|ರಾಘವ ಶರ್ಮ ನಿಡ್ಲೆಸಂಗ್ರೂರ್ (ಪಂಜಾಬ್)
ಪಂಜಾಬ್​ನಲ್ಲಿ ಮಾಲ್ವಾ, ದೋಬಾ ಮತ್ತು ಮಾಜಾ ಎಂಬ ಮೂರು ಪ್ರಾಂತ್ಯಗಳಿದ್ದು, ಸಂಗ್ರೂರ್ ಲೋಕಸಭೆ (9 ವಿಧಾನಸಭೆ ಕ್ಷೇತ್ರ) ಮಾಲ್ವಾ ಪ್ರಾಂತ್ಯದಲ್ಲಿದೆ. ಒಟ್ಟು 60 ವಿಧಾನಸಭೆ ಕ್ಷೇತ್ರಗಳಿರುವ ಮಾಲ್ವಾ ಪ್ರಾಂತ್ಯದಲ್ಲಿ ಆಮ್ ಆದ್ಮಿ ಪಾರ್ಟಿ ಹವಾ ಹೆಚ್ಚಿದೆ. ಸಂಗ್ರೂರ್​ನ ಧುರಿ ಕ್ಷೇತ್ರದಿಂದ ಆಪ್ ಸಿಎಂ ಅಭ್ಯರ್ಥಿ ಭಗವಂತ ಸಿಂಗ್ ಮಾನ್ ಸ್ಪರ್ಧಿಸಿದ್ದಾರೆ. ‘ನೀವು ಇಲ್ಲಿ ಬರುವುದೇ ಬೇಡ. ನೀವು ರಾಜ್ಯದ ಉಳಿದೆಡೆ ಪ್ರಚಾರ ಮಾಡಿ’ ಎಂದು ಬೆಂಬಲಿಸುವ ಸ್ಥಳೀಯರು ನಿತ್ಯವೂ ಆಪ್ ಕಚೇರಿ ಮುಂದೆ ಜಮಾಯಿಸುತ್ತಿದ್ದಾರೆ. ಅಭ್ಯರ್ಥಿಯಾಗಿ ಘೋಷಣೆಯಾದ ಮೇಲೆ ಮಾನ್ ಇಲ್ಲಿಗೆ ಭೇಟಿ ನೀಡಿದ್ದು 2 ಸಲ ಮಾತ್ರ. ತಾಯಿ ಹರ್ಪಾಲ್ ಕೌರ್ ಮತ್ತು ಸೋದರಿ ಮನ್​ಪ್ರೀತ್ ಕೌರ್ ಮನೆ ಮನೆಗೆ ತೆರಳಿ ಕ್ಷೇತ್ರದ ಪುತ್ರನನ್ನೇ ಆಯ್ಕೆ ಮಾಡಿ ಎಂದು ಮನವಿ ಮಾಡುತ್ತಿದ್ದಾರೆ.
ಕಳೆದೆರಡು ಲೋಕಸಭೆ ಚುನಾವಣೆಯಲ್ಲಿ ಸಂಗ್ರೂರ್ ಕ್ಷೇತ್ರದಿಂದ ಆಯ್ಕೆಯಾದ ಭಗವಂತ ಮಾನ್ ಕಮಿಡಿಯನ್ ಎಂದೇ ಖ್ಯಾತಿ. ಹಾಸ್ಯ, ವಿಡಂಬನೆ, ವ್ಯಂಗ್ಯೋಕ್ತಿಗಳ ಮೂಲಕ ಜನರನ್ನು ನಕ್ಕು ನಗಿಸುತ್ತಿದ್ದ ಮಾನ್, ಕಾಂಗ್ರೆಸ್ ಮತ್ತು ಶಿರೋಮಣಿ ಅಕಾಲಿದಳವನ್ನು ಮನೆಗೆ ಕಳಿಸಲು ಪಣತೊಟ್ಟಿದ್ದಾರೆ. ‘‘ಕಳೆದ 72 ವರ್ಷಗಳಿಂದ ಕಾಂಗ್ರೆಸ್-ಅಕಾಲಿದಳ ಇಬ್ಬರನ್ನಷ್ಟೇ ನೋಡಿದೆವು. ಈ ಬಾರಿ ಮೂರನೇ ವ್ಯಕ್ತಿಗೆ ಏಕೆ ಅವಕಾಶ (ತೀಸ್ರೇ ಆದ್ಮೀ ಕೋ ಮೌಕಾ) ನೀಡಬಾರದು. ಮಕ್ಕಳ ಭವಿಷ್ಯದ ದೃಷ್ಟಿಯಿಂದ ಬದಲಾವಣೆ ಆಗಲೇಬೇಕಿದೆ’ ಎಂಬ ಸಾಮಾನ್ಯ ದನಿ ಧುರಿ ಕ್ಷೇತ್ರದ ಹಲವೆಡೆ ಕೇಳುತ್ತಿದೆ. ಪಟಿಯಾಲಾ, ಬರ್ನಾಲಾ, ಬಠಿಂಡಾ, ಫಿರೋಜ್​ಪುರ್ ಜಿಲ್ಲೆಗಳಲ್ಲೂ ಆಮ್ ಆದ್ಮಿ ಪರ ಒಲವು ಹೆಚ್ಚಾಗಿದೆ.
ಧುರಿ ಕ್ಷೇತ್ರದಿಂದ ಕಳೆದ ಬಾರಿ ಕಾಂಗ್ರೆಸ್​ನ ದಲ್ವೀರ್ ಸಿಂಗ್ ಗೋಲ್ಡಿ ಗೆದ್ದಿದ್ದರು. ಈ ಬಾರಿಯೂ ಅವರೇ ಕಣದಲ್ಲಿದ್ದಾರೆ. ಕ್ಷೇತ್ರದೆಲ್ಲೆಡೆ ದಲ್ವೀರ್ ಗೋಲ್ಡಿ ಪೋಸ್ಟರ್​ಗಳು ರಾರಾಜಿಸುತ್ತಿದ್ದರೂ, ‘ಲೆಹರ್ ಆಮ್ ಆದ್ಮೀ ಕಾ ಹೀ ಹೈ’ ಎಂಬ ಮಾತುಗಳು ಕಿವಿಗೆ ಬೀಳುತ್ತವೆ. ‘ಧುರಿಯಲ್ಲಿ ಸರಿಯಾದ ಬಸ್​ಸ್ಟಾ್ಯಂಡ್ ಇಲ್ಲ, ಉತ್ತಮ ಶಿಕ್ಷಣಕ್ಕಾಗಿ ಬೇರೆ ನಗರಗಳನ್ನು ಆಯ್ಕೆ ಮಾಡಿಕೊಳ್ಳಬೇಕಿದೆ. ನಾನು ಭ್ರಷ್ಟಾಚಾರದ ವಿರುದ್ಧ ಮತ ಹಾಕುತ್ತೇನೆ’ ಎಂದು ಆಕ್ರೋಶ ಹೊರಹಾಕುತ್ತಾರೆ ಯುವಕ ಧರಂವೀರ್ ಸಿಂಗ್.
ಬರ್ನಾಲಾ ಜಿಲ್ಲೆಯ ಬಂಟಿ ಡಾಬಾದ ಮಾಲೀಕ ರವೀಂದರ್ ಕೋಹ್ಲಿಗೆ ಭಗವಂತ ಮಾನ್ ರಾಜಕೀಯ ಶೈಲಿ ಹಿಡಿಸುವುದಿಲ್ಲ. ‘ರಾಜಕಾರಣವೇನು ಕಾಮಿಡಿ ಮಾಡಿದಂತೆಯೇ? ಆಮ್ ಆದ್ಮಿ ಪಾರ್ಟಿಯಲ್ಲಿ ಸಮರ್ಥ ನಾಯಕರೇ ಇಲ್ಲ. ಪಂಜಾಬ್ ನಶೆ ಬಗ್ಗೆ ಎಲ್ಲರೂ ಮಾತನಾಡುತ್ತಾರೆ. ಭಗವಂತ ಮಾನ್ ಸದಾ ಮದ್ಯದ ನಶೆಯಲ್ಲಿರುತ್ತಾರೆ, ಅದು ನಿಮಗೆ ಗೊತ್ತೇ’ ಎಂದು ವ್ಯಂಗ್ಯವಾಡುತ್ತಾರೆ. ಕಾಂಗ್ರೆಸ್ ಸಿಎಂ ಅಭ್ಯರ್ಥಿ ಚರಣ್​ಜಿತ್ ಚನ್ನಿ ಕೂಡ ಭಗವಂತ ಮಾನ್ ‘ಮದ್ಯ ಸೇವನೆ ಹವ್ಯಾಸ’ ಪ್ರಶ್ನಿಸಿದ್ದಾರೆ. ‘ಯಾರು ಕುಡಿಯುವುದಿಲ್ಲ ಹೇಳಿ? ಸಿಎಂ ಚನ್ನಿ ಕುಡಿಯುವುದಿಲ್ಲವೇ? ಕಾಂಗ್ರೆಸ್​ನವರೆಲ್ಲರೂ ಸನ್ಯಾಸಿಗಳಾ’ ಎಂದು ಆಕ್ರೋಶಭರಿತ ಧ್ವನಿಯಲ್ಲಿ ಪ್ರಶ್ನಿಸುತ್ತಾರೆ ರಂಗಿಯಾ ಗ್ರಾಮದ ವೀಡಿಯೋಗ್ರಾಫರ್ ವೀರೇಂದ್ರ ಸಿಂಗ್.
ಕಾಂಗ್ರೆಸ್ಸಿಗರಿಗೆ ಭಗವಂತ ಮಾನ್ ವಿರುದ್ಧ ಅಕ್ರಮದ ಆರೋಪಗಳನ್ನು ಮಾಡಲು ಸರಕು ಸಿಗುತ್ತಿಲ್ಲ. ಸಿಎಂ ಚನ್ನಿ ಆಸ್ತಿ ನೂರು ಕೋಟಿಗಿಂತಲೂ ಹೆಚ್ಚಿದ್ದರೆ ಭಗವಂತ ಮಾನ್ ಬಾಡಿಗೆ ಮನೆಯಲ್ಲಿದ್ದಾರೆ. ‘70 ವರ್ಷ ಎರಡು ಪಕ್ಷಗಳಿಗೆ ಅವಕಾಶ ಕೊಟ್ಟಿದ್ದೇವೆ. 5 ವರ್ಷ ಆಪ್​ಗೆ ನೀಡೋಣ. ಕೆಲಸಕ್ಕಿಂತ ಮಾತು ಹೆಚ್ಚಾದರೆ ಅವರನ್ನೂ ಮನೆಗೆ ಕಳಿಸುತ್ತೇವೆ’ ಎಂಬ ಎಚ್ಚರಿಕೆಯನ್ನೂ ಜನರಿಲ್ಲಿ ನೀಡುತ್ತಿದ್ದಾರೆ! ಕಾಂಗ್ರೆಸ್​ನ ಕೆಲವು ಶಾಸಕರ ಬಗ್ಗೆ ಜನರಲ್ಲಿ ಸದಭಿಪ್ರಾಯವಿರುವುದು ಸುಳ್ಳಲ್ಲ. ಸಂಗ್ರೂರ್​ನ ಕಾಂಗ್ರೆಸ್ ಶಾಸಕ ವಿಜಯ್ ಇಂದರ್ ಸಿಂಗ್ಲಾ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳಿಂದಲೇ ಗುರುತಿಸಿಕೊಂಡಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದ ‘ವಾರ್ ಹೀರೋಸ್ ಸ್ಟೇಡಿಯಂ’ ನಿರ್ಮಾಣ ಮಾಡಿರುವುದು ಸ್ಥಳೀಯರಿಗೆ ಖುಷಿ ಕೊಟ್ಟಿದೆ. ನೂರಾರು ಕ್ರೀಡಾಳುಗಳಿಗೆ ಉತ್ತಮ ತರಬೇತಿಯೂ ಲಭ್ಯವಿದೆ.
ಭಗತ್ ಸಿಂಗ್​ರಂತೆ ಹಳದಿ ಬಣ್ಣದ ಪಗಡಿಯಲ್ಲೇ ಕಾಣಿಸಿಕೊಳ್ಳುವ ಭಗವಂತ ಮಾನ್ ತಮಗೆ ಭಗತ್ ಸಿಂಗ್ ಬದುಕೇ ಸ್ಪೂರ್ತಿ ಎನ್ನುತ್ತಾರೆ. ತಾಯಿ ಜತೆ ನೆಲೆಸಿರುವ ಮಾನ್, ಪತ್ನಿ ಮತ್ತು ಮಕ್ಕಳಿಂದ ದೂರವಾಗಿದ್ದಾರೆ. 2015ರಲ್ಲಿ ಈ ಬಗ್ಗೆ ಬೇಸರದಿಂದ ಫೇಸ್​ಬುಕ್​ನಲ್ಲಿ ಬರೆದುಕೊಂಡಿದ್ದ ಮಾನ್, ‘ಕುಟುಂಬದ ಬದಲಿಗೆ ನಾನು ರಾಜ್ಯವನ್ನೇ ಆಯ್ಕೆ ಮಾಡಿಕೊಂಡೆ’ ಎಂದಿದ್ದರು. ಕಳೆದ ಬಾರಿ ಸಂಗ್ರೂರ್ ಲೋಕಸಭೆ ವ್ಯಾಪ್ತಿಯ 9 ವಿಧಾನಸಭೆ ಕ್ಷೇತ್ರಗಳಲ್ಲಿ 5ನ್ನು ಆಮ್ ಆದ್ಮಿ ಪಾರ್ಟಿ ಗೆದ್ದುಕೊಂಡಿತ್ತು. ‘ಈ ಬಾರಿ ಕನಿಷ್ಠ 8 ಸೀಟುಗಳು ಖಚಿತ’ ಎನ್ನುತ್ತಾರೆ ಮಾನ್ ಚುನಾವಣಾ ಕಾರ್ಯತಂತ್ರ ತಂಡದ ಉಸ್ತುವಾರಿ ಧಲ್ವೀರ್ ಧಿಲ್ಲೋನ್.
2017ರಲ್ಲಿ ಆಮ್ ಆದ್ಮಿ ಪಾರ್ಟಿ ಅಧಿಕಾರಕ್ಕೆ ಬಂದೇ ಬಿಟ್ಟಿತು ಎನ್ನುವಷ್ಟರ ಮಟ್ಟಿಗೆ ಅಲೆ ಎದ್ದಿತ್ತು. ಅಂತಿಮವಾಗಿ ಗೆಲುವು ಸಾಧಿಸಿದ್ದು 20 ಕ್ಷೇತ್ರಗಳಲ್ಲಿ ಮಾತ್ರ. 5 ವರ್ಷಗಳ ಹಿಂದೆ ಪಕ್ಷಕ್ಕೆ ನಾಯಕತ್ವದ ಸ್ಪಷ್ಟತೆ ಇರಲಿಲ್ಲ. ರಾಜಕೀಯ ಕೂಸು ಆಪ್​ಗೆ ಆಡಳಿತ ನಡೆಸಲು ಸಾಧ್ಯವಾಗಬಹುದೇ ಎಂಬ ಗೊಂದಲಗಳಿದ್ದವು. ಆದರೆ ಈ ಬಾರಿ ದಿಲ್ಲಿಯಲ್ಲಿ ಆಪ್ ಸರ್ಕಾರ ಜನಮನ ಗೆದ್ದಿರುವುದು ಕಣ್ಣ ಮುಂದಿದೆ. ಎರಡೂ ರಾಷ್ಟ್ರೀಯ ಪಕ್ಷಗಳು ಮಾಡದ್ದನ್ನು ಆಪ್ ದಿಲ್ಲಿಯಲ್ಲಿ ಮಾಡುತ್ತಿದೆ ಎಂದು ಪಂಜಾಬ್ ಜನರೇ ಮಾತನಾಡಿಕೊಳ್ಳುತ್ತಿದ್ದಾರೆ. ಏತನ್ಮಧ್ಯೆ, ಡ್ರಗ್ ಮಾಫಿಯಾಗಳಿಂದ ಬೇಸತ್ತಿರುವ ಜನರು ಅಕಾಲಿದಳ-ಕಾಂಗ್ರೆಸ್ ಇಬ್ಬರೂ ಮಾಫಿಯಾ ರಕ್ಷಿಸುತ್ತಾರೆ ಎಂದೇ ಮಾತನಾಡುತ್ತಾರೆ. ಇವೆಲ್ಲವೂ ಆಪ್ ಪ್ರಚಾರಾಸ್ತ್ರಗಳನ್ನು ಹರಿತಗೊಳಿಸಿವೆ. ಆಸ್ಪತ್ರೆ, ಶಾಲೆಗಳ ಅಭಿವೃದ್ಧಿ, ಉದ್ಯೋಗದ ಕನಸು ಬಿತ್ತಿರುವ ಆಪ್ ಮುಖಂಡರು, ಪರ್ಯಾಯ ಪಕ್ಷದ ಕಡೆ ಹೊರಳುವಂತೆ ಜನರನ್ನು ಪ್ರೇರೇಪಿಸುತ್ತಿದ್ದಾರೆ. ಇವೆಲ್ಲವೂ ಆಪ್ ಪರ ಮತಗಳಾಗಿ ಪರಿವರ್ತನೆಯಾದೀತೇ ಎನ್ನುವುದು ಪ್ರಶ್ನೆ.
ಕಾಂಗ್ರೆಸ್, ಎಎಪಿ ವಿರುದ್ಧ ವಾಗ್ದಾಳಿ:ಪ್ರತಿಯೊಂದಕ್ಕೂ ಸಾಕ್ಷಿ ಕೇಳುವ ಚಾಳಿಯನ್ನು ಕಾಂಗ್ರೆಸ್ ಮುಂದುವರಿಸಿದೆ. ಸರ್ಜಿಕಲ್ ದಾಳಿ ವಿಚಾರವಾಗಿ ಅದು ಸರ್ಕಾರವನ್ನು, ಪಂಜಾಬಿನ ಜನರನ್ನು ಅಷ್ಟೇ ಅಲ್ಲ ನಮ್ಮ ಸೇನೆಯನ್ನೂ ಸಂದೇಹದಿಂದಲೇ ನೋಡುತ್ತಿದೆ. ಕಾಂಗ್ರೆಸ್ ಪಕ್ಷ ಹೀಗೆ ತನ್ನ ಪಾಪ ಲೀಲೆಯನ್ನು ಮುಂದುವರಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದರು.
ಅವರು ಪಂಜಾಬ್​ನಲ್ಲಿ ಚುನಾವಣಾ ಪ್ರಚಾರ ಮುಂದುವರಿಸಿದ್ದು, ಪುಲ್ವಾಮಾದಲ್ಲಿ 2019ರಲ್ಲಿ ನಡೆದ ಉಗ್ರ ದಾಳಿಯ ಕರಾಳ ದಿನಾಚರಣೆ ಸಂದರ್ಭದಲ್ಲೂ ಕಾಂಗ್ರೆಸ್ ಇದನ್ನೇ ಮುಂದುವರಿಸಿದೆ. ಕಾಂಗ್ರೆಸ್ ನಾಯಕರು ಸರ್ಜಿಕಲ್ ದಾಳಿಯ ವಿಚಾರ ಮುಂದಿಟ್ಟು ಮತ್ತೆ ಮತ್ತೆ ಸೇನೆಗೆ, ದೇಶಕ್ಕೆ ಅವಮಾನ ಮಾಡುತ್ತಿದ್ದಾರೆ. ಪಂಜಾಬ್​ನಲ್ಲಿ ಕಾಂಗ್ರೆಸ್ ಲೂಟಿ ಮಾಡಿದೆ. ದೆಹಲಿಯಲ್ಲಿ ಆಮ್ ಆದ್ಮಿ ಪಾರ್ಟಿ ಭ್ರಷ್ಟಾಚಾರದಲ್ಲಿ ತೊಡಗಿದೆ. ಈ ಎರಡೂ ಪಕ್ಷಗಳು ಅಪರಾಧಗಳ ವಿಚಾರದಲ್ಲಿ ಪಾಲುದಾರರು. ಆಮ್ ಆದ್ಮಿ ಪಾರ್ಟಿಯು ಕಾಂಗ್ರೆಸ್ ಪಕ್ಷದ ಅಚ್ಚುಪ್ರತಿ ಎಂದು ಮೋದಿ ಲೇವಡಿ ಮಾಡಿದರು. ಕರ್ತಾರ್ ಪುರ ಸಾಹಿಬ್ ಕಾರಿಡಾರ್ ಉಲ್ಲೇಖಿಸಿದ ಪ್ರಧಾನಮಂತ್ರಿ ಮೋದಿ, ಪಂಜಾಬ್​ನಲ್ಲಿ ಈ ಸಲ ಪರಿವರ್ತನೆ ಪಕ್ಕಾ. ಇದು ಪರಿವರ್ತನೆಯ ಕಾಲ. ಪಂಜಾಬಿಯತ್​ನ ದೃಷ್ಟಿಕೋನದಲ್ಲೇ ಬಿಜೆಪಿ ಇಲ್ಲಿ ಕೆಲಸ ಮಾಡುತ್ತದೆ. ಮುಂದಿನ ಐದು ವರ್ಷದ ಅವಧಿಗೆ ಬಿಜೆಪಿ ಮಿತ್ರಕೂಟಕ್ಕೆ ಅಧಿಕಾರ ಕೊಟ್ಟರೆ, ಕೃಷಿ, ವ್ಯಾಪಾರ ಮತ್ತು ಕೈಗಾರಿಕೆ ಲಾಭದಾಯಕವಾಗಿ ರೂಪುಗೊಳ್ಳಲಿದೆ ಎಂದು ಭರವಸೆ ನೀಡಿದರು.
ರವಿದಾಸ ದೇಗುಲದಲ್ಲಿ ಪ್ರಧಾನಿ ಪ್ರಾರ್ಥನೆ:ರವಿದಾಸ ಜಯಂತಿ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ದೆಹಲಿಯ ಕರೋಲ್ ಭಾಗ್​ನಲ್ಲಿ ರವಿದಾಸ್ ವಿಶ್ರಾಮ ಧಾಮ ಮಂದಿರಕ್ಕೆ ತೆರಳಿ ಗುರು ರವಿದಾಸರಿಗೆ ಗೌರವ ಸಲ್ಲಿಸಿದರು. ಬಳಿಕ ಭಕ್ತರೊಂದಿಗೆ ಶಾಬಾದ್ ಕೀರ್ತನೆಯಲ್ಲಿ ಭಾಗವಹಿಸಿದರು. ಇದರ ವಿಡಿಯೋವನ್ನು ಅವರು ಟ್ವೀಟ್ ಮಾಡಿದ್ದಾರೆ.
ಆನ್​ಲೈನ್​ ಫ್ರೆಂಡ್​ ಜತೆ ಕಷ್ಟ ಹೇಳ್ಕೊಂಡಿದ್ದಕ್ಕೆ 86 ಲಕ್ಷ ರೂ. ಕಳ್ಕೊಂಡ; ಅದೃಷ್ಟವಶಾತ್​ ಕಿಡ್ನಿ ಉಳೀತು..
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 + twelve =
Remember me
