|ರಾಘವ ಶರ್ಮ ನಿಡ್ಲೆಜೋಶಿಮಠ (ಚಮೋಲಿ)
ಉತ್ತರಾಖಂಡದ ಚಮೋಲಿ ಜಿಲ್ಲೆಯ ತಪೋವನದಲ್ಲಿರುವ ನ್ಯಾಷನಲ್ ಥರ್ಮಲ್ ಪವರ್ ಕಾರ್ಪೆರೇಷನ್​ನ (ಎನ್​ಟಿಪಿಸಿ) 3 ಕಿಮೀ ಉದ್ದದ ಸುರಂಗ ಭೇದಿಸುವುದೇ ಈಗ ಇಂಡೋ ಟಿಬೆಟನ್ ಬಾರ್ಡರ್ ಪೊಲೀಸ್ (ಐಟಿಬಿಪಿ) ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಗೆ (ಎನ್​ಡಿಆರ್​ಎಫ್) ಕಠಿಣ ಸವಾಲಾಗಿದೆ.
ನಂದಾದೇವಿ ಪರ್ವತದಿಂದ ಸಿಡಿದು ಬಂದ ಹಿಮ ಪ್ರವಾಹಕ್ಕೆ ತಪೋವನದಲ್ಲಿದ್ದ ಸುಮಾರು 95 ಎನ್​ಟಿಪಿಸಿ ಸಿಬ್ಬಂದಿ ನಾಪತ್ತೆಯಾಗಿದ್ದಾರೆ. ಅವರಲ್ಲಿ 39 ಮಂದಿ ಸುರಂಗದೊಳಗೆ ಸಿಲುಕಿಕೊಂಡಿದ್ದರು. ಆದರೆ, ನಾಲ್ಕು ದಿನಗಳ ಬಳಿಕವೂ ಇವರನ್ನು ಹೊರತೆಗೆಯಲು ಸಾಧ್ಯವಾಗಿಲ್ಲ.
ಬುಲ್ಡೋಜರ್​ಗಳ ಮೂಲಕ ಕೆಸರು ತೆಗೆದಷ್ಟೂ ಸುರಂಗದಲ್ಲಿ ಕೆಸರು ತುಂಬಿಕೊಳ್ಳುತ್ತಿರುವುದರಿಂದ ಈ ಕಾರ್ಯಾಚರಣೆ ಪೂರ್ಣಗೊಳ್ಳುವುದಾದರೂ ಯಾವಾಗ ಎಂಬ ಪ್ರಶ್ನೆ ಕಾಡುತ್ತಿದೆ. ರಕ್ಷಣಾ ಪಡೆ ಸಿಬ್ಬಂದಿ ರಾತ್ರಿ-ಹಗಲೆನ್ನದೆ ಕಾರ್ಯಾಚರಣೆ ನಡೆಸುತ್ತಿದ್ದರೂ, ನಾಪತ್ತೆಯಾದವರ ಕುರುಹು ಸಿಗದಿರುವುದು ಸಂಬಂಧಿಕರ ಹತಾಶೆಯನ್ನು ದುಪ್ಪಟ್ಟುಗೊಳಿಸಿದೆ.
ಕಾಣೆಯಾದ ಸಿಬ್ಬಂದಿಯ ಕುಟುಂಬಸ್ಥರು ಕಳೆದ 2-3 ಮೂರು ದಿನಗಳಿಂದ ಸುರಂಗ ಸ್ಥಳದಲ್ಲಿ ಬೀಡುಬಿಟ್ಟಿದ್ದಾರೆ. ರಕ್ಷಣಾ ಕಾರ್ಯಪಡೆ ಅಧಿಕಾರಿಗಳು, ಮಾಧ್ಯಮಗಳ ಮುಂದೆ ಅಳಲು ಹಂಚಿಕೊಳ್ಳುತಿರುವ ಅವರು, ತಮ್ಮ ಸಂಬಂಧಿಕರ ದೂರವಾಣಿ ಕರೆಗಳಿಗೆ ಏನು ಉತ್ತರ ನೀಡಬೇಕೆಂದು ಸಂಕಟ ಪಡುತ್ತಿದ್ದಾರೆ. 4 ದಿನಗಳಿಂದ ಸುರಂಗದೊಳಗಿರುವವರು ಬದುಕುಳಿದಿರುವುದು ಕಷ್ಟಸಾಧ್ಯ ಎಂಬ ವಾಸ್ತವ ಗೊತ್ತಿದ್ದರೂ, ತಮ್ಮವರ ಮುಖ ನೋಡಲೇಬೇಕೆಂದು ಕಾದಿದ್ದಾರೆ.
ಸಮಸ್ಯೆ ಏನು?:ತಪೋವನದ ಎನ್​ಟಿಪಿಸಿ ಬ್ಯಾರೇಜ್ ಪಕ್ಕದಲ್ಲಿ ಮೂರು ಟನೆಲ್(ಸುರಂಗ)ಗಳಿವೆ. ಈ ಮೂರೂ ಟನೆಲ್​ಗಳಲ್ಲಿ 50 ಮೀಟರ್​ಗಿಂತಲೂ ಎತ್ತರಕ್ಕೆ ಕೆಸರು ತುಂಬಿಕೊಂಡಿದೆ. ಇವುಗಳಿಂದ ಕೊಂಚ ದೂರದಲ್ಲಿರುವ ಹಾಗೂ ಮತ್ತೊಂದು ಪ್ರವೇಶದ್ವಾರ ಹೊಂದಿರುವ 200 ಮೀಟರ್ ಅಂತರ ಇರುವ ಎಸ್ಕೇಪ್ ಟನೆಲ್​ನಲ್ಲಿ 39 ಕಾರ್ವಿುಕರು ಸಿಲುಕಿಕೊಂಡಿದ್ದಾರೆ. ಇಲ್ಲಿ ಮೂರು ದಿನಗಳಿಂದ ಕೆಸರು ತೆಗೆಯಲಾಗುತ್ತಿದ್ದರೂ, ಬ್ಯಾರೇಜ್ ಬಳಿ ಇರುವ ಮೂರು ಸುರಂಗಗಳಿಂದ ಬರುತ್ತಿರುವ ಕೆಸರು ಎಸ್ಕೇಪ್ ಟನೆಲ್​ನಲ್ಲಿ ತುಂಬಿಕೊಳ್ಳುತ್ತಿದೆ. ಹೀಗಾಗಿ, ಬ್ಯಾರೇಜ್ ಪಕ್ಕದಲ್ಲಿರುವ ಬೃಹದಾಕಾರದ ಟನೆಲ್​ಗಳಲ್ಲಿರುವ ಕೆಸರನ್ನು ಖಾಲಿ ಮಾಡಬೇಕಿದೆ. ಆದರೆ, ರೇಣಿ ಹಳ್ಳಿ ಕಡೆಯಿಂದ ಈಗಲೂ ಕೆಸರು ಹರಿದುಬರುತ್ತಿರುವುದರಿಂದ ಬ್ಯಾರೇಜ್ ಬಳಿ ತೆರಳಿ ರಕ್ಷಣಾ ಕಾರ್ಯಾಚರಣೆ ಅಸಾಧ್ಯವಾಗಿದೆ.
ನೂರಕ್ಕಿಂತಲೂ ಹೆಚ್ಚು ಶವ?:ಹಿಮಪ್ರವಾಹಕ್ಕೆ ನಾಶಗೊಂಡಿ ರುವ ಬ್ಯಾರೇಜ್ ಸುತ್ತಮುತ್ತ ನೂರಕ್ಕಿಂತಲೂ ಹೆಚ್ಚು ಮಂದಿಯ ಶವ ಹೂತು ಹೋಗಿರಬಹುದು ಎಂದು ಅಂದಾಜಿಸಲಾಗಿದೆ. ರೇಣಿ ಹಳ್ಳಿಯಲ್ಲಿದ್ದ ಋಷಿಗಂಗಾ ಥರ್ಮಲ್ ವಿದ್ಯುತ್ ಘಟಕದಲ್ಲಿ ಕೊಚ್ಚಿಹೋಗಿದ್ದ ಕಾರ್ವಿುಕರ ಮೃತದೇಹಗಳು ಬ್ಯಾರೇಜ್ ಸುತ್ತಮುತ್ತಲಿನ ಕೆಸರಿನಲ್ಲಿ ಹೂತು ಹೋಗಿರಬಹುದು ಎನ್ನಲಾಗಿದೆ. ಅಲ್ಲದೆ, ಅದೇ ಸ್ಥಳದಲ್ಲಿ ಎನ್​ಟಿಪಿಸಿ ಕಾರ್ವಿುಕರು ಕೂಡ ಕೆಲಸ ಮಾಡುತ್ತಿದ್ದರು. ಅವರಲ್ಲೂ ಕೆಲ ಕಾರ್ವಿುಕರು ಇಲ್ಲಿ ಹೂತು ಹೋಗಿರುವ ಶಂಕೆಯಿದೆ. ‘ಇಬ್ಬರು ವ್ಯಕ್ತಿಗಳು ಕೆಸರಲ್ಲಿ ಹೂತು ಹೋಗಿದ್ದನ್ನು ಭಾನುವಾರ ಬೆಳಗ್ಗೆ ನಾನೇ ಕಣ್ಣಾರೆ ನೋಡಿದ್ದೇನೆ’ ಎಂದು ಕುನ್ವರ್ ನೇಗಿ ಮಾಹಿತಿ ಹಂಚಿಕೊಂಡರು.
ಮದುವೆಯಾಗಿ 2 ತಿಂಗಳು:ಬಿಹಾರದ ಪಟನಾ ಮೂಲದ ಮನೀಷ್ ಕುಮಾರ್ ಎನ್ಟಿಪಿಸಿಯಲ್ಲಿ ಎಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ಹಿಮಪ್ರವಾಹ ಅಪ್ಪಳಿಸಿದ ವೇಳೆ ಸುರಂಗದೊಳಗಿದ್ದರು. ಈ ವಿಚಾರ ಪಟನಾದಲ್ಲಿದ್ದ ಅಣ್ಣ ಮೃತ್ಯುಂಜಯ ಕುಮಾರ್​ಗೆ ತಿಳಿದಿರಲಿಲ್ಲ. ಆದರೆ, ಭಾನುವಾರ ಮಧ್ಯಾಹ್ನ 2 ಗಂಟೆಗೆ ಕೂಡ ಮನೀಷ್ ಮೊಬೈಲ್ ನಾಟ್​ರೀಚಬಲ್ ಸ್ಥಿತಿಯಲ್ಲಿದ್ದುದರಿಂದ ಅನುಮಾನಗೊಂಡ ಮೃತ್ಯುಂಜಯ ಕುಮಾರ್​ಗೆ ಮನೀಷ್ ಸುರಂಗದೊಳಗಿದ್ದಾನೆ ಎನ್ನುವುದು ನಂತರ ಗೊತ್ತಾಗಿದೆ. ಈ ಆಘಾತವನ್ನು ಮೃತ್ಯುಂಜಯ್ಗೆ ತಡೆದುಕೊಳ್ಳುವುದು ಸಾಧ್ಯವಾಗಿರಲಿಲ್ಲ. ಏಕೆಂದರೆ, ಕಳೆದ ಡಿಸೆಂಬರ್​ನಲ್ಲಷ್ಟೇ ಮನೀಷ್ ವಿವಾಹವಾಗಿತ್ತು. ಆತನ ಪತ್ನಿಗೆ ತಿಳಿಸುವುದು ಹೇಗೆ ಎಂಬ ಚಿಂತೆ. ತಪೋವನಕ್ಕೆ ಬಂದಿರುವ ಮೃತ್ಯುಂಜಯ ಕುಮಾರ್​ಗೆ ಮನೀಷ್ ಪತ್ನಿಯಿಂದ ಸತತ ಕರೆ ಬರುತ್ತಿದೆ. ಆಕೆಗೆ ಸಮಾಧಾನ ಹೇಳುತ್ತಾ ತಾವೂ ಕಣ್ಣೀರು ಸುರಿಸುತ್ತಿದ್ದ ಮೃತ್ಯುಂಜಯ, ‘ಇಷ್ಟೊಂದು ದೊಡ್ಡ ವಿದ್ಯುತ್ ಘಟಕದಲ್ಲಿ ಯಾವುದೇ ಮುನ್ನೆಚ್ಚರಿಕಾ ಕ್ರಮವಿಲ್ಲ ಎಂದರೆ ಏನರ್ಥ? ಎನ್​ಟಿಪಿಸಿಯವರು ಉತ್ತರ ಕೊಡಬೇಕು. ಆತನ ಪತ್ನಿಗೆ ಏನೆಂದು ಹೇಳಲಿ’ ಎಂದರು. ಸುರಂಗದಲ್ಲಿದ್ದ ಲಾಲೂ ಜನಾ ಎಂಬ ಕೊಲ್ಕತ್ತಾ ಮೂಲದ ಯುವಕನೂ 2 ತಿಂಗಳ ಹಿಂದೆ ಮದುವೆಯಾಗಿದ್ದ.
ಭಾನುವಾರವಾದ್ದರಿಂದ ಸಂಖ್ಯೆ ಕಡಿಮೆ:ಹಿಮ ಪ್ರವಾಹ ಭಾನುವಾರ ಅಪ್ಪಳಿಸಿದ್ದರಿಂದ ಸುರಂಗದಲ್ಲಿ 39 ಮಂದಿಯಷ್ಟೇ ಸಿಲುಕಿಕೊಂಡರು. ಬೇರೆ ದಿನವಾಗಿದ್ದರೆ ಇಲ್ಲಿ ಸಾವಿನ ಪ್ರಮಾಣ ಹೆಚ್ಚಾಗುತ್ತಿತ್ತು. ವಾರದ ದಿನಗಳಲ್ಲಿ 200-250ಕ್ಕೂ ಹೆಚ್ಚು ಮಂದಿ ಸುರಂಗದೊಳಗೆ ಕೆಲಸ ಮಾಡುತ್ತಾರೆ. ಅದೃಷ್ಟವಶಾತ್ ಹಿಮಸ್ಪೋಟ ಭಾನುವಾರ ಸಂಭವಿಸಿತು ಎಂದು ಯುವಕ ಶಿವಂ ಮಿಶ್ರಾ ಹೇಳಿದರು. ಶಿವಂ ಸ್ನೇಹಿತ ಜವಾಹರ್ ಸಿಂಗ್ ಬಿಷ್ತ್ ಅದೇ ದಿನ ಬೆಳಗ್ಗೆ 8 ಗಂಟೆಗೆ ಸುರಂಗದಲ್ಲಿ ಡ್ಯೂಟಿ ಮುಗಿಸಿ ಜೋಶಿಮಠಕ್ಕೆ ಬಂದಿದ್ದರು.
ಕುಟುಂಬಸ್ಥರ ಅಸಮಾಧಾನ, ಹತಾಶೆಗೆ ರಕ್ಷಣಾ ಕಾರ್ಯಾಚರಣೆ ಸಿಬ್ಬಂದಿಯಲ್ಲೂ ಉತ್ತರವಿಲ್ಲ. ‘ಕುಟುಂಬಸ್ಥರ ನೋವು ನಮಗೆ ಅರ್ಥವಾಗುತ್ತದೆ. ರಕ್ಷಣಾ ಕಾರ್ಯಾಚರಣೆ ಮುಂದುವರಿಸುವುದು ನಮ್ಮ ಕರ್ತವ್ಯ. ಬೇರೇನಾದರೂ ಪರ್ಯಾಯ ತಂತ್ರಜ್ಞಾನ ಬಳಸುವ ಬಗ್ಗೆ ತಂತ್ರಜ್ಞರು ತಿಳಿಸಬೇಕು. ನಮಗೆ ಕೊಟ್ಟಿರುವ ಜವಾಬ್ದಾರಿಯನ್ನು ರಾತ್ರಿ-ಹಗಲೆನ್ನದೆ ನಿಭಾಯಿಸುತ್ತಿದ್ದೇವೆ. ಇಲ್ಲಿನ ಪರಿಸ್ಥಿತಿ ನೋಡಿದರೆ ಕಾರ್ಯಾಚರಣೆ ಯಾವಾಗ ಮುಗಿಯಬಹುದು ಎಂದು ಖಚಿತವಾಗಿ ಈಗ ಹೇಳಲು ಅಸಾಧ್ಯ’ ಎಂದು ಐಟಿಬಿಟಿ ಡೆಹ್ರಾಡೂನ್ ಸೆಕ್ಟರ್​ನ ಡಿಐಜಿ ಅಪರ್ಣಾ ಕುಮಾರ್ ಪ್ರತಿಕ್ರಿಯಿಸಿದ್ದಾರೆ.
ಏತನ್ಮಧ್ಯೆ, ಹೈದರಾಬಾದ್ ಮೂಲದ ತಂಡವೊಂದರಿಂದ ರಿಮೋಟ್ ಸೆನ್ಸಿಂಗ್ ಸಾಧನ ಪಡೆದುಕೊಳ್ಳಲಾಗಿದೆ. ನೆಲದಲ್ಲಿ 500 ಮೀಟರ್ ಆಳದ ಅವಶೇಷಗಳನ್ನು ಪತ್ತೆ ಮಾಡುವ ಸಾಮರ್ಥ್ಯವನ್ನು ಈ ಸಾಧನ ಹೊಂದಿದೆ. ಅದನ್ನು ಹೆಲಿಕಾಪ್ಟರ್​ನಲ್ಲಿ ಅಳವಡಿಸಲಾಗಿದ್ದು, ಥರ್ಮಲ್ ಇಮೇಜಿಂಗ್ ಮೂಲಕ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಸುರಂಗದಲ್ಲಿ 90 ಡಿಗ್ರಿ ತಿರುವು ಇರುವುದರಿಂದ ಭಗ್ನಾವಶೇಷಗಳನ್ನು ತೆಗೆದುಹಾಕಲು ನಿಖರ ಸಮಯವನ್ನು ಅಂದಾಜು ಮಾಡಲು ಸಾಧ್ಯವಿಲ್ಲ. ಕಾರ್ವಿುಕರು ಸಿಲುಕೊಂಡಿರುವ ಜಾಗಕ್ಕೆ ತೆರಳಲು ಪರ್ಯಾಯ ಮಾರ್ಗ ರೂಪಿಸುವ ಬಗ್ಗೆಯೂ ನಾವು ಯೋಜನಾ ಇಂಜಿನಿಯರ್​ಗಳಲ್ಲಿ ಕೇಳಿದ್ದೇವೆ ಎಂದು ಸ್ಥಳದಲ್ಲಿದ್ದ ಉತ್ತರಾಖಂಡ ಪೊಲೀಸ್ ಮುಖ್ಯಸ್ಥ ಅಶೋಕ್ ಕುಮಾರ್ ತಿಳಿಸಿದ್ದಾರೆ.
ಎಂಟು ತಿಂಗಳ ಗರ್ಭಿಣಿ:ಹೃಷಿಕೇಶ ಮೂಲದ ರಾಹುಲ್ ಸಿಸ್ವಾಲ್ ಸುರಂಗದಲ್ಲಿ ಹೋಮ್ ಮೆಟಲ್ ವಿಭಾಗದಲ್ಲಿ ವೆಲ್ಡರ್ ಆಗಿ ಕೆಲಸ ಮಾಡುತ್ತಿದ್ದರು. ಮದುವೆಯಾಗಿ ಒಂದೂವರೆ ವರ್ಷವಾಗಿದ್ದು, ಆತನ ಪತ್ನಿ ಈಗ 8 ತಿಂಗಳ ಗರ್ಭಿಣಿ. ಪತಿ ಎಲ್ಲಿದ್ದಾರೆಂದು ಗೊತ್ತಾಗದೆ ಪತ್ನಿ ಅರ್ಚನಾ ಸಿಸ್ವಾಲ್ ಮೂರು ದಿನದಿಂದಲೂ ಅನ್ನ-ನೀರು ಬಿಟ್ಟು ಕುಳಿತಿದ್ದಾರೆ ಎಂದು ಕಣ್ಣೀರಿಟ್ಟರು ಆತನ ಸಂಬಂಧಿ ಚಂದ್ರಶೇಖರ ನೌಟಿಯಾರ್. ಈ ಕೆಸರನ್ನು ತೆಗೆಯಲು ದೇಶದ ರಕ್ಷಣಾ ಪಡೆಯಲ್ಲಿ ಬುಲ್ಡೋಜರ್ ಬಿಟ್ಟು ಬೇರೆ ಅತ್ಯುನ್ನತ ತಂತ್ರಜ್ಞಾನಗಳಿಲ್ಲವೇ ಎನ್ನುವುದು ಸಿಸ್ವಾಲ್ ಸೋದರ ಸಂಬಂಧಿಗಳಾದ ಸುಂದರ್ ಚಮೋಲಿ, ಜಯಪ್ರಕಾಶ್ ಚಮೋಲಿ ಪ್ರಶ್ನೆ.
ನಾವು ಬಡವರು:ಉತ್ತರಾಖಂಡದ ತೇಹ್ರಿ ಗಡವಾಲ್ ಜಿಲ್ಲೆಯಿಂದ ಬಂದಿದ್ದ ಸೂರಜ್ ಸಿಂಗ್, ‘ನಾವು ಬಡವರು. ಸುರಂಗದೊಳಗಿದ್ದ ಸೋದರ ಆಲಂ ಸಿಂಗ್​ನನ್ನು ಹುಡುಕಿಕೊಂಡು ಕುಟುಂಬಸ್ಥ ರೆಲ್ಲರೂ ಜೋಶಿಮಠಕ್ಕೆ ಬಂದಿದ್ದೇವೆ. ದಿನಕ್ಕೆ ಐದಾರು ಸಾವಿರ ಖರ್ಚಾಗುತ್ತಿದೆ. ಜೋಶಿಮಠದಿಂದ ತಪೋವನಕ್ಕೆ ಬಸ್ ವ್ಯವಸ್ಥೆಯೂ ಇಲ್ಲ. ಆಲಂ ಸಿಂಗ್ ಪತ್ನಿ ಘಟನೆ ಬಗ್ಗೆ ಕೇಳಿದ ಕೂಡಲೇ ಅರೆಪ್ರಜ್ಞಾವಸ್ಥೆಗೆ ಹೋಗಿದ್ದಾರೆ. ಆತನಿಗೆ 5 ಹೆಣ್ಣು ಮಕ್ಕಳಿದ್ದು, ಎಲ್ಲರೂ ವಿದ್ಯಾಭ್ಯಾಸದಲ್ಲಿ ತೊಡಗಿದ್ದಾರೆ’ ಎಂದು ವಿಜಯವಾಣಿ ಜತೆ ಮಾಹಿತಿ ಹಂಚಿಕೊಂಡರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen + seventeen =
Remember me
