ನವದೆಹಲಿ:ದೇಶಾದ್ಯಂತ 10 ಲಕ್ಷ ಹುದ್ದೆಗಳಿಗೆ ನೇಮಕಾತಿ ನಡೆಸುವ ಮಹತ್ವಾಕಾಂಕ್ಷಿ ಯೋಜನೆಯ ಅಂಗವಾಗಿ ‘ರೋಜ್​ಗಾರ್ ಮೇಳ’ಕ್ಕೆ ಶನಿವಾರ ಚಾಲನೆ ನೀಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ದೀಪಾವಳಿ ಉಡುಗೊರೆ ನೀಡಿದ್ದಾರೆ. ಜತೆಗೆ 75,000 ಮಂದಿಗೆ ವಿವಿಧ ರಾಜ್ಯಗಳಲ್ಲಿ ನೇಮಕಾತಿ ಪತ್ರಗಳನ್ನೂ ವಿತರಿಸಲಾಗಿದೆ. ಕೇಂದ್ರ ಸರ್ಕಾರ ಹೊಸ ಉದ್ಯೋಗ ಸೃಷ್ಟಿಸುವಲ್ಲಿ ವಿಫಲವಾಗಿದ್ದು, ದೇಶದ ಯುವಕರಿಗೆ ಕೆಲಸ ಇಲ್ಲದಂತಾಗಿದೆ ಎಂದು ಕಾಂಗ್ರೆಸ್ ನಾಯಕರು ಭಾರತ್ ಜೋಡೋ ಯಾತ್ರೆಯಲ್ಲಿ ವಾಗ್ದಾಳಿ ನಡೆಸುತ್ತಿರುವ ಬೆನ್ನಲ್ಲೇ, ಇದಕ್ಕೆ ಪ್ರಧಾನಿ ಪ್ರಬಲ ತಿರುಗೇಟು ನೀಡಿದ್ದಾರೆ.
ಕೇಂದ್ರ ಸಶಸ್ತ್ರ ಪಡೆಗಳ ಸಿಬ್ಬಂದಿ, ಸಬ್ ಇನ್​ಸ್ಪೆಕ್ಟರ್, ಕಾನ್​ಸ್ಟೆಬಲ್, ಎಲ್​ಡಿಸಿ, ಸ್ಟೆನೋಗ್ರಾಫರ್, ಸಹಾಯಕ ಸಿಬ್ಬಂದಿ, ಆದಾಯ ತೆರಿಗೆ ಇನ್ಸ್​ಪೆಕ್ಟರ್ ಮತ್ತು ಎಂಟಿಎಸ್ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ನೇಮಕಾತಿಗಳನ್ನು ಇಲಾಖೆಗಳು ಸ್ವತಃ ಅಥವಾ ಯುಪಿಎಸ್​ಸಿ, ಎಸ್​ಎಸ್​ಸಿ ಮತ್ತು ರೈಲ್ವೆ ನೇಮಕಾತಿ ಮಂಡಳಿಗಳ ಮೂಲಕ ನಡೆಸುತ್ತಿವೆ. ತ್ವರಿತ ನೇಮಕಾತಿಗಾಗಿ ಆಯ್ಕೆ ಪ್ರಕ್ರಿಯೆಗಳನ್ನು ಸರಳೀಕರಿಸಿ, ಆಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಳ್ಳಲು ನಿರ್ಧರಿಸಲಾಗಿದೆ.
ಪ್ರಸ್ತುತ ಕೇಂದ್ರ ಸರ್ಕಾರದ 38 ಸಚಿವಾಲಯಗಳಲ್ಲಿ 75 ಸಾವಿರ ನೇಮಕಾತಿಗಳು ನಡೆದಿವೆ. ಈ ಹೊಸ ನೌಕರರು ಗ್ರೂಪ್ ಎ ಮತ್ತು ಬಿ (ಗೆಜೆಟೆಡ್), ಗ್ರೂಪ್ ಬಿ (ನಾನ್ ಗೆಜೆಟೆಡ್) ಮತ್ತು ಸಿ ಗುಂಪಿನಲ್ಲಿ ವಿವಿಧ ಹಂತಗಳಲ್ಲಿ ಕೆಲಸ ಮಾಡಲಿದ್ದಾರೆ. ಇನ್ನು ಕೆಲ ತಿಂಗಳಲ್ಲಿ ಖಾಲಿ ಇರುವ ಲಕ್ಷಗಟ್ಟಲೆ ಹುದ್ದೆಗಳಿಗೆ ಆಯ್ಕೆ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.
ಭ್ರಷ್ಟಾಚಾರರಹಿತ ಪ್ರಕ್ರಿಯೆ:ಉದ್ಯೋಗ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದ ಪ್ರಧಾನಿ ಮೋದಿ, ಇಂದು ಕೆಲಸದ ಸಂಸ್ಕೃತಿ ಬದಲಾಗುತ್ತಿದೆ. ದೇಶದ ಕರ್ಮಯೋಗಿಗಳ ಪ್ರಯತ್ನದಿಂದ ಸರ್ಕಾರಿ ಇಲಾಖೆಗಳ ದಕ್ಷತೆ ಹೆಚ್ಚಾಗಿದೆ. ಈ ಹಿಂದೆ ಸರ್ಕಾರಿ ಉದ್ಯೋಗಗಳಿಗೆ ಅರ್ಜಿ ಸಲ್ಲಿಸುವುದೇ ತೊಡಕಿನ ಪ್ರಕ್ರಿಯೆಯಾಗಿತ್ತು. ಮಿತಿಮೀರಿದ ಭ್ರಷ್ಟಾಚಾರಗಳಿದ್ದವು. ಬಿಜೆಪಿ ಸರ್ಕಾರ ಗ್ರೂಪ್ ಸಿ ಮತ್ತು ಗ್ರೂಪ್ ಡಿ ಹುದ್ದೆಗಳಿಗೆ ಸ್ವಯಂ ದೃಢೀಕರಣ ಮತ್ತು ಸಂದರ್ಶನ ಪ್ರಕ್ರಿಯೆ ರದ್ದುಗೊಳಿಸಿದೆ. ಇದರಿಂದ ಯುವಕರಿಗೆ ಸಹಾಯವಾಗಿದೆ. ಕರೊನಾ ನಂತರದ ಆರ್ಥಿಕ ಸಮಸ್ಯೆಗಳ ಹೊಡೆತದಿಂದ ಹೊರಬರುವ ನಿಟ್ಟಿನಲ್ಲಿ ಸರ್ಕಾರ ಕೆಲಸ ಮಾಡುತ್ತಿದೆ. ಯುವಜನರಿಗೆ ಗರಿಷ್ಠ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಸರ್ಕಾರ ಅನೇಕ ರಂಗಗಳಲ್ಲಿ ಕೆಲಸ ಮಾಡುತ್ತಿದೆ ಎಂದು ವಿವರಿಸಿದರು. ಇನ್ನೊಂದೆಡೆ, ಮಧ್ಯಪ್ರದೇಶದಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆಯ (ಪಿಎಂಎವೈ) 4.5 ಲಕ್ಷ ಫಲಾನುಭವಿಗಳ ‘ಗೃಹಪ್ರವೇಶ’ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ವಿಡಿಯೋ ಕಾನ್ಪರೆನ್ಸ್ ಮೂಲಕ ಭಾಗವಹಿಸಿದರು.
ಬೆಂಗಳೂರು:ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳ ಉದ್ಯೋಗ ಭರ್ತಿ, ಸ್ವಯಂ ಉದ್ಯೋಗ ಸೃಜನೆ ಪರ್ವವು ವರ್ಷಪೂರ್ತಿ ನಡೆಯಲಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳು, ಗಣಿ, ಕಲ್ಲಿದ್ದಲು ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ಬೆಂಗಳೂರಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಅಂಚೆ ಇಲಾಖೆ, ಕರ್ನಾಟಕ ವೃತ್ತ ಆಯೋಜಿಸಿದ್ದ ಉದ್ಯೋಗ ಮೇಳ ಕಾರ್ಯಕ್ರಮದಲ್ಲಿ ಕೇಂದ್ರದ 17 ಇಲಾಖೆಗಳಿಗೆ ಆಯ್ಕೆಯಾದ 28 ಅಭ್ಯರ್ಥಿಗಳಿಗೆ ನೇಮಕಪತ್ರ ವಿತರಿಸಿ ಮಾತನಾಡಿದರು.
ರಕ್ಷಣೆ, ಸಿಆರ್​ಪಿಎಫ್, ರೈಲ್ವೆ, ಬ್ಯಾಂಕ್, ಅಂಚೆ, ಆದಾಯ ತೆರಿಗೆ, ಇಎಸ್​ಐಸಿ, ಇಸ್ರೋ ಸೇರಿ ಕೇಂದ್ರ ವಿವಿಧ ಇಲಾಖೆಗಳ ನೌಕರಿ ಪಡೆದುಕೊಂಡಿದ್ದು, ಈ ಪೈಕಿ ಕರ್ನಾಟಕದ ಒಂದು ಸಾವಿರ ಉದ್ಯೋಗಿಗಳಿದ್ದಾರೆ. ಪ್ರತಿಭೆ, ಸಾಮರ್ಥ್ಯ, ಕೌಶಲವುಳ್ಳ ಯುವಜನತೆ ಉದ್ಯೋಗ ಕೇಳಬಾರದು, ಉದ್ಯೋಗದಾತರಾಗಬೇಕು ಎನ್ನುವುದು ಮೋದಿ ಅಪೇಕ್ಷೆಯಾಗಿದೆ. ಈ ನಿಟ್ಟಿನಲ್ಲಿ ಡಿಜಿಟಲ್ ಇಂಡಿಯಾ, ಮೇಕ್ ಇನ್ ಇಂಡಿಯಾ, ಆತ್ಮನಿರ್ಭರ್ ಭಾರತ ಪರಿಕಲ್ಪನೆಯಡಿ ಹತ್ತಾರು ಉಪಕ್ರಮಗಳನ್ನು ಕೈಗೊಂಡಿದ್ದಾರೆ ಎಂದು ಮಾಹಿತಿ ನೀಡಿದರು.
ನಾವೀನ್ಯತೆ, ನವೋದ್ಯಮ, ತಂತ್ರಜ್ಞಾನ, ತಯಾರಿಕೆ, ಸರಕು ಸಾಗಣೆ, ಸಣ್ಣ ಮತ್ತು ಮಧ್ಯಮ ಕೈಗಾರಿಕೆ, ಮೂಲಸವಲತ್ತು ಅಭಿವೃದ್ಧಿ, ಸಣ್ಣ ವ್ಯಾಪಾರಕ್ಕೆ ಸ್ವನಿಧಿ, ಸ್ವಯಂ ಉದ್ಯೋಗಕ್ಕೆ ಮುದ್ರಾ ಯೋಜನೆ ಜಾರಿಗೊಳಿಸಿದ್ದು, ಸ್ವ-ಉದ್ಯೋಗ ಪರ್ವ ನಿರಂತರವಾಗಿರಲಿದೆ ಎಂದರು.
ಆರ್ಥಿಕತೆಗೆ ವೇಗ:ಕರೊನಾ, ಯೂಕ್ರೇನ್-ರಷ್ಯಾ ಯುದ್ಧದಿಂದ ಶಕ್ತಿಶಾಲಿ ರಾಷ್ಟ್ರಗಳು ಸಹ ಆರ್ಥಿಕವಾಗಿ ತತ್ತರಿಸಿವೆ. ಆದರೆ ಮೋದಿಯವರ ದೂರದೃಷ್ಟಿ ನಿರ್ಧಾರದಿಂದ ದೇಶದ ಆರ್ಥಿಕತೆ ವೇಗ ಪಡೆದುಕೊಂಡಿದೆ. ‘ಹಾವಾಡಿಗರು, ಇಲಿಯುವ ಭಾರತ ಉದ್ಧಾರ ಆಗುವುದಿಲ್ಲ’ ಎಂದು 200 ವರ್ಷ ಆಳಿದ್ದ ಬ್ರಿಟನ್ ಹೇಳಿತ್ತು. ಆದರೆ ಈಗ ಭಾರತ ಎಲ್ಲಿದೆ, ಬ್ರಿಟನ್ ಗತಿ ಏನಾಗಿದೆ ಎಂಬುದು ಜಗಜ್ಜಾಹೀರಾಗಿದೆ. ಭಾರತ ಆರ್ಥಿಕ ಸದೃಢತೆ ಸಾಧಿಸಿದರೆ, ಬ್ರಿಟನ್ ಆರ್ಥಿಕ ಸಂಕಷ್ಟದ ಸುಳಿಗೆ ಸಿಲುಕಿದೆ ಎಂದು ಜೋಶಿ ವಿಶ್ಲೇಷಿಸಿದರು.
ಅಭಿವೃದ್ಧಿಯತ್ತ ದಾಪುಗಾಲು:ಕಾಂಗ್ರೆಸ್ ನೇತೃತ್ವದ ಯುಪಿಎ ಆಡಳಿತಾವಧಿಯಲ್ಲಿ ಇಡೀ ದೇಶ ವಿದ್ಯುತ್ ಕೊರತೆಗೆ ತಲ್ಲಣಿಸಿ, ಅಭಿವೃದ್ಧಿ ಮೇಲೆ ದುಷ್ಪರಿಣಾಮ ಬೀರಿತ್ತು. ಆದರೆ ಕಳೆದ ಎಂಟು ವರ್ಷದಲ್ಲಿ ದೇಶ ವಿದ್ಯುತ್ ಕೊರತೆಯಿಂದ ಮಿಗತೆಯತ್ತ ದಾಪುಗಾಲಿಟ್ಟಿದೆ. ಅಭಿವೃದ್ಧಿ ಯೋಜನೆಗಳಿಗೂ ಹೊಸ ಆಯಾಮ ನೀಡಿದೆ ಎಂದು ಸಚಿವ ಜೋಶಿ ಹೇಳಿದರು.
‘ಕಾಂತಾರ’ ಭರ್ಜರಿ ಯಶಸ್ಸು: ಪರಭಾಷಾ ಸಿನಿಮಾಗಳಲ್ಲಿ ತೊಡಗಿಸಿಕೊಳ್ತಾರಾ ರಿಷಬ್​?

ನಟ ಚೇತನ್​ ವಿವಾದಾತ್ಮಕ ಹೇಳಿಕೆಗೆ ಪೇಜಾವರಶ್ರೀ ಪ್ರತಿಕ್ರಿಯೆ; ಬ್ರಾಹ್ಮಣತ್ವವನ್ನು ವ್ಯಾಖ್ಯಾನಿಸಿದ ಸ್ವಾಮೀಜಿ ಹೇಳಿದ್ದಿಷ್ಟು..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × one =
Remember me
