ದೇಶ ಕಂಡ ಮಹಾನ್​ ಸಂಗೀತಗಾರ ಭಾರತರತ್ನ ಪಂಡಿತ್​ ಭೀಮಸೇನ್​ ಜೋಶಿ. ಅವರು ಬದುಕಿದ್ದರೆ ಇಂದು (ಫೆ.4) ನೂರು ವರ್ಷಗಳು ತುಂಬುತ್ತಿದ್ದವು. ಸಾಧಿಸುವ ಛಲವಿದ್ದರೆ ಸಾಮಾನ್ಯನೊಬ್ಬ ಮೇರುವಿನೆತ್ತರಕ್ಕೆ ಏರಬಹುದು ಎಂಬುದಕ್ಕೆ ಅವರು ಉದಾಹರಣೆ. ಗಂಭೀರವಾದ ಸುಮಧುರ ಕಂಠದ ಜೋಶಿ ಅವರು ಹಿಂದುಸ್ತಾನಿ ಸಂಗೀತದ ಎಲ್ಲ ಪ್ರಕಾರಕ್ಕೂ ನೀಡಿದ ಕೊಡುಗೆ ಅಸಾಮಾನ್ಯವಾದುದು. ದಾಸವಾಣಿ, ಅಭಂಗ್​, ಭಜನ್​ ಇತ್ಯಾದಿಗಳ ಮೂಲಕ ಜನಸಾಮಾನ್ಯರಿಗೆ ಸಂಗೀತದ ಸವಿ ನೀಡಿದರು. ಮತ್ತೊಂದೆಡೆ ಶಾಸ್ತ್ರೀಯ ಸಂಗೀತದ ಔನ್ನತ್ಯವನ್ನೂ ತಲುಪಿ ಭಾರತೀಯ ಸಂಗೀತ ಇತಿಹಾಸದ ಪ್ರಮುಖ ಅಧ್ಯಾಯವಾದವರು. ಸಂಗೀತಪ್ರಿಯರ ಮನದಲ್ಲಿ ಶತಮಾನದ ಸಂಗೀತಗಾರನೆನಿಸಿ ಶಾಶ್ವತವಾದವರು. ಪುಣೆಯಲ್ಲಿಯೇ ನೆಲೆ ನಿಂತರೂ ಬದುಕಿನ ಕೊನೆಯವರೆಗೂ ಕನ್ನಡತನವನ್ನು ಉಳಿಸಿಕೊಂಡ ಅಪ್ಪಟ ಕನ್ನಡಿಗ ಜೋಶಿಯವರ ಜನ್ಮದಿನದ ಸಂದರ್ಭದಲ್ಲಿ ಅವರ ಕುರಿತಾಗಿ ನಾಡಿನ ಇಬ್ಬರು ಹಿರಿಯರು ಇಲ್ಲಿ ಮಾತನಾಡಿದ್ದಾರೆ.
ಸಂಗೀತದಲ್ಲಿ ನ ಭೂತೋ ನ ಭವಿಷ್ಯತಿ
ನಾನು ಗಾಯನಾಚಾರ್ಯ ಗುರುರಾವ್​ ದೇಶಪಾಂಡೆ ಅವರ ಶಿಷ್ಯ. ಅವರಿಗೆ ಪಂಡಿತ್​ ಭೀಮಸೇನ ಜೋಶಿ ಸಹ ಶಿಷ್ಯನ ತರಹ ಇದ್ದರು. 1982ರ ಡಿಸೆಂಬರ್​ನಲ್ಲಿ ನಮ್ಮ ಗುರುಗಳು ನಿಧನರಾದರು. ಅವರಿಂದ ಹಲವು ವರ್ಷಗಳ ಕಾಲ ನಾನು ಸಂಗೀತ ಕಲಿತಿದ್ದೆ. ಇನ್ನಷ್ಟು ಕಲಿಯುವುದು ಬಾಕಿ ಇತ್ತು. ಅವರ ಅಗಲಿಕೆಯಿಂದ ನಾನು ಒಬ್ಬಂಟಿಯಾದೆ. ಅನಾಥಪ್ರಜ್ಞೆ ನನ್ನನ್ನು ಆವರಿಸಿತು.
ಒಮ್ಮೆ ಭೀಮಸೇನ ಜೋಶಿ ಅವರು ಬೆಂಗಳೂರಿಗೆ ಕಾರ್ಯಕ್ರಮವೊಂದಕ್ಕೆ ಬಂದಿದ್ದಾಗ, ಅವರನ್ನು ವುಡ್​ಲ್ಯಾಂಡ್ಸ್​ ಹೋಟೆಲ್​ನಲ್ಲಿ ಭೇಟಿ ಮಾಡಿದೆ. ಸಾಮಾನ್ಯವಾಗಿ ಅವರು ಬೆಂಗಳೂರಿಗೆ ಬಂದಾಗ ಅವರ ವಾಸ್ತವ್ಯದ ವ್ಯವಸ್ಥೆ ಮಾಡುತ್ತಿದ್ದೆ. ಆ ಬಾರಿ ಅವರು ಬಂದಾಗ ದುಃಖದಲ್ಲಿ ಅವರ ಕಾಲಿಗೆ ಬಿದ್ದು, ನನ್ನ ನೋವನ್ನು ಹೇಳಿಕೊಂಡೆ. ಆಗ ಜೋಶಿಯವರು, ತಾವು ಸಂಗೀತವನ್ನು ಕಲಿಸಿಕೊಡುವುದಾಗಿ ಹೇಳಿ, ಪುಣೆಗೆ ಬರುವುದಕ್ಕೆ ತಿಳಿಸಿದರು. ಆಗ ನಾನು ಕೆನರಾ ಬ್ಯಾಂಕ್​ನಲ್ಲಿ ಕೆಲಸ ಮಾಡುತ್ತಿದ್ದೆ. ಆಗಾಗ ಪುಣೆಗೆ ಹೋಗಿ ಭೀಮಸೇನ ಜೋಶಿ ಅವರಿಂದ ಸಂಗೀತ ಕಲಿಯುತ್ತಿದ್ದೆ.
ನಾವು ಗ್ವಾಲಿಯರ್​ ರಾನಾದವರು. ಅವರು ಕಿರಾಣಾ ರಾನಾದವರು. ಅವರು ನನಗೆ 12 ವರ್ಷಗಳ ಕಾಲ ಸಂಗೀತ ಕಲಿಸಿದರು. ಹಲವು ವಿಶೇಷ ರಾಗಗಳನ್ನು ಹೇಳಿಕೊಟ್ಟರು. ಅವರೆಂದೂ ದುಡ್ಡಿಗಾಗಿ ಹಾಡುತ್ತಿರಲಿಲ್ಲ. ಕಾರ್ಯಕ್ರಮದಲ್ಲಿ ಸಂಭಾವನೆ ಕೊಟ್ಟಾಗ, ಎಷ್ಟು ಕೊಟ್ಟರು ಎಂದೂ ನೋಡುತ್ತಿರಲಿಲ್ಲ. ಅವರು ದುಡ್ಡಿಗಾಗಿ ಯಾರಿಗೂ ಸಂಗೀತ ಕಲಿಸುತ್ತಿರಲಿಲ್ಲ. ಕಲಿಯುವ ಆಸಕ್ತಿ, ಉತ್ಸಾಹ ಮತ್ತು ಪ್ರೀತಿ ಇದೆ ಎಂದಾದರೆ ಮಾತ್ರ ಹೇಳಿಕೊಡುತ್ತಿದ್ದರು. ಇನ್ನು, ಅವರು ಕಾರ್ಯಕ್ರಮದಲ್ಲಿ ಒಮ್ಮೆ ಹಾಡುವುದಕ್ಕೆ ಶುರು ಮಾಡಿದರೆ, ಮಿಕ್ಕ ವಿಷಯಗಳನ್ನು ಗಮನಕ್ಕೆ ತೆಗೆದುಕೊಳ್ಳುತ್ತಿರಲಿಲ್ಲ. “ನಾವು ಹಾಡಿದ್ದು ರಸಿಕರಿಗೆ ಮುಟ್ಟಬೇಕು, ಅವರ ಅಭಿನಂದನೆಗಳಿಂದ ಸಂಗೀತ ಬೆಳೆಯುತ್ತದೆ’ ಎಂದು ಅವರು ಬಲವಾಗಿ ನಂಬಿದ್ದರು. ಸಂಗೀತದ ಬಗ್ಗೆ ಆಸಕ್ತಿ ಇಲ್ಲದವರು ಸಹ ತಲೆದೂಗಿಸುವ ಶಕ್ತಿ ಅವರಿಗಿತ್ತು.
ಶಾಸ್ತ್ರೀಯ ಸಂಗೀತವನ್ನು, ಭಕ್ತೀಗಿತೆಯ ಮೂಲಕ ಬಹಳ ಪರಿಣಾಮಕಾರಿಯಾಗಿ ಅವರು ಪ್ರಸ್ತುತ ಪಡಿಸಿದರು. ಅವರಿಂದ ನಾನು ಸಂಗೀತವನ್ನು ಮಾತ್ರ ಕಲಿಯಲಿಲ್ಲ, ಶಿಸ್ತು ಮತ್ತು ಸರಳತೆಯನ್ನೂ ಕಲಿತೆ. ಅವರು ಬೆಂಗಳೂರಿಗೆ ಬಂದಾಗ ಆಗಾಗ ನಮ್ಮ ಮನೆಗೆ ಬರುತ್ತಿದ್ದರು. ನಮ್ಮ ಮನೆಯಲ್ಲಿ ನೆಲದ ಮೇಲೆ ಕುಳಿತು ಊಟ ಮಾಡುತ್ತಿದ್ದರು. ನಿಜಕ್ಕೂ ಸಂಗೀತ ಲೋಕದ ಪ್ರಾತಸ್ಮರಣೀಯರು ಅವರು. ಇವತ್ತು ನಾನೇನಾದರೂ ಸಂಗೀತ ಕಲಿತಿದ್ದೇನೆ ಎಂದರೆ ಅದು ಅವರ ಕೃಪೆ. ಅದೇ ಕಾರಣಕ್ಕೆ, ಪ್ರತಿ ದಿನ ಬೆಳಗ್ಗೆ ಎದ್ದ ಕೂಡಲೇ ಗಾಯನಾಚಾರ್ಯ ಗುರುರಾವ್​ ದೇಶಪಾಂಡೆ ಮತ್ತು ಪಂಡಿತ ಭೀಮಸೇನ ಜೋಶಿ ಅವರಿಗೆ ಮೊದಲು ನಮಸ್ಕಾರ ಮಾಡುತ್ತೇನೆ.
|ಪಂಡಿತ್​ ವಿನಾಯಕ ತೊರವಿ, ಪ್ರಸಿದ್ಧ ಸಂಗೀತಗಾರ
ಅವರ ಅಭಿಮಾನಿಯಲ್ಲ, ಭಕ್ತ ನಾನು
ನಾನು 12 ವರ್ಷಗಳ ಕಾಲ ಮುಂಬೈನಲ್ಲಿದ್ದೆ. ಆ ಸಂದರ್ಭದಲ್ಲಿ ಪಂಡಿತ್​ ಭೀಮಸೇನ್​ ಜೋಶಿ ಅವರ ಸಂಗೀತ ಕಾರ್ಯಕ್ರಮಕ್ಕೆ ಸ್ನೇಹಿತರೊಬ್ಬರು ನನ್ನನ್ನು ಕರೆದುಕೊಂಡು ಹೋಗಿದ್ದರು. ನಾನು ಅವರ ಅಭಿಮಾನಿ ಎಂದರೆ ಕಡಿಮೆಯಾಗುತ್ತದೆ. ನಾನು ಅವರ ಭಕ್ತ ಎಂದರೆ ಹೆಚ್ಚು ಸೂಕ್ತ.
ನನ್ನ ಕಾರ್​ನಲ್ಲಿ ಅವರ ಹಲವು ಕ್ಯಾಸೆಟ್​ಗಳಿದ್ದವು. ನಾವು “ನೋಡಿ ಸ್ವಾಮಿ ನಾವಿರೋದು ಹೀಗೆ’ ಚಿತ್ರ ಮಾಡುವ ಸಂದರ್ಭದಲ್ಲಿ, ಒಂದು ಹಾಡನ್ನು ಅವರಿಂದಲೇ ಹಾಡಿಸಬೇಕು ಎಂಬ ಆಸೆ ಇತ್ತು. ನಾನು ಮತ್ತು ಶಂಕರ್​ ಅವರನ್ನು ಕಾರ್ಯಕ್ರಮವೊಂದರಲ್ಲಿ ಭೇಟಿ ಮಾಡಿ, ಚಿತ್ರಕ್ಕಾಗಿ “ಭಾಗ್ಯದ ಲಕ್ಷ್ಮಿ ಬಾರಮ್ಮ…’ ಹಾಡಬೇಕೆಂದು ಮನವಿ ಮಾಡಿದೆವು. ಅವರು ಪ್ರೀತಿಯಿಂದ ಒಪ್ಪಿಕೊಂಡು ಹಾಡಿದರು. ಆ ನಂತರ “ಮಕ್ಕಳಿರಲವ್ವ ಮನೆತುಂಬ’ ಮಾಡಿದಾಗಲೂ ಅವರಿಂದ ಹಾಡಿಸಿದೆವು. ಅವರು ಆ ಚಿತ್ರಕ್ಕಾಗಿ “ಯಾದವ ನೀ ಬಾ ಯದುಕುಲ ನಂದನ…’ ಹಾಡಿದರು.
ಆ ನಂತರ ಅವರೊಂದಿಗಿನ ಒಡನಾಟ ಬೆಳೆಯಿತು. ಅವರು ಬೆಂಗಳೂರಿಗೆ ಬಂದಾಗ, ನಮ್ಮ ಮನೆಗೂ ಬಂದಿದ್ದರು. ಅಂಥ ಮಹಾನ್​ ಗಾಯಕರ ಪರಿಚಯವಾಗಿದ್ದು, ಅವರ ಜತೆಗೆ ಕಾಲ ಕಳೆದಿದ್ದು ನಮ್ಮ ಭಾಗ್ಯವಷ್ಟೇ ಅಲ್ಲ, ಜೀವನದ ಮರೆಯಲಾರದ ಕ್ಷಣಗಳು. ಆ ನಂತರ ಹಲವು ಸಲ ಭೇಟಿಯಾಗಿದ್ದೆವು. ನನ್ನ ಜೀವನದಲ್ಲಿ ಹರಿಕಥೆ ವಿದ್ವಾಂಸರಾದ ಭದ್ರಗಿರಿ ಅಚ್ಯುತದಾಸರು, ಬಾಲಮುರಳಿ ಕೃಷ್ಣ ಮತ್ತು ಪಂಡಿತ್​ ಭೀಮಸೇನ ಜೋಶಿ ಈ ಮೂವರ ಪರಿಚಯ ಆಗಿದ್ದು, ಅವರ ಸಂಪರ್ಕಕ್ಕೆ ಬಂದಿದ್ದು ನನ್ನ ಭಾಗ್ಯ ಎಂದುಕೊಳ್ಳುತ್ತೇನೆ. ಈ ಮೂವರ ಭಕ್ತ ನಾನು.|ಅನಂತ್​ ನಾಗ್​, ಸುಪ್ರಸಿದ್ಧ ನಟ
ಭಿಮಸೇನ ಜೋಶಿ ಬದುಕಿನ ಪಯಣ
ಜನನ: 1922, ಫೆಬ್ರವರಿ 4ಜನ್ಮಸ್ಥಳ : ಗದಗ ಜಿಲ್ಲೆಯ ರೋಣತಂದೆ -ತಾಯಿ: ಗುರುರಾಜ ಜೋಶಿ-ರಮಾಬಾಯಿ1936-ಪುಣೆ, ಮುಂಬೈ, ಗ್ವಾಲಿಯರ್​, ಕೊಲ್ಕತ್ತ, ಜಲಂಧರ್​ ಮುಂತಾದ ಕಡೆ ಸಂಗೀತಾಭ್ಯಾಸಕ್ಕಾಗಿ ಅಲೆದಾಟ.1938 ರಿಂದ 1942-ಕುಂದಗೋಳದ ಸವಾಯಿ ಗಂಧರ್ವರ ಮನೆಯಲ್ಲಿ ಗುರುಕುಲ ಪದ್ಧತಿಯಲ್ಲಿ ಶಿಣ.1941-ಸವಾಯಿ ಗಂಧರ್ವರಿಂದ ಗಂಡಾಬಂಧನ.1946-ಸವಾಯಿ ಗಂಧರ್ವರ ಷಷ್ಠ$್ಯಬ್ಧ ಸಮಾರಂಭದ ನಿಮಿತ್ತ ಪುಣೆಯಲ್ಲಿ ಗಾಯನ.1948-ಮಂಗಳೂರಿನಲ್ಲಿ ಗಾಯನ. ಶ್ರೀಧರ ಸ್ವಾಮಿಗಳ ಆಶೀರ್ವಾದ1948-49- ಕೊಲ್ಕತ್ತದಲ್ಲಿ ಪ್ರಥಮಬಾರಿಗೆ ಗಾಯನ1948-50-ಕನ್ನಡ ಸಂಗೀತ ನಾಟಕಗಳಲ್ಲಿ ನಾಯಕನ ಪಾತ್ರ, ಯಶಸ್ವಿ ಪ್ರಯೋಗಗಳು1964-ಗಾಯನಾಚಾರ್ಯ ಅಖಿಲ ಭಾರತೀಯ ಪ್ರಶಸ್ತಿ. ಅಫ್ಘಾನಿಸ್ತಾನಕ್ಕೆ ಪ್ರಥಮ ವಿದೇಶ ಯಾತ್ರೆ.1970-ಸ್ವರ ಭಾಸ್ಕರ ಪ್ರಶಸ್ತಿ1972-ಪದ್ಮಶ್ರೀ ಗೌರವಕ್ಕೆ ಭಾಜನ, ಕರ್ನಾಟಕ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಪ್ರಥಮ ಸಂತವಾಣಿ ಕಾರ್ಯಕ್ರಮ1979- ಪದ್ಮಭೂಷಣ ಗೌರವ.1999- ಪದ್ಮ ವಿಭೂಷಣ ಗೌರವ2001-ಪುಣೆ ವಿಶ್ವ ವಿದ್ಯಾಲಯದಲ್ಲಿ ಭೀಮಸೇನ್​ ಜೋಶಿ ಪೀಠ ಸ್ಥಾಪನೆ.2002-ಮಹಾರಾಷ್ಟ್ರ ಸರ್ಕಾರದ ಅತ್ಯುನ್ನತ ಪ್ರಶಸ್ತಿ ಮಹಾರಾಷ್ಟ್ರ ಭೂಷಣ ಗೌರವ. ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯದಿಂದ ಗೌರವ ಡಿ.ಲಿಟ್​ ಪ್ರದಾನ. ಕರ್ನಾಟಕ ರತ್ನ ಪ್ರದಾನ.2008-ಭಾರತ ರತ್ನ ಗೌರವ2011- ಪುಣೆಯಲ್ಲಿ ನಿಧನ
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:two × two =
Remember me
