ಜಮ್ಮು:ಕಾಶ್ಮೀರದಲ್ಲಿ ಸ್ಥಳೀಯ ಉಗ್ರ ಸಂಘಟನೆಗಳೇ ಭಯೋತ್ಪಾದನಾ ಕೃತ್ಯಗಳನ್ನು ನಡೆಸುತ್ತಿರುವುದು ಎಂದು ಬಿಂಬಿಸುವುದಕ್ಕೆ ಪಾಕಿಸ್ತಾನ ಶತಾಯಗತಾಯ ಪ್ರಯತ್ನಿಸುತ್ತಿದೆ. ಲಷ್ಕರ್ ಏ ತೊಯ್ಬಾ (ಎಲ್​ಇಟಿ) ಮತ್ತು ಜೈಷ್ ಏ ಮೊಹಮ್ಮದ್​(ಜೆಇಎಂ)ಗಳ ಕಿರಾತಕ ಉಗ್ರರನ್ನು ಕಾಶ್ಮೀರಕ್ಕೆ ರವಾನಿಸಿ ಅಲ್ಲಿ ಸ್ಥಳೀಯ ಹೆಸರಿನೊಂದಿಗೆ ಉಗ್ರ ಸಂಘಟನೆಯನ್ನು ರೂಪಿಸುವ ಸಂಚು ನಡೆದಿದೆ. ಈಗಾಗಲೇ ಇಂತಹ ಮೂರು ಸಂಘಟನೆಗಳನ್ನು ಪಾಕಿಸ್ತಾನ ಹುಟ್ಟುಹಾಕಿದೆ ಎಂದು ಜಮ್ಮು-ಕಾಶ್ಮೀರ ಕೇಂದ್ರಾಡಳಿತ ಪ್ರದೇಶದ ಡಿಜಿಪಿ ದಿಲ್​ಬಾಗ್​ ಸಿಂಗ್​ ಹೇಳಿದ್ದಾರೆ.
ಕಾಶ್ಮೀರ ಕಣಿವೆಯಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ಪ್ರಚೋದನೆ ನೀಡಿ ಬೀದಿ ರಂಪ ಸೃಷ್ಟಿಸಲು ಪಾಕಿಸ್ತಾನ ನಾನಾ ರೀತಿಯಲ್ಲಿ ಪ್ರಯತ್ನಿಸುತ್ತಿದೆ. ಇದಕ್ಕೆ ಪೂರಕವಾಗಿ ಅದು ಇತ್ತೀಚೆಗೆ ಮೂರು ಉಗ್ರ ಸಂಘಟನೆಗಳನ್ನು ಸ್ಥಳೀಯ ಹೆಸರುಗಳಲ್ಲಿ ಹುಟ್ಟುಹಾಕಿದೆ. ತೆಹ್ರೀಕ್​ ರೆಸಿಸ್ಟನ್ಸ್​ ಫ್ರಂಟ್​(ಟಿಆರ್​ಎಫ್​), ತೆಹ್ರೀಕ್ ಮಿಲಿಟಿಯಾ ಇಸ್ಲಾಮಿಯಾ (ಟಿಎಂಐ), ಘಜ್ವಾ ಏ ಹಿಂದ್​ (ಜಿಇಎಚ್​) ಇವೇ ಮೂರು ಸಂಘಟನೆಗಳು. ಈ ಮೂರು ಸಂಘಟನೆಗಳ ಮೂಲಕ ಭಾರತದಲ್ಲೇ ಉಗ್ರ ಸಂಘಟನೆಗಳು ನೆಲೆಯೂರಿವೆ ಎಂದು ಜಗತ್ತಿಗೆ ಬಿಂಬಿಸುವುದಕ್ಕೆ ಪಾಕಿಸ್ತಾನ ಹುನ್ನಾರ ನಡೆಸಿದೆ. ಈ ಸಂಘಟನೆಗಳಲ್ಲಿ ಇರುವವರೆಲ್ಲ ಎಲ್​ಇಟಿ ಮತ್ತು ಜೆಇಎಂಗೆ ಸೇರಿದ ಉಗ್ರರು ಎಂದು ಸಿಂಗ್ ಹೇಳಿದ್ದಾರೆ.
ಇದನ್ನೂ ಓದಿ:ಕಾಶ್ಮೀರದ ವಿಚಾರದಲ್ಲಿ ಪಾಕ್​ ಜತೆ ನಾವಿಲ್ಲ, ಇತ್ತ ತಲೆನೇ ಹಾಕಲ್ಲ ಎಂದ ತಾಲೀಬಾನ್​: ಪಾಕಿಸ್ತಾನಕ್ಕಾಯ್ತು ಭಾರಿ ಮುಖಭಂಗ!
ರೆಸಿಸ್ಟನ್ಸ್ ಫ್ರಂಟ್ ಎಂಬುದು ಕೇವಲ ಹೆಸರಷ್ಟೇ. ಅದು ನಿಜವಾಗಿಯೂ ಉಗ್ರ ಪುನಶ್ಚೇತನ ಸಂಘಟನೆ. ಕಾಶ್ಮೀರದಲ್ಲಿ ಉಗ್ರ ಸಂಘಟನೆ ಮತ್ತು ಉಗ್ರರು ನೆಲಕಚ್ಚುತ್ತಿರುವುದನ್ನು ಗಮನಿಸಿಯೇ ಇದನ್ನು ಹುಟ್ಟುಹಾಕಿದ್ದಾರೆ. ಈ ಸಂಘಟನೆಗೆ ಪೂರ್ಣ ಪ್ರಮಾಣದ ನೆರವು ನೀಡುತ್ತಿರುವುದು ಎಲ್​ಇಟಿ ಮತ್ತು ಜೆಇಎಂ, ಹಿಜ್ಬುಲ್ ಮುಜಾಹಿದ್ದಿನ್​ಗಳು. ಜಗತ್ತಿನ ಕಣ್ಣಿಗೆ ಮಣ್ಣೆರಚಿ ಮೂರ್ಖರನ್ನಾಗಿಸುವುದು ಪಾಕಿಸ್ತಾನದ ಉದ್ದೇಶ. ಈ ಮೂರು ಸಂಘಟನೆಗಳ ಕೃತ್ಯಗಳನ್ನು ಟಿಆರ್​ಎಫ್ ಈಗ ತನ್ನದು ಎಂದು ಹೇಳಿಕೊಳ್ಳುತ್ತಿದೆ. ಏಪ್ರಿಲ್ 5ರಂದು ಕುಪ್ವಾರಾ ಸೆಕ್ಟರ್​ನ ಎಲ್​ಒಸಿಯಲ್ಲಿ ಐವರು ಸೇನಾ ಸಿಬ್ಬಂದಿಯನ್ನು ಹತ್ಯೆಗೈದ ಪ್ರಕರಣದ ಹೊಣೆಗಾರಿಕೆಯನ್ನು ಟಿಆರ್​ಎಫ್​ ಹೊತ್ತುಕೊಂಡಿದೆ. ವಾಸ್ತವದಲ್ಲಿ ಅದಕ್ಕೂ ನೇರ ಸಂಬಂಧವಿಲ್ಲ. ಏಪ್ರಿಲ್ 27ರಂದು ಕುಪ್ವಾರಾ ಪ್ರಕರಣಕ್ಕೆ ಸಂಬಂಧಿಸಿದ ಮೂವರು ಉಗ್ರರನ್ನು ಸೇನೆ ಹೊಡೆದುರುಳಿಸಿದ್ದು, ಅವರ ಗುರುತು ಪತ್ತೆ ಹಚ್ಚಿದಾಗ ಎಲ್ಲರೂ ಹಿಜ್ಬುಲ್ ಮುಜಾಹಿದ್ದೀನ್​ಗೆ ಸೇರಿದವರು ಎಂಬುದು ಖಾತ್ರಿಯಾಗಿತ್ತು ಎಂದು ಸಿಂಗ್ ಸ್ಪಷ್ಟಪಡಿಸಿದ್ದಾರೆ.
ಈ ರೀತಿ ಬಹುತೇಕ ಉಗ್ರ ದಾಳಿಗಳ ಹೊಣೆಗಾರಿಕೆಯನ್ನು ಟಿಆರ್​ಎಫ್ ಹೊತ್ತುಕೊಂಡಿದ್ದು, ಅದಕ್ಕೆ ಸಂಬಂಧಿಸಿದ ಉಗ್ರರನ್ನು ಹೊಡೆದುರುಳಿಸಿದಾಗ, ಸೆರೆ ಹಿಡಿದಾಗ ಅವರು ಎಲ್​ಇಟಿ, ಜೆಇಎಂ, ಹಿಜ್ಬುಲ್ ಮುಜಾಹಿದ್ದೀನ್​ಗೆ ಸೇರಿದವರು ಎಂಬುದು ವೇದ್ಯವಾಗುತ್ತದೆ. ಆದರೆ, ಟಿಆರ್​ಎಫ್​ ಈ ರೀತಿ ಹೊಣೆಗಾರಿಕೆ ಹೊತ್ತುಕೊಳ್ಳುವುದರಿಂದ ಅದು ಸ್ಥಳೀಯ ಉಗ್ರ ಸಂಘಟನೆಯಾಗಿ ಹೊರ ಜಗತ್ತಿಗೆ ಕಾಣಿಸುತ್ತಿದೆ. ಪಾಕಿಸ್ತಾನ ಈ ರೀತಿಯ ತಂತ್ರ ಅಳವಡಿಸಿಕೊಳ್ಳುವ ಮೂಲಕ ತನ್ನ ನೆಲದಲ್ಲಿ ಇರುವ ಜೆಇಎಂ, ಎಲ್​ಇಟಿ, ಹಿಜ್ಬುಲ್​ಗಳ ಹಿತವನ್ನು ಕಾಪಾಡುತ್ತಿದೆ.
ಇದನ್ನೂ ಓದಿ:ಪಾಕಿಸ್ತಾನವನ್ನು ಹೇಗೆ ನಿರ್ಬಂಧಿಸಬೇಕು ಎಂಬುದು ಭಾರತಕ್ಕೆ ಗೊತ್ತಿದೆ
ಇನ್ನುಳಿದ ಎರಡು ಸ್ಥಳೀಯ ಹೆಸರಿನ ಉಗ್ರ ಸಂಘಟನೆಗಳದ್ದೂ ಇದೇ ಕಥೆ. ಆರಂಭದಲ್ಲಿ ಪಾಕಿಸ್ತಾನ ಈ ಸಂಘಟನೆಗಳ ಸಾಮಾಜಿಕ ತಾಣಗಳನ್ನು ಬಳಸಿಕೊಂಡಿದೆ ಮತ್ತು ಈಗಲೂ ಬಳಸಿಕೊಳ್ಳುತ್ತಿದೆ. ಈಗ ನೇರವಾಗಿ ಅಖಾಡದಲ್ಲೂ ಬಳಸಿಕೊಂಡು ಭಾರತದಲ್ಲಿ ನಡೆಯುವ ಉಗ್ರ ಕೃತ್ಯಗಳಿಗೂ ತನಗೂ ಸಂಬಂಧವಿಲ್ಲ ಎಂಬುದನ್ನು ಬಿಂಬಿಸಿ ಕ್ಲೀನ್ ಇಮೇಜ್ ಗಿಟ್ಟಿಸಿಕೊಳ್ಳಲು ಹವಣಿಸುತ್ತಿದೆ ಎಂದು ಸಿಂಗ್ ಎಚ್ಚರಿಸಿದ್ದಾರೆ.
ಈ ವರ್ಷ ಐದು ತಿಂಗಳ ಅವಧಿಯಲ್ಲಿ ನಡೆದಿರುವ ಅಂದಾಜು 30 ಎನ್​ಕೌಂಟರ್​ಗಳಲ್ಲಿ 70 ಉಗ್ರರನ್ನು ಹತ್ಯೆಗೈಯಲಾಗಿದೆ. ಈ ಉಗ್ರರ ಪೈಕಿ ನಅಲ್ಕು ಉಗ್ರ ಸಂಘಟನೆಗಳ ಮುಖ್ಯಸ್ಥರು ಸೇರಿ 22 ಟಾಪ್ ಕಮಾಂಡರ್​ಗಳಾಗಿದ್ದರು. ಏಪ್ರಿಲ್ ತಿಂಗಳೊಂದರಲ್ಲೇ ಅನ್ಸಾರ್ ಘಝ್ವಾತುಲ್​ ಹಿಂದ್, ಜೆಇಎಂ, ಎಲ್​ ಇಟಿ ಮತ್ತು ಹಿಜ್ಬುಲ್ ಮುಜಾಹಿದ್ದೀನ್​ನ ಕಾಶ್ಮೀರದ ಮುಖ್ಯಸ್ಥರು ಸೇರಿ 30 ಉಗ್ರರು 12 ವಿವಿಧ ಎನ್​ಕೌಂಟರ್​ಗಳಲ್ಲಿ ಹತರಾಗಿದ್ದಾರೆ. ಹಿಜ್ಬುಲ್ ಮುಖ್ಯಸ್ಥ ರಿಯಾಜ್ ನಾಯ್ಕೂ ಹತ್ಯೆ ಪೊಲೀಸರ ಮಟ್ಟಿಗೆ ಬಹುದೊಡ್ಡ ಯಶಸ್ಸು. ಪಾಕ್ ಪ್ರಾಯೋಜಿತ ಉಗ್ರವಾದಕ್ಕೆ ಭಾರಿ ಹಿನ್ನೆಡೆಯೂ ಆಗಿತ್ತು ಎಂಬುದನ್ನು ಸಿಂಗ್ ಸ್ಮರಿಸಿದ್ದಾರೆ. (ಏಜೆನ್ಸೀಸ್)
ಕೋವಿಡ್​ 19ಕ್ಕೂ ಬೆದರದ ಪಾಕಿಸ್ತಾನ; ಮುಚ್ಚದ ಉಗ್ರರ ಕಾರ್ಖಾನೆ, ಲಾಂಚ್​ಪ್ಯಾಡ್​ಗಳಲ್ಲಿ ಕಿರಾತಕರ ಜಮಾವಣೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight − five =
Remember me
