ಹೆಚ್ಚಿನ ಪ್ರಮಾಣದ ಕೃಷಿ ಸಬ್ಸಿಡಿ ಒದಗಿಸುವ ಭಾರತ ನಿಲುವಿಗೆ ಮುಂದುವರಿದ ರಾಷ್ಟ್ರಗಳು ಮೊದಲಿನಿಂದಲೂ ವಿರೋಧ ವ್ಯಕ್ತಪಡಿಸುತ್ತ ಬಂದಿವೆ. ಆಹಾರ ಭದ್ರತೆ ಉದ್ದೇಶದಿಂದ ಆಹಾರ ರಫ್ತು ನಿಷೇಧ ಸ್ವಾತಂತ್ರ್ಯ ಇರಬೇಕೆಂದು ಭಾರತ ಪ್ರತಿಪಾದಿಸುತ್ತಿದೆ. ಡಬ್ಲ್ಯುಟಿಒ ಆಯೋಜಿಸಿರುವ ಸಚಿವರ ಸಮಾವೇಶದಲ್ಲಿ ಈ ಸಂಗತಿಗಳ ಕುರಿತು ಚರ್ಚೆಗಳು ನಡೆಯಲಿವೆ.
ವಿಶ್ವ ವ್ಯಾಪಾರ ಸಂಸ್ಥೆಯು (ಡಬ್ಲ್ಯುಟಿಒ) ನಾಲ್ಕೂವರೆ ವರ್ಷಗಳ ನಂತರ ಜೂನ್ 12 ರಿಂದ ಮೂರು ದಿನಗಳ ಕಾಲ ಸಚಿವರ ಸಮ್ಮೇಳನವನ್ನು ಆಯೋಜಿಸಲು ಸಿದ್ಧತೆ ನಡೆಸಿದೆ. ಜಿನೀವಾದಲ್ಲಿ ನಡೆಯಲಿರುವ ಈ ಸಮ್ಮೇಳನದಲ್ಲಿ ಭಾರತವೂ ಸೇರಿ 164 ರಾಷ್ಟ್ರಗಳ ಸದಸ್ಯರು ಭಾಗವಹಿಸುತ್ತಿದ್ದು, ಇಲ್ಲಿ ನಡೆಯಲಿರುವ ಚರ್ಚೆ ಮತ್ತು ಫಲಿತಗಳ ಕುರಿತು ನಾನಾ ವಲಯಗಳಲ್ಲಿ ಕುತೂಹಲ ಮೂಡಿದೆ.
ರಷ್ಯಾ- ಯೂಕ್ರೇನ್ ಸಮರ ಮುಂದುವರಿದಿರುವ ನಡುವೆಯೇ, ವಿಶ್ವ ವ್ಯಾಪಾರ ಸಂಸ್ಥೆಯ (ಡಬ್ಲ್ಯುಟಿಒ) ಸಚಿವರ ಸಮ್ಮೇಳನ ಏರ್ಪಾಡಾಗಿರುವುದು ಜಾಗತಿಕ ವಲಯದಲ್ಲಿ ಗಮನಸೆಳೆದಿದೆ. ಈ ಸಮಾವೇಶದಲ್ಲಿ ಆಹಾರ, ರಫ್ತು, ಕೃಷಿ ಸಬ್ಸಿಡಿ ಮುಂತಾದ ವಿಚಾರವಾಗಿ ಪ್ರಮುಖ ನಿರ್ಣಯಗಳು ಹೊರಹೊಮ್ಮುವ ಸಾಧ್ಯತೆಗಳಿವೆ.
ವಿಶ್ವ ಆಹಾರ ಕಾರ್ಯಕ್ರಮ (ಡಬ್ಲ್ಯುಎಫ್​ಪಿ) ಹಿನ್ನೆಲೆಯಲ್ಲಿ ರಫ್ತುಗಳನ್ನು ನಿರ್ಬಂಧಿಸಬಾರದು ಹಾಗೂ ಸಾರ್ವಜನಿಕ ಆಹಾರ ದಾಸ್ತಾನನ್ನು ತನ್ನ ಜನರ ಆಹಾರ ಭದ್ರತೆಗಾಗಿ ಬಳಸಲು ಎಲ್ಲ ರಾಷ್ಟ್ರಗಳಿಗೆ ಮುಕ್ತ ಅವಕಾಶ ಇರಬೇಕು ಎಂಬುದು ಭಾರತದ ಪ್ರಮುಖ ನಿಲುವಾಗಿದೆ.
ಭಾರತದ ಈ ನಿಲುವು ರಷ್ಯಾ-ಯೂಕ್ರೇನ್ ಯುದ್ಧದ ಸಂದರ್ಭದಲ್ಲಿ ಉದ್ಭವಿಸಿದ ಬಿಕ್ಕಟ್ಟಿನಿಂದಾಗಿ ಮಹತ್ವ ಪಡೆದುಕೊಂಡಿದೆ. ಈ ಯುದ್ಧವು ಗೋಧಿಯ ಜಾಗತಿಕ ವ್ಯಾಪಾರದ ಮೇಲೆ ಪರಿಣಾಮ ಬೀರಿದ್ದು, ಬೆಲೆಯು ಹಲವಾರು ಪಟ್ಟು ಹೆಚ್ಚಾಗಲು ಕಾರಣವಾಗಿದೆ. ಭಾರತದ ಈ ನಿಲುವು ಅಭಿವೃದ್ಧಿ ಹೊಂದುತ್ತಿರುವ ದೇಶಗಳ ವಾಸ್ತವಗಳನ್ನು ಪ್ರತಿಬಿಂಬಿಸುವಂತಿದೆ. ಆದರೆ ಶ್ರೀಮಂತ ರಾಷ್ಟ್ರಗಳ ಗುಂಪು ಈ ನಿಲುವನ್ನು ವಿರೋಧಿಸುತ್ತಿದೆ.
ಜಿನೀವಾದಲ್ಲಿ ಈಗ ಆಯೋಜಿಸುತ್ತಿರುವುದು 12ನೇ ಸಚಿವರ ಸಮ್ಮೇಳನವಾಗಿದೆ. ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ ಸಚಿವ ಪಿಯೂಷ್ ಗೋಯಲ್ ನೇತೃತ್ವದ ಭಾರತೀಯ ನಿಯೋಗವು ಎರಡು ನಿರ್ದಿಷ್ಟ ಕಾರ್ಯಸೂಚಿಗಳೊಂದಿಗೆ ಈ ಸಭೆಯಲ್ಲಿ ಪಾಲ್ಗೊಳ್ಳುತ್ತಿದೆ. ಮೊದಲನೆಯದಾಗಿ, ರೈತರಿಂದ ಪಡೆದುಕೊಂಡು ಸಂಗ್ರಹಿಸಿರುವ ಸಾರ್ವಜನಿಕ ಆಹಾರ ದಾಸ್ತಾನುಗಳನ್ನು ಬಳಸುವ ಮುಕ್ತ ಸ್ವಾತಂತ್ರ್ಯವನ್ನು ಎಲ್ಲ ರಾಷ್ಟ್ರಗಳು ಹೊಂದಬೇಕೆಂದು ಭಾರತ ಬಯಸುತ್ತದೆ. ಅಲ್ಲದೆ, ಅಗತ್ಯವಿರುವ ಸಂದರ್ಭಗಳಲ್ಲಿ ಆಹಾರದ ಮಾನವೀಯ ನೆರವನ್ನು ಒಂದು ರಾಷ್ಟ್ರದ ಸರ್ಕಾರವು ಇನ್ನೊಂದು ರಾಷ್ಟ್ರದ ಸರ್ಕಾರಕ್ಕೆ ನೇರವಾಗಿ ಒದಗಿಸುವ ಸ್ವಾತಂತ್ರ್ಯವನ್ನು ಕೂಡ ಭಾರತ ನಿರೀಕ್ಷಿಸುತ್ತದೆ.
ಆದರೆ, ಇಂತಹ ಕ್ರಮಗಳು ಮಾರುಕಟ್ಟೆಯನ್ನು ವಿರೂಪಗೊಳಿಸುತ್ತವೆ ಎಂಬ ಕಾರಣಕ್ಕಾಗಿ ಡಬ್ಲು ್ಯಒದ ನಿಯಮಗಳ ಅಡಿಯಲ್ಲಿ ಇದನ್ನು ನಿರ್ಬಂಧಿಸ ಲಾಗಿದೆ. ನೆರೆಯ ದೇಶವಾದ ಶ್ರೀಲಂಕಾವು ಇತ್ತೀಚೆಗೆ ಬಿಕ್ಕಟ್ಟಿಗೆ ಸಿಲುಕಿದ ಸಂದರ್ಭದ ಉದಾಹರಣೆ ನೀಡುವ ಮೂಲಕ ಭಾರತವು, ಅಗತ್ಯವಿರುವ ದೇಶಗಳಿಗೆ ನೇರವಾಗಿಯೇ ಆಹಾರದ ನೆರವನ್ನು ನೀಡಲು ಎಲ್ಲ ರಾಷ್ಟ್ರಗಳಿಗೆ ಅವಕಾಶ ನೀಡಬೇಕೆಂದು ಪ್ರತಿಪಾದಿಸಿದೆ.
ಭಾರತದ ಎರಡನೆಯ ಪ್ರಮುಖ ಬೇಡಿಕೆಯೆಂದರೆ ಕೃಷಿ ಸಬ್ಸಿಡಿ. ಅಭಿವೃದ್ಧಿಶೀಲ ರಾಷ್ಟ್ರಗಳು ತಮ್ಮ ರೈತರಿಗೆ ಹೆಚ್ಚಿನ ಸಬ್ಸಿಡಿಗಳನ್ನು ನೀಡುವ ಸ್ವಾತಂತ್ರ್ಯವನ್ನು ಅನುಮತಿಸುವ ಸಂಕೀರ್ಣ ಸಮಸ್ಯೆಗೆ ಶಾಶ್ವತ ಪರಿಹಾರವನ್ನು ಡಬ್ಲು ್ಯಒ ಕಂಡುಕೊಳ್ಳಬೇಕೆಂಬುದು ಭಾರತದ ದೀರ್ಘಕಾಲದ ಬೇಡಿಕೆಯಾಗಿದೆ. ಈ ಬೇಡಿಕೆ ಕೂಡ ಮಾರುಕಟ್ಟೆಯನ್ನು ವಿರೂಪಗೊಳಿಸುತ್ತದೆ ಎಂಬಂತೆ ನೋಡಲಾಗುತ್ತಿದೆ. ಸಚಿವರ ಸಮಾವೇಶದಲ್ಲಿ ಈ ವಿಷಯ ಪ್ರಸ್ತಾಪವಾಗುವ ಸಾಧ್ಯತೆಯಿದ್ದು, ಪರ-ವಿರೋಧದ ಚರ್ಚೆಗಳು ನಡೆಯುವ ನಿರೀಕ್ಷೆ ಇದೆ. ಕಳೆದ ಮೇ 13ರಂದು ಭಾರತವು ತನ್ನ ಒಟ್ಟಾರೆ ಆಹಾರ ಭದ್ರತೆ ಪರಿಸ್ಥಿತಿಯನ್ನು ನಿರ್ವಹಿಸುವುದಕ್ಕಾಗಿ ಹಾಗೂ ಬೆಲೆ ಏರಿಕೆ ತಡೆಯುವುದಕ್ಕಾಗಿ ಗೋಧಿಯ ರಫ್ತು ನಿಷೇಧಿಸಿತ್ತು ಎಂಬುದು ಇಲ್ಲಿ ಗಮನಾರ್ಹ. ಆಹಾರ ಭದ್ರತೆಗಾಗಿ ಇಂತಹ ಕ್ರಮಗಳನ್ನು ಕೈಗೊಳ್ಳುವ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳಲು ಭಾರತ ಬಯಸಿದೆ.
‘ಸ್ವಂತ ಆಹಾರ ಭದ್ರತೆ ಅಪಾಯದಲ್ಲಿರುವಾಗ ಆಹಾರ ಪದಾರ್ಥಗಳ ರಫ್ತುಗಳ ಮೇಲೆ ನಿರ್ಬಂಧಗಳನ್ನು ವಿಧಿಸುವ ಸದಸ್ಯರ ರಾಷ್ಟ್ರಗಳ ಹಕ್ಕನ್ನು ಡಬ್ಲು ್ಯಒ ಮಿತಿಗೊಳಿಸುವುದಿಲ್ಲ. ಇಂತಹ ಸಂದರ್ಭಗಳಲ್ಲಿ ಸದಸ್ಯ ರಾಷ್ಟ್ರಗಳು ವಿಶ್ವ ವ್ಯಾಪಾರ ಸಂಸ್ಥೆಯು ನಿಯಮಗಳನ್ನು ಗಮನಿಸಬೇಕು’ ಎಂದು ಡಬ್ಲು ್ಯಒ ರಾಯಭಾರಿ ಗ್ಲೋರಿಯಾ ಅಬ್ರಹಾಂ ಪೆರಾಲ್ಟಾ ಹೇಳಿರುವುದು ಸಚಿವರ ಸಮಾವೇಶದ ಹಿನ್ನೆಲೆಯಲ್ಲಿ ಮಹತ್ವ ಪಡೆದುಕೊಂಡಿದೆ.
ಏನಿದು ಡಬ್ಲ್ಯುಟಿಒ?:ಜಾಗತಿಕ ರಾಷ್ಟ್ರಗಳ ನಡುವಿನ ವ್ಯಾಪಾರದ ನಿಯಮಗಳನ್ನು ರೂಪಿಸುವ ಏಕೈಕ ಜಾಗತಿಕ ಸಂಘಟನೆ ವಿಶ್ವ ವ್ಯಾಪಾರ ಸಂಸ್ಥೆ (ಡಬ್ಲು ್ಯಒ). ಅಂತಾರಾಷ್ಟ್ರೀಯ ವ್ಯಾಪಾರದ ಮೇಲ್ವಿಚಾರಣೆ ಮಾಡುವ ಹಾಗೂ ಉದಾರಗೊಳಿಸುವ ಆಶಯವನ್ನು ಇದು ಹೊಂದಿದೆ. 1995ರ ಜನವರಿ 1ರಂದು ಅಸ್ತಿತ್ವಕ್ಕೆ ಬಂದಿತು. ಸರಕು ಮತ್ತು ಸೇವೆಗಳ ಉತ್ಪಾದಕರು, ರಫ್ತುದಾರರು ಮತ್ತು ಆಮದುದಾರರು ತಮ್ಮ ವ್ಯವಹಾರವನ್ನು ಸೂಕ್ತ ರೀತಿಯಲ್ಲಿ ನಡೆಸಲು ಸಹಾಯ ಮಾಡುವುದು ಈ ಸಂಸ್ಥೆಯ ಗುರಿ.
ಮೀನುಗಾರರ ಆಕ್ಷೇಪ:ರಾಷ್ಟ್ರೀಯ ಮೀನುಗಾರರ ವೇದಿಕೆಯು (ಎನ್​ಎಫ್​ಎಫ್) ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಅವರಿಗೆ ಪತ್ರ ಬರೆದಿದ್ದು, ಕಡಿಮೆ ಆದಾಯ ಮತ್ತು ಸಂಪನ್ಮೂಲ ಅಭಾವವಿರುವ ಮೀನುಗಾರಿಕೆ ಚಟುವಟಿಕೆಗಳಿಗೆ ನೀಡುತ್ತಿರುವ ವಿನಾಯಿತಿಗಳು ಅತ್ಯಂತ ಸೀಮಿತವಾಗಿವೆ ಎಂದು ಆಕ್ಷೇಪ ವ್ಯಕ್ತಪಡಿಸಿದೆ. ಜಿನೀವಾದಲ್ಲಿ ನಡೆಯುವ ಡಬ್ಲು್ಯಟಿಒ ಸಭೆಯಲ್ಲಿ, ಮೀನುಗಾರಿಕೆ ಸಬ್ಸಿಡಿ ಕುರಿತ ಒಪ್ಪಂದಕ್ಕೆ ಸಹಿ ಹಾಕದಂತೆ ಸಚಿವ ಗೋಯಲ್ ಅವರನ್ನು ಒತ್ತಾಯಿಸಿದೆ. ಈ ರೀತಿಯ ಕ್ರಮವು ಮೀನುಗಾರರ ಜೀವನೋಪಾಯ ಹಾಗೂ ದೇಶದ ಲಕ್ಷಾಂತರ ಜನರ ಆಹಾರ ಭದ್ರತೆಯನ್ನು ನಾಶಪಡಿಸುತ್ತದೆ ಎಂದು ಎಚ್ಚರಿಸಿದೆ.
ಹೆಚ್ಚಿನ ಸಣ್ಣ ಮೀನುಗಾರರು ಸಾಮಾನ್ಯವಾಗಿ ತಿಳಿಯದೆಯೇ 12 ನಾಟಿಕಲ್ ಮೈಲುಗಳ ಗಡಿಯನ್ನು ದಾಟುತ್ತಾರೆ. ಈ ರೀತಿಯಾದಾಗ ಈ ಮೀನುಗಾರರು ಸಬ್ಸಿಡಿಗಳನ್ನು ಪಡೆಯಲು ಸಾಧ್ಯವಿಲ್ಲ ಎಂದು ಡಬ್ಲು್ಯಟಿಒ ಒಪ್ಪಂದವು ಸೂಚಿಸುತ್ತದೆ. ಇದು ಅನ್ಯಾಯ ಎಂದು ಮೀನುಗಾರರ ಒಕ್ಕೂಟವು ಪತ್ರದಲ್ಲಿ ಹೇಳಿದೆ. ಇದು ಭವಿಷ್ಯದಲ್ಲಿ ಲಕ್ಷಾಂತರ ಭಾರತೀಯರಿಗೆ ಜೀವನೋಪಾಯ ನಿರಾಕರಿಸುತ್ತದೆ ಮತ್ತು ಆಹಾರ ಭದ್ರತೆ ನಾಶಪಡಿಸುತ್ತದೆ ಎಂದೂ ಅದು ಹೇಳಿದೆ. ಡಬ್ಲು ್ಯಒದಲ್ಲಿನ ಮೀನುಗಾರಿಕೆ ಸಬ್ಸಿಡಿಗಳ ಪ್ರಸ್ತಾವನೆಯು ಅಕ್ರಮ, ಅನಿಯಂತ್ರಿತ ಮೀನುಗಾರಿಕೆಗಳ ಮೇಲಿನ ಸಬ್ಸಿಡಿಗಳನ್ನು ತೆಗೆದುಹಾಕುವ ಮತ್ತು ಸುಸ್ಥಿರ ಮೀನುಗಾರಿಕೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. ಆದರೆ, ಭಾರತದಲ್ಲಿ ಮೀನುಗಾರಿಕೆ ವಲಯವು ಇನ್ನೂ ಆರಂಭಿಕ ಹಂತದಲ್ಲಿರುವುದರಿಂದ ಭಾರತವು ಸಬ್ಸಿಡಿ ರದ್ದುಪಡಿಸುವುದನ್ನು ಒಪ್ಪಿಕೊಳ್ಳಲು ಸಿದ್ಧವಾಗಿಲ್ಲ. ಮಿತಿಮೀರಿದ ಮೀನುಗಾರಿಕೆ ಮೇಲೆ ಹೇರಲಾಗುವ ಸಬ್ಸಿಡಿ ನಿಷೇಧ ಕ್ರಮಗಳಿಂದ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಕನಿಷ್ಠ 25 ವರ್ಷ ವಿನಾಯಿತಿ ನೀಡಬೇಕೆಂಬ ಬೇಡಿಕೆ ಭಾರತದ್ದಾಗಿದೆ.
ಏನಿದು ಡಬ್ಲ್ಯುಎಫ್​ಪಿ?:ವಿಶ್ವ ಆಹಾರ ಕಾರ್ಯಕ್ರಮವು (ಡಬ್ಲ್ಯುಎಫ್​ಪಿ) ವಿಶ್ವಸಂಸ್ಥೆಯ ಆಹಾರಸಂಬಂಧಿ ಶಾಖೆಯಾಗಿದೆ. ಇದು ವಿಶ್ವದ ಅತಿದೊಡ್ಡ ಮಾನವೀಯ ನೆರವಿನ ಸಂಸ್ಥೆಯಾಗಿದ್ದು, ಹಸಿವು ಮತ್ತು ಆಹಾರ ಭದ್ರತೆ ಮೇಲೆ ಗಮನ ನೀಡುತ್ತದೆ. ಶಾಲಾ ಊಟದ ಅತಿದೊಡ್ಡ ಪೂರೈಕೆದಾರ ಕೂಡ ಆಗಿದೆ. 1961ರಲ್ಲಿ ಸ್ಥಾಪನೆಯಾದ ಈ ಸಂಘಟನೆಯು ರೋಮ್ಲ್ಲಿ ಪ್ರಧಾನ ಕಚೇರಿ ಹಾಗೂ ಮತ್ತು ಜಗತ್ತಿನ 80 ದೇಶಗಳಲ್ಲಿ ಕಚೇರಿಗಳನ್ನು ಹೊಂದಿದೆ. ಯುದ್ಧ ನಡೆದ ಪ್ರದೇಶಗಳಲ್ಲಿ ಆಹಾರದ ನೆರವು ಒದಗಿಸಿದ್ದಕ್ಕಾಗಿ ಹಾಗೂ ಯುದ್ಧದ ಸಂದರ್ಭದಲ್ಲಿ ಆಹಾರವನ್ನು ಒಂದು ಅಸ್ತ್ರವನ್ನಾಗಿ ಬಳಕೆ ಮಾಡುವುದನ್ನು ತಡೆಗಟ್ಟಲು ಶ್ರಮಿಸಿದ್ದಕ್ಕಾಗಿ 2020ರಲ್ಲಿ ಈ ಸಂಸ್ಥೆಗೆ ನೊಬೆಲ್ ಶಾಂತಿ ಪುರಸ್ಕಾರ ನೀಡಲಾಗಿದೆ. ತುರ್ತು ಸಂದರ್ಭಗಳಲ್ಲಿ ಆಹಾರದ ನೆರವು ನೀಡುವುದರ ಜತೆಗೆ, ತುರ್ತು ವಿಕೋಪಗಳ ಸಂದರ್ಭದಲ್ಲಿ ತಾಂತ್ರಿಕ ನೆರವು, ಹಣಕಾಸಿನ ಸಹಾಯ ಒದಗಿಸುತ್ತದೆ. ವೈದ್ಯಕೀಯ ನೆರವನ್ನೂ ಕಲ್ಪಿಸುತ್ತದೆ.
ಕೃಷಿ ಸಬ್ಸಿಡಿ ತಕರಾರು:ಕೃಷಿ ಸಬ್ಸಿಡಿ ನೀಡುವುದರಿಂದ ಜಾಗತಿಕವಾಗಿ ಮಾರುಕಟ್ಟೆಯಲ್ಲಿ ಅಸಮಾನತೆ ಸೃಷ್ಟಿಯಾಗುತ್ತದೆ. ಸಬ್ಸಿಡಿ ನೀಡದ ಹಾಗೂ ನೀಡಲು ಸಾಧ್ಯವಾಗದಿರುವ ದೇಶಗಳ ಉತ್ಪಾದಕರಿಗೆ ಅನಾನುಕೂಲ ಉಂಟಾಗುತ್ತದೆ ಎಂಬುದು ಡಬ್ಲು ್ಯಒ ನಿಲುವಾಗಿದೆ. ಹೀಗಾಗಿ, ಜಾಗತಿಕ ವ್ಯಾಪಾರದಲ್ಲಿ ಹೆಚ್ಚಿನ ಬಾಧೆ ಉಂಟಾಗದಂತೆ ಅಲ್ಪಪ್ರಮಾಣದ ಸಬ್ಸಿಡಿ ನೀಡುವ ಉದ್ದೇಶದೊಂದಿಗೆ ಅನೇಕ ನಿಯಮಾವಳಿಗಳನ್ನು ಅದು ರೂಪಿಸಿದೆ. ಮುಂದುವರಿದ ರಾಷ್ಟ್ರಗಳಿಗೆ ಶೇ. 5ರಷ್ಟು ಹಾಗೂ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಶೇ. 10ರಷ್ಟು ಕೃಷಿ ಸಬ್ಸಿಡಿ ನೀಡಲು ನಿಯಮಾವಳಿಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಭಾರತವು ಶೇ. 10ರ ಮಿತಿಯನ್ನು ದಾಟಿ, ಭತ್ತ ಮತ್ತು ಗೋಧಿಗೆ ಶೇ. 60ರಿಂದ 70ರವರೆಗೆ ಸಬ್ಸಿಡಿ ನೀಡುತ್ತಿದೆ ಎಂದು ಅಮೆರಿಕ ತಕಾರರು ಮಾಡುತ್ತಲೇ ಇದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine + thirteen =
Remember me
