ಕಾಬುಲ್:ತಾಲಿಬಾನ್ ವಶದಲ್ಲಿರುವ ಅಫ್ಘಾನಿಸ್ತಾನದಲ್ಲಿ ಈಗ ಉಗ್ರರ ಕಾರ್ಯಾಚರಣೆ ಚುರುಕಾಗಿದೆ. ತಾಲಿಬಾನ್ ಉಗ್ರ ಸಂಘಟನೆಯಾಗಿದ್ದು, ಅದಕ್ಕೆ ಶತ್ರುವೆನಿಸಿಕೊಂಡಿರುವ ಐಸಿಸ್-ಕೆ(ಇಸ್ಲಾಮಿಕ್ ಸ್ಟೇಟ್ – ಖುರಾಸಾನ ), ಹಕ್ಕಾನಿ ನೆಟ್​ವರ್ಕ್ ಈಗ ಪ್ರಾಬಲ್ಯ ಪಡೆಯತೊಡಗಿವೆ. ಕಾಬುಲ್ ದಾಳಿಯ ಹೊಣೆ ಹೊತ್ತಿರುವ ಐಸಿಸ್ ಕೆ- ಆತ್ಮಾಹುತಿ ದಾಳಿಕೋರರ ಚಿತ್ರ ಬಿಡುಗಡೆ ಮಾಡಿದೆ. ಈ ಬೆಳವಣಿಗೆ ಉಗ್ರರ ಒಳ ಜಗಳಕ್ಕೆ ಅಫ್ಘನ್ ವೇದಿಕೆಯಾಗುವ ಸಾಧ್ಯತೆಯನ್ನು ತೋರಿಸಿಕೊಟ್ಟಿದೆ.
ನೆರವು ನೀಡಿದ ಅಫ್ಘನ್ನರ ಪಟ್ಟಿ ತಾಲಿಬಾನಿಗಳ ಕೈಗೆ?:ಅಫ್ಘನ್​ನಲ್ಲಿ ತಾಲಿಬಾನಿಗಳು ಮತ್ತು ಅಲ್​ಕೈದಾ ಉಗ್ರ ನಿಗ್ರಹ ಕಾರ್ಯಾಚರಣೆಯಲ್ಲಿ ಕಳೆದ 20 ವರ್ಷ ನೆರವು ನೀಡಿದ್ದ ಅಫ್ಘನ್ನರ ಪಟ್ಟಿಯನ್ನು ಅಮೆರಿಕ ಅಧಿಕಾರಿಗಳು ತಾಲಿಬಾನ್ ನಾಯಕರಿಗೆ ಹಸ್ತಾಂತರಿಸಿದ್ದಾರೆ. ಮೂವರು ಅಮೆರಿಕನ್ ಮತ್ತು ಕಾಂಗ್ರೆಷನಲ್ ಅಧಿಕಾರಿಗಳು ತಾಲಿಬಾನ್ ನಾಯಕರ ಈ ವಿವೇಚನಾರಹಿತ ನಡೆಯು ಅಮೆರಿಕ ಹಿತೈಷಿ ಅಫ್ಘನ್ನರ ಪ್ರಾಣಕ್ಕೆ ಸಂಚಕಾರ ತಂದೊಡ್ಡಿದೆ. ತಾಲಿಬಾನಿಗಳು ಮನೆ ಮನೆಗೆ ನುಗ್ಗಿ ಅಮೆರಿಕ ಪರವಾಗಿ ಕೆಲಸ ಮಾಡಿದ ಅಫ್ಘನ್ನರ ಪತ್ತೆ ಮಾಡುವುದು, ಸಿಕ್ಕಿದವರನ್ನು ನಿರ್ದಯವಾಗಿ ಹತ್ಯೆ ಮಾಡುವುದು, ಅವರ ಕುಟುಂಬದ ಹೆಣ್ಮಕ್ಕಳನ್ನು ಬಲವಂತವಾಗಿ ಕೊಂಡೊಯ್ಯುತ್ತಿದ್ದ ಬಗ್ಗೆ ಈಗಾಗಲೇ ಹಲವರು ಸಾಮಾಜಿಕ ತಾಣಗಳಲ್ಲೂ ಗಮನಸೆಳೆದಿದ್ದಾರೆ.
ಬಾಂಬ್ ದಾಳಿಯ ತೆರೆಮರೆಯಲ್ಲಿ…:ಕಾಬುಲ್ ವಿಮಾನ ನಿಲ್ದಾಣದ ಹೊರಭಾಗದ ಪಹರೆಗೆ ತಾಲಿಬಾನಿಗಳನ್ನೆ ಅಮೆರಿಕ ನೆಚ್ಚಿಕೊಂಡಿದೆ. ವಿಮಾನ ನಿಲ್ದಾಣದ ಹೊರೆಗೆ ಆತ್ಮಾಹುತಿ ದಾಳಿ ನಡೆದಿರುವಂಥದ್ದು. ವಿಶೇಷವಾಗಿ ಅಮೆರಿಕ ಸೇನೆಗೆ ನೆರವಾಗುತ್ತಿದ್ದ ಅಫ್ಘನ್ ಭಾಷಾಂತರಕಾರರು ಮತ್ತು ಪಾಲುದಾರರು ಇದ್ದ ಬಸ್ ಮೇಲೆ ದಾಳಿ ನಡೆದಿತ್ತು. ಹೀಗಾಗಿಯೇ ಅಮೆರಿಕ ಯೋಧರು ಮತ್ತು ಇತರರು ಪ್ರಾಣ ತೆರಬೇಕಾಯಿತು. ಅಮೆರಿಕ ಅಧಿಕಾರಿಗಳ ವಿವೇಚನಾರಹಿತ ನಡೆ ಅಮೆರಿಕದ ಯೋಧರು ಮತ್ತು ಅವರಿಗೆ ನೆರವಾಗುತ್ತಿದ್ದ ಅಫ್ಘನ್ನರ ಪ್ರಾಣಕ್ಕೆ ಎರವಾಯಿತು ಎಂದು ಮಾಧ್ಯಮಗಳು ವರದಿ ಮಾಡಿವೆ.
ಭಾರತದಲ್ಲೂ ಇದ್ದಾರೆ ಐಸಿಸ್-ಕೆ ಉಗ್ರರು:ಕಾಬುಲ್​ನಲ್ಲಿ ಬಾಂಬ್ ದಾಳಿ ನಡೆಸಿದ ಐಸಿಸ್-ಕೆ ಸಂಘಟನೆಯ ವ್ಯಾಪ್ತಿ ಸೆಂಟ್ರಲ್ ಏಷ್ಯಾ ಆದ್ದರಿಂದ ಭಾರತದಲ್ಲೂ ಅದು ತನ್ನ ವ್ಯಾಪ್ತಿಯನ್ನು ಹರಡಿಕೊಂಡಿದೆ. ಕೇರಳ, ಮುಂಬೈ ಮತ್ತು ಇತರೆಡೆಗಳಿಂದ ಯುವ ಜನರು ಈ ಸಂಘಟನೆಯನ್ನು ಸೇರಿಕೊಂಡಿದ್ದು, ನೇಮಕಾತಿ ಇತ್ಯಾದಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಗುಪ್ತಚರ ಮೂಲಗಳು ಎಚ್ಚರಿಸಿವೆ.
ಪಾಕಿಸ್ತಾನ ತಾಲಿಬಾನ್, ಅಫ್ಘನ್ ತಾಲಿಬಾನ್ ಮತ್ತು ಉಜ್ಬೇಕಿ ಸ್ತಾನದ ಇಸ್ಲಾಮಿಕ್ ಮೂಮೆಂಟ್​ನ ಮಾಜಿ ಉಗ್ರರು ಸೇರಿ ಐಸಿಸ್-ಕೆಯನ್ನು ಹುಟ್ಟುಹಾಕಿದರು. ಹೆಸರೇ ಸೂಚಿಸುವಂತೆ ಇಸ್ಲಾಮಿಕ್ ಸ್ಟೇಟ್-ಖುರಾಸನ್ ಅಥವಾ ಐಸಿಸ್-ಕೆ ಎಂಬುದು ಇಸ್ಲಾಮಿಕ್ ಸ್ಟೇಟ್ ಅಥವಾ ಐಸಿಸ್​ನ ಒಂದು ಶಾಖೆ, ಇದನ್ನು ಮೊದಲು ಐಸಿಸ್ (ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಮತ್ತು ಸಿರಿಯಾ) ಎನ್ನಲಾಗುತ್ತಿತ್ತು. ಈ ಸಂಘಟನೆ ಅಫ್ಘಾನಿಸ್ತಾನದ ಖುರಾಸನ್ ಪ್ರಾಂತ್ಯದಲ್ಲಿ ಬೀಡುಬಿಟ್ಟಿದೆ. ಇದು ತ ನ್ನ ಖಲೀಫಾಗಿರಿಯನ್ನು ದಕ್ಷಿಣ ಏಷ್ಯಾದ ಕೇಂದ್ರ ಭಾಗದಲ್ಲಿ ಸ್ಥಾಪಿಸುವ ಗುರಿಯನ್ನು ಹೊಂದಿದೆ. ಸಿರಿಯಾ ಮತ್ತು ಇರಾಕ್​ನಲ್ಲಿ 2014-15ರಲ್ಲಿ ಇಸ್ಲಾಮಿಕ್ ಸ್ಟೇಟ್ ವಿಸ್ತರಣೆಯಾದಾಗ, ಐಸಿಸ್-ಕೆ ಪೂರ್ವ ಅಫ್ಘಾನಿಸ್ತಾನದ ಖುರಾಸನ್​ನಲ್ಲಿ ಪ್ರಬಲಗೊಂಡಿತು.
ಐಸಿಸ್-ಕೆಯ ನೇತೃತ್ವವನ್ನು 2020ರ ಏಪ್ರಿಲ್​ನಿಂದ ಶಹಾಬ್ ಅಲ್ ಮುಹಾಜಿರ್ ವಹಿಸಿಕೊಂಡಿದ್ದಾನೆ. ಈತ ಅರಬ್ ಮೂಲದವನು. ಮುಹಾಜಿರ್ ಅಲ್​ಖೈದಾದ ಪರ ತಾಲಿಬಾನ್ ಸ್ಥಾಪಿತ ಐಎಸ್​ಐ ಮತ್ತು ತಾಲಿಬಾನ್​ಗಳ ನಡುವಿನ ಕೊಂಡಿಯಾಗಿ ಕೆಲಸ ಮಾಡುತ್ತಿದ್ದ ಹಕ್ಕಾನಿ ಜಾಲದಲ್ಲಿ ಕಮಾಂಡರ್ ಆಗಿ ಕೆಲಸ ಮಾಡುತ್ತಿದ್ದ. ಈತನಿಗೂ ಮೊದಲು ಸಂಘಟನೆಯ ನೇತೃತ್ವವಹಿಸಿದ್ದಾತ ಅಬ್ದುಲ್ಲಾ ಅಲಿಯಾಸ್ ಅಸ್ಲಾಂ ಫಾರೂಕಿ. ಈತ ಪಾಕ್ ಪ್ರಜೆ. ಕಳೆದ ವರ್ಷ ಅಫ್ಘನ್ ಪಡೆಗಳ ಬಲೆಗೆ ಬಿದ್ದಿದ್ದ. ಈ ಹಿಂದೆ ಲಷ್ಕರ್ ಏ ತೊಯ್ಬಾ, ತೆಹ್ರೀಕ್-ಏ-ತಾಲಿಬಾನ್ ಸಂಘಟನೆಗಾಗಿ ಕೆಲಸ ಮಾಡಿದ್ದಾಗಿ ಒಪ್ಪಿಕೊಂಡಿದ್ದ.
ವಾಷಿಂಗ್ಟನ್ ಮೂಲದ ಥಿಂಕ್-ಟ್ಯಾಂಕ್, ದಿ ಸೆಂಟರ್ ಫಾರ್ ಸ್ಟ್ರಾಟೆಜಿಕ್ ಆಂಡ್ ಇಂಟರ್​ನ್ಯಾಷನಲ್ ಸ್ಟಡೀಸ್, ಐಸಿಸ್-ಕೆ 2017-18ರಲ್ಲಿ ಅಫ್ಘಾನಿಸ್ತಾನ-ಪಾಕಿಸ್ತಾನದಲ್ಲಿ ಸುಮಾರು 100 ದಾಳಿಗಳನ್ನು ನಾಗರಿಕರ ಮೇಲೆ ಮತ್ತು 250 ಕ್ಕೂ ಹೆಚ್ಚು ಯುಎಸ್-ಅಫ್ಘಾನ್ ಮತ್ತು ಪಾಕಿಸ್ತಾನಿ ಪಡೆಗಳ ಮೇಲೆ ನಡೆಸಿದೆ ಎಂದು ಅಂದಾಜಿಸಿದೆ. ಈ ವರ್ಷ ಜನವರಿಯಲ್ಲಿ, ಪಲಾಯನಗೊಂಡಿರುವ ಅಫ್ಘಾನ್ ಮಾಜಿ ಅಧ್ಯಕ್ಷ ಅಶ್ರಫ್ ಘನಿ ನೇತೃತ್ವದ ಸರ್ಕಾರವು ಕಾಬೂಲ್​ನಲ್ಲಿ ಅಮೆರಿಕದ ಉನ್ನತ ರಾಜತಾಂತ್ರಿಕ ರಾಸ್ ವಿಲ್ಸನ್ ಅವರನ್ನು ಹತ್ಯೆ ಮಾಡಲು ಸಂಚು ರೂಪಿಸಿದ ಹಲವು ಐಸಿಸ್-ಕೆ ಸದಸ್ಯರನ್ನು ಬಂಧಿಸಿರುವುದಾಗಿ ಹೇಳಿಕೊಂಡಿತ್ತು. ಒಂದು ಅಂದಾಜಿನ ಪ್ರಕಾರ ಐಸಿಸ್ -ಕೆ ಸಂಘಟನೆಯಲ್ಲಿ 1500 ರಿಂದ 3000 ಸದಸ್ಯರಿದ್ದಾರೆ. ಆದರೂ ಒಂದು ಸಣ್ಣ ಗುಂಪೆಂದು ನಿರ್ಲಕ್ಷಿಸಲಾಗದು. ಇವರು ಗೆರಿಲ್ಲಾ ತಂತ್ರವನ್ನು ಅಳವಡಿಸಿಕೊಂಡು ಉಗ್ರ ದಾಳಿಗಳನ್ನು ನಡೆಸುತ್ತಾರೆ.
ಕಾಶ್ಮೀರ ಗೆಲ್ಲಲು ತಾಲಿಬ್ ನೆರವು ಕೋರಿದ ಮಸೂದ್ ಅಜರ್:ಜೈಷ್ ಎ ಮೊಹಮ್ಮದ್ ಮುಖ್ಯಸ್ಥ ಮೌಲಾನಾ ಮಸೂದ್ ಅಜರ್ ಕಾಬುಲ್​ನಲ್ಲಿ ತಾಲಿಬಾನ್ ನಾಯಕ ಮುಲ್ಲಾ ಅಬ್ದುಲ್ ಘನಿ ಬರದಾರ್​ನನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾನೆ. ಮುಜಾಹಿದ್ದೀನ್​ಗಳ ಯಶಸ್ಸು ಎಂದು ಶ್ಲಾಘಿಸಿರುವ ಮಸೂದ್ ಅಜರ್, ಕಾಶ್ಮೀರ ಗೆಲ್ಲುವುದಕ್ಕೆ ತಾಲಿಬಾನ್ ನೆರವು ಬೇಕು ಎಂದು ಬರದಾರ್​ಗೆ ಮನವಿ ಮಾಡಿದ್ದಾನೆ.
ಕಾಶ್ಮೀರ ದ್ವಿಪಕ್ಷೀಯ ವಿಚಾರ:ಕಾಶ್ಮೀರದ ವಿಚಾರವನ್ನು ಭಾರತ ಮತ್ತು ಪಾಕಿಸ್ತಾನಗಳು ಬಗೆಹರಿಸಿಕೊಳ್ಳಬೇಕು. ಅದು ದ್ವಿಪಕ್ಷೀಯ ವಿಚಾರ. ಅದರಲ್ಲಿ ತಾಲಿಬಾನ್ ಹಸ್ತಕ್ಷೇಪ ಮಾಡುವುದಿಲ್ಲ. ಭಾರತದ ಜತೆಗೆ ರಾಜತಾಂತ್ರಿಕ ಸಂಬಂಧ ಬೆಳೆಸಿಕೊಂಡು ಅಫ್ಘನ್ ಜನರ ಹಿತ ಕಾಪಾಡುವುದು ತಾಲಿಬಾನ್ ಆದ್ಯತೆ ಎಂದು ತಾಲಿಬಾನ್ ವಕ್ತಾರ ಜಬೀವುಲ್ಲಾ ಮುಜಾಹಿದ್ ಸ್ಪಷ್ಟಪಡಿಸಿದ್ದಾನೆ.
ಗಡುವು ವಿಸ್ತರಣೆ ಸಾಧ್ಯವಿಲ್ಲ ಎಂದ ಉಗ್ರರು:ಯಾವುದೇ ಕಾರಣಕ್ಕೂ ಸ್ಥಳಾಂತರಕ್ಕೆ ನಿಗದಿಯಾಗಿರುವ ಆ.31ರ ಗಡುವು ವಿಸ್ತರಣೆ ಮಾಡಲಾಗದು. ಅಮೆರಿಕ ಮತ್ತು ನ್ಯಾಟೋ ಪಡೆಗಳು ಅಷ್ಟರೊಳಗೆ ಎಲ್ಲ ಕಾರ್ಯಾಚರಣೆಗಳನ್ನೂ ಕೊನೆಗೊಳಿಸ ಬೇಕು. ಸುಸೂತ್ರವಾಗಿ ಸರ್ಕಾರ ರಚನೆಗೆ ಅವಕಾಶ ಮಾಡಿಕೊಡಬೇಕು ಎಂದು ತಾಲಿಬಾನ್ ಶುಕ್ರವಾರ ಮತ್ತೆ ಸ್ಪಷ್ಟಪಡಿಸಿದೆ.
ಅಫ್ಘನ್​ನಲ್ಲಿರುವ ಇತರೆ ಉಗ್ರ ಸಂಘಟನೆಗಳು:ತೆಹ್ರೀಕ್ ಏ ತಾಲಿಬಾನ್ ಪಾಕಿಸ್ತಾನ್ ಪಾಕಿಸ್ತಾನಿ ತಾಲಿಬಾನ್ ಎಂದೇ ಗುರುತಿಸಿಕೊಂಡಿರುವ ಉಗ್ರ ಸಂಘಟನೆ. ಎರಡು ದಶಕಗಳಿಂದ ಸಕ್ರಿಯವಾಗಿದ್ದು, ಪಾಕ್ ಮೂಲದ ಉಗ್ರ ಸಂಘಟನೆಗಳ ಕೇಂದ್ರ ಬಿಂದುವಾಗಿ ಇದು ಕೆಲಸ ಮಾಡುತ್ತಿದೆ. ವಿಶ್ವಸಂಸ್ಥೆ ವರದಿ ಪ್ರಕಾರ, 2013ರಲ್ಲಿ ಇದರ ರಚನೆಯಾಗಿದ್ದು, ಪಾಕ್ ಸರ್ಕಾರದ ಜತೆಗೆ ಸಂಘರ್ಷ ನಡೆಸುತ್ತ ಬಂದಿದೆ. ಅಫ್ಘನ್ ತಾಲಿಬಾನಿಗಳ ಜತೆಗೆ ಒಪ್ಪಂದ ಮಾಡಿಕೊಂಡಿರುವ ಈ ಸಂಘಟನೆಯ ಪ್ರಮುಖ ಉಗ್ರರು ಪಾಕ್​ನಿಂದ ಅಫ್ಘನ್​ಗೆ ಸ್ಥಳಾಂತರಗೊಂಡಿದ್ದಾರೆ. ಟಿಟಿಪಿ ಮತ್ತು ಅಲ್​ಕೈದಾಕ್ಕೂ ಆಂತರಿಕ ಸಂಬಂಧ ಇದೆ. ಟಿಟಿಪಿಯಲ್ಲಿ ಸದಸ್ಯ 2,500ರಿಂದ 6,000 ಉಗ್ರರಿದ್ದಾರೆ.
ವಿಶ್ವಸಂಸ್ಥೆ ಮತ್ತು ಸಿಆರ್​ಎಸ್ ವರದಿ ಪ್ರಕಾರ, ಈಸ್ಟರ್ನ್ ತುರ್ಕಿಸ್ಥಾನ್ ಇಸ್ಲಾಮಿಕ್ ಮೂವ್ಮೆಂಟ್ (ಇಟಿಐಎಂ)ನಲ್ಲಿ ನೂರಾರು ಉಗ್ರರು ಕಾರ್ಯಾಚರಿಸುತ್ತಿದ್ದಾರೆ. ಇದು ಬಡಖ್​ಶಾನ್ ಮತ್ತು ಸುತ್ತಮುತ್ತಲಿನ ಪ್ರಾಂತ್ಯದಲ್ಲಿ ಸಕ್ರಿಯವಾಗಿದೆ. ಚೀನಾದ ಕ್ಸಿನ್​ಜಿಯಾಂಗ್ ಪ್ರಾಂತ್ಯದಲ್ಲಿ ಉಯ್ಘುರ್ ಸ್ಟೇಟ್ ಸ್ಥಾಪನೆ ಇವರ ಮುಖ್ಯ ಉದ್ದೇಶ. ಚೀನಾಕ್ಕೆ ಉಗ್ರರನ್ನು ರವಾನಿಸುವ ಕೆಲಸವನ್ನು ಇದು ಮಾಡುತ್ತಲೇ ಇದೆ. ಇಸ್ಲಾಮಿಕ್ ಮೂವ್​ವೆುಂಟ್ ಆಫ್ ಉಜ್ಬೇಕಿಸ್ತಾನ್ (ಐಎಂಯು) ಎಂಬುದು ಇನ್ನೊಂದು ಉಗ್ರ ಸಂಘಟನೆ. ಇದರಲ್ಲಿ 700 ಉಗ್ರರಿದ್ದಾರೆ. ಉಗ್ರ ಕುಟುಂಬಗಳನ್ನೂ ಇದು ಒಳಗೊಂಡಿದೆ. ಈ ಸಂಘಟನೆ ಹಿಂದೆ ಅಲ್ ಕೈದಾ ಸಂಘಟನೆಯ ಅಧೀನದಲ್ಲಿ ಕೆಲಸ ಮಾಡಿತ್ತು. ಅಲ್ಲದೆ ತಾಲಿಬಾನ್ ಪರವಾಗಿಯೂ ಕೆಲಸ ಮಾಡಿತ್ತು.
ತಪ್ಪಿತು ಮೂರನೇ ಬಾಂಬ್ ದಾಳಿ:ಕಾಬುಲ್​ನಲ್ಲಿ ವಿಮಾನ ನಿಲ್ದಾಣದ ಸಮೀಪ ಗುರುವಾರ ಐಸಿಸ್ -ಕೆ ಉಗ್ರರು ನಡೆಸಿದ ಅವಳಿ ಬಾಂಬ್ ದಾಳಿಗೆ ಹೊರತಾಗಿ, ಇನ್ನೊಂದು ಸಂಭಾವ್ಯ ಬಾಂಬ್ ದಾಳಿ ತಪ್ಪಿದೆ. ಪಾಕಿಸ್ತಾನ ಮೂಲದ ಬಾಂಬರ್ ಒಬ್ಬನನ್ನು ತಾಲಿಬಾನ್ ವಶಕ್ಕೆ ತೆಗೆದುಕೊಂಡಿದೆ. ಆತ ಹಕ್ಕಾನಿ ನೆಟ್​ವರ್ಕ್​ಗೆ ಸೇರಿದವನಾಗಿದ್ದು, ತುರ್ಕ್​ವೆುನಿಸ್ಥಾನ್ ರಾಯಭಾರ ಕಚೇರಿ ಬಳಿ ಬಾಂಬ್ ಸ್ಪೋಟಕ್ಕೆ ಸಜ್ಜಾಗಿದ್ದ ಎಂದು ತಾಲಿಬಾನ್ ಮೂಲಗಳು ತಿಳಿಸಿವೆ.
ಅಫ್ಘನ್​ನಲ್ಲಿ ಉಳಿದ ಭಾರತೀಯರೆಷ್ಟು?:ಅಫ್ಘನ್​ನಲ್ಲಿ ಇನ್ನೂ ಉಳಿದುಕೊಂಡಿರುವ ಭಾರತೀಯರ ಸಂಖ್ಯೆ ಎಷ್ಟೆಂಬ ಅಂದಾಜು ಸಿಗುತ್ತಿಲ್ಲ. ಬಹುತೇಕರನ್ನು ಅಲ್ಲಿಂದ ಸ್ಥಳಾಂತರಗೊಳಿಸಲಾಗಿದೆ. ಇನ್ನೂ ಅನೇಕರ ಸಂಪರ್ಕ ಸಾಧ್ಯವಾಗಿಲ್ಲ. ಅನೇಕರಿಗೆ ವಿದೇಶಾಂಗ ಸಚಿವಾಲಯವನ್ನು ಸಂರ್ಪಸಲು ಸಾಧ್ಯವಾಗಿಲ್ಲ. ಇದುವರೆಗೆ ಭಾರತ 6 ಪ್ರತ್ಯೇಕ ವಿಮಾನಗಳಲ್ಲಿ 550 ಜನರನ್ನು ಸ್ಥಳಾಂತರಿಸಿದೆ. ಇದರಲ್ಲಿ 260ಕ್ಕೂ ಹೆಚ್ಚು ಜನ ಭಾರತೀಯರು ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಗ್ಚಿ ಹೇಳಿದ್ದಾರೆ.
ಭಾವುಕರಾದ ಜೋ ಬೈಡೆನ್:ಅಫ್ಘನ್ ಆತ್ಮಾಹುತಿ ದಾಳಿ ಕುರಿತು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಭಾವನಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ. ಅವರ ಶರೀರ ಭಾಷೆ ಉಗ್ರ ದಾಳಿಯ ಆಘಾತವನ್ನು ಬಿಂಬಿಸಿತ್ತು. ಅಲ್ಲದೆ, ತಣ್ಣನೆಯ ಮಾತಿನಲ್ಲಿ ಪ್ರತೀಕಾರದ ಎಚ್ಚರಿಕೆಯೂ ಉಗ್ರರಿಗೆ ರವಾನೆಯಾಗಿದೆ. ‘ಜನರನ್ನು ಸ್ಥಳಾಂತರಿಸುವುದಕ್ಕೆ ಮಂಗಳ ವಾರದ ಗಡುವು ವಿಸ್ತರಿಸಬೇಕೆಂಬ ಒತ್ತಡ ಇದ್ದಾಗ್ಯೂ ಅಮೆರಿಕನ್ನರನ್ನು ನಾವು ರಕ್ಷಿಸುತ್ತೇವೆ. ಅಫ್ಘನ್ನಲ್ಲಿರುವ ನಮ್ಮ ಪಾಲುದಾರರನ್ನೂ ರಕ್ಷಿಸು ತ್ತೇವೆ. ಸ್ಥಳಾಂತರ ಕಾರ್ಯಾಚರಣೆಗೆ ಈಗ ಉಗ್ರ ದಾಳಿ ದೊಡ್ಡ ಬೆದರಿಕೆಯಾಗಿ ಎದುರಾಗಿದೆ. ಆ.31ರ ಗಡುವಿಗೆ ಬದ್ಧರಾಗಿರಬೇಕು ಎಂದು ತಾಲಿಬಾನಿಗಳೂ ಒತ್ತಡ ಹೇರುತ್ತಿದ್ದಾರೆ. ಗುರುವಾರ ನಮ್ಮ ಪಾಲಿಗೆ ಅತ್ಯಂತ ಸಂಕಷ್ಟದ ದಿನವಾಗಿತ್ತು. 13 ಯೋಧರು ಹುತಾತ್ಮರಾದರು. 12 ಯೋಧರು ಗಾಯಗೊಂಡಿದ್ದಾರೆ. ಅವರೆಲ್ಲರೂ ನಮ್ಮ ಪಾಲಿಗೆ ಹೀರೋಗಳು. ನಮಗೆ ಹಾನಿ ಉಂಟುಮಾಡಲು ಬಯಸುವ ಯಾರನ್ನೇ ಆದರೂ ಕ್ಷಮಿಸುವುದಿಲ್ಲ. ಅವರನ್ನು ನಾವು ಮರೆಯುವುದಿಲ್ಲ. ಈ ದಾಳಿ ನಡೆಸಿದ ಉಗ್ರರನ್ನು ಹುಡುಕಿ ಹುಡುಕಿ ಹೊಡೆದುರುಳಿಸುತ್ತೇವೆ ಎಂದು ಬೈಡೆನ್ ಹೇಳಿದ್ದಾರೆ.
ಲಕ್ಷಕ್ಕೂ ಹೆಚ್ಚು ಜನರ ಸ್ಥಳಾಂತರ:ಕಾಬುಲ್​ನಿಂದ 1,00,000ಕ್ಕೂ ಹೆಚ್ಚು ಜನರನ್ನು ಇದುವರೆಗೆ ಸ್ಥಳಾಂತರಿಸಲಾಗಿದೆ. ಇನ್ನು 1,000 ಅಮೆರಿಕನ್ನರು ಮತ್ತು 10 ಸಾವಿರಕ್ಕೂ ಹೆಚ್ಚು ಅಫ್ಘನ್ನರನ್ನು ಸ್ಥಳಾಂತರಗೊಳಿಸಬೇಕಾಗಿದೆ. ಇದು ಒಂದು ದೇಶದ ಅತಿದೊಡ್ಡ ಏರ್​ಲಿಫ್ಟ್ ಎಂಬ ದಾಖಲೆಯಾಗಿ ಉಳಿಯಲಿದೆ ಎಂದು ಸ್ಥಳಾಂತರ ಕಾರ್ಯಾಚರಣೆ ನೇತೃತ್ವವಹಿಸಿರುವ ಅಮೆರಿಕದ ಸೆಂಟ್ರಲ್ ಕಮಾಂಡ್ ಚೀಫ್ ಜನರಲ್ ಫ್ರಾಂಕ್ ಮೆಕೆನ್ಝಿ ಹೇಳಿದ್ದಾರೆ.
ಆತ್ಮಾಹುತಿ ದಾಳಿ ನಡೆದುದು ಹೇಗೆ?:ಕಾಬುಲ್ ವಿಮಾನ ನಿಲ್ದಾಣದ ಸಮೀಪ ನಡೆದ ಎರಡು ಆತ್ಮಾಹುತಿ ದಾಳಿಯನ್ನು ಹೇಗೆ, ಯಾವ ರೀತಿ ಮಾಡಲಾಯಿತು ಎಂಬುದು ದೃಢವಿಲ್ಲ. ಆತ್ಮಾಹುತಿ ಬಾಂಬರ್​ಗಳನ್ನು ಬಳಸಿ ಸ್ಪೋಟಿಸಲಾಗಿತ್ತೇ ಅಥವಾ ಬಾಂಬ್ ಫಿಕ್ಸ್ ಮಾಡಿ ಸ್ಪೋಟಿಸಲಾಗಿತ್ತೇ ಎಂಬುದು ಖಚಿತವಾಗಿಲ್ಲ. ಇದರಲ್ಲಿ ಐಸಿಸ್ ಸಶಸ್ತ್ರ ಉಗ್ರರು ಭಾಗವಹಿಸಿದ್ದರೇ ಎಂಬುದೂ ಖಚಿತವಾಗಿ ಗೊತ್ತಾಗಿಲ್ಲ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − two =
Remember me
