|ರಾಘವ ಶರ್ಮ ನಿಡ್ಲೆಜಲಂಧರ್(ಪಂಜಾಬ್)
ಚುನಾವಣೆಯಲ್ಲಿ ಸೋಲೋ, ಗೆಲುವೋ ಆದರೆ ಪೂರ್ಣ ಶಕ್ತಿಮೀರಿ ಹೋರಾಡುವ ಕಲೆಯನ್ನು ಬಿಜೆಪಿ ನೋಡಿ ಕಲಿಯಬೇಕು. ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಷಾ ಯಾವ ಚುನಾವಣೆಯನ್ನೂ ಲಘುವಾಗಿ ತೆಗೆದುಕೊಳ್ಳುವುದಿಲ್ಲ. ಇದಕ್ಕೆ ಪಂಜಾಬ್ ತಾಜಾ ಉದಾಹರಣೆ. ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳಿಗೆ ಪಂಜಾಬ್​ನಿಂದಲೇ ತೀವ್ರ ಪ್ರತಿರೋಧ ವ್ಯಕ್ತವಾಯಿತು, ಒಂದು ವರ್ಷಕ್ಕಿಂತಲೂ ಹೆಚ್ಚು ದಿನಗಳ ಕಾಲ ಕೃಷಿಕರು ದಿಲ್ಲಿ ಗಡಿಯಲ್ಲಿ ಪ್ರತಿಭಟನೆ ಕುಳಿತಿದ್ದ ಪರಿಣಾಮ ಹಾಲಿ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂದೇ ಭಾವಿಸಲಾಗಿತ್ತು. ಆದರೆ, ಚುನಾವಣಾ ಕಣದಲ್ಲಿ ಬಿಜೆಪಿ ಸದ್ದು ಮಾಡಿರುವುದು ಗಮನಾರ್ಹ.
ಪ್ರಚಾರದ ಕೊನೆಯ ದಿನಗಳಲ್ಲಂತೂ ಕೇಸರಿ ನಾಯಕರ ಅಬ್ಬರ ಜೋರಾಗಿದ್ದು, ಮೋದಿ ರ್ಯಾಲಿಗಳಲ್ಲಿ ಭಾರೀ ಸಂಖ್ಯೆಯಲ್ಲಿ ಜನ ಸೇರಿದ್ದರು. ಇದು ಕಾಂಗ್ರೆಸ್, ಆಮ್ ಆದ್ಮಿ ಪಾರ್ಟಿ ಮತ್ತು ಶಿರೋಮಣಿ ಅಕಾಲಿದಳ ನಾಯಕರನ್ನೂ ತಬ್ಬಿಬ್ಬುಗೊಳಿಸಿದೆ. ಸಿಖ್ ಹಿಂದು ಮತಗಳನ್ನು ಬಿಗಿಯಾಗಿಟ್ಟುಕೊಳ್ಳಲು, ಯುವ ಮತದಾರರನ್ನು ಸೆಳೆದುಕೊಳ್ಳಲು, ಭವಿಷ್ಯದ ದೃಷ್ಟಿಯಿಂದ ಪಕ್ಷದ ಬೇರನ್ನು ಗಟ್ಟಿಗೊಳಿಸಲು ಪಕ್ಷ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತರು ಅವಿರತ ಶ್ರಮ ಹಾಕಿರುವುದು ಕಾಣುತ್ತದೆ. ಇದರಿಂದ ಈ ಚುನಾವಣೆಯಲ್ಲಿ ಪಕ್ಷದ ಮತಪಾಲನ್ನು ವೃದ್ಧಿಸಲಿದೆ ಎಂದೂ ವಿಶ್ಲೇಷಿಸಲಾಗುತ್ತಿದೆ. ರಾಷ್ಟ್ರವಾದ, ದೇಶಭಕ್ತಿ, ಹಿಂದು ಐಕ್ಯಮಂತ್ರ ಹಾಗೂ ಪಂಜಾಬ್ ಅಭಿವೃದ್ಧಿ ಹೆಸರಲ್ಲಿ ಸಿಖ್ ಹಿಂದು ಮತವರ್ಗದ ಹೆಚ್ಚಿನ ಮಂದಿ ಬಿಜೆಪಿ ಜತೆ ನಿಂತಿರುವಂತೆ ಭಾಸವಾಗುತ್ತಿದೆ.
ಅಕಾಲಿದಳ-ಬಿಜೆಪಿ ಮೈತ್ರಿಕೂಟ ರಚನೆಯಾಗಿದ್ದು. 1997ರಲ್ಲಿ. ಅದೇ ವರ್ಷ ನಡೆದ ಚುನಾವಣೆಯಲ್ಲಿ 22 ಸೀಟುಗಳಲ್ಲಿ ಸ್ಪರ್ಧಿಸಿದ್ದ ಬಿಜೆಪಿ 18ರಲ್ಲಿ ಗೆದ್ದಿತು. 2007ರಲ್ಲಿ 19 ಕ್ಷೇತ್ರ ಗೆದ್ದುಕೊಂಡ 2017ರಲ್ಲಿ ಮಾತ್ರ 3 ಸೀಟುಗಳಿಗೆ ಸೀಮಿತಗೊಂಡಿತ್ತು. ಕೃಷಿ ಕಾಯ್ದೆ ಘೊಷಣೆಯಾಗುತ್ತಿದ್ದಂತೆಯೇ ಶಿರೋಮಣಿ ಅಕಾಲಿದಳ ಎನ್​ಡಿಎ ಮೈತ್ರಿ ಕಡಿದುಕೊಂಡಿತು. ಅಕಾಲಿದಳದ ಜತೆಗಿದ್ದ ಕಾರಣವೇ ಬಿಜೆಪಿಗೆ ಸಂಘಟನೆ ವಿಸ್ತರಿಸಲು ಸಾಧ್ಯವಾಗಿರಲಿಲ್ಲ. ಹೀಗಿದ್ದರೂ, ಬಿಜೆಪಿ ಊಹೆಗೂ ಮೀರಿದ ಸಾಧನೆ ಮಾಡಿ ಸರ್ಕಾರ ರಚಿಸಲಿದೆ ಎನ್ನುತ್ತಾರೆ ಪಂಜಾಬ್ ಚುನಾವಣೆ ನಿರ್ವಹಣೆ ಜವಾಬ್ದಾರಿ ವಹಿಸಿಕೊಂಡಿದ್ದ ಕೇಂದ್ರ ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ. ಈ ಬಾರಿ ಮಾಜಿ ಸಿಎಂ ಕ್ಯಾಪ್ಟನ್ ಅಮರಿಂದರ್ ಸಿಂಗ್ ನೇತೃತ್ವದ ಪಂಜಾಬ್ ಲೋಕ ಕಾಂಗ್ರೆಸ್ (ಪಿಎಲ್​ಸಿ) ಮತ್ತು ಕಾಂಗ್ರೆಸ್​ನಿಂದ ಸಿಡಿದು ಬಂದ ನಾಯಕ ಎಸ್.ಎಸ್. ದಿಂಡ್ಸಾ ನೇತೃತ್ವದ ಶಿರೋಮಣಿ ಅಕಾಲಿದಳ ಸಂಯುಕ್ತದ ಜತೆ ಸೇರಿ ಬಿಜೆಪಿ ಮೈತ್ರಿಕೂಟ ರಚನೆ ಮಾಡಿದೆ. ಬಿಜೆಪಿ 65, ಪಿಎಲ್​ಸಿ 34 ಮತ್ತು ಉಳಿದ ಕ್ಷೇತ್ರಗಳಲ್ಲಿ ಅಕಾಲಿದಳ ಸಂಯುಕ್ತ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಪಿಎಲ್​ಸಿ 8 ಅಭ್ಯರ್ಥಿಗಳು ಬಿಜೆಪಿ ಚಿಹ್ನೆಯಲ್ಲಿ ಸ್ಪರ್ಧಿಸುತ್ತಿರುವುದರಿಂದ ಬಿಜೆಪಿ 73 ಸೀಟುಗಳಲ್ಲಿ ಸ್ಪರ್ಧಿಸುತ್ತಿದೆ ಎನ್ನಬಹುದು.
ಈ ಬಾರಿಯೂ ಡ್ರಗ್, ಮದ್ಯ, ಮರಳು ಮಾಫಿಯಾ ಸೇರಿದಂತೆ ಹಲವು ವಂಚಕ ಕೃತ್ಯಗಳಲ್ಲಿ ಅಕಾಲಿದಳ ಮುಖಂಡರ ಕೈವಾಡವಿರುವ ಬಗ್ಗೆ ಜನರಲ್ಲಿ ಈಗಲೂ ಆಕ್ರೋಶವಿದೆ. ಆದರೆ, ಬಿಜೆಪಿ ಅಕಾಲಿದಳದ ಜತೆಗಿರದ ಕಾರಣ ಕಾಂಗ್ರೆಸ್, ಆಮ್ ಆದ್ಮಿ ಪಕ್ಷ ವಿರೋಧಿಸುವ ಹಿಂದುಗಳು ಬಿಜೆಪಿ ಕಡೆ ಒಲವು ತೋರಿರುವುದು ಕಂಡುಬಂದಿದೆ.
ಕೃಷಿ ಕಾಯ್ದೆ ಹೋರಾಟಗಳು ಏನೇ ಇದ್ದರೂ ಬಿಜೆಪಿಯ ಮೂಲ ಮತದಾರರು ಪಕ್ಷದಿಂದ ದೂರವಾದಂತಿಲ್ಲ. ಪಟಿಯಾಲಾದ ಧನೌರ್ ವಿಧಾನಸಭೆ ಕ್ಷೇತ್ರದ ಬಿಜೆಪಿ ಮೀಡಿಯಾ ಪ್ರಭಾರಿ ಗುರುದೇವ್ ಸಿಂಗ್, ಪ್ರಧಾನಿ ಮೋದಿಯವರೇ ಕ್ಷಮೆ ಕೇಳಿದ್ದರಿಂದ ರೈತರು ಈಗ ಸಮಾಧಾನಗೊಂಡಿದ್ದಾರೆ. ಕೃಷಿ ಹೋರಾಟದ ವೇಳೆ ತೆರಳಲು ಸಾಧ್ಯವಾಗದ ಪ್ರದೇಶದಲ್ಲೆಲ್ಲಾ ನಮ್ಮನ್ನು ಜನರು ಸ್ವಾಗತಿಸುತ್ತಿದ್ದಾರೆ. ಪಕ್ಷದ ಸ್ಥಿತಿ ಗಣನೀಯವಾಗಿ ಸುಧಾರಿಸಿದೆ ಎಂದರು.
ಕಣದಲ್ಲಿ 1,304 ಅಭ್ಯರ್ಥಿಗಳು:ಪಂಜಾಬ್ ವಿಧಾನಸಭೆಯ ಎಲ್ಲ 117 ಸ್ಥಾನಗಳಿಗೆ ಇಂದು ಮತದಾನ ನಡೆಯುತ್ತಿದ್ದು, 1304 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಈ ಪೈಕಿ 231 ರಾಷ್ಟ್ರೀಯ ಪಕ್ಷದವರು, 250 ಪ್ರಾದೇಶಿಕ ಪಕ್ಷದವರು, 362 ಮಾನ್ಯತೆ ಇಲ್ಲದ ಪಕ್ಷದವರು ಮತ್ತು 461 ಪಕ್ಷೇತರರು. ಇವರ ಭವಿಷ್ಯವನ್ನು 2.14 ಕೋಟಿ ಮತದಾರರು ನಿರ್ಧರಿಸುವವರಿದ್ದಾರೆ. 3,48,836 ಯುವ ಮತದಾರರು ಈ ಸಲ ಮೊದಲ ಬಾರಿಗೆ ಮತ ಚಲಾಯಿಸುತ್ತಿದ್ದಾರೆ. ಹಾಲಿ ಸಿಎಂ ಚರಣಜಿತ್ ಸಿಂಗ್ ಚನ್ನಿ, ಮಾಜಿ ಸಿಎಂ ಕ್ಯಾಪ್ಟನ್ ಅಮರಿಂದರ್ ಸಿಂಗ್ ಮತ್ತು ಅಪ್​ನ ಸಿಎಂ ಅಭ್ಯರ್ಥಿಯಾದ ಭಗವಂತ್ ಮಾನ್, ಶಿರೋಮಣಿ ಅಕಾಲಿದಳದ ಹಿರಿಯ ಮಾಜಿ ಸಿಎಂ ಪ್ರಕಾಶ್ ಸಿಂಗ್ ಬಾದಲ್ (94) ಮತ್ತು ಅವರ ಮಗ ಸುಖ್ಬೀರ್ ಸಿಂಗ್ ಬಾದಲ್ ಕೂಡ ಸಿಎಂ ಹುದ್ದೆಯ ಮೇಲೆ ಕಣ್ಣಿಟ್ಟಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧುವಿಗೂ ಸಿಎಂ ಆಗುವ ಮಹತ್ವಾಕಾಂಕ್ಷೆ ಇದೆ.
ಡೇರಾಗಳ ಪ್ರಭಾವ:ಕರ್ನಾಟಕದಲ್ಲಿ ಹೇಗೆ ಸಂತರನ್ನೊಳಗೊಂಡ ಮಠ, ಮಂದಿರಗಳಿವೆಯೋ ಹಾಗೇ ಪಂಜಾಬ್​ನಲ್ಲಿ ಧಾರ್ವಿುಕ, ಆಧ್ಯಾತ್ಮಿಕ ಸಂದೇಶ ಕೊಡುವ ಮಠಗಳಿಗೆ ಡೇರಾ ಅನ್ನುತ್ತಾರೆ. ರಾಜ್ಯದ ಮಾಲ್ವಾ ಪ್ರಾಂತ್ಯದಲ್ಲಿ (69 ವಿಧಾನಸಭೆ ಕ್ಷೇತ್ರಗಳಿವೆ) ಡೇರಾಗಳ ಪ್ರಭಾವ ದೊಡ್ಡ ಪ್ರಮಾಣದಲ್ಲಿದೆ. ಡೇರಾಗಳು ರಾಜಕೀಯವಾಗಿಯೂ ಪ್ರಭಾವಶಾಲಿಯಾಗಿರುವುದರಿಂದ ರಾಜಕೀಯ ಮುಖಂಡರು ಡೇರಾಗಳಿಗೆ ಸುತ್ತು ಹಾಕುತ್ತಲೇ ಇರುತ್ತಾರೆ. ಅಚ್ಚರಿ ಎಂದರೆ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಅಪರಾಧಿಯಾಗಿರುವ ಡೇರಾ ಸಚಾ ಸೌಧಾದ ಗುರು ಬಾಬಾ ರಾಮ್ ರಹೀಮ್ ಸಿಂಗ್ ಪಂಜಾಬ್ ಚುನಾವಣೆ ಸಂದರ್ಭದಲ್ಲೇ ಪರೋಲ್ ಮೇಲೆ ಜೈಲಿನಿಂದ ಹೊರಬಂದಿದ್ದಾರೆ. ಹರಿಯಾಣ ಬಿಜೆಪಿ ಸರ್ಕಾರ ಅನುಮತಿ ನೀಡಿದ್ದರಿಂದ ಬಾಬಾ 21 ದಿನಗಳ ಪರೋಲ್ ಮೂಲಕ ಬಿಡುಗಡೆಯಾಗಿದ್ದಾರೆ. ತೆರೆಮರೆಯಲ್ಲೇ ಬಾಬಾ ಪ್ರಮುಖ ಪಕ್ಷವೊಂದಕ್ಕೆ ಬೆಂಬಲ ಸೂಚಿಸುವಂತೆ ಶಿಷ್ಯಂದಿರ ಮೂಲಕ ಅನುಯಾಯಿಗಳಿಗೆ ಸಂದೇಶ ಕಳಿಸಿದ್ದಾರೆ ಎಂಬ ಚರ್ಚೆಗಳು ನಡೆದಿದೆ. ಮೂರ್ನಾಲ್ಕು ದಿನಗಳ ಹಿಂದೆ ಪ್ರಧಾನಿ ಮೋದಿ ರಾಧಾ ಸೋಮಿ ಸತ್ಸಂಗ್ ಮುಖ್ಯಸ್ಥ ಗುರಿಂದರ್ ಸಿಂಗ್ ಧಿಲ್ಲೋನ್ ರನ್ನು ಭೇಟಿ ಮಾಡಿದ್ದರು. ಅದೇ ರೀತಿ ಸಿಎಂ ಚರಣ್​ಜಿತ್ ಚನ್ನಿ ಕೂಡ ಜಲಂಧರ್​ನಲ್ಲಿ ಜಲಂಧರ್​ನಲ್ಲಿರುವ ರವಿದಾಸಿ ಸಮುದಾಯದ ಭಕ್ತರು ಹೆಚ್ಚಿರುವ ಡೇರಾ ಬಲಾನ್​ನಲ್ಲಿ ರಾತ್ರಿ ವಾಸ್ತವ್ಯ ಹೂಡಿದ್ದರು. ಬಾಬಾ ರಹೀಂ ಸಿಂಗ್ ಚುನಾವಣೆ ವೇಳೆ ಪರೋಲ್ ನೀಡಿದ್ದನ್ನು ನೀವೇಕೆ ಕೋರ್ಟ್​ನಲ್ಲಿ ಪ್ರಶ್ನಿಸಲಿಲ್ಲ ಎಂದು ಅಮೃತಸರದಲ್ಲಿ ಸಿಕ್ಕ ಆಪ್ ಮುಖಂಡರೊಬ್ಬರಲ್ಲಿ ಕೇಳಿದ್ದಕ್ಕೆ, ಚುನಾವಣೆ ಹೊತ್ತಲ್ಲಿ ನಾವು ಡೇರಾ ಬಾಬಾಗಳ ವಿರುದ್ಧ ಹೋದರೆ ಬರುವ ಮತಗಳನ್ನೂ ಕಳೆದುಕೊಳ್ಳಬೇಕಾದೀತು. ಬಾಬಾ ರಹೀಂಗೆ ಏಕೆ ಪರೋಲ್ ನೀಡಿದ್ದಾರೆ ಎನ್ನುವುದು ಎಲ್ಲ ಪಕ್ಷಗಳಿಗೂ ಗೊತ್ತಿದೆ. ಆದರೆ, ಈಗ ಕ್ಯಾತೆ ತೆಗೆದರೆ ಚುನಾವಣೆಯಲ್ಲಿ ನಮಗೇ ನಷ್ಟ ಎಂದು ಒಪ್ಪಿಕೊಂಡರು.
ಉತ್ತರ ಪ್ರದೇಶದಲ್ಲಿ ಇಂದು ಮೂರನೇ ಹಂತದ ಮತದಾನ ನಡೆಯಲಿದೆ. 16 ಜಿಲ್ಲೆಗಳ 59 ಕ್ಷೇತ್ರಗಳ ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ. 627 ಅಭ್ಯರ್ಥಿಗಳು ಕಣದಲ್ಲಿದ್ದು, 2.15 ಕೋಟಿ ಮತದಾರರು ಮತ ಚಲಾಯಿಸಲಿದ್ದಾರೆ.
ಅಖಿಲೇಶ್ v/s ಬಘೇಲ್:ಸಮಾಜವಾದಿ ಪಾರ್ಟಿ ಅಧ್ಯಕ್ಷ ಅಖಿಲೇಶ್ ಯಾದವ್ ಅವರ ಭವಿಷ್ಯ ಇದೇ ಹಂತದಲ್ಲಿ ನಿರ್ಧಾರವಾಗಲಿದೆ. ಕರ್ಹಾಲ್ ವಿಧಾನಸಭೆ ಕ್ಷೇತ್ರದಲ್ಲಿ ಅವರು ಕಣಕ್ಕೆ ಇಳಿದಿದ್ದಾರೆ. ಇವರ ವಿರುದ್ಧ ಕೇಂದ್ರ ಸಚಿವ ಎಸ್.ಪಿ.ಸಿಂಗ್ ಬಘೇಲ್ ಅವರನ್ನು ಬಿಜೆಪಿ ಕಣಕ್ಕೆ ಇಳಿಸಿದೆ.
ಉತ್ತರ ಪ್ರದೇಶ ಚುನಾವಣೆ 80-20 ಅನುಪಾತದ ಚುನಾವಣೆ. ಸಮಾಜವಾದಿ ಪಾರ್ಟಿಯ ಚುನಾವಣಾ ಭರವಸೆಗಳು ಈಡೇರುವಂಥವಲ್ಲ. ಈ ಸಲದ ಚುನಾವಣೆಯಲ್ಲೂ ಬಿಜೆಪಿ ಶೇಕಡ 80 ಸೀಟ್ ಅಂದರೆ 300ಕ್ಕಿಂತ ಹೆಚ್ಚು ಸ್ಥಾನಗಳಲ್ಲಿ ಗೆಲುವು ದಾಖಲಿಸಲಿದೆ.
|ಯೋಗಿ ಆದಿತ್ಯನಾಥಉತ್ತರ ಪ್ರದೇಶ ಮುಖ್ಯಮಂತ್ರಿ
ಕೇಜ್ರಿವಾಲ್, ಚನ್ನಿ, ಬಾದಲ್ ವಿರುದ್ಧ ಕೇಸ್:ಪಂಜಾಬ್​ನಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕಾಗಿ ಆಮ್ ಆದ್ಮಿ ಪಾರ್ಟಿಯ ಅರವಿಂದ ಕೇಜ್ರಿವಾಲ್, ಅಕಾಲಿ ದಳದ ಸುಖಬೀರ್ ಸಿಂಗ್ ಬಾದಲ್, ಕಾಂಗ್ರೆಸ್​ನ ಚರಣಜಿತ್ ಸಿಂಗ್ ಚನ್ನಿ ವಿರುದ್ಧ ಕೇಸ್ ದಾಖಲಾಗಿವೆ.
ಮಣಿಪುರದಲ್ಲಿ ಸ್ಮೃತಿ ಇರಾನಿ ಡಾನ್ಸ್:ಮಣಿಪುರದಲ್ಲಿ ಪ್ರಚಾರ ಕಾರ್ಯ ಭರದಿಂದ ಸಾಗಿದೆ. ಕೇಂದ್ರ ಸಚಿವೆ ಸ್ಮೃತಿ ಇರಾನಿ ಇಂಫಾಲದಲ್ಲಿ ಪ್ರಚಾರ ಸಭೆಯಲ್ಲಿ ಮಣಿಪುರದ ಸಾಂಪ್ರದಾಯಿಕ ನೃತ್ಯಗಾರರ ಜತೆಗೂಡಿ ಸಾಂಕೇತಿಕವಾಗಿ ನೃತ್ಯ ಮಾಡಿದರು. ಇದರ ವಿಡಿಯೋ ವೈರಲ್ ಆಗಿದೆ.
ಎನ್​ಪಿಪಿ ಅಭ್ಯರ್ಥಿಯ ತಂದೆಯ ಹತ್ಯೆ:ಮಣಿಪುರದ ಇಂಫಾಲ ಪೂರ್ವ ಜಿಲ್ಲೆಯಲ್ಲಿ ನ್ಯಾಷನಲ್ ಪೀಪಲ್ಸ್ ಪಾರ್ಟಿ (ಎನ್​ಪಿಪಿ)ಯ ಅಭ್ಯರ್ಥಿ ಎಲ್ ಸಂಜಯ್ ಸಿಂಗ್ ಅವರ ತಂದೆಯನ್ನು ದುಷ್ಕರ್ವಿುಗಳು ಗುಂಡಿಟ್ಟು ಹತ್ಯೆ ಮಾಡಿದ್ದಾರೆ. ಪ್ರಚಾರ ಕಾರ್ಯದಲ್ಲಿ ತೊಡಗಿದ್ದ ವೇಳೆ ಈ ದುಷ್ಕೃತ್ಯ ನಡೆದಿದೆ.
ಕಬ್ಬು ತಿನ್ನುವ ಆಸೆಯಿಂದಾಗಿ ಪ್ರಾಣ ಕಳ್ಕೊಂಡ ಬಾಲಕ; ಟ್ರ್ಯಾಕ್ಟರ್​ ಅಡಿಗೆ ಸಿಲುಕಿ ಸಾವು…
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 + sixteen =
Remember me
