ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಎಲ್ಲ ಪ್ರದೇಶಗಳ ಜನರಿಗೂ ಸಮಾನವಾದ ಅಭಿವೃದ್ಧಿ, ಸೌಲಭ್ಯ ದೊರಕಿಸಿಕೊಡಬೇಕಾದಲ್ಲಿ ಬಿಬಿಎಂಪಿಯನ್ನು ವಿಭಜಿಸಿ 5 ಪಾಲಿಕೆಗಳನ್ನಾಗಿ ರಚಿಸಲೇಬೇಕೆಂಬ ವಾದವನ್ನು ಕಾಂಗ್ರೆಸ್ ನಾಯಕರು ಮುಂದಿಡುತ್ತಿದ್ದಾರೆ. ಆದರೆ ಸರ್ಕಾರದ ಈ ಪ್ರಸ್ತಾಪ ಆಡಳಿತ ದೃಷ್ಟಿಕೋನವನ್ನೇ ಹೊಂದಿಲ್ಲ ಎಂದು ತಗಾದೆ ತೆಗೆದಿರುವ ಬಿಜೆಪಿ, ರಾಜಕೀಯ ಅಧಿಕಾರವನ್ನು ಕಾಂಗ್ರೆಸ್​ಗೆ ಬಳುವಳಿಯಾಗಿ ನೀಡುವ ದುರುದ್ದೇಶವೇ ವಿಭಜನೆ ಮಂತ್ರದ ಹಿಂದಿರುವ ತಂತ್ರ ಎಂದು ಕಿಡಿಕಾರಿದೆ.
ಬಿಬಿಎಂಪಿ ವಿಭಜನೆಯಿಂದ ನಾಗರಿಕರು ಸೌಲಭ್ಯ ಪಡೆಯುವ ಬದಲು ಸಮಸ್ಯೆಗಳ ಸುಳಿಯಲ್ಲಿ ಸಿಲುಕಲಿದ್ದಾರೆಂದು ಬಿಜೆಪಿ ಪ್ರಬಲವಾಗಿ ಪ್ರತಿಪಾದಿಸುತ್ತಿದೆ. ಇದಕ್ಕೆ ಜೆಡಿಎಸ್ ಕೂಡ ದನಿಗೂಡಿಸಿದೆ. ಈ ಎರಡೂ ಪಕ್ಷಗಳ ನಿಲುವನ್ನು ಒಪ್ಪದ ಕಾಂಗ್ರೆಸ್, ಆಡಳಿತ ವಿಕೇಂದ್ರೀಕರಣದ ಮೂಲಕ ಕಾಲಮಿತಿಯಲ್ಲಿ ಸಾರ್ವಜನಿಕರಿಗೆ ಅಭಿವೃದ್ಧಿಯ ಲಾಭ ತಲುಪಿಸಬಹುದಾದರೆ ವಿರೋಧ ಮಾಡುವುದೇಕೆಂದು ಪ್ರತಿ ಸವಾಲು ಹಾಕಿದೆ.
ಅಭಿವೃದ್ಧಿ ಬೇಕು, ವಿಭಜನೆ ಬೇಡವೇ?: 800 ಚದರ ಕಿ.ಮೀ ವಿಸ್ತೀರ್ಣ ಹೊಂದಿರುವ ಬಿಬಿಎಂಪಿಯ ಜನಸಂಖ್ಯೆ 1 ಕೋಟಿ ದಾಟಿದೆ. ಈ ಬೃಹತ್ ನಗರದ ಅಭಿವೃದ್ಧಿಗೆ ಬೃಹತ್ ಮೊತ್ತದ ಆರ್ಥಿಕ ಸಂಪನ್ಮೂಲ ಅಗತ್ಯವಿದೆ. ಇದನ್ನು ಸಂಗ್ರಹಿಸಿ ವ್ಯವಸ್ಥಿತವಾಗಿ ವಿನಿಯೋಗಿಸಲು ಹಾಲಿ ವ್ಯವಸ್ಥೆಯಲ್ಲಿ ಸಾಧ್ಯವಾಗುತ್ತಿಲ್ಲ. ಕಾಮಗಾರಿ ಕೈಗೊಳ್ಳುವ ವಿಧಾನವೇ ಬದಲಾಗಬೇಕು. ಬಿಗಿಯಾದ ಆಡಳಿತದ ಮೂಲಕ ವ್ಯವಸ್ಥಿತವಾಗಿ ಅಭಿವೃದ್ಧಿ ಕೈಗೊಳ್ಳಲು ಸಾಧ್ಯವಿದೆ. ಅಭಿವೃದ್ಧಿ ಬೇಕಾದಲ್ಲಿ ಹೊಸ ವ್ಯವಸ್ಥೆಯಡಿ ವಿಭಜನೆಗೆ ಸಿದ್ಧರಿರಬೇಕು.
ಬದಲಾವಣೆ ಜಗದ ನಿಯಮ ಎಂಬ ಮಾತಿದೆ. ಇದನ್ನು ಸರಿಯಾಗಿ ಅರ್ಥೈಸಿಕೊಳ್ಳದ ಪ್ರತಿಪಕ್ಷ ಕೇವಲ ವಿರೋಧಿಸುವ ಉದ್ದೇಶದಿಂದಷ್ಟೇ ವಿರೋಧ ಮಾಡುವುದು ಸರಿಯಲ್ಲ. ಶಾಸಕರು ಮೊದಲು ಬದಲಾವನೆಗೆ ತೆರೆದುಕೊಳ್ಳಬೇಕು. ಲೋಪ-ದೋಷಗಳಿದ್ದಲ್ಲಿ ತಿದ್ದಿಕೊಳ್ಳಲು ಅವಕಾಶವಿರುವಾಗ ವಿಭಜನೆ ಪ್ರಸ್ತಾಪವನ್ನು ಒಪ್ಪಿಕೊಳ್ಳಬೇಕು ಎಂದು ಕಾಂಗ್ರೆಸ್​ನ ಹಲವು ಶಾಸಕರು ಪ್ರತಿಪಾದಿಸಿದ್ದಾರೆ.
ಆಡಳಿತ ವಿಕೇಂದ್ರೀಕರಣ ಆಗಲೇಬೇಕು. ಆದರೆ, ಒಂದು ವ್ಯವಸ್ಥೆ ಸುಧಾರಿಸಲು ಎಲ್ಲ ರೀತಿಯ ಅವಕಾಶ ಇರುವಾಗ ವಿಭಜನೆಗೆ ಮಾತ್ರ ಏಕೆ ಈ ಆತುರ ಎಂದು ಕಾಂಗ್ರೆಸ್ ನಾಯಕರನ್ನು ಬಿಜೆಪಿ ಕುಟುಕಿದೆ. ಹಾಲಿ ಬಿಬಿಎಂಪಿಯ 8 ವಲಯಗಳು ಪೂರ್ಣವಾಗಿ ಅಭಿವೃದ್ಧಿ ಹೊಂದಲು ಇನ್ನೂ 1 ದಶಕ ಬೇಕಿದೆ. ಹೀಗಿರುವಾಗ ಮತ್ತೆ ಹೆಚ್ಚುವರಿ ಪ್ರದೇಶ ಸೇರಿಸಿಕೊಂಡು 5 ಪಾಲಿಕೆ ಮಾಡಿದರೆ ಅಭಿವೃದ್ಧಿ ಹೇಗೆ ಸಾಧ್ಯ? ಬ್ರಾ್ಯಂಡ್ ಬೆಂಗಳೂರು ಮಾಡುವುದಾಗಿ ಹೇಳಿ ಬ್ಯಾಡ್ ಬೆಂಗಳೂರು ಮಾಡಲಾಗಿದೆ. ರಾಜಧಾನಿ ಬೆಂಗಳೂರು ಅಭಿವೃದ್ಧಿಗೆ ಕೋಟಿ ಕೋಟಿ ಹಣ ನೀಡುವುದಾಗಿ ವಾಗ್ದಾನ ನೀಡಿದ್ದ ಕಾಂಗ್ರೆಸ್ ಸರ್ಕಾರ ತನ್ನ 1 ವರ್ಷದ ಅವಧಿಯಲ್ಲಿ ಎಷ್ಟು ಅನುದಾನ ನೀಡಿದೆ. ಆದಾಯ ಇಲ್ಲದೆ ಸಾಲ ಮಾಡುವ ಪ್ರವೃತ್ತಿಯನ್ನು ಹೊಸ ಪಾಲಿಕೆಗಳ ಹೆಗಲೇರಿಸಿ ಅದರ ಭಾರದಿಂದ ವ್ಯವಸ್ಥೆ ಹಾಳಾಗದೆ ಇರದು. ಈ ಸರ್ಕಸ್ ಬಿಟ್ಟು ಬಿಬಿಎಂಪಿಯನ್ನು ಇನ್ನಷ್ಟು ಮೇಲ್ದರ್ಜೆಗೇರಿಸುವ ಸಂಕಲ್ಪ ಕೈಗೊಂಡು ಬೇಗನೆ ಚುನಾವಣೆ ನಡೆಸಲು ಸರ್ಕಾರ ಮುಂದಾಗಲಿ ಎಂದು ಬಿಜೆಪಿ ಶಾಸಕರು ಸವಾಲು ಹಾಕಿದ್ದಾರೆ.
ಬಿಬಿಎಂಪಿಯನ್ನು ಐದು ವಿಭಾಗಗಳಾಗಿ ವಿಭಜಿಸುವ ಸರ್ಕಾರದ ನಿಲುವು ರಾಜಕೀಯ ಹತಾಶೆ ಮತ್ತು ಕುತಂತ್ರದಿಂದ ಕೂಡಿದೆ. ಬೆಂಗಳೂರನ್ನು ರಾಜಕೀಯವಾಗಿ ತಮ್ಮ ವಶಕ್ಕೆ ಪಡೆಯುವ ದುರುದ್ದೇಶದಿಂದ ಕಾಂಗ್ರೆಸ್ ಈ ತೀರ್ವನಕ್ಕೆ ಮುಂದಾಗಿರಬಹುದು. ಇತ್ತೀಚಿನ ಲೋಕಸಭೆ ಚುನಾವಣೆಯಲ್ಲಿ ನಗರದ 4 ಕ್ಷೇತ್ರಗಳಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಪ್ರಚಂಡ ದಿಗ್ವಿಜಯ ಸಾಧಿಸಿದೆ.

ಬಿಬಿಎಂಪಿ ಚುನಾವಣೆ ನಡೆದರೂ ನಮ್ಮ ಮೈತ್ರಿಯೇ ಅಧಿಕಾರಕ್ಕೆ ಬರುವುದು ನಿಶ್ಚಿತ. ಈ ಅವಮಾನದಿಂದ ತಪ್ಪಿಸಿಕೊಳ್ಳಲು ಬಿಬಿಎಂಪಿಯನ್ನು ಅವೈಜ್ಞಾನಿಕವಾಗಿ ಐದು ತುಂಡು ಮಾಡಿ, ಹೊಸದಾಗಿ 5 ಪಾಲಿಕೆ ರಚಿಸುವ ಹುನ್ನಾರ ಕಾಂಗ್ರೆಸ್​ಗೆ ಇದ್ದಂತಿದೆ. ಈ ಮೂಲಕ ಕನಿಷ್ಠ ಒಂದು ವಿಭಾಗದಲ್ಲಾದರೂ ಅಧಿಕಾರಕ್ಕೆ ಬರಬಹುದು ಎಂಬ ಹುನ್ನಾರ ಇದ್ದಂತಿದೆ. ಈ ಬಗ್ಗೆ ರಾಜ್ಯ ಸರಕಾರ ವಿಧಾನಮಂಡಲದಲ್ಲಿ ಮಸೂದೆಯನ್ನು ಮಂಡಿಸಿದರೆ ಬಿಜೆಪಿ-ಜೆಡಿಎಸ್ ವಿರೋಧಿಸಲಿವೆ. ಜನ ಕೂಡ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್​ಗೆ ಪಾಠ ಕಲಿಸಲಿದ್ದಾರೆ.
– ಟಿ.ಎ.ಸರವಣ, ವಿಧಾನ ಪರಿಷತ್ ಸದಸ್ಯ
| ಮುನಿರಾಜು ಎಸ್ ದಾಸರಹಳ್ಳಿ ಕ್ಷೇತ್ರದ ಶಾಸಕ
ಬಿಬಿಎಂಪಿ ವಿಭಜನೆಗೆ ಶಾಸಕನಾಗಿ ನನ್ನ ಸಂಪೂರ್ಣ ವಿರೋಧ ಇದೆ. ಒಂದೇ ಪಾಲಿಕೆಯಾಗಿ ಮುಂದುವರಿಯುವುದು ಅವಶ್ಯಕ. ಮೇಯರ್ ಒಬ್ಬರೇ ಇರಬೇಕು. ಆಡಳಿತ ದೃಷ್ಟಿಯಿಂದ ವಲಯದ ಅಧಿಕಾರಿಗಳಿಗೆ ಹೆಚ್ಚಿನ ಅಧಿಕಾರ ನೀಡಲಿ. ಈ ಸೂತ್ರವನ್ನು ಅನುಸರಿಸದ ಸರ್ಕಾರ ಈಗ 3 ಅಥವಾ 5 ವಿಭಾಗ ಮಾಡುವುದಾಗಿ ಹೇಳುತ್ತಿದೆ. ಇದರ ಹಿಂದೆ ಕಾಂಗ್ರೆಸ್ ದುರುದ್ದೇಶ ಅಡಗಿದೆ.

ಬೆಂಗಳೂರು ಮೊದಲಿನಿಂದಲೂ ಕಾಂಗ್ರೆಸ್​ಗೆ ವಿರೋಧ. ಈತ್ತೀಚಿನ ಲೋಕಸಭಾ ಚುನಾವಣೆಯಲ್ಲೂ 4 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಬಿಬಿಎಂಪಿ ಚುನಾವಣೆ ನಡೆಸಿದರೆ ನಮ್ಮ ಪಕ್ಷವೇ ಹೆಚ್ಚು ಸ್ಥಾನಗಳಲ್ಲಿ ಜಯಭೇರಿ ಬಾರಿಸಲಿದೆ. ಸಿದ್ದರಾಮಯ್ಯ ಮೊದಲ ಬಾರಿ ಸಿಎಂ ಆದಾಗಲೂ ಕಾಂಗ್ರೆಸ್ 78 ಸ್ಥಾನಗಳಲ್ಲಷ್ಟೇ ಗೆದ್ದಿತ್ತು ಎಂಬುದನ್ನು ಮನಗಾಣಬೇಕು. ಆಡಳಿತ ದೃಷ್ಟಿಯಿಂದ ಬಿಬಿಎಂಪಿಯನ್ನು ವಿಭಜನೆ ಮಾಡುವ ಪ್ರಸ್ತಾಪ ಮುಂದಿಡಲಾಗಿದೆ. ಹಾಗಂತ ರಾಜ್ಯದಲ್ಲೂ ಆಡಳಿತ ನಡೆಸುವುದಕ್ಕಾಗಿ ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕಕ್ಕೆ ತಲಾ ಒಬ್ಬರಂತೆ ಇಬ್ಬರು ಮುಖ್ಯಮಂತ್ರಿಯನ್ನಾಗಿ ಮಾಡಲು ಸಾಧ್ಯವೇ? ಹಾಗೆಯೇ ಬಿಬಿಎಂಪಿಯನ್ನು 5 ವಿಭಾಗ ಮಾಡುವ ಅಗತ್ಯ ಇಲ್ಲ. ಬೇಕಿದ್ದಲ್ಲಿ ಅಧಿಕಾರ ವಿಕೇಂದ್ರೀಕರಣ ಮಾಡಿ ಹೊಸ ವ್ಯವಸ್ಥೆಯನ್ನು ತರಲಿ. ಆದರೆ, ಕಾಂಗ್ರೆಸ್ ಅಧಿಕಾರ ಹಿಡಿಯಲಷ್ಟೇ ವಿಭಜನೆ ತಂತ್ರ ಅನುಸರಿಸುತ್ತಿರುವಂತಿದೆ. ಇದನ್ನು ಮುಂದುವರಿಸಿದರೆ ನಾವು ನ್ಯಾಯಾಲಯದ ಮೊರೆ ಹೋಗುತ್ತೇವೆ. ಅಲ್ಲಿ ತಡೆಯಾಜ್ಞೆ ಸಿಗುತ್ತದೆ. ಆಗ ಮತ್ತೆ ತೊಂದರೆ ಎದುರಾಗುತ್ತದೆ. ಹಾಗಂತ ಚುನಾವಣೆಗೆ ನಮ್ಮ ವಿರೋಧ ಇಲ್ಲ, ವಿಭಜನೆಗಷ್ಟೇ ನಮ್ಮ ತಕರಾರು.
| ಎ.ಸಿ. ಶ್ರೀನಿವಾಸ್, ಪುಲಿಕೇಶಿನಗರ ಕ್ಷೇತ್ರದ ಶಾಸಕ
ಬೆಂಗಳೂರು ಈಗ ಬೃಹದಾಕಾರವಾಗಿ ಬೆಳೆದಿದೆ. ಬಿಬಿಎಂಪಿ ವಿಸ್ತೀರ್ಣ ದೊಡ್ಡದಿರುವ ಕಾರಣ ಆಡಳಿತ ಮಾಡುವುದು ಕಷ್ಟವಾಗಿದೆ. ಒಬ್ಬರೇ ಮುಖ್ಯ ಆಯುಕ್ತರು ಎಲ್ಲ ಕಡತ ನೋಡಿ ಅನುಮೋದಿಸ ಲಾಗುತ್ತಿಲ್ಲ. ಮೇಯರ್ ಹಾಗೂ ಕೌನ್ಸಿಲ್​ಗೂ ಒಂದಿಷ್ಟು ಇತಿಮಿತಿಗಳಿವೆ. ಈ ಸಮಸ್ಯೆಯಿಂದ ಹೊರಬರಲು ಆಡಳಿತ ವಿಕೇಂದ್ರೀಕರಣವಾಗಬೇಕು. ಇದಕ್ಕಾಗಿಯೇ 5 ಪಾಲಿಕೆಗಳನ್ನಾಗಿ ಮಾಡುವ ಅಗತ್ಯ ಇದೆ. ಹೊಸ ಏರ್​ಪೋರ್ಟ್ ರಸ್ತೆ, ಎಲೆಕ್ಟ್ರಾನಿಕ್ ಸಿಟಿ ಸೇರಿ ಬಿಬಿಎಂಪಿ ಸುತ್ತಲಿನ ಪ್ರದೇಶಗಳು ಸಾಕಷ್ಟು ಬೆಳವಣಿಗೆ ಕಂಡಿವೆ. ಅಲ್ಲಿಂದ ಸರ್ಕಾರಕ್ಕೆ ಆದಾಯವೂ ಬರುತ್ತಿದೆ.

ಆದರೆ, ಜನರಿಗೆ ಮೂಲಸೌಲಭ್ಯ ಸಿಗುತ್ತಿಲ್ಲ. ಇದನ್ನಾಧರಿಸಿಯೇ ಬಿ.ಎಸ್.ಪಾಟೀಲ್ ನೇತೃತ್ವದ ಸಮಿತಿಯು ಕೂಡ ಕೆಲವೊಂದು ಬದಲಾವಣೆ ಮಾಡಲು ಶಿಫಾರಸು ಮಾಡಿದೆ. ಇದರಿಂದ ನಗರಕ್ಕೆ ಶಾಶ್ವತ ಪರಿಹಾರವೂ ಸಿಗಲಿದೆ. ಜನರಿಗೆ ಉತ್ತಮ ಆಡಳಿತವನ್ನೂ ನೀಡಬಹುದು ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಈ ಸಮಿತಿಯ ಶಿಫಾರಸಿಗೆ ನಮ್ಮ ಬೆಂಬಲ ಇದೆ. ಬಿಬಿಎಂಪಿಯನ್ನು ವಿಭಜನೆ ಮಾಡಿ ಕಾಲಮಿತಿಯೊಳಗೆ ಚುನಾವಣೆ ನಡೆಸಬೇಕು ಎಂಬುದಾಗಿ ಸಿಎಂ ಗಮನಕ್ಕೂ ತಂದಿದ್ದೇವೆ.
ಸಿಕ್ಕಿಂನಲ್ಲಿ ಭಾರೀ ಮಳೆ, ಪ್ರವಾಹ: 6 ಮಂದಿ ಸಾವು, 1,200ಕ್ಕೂ ಹೆಚ್ಚು ಪ್ರವಾಸಿಗರಿಗೆ ಸಂಕಷ್ಟ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − thirteen =
Remember me
