ಚೆನ್ನೈ/ಅಮರಾವತಿ:ಮಿಚೌಂಗ್ ಚಂಡಮಾರುತದ ಪರಿಣಾಮವಾಗಿ ತಮಿಳುನಾಡು ಮತ್ತು ಆಂಧ್ರಪ್ರದೇಶದಲ್ಲಿ ಭಾರಿ ಮಳೆ-ಗಾಳಿಯಿಂದ ಅಪಾರ ಹಾನಿಯಾಗಿದೆ. ಈ ನಡುವೆ, ನಗರ ಪ್ರದೇಶಗಳ ಪ್ರವಾಹ ನಿರ್ವಹಣೆಯ ಭಾರತದ ಪ್ರಪ್ರಥಮ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಗುರುವಾರ ಅನುಮೋದನೆ ನೀಡಿದ್ದಾರೆ. ಈ ಮಹತ್ವಾಕಾಂಕ್ಷೆಯ ಯೋಜನೆಗೆ 561.29 ಕೋಟಿ ರೂ. ಬಜೆಟ್ ಅನುದಾನ ಹಂಚಿಕೆ ಮಾಡಲಾಗಿದೆ.
ಚೆನ್ನೈ ಮಹಾನಗರ ಒಂದು ದಶಕಕ್ಕಿಂತ ಕಡಿಮೆ ಅವಧಿಯಲ್ಲಿ 3ನೇ ಬಾರಿಗೆ ಜಲಪ್ರಳಯಕ್ಕೆ ಒಳಗಾಗಿದ್ದರಿಂದ ಮಹಾಪೂರ ನಿರ್ವಹಣೆ ಯೋಜನೆಗೆ ಪ್ರಧಾನಿ ಅನುಮೋದನೆ ಕೊಟ್ಟಿದ್ದಾರೆ. ಹಠಾತ್ ವರ್ಷ ಧಾರೆಗೆ ದೇಶದ ಮಹಾನಗರಗಳು ಹೇಗೆ ತುತ್ತಾಗುತ್ತವೆ, ಅಲ್ಲಿನ ವ್ಯವಸ್ಥೆಗಳು ಎಷ್ಟು ಅವ್ಯವಸ್ಥೆಯಿಂದ ಕೂಡಿವೆ ಎನ್ನುವುದಕ್ಕೆ ಚೆನ್ನೈ ಇನ್ನೊಮ್ಮೆ ಸಾಕ್ಷಿಯಾಗಿದೆ. ಪರಿಣಾಮಕಾರಿ ಪ್ರವಾಹ ನಿರ್ವಹಣಾ ಪರಿಹಾರಗಳ ತುರ್ತು ಅಗತ್ಯದ ಕೋರಿಕೆಗೆ ಸ್ಪಂದಿಸಿದ ಮೋದಿ, ಚೆನ್ನೈಗೆ ಎನ್​ಡಿಎಂಎಫ್ ಅಡಿ ಯೋಜನೆಗೆ ಹಸಿರು ನಿಶಾನೆ ತೋರಿದರು.
ಕೇಂದ್ರದ ಕೊಡುಗೆ ಬಿಡುಗಡೆ:ಎರಡು ರಾಜ್ಯಗಳು ಜಲಪ್ರಳಯಕ್ಕೆ ತುತ್ತಾಗಿರುವುದರಿಂದ ಎಸ್​ಡಿಆರ್​ಎಫ್ ಬಾಕಿ ಇರುವ ಕೇಂದ್ರದ ಕೊಡುಗೆಗಳನ್ನು ತಕ್ಷಣವೇ ಬಿಡುಗಡೆ ಮಾಡುವಂತೆ ಮೋದಿ ಗೃಹ ಸಚಿವಾಲಯಕ್ಕೆ ನಿರ್ದೇಶನ ನೀಡಿರುವುದಾಗಿ ಗೃಹ ಸಚಿವ ಷಾ ತಿಳಿಸಿದ್ದಾರೆ. ಎಸ್​ಡಿಆರ್​ಎಫ್​ನಿಂದ ಆಂಧ್ರಪದೇಶಕ್ಕೆ 493.60 ಕೋಟಿ, ತಮಿಳುನಾಡಿಗೆ 450 ಕೋಟಿ ರೂ. ಬಿಡುಗಡೆಗೆ ಮೋದಿ ಸಮ್ಮತಿಸಿದ್ದಾರೆ. ರಕ್ಷಣಾ ಸಚಿವ ರಾಜನಾಥ ಸಿಂಗ್ ಗುರುವಾರ ಚೆನ್ನೈನಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದರು.
ಮುಗಿಯದ ಪರದಾಟ:ಮಿಚೌಂಗ್ ಚಂಡಮಾರುತ ದಾಟಿ ಹೋದ ಮೇಲೂ ಚೆನ್ನೈನಲ್ಲಿ ನಿಂತ ನೀರಿನ ನಡುವೆ ಜನರ ಪರದಾಟ ಇನ್ನೂ ಮುಂದುವರಿದಿದೆ. ಚೆನ್ನೈನಲ್ಲಿ ಗುರುವಾರವೂ ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗಿತ್ತು. ರಸ್ತೆ, ಸೇತುವೆ ಮತ್ತು ಸಾರ್ವಜನಿಕ ಕಟ್ಟಡಗಳು ಮುಂತಾದ ಮೂಲಸೌಕರ್ಯಗಳಿಗೆ ಅಪಾರ ಹಾನಿಯಾಗಿದೆ ಎಂದು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ತಿಳಿಸಿದ್ದಾರೆ.
ಫಸಲು ನೀರು ಪಾಲು-ರೈತರ ಕಣ್ಣೀರು:ಮಂಗಳವಾರ ಆಂಧ್ರದ ಬಾಪ್ಟಾಲಾ ಕರಾವಳಿಗೆ ಅಪ್ಪಳಿಸಿದ ಮಿಚೌಂಗ್ ಚಂಡಮಾರುತದ ಪ್ರಕೋಪದಿಂದ ಕರಾವಳಿಯ ಹಲವು ಭಾಗಗಳಲ್ಲಿ ಅಪಾರ ನಷ್ಟ ಸಂಭವಿಸಿದೆ. ಫಸಲು ನೀರು ಪಾಲಾಗಿದ್ದು ರೈತರು ಕಣ್ಣೀರಲ್ಲಿ ಕೈ ತೊಳೆಯುವಂತಾಗಿದೆ. ಅನೇಕ ಜಾನುವಾರುಗಳು ಸತ್ತಿವೆ. ಸುಮಾರು 800 ಕಿ.ಮೀ.ನಷ್ಟು ರಸ್ತೆಗಳು ಹಾಳಾಗಿವೆ.
40 ಲಕ್ಷ ಜನರು:194 ಗ್ರಾಮಗಳು ಹಾಗೂ ಎರಡು ಪಟ್ಟಣಗಳ ಸುಮಾರು 40 ಲಕ್ಷ ಜನರು ಬಿರುಗಾಳಿ ಮತ್ತು ಕುಂಭದ್ರೋಣ ಮಳೆಯಿಂದ ಸಂತ್ರಸ್ತರಾಗಿದ್ದಾರೆ ಎಂದು ಸಿಎಂ ವೈ.ಎಸ್.ಜಗನ್ ಮೋಹನ್ ರೆಡ್ಡಿ ಕಚೇರಿ ತಿಳಿಸಿದೆ.
ತಂದೆಯ ರಕ್ಷಣೆಗೆ ಹೋದ ಮಗ ಸಾವು:ಕ್ವಾದ್ ಮಿಲ್ಲತ್ ನಗರದ ನಿವಾಸಿ, 30 ವರ್ಷದ ಎಂ. ಅರುಣ್ ಎಂಬ ವ್ಯಕ್ತಿ ತನ್ನ ತಂದೆಯನ್ನು ರಕ್ಷಿಸಲು ಹೋದಾಗ ಮನೆಯ ಹಿಂದೆಯೇ ಇದ್ದ ಕೆರೆಯಲ್ಲಿ ಮುಳುಗಿ ಮೃತಪಟ್ಟ ದಾರುಣ ಘಟನೆ ಪಲ್ಲಿಕರಣೈ ಪ್ರದೇಶದಲ್ಲಿ ನಡೆದಿದೆ.
12 ನಗರಗಳು 3 ಅಡಿ ಜಲಾವೃತ?:ಚೆನ್ನೈನಲ್ಲಿ ಡಿ.4ರ ವೇಳೆಗೆ 48 ಗಂಟೆ ಅವಧಿಯಲ್ಲಿ 40 ಸೆಂಟಿ ಮೀಟರ್​ಗೂ ಅಧಿಕ ಮಳೆ ಆಗಿರುವುದು ಭಾರತದ ನಗರ ಎದುರಿಸಬೇಕಾದ ವಾತಾವರಣ ಬಿಕ್ಕಟ್ಟಿಗೆ ಹಿಡಿದ ಕನ್ನಡಿಯಾಗಿದೆ. ಕರಾವಳಿ ಮತ್ತು ಗುಡ್ಡಗಾಡು ಪ್ರದೇಶಗಳು ಹೆಚ್ಚಿನ ಪ್ರವಾಹದ ಅಪಾಯ ಎದುರಿಸಲಿವೆ. ಈ ಶತಮಾನದ ಅಂತ್ಯದೊಳಗೆ ಮುಂಬೈ, ಚೆನ್ನೈ, ಕೊಚ್ಚಿ ಮತ್ತು ವಿಶಾಖಪಟ್ಟಣ ಸಹಿತ ಭಾರತದ ಕನಿಷ್ಠ 12 ಕರಾವಳಿ ನಗರಗಳು ಮೂರು ಅಡಿಗಳಷ್ಟು ಜಲಾವೃತಗೊಳ್ಳಬಹುದು ಎಂದು ಹವಾಮಾನ ಬದಲಾವಣೆ ಕುರಿತ ಅಂತರ್​ಸರ್ಕಾರಿ ಸಮಿತಿ (ಐಪಿಸಿಸಿ) 2021ರ ವರದಿಯೊಂದರಲ್ಲಿ ಎಚ್ಚರಿಸಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × three =
Remember me
