ನವದೆಹಲಿ:ನಿನ್ನೆ (ಡಿ.13) ಸಂಸತ್ತಿನಲ್ಲಿ ಸಂಭವಿಸಿದ ಅತಿ ದೊಡ್ಡ ಭದ್ರತಾ ಲೋಪ 20 ವರ್ಷಗಳ ಹಿಂದಿನ ಬ್ರಿಟಿಷ್​ ಪ್ರಜೆ ರಿಚರ್ಡ್ ರೀಡ್ ಘಟನೆಯನ್ನು ನೆನಪು ಮಾಡಿದೆ. ತನ್ನ ಕೃತ್ಯದಿಂದ “ಶೂ ಬಾಂಬರ್” ಎಂದೇ ಜಾಗತಿಕವಾಗಿ ಕುಖ್ಯಾತಿ ಪಡೆದಿರುವ ರಿಚರ್ಡ್​, ಶೂನಲ್ಲಿ ಸ್ಫೋಟಕಗಳನ್ನು ಅಡಗಿಸಿಟ್ಟು ವಿಮಾನವನ್ನೇ ಸ್ಫೋಟಿಸಲು ಪ್ರಯತ್ನಿಸಿದ್ದ.
2001ರಲ್ಲಿ ನಡೆದ ಘಟನೆ ಇದು. ರಿಚರ್ಡ್​ ರೀಡ್​ ಶೂನಲ್ಲಿ ಪ್ಲ್ಯಾಸ್ಟಿಕ್​ ಸ್ಫೋಟಕಗಳನ್ನು ಇಟ್ಟು ಟ್ರಾನ್ಸ್-ಅಟ್ಲಾಂಟಿಕ್ ಪ್ಯಾಸೆಂಜರ್​ ವಿಮಾನವನ್ನು ಏರಿದ್ದ. ಪ್ಯಾರಿಸ್​ನಿಂದ ಮೈಮಿಗೆ ತೆರಳುತ್ತಿದ ವಿಮಾನವನ್ನು ಮಾರ್ಗ ಮಧ್ಯದಲ್ಲಿ ಶೂ ಬಾಂಬ್​ ಸ್ಫೋಟಿಲು ಸಂಚು ಮಾಡಿದ್ದ. ಆದರೆ, ತಾನೊಂದು ಬಗೆದರೆ, ದೈವವೊಂದು ಬಗೆದಂತೆ ಎನ್ನುವ ಮಾತಿನಂತೆ ಆತನ ಪ್ರಯತ್ನ ವಿಫಲವಾಗಿತ್ತು. ಇದರಿಂದ ಪ್ರಯಾಣಿಕರೆಲ್ಲರು ನಿಟ್ಟುಸಿರು ಬಿಟ್ಟರು. ರಿಚರ್ಡ್​​ನ​ ಅನುಮಾನಾಸ್ಪದ ನಡವಳಿಕೆ ವಿಮಾನದ ಸಿಬ್ಬಂದಿಯಲ್ಲಿ ಸಂಶಯ ಹುಟ್ಟಿಸಿತು. ಬಳಿಕ ಆತನನ್ನು ವಿಚಾರಿಸಿ, ಪರಿಶೀಲನೆ ನಡೆಸಿದಾಗ ಆತನ ಹಿಂದಿದ್ದ ಉಗ್ರರ ಜಾಲ ಬಯಲಾಯಿತು.
ಈ ಮುಂಚೆ ಜೈಲಿನಲ್ಲಿ ವಾಸವಿದ್ದ ಸಮಯದಲ್ಲಿ ರಿಚರ್ಡ್​, ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡು ಅಲ್​ ಖೈದಾ ಉಗ್ರ ಸಂಘಟನೆ ಸೇರಿದ್ದ ಎಂಬುದು ಯುಎಸ್​ ತನಿಖಾ ಸಂಸ್ಥೆಗಳಿಗೆ ತದನಂತರದಲ್ಲಿ ತಿಳಿಯಿತು. ಆತನ ಶೂ ತೇವಗೊಂಡಿದ್ದರಿಂದ ಅದರಲ್ಲಿ ಬಾಂಬ್​ ಹೊತ್ತಿಕೊಳ್ಳಲಿಲ್ಲ. ವಿಮಾನ ಹಾರಾಟಕ್ಕೂ ಮುಂಚೆ ಬಿದ್ದ ಮಳೆ ಮತ್ತು ಆತನ ಪಾದ ತೇವಗೊಂಡಿದ್ದರಿಂದ ಸಂಭವನೀಯ ಭಾರಿ ದುರಂತ ತಪ್ಪಿತು. ಈ ವಿಚಾರದಲ್ಲಿ ನಿಜಕ್ಕೂ ದೇವರಿಗೆ ಧನ್ಯವಾದಗಳನ್ನು ಹೇಳಲೇಬೇಕು.
ರಿಚರ್ಡ್​ ಬಗ್ಗೆ ಗೊತ್ತಾಗುತ್ತಿದ್ದಂತೆ ಸಹ ಪ್ರಯಾಣಿಕರು ಮತ್ತು ಸಿಬ್ಬಂದಿ ಎಲ್ಲರು ಸೇರಿ ಆತನನ್ನು ಹಿಡಿದು ಸೀಟ್​ ಬೆಲ್ಟ್​ನಿಂದ ಆತನನ್ನು ನಿರ್ಬಂಧಿಸಿ, ತಕ್ಷಣ ವಿಮಾನವನ್ನು ಯುಎಸ್​ನ ಬೋಸ್ಟನ್​ನಲ್ಲಿರುವ ಲೋಗನ್​ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸ್ಥಳಾಂತರ ಮಾಡಲಾಯಿತು. ಬಳಿಕ ಆತನನ್ನು ಬಂಧಿಸಲಾಯಿತು. ರಿಚರ್ಡ್​ ಪ್ರಸ್ತುತ ಕೊಲೊರಾಡೋದ ಫೆಡರಲ್ ಜೈಲಿನಲ್ಲಿ ಶಿಕ್ಷೆಯನ್ನು ಅನುಭವಿಸುತ್ತಿದ್ದಾನೆ.
ಬುಧವಾರ (ಡಿ.13) ಶೂ ಮತ್ತೆ ಭಾರಿ ಸುದ್ದಿಯಲ್ಲಿದೆ. ಸಂಸತ್ತಿನಲ್ಲಿ ಅತಿ ದೊಡ್ಡ ಭದ್ರತಾ ಲೋಪ ಉಂಟಾಗಿದ್ದು, ಇಬ್ಬರು ಆಗಂತುಕರ ಉದ್ದೇಶಿತ ದಾಳಿಗೆ ಶೂಗಳನ್ನು ಪ್ರಮುಖ ವಾಹಕವಾಗಿ ಬಳಸಲಾಗಿದೆ. ಸಂಸತ್ತಿನಲ್ಲಿ ಹಲವು ಸುತ್ತಿನ ಭದ್ರತಾ ತಪಾಸಣೆ ನಡೆಸಲಾಗುತ್ತದೆ. ಆದರೂ ಇಬ್ಬರು ಕಿಡಿಗೇಡಿಗಳು ಹೊಗೆ ಹೊರಸೂಸುವ ಕ್ಯಾನಿಸ್ಟರ್​ಗಳನ್ನು ಒಳಗೆ ತೆಗೆದುಕೊಂಡು ಹೋಗುವಲ್ಲಿ ಯಶಸ್ವಿಯಾಗಿದ್ದು, ಕಲಾಪದ ಶೂನ್ಯ ವೇಳೆಯಲ್ಲಿ ವೀಕ್ಷಕರ ಗ್ಯಾಲರಿಯಿಂದ ಚೇಂಬರ್​ಗೆ ಜಿಗಿದು, ಸ್ಪೀಕರ್​ ಓಂ ಬಿರ್ಲಾ ಕುರ್ಚಿಯತ್ತ ತೆರಳಲು ಯತ್ನಿಸುವ ಮೂಲಕ ಸದನದ ಒಳಗೆ ಆತಂಕ ಉಂಟು ಮಾಡಿದರು. ಆದರೆ, ಆಗಂತುಕರ ಪ್ರಯತ್ನವನ್ನು ಕೆಲ ಸಂಸದರು ವಿಫಲಗೊಳಿಸಿದರು. ಅದಕ್ಕೂ ಮುನ್ನ ಕಿಡಿಗೇಡಿಗಳು ಸದನದ ಒಳಗೆ ಹಳದಿ ಬಣ್ಣ ಹೊರ ಸೂಸುವ ಕ್ಯಾನಿಸ್ಟರ್​ ಸ್ಫೋಟಿಸಿದರು. ಇದರಿಂದ ಇಡೀ ಸದನ ಹಳದಿ ಬಣ್ಣದಿಂದ ತುಂಬಿಕೊಂಡಿತ್ತು. ಈ ವೇಳೆ ಕೆಲ ಸಂಸದರು ಎದ್ನೋ ಬಿದ್ನೋ ಅಂತಾ ಸದನದಿಂದ ಹೊರಗೆ ಓಡಿ ಹೋದರು. ಆದರೆ, ಅಲ್ಲಿಯೇ ಇದ್ದ ಕೆಲ ಸಂಸದರು ಇಬ್ಬರು ಆಗಂತುಕರನ್ನು ಹಿಡಿದು ಹಿಗ್ಗಾಮುಗ್ಗಾ ಥಳಿಸಿ, ಭದ್ರತಾ ಸಿಬ್ಬಂದಿಗೆ ಒಪ್ಪಿಸಿದರು.
ನಿನ್ನೆ ಸಿಡಿಸಿದ ಹೊಗೆ ಅದೃಷ್ಟವಶಾತ್ ಹಾನಿಕರವಾಗಿರಲಿಲ್ಲ. ಆದಾಗ್ಯೂ, 22 ವರ್ಷಗಳ ಹಿಂದೆ ಅಂದರೆ 2001ರ ಡಿಸೆಂಬರ್​ 13ರಂದು ಸಂಸತ್ತಿನ ಮೇಲೆ ನಡೆದ ಭಯೋತ್ಪಾದಕ ದಾಳಿಯ ನಂತರ ಸಂಸತ್ತಿನಲ್ಲಿ ಭಾರಿ ಭದ್ರತೆಯನ್ನು ನಿಯೋಜಿಸಲಾಗಿದೆ. ಅನೇಕ ಸುತ್ತಿನ ತಪಾಸಣೆಗಳು ನಿತ್ಯವು ನಡೆಯುತ್ತದೆ. ಆದರೆ, 22 ವರ್ಷಗಳ ಬಳಿಕ ಅದೇ ದಿನದಂದು ಮತ್ತೊಂದು ಭಯಾನಕ ಘಟನೆ ನಡೆದಿರುವುದು ಸಂಸತ್ತಿನ ಭದ್ರತಾ ವ್ಯವಸ್ಥೆಯ ಮೇಲಿನ ನಂಬಿಕೆಯನ್ನು ಘಾಸಿಗೊಳಿಸಿದೆ. ಕಿಡಿಗೇಡಿಗಳು ಕ್ಯಾನಿಸ್ಟರ್​ಗಳನ್ನು ಶೂನಲ್ಲಿ ಮರೆಮಾಚಿಕೊಂಡು, ವಿಸಿಟರ್​ ಪಾಸ್​ ಮೂಲಕ ಪ್ರೇಕ್ಷಕರ ಗ್ಯಾಲರಿಯನ್ನು ತಲುಪಿದ್ದಾರೆ. ಒಂದು ವೇಳೆ ಸ್ಫೋಟಕ ವಸ್ತು ಅಪಾಯಕಾರಿಯಾಗಿದ್ದರೆ ಏನಾಗಿರುತ್ತಿತ್ತು ಎಂದು ಊಹೆ ಮಾಡಿಕೊಳ್ಳುವುದು ಕೂಡ ಭಯಾನಕವಾಗಿದೆ.
ಇನ್ನು ಕುಖ್ಯಾತ ರಿಚರ್ಡ್​ ರಿಡ್​ನ ಶೂ ಬಾಂಬ್ ಪ್ರಯತ್ನವು ಅಮೆರಿಕದಲ್ಲಿ ಪ್ಯಾಸೆಂಜರ್​ ವಿಮಾನವನ್ನು ಹೈಜಾಕ್​ ಮಾಡಿ 2001ರ ಸೆ. 11ರಂದು ಅವಳಿ ಕಟ್ಟಡಗಳ ಮೇಲೆ ನಡೆದ ಉಗ್ರರ ದಾಳಿಯ ತಿಂಗಳುಗಳ ಬಳಿಕ ನಡೆಯಿತು. ಈ ಘಟನೆ ವಿಮಾನ ನಿಲ್ದಾಣಗಳಲ್ಲಿನ ಭದ್ರತಾ ನಿಯಮಗಳನ್ನು ಕಠಿಣವಾಗಿ ಬದಲಿಸಿತು. ಅಮೆರಿಕದಲ್ಲಿನ ಎಲ್ಲ ವಿಮಾನ ನಿಲ್ದಾಣಗಳು ಮತ್ತು ಯುರೋಪ್‌ನಾದ್ಯಂತ ಅನೇಕ ವಿಮಾನ ನಿಲ್ದಾಣಗಳು ಭದ್ರತಾ ತಪಾಸಣೆಯ ಸಮಯದಲ್ಲಿ ಪ್ರಯಾಣಿಕರು ತಮ್ಮ ಶೂಗಳನ್ನು ತೆಗೆದುಹಾಕಬೇಕಿದೆ ಮತ್ತು PETN ನಂತಹ ಪ್ಲಾಸ್ಟಿಕ್ ಸ್ಫೋಟಕಗಳ ಉಪಸ್ಥಿತಿಯನ್ನು ಗುರುತಿಸಲು ಸ್ಕ್ಯಾನರ್‌ಗಳನ್ನು ಬಳಸಲಾಗುತ್ತದೆ. ಅಲ್ಲದೆ, ದೇಶದ ಅನೇಕ ಪ್ರಮುಖ ಕಟ್ಟಡಗಳಿಗೆ ಭೇಟಿ ನೀಡುವವರನ್ನು ವಿಮಾನ ನಿಲ್ದಾಣ ಶೈಲಿಯಲ್ಲಿ ಭದ್ರತಾ ತಪಾಸಣೆಗಳನ್ನು ನಡೆಸಲಾಗುತ್ತದೆ.
ಭಾರತದ ಸಂಸತ್ತಿನಲ್ಲೂ ಡೋರ್ ಫ್ರೇಮ್ ಮೆಟಲ್ ಡಿಟೆಕ್ಟರ್‌ಗಳು, ಪಾಸ್ ಸ್ಕ್ಯಾನರ್‌ಗಳು ಮತ್ತು ಎಕ್ಸ್-ರೇ ಯಂತ್ರಗಳನ್ನು ನಿಯೋಜಿಸಲಾಗಿದೆ. ಭದ್ರತಾ ಸಿಬ್ಬಂದಿ ಎಲ್ಲಾ ಸಂದರ್ಶಕರನ್ನು ಎರಡು ಪ್ರವೇಶ ಬಿಂದುಗಳಲ್ಲಿ ಪರೀಕ್ಷಿಸಿ, ಒಳಗಡೆ ಬಿಡುತ್ತಾರೆ. ಆದಾಗ್ಯೂ, ತಪಾಸಣೆ ಮಾಡುವ ಸಿಬ್ಬಂದಿ ಸಂದರ್ಶಕರ ಬೂಟುಗಳ ಒಳಭಾಗವನ್ನು ಅಪರೂಪವಾಗಿ ಪರಿಶೀಲಿಸುತ್ತಾರೆ. ರಿಚರ್ಡ್​ ರೀಡ್​ ಪ್ರಕರಣ ಕಣ್ಣ ಮುಂದೆ ಇದ್ದರೂ ಶೂನೊಳಗೆ ಪರಿಶೀಲನೆ ನಡೆಸುವುದು ತುಂಬಾ ವಿರಳವಾಗಿದೆ. ಶೂ ಒಳಗಿರುವ ಪ್ರತ್ಯೇಕ ಟ್ರೇ ಅನ್ನು ಸಂಪೂರ್ಣವಾಗಿ ತೆಗೆದು ಒಳಗೆ ಸ್ಫೋಟಕಗಳನ್ನು ಇಡಬಹುದು ಎಂಬುದನ್ನು ರಿಚರ್ಡ್​ ರಿಡ್​ ಪ್ರಕರಣ ತೋರಿಸಿದ್ದು, ಈ ಬಗ್ಗೆ ಎಚ್ಚರಿಕೆ ವಹಿಸುವುದು ಅಗತ್ಯವಾಗಿದೆ.
ಅಂದಹಾಗೆ ನಿನ್ನೆ ನಡೆದ ಘಟನೆಯು ಸಂಸತ್ತಿನಲ್ಲಿ ಪ್ರವೇಶ ಪೂರ್ವ ಸ್ಕ್ರೀನಿಂಗ್‌ಗಾಗಿ ಸಂದರ್ಶಕರು ತಮ್ಮ ಬೂಟುಗಳನ್ನು ತೆಗೆದುಹಾಕುವುದನ್ನು ಕಡ್ಡಾಯಗೊಳಿಸುವುದು ಸೇರಿದಂತೆ ಮತ್ತಷ್ಟು ಭದ್ರತಾ ಪರಿಷ್ಕರಣೆಯನ್ನು ಪ್ರಚೋದಿಸುತ್ತದೆಯೇ ಎಂಬುದನ್ನು ಕಾದು ನೋಡಬೇಕಾಗಿದೆ. ಅಲ್ಲದೆ, ಇತರ ಆಯ್ಕೆಗಳಾದ ಸಂದರ್ಶಕರು ಮತ್ತು ಸಂಸದರ ಸಿಬ್ಬಂದಿ ಪ್ರವೇಶದ ಮೇಲೆ ಬಿಗಿಯಾದ ನಿರ್ಬಂಧಗಳು ಮತ್ತು ಪೂರ್ಣ ದೇಹದ ಸ್ಕ್ಯಾನರ್‌ಗಳ ನಿಯೋಜನೆ ಬಗ್ಗೆಯೂ ಈಗಾಗಲೇ ಚರ್ಚಿಸಲಾಗುತ್ತಿದೆ.
ಇದೇ ಸಂದರ್ಭದಲ್ಲಿ ಲೋಕಸಭೆಯ ಸಚಿವಾಲಯದ ಮನವಿಯ ಮೇರೆಗೆ ಗೃಹ ಸಚಿವಾಲಯವು ಬುಧವಾರದ ಲೋಕಸಭಾ ಭದ್ರತಾ ಉಲ್ಲಂಘನೆಯ ಬಗ್ಗೆ ತನಿಖೆಗೆ ಆದೇಶಿಸಿದೆ. ಸಿಆರ್‌ಪಿಎಫ್ ಡಿಜಿ ಅನೀಶ್ ದಯಾಳ್ ಸಿಂಗ್ ನೇತೃತ್ವದ ತನಿಖಾ ಸಮಿತಿ ಮತ್ತು ಇತರ ಭದ್ರತಾ ಏಜೆನ್ಸಿಗಳ ಸದಸ್ಯರು ಮತ್ತು ತಜ್ಞರನ್ನು ಒಳಗೊಂಡಿರುವ ತನಿಖಾ ಸಮಿತಿಯು ಭದ್ರತಾ ಲೋಪಕ್ಕೆ ಕಾರಣವಾಗಿರುವ ಅಂಶಗಳು ಬಗ್ಗೆ ತನಿಖೆ ಮಾಡುತ್ತಿದೆ.(ಏಜೆನ್ಸೀಸ್​)
ಸಂಸತ್​ನಲ್ಲಿ ಭದ್ರತಾ ಲೋಪಕ್ಕೆ ಕ್ರಮ; ಸದನದ ಗದ್ದಲದ ನಡುವೆಯೇ 8 ಸಿಬ್ಬಂದಿ ಅಮಾನತು

ಐಟಿ ಉದ್ಯೋಗಿ ಗಿಂತ ಹೆಚ್ಚು ಸಂಪಾದನೆ ಮಾಡ್ತಾನೆ ಈ ಪಾನಿಪುರಿ ಬಯ್ಯಾ!; ಈತನ ದಿನದ ಆದಾಯ ತಿಳಿದರೆ ಶಾಕ್ ಆಗುತ್ತೀರಿ!

Gold, Silver Price; ಗಗನಕ್ಕೇರಿದ್ದ ಚಿನ್ನದ ಬೆಲೆ..ಈಗ ಎಷ್ಟಿದೆ ನೋಡಿ 10 ಗ್ರಾಂ ಚಿನ್ನದ ದರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen + 19 =
Remember me
