ನವದೆಹಲಿ:ಐದು ವರ್ಷ ಮೇಲ್ಪಟ್ಟ ಮಕ್ಕಳ ಮೇಲೆ ಕೊಬ್ರಿವ್ಯಾಕ್ಸ್​ನ ಲಸಿಕೆಯ 2 ಮತ್ತು 3ನೇ ಹಂತದ ಕ್ಲಿನಿಕಲ್ ಪರೀಕ್ಷೆ ನಡೆಸಲು ಬಯಾಲಾಜಿಕಲ್ ಇ ಕಂಪನಿಗೆ ಅನುಮತಿ ನೀಡಲಾಗಿದೆ ಎಂದು ಜೈವಿಕ ತಂತ್ರಜ್ಞಾನ ಇಲಾಖೆ ಶುಕ್ರವಾರ ತಿಳಿಸಿದೆ. ಕೊಬ್ರಿವ್ಯಾಕ್ಸ್, ಆರ್​ಬಿಡಿ ಪ್ರೊಟೀನ್ ಸಬ್-ಯುನಿಟ್ ವ್ಯಾಕ್ಸಿನ್ ಆಗಿದೆ. ಜೈವಿಕ ತಂತ್ರಜ್ಞಾನ ಇಲಾಖೆ ಹಾಗೂ ಅದರ ಉದ್ಯಮವಾದ ಬಯೋಟೆಕ್ನಾಲಜಿ ಇಂಡಸ್ಟ್ರಿ ರೀಸರ್ಚ್ ಅಸಿಸ್ಟೆನ್ಸ್ ಕೌನ್ಸಿಲ್ ಸಹಯೋಗದೊಂದಿಗೆ ಅದನ್ನು ಅಭಿವೃದ್ಧಿಪಡಿಸಿದೆ.
ವಿಳಂಬಕ್ಕೆ ಸುಪ್ರೀಂ ತಪರಾಕಿ:ಕೋವಿಡ್​ನಿಂದ ಮೃತಪಟ್ಟವರ ಬಂಧುಗಳಿಗೆ ಪರಿಹಾರ ನೀಡುವ ಮಾರ್ಗಸೂಚಿ ರೂಪಿಸುವಲ್ಲಿ ವಿಳಂಬವಾಗುತ್ತಿರುವುದಕ್ಕೆ ಸುಪ್ರೀಂಕೋರ್ಟ್ ಶುಕ್ರವಾರ ಕೇಂದ್ರ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದು ಕೊಂಡಿದೆ. ‘ಮಾರ್ಗಸೂಚಿ ರೂಪಿಸುವ ಹೊತ್ತಿಗೆ ಕರೊನಾ ಮೂರನೇ ಅಲೆಯೂ ಮುಗಿದು ಹೋಗಲಿದೆ’ ಎಂದು ನ್ಯಾಯಮೂರ್ತಿಗಳಾದ ಎಂ.ಆರ್. ಷಾ ಮತ್ತು ಅನಿರುದ್ಧ ಬೋಸ್ ಇದ್ದ ಪೀಠ ಅಸಮಾಧಾನ ವ್ಯಕ್ತಪಡಿಸಿದೆ. ಮರಣ ಸರ್ಟಿಫಿಕೆಟ್, ಪರಿಹಾರ ಇತ್ಯಾದಿ ವಿಚಾರವಾಗಿ ಬಹಳ ಹಿಂದೆಯೇ ಆದೇಶ ಹೊರಡಿಸಲಾಗಿದ್ದರೂ ಸರ್ಕಾರ ಕ್ರಮ ವಹಿಸಿಲ್ಲ. ಸೆಪ್ಟೆಂಬರ್ 11ರೊಳಗೆ ಅನುಪಾಲನಾ ವರದಿ ಸಲ್ಲಿಸಬೇಕು ಎಂದು ಪೀಠ ನಿರ್ದೇಶಿಸಿದೆ.
ಲಸಿಕೆಗೆ ಬಜೆಟ್​ನ 26.3% ಬಳಕೆ:ಕೋವಿಡ್ ತಡೆ ಲಸಿಕೆ ಖರೀದಿಗೆ ಕೇಂದ್ರ ಬಜೆಟ್​ನಲ್ಲಿ ನಿಗದಿಪಡಿಸಿದ್ದ 35,000 ಕೋಟಿ ರೂಪಾಯಿಯಲ್ಲಿ ಶೇಕಡ 26.3ರಷ್ಟನ್ನು, ಅಂದರೆ 9,229.31 ಕೋಟಿ ರೂ.ಗಳನ್ನು ವ್ಯಯಿಸಲಾಗಿದೆ. 3 ಲಸಿಕೆ ತಯಾರಿಕೆ ಕಂಪನಿಗಳಿಂದ 124 ಕೋಟಿ ಡೋಸ್ ಲಸಿಕೆ ಖರೀದಿಸಲು ಈ ಹಣ ವೆಚ್ಚವಾಗಿದೆ ಎಂದು ಆರ್​ಟಿಐ ಅರ್ಜಿದಾರರೊಬ್ಬರಿಗೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.
ಉತ್ತರ ಪ್ರದೇಶದಲ್ಲಿ ಡೆಂಗ್ಯೂಗೆ 40 ಮಕ್ಕಳ ಸಹಿತ 65 ಬಲಿ: ಉತ್ತರ ಪ್ರದೇಶದ ಫಿರೋಜಾಬಾದ್ ಜಿಲ್ಲೆಯಲ್ಲಿ ಕಳೆದ ಹತ್ತು ದಿನಗಳಲ್ಲಿ ಡೆಂಗ್ಯೂ ರೋಗಕ್ಕೆ 40 ಮಕ್ಕಳ ಸಹಿತ ಕನಿಷ್ಠ 65 ಜನರು ಬಲಿಯಾಗಿದ್ದಾರೆ. ಡೆಂಗ್ಯೂ ವ್ಯಾಧಿಯ ತೀವ್ರ ಸ್ವರೂಪವಾದ ‘ಡೆಂಗ್ಯೂ ಹಿಮೋರಾ›ಗಿಕ್ ಜ್ವರ’ದಿಂದ ಸಾವು ಸಂಭವಿಸಿದೆ ಎಂದು ರಾಜ್ಯ ಸರ್ಕಾರ ಹೇಳಿದೆ. ಫಿರೋಜಾಬಾದ್ ಜಿಲ್ಲೆಯಲ್ಲಿ ಕನಿಷ್ಠ 5,000 ಜನರು ಜ್ವರದಿಂದ ಬಳಲುತ್ತಿದ್ದು ಮನೆಗಳು ಅಥವಾ ಖಾಸಗಿ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ. ಮಥುರಾ ಮತ್ತು ಆಗ್ರಾ ಮುಂತಾದ ಜಿಲ್ಲೆಗಳಲ್ಲಿ ಕೂಡ ಡೆಂಗ್ಯೂ ಪ್ರಕರಣ ಹೆಚ್ಚಿದ್ದು ಆಸ್ಪತ್ರೆಗಳು ರೋಗಿಗಳಿಂದ ತುಂಬಿ ಹೋಗಿವೆ. ಆ ಪೈಕಿ ಹೆಚ್ಚನವರು ಮಕ್ಕಳೇ ಆಗಿದ್ದಾರೆ.
ಕರೊನಾ ಸಾಂಕ್ರಾಮಿಕತೆ ನಿಯಂತ್ರಣಕ್ಕೆ ವಿಫಲವಾಗಿರುವ ಹಿನ್ನೆಲೆಯಲ್ಲಿ ಸ್ವಪಕ್ಷೀಯರಿಂದಲೇ ತೀವ್ರ ವಿರೋಧಕ್ಕೆ ಒಳಗಾಗಿರುವ ಜಪಾನ್ ಪ್ರಧಾನಿ ಯೋಷಿಹಿಡೆ ಸುಗಾ, ಪದತ್ಯಾಗಕ್ಕೆ ನಿರ್ಧರಿಸಿದ್ದಾರೆ. ಈ ವರ್ಷ ಲಿಬರಲ್ ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಹಾಗೂ ಸಂಸತ್ತಿಗೆ ಸಾರ್ವತ್ರಿಕ ಚುನಾವಣೆ ನಡೆಯಲಿದೆ. ಆದರೆ, ಸುಗಾ ಜನಪ್ರಿಯತೆ ಶೇಕಡ 30ರಷ್ಟು ಕುಸಿದಿದ್ದು ಸ್ವಪಕ್ಷೀಯರ ಬಂಡಾಯ ತಾಳಲಾಗದೆ ರಾಜೀನಾಮೆಗೆ ನಿರ್ಧರಿಸಿದ್ದಾರೆ. ಇದರೊಂದಿಗೆ ಸುಗಾ ಆಡಳಿತ ಕೇವಲ ಒಂದು ವರ್ಷದೊಳಗೆ ಮುಗಿಯಲಿದೆ. ಸುಗಾರ ಪೂರ್ವಾಧಿಕಾರಿ ಹಾಗೂ ಅತಿ ದೀರ್ಘ ಕಾಲ ಜಪಾನ್ ಪ್ರಧಾನಿಯಾಗಿದ್ದ ಶಿಂಜೊ ಅಬೆ ಅನಾರೋಗ್ಯ ಕಾರಣದಿಂದ ಕಳೆದ ವರ್ಷ ಹಠಾತ್ತನೆ ಪದತ್ಯಾಗ ಮಾಡಿದ್ದರು. 2020 ಸೆಪ್ಟೆಂಬರ್​ನಲ್ಲಿ ಸುಗಾ ಪ್ರಧಾನಿ ಪಟ್ಟಕ್ಕೇರಿದ್ದರು.
45,352 ಹೊಸ ಕೇಸ್:ದೇಶದಲ್ಲಿ ಶುಕ್ರವಾರ ಬೆಳಗ್ಗಿನ ವರೆಗಿನ 24 ಗಂಟೆ ಅವಧಿಯಲ್ಲಿ ಕೋವಿಡ್​ನ 45,352 ಹೊಸ ಪ್ರಕರಣಗಳು ದೃಢಪಟ್ಟಿವೆ. 366 ಜನರು ಮೃತಪಟ್ಟಿದ್ದಾರೆ. ಸಾವಿನ ಒಟ್ಟು ಸಂಖ್ಯೆ 4,39,895ಕ್ಕೆ ಏರಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ದೇಶದಾದ್ಯಂತ ಇದುವರೆಗೆ 67,09,59,968 ಡೋಸ್ ಲಸಿಕೆ ನೀಡಲಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen − twelve =
Remember me
