|ರಾಘವ ಶರ್ಮ ನಿಡ್ಲೆನವದೆಹಲಿ
ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ‘ಪಾಕ್ ಸಂಪರ್ಕ’ದ ಬಗ್ಗೆ ಮಾಜಿ ಸಿಎಂ ಕ್ಯಾಪ್ಟನ್ ಅಮರಿಂದರ್ ಸಿಂಗ್ ಆರೋಪ ಮಾಡಿದ್ದು ಹಳೇ ಸುದ್ದಿ. ಈಗ ಕ್ಯಾಪ್ಟನ್ ಸಿಂಗ್ ಮತ್ತು ಪಾಕಿಸ್ತಾನದ ಮಾಜಿ ಪತ್ರಕರ್ತೆ ಅರೂಸಾ ಆಲಂ ನಡುವಿನ ‘ಸ್ನೇಹ’ ರಾಜ್ಯ ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸುತ್ತಿದೆ. ವಾಸ್ತವದಲ್ಲಿ, ಅರೂಸಾ -ಕ್ಯಾಪ್ಟನ್ ಸ್ನೇಹ ರಾಜ್ಯದ ಮಟ್ಟಿಗೆ ಹೊಸ ವಿಷಯವೇನಲ್ಲ. ಆದರೆ, ಕ್ಯಾಪ್ಟನ್ ಕಾಂಗ್ರೆಸ್ ವಿರುದ್ಧ ಸಮರ ಸಾರಿರುವ ಹಿನ್ನೆಲೆಯಲ್ಲಿ ಅರೂಸಾ ಜತೆಗಿನ ‘ನಂಟು’ ರಾಜಕೀಯ ಕಿತ್ತಾಟಗಳಿಗೆ ಕಾರಣವಾಗಿಬಿಟ್ಟಿದೆ.
ಪಾಕಿಸ್ತಾನದ ಗೂಢಚರ ಸಂಸ್ಥೆ ಐಎಸ್​ಐ ಜತೆಗೆ ಅರೂಸಾ ಸಂಪರ್ಕವಿದ್ದು, ಈ ಬಗ್ಗೆ ಭಾರತೀಯ ಗೂಢಚರ ಸಂಸ್ಥೆ ‘ರಾ’ (ರಿಸರ್ಚ್ ಅನಾಲಿಸಿಸ್ ವಿಂಗ್) ತನಿಖೆ ನಡೆಸಬೇಕು ಎಂದು ಕೆಲ ದಿನಗಳ ಹಿಂದೆ ಪಂಜಾಬ್ ಉಪ ಮುಖ್ಯಮಂತ್ರಿ ಸುಖ್​ಜಿಂದರ್ ಸಿಂಗ್ ರಾಂಧವ ಒತ್ತಾಯಿಸಿದ್ದರು. ಇದರಿಂದ ಕೋಪೋದ್ರಿಕ್ತರಾಗಿದ್ದ ಕ್ಯಾಪ್ಟನ್, ಹಲವು ವರ್ಷಗಳ ಹಿಂದೆ ಅರೂಸಾ, ಸೋನಿಯಾ ಗಾಂಧಿ ನಡುವಿನ ಭೇಟಿ ಸೇರಿ ವಿವಿಧ ಪಕ್ಷಗಳ ಮುಖಂಡರನ್ನು ಭೇಟಿ ಮಾಡಿದ್ದ ಫೋಟೋಗಳನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪ್ರಕಟಿಸಿದ್ದರು. ಈ ಮೂಲಕ, ಅರೂಸಾ ಭಾರತೀಯ ರಾಜಕೀಯ ವಲಯಕ್ಕೆ ಅಪರಿಚಿತ ವ್ಯಕ್ತಿಯಲ್ಲ ಎಂಬುದನ್ನು ದೃಢಪಡಿಸಿದ್ದರು. ಐಎಸ್​ಐ ಜತೆ ನಂಟಿರುವ ಮಹಿಳೆಯೊಂದಿಗೆ ತಾವು ಸ್ನೇಹಹೊಂದಿದ್ದೇವೆ ಎಂಬುದನ್ನು ಬಿಂಬಿಸಿ ಜನರ ಕಣ್ಣಲ್ಲಿ ಅವರನ್ನು ಅಪರಾಧಿಯನ್ನಾಗಿ ಚಿತ್ರಿಸಬೇಕು ಎಂದೇ ಕಾಂಗ್ರೆಸ್ ನಾಯಕರು ಈ ನಾಟಕವಾಡುತ್ತಿದ್ದಾರೆ ಎನ್ನುವುದು ಕ್ಯಾಪ್ಟನ್ ಆಪ್ತರ ವಾದ. ಈ ಹಿಂದೆ ಭಾರತದಲ್ಲಿ ತಾನು ಭೇಟಿ ಮಾಡಿದ್ದ ಗಣ್ಯ ರಾಜಕಾರಣಿಗಳೊಂದಿಗಿನ ಫೋಟೋಗಳನ್ನು ಅರೂಸಾ ಖುದ್ದಾಗಿ ಕ್ಯಾಪ್ಟನ್​ಗೆ ಕಳುಹಿಸಿಕೊಟ್ಟಿದ್ದಾರೆ. ಅವುಗಳನ್ನೇ ಕ್ಯಾಪ್ಟನ್ ಟ್ವಿಟ್ಟರ್​ನಲ್ಲಿ ಬಹಿರಂಗಪಡಿಸಿದ್ದಾರೆ.
ಜನರಲ್ ಪರಮಾಪ್ತೆಯಾಗಿದ್ದ ತಾಯಿ:ಅರೂಸಾ ತಾಯಿ ಅಖ್ಲೀಂ ಅಖ್ತರ್ 1969ರಿಂದ 71ರ ತನಕ ಪಾಕಿಸ್ತಾನದ ‘ಅತ್ಯಂತ ಪ್ರಭಾವಿ’ ಮಹಿಳೆಯಾಗಿದ್ದರು. ಪಾಕ್ ಆರ್ವಿು ಜನರಲ್, ಮಾಜಿ ಅಧ್ಯಕ್ಷ ಯಾಹ್ಯಾ ಖಾನ್ ‘ಪರಮಾಪ್ತೆ’ಯಾಗಿದ್ದಿದ್ದೇ ಇದಕ್ಕೆ ಮುಖ್ಯ ಕಾರಣ. ಜನರಲ್ ಖಾನ್ ಭೇಟಿಯಾಗಬೇಕೆಂದರೆ ಹಿರಿಯ ಅಧಿಕಾರಿಗಳು, ರಾಜಕಾರಣಿಗಳು ಮೊದಲು ಅಖ್ಲೀಂರನ್ನೇ ಸಂರ್ಪಸುತ್ತಿದ್ದರಂತೆ. ಅರೂಸಾ ರಕ್ಷಣಾ ವರದಿಗಾರ್ತಿಯಾಗಿದ್ದ ಹಿನ್ನೆಲೆ ಮತ್ತು ಐಎಸ್​ಐನ ಮಾಜಿ ಮಹಾನಿರ್ದೇಶಕ ಫೈಜ್ ಹಮೀದ್ ಜತೆಗೆ ಒಡನಾಟ ಹೊಂದಿದ್ದರಿಂದಲೇ ಆಕೆಗೆ ಐಎಸ್​ಐ ಸಂಪರ್ಕವಿದೆ ಎಂದು ಆರೋಪಿಸಲಾಗಿತ್ತು. ಆದರೆ, ಕಳೆದ 16 ವರ್ಷಗಳಿಂದ ಕೇಂದ್ರ ಸರ್ಕಾರದ ತನಿಖಾ ಏಜೆನ್ಸಿಗಳ ಸಮ್ಮತಿ ಸಿಕ್ಕ ಬಳಿಕವೇ ಅವರು ಭಾರತಕ್ಕೆ ಭೇಟಿ ನೀಡುತ್ತಿದ್ದಾರೆ ಎನ್ನುವುದೂ ಇಲ್ಲಿ ಗಮನಾರ್ಹ.
ವೈಯಕ್ತಿಕ ನಿಂದನೆ:‘‘ಅರೂಸಾ ಆಲಂರೊಂದಿಗೆ ಕ್ಯಾಪ್ಟನ್ ಅಮರಿಂದರ್ ಸಿಂಗ್ ತಮ್ಮ ಉಳಿದ ಜೀವನವನ್ನು ಆನಂದದಿಂದ ಕಳೆಯಬೇಕು. ಕ್ಯಾಪ್ಟನ್ ನೇತೃತ್ವದ ಸರ್ಕಾರದ ಮೇಲೆ ಪ್ರಭಾವ ಬೀರುತ್ತಿದ್ದ ಆಲಂ, ವರ್ಗಾವಣೆಗಳಿಗೆ ಕಾರಣವಾದರು, ರಾಜಕೀಯ ನಾಯಕರಿಂದ ಉಡುಗೊರೆಗಳನ್ನು ಪಡೆದಿದ್ದರು’ ಎಂದು ಸಿಧು ಪತ್ನಿ ನವಜೋತ್ ಕೌರ್ ಸಿಧು ಆರೋಪಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಆಲಂ, ಕಾಂಗ್ರೆಸ್ಸಿನ ಸಿಧು ದಂಪತಿ, ರಾಂಧವ ಮೂವರೂ ಕತ್ತೆಕಿರುಬಗಳ ಜಾತಿಗೆ ಸೇರಿದವರು ಎಂದು ಆಕ್ರೋಶ ಹೊರಹಾಕಿದ್ದರು.
ಅರೂಸಾ ಆಲಂ ಹಿನ್ನೆಲೆ:1955ರಲ್ಲಿ ಜನಿಸಿದ್ದ ಅರೂಸಾಂ ಆಲಂ ಪಾಕಿಸ್ತಾನದಲ್ಲಿ ರಕ್ಷಣಾ ವ್ಯವಹಾರಗಳನ್ನು ವರದಿ ಮಾಡುತ್ತಿದ್ದ ಪತ್ರಕರ್ತೆ. ಭಾರತದ ಸುಪ್ರಸಿದ್ಧ ಗಾಯಕ ಅದ್ನಾನ್ ಸಾಮಿ ಅವರು ಅರೂಸಾ ಆಲಂ ಸೋದರಳಿಯ ಎಂಬುದು ಗಮನಾರ್ಹ. 66 ವರ್ಷದ ಆಲಂಗೆ ಇಬ್ಬರು ಮಕ್ಕಳಿದ್ದಾರೆ. ಸೌತ್ ಏಷ್ಯಾ ಫ್ರೀ ಮೀಡಿಯಾ ಅಸೋಸಿಯೇಷನ್ ಅಧ್ಯಕ್ಷೆಯಾಗಿದ್ದ ಅವರನ್ನು ಕ್ಯಾಪ್ಟನ್ ಅಮರಿಂದರ್ ಸಿಂಗ್ 2000ದಲ್ಲಿ ಪಾಕಿಸ್ತಾನಕ್ಕೆ ಪ್ರವಾಸಗೈದಿದ್ದ ವೇಳೆ ಭೇಟಿ ಮಾಡಿದ್ದರು. ಪರಸ್ಪರ ಸ್ನೇಹಿತರಾದ ಬಳಿಕ ಆಲಂ ಚಂಡೀಗಢದಲ್ಲಿರುವ ಕ್ಯಾಪ್ಟನ್ ನಿವಾಸಕ್ಕೆ ಪ್ರತಿವರ್ಷ ಭೇಟಿ ಕೊಡುತ್ತಿದ್ದರು. ಕಳೆದ 16 ವರ್ಷಗಳಿಂದ ಅವರು ಭಾರತ ಪ್ರವಾಸಗೈದಿದ್ದಾರೆ. ಆದರೆ, ಕಾಂಗ್ರೆಸ್ ನಾಯಕರ ವೈಯಕ್ತಿಕ ವಾಕ್ ಪ್ರಹಾರದಿಂದ ಬೇಸರಗೊಂಡಿರುವ ಆಲಂ, ಇನ್ನೆಂದೂ ಭಾರತಕ್ಕೆ ಬರುವುದಿಲ್ಲ ಎಂದು ಹೇಳಿದ್ದಾರೆ.
ಪಕ್ಷದ ನಾಯಕರ ಅಶಿಸ್ತಿಗೆ ಸೋನಿಯಾ ಕಿಡಿ:ದೇಶದಾದ್ಯಂತ ರಾಜ್ಯ ಮಟ್ಟದ ಕಾಂಗ್ರೆಸ್ ನಾಯಕರಲ್ಲಿ ಅಶಿಸ್ತು ತಾಂಡವವಾಡುತ್ತಿದ್ದು ‘ಸುಸಂಬದ್ಧತೆ ಹಾಗೂ ಸ್ಪಷ್ಟತೆ’ಯ ಕೊರತೆಯಿದೆ ಎಂದು ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅಸಮಾಧಾನ ವ್ಯಕ್ತಪಡಿಸಿದರು. ವೈಯಕ್ತಿಕ ಆಸೆ- ಆಕಾಂಕ್ಷೆಗಳನ್ನು ಬದಿಗಿಟ್ಟು ಶಿಸ್ತು ಮತ್ತು ಪಕ್ಷದ ಒಗ್ಗಟ್ಟಿಗೆ ಗಮನ ಹರಿಸುವಂತೆ ರಾಜ್ಯ ಕಾಂಗ್ರೆಸ್ ಮುಖ್ಯಸ್ಥರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಪಂಜಾಬ್ ಮತ್ತು ಛತ್ತೀಸ್​ಗಢಗಳಲ್ಲಿ ಪಕ್ಷದ ಆಂತರಿಕ ಜಗಳದ ಬಗ್ಗೆ ಅವರು ಪರೋಕ್ಷವಾಗಿ ಆತಂಕ ವ್ಯಕ್ತಪಡಿಸಿದ ಅವರು, ಐದು ರಾಜ್ಯಗಳಲ್ಲಿ ಮುಂದಿನ ವರ್ಷ ಅಸೆಂಬ್ಲಿ ಚುನಾವಣೆಗಳು ನಡೆಯಲಿದ್ದು ನಾಯಕರಲ್ಲಿನ ಅವ್ಯವಸ್ಥೆ ಚಿಂತೆಗೆ ಕಾರಣವಾಗಿದೆ ಎಂದು ಚುನಾವಣೆ ಕುರಿತು ಪಕ್ಷದ ಪ್ರಮುಖ ನಾಯಕರೊಂದಿಗೆ ಮಂಗಳವಾರ ನಡೆಸಿದ ಸಭೆಯಲ್ಲಿ ಸೋನಿಯಾ ಹೇಳಿದರು. ಅಶಿಸ್ತು ಮತ್ತು ಕಚ್ಚಾಟ ಬಿಟ್ಟು ಪಕ್ಷ ಸಂಘಟನೆಯ ಬಲವರ್ಧನೆಗೆ ಆದ್ಯತೆ ನಿಡಬೇಕಾದುದು ಎಲ್ಲರ ಕರ್ತವ್ಯ. ಇದರಲ್ಲಿ ಸಾಮೂಹಿಕ ಹಾಗೂ ವೈಯಕ್ತಿಕ ಯಶಸ್ಸು ಎರಡೂ ಸೇರಿವೆ ಎಂದ ಸೋನಿಯಾ, ಬಿಜೆಪಿ ಮತ್ತು ಆರೆಸ್ಸೆಸ್​ನ ಅಪಪ್ರಚಾರವನ್ನು ಸೈದ್ಧಾಂತಿಕವಾಗಿ ವಿರೋಧಿಸಲು ಸಜ್ಜಾಗಬೇಕು ಎಂದು ಕರೆ ನೀಡಿದರು. ಸಭೆಯಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಮೊದಲಾದ ಪ್ರಮುಖರು ಭಾಗವಹಿಸಿದ್ದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − 5 =
Remember me
