇ ಬೇಕು ಎಂದು ಸಂಕಲ್ಪಿಸಿದ ಛುಂಟನಿ ಅವರು ತಮ್ಮ ಗ್ರಾಮದಿಂದಲೇ ಹೋರಾಟ ಆರಂಭಿಸಿದರು. ಅದಕ್ಕಾಗಿ ಅವರು ಸಹಿಸಿದ ಕಷ್ಟ ಅಷ್ಟಿಷ್ಟಲ್ಲ. ‘ಹೆಣ್ಣುಮಕ್ಕಳ ಬದುಕು ಹಾಳು ಮಾಡಬೇಡಿ, ನಿಮ್ಮ ಸ್ವಾರ್ಥಕ್ಕಾಗಿ ಹೆಣ್ಣಿನ ಮೇಲೆ ಏಕೆ ಕಳಂಕ ಹೊರಿಸುತ್ತಿರಿ’ ಎಂದು ಪ್ರಶ್ನಿಸುತ್ತಲೇ ಹೋರಾಟದ ವ್ಯಾಪ್ತಿಯನ್ನು ವಿಸ್ತರಿಸಿದರು. ಇದರ ಪರಿಣಾಮ ಸಮಾಜದಲ್ಲಿ ಸಾಕಷ್ಟು ಜಾಗೃತಿ ಮೂಡಿದ್ದು, ಅಲ್ಲಿನ ರಾಜ್ಯ ಸರ್ಕಾರ ಈ ಮೌಢ್ಯದ ವಿರುದ್ಧ ಕಾನೂನನ್ನೂ ತಂದಿದೆ.
ಎಷ್ಟೊಂದು ದೌರ್ಜನ್ಯ ಸಹಿಸಿದರು!:ಊರಿನವರು ಇವರನ್ನು ಡಾಯನ್ ಎಂದು ಕರೆದು ಮರಕ್ಕೆ ಕಟ್ಟಿ, ಅರೆನಗ್ನಗೊಳಿಸಿ ಮನಸ್ಸಿಗೆ ಬಂದಂತೆ ಥಳಿಸಿದರು. ಮಲಮೂತ್ರ ಕುಡಿಸಿದರು. ಮನೆ ಮೇಲೆ ದಾಳಿ ನಡೆಸಿ, ಕೊಲ್ಲಲು ಯತ್ನಿಸಿದರು. ಆದರೆ, ಈ ಎಲ್ಲ ಅವಮಾನ ಮತ್ತೊಬ್ಬ ಮಹಿಳೆ ಪಾಲಿಗೆ ಬರಬಾರದು ಎಂದು ಸಂಕಲ್ಪಿಸಿ, ಮಹಿಳೆಯರ ತಂಡವನ್ನೇ ಕಟ್ಟಿಕೊಂಡಿದ್ದಾರೆ ಛುಂಟನಿ. ಸುತ್ತಮುತ್ತಲಲ್ಲಿ ಎಲ್ಲಾದರೂ ಮಹಿಳಾ ಶೋಷಣೆಯ ದೂರು ಬಂದರೆ 62 ಮಹಿಳೆಯರ ತಂಡ ಹೋಗಿ, ಅಲ್ಲಿ ವನಿತೆಗೆ ನ್ಯಾಯ ಕಲ್ಪಿಸುತ್ತದೆ. ಅಕ್ಷರ ಓದದಿದ್ದರೂ ಛುಂಟನಿ ದೇವಿ ಹಿಂದಿ, ಬಂಗಾಳಿ, ಒಡಿಶಿ ಭಾಷೆಗಳ ಮೇಲೆ ಹಿಡಿತ ಸಾಧಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − 7 =
Remember me
