ಖ್ಯಾತ ಉದ್ಯಮಿ ಡಾ. ವಿಜಯ ಸಂಕೇಶ್ವರ, ಪರಿಸರಪ್ರೇಮಿ ತುಳಸಿ ಗೋವಿಂದ ಗೌಡ, ಸಮಾಜ ಸೇವಕ ಹರೇಕಳ ಹಾಜಬ್ಬ, ಮಾಜಿ ಹಾಕಿ ಆಟಗಾರ ಎಂ.ಪಿ. ಗಣೇಶ್ ಅವರಿಗೆ ಸೋಮವಾರ ರಾಷ್ಟ್ರಪತಿ ರಾಮನಾಥ ಕೋವಿಂದ ಪದ್ಮಶ್ರೀ ಪ್ರಶಸ್ತಿಯನ್ನು ಪ್ರದಾನ ಮಾಡಲಿದ್ದಾರೆ. ರಾಷ್ಟ್ರಪತಿ ಭವನದಲ್ಲಿ ಕಾರ್ಯಕ್ರಮ ನಡೆಯಲಿದೆ. ಬೆಳಗ್ಗೆ 11 ಗಂಟೆಗೆ ಕಾರ್ಯಕ್ರಮ ಆರಂಭಗೊಳ್ಳಲಿದೆ ಎಂದು ರಾಷ್ಟ್ರಪತಿ ಭವನ ಮಾಹಿತಿ ನೀಡಿದೆ. ಜಾನಪದ ಕಲಾ ಕ್ಷೇತ್ರದಲ್ಲಿ ಅಭೂತಪೂರ್ವ ಸಾಧನೆ ಮಾಡಿರುವ ಮಂಜಮ್ಮ ಜೋಗತಿ ಅವರಿಗೆ ನ.9ರಂದು ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.
ಶಿಕ್ಷಣ ಸಂತ:ಮಂಗಳೂರಿನ ಪೊಸಪಡ್ಪು ಎಂಬ ಕುಗ್ರಾಮದಲ್ಲಿ ಶಾಲೆ ನಿರ್ಮಾಣ ಮಾಡಿ, ಶಿಕ್ಷಣ ಕ್ಷೇತ್ರದಲ್ಲಿ ಸಂಚಲನ ಸೃಷ್ಟಿಸಿದ ಶ್ರೀಸಾಮಾನ್ಯ ಹರೇಕಳ ಹಾಜಬ್ಬರೂ ಪದ್ಮಶ್ರೀ ಗೌರವಕ್ಕೆ ಪಾತ್ರರಾಗಿದ್ದಾರೆ. ಬಡತನದ ಪರಿಣಾಮ ಶಿಕ್ಷಣದಿಂದ ವಂಚಿತರಾಗಿದ್ದ ಅವರು ತನ್ನೂರಿನ ಮಕ್ಕಳಿಗೆ ಶಾಲೆ ಕಟ್ಟಿಸಬೇಕೆಂದು ಪಣತೊಟ್ಟವರು. ಮಂಗಳೂರಿನ ರಸ್ತೆಗಳಲ್ಲಿ ಕಿತ್ತಳೆ ಹಣ್ಣು ಮಾರುತ್ತಾ, ಅದರಿಂದ ಬಂದ ಹಣವನ್ನು ಕೂಡಿಟ್ಟು ಶಾಲೆ ಕಟ್ಟಿಸಿದ್ದಾರೆ. ಪದ್ಮಶ್ರೀ ಪ್ರಶಸ್ತಿ ಬಂದಿದ್ದರೂ ಇನ್ನೂ ಹಾಜಬ್ಬ ಕಿತ್ತಳೆ ಮಾರುವುದು ನಿಲ್ಲಿಸಿಲ್ಲ!
ವೃಕ್ಷಮಾತೆ:‘ವೃಕ್ಷಮಾತೆ’ ಎಂದೇ ಖ್ಯಾತಿಯಾಗಿರುವ, 80ರ ಆಸುಪಾಸಿನ ತುಳಸಿ ಗೋವಿಂದ ಗೌಡ ಲಕ್ಷೋಪಲಕ್ಷ ಗಿಡಗಳನ್ನು ನೆಟ್ಟು ಪರಿಸರ ಸಂರಕ್ಷಣೆಗೆ ಅಮೂಲ್ಯ ಕೊಡುಗೆ ನೀಡಿದ್ದಾರೆ. ಅಂಕೋಲಾ ತಾಲೂಕಿನ ಹೊನ್ನಳ್ಳಿ ಗ್ರಾಮದ ಅವರು, ಮತ್ತಿಘಟ್ಟ ಅರಣ್ಯ ನರ್ಸರಿಯಲ್ಲಿ ಕೆಲಸ ಮಾಡಿ ನಿವೃತ್ತರಾದ ಬಳಿಕ ಯುವಕರಿಗೆ ತರಬೇತಿ, ಮಾರ್ಗದರ್ಶನ ನೀಡುತ್ತಿದ್ದಾರೆ. ವಯಸ್ಸಿನ ಕಾರಣದಿಂದಾಗಿ ಹೆಚ್ಚು ಓಡಾಟ ಕಷ್ಟವಾಗುತ್ತಿದ್ದರೂ, ಪರಿಸರಪ್ರೇಮ ಮಾತ್ರ ಎಳ್ಳಷ್ಟೂ ಕಡಿಮೆಯಾಗಿಲ್ಲ. ಪರಿಸರ ನಾಶ ವ್ಯಾಪಕಗೊಳ್ಳುತ್ತಿರುವ ಇಂದಿನ ಕಾಲಘಟ್ಟದಲ್ಲಿ ಯುವ ಜನಾಂಗವೇ ಮುಂದೆ ಬಂದು ವೃಕ್ಷಪ್ರೇಮ ಮೈಗೂಡಿಸಿಕೊಳ್ಳಬೇಕು ಎನ್ನುತ್ತಾರೆ ತುಳಸಿ ಗೌಡ.
ನ.9ರಂದು ಪದ್ಮಶ್ರೀ ಗೌರವಕ್ಕೆ ಪುರಸ್ಕೃತರಾಗಲಿರುವ ಬಿ. ಮಂಜಮ್ಮ ಜೋಗತಿ ಮಂಗಳಮುಖಿಯರ ನಡುವೆ ಪ್ರಮುಖ ಸಾಧಕಿಯಾಗಿ ಗುರುತಿಸಿಕೊಂಡಿದ್ದಾರೆ. ತೃತೀಯಲಿಂಗಿಯಾಗಿ ರೂಪಾಂತರಗೊಳ್ಳುವ ಸಂದರ್ಭದಲ್ಲಿ ಕೌಟುಂಬಿಕ ಬಹಿಷ್ಕಾರಕ್ಕೆ ಒಳಗಾಗಿ ನೋವನ್ನು ಅನುಭವಿಸಿದರೂ, ನಂತರ ಕಷ್ಟಪಟ್ಟು ಬದುಕನ್ನು ಕಟ್ಟಿಕೊಂಡರು. ಕೌಟುಂಬಿಕ ಬಹಿಷ್ಕಾರಕ್ಕೆ ಒಳಗಾಗುವ ವೇಳೆಗಾಗಲೇ ‘ಜೋಗತಿ’ ವೃತ್ತಿಯನ್ನೇ ಬದುಕಿಗೆ ಆಧಾರ ಮಾಡಿಕೊಂಡಿದ್ದರು. 18ನೇ ವಯಸ್ಸಿನಿಂದ ಕಲಾಸೇವೆ ಮಾಡುತ್ತಾ, ಜಾನಪದ ನೃತ್ಯದ ಮೂಲಕ ಗ್ರಾಮ, ಜಾತ್ರೆ, ಸಂತೆಗಳಲ್ಲಿ ಸಾವಿರಾರು ಪ್ರದರ್ಶನಗಳನ್ನು ನೀಡಿದ್ದಾರೆ. ಸದ್ಯ ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವೇದ ವಿದ್ವಾಂಸ, ಸಾಕ್ಷಿ ಸಂಸ್ಥೆ ಸ್ಥಾಪಕ ಡಾ.ಆರ್.ಎಲ್.ಕಶ್ಯಪ ಅವರಿಗೂ ನ.9ರಂದು ಪದ್ಮಶ್ರೀ ಪ್ರಶಸ್ತಿ ಪ್ರದಾನವಾಗಲಿದೆ.
ಯಶಸ್ವಿ ಉದ್ಯಮಿ:ಪದ್ಮಶ್ರೀ ಗೌರವಕ್ಕೆ ಪಾತ್ರರಾಗಿರುವ ಡಾ. ವಿಜಯ ಸಂಕೇಶ್ವರ ಅವರು ವಿಆರ್​ಎಲ್ ಸಮೂಹ ಸಂಸ್ಥೆಗಳ ಮೂಲಕ ದೇಶದಲ್ಲೇ ದೊಡ್ಡ ಸರಕು ಸಾಗಾಣಿಕೆ ಉದ್ಯಮ ನಡೆಸುತ್ತಿದ್ದು, ಸಂಸ್ಥೆಯು ಸುಮಾರು 19 ಸಾವಿರ ಉದ್ಯೋಗಿಗಳನ್ನು ಹೊಂದಿದೆ. ಇದಲ್ಲದೆ, ಸಾವಿರಾರು ಮಂದಿಗೆ ಪರೋಕ್ಷವಾಗಿ ಉದ್ಯೋಗ ಕಲ್ಪಿಸಿದೆ. ಸಾಮಾಜಿಕ ಸೇವೆಗಳ ಮೂಲಕವೂ ದೇಶವ್ಯಾಪಿ ಪ್ರಸಿದ್ಧಿ ಪಡೆದಿರುವ ಅವರು, ಕರ್ನಾಟಕದಿಂದ ಮೂರು ಬಾರಿ ಲೋಕಸಭೆಗೆ ಆಯ್ಕೆಯಾಗಿದ್ದರು. ಮಾಧ್ಯಮ ಕ್ಷೇತ್ರದಲ್ಲೂ ಗಣನೀಯ ಸಾಧನೆ ಮಾಡಿರುವ ಸಂಕೇಶ್ವರರು ವಿಜಯವಾಣಿ ಮತ್ತು ದಿಗ್ವಿಜಯ ನ್ಯೂಸ್ ಸುದ್ದಿ ವಾಹಿನಿ ನಡೆಸುತ್ತಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 2 =
Remember me
