ಇಸ್ಲಾಮಾಬಾದ್:ಕಳೆದ ವರ್ಷ ಫೆಬ್ರವರಿಯಲ್ಲಿ ಪುಲ್ವಾಮಾ ದಾಳಿ ಸಂಭವಿಸಿದ ನಂತರ ಭಾರತದ ವಾಯುಪಡೆಯ ವಿಂಗ್​ಕಮಾಂಡರ್ ಅಭಿನಂದನ್ ವರ್ಧಮಾನ್​ರನ್ನು ಬಂಧಿಸಿದ್ದ ಪಾಕ್, ಭಾರತದ ಪ್ರತೀಕಾರಕ್ಕೆ ಹೆದರಿತ್ತು. ಅವರನ್ನು ಶೀಘ್ರ ಬಿಡುಗಡೆ ಮಾಡದಿದ್ದರೆ ಭಾರತ ನಿಶ್ಚಿತವಾಗಿ ದಾಳಿ ನಡೆಸುತ್ತದೆ ಎಂಬುದನ್ನು ಅರಿತ ಪಾಕ್ ಸೇನೆಯ ಮುಖ್ಯಸ್ಥರು ನಡುಗಿಹೋಗಿದ್ದರು. ಹೀಗಾಗಿಯೇ ಪಾಕ್ 60 ತಾಸಿನೊಳಗೆ ಅಭಿನಂದನ್​ರನ್ನು ಬಿಡುಗಡೆ ಮಾಡಿತು ಎಂಬ ವಿಷಯ ಈಗ ಬಯಲಾಗಿದೆ.
ವಿಮಾನ ಪತನವಾದ ಕಾರಣ ಪ್ಯಾರಾಚೂಟ್ ಮೂಲಕ ಹಾರಿದ ಅಭಿನಂದನ್ ವರ್ಧಮಾನ್ ಪಾಕ್ ಭಾಗದಲ್ಲಿ ಇಳಿದಿದ್ದರು. ಅವರನ್ನು ಸೆರೆ ಹಿಡಿಯಲಾಗಿತ್ತು. ಈ ಬೆನ್ನಲ್ಲೇ ಪ್ರತೀಕಾರ ಕ್ರಮಕ್ಕೆ ಭಾರತ ಸಿದ್ಧವಾಗಿತ್ತು. ಪಾಕಿಸ್ತಾನದ ಸಂಸದೀಯ ನಾಯಕರ ಸಭೆಯಲ್ಲಿ ವಿದೇಶಾಂಗ ಸಚಿವ ಶಾ ಮೆಹ್ಮೂದ್ ಖುರೇಷಿ ಕಂಗಾಲಾಗಿದ್ದರು. ಅಭಿನಂದನ್ ಬಿಡುಗಡೆ ಮಾಡುವ ನಿರ್ಧಾರ ಕೈಗೊಳ್ಳದಿದ್ದರೆ ಭಾರತ ರಾತ್ರಿ 9 ಗಂಟೆಗೆ ನಮ್ಮ ಮುಂಚೂಣಿ ಗಡಿ ಚೌಕಿಗಳ ಮೇಲೆ ದಾಳಿ ಮಾಡುತ್ತದೆ ಎಂದು ಅವರು ಸಭೆಯಲ್ಲಿ ಹೇಳಿದರು. ಇದನ್ನು ಕೇಳಿ ಭೂಸೇನೆಯ ಮುಖ್ಯಸ್ಥ ಜ. ಕಮರ್ ಜಾವೇದ್ ಬಜ್ವಾಗೆ ನಡುಕ ಉಂಟಾಯಿತು ಎಂದು ಪಿಎಂಎಲ್-ಎನ್ ನಾಯಕ ಅಯಾಜ್ ಸಾದಿಕ್ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಬಹಿರಂಗ ಪಡಿಸಿದ್ದಾರೆ.
ಹಿನ್ನೆಲೆ ಏನು?:2019 ಫೆಬ್ರವರಿ 14ರಂದು ಜಮ್ಮು-ಕಾಶ್ಮೀರದ ಪುಲ್ವಾಮಾ ಹೆದ್ದಾರಿಯಲ್ಲಿ ಕೇಂದ್ರೀಯ ಮೀಸಲು ಪೊಲೀಸ್ ಪಡೆಯ (ಸಿಆರ್​ಪಿಎಫ್) ವಾಹನದ ಮೇಲೆ ಪಾಕ್​ನ ಜೈಷ್-ಎ-ಮೊಹಮ್ಮದ್ ಉಗ್ರರು ನಡೆಸಿದ ಕಾರ್ ಬಾಂಬ್ ಸ್ಪೋಟದಲ್ಲಿ 40 ಯೋಧರು ಹುತಾತ್ಮರಾದರು. ಇದಕ್ಕೆ ಪ್ರತೀಕಾರವಾಗಿ ಭಾರತದ ವಾಯುಪಡೆ ಫೆ. 26ರಂದು ಪಾಕ್​ನ ಬಾಲಾಕೋಟ್ ಮೇಲೆ ವೈಮಾನಿಕ ದಾಳಿ ನಡೆಸಿ ಉಗ್ರರ ನೆಲೆಗಳನ್ನು ಧ್ವಂಸ ಮಾಡಿತು. ಇದರಿಂದ ಕ್ರೋಧಿತವಾದ ಪಾಕ್, ಅಮೆರಿಕ ಪೂರೈಸಿದ ಎಫ್-16 ಸಹಿತ ಕೆಲ ಯುದ್ಧ ವಿಮಾನಗಳ ಮೂಲಕ ಭಾರತ ಮೇಲೆ ಫೆ. 27ರಂದು ದಂಡೆತ್ತಿ ಬಂತು. ಆದರೆ, ಭಾರತೀಯ ವಾಯುಪಡೆಯ ಆಕ್ರಮಣಕ್ಕೆ ನಲುಗಿ ಹಿಂದಿರುಗಿತು. ಈ ಸಂದರ್ಭದಲ್ಲಿ ಎಫ್- 16 ಯುದ್ಧ ವಿಮಾನವನ್ನು ಮಿಗ್-21 ಜೆಟ್​ನಲ್ಲಿ ಬೆನ್ನಟ್ಟಿದ ವಿಂಗ್​ಕಮಾಂಡರ್ ಅಭಿನಂದನ್ ವರ್ಧಮಾನ್, ಅದನ್ನು ಹೊಡೆದುರುಳಿಸುವಲ್ಲಿ ಯಶಸ್ವಿಯಾದರು. ಆದರೆ ಅವರ ವಿಮಾನ ಪತನವಾಗಿ, ಎಲ್​ಒಸಿ ಆಚೆ ಬದಿಗೆ ಇಳಿದರು. ಅವರನ್ನು ಪಾಕ್ ಪಡೆ ಬಂಧಿಸಿತ್ತು. ನಂತರ ಅವರನ್ನು ಮಾರ್ಚ್ 1ರಂದು ಅಟ್ಟಾರಿ-ವಾಘಾ ಗಡಿ ಮೂಲಕ ಬಿಡುಗಡೆ ಮಾಡಲಾಯಿತು. ಅಭಿನಂದನ್ ತೋರಿದ ಶೌರ್ಯ, ಸಾಹಸಕ್ಕಾಗಿ ಅವರಿಗೆ ವೀರಚಕ್ರ ನೀಡಿ ಗೌರವಿಸಲಾಯಿತು.
ಸಂಸದೀಯ ನಾಯಕರ ಸಭೆಗೆ ಬರಲು ಪ್ರಧಾನಿ ಇಮ್ರಾನ್ ಖಾನ್ ಒಪ್ಪಲಿಲ್ಲ. ಆದರೆ, ಸೇನಾ ಮುಖ್ಯಸ್ಥ ಜನರಲ್ ಬಜ್ವಾ ಬಂದರು. ಅವರ ಕಾಲು ಅಕ್ಷರಶಃ ನಡುಗುತ್ತಿತ್ತು.
|ಅಯಾಜ್ ಸಾದಿಕ್ಪಿಎಂಎಲ್-ಎನ್ ನಾಯಕ
ವಿಂಗ್​ಕಮಾಂಡರ್ ಅಭಿನಂದನ್ ವರ್ಧಮಾನ್ ಬಿಡುಗಡೆ ಮಾಡುವುದನ್ನು ಬಿಟ್ಟು ಪಾಕ್​ಗೆ ಅನ್ಯ ಮಾರ್ಗವೇ ಇರಲಿಲ್ಲ. ರಾಜತಾಂತ್ರಿಕ ಮತ್ತು ರಾಜಕೀಯ ಒತ್ತಡದ ಜತೆಗೆ ಭಾರತದ ಸೇನೆಯ ಭಯ ಪಾಕ್​ಗೆ ಇತ್ತು. ಭಾರತದ ಸೇನೆಯ ಶಕ್ತಿ, ಸಾಮರ್ಥ್ಯದ ಬಗ್ಗೆ ಪಾಕ್ ಸೇನಾ ಮುಖ್ಯಸ್ಥರಿಗೆ ಚೆನ್ನಾಗಿ ತಿಳಿದಿದ್ದ ಕಾರಣ ಅವರ ಕಾಲುಗಳು ಕಂಪಿಸುತ್ತಿದ್ದವು.
|ಬಿ.ಎಸ್.ಧನೋವಾನಿವೃತ್ತ ಏರ್ ಚೀಫ್ ಮಾರ್ಷಲ್ (ಪುಲ್ವಾಮಾ ದಾಳಿ ನಡೆದಾಗ ವಾಯುಪಡೆಯ ಮುಖ್ಯಸ್ಥ)
ನಮ್ಮ ಸೇನೆಯನ್ನು ಕಾಂಗ್ರೆಸ್ ಯಾವಾಗಲೂ ಅಣಕ ಮಾಡುತ್ತದೆ. ಆದರೆ, ಭಾರತದ ಸೇನೆಯ ಶಕ್ತಿ ಏನು ಎಂಬುದನ್ನು ಪಾಕ್​ನ ವಿರೋಧ ಪಕ್ಷದ ಮುಖಂಡರೇ ಹೇಳಿರುವ ವಿಡಿಯೋ ಸ್ಪಷ್ಟ ಪಡಿಸಿದೆ. ಆದರೆ, ಕಾಂಗ್ರೆಸ್ ರಾಜಕುಮಾರನಿಗೆ (ರಾಹುಲ್ ಗಾಂಧಿ) ನಮ್ಮ ಸೇನೆ, ಸರ್ಕಾರ, ನಾಗರಿಕರ ಮೇಲೆ ವಿಶ್ವಾಸವಿಲ್ಲ.
|ಜೆ.ಪಿ.ನಡ್ಡಾಬಿಜೆಪಿ ರಾಷ್ಟ್ರೀಯ ಅಧ್ಯಕ್ಷ
ಪುಲ್ವಾಮಾದಲ್ಲಿ ಸಿಆರ್​ಪಿಎಫ್ ವಾಹನದ ಮೇಲೆ ಸ್ಪೋಟಕ ತುಂಬಿದ ಕಾರ್ ನುಗ್ಗಿಸಿ ನಡೆಸಿದ ದಾಳಿ ಕುರಿತು ತನಿಖೆ ನಡೆಸಿರುವ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್​ಐಎ), ಕಳೆದ ಆಗಸ್ಟ್ 25ರಂದು ಜಮ್ಮುವಿನ ವಿಶೇಷ ಕೋರ್ಟ್​ಗೆ ಸಲ್ಲಿಸಿದ ಆರೋಪಪಟ್ಟಿಯಲ್ಲಿ ಈ ದಾಳಿಗೆ ಪಾಕಿಸ್ತಾನ ಕಾರಣವೆಂದು ಸ್ಪಷ್ಟವಾಗಿ ಹೇಳಿದೆ. ಪಾಕ್ ಮೂಲದ ಜೈಷ್-ಎ-ಮೊಹಮದ್ (ಜೆಇಎಂ) ಉಗ್ರ ಸಂಘಟನೆಯ ನಾಯಕರಾದ ಮಸೂದ್ ಅಜರ್ ಹಾಗೂ ಆತನ ಸೋದರ ರವೂಫ್ ಅಸ್ಗರ್ ಸಂಚುಕೋರರಾದರೂ ಇವರಿಗೆ ಪಾಕ್​ನ ಸೇನೆ ಹಾಗೂ ಐಎಸ್​ಐ ಕುಮ್ಮಕ್ಕು ಇದೆ. 2016ರಿಂದಲೇ ಈ ದಾಳಿಗೆ ಸಂಚು ನಡೆಸುತ್ತಿದದ್ದು ಪಾಕ್ ಆಡಳಿತಕ್ಕೆ ತಿಳಿಯದ ವಿಷಯವೇನಲ್ಲ ಎಂದು ಆರೋಪಪಟ್ಟಿಯಲ್ಲಿ ಉಲ್ಲೇಖಿಸಿದೆ. 19 ಆರೋಪಿಗಳನ್ನು ಚಾರ್ಜ್​ಶೀಟ್​ನಲ್ಲಿ ಹೆಸರಿಸಲಾಗಿದೆ. ಅವರಲ್ಲಿ ಹಲವರು ಕಾರ್ಯಾಚರಣೆಗಳಲ್ಲಿ ಹತರಾಗಿದ್ದಾರೆ. ಪ್ರಯಾಣ ಹಾಗೂ ಸಾಗಣೆಗೆ ನೆರವು ನೀಡಿದ ಆರು ಜನರ ಹೆಸರೂ ಆರೋಪ ಪಟ್ಟಿಯಲ್ಲಿದೆ. ಪಾಕ್​ನಿಂದ ತಂದಿದ್ದ 35 ಕೆ.ಜಿ. ಆರ್​ಡಿಎಕ್ಸ್ ಮತ್ತು 200 ಕೆ.ಜಿ. ಸ್ಪೋಟಕಗಳ ಫೋಟೋಗಳು, ದೂರವಾಣಿ ಕರೆ ದಾಖಲೆಗಳು, ವಾಟ್ಸ್ ಆ್ಯಪ್​ ಸಂಭಾಷಣೆಗಳು ಚಾರ್ಜ್​ಶೀಟ್​ನಲ್ಲಿವೆ. ಜೈಷ್ ಕಮಾಂಡರ್ ಉಮರ್ ಫಾರೂಕ್​ನ ಫೋನ್​ಗಳಲ್ಲಿ ಅವು ಸಿಕ್ಕಿದ್ದವು. ಪುಲ್ವಾಮಾ ದಾಳಿಯ ನಂತರ ಮಾರ್ಚ್​ನಲ್ಲಿ ಭದ್ರತಾ ಪಡೆಗಳು ನಡೆಸಿದ ಕಾರ್ಯಾಚರಣೆಯಲ್ಲಿ ಫಾರೂಕ್ ಹತನಾಗಿದ್ದ. ಈ ಫಾರೂಕ್ ಪಾಕ್​ನಲ್ಲಿ ಹೊಂದಿರುವ ಬ್ಯಾಂಕ್ ಖಾತೆಗೆ ದೊಡ್ಡ ಮಟ್ಟದ ಹಣ ವರ್ಗಾವಣೆಯಾಗಿರುವುದಕ್ಕೆ ಪುರಾವೆ ಇದೆ ಎಂದು ಚಾರ್ಜ್​ಶೀಟ್​ನಲ್ಲಿ ಉಲ್ಲೇಖ ಮಾಡಲಾಗಿತ್ತು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 + two =
Remember me
