ಮರುಬಳಕೆ ಪ್ಲಾಸ್ಟಿಕ್​ನಿಂದತಯಾರಿಸಿದ ಜಾಕೆಟ್ ಧರಿಸಿ ಸಂಸತ್ ಪ್ರವೇಶಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಪರಿಸರ ಪೂರಕ ಪ್ರೀತಿ-ನೀತಿ ಪ್ರದರ್ಶಿಸಿದ್ದಾರೆ. ಇಂಡಿಯನ್ ಆಯಿಲ್ ಕಾಪೋರೇಶನ್ ತನ್ನ ಅನ್​ಬಾಟಲ್ಡ್ ಕಾರ್ಯಕ್ರಮದ ಅಂಗವಾಗಿ ತಯಾರಿಸಲಾದ ಜಾಕೆಟ್ ಇದಾಗಿದೆ. ಇಂತಹ ಬಟ್ಟೆ ತಯಾರಾಗುವುದು ಹೇಗೆ? ಪರಿಸರಕ್ಕೆ ಹೇಗೆ ಪ್ರಯೋಜನಕಾರಿ? ಎಂಬ ವಿವರಗಳು ಇಲ್ಲಿವೆ.
ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ಬುಧವಾರ ಸಂಸತ್ತಿಗೆ ಆಗಮಿಸಿದಾಗ ಧರಿಸಿದ ಆಕಾಶ ನೀಲಿ ಬಣ್ಣದ ಜಾಕೆಟ್ ಗಮನ ಸೆಳೆಯಿತು. ಮರುಬಳಕೆಯ ಪೆಟ್ (ಪಾಲಿಥಿಲಿನ್ ಟೆರೆಪ್ತಲೇಟ್) ಬಾಟಲಿಗಳಿಂದ ತಯಾರಿಸಿದ ಜಾಕೆಟ್ ಇದು ಎಂಬುದು ವಿಶೇಷವಾಗಿತ್ತು. ಕಳೆದ ಸೋಮವಾರ ಬೆಂಗಳೂರಿನಲ್ಲಿ ನಡೆದ ಇಂಡಿಯಾ ಎನರ್ಜಿ ವೀಕ್​ನಲ್ಲಿ ಇಂಡಿಯನ್ ಆಯಿಲ್ ಕಾರ್ಪೆರೇಷನ್ (ಐಒಸಿ) ಮೋದಿ ಅವರಿಗೆ ಈ ಉಡುಪನ್ನು ಉಡುಗೊರೆಯಾಗಿ ನೀಡಿತ್ತು.
ಪ್ಲಾಸ್ಟಿಕ್ ತ್ಯಾಜ್ಯದಿಂದ ಮಾಡಿದ ಬಟ್ಟೆಗಳನ್ನು ಬಳಸುವುದು ಸುಸ್ಥಿರ ಜೀವನದತ್ತ ದೊಡ್ಡ ಹೆಜ್ಜೆಯಾಗಿದೆ. ನಿಸರ್ಗಕ್ಕೆ ಮಾರಕವಾದ ಪ್ಲಾಸ್ಟಿಕ್ ತ್ಯಾಜ್ಯವನ್ನು ಮರುಬಳಕೆ ಮಾಡಿ ತಯಾರಿಸಲಾದ ಉಡುಪು ಧರಿಸುವುದು ಪರಿಸರ ಸಂರಕ್ಷಣೆ ಕಾಳಜಿಯ ಸಂಕೇತವೂ ಆಗಿದೆ. ಹೀಗಾಗಿಯೇ, ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ಪ್ರಧಾನಿಯನ್ನು ಶ್ಲಾಘಿಸಿದರು. ನೆಟಿಜನ್​ಗಳು ಕೂಡ ಸುಸ್ಥಿರ ಫ್ಯಾಷನ್​ನ ಮೇಲೆ ಬೆಳಕು ಚೆಲ್ಲಿದ ಮೋದಿಯನ್ನು ಹೊಗಳಿದರು.
ಐಒಸಿ ಈ ಉಡುಪನ್ನು ಹೇಗೆ ತಯಾರಿಸಿದೆ ಎಂಬುದು ಕುತೂಹಲಕರ. ಪ್ಲಾಸ್ಟಿಕ್ ಬಾಟಲಿ ತ್ಯಾಜ್ಯದಿಂದ ಬಟ್ಟೆಯನ್ನು ತಯಾರಿಸುವ ಈ ಪ್ರಕ್ರಿಯೆಯು ಸಂಗ್ರಹಿಸಿದ ಪೆಟ್ ಬಾಟಲಿಗಳನ್ನು ತೊಳೆಯುವುದು, ಒಣಗಿಸುವುದು ಮತ್ತು ಸಣ್ಣ ತುಂಡಾಗಿ ಪುಡಿ ಮಾಡುವುದನ್ನು ಒಳಗೊಂಡಿರುತ್ತದೆ ಎಂದು ತೈಲ ಕಂಪನಿ ಹೇಳಿದೆ. ನಂತರ ಈ ತುಂಡುಗಳನ್ನು ಬಿಸಿ ಮಾಡಲಾಗುತ್ತದೆ. ತದನಂತರ ಸ್ಪಿನ್ನರೆಟ್ (ತಂತುಕ) ಮೂಲಕ ಹಾಯಿಸಿ ಪಾಲಿಯೆಸ್ಟರ್ ಸ್ಟೆಪಲ್ ಫೈಬರ್ ತಯಾರಿಸಲಾಗುತ್ತಿದೆ. ಇದಾದ ಮೇಲೆ, ಈ ಫೈಬರ್ ಅನ್ನು ಕ್ರಿಂಪಿಂಗ್ ಯಂತ್ರದ ಮೂಲಕ ಉಣ್ಣೆಯ ರೂಪಕ್ಕೆ ತಂದು ನೂಲನ್ನು ಉತ್ಪಾದಿಸಲಾಗುತ್ತದೆ. ಈ ನೂಲಿನಿಂದ ಪಾಲಿಯೆಸ್ಟರ್ ಬಟ್ಟೆ ನೇಯಲಾಗುತ್ತದೆ.
ಬಟ್ಟೆ ಮತ್ತು ಬೂಟು ತಯಾರಿಸಲು ಮರುಬಳಕೆಯ ಪ್ಲಾಸ್ಟಿಕ್ ಬಳಸುವ ಕಂಪನಿಗಳು ಕೂಡ ಬಹುತೇಕವಾಗಿ ಇದೇ ವಿಧಾನದ ಮೂಲಕ ಉತ್ಪಾದಿಸುತ್ತವೆ. ಪ್ಲಾಸ್ಟಿಕ್ ಬಾಟಲಿಗಳನ್ನು ಮೊದಲು ಸಂಗ್ರಹಿಸಲಾಗುತ್ತದೆ. ನಂತರ ಸಣ್ಣ ತುಂಡುಗಳಾಗಿ ಒಡೆಯಲಾಗುತ್ತದೆ. ಆ ಚಕ್ಕೆಗಳನ್ನು ತದನಂತರ ಸಣ್ಣ ಸಣ್ಣ ಉಂಡೆಗಳಾಗಿ ಕರಗಿಸಲಾಗುತ್ತದೆ. ಅವುಗಳನ್ನು ಮತ್ತೆ ಕರಗಿಸಿ, ಫಿಲ್ಟರ್ ಮಾಡಿ ಎಳೆಗಳಾಗಿ ಪರಿವರ್ತಿಸಲಾಗುತ್ತದೆ. ಈ ಎಳೆಗಳನ್ನು ವಿವಿಧ ಬಟ್ಟೆಗಳಿಗೆ ಬಳಸಲಾಗುತ್ತದೆ.
ಮರುಬಳಕೆಯ ಪ್ಲಾಸ್ಟಿಕ್​ನಿಂದ ತಯಾರಿಸಲಾದ ಬಟ್ಟೆಗಳನ್ನು 1990ರ ದಶಕದ ಮಧ್ಯಭಾಗದಿಂದ ಫ್ಯಾಷನ್​ನಲ್ಲಿ ಬಳಸಲಾಗಿದೆ. ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಬ್ರಾ್ಯಂಡ್​ಗಳು ಮತ್ತು ವಿನ್ಯಾಸಕರು ಈ ಆಯ್ಕೆಯನ್ನು ಆರಿಸಿಕೊಳ್ಳುತ್ತಿದ್ದಾರೆ. ದೊಡ್ಡ ಬ್ರಾ್ಯಂಡ್​ಗಳು ಮತ್ತು ಸೆಲೆಬ್ರಿಟಿಗಳು ಕೂಡ ಈ ಹಸಿರು ಫ್ಯಾಷನ್​ಗೆ ಬದಲಾಗುತ್ತಿದ್ದಾರೆ.
ಕ್ರೀಡಾ ಉತ್ಪನ್ನಗಳನ್ನು ತಯಾರಿಸುವ ಅಡಿಡಾಸ್ ಈಗ ಸಂಪೂರ್ಣವಾಗಿ ಮರುಬಳಕೆಯ ಸಾಗರ ಪ್ಲಾಸ್ಟಿಕ್​ನಿಂದಲೇ ಶೂಗಳನ್ನು ತಯಾರಿಸುತ್ತದೆ. 2024ರ ವೇಳೆಗೆ ತನ್ನ ಉತ್ಪನ್ನಗಳಲ್ಲಿ ವರ್ಜಿನ್ ಪಾಲಿಯೆಸ್ಟರ್ (ಪೆಟ್ರೋಲ್​ನಿಂದ ತಯಾರಿಸಿದ ಪಾಲಿಯೆಸ್ಟರ್) ಬದಲಾಗಿ ಮರುಬಳಕೆಯ ಪಾಲಿಯೆಸ್ಟರ್ ಬಳಸುವ ಗುರಿಯನ್ನು ಈ ಕಂಪನಿ ಹಾಕಿಕೊಂಡಿದೆ.
ಕ್ರೀಡಾ ಉತ್ಪನ್ನಗಳನ್ನು ತಯಾರಿಸುವ ಇನ್ನೊಂದು ಕಂಪನಿ ನೈಕ್ ಕೂಡ ತನ್ನ 60 ಪ್ರತಿಶತ ಉತ್ಪನ್ನಗಳಲ್ಲಿ ಮರುಬಳಕೆಯ ವಸ್ತುಗಳನ್ನು ಬಳಸುತ್ತದೆ. ‘ಅತಿಹೆಚ್ಚು ಮರುಬಳಕೆಯ ಪ್ಲಾಸ್ಟಿಕ್ ಬಳಸುವ ಉದ್ಯಮ ನಮ್ಮದಾಗಿದೆ. ನಾವು ವರ್ಷಕ್ಕೆ ಒಂದು ಶತಕೋಟಿ ಪ್ಲಾಸ್ಟಿಕ್ ಬಾಟಲಿಗಳನ್ನು ಇದಕ್ಕಾಗಿ ಉಪಯೋಗಿಸುತ್ತೇವೆ’ ಎಂದು ಕಂಪನಿಯ ಅಧಿಕಾರಿಗಳು ಹೇಳುತ್ತಾರೆ. ಪ್ರಾಡಾ, ಗುಸ್ಸಿ ಮತ್ತು ಸ್ಟೆಲ್ಲಾ ಮೆಕ್ ಕಾರ್ಟನಿಯಂತಹ ಉನ್ನತ ಫ್ಯಾಷನ್ ವಿನ್ಯಾಸ ಸಂಸ್ಥೆಗಳ ಬಟ್ಟೆಗಳಲ್ಲೂ ಮರುಬಳಕೆಯ ಪ್ಲಾಸ್ಟಿಕ್ ಬಳಸಲಾಗುತ್ತಿದೆ.
ಮರುಬಳಕೆಯೇ ಪರಿಹಾರಜಗತ್ತು ಎದುರಿಸುತ್ತಿರುವ ಪರಿಸರ ಸಂಬಂಧಿ ಸಮಸ್ಯೆಗಳಲ್ಲಿ ಪ್ಲಾಸ್ಟಿಕ್ ಮಾಲಿನ್ಯ ಪ್ರಮುಖವಾಗಿದೆ. ಎಲ್ಲಾ ಸಮುದ್ರ ಕಸದ ಪೈಕಿ 85 ಪ್ರತಿಶತ ಇರುವುದು ಪ್ಲಾಸ್ಟಿಕ್ ತ್ಯಾಜ್ಯ. ವಿಶ್ವ ಸಂಸ್ಥೆಯ ಪರಿಸರ ಕಾರ್ಯಕ್ರಮವು 2040ರ ವೇಳೆಗೆ ಸಾಗರದಲ್ಲಿನ ಪ್ಲಾಸ್ಟಿಕ್ ತ್ಯಾಜ್ಯದ ಪ್ರಮಾಣ ಅಂದಾಜು ಮೂರು ಪಟ್ಟು ಹೆಚ್ಚಾಗುತ್ತದೆ ಎಂದು ಹೇಳಿದೆ. ಪ್ರತಿ ವರ್ಷ 2.3 ಕೋಟಿಯಿಂದ 3.7 ಕೋಟಿ ಟನ್​ಗಳಷ್ಟು ಪ್ಲಾಸ್ಟಿಕ್ ತ್ಯಾಜ್ಯ ಸಮುದ್ರ ಸೇರಿಸುತ್ತದೆ. ಈ ಸಮಸ್ಯೆ ನಿವಾರಣೆಗೆ ಪ್ರಮುಖ ಪರಿಹಾರವೆಂದರೆ ಮರುಬಳಕೆ. ಇಲ್ಲಿಯವರೆಗೆ, ಕೇವಲ ಒಂಬತ್ತು ಪ್ರತಿಶತದಷ್ಟು ಪ್ಲಾಸ್ಟಿಕ್ ತ್ಯಾಜ್ಯವನ್ನು ಮರುಬಳಕೆ ಮಾಡಲಾಗುತ್ತದೆ. ಆದ್ದರಿಂದ, ಬಟ್ಟೆಗಳನ್ನು ತಯಾರಿಸಲು ಹೊಸ ಪ್ಲಾಸ್ಟಿಕ್​ನ ಬದಲಿಗೆ ಪ್ಲಾಸ್ಟಿಕ್ ಬಾಟಲಿಗಳನ್ನು ಬಳಸುವುದರಿಂದ ಪರಿಸರದಲ್ಲಿನ ಪ್ಲಾಸ್ಟಿಕ್​ನ ಪ್ರಮಾಣವನ್ನು ಕಡಿಮೆ ಮಾಡಬಹುದಾಗಿದೆ.
ಶೀಘ್ರ ಮಾರುಕಟ್ಟೆಗೆಮರುಬಳಕೆಯ ಪ್ಲಾಸ್ಟಿಕ್ ಬಾಟಲಿಗಳಿಂದ ತಯಾರಿಸಿದ ಜಾಕೆಟ್​ಗಳು ಇನ್ನು ಮೂರು ತಿಂಗಳಲ್ಲಿ ದೇಶದ ಪ್ರಮುಖ ನಗರಗಳಲ್ಲಿ ಮಾರಾಟಕ್ಕೆ ಲಭ್ಯವಾಗಲಿವೆ. ಐಒಸಿಎಲ್, ಬಿಪಿಸಿಎಲ್ ಮತ್ತು ಎಚ್​ಪಿಸಿಎಲ್ ಪೆಟ್ರೋಲ್ ಬಂಕ್​ಗಳಲ್ಲಿ ಸಾರ್ವಜನಿಕರಿಗೆ ಇವುಗಳನ್ನು ಮಾರಾಟ ಮಾಡಲಾಗುತ್ತದೆ.
ಐಒಸಿ ಸಿಬ್ಬಂದಿ ಸಮವಸ್ತ್ರಸರ್ಕಾರಿ ಸ್ವಾಮ್ಯದ ತೈಲ ಕಂಪನಿಯಾದ ಇಂಡಿಯನ್ ಆಯಿಲ್ ಕಾಪೋರೇಶನ್ (ಐಒಸಿ) ತನ್ನ ‘ಅನ್​ಬಾಟಲ್ಡ್’ ಕಾರ್ಯಕ್ರಮದ ಅಂಗವಾಗಿ ಪೆಟ್ರೋಲ್ ಬಂಕ್​ಗಳ ಸಿಬ್ಬಂದಿ ಹಾಗೂ ಎಲ್​ಪಿಜಿ ಸಿಲಿಂಡರ್ ವಿತರಿಸುವ ಸಿಬ್ಬಂದಿಗೆ ಮರುಬಳಕೆಯ ಪಾಲಿಯೆಸ್ಟರ್ ಮತ್ತು ಹತ್ತಿಯಿಂದ ತಯಾರಿಸಿದ ಸಮವಸ್ತ್ರ ಬಳಸಲು ಮುಂದಾಗಿದೆ. ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಮರುಬಳಕೆಯ ಪ್ಲಾಸ್ಟಿಕ್​ನಿಂದ ಮಾಡಿದ ಸಮವಸ್ತ್ರವನ್ನು ಪ್ರಧಾನಿ ಬಿಡುಗಡೆ ಮಾಡಿದರು. ಇಂಥ ಪ್ರತಿಯೊಂದು ಸಮವಸ್ತ್ರಕ್ಕೆ 28 ಪೆಟ್ ಬಾಟಲಿಗಳನ್ನು ಬಳಸಲಾಗಿದೆ.
ಮಗುವಿಗೆ ಜನ್ಮ ನೀಡಿದ ತೃತೀಯಲಿಂಗಿ ದಂಪತಿಗೆ ಎದುರಾಯ್ತು ಮೊದಲ ಅಡ್ಡಿ! ಕಾನೂನು ಹೋರಾಟಕ್ಕೂ ಸೈ ಎಂದ ಜಿಯಾ

ಭಾರತದಲ್ಲಿ ಇಸ್ಲಾಂ ಆಳ್ವಿಕೆ ಸ್ಥಾಪನೆ ಪಿಎಫ್​ಐ ಗುರಿ

ಟರ್ಕಿ ಮತ್ತು ಸಿರಿಯಾದಲ್ಲಿ ಸಂಭವಿಸಿದ ಭೂಕಂಪದಲ್ಲಿ ಮೃತಪಟ್ಟವರ ಸಂಖ್ಯೆ 19,300ಕ್ಕೇರಿಕೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen − 6 =
Remember me
