ತೀವ್ರ ಬಿಕ್ಕಟ್ಟಿಗೆ ಸಿಲುಕಿ ಶ್ರೀಲಂಕಾದ ಅರ್ಥವ್ಯವಸ್ಥೆ ಪತನಗೊಂಡಿದೆ. ಈ ಅವಸ್ಥೆಗೆ ಮುಖ್ಯ ಕಾರಣ ರಾಜಕೀಯ ನಾಯಕತ್ವದ ತಪ್ಪು ನಿರ್ಧಾರಗಳು. ಇದೀಗ ಪಾಕಿಸ್ತಾನವೂ ಇದೇ ಹಾದಿಯಲ್ಲಿ ಸಾಗಿದೆ. ಅರ್ಥವ್ಯವಸ್ಥೆ ಜೀವ ಹಿಡಿದಿಟ್ಟುಕೊಳ್ಳಲು ಅಲ್ಲಿನ ರಾಜಕೀಯ ವ್ಯವಸ್ಥೆ ಸಾಲ ಎತ್ತುವಳಿಯಲ್ಲಿ ಮಗ್ನವಾಗಿದೆ. ವಿಶೇಷ ಎಂದರೆ, ಶ್ರೀಲಂಕಾ ಮತ್ತು ಪಾಕಿಸ್ತಾನ ಎರಡೂ ಚೀನಾ ಜತೆಗೆ ಆಪ್ತ ಸಂಬಂಧವನ್ನೂ ಹೊಂದಿವೆ. ಈ ವಿದ್ಯಮಾನದ ಸಂಕ್ಷಿಪ್ತ ಇಲ್ಲಿದೆ.
ಶ್ರೀಲಂಕಾದಂತೆ ಪಾಕಿಸ್ತಾನದ ಅರ್ಥವ್ಯವಸ್ಥೆಯೂ ಹದಗೆಟ್ಟಿದೆ. ದಿನೇದಿನೆ ಆರ್ಥಿಕ ಸಂಕಷ್ಟ ಹೆಚ್ಚಾಗುತ್ತಿದ್ದು, ನಿತ್ಯ ಬಳಕೆ ವಸ್ತುಗಳ ಬೆಲೆ ಗಗನಮುಖಿಯಾಗಿದೆ. ಪಾಕಿಸ್ತಾನದಲ್ಲಿ ಬುಧವಾರ ತುಪ್ಪ, ಅಡುಗೆ ಎಣ್ಣೆ ಬೆಲೆಗಳಲ್ಲಿ ಮತ್ತೆ ಭಾರಿ ಏರಿಕೆಯನ್ನು ಸರ್ಕಾರ ಘೋಷಿಸಿದೆ. ತುಪ್ಪ ಲೀಟರಿಗೆ 208 ರೂಪಾಯಿ, ಅಡುಗೆ ಎಣ್ಣೆ ಲೀಟರಿಗೆ 213 ರೂಪಾಯಿ ಹೆಚ್ಚಿಸಲಾಗಿದೆ. ಈ ಏರಿಕೆಯೊಂದಿಗೆ ತುಪ್ಪ ಒಂದು ಲೀಟರ್​ಗೆ 555 ರೂಪಾಯಿ, ಅಡುಗೆ ಎಣ್ಣೆ ಲೀಟರಿಗೆ 605 ರೂಪಾಯಿ ಆಗಿದೆ ಎಂದು ಯುಟಿಲಿಟಿ ಸ್ಟೋರ್ಸ್ ಕಾರ್ಪೆರೇಶನ್ (ಯುಎಸ್​ಸಿ) ಅಧಿಕಾರಿ ಹೇಳಿದ್ದಾರೆ. ಇದು ಜನರಿಗೆ ಆಘಾತ ಉಂಟುಮಾಡಿದೆ. ವಾಸ್ತವದಲ್ಲಿ ಬೆಲೆ ಏರಿಕೆ ವಿಚಾರವಾಗಿ ಪಾಕಿಸ್ತಾನ ಸರ್ಕಾರವಾಗಲೀ, ಯುಎಸ್​ಸಿ ಆಗಲೀ ಸ್ಪಷ್ಟ ವಿವರಣೆ ನೀಡಿಲ್ಲ. ಅಡುಗೆ ಎಣ್ಣೆ ಮತ್ತು ತುಪ್ಪ ಉತ್ಪಾದಕರಿಗೆ 200-300 ಕೋಟಿ ರೂಪಾಯಿ ಬಾಕಿಯನ್ನು ಯುಎಸ್​ಸಿ ಪಾವತಿಸಬೇಕಾಗಿದೆ. ಸಾಲದ ರೂಪದಲ್ಲಿ ಯುಎಸ್​ಸಿಗೆ ತುಪ್ಪ ಮತ್ತು ಅಡುಗೆ ಎಣ್ಣೆ ಪೂರೈಸುವುದನ್ನು ಉತ್ಪಾದಕರು ಸ್ಥಗಿತಗೊಳಿಸಿದ್ದಾರೆ. ಹೀಗಾಗಿ ಬೆಲೆ ಏರಿಕೆ ಆಗುತ್ತಿದೆ ಎಂದು ಪಾಕ್ ಮಾಧ್ಯಮಗಳು ವರದಿ ಮಾಡಿವೆ.
ತಾಳೆ ಎಣ್ಣೆ ಪೂರೈಕೆಯೂ ಇಲ್ಲ:ಇಂಡೋನೇಷ್ಯಾ ತನ್ನ ಅರ್ಥವ್ಯವಸ್ಥೆಯನ್ನು ಸರಿದೂಗಿಸಲು, ಬೆಲೆ ಏರಿಕೆ ನಿಯಂತ್ರಿಸಲು ಕಚ್ಚಾ ತಾಳೆ ಎಣ್ಣೆ ರಫ್ತನ್ನು ನಿಷೇಧಿಸಿತ್ತು. ಮೇ 23ರಂದು ಅದು ನಿಷೇಧ ಹಿಂಪಡೆದಿದೆ. ಕಚ್ಚಾ ತಾಳೆ ಎಣ್ಣೆ ದರ ಟನ್​ಗೆ 1,900 ಡಾಲರ್​ನಿಂದ 2000 ಡಾಲರ್ ಇದ್ದದ್ದು ಈಗ 1,700 ಡಾಲರ್ ಆಗಿದೆ. ಆದಾಗ್ಯೂ, ಅಲ್ಲಿಂದ ತಾಳೆ ಎಣ್ಣೆ ತರಿಸುವ ಯಾವುದೇ ಪ್ರಯತ್ನವನ್ನು ಪಾಕ್ ಸರ್ಕಾರ ಮಾಡಿಲ್ಲ ಎಂದು ವ್ಯಾಪಾರಿಗಳು ಆರೋಪಿಸಿದ್ದಾರೆ.
ಈ ವರ್ಷಕ್ಕೆ ಬೇಕು 3600 ಕೋಟಿ ಡಾಲರ್:ಪಾಕಿಸ್ತಾನದಲ್ಲಿ ಈ ತಿಂಗಳಿಂದ ಆರಂಭವಾಗುವ ಹಣಕಾಸು ವರ್ಷಕ್ಕೆ ಮುಂಗಡಪತ್ರ ಮಾಡುವುದಕ್ಕೆ 36-37 ಶತಕೋಟಿ ಡಾಲರ್ ಹಣದ ಅಗತ್ಯವಿದೆ ಎಂದು ಹಣಕಾಸು ಸಚಿವ ಮಿಫ್ತಾಹ್ ಇಸ್ಮಾಯಿಲ್ ಕಳೆದ ವಾರ ಹೇಳಿದ್ದರು. ಕಳೆದ ವರ್ಷ ಗರಿಷ್ಠ 800 ಕೋಟಿ ಡಾಲರ್ ಫಂಡಿಂಗ್ ಕೊರತೆ ಪಾಕ್ ಅರ್ಥವ್ಯವಸ್ಥೆಯನ್ನು ಕಾಡಿತ್ತು ಎಂದು ಮಾರ್ಗನ್ ಸ್ಟಾ್ಯನ್ಲಿ ವರದಿ ಹೇಳಿದೆ.
ಪಾಕ್ ಬಿಕ್ಕಟ್ಟಿಗೇನು ಕಾರಣ?:ಪಾಕಿಸ್ತಾನ ರಾಜಕೀಯ ಮತ್ತು ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ಅಲ್ಲಿನ ರಾಜಕೀಯ ಸನ್ನಿವೇಶ ಗಂಭೀರ ರೀತಿಯಲ್ಲಿ ಅಸ್ಥಿರತೆಯನ್ನು ಅನುಭವಿಸುತ್ತಿದೆ. ಸೇನೆ ಮತ್ತು ಶಾಸಕಾಂಗದ ನಡುವೆ ಸಮನ್ವಯ ಇಲ್ಲದೆ, ಸಂಘರ್ಷ ಉಂಟಾಗುತ್ತಿರುವುದು ಇದಕ್ಕೆ ಕಾರಣ. ಕಳೆದ 10 ವರ್ಷಗಳ ಅವಧಿಯಲ್ಲಿ ಆರು ಪ್ರಧಾನಮಂತ್ರಿಗಳನ್ನು ಪಾಕಿಸ್ತಾನ ಕಂಡಿದೆ. 2010-19ರ ನಡುವೆ, ಪಾಕಿಸ್ತಾನದ ಬೆಳವಣಿಗೆ ದರ ಸರಾಸರಿ ಶೇಕಡ 4ರಲ್ಲಿತ್ತು. ಹಣದುಬ್ಬರ ದುಪ್ಪಟ್ಟಾಗಿ ಶೇಕಡ 7.3ರಲ್ಲಿತ್ತು. ಸರ್ಕಾರದ ಕೊರತೆಗಳು ಸರಾಸರಿ ಶೇಕಡ 6 ಮತ್ತು ಚಾಲ್ತಿ ಖಾತೆ ಕೊರತೆ ನಿರ್ವಹಿಸಬಹುದಾದ ಶೇಕಡ 2.1ರಲ್ಲಿತ್ತು. ಎರಡು ಜಾಗತಿಕ ಆಘಾತಗಳು (ಕೋವಿಡ್ 19 ಸಂಕಷ್ಟ, ಯೂಕ್ರೇನ್- ರಷ್ಯಾ ಸಮರ) ಪಾಕಿಸ್ತಾನದ ಆರ್ಥಿಕ ವ್ಯವಸ್ಥೆಯನ್ನು ಇನ್ನಷ್ಟು ಹದಗೆಡುವಂತೆ ಮಾಡಿದವು. ಹಣದುಬ್ಬರ ಪ್ರಮಾಣ ಶೇಕಡ 10 ದಾಟಿದೆ. ಚಾಲ್ತಿ ಖಾತೆ ಕೊರತೆ ಶೇಕಡ 6-7ಕ್ಕೆ ತಲುಪಿದೆ. ಇವೆಲ್ಲದರ ನಡುವೆ ಪಾಕಿಸ್ತಾನದಲ್ಲಾದ ಒಂದೇ ಬದಲಾವಣೆ ಎಂದರೆ ಹೊಸ ಪ್ರಧಾನಮಂತ್ರಿ ಮತ್ತು ಸರ್ಕಾರ ರಚನೆ ಆಗಿರುವುದು. ಪಾಕಿಸ್ತಾನದ ಕೇಂದ್ರ ಬ್ಯಾಂಕ್​ನ ಗವರ್ನರ್ (ರೆಝಾ ಬಕೀರ್) ಗುತ್ತಿಗೆ ಅವಧಿ ಮುಗಿದಿದ್ದು, ನವೀಕರಿಸಿಲ್ಲ. ಹೀಗಾಗಿ ಈಗ ಹಂಗಾಮಿ ಗವರ್ನರ್ (ಮುರ್ತಾಝಾ ಸೈಯದ್) ಅರ್ಥ ವ್ಯವಸ್ಥೆ ಗಮನಿಸುತ್ತಿದ್ದಾರೆ.
ಬಾಹ್ಯ ಸಾಲದ ಹೊರೆ:ಜಗತ್ತಿನ 52 ರಾಷ್ಟ್ರಗಳು ತೀವ್ರವಾದ ಬಾಹ್ಯ ಸಾಲದ ಹೊರೆ ಎದುರಿಸುತ್ತಿವೆ. ಸಾಲ ಮರುಪಾವತಿಸಲಾಗದೆ ಸಂಕಷ್ಟಕ್ಕೆ ಒಳಗಾಗಿರುವ ಈ ರಾಷ್ಟ್ರಗಳ ಪಟ್ಟಿಯಲ್ಲಿ ಪಾಕಿಸ್ತಾನವೂ ಸೇರಿದೆ. ಕಳೆದ ಹಣಕಾಸು ವರ್ಷದ ಮೊದಲ ಅರ್ಧದಲ್ಲಿ (2021 ಡಿಸೆಂಬರ್ ತನಕ) ಪಾಕ್ ಸರ್ಕಾರ ಹೆಚ್ಚುವರಿಯಾಗಿ 4.77 ಶತಕೋಟಿ ಡಾಲರ್ ಬಾಹ್ಯ ಸಾಲ ಮಾಡಿಕೊಂಡಿದೆ. ಸದ್ಯ 9006 ಕೋಟಿ ಡಾಲರ್ ಬಾಹ್ಯ ಸಾಲದ ಹೊರೆ ಪಾಕ್ ಮೇಲಿದ್ದು, ಆರ್ಥಿಕ ವಿಪತ್ತಿನ ಸನಿಹದಲ್ಲೇ ಇದೆ.
ಚೀನಾ ನಂಟು:ಶ್ರೀಲಂಕಾ ಮತ್ತು ಪಾಕಿಸ್ತಾನಗಳು ಐಎಂಎಫ್ ಹೊರತಾಗಿ ಚೀನಾ ಬಳಿ ದೊಡ್ಡ ಪ್ರಮಾಣದ ಸಾಲ ತೆಗೆದುಕೊಂಡಿವೆ. ಈ ಸಾಲ ಎರಡೂ ರಾಷ್ಟ್ರಗಳಿಗೆ ದುಬಾರಿಯಾಗಿ ಪರಿಣಮಿಸಿದೆ. ಈ ರಾಷ್ಟ್ರಗಳ ನೆಲವನ್ನು ತನ್ನ ವ್ಯೂಹಾತ್ಮಕ ಕಾರ್ಯಗಳಿಗೆ ಬಳಸುವ ಉದ್ದೇಶದೊಂದಿಗೆ ಚೀನಾ ಕುಟಿಲ ತಂತ್ರವನ್ನು ಹೂಡಿತ್ತು. ಲಂಕಾದ ಹಂಬನ್​ತೋಟಾ ಬಂದರು, ಪಾಕ್​ನ ಗ್ವಾದಾರ್ ಬಂದರುಗಳ ಮೇಲೆ ಚೀನಾದ ಹಿಡಿತ ಹೆಚ್ಚಾಗಿದೆ. ಜಾಗತಿಕ ಆಘಾತ ಉಂಟಾದಾಗ ಚೀನಾ ಆಪ್ತರಾಷ್ಟ್ರವೆಂದು ನಂಬಿದ್ದ ಈ ರಾಷ್ಟ್ರಗಳಿಗೆ ಚುಕ್ಕಾಸಿನ ಅಲ್ಲಿಂದ ನೆರವೂ ಸಿಕ್ಕಿಲ್ಲ.
ಕುಸಿದ ಪಾಕ್ ರೂಪಾಯಿ:ಅಂತಾರಾಷ್ಟ್ರೀಯ ಕರೆನ್ಸಿ ಮಾರುಕಟ್ಟೆ ಯಲ್ಲಿ ಅಮೆರಿಕದ ಡಾಲರ್ ಎದುರು ಪಾಕಿಸ್ತಾನದ ರೂ. ಮೌಲ್ಯ ಮೇ ತಿಂಗಳೊಂದರಲ್ಲೇ ಶೇ.7 ಕುಸಿತ ಕಂಡಿದೆ. 2020ರ ಮಾರ್ಚ್ ನಂತರ ಇದುವರೆಗಿನ ಭಾರಿ ಕುಸಿತ ಇದು. ಎರಡು ವಾರಗಳ ಹಿಂದೆ ಒಂದು ಅಮೆರಿಕನ್ ಡಾಲರ್​ಗೆ 200 ರೂಪಾಯಿ ತಲುಪಿ, ಸಾರ್ವಕಾಲಿಕ ಕನಿಷ್ಠ ಮಟ್ಟ ತಲುಪಿತ್ತು. ಬುಧವಾರ ಡಾಲರ್ ಎದುರು ಪಾಕ್ ರೂಪಾಯಿ ಮೌಲ್ಯ 199.10 ರೂಪಾಯಿ ಇದೆ.
ಭಾರತದ ನೆರವಿನತ್ತ ನೋಟ:ಯೂಕ್ರೇನ್ ಮೇಲೆ ರಷ್ಯಾ ಯುದ್ಧದ ಪರಿಣಾಮ, ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಶ್ರೀಲಂಕಾ ಮತ್ತು ಪಾಕಿಸ್ತಾನಗಳಿಗೆ ನೆರವು ನೀಡುವಲ್ಲಿ ಅಸಮರ್ಥವಾಗಿವೆ. ಇದರ ಪರಿಣಾಮ ಭಾರತ ಈಗ ಈ ರಾಷ್ಟ್ರಗಳಿಗೆ ನೆರವು ನೀಡಬಲ್ಲ ಆಶಾಕಿರಣವಾಗಿ ಗೋಚರಿಸಿದೆ. ಸಂಕಷ್ಟದ ಅವಧಿಯಲ್ಲಿ ಲಂಕಾ ನೆರವು ಕೋರಿದ್ದು ಭಾರತದ ಬಳಿಯೇ. ಭಾರತ ಪೆಟ್ರೋಲ್, ಡೀಸೆಲ್ ಮತ್ತು ಆಹಾರ, ಔಷಧಗಳನ್ನು ಲಂಕಾಕ್ಕೆ ಪೂರೈಸಿದೆ. ಈವರೆಗೆ ಭಾರತದ ನೆರವನ್ನು ಪಾಕಿಸ್ತಾನ ಕೋರಿಲ್ಲ. ಆದರೆ ಪಾಕಿಸ್ತಾನದ ವಿಪಕ್ಷ ನಾಯಕರು ಭಾರತದ ನೆರವು ಕೋರುವಂತೆ ಸರ್ಕಾರಕ್ಕೆ ಒತ್ತಡ ಹೇರುತ್ತಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 5 =
Remember me
