ನವದೆಹಲಿ:ಅಮೆರಿಕಕ್ಕೆ 2.90 ಕೋಟಿ ಹೈಡ್ರಾಕ್ಸಿಕ್ಲೋರೊಕ್ವಿನ್ ಮಾತ್ರೆ ರಫ್ತು ಮಾಡಲಾಗುವುದೆಂದು ಭಾರತ ಹೇಳಿದೆ. ಗುಜರಾತ್​ನ ಮೂರು ಘಟಕಗಳಲ್ಲಿ ತಯಾರಾದ 2.90 ಕೋಟಿ ಮಾತ್ರೆಗಳು ಮೊದಲ ಹಂತದಲ್ಲಿ ಅಮೆರಿಕಕ್ಕೆ ಸರಬರಾಜು ಆಗುತ್ತಿವೆ ಎಂದು ಮೂಲಗಳು ತಿಳಿಸಿವೆ. ಈ ಬೆಳವಣಿಗೆಯ ನಂತರ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಪ್ರಧಾನಿ ನರೇಂದ್ರ ಮೋದಿ ಅದ್ಭುತ ಗೆಳೆಯ, ಒಳ್ಳೆಯ ಮನುಷ್ಯ ಎಂದು ಹೊಗಳಿದ್ದಾರೆ.
ಕರೊನಾ ಸೋಂಕಿಗೆ ನಿಖರವಾದ ಮದ್ದು ಇಲ್ಲದಿರುವ ಈ ಸಂಕಷ್ಟದ ಸಮಯದಲ್ಲಿ ಮಲೇರಿಯಾ ತಡೆಗೆ ಬಳಸುವ ಹೈಡ್ರಾಕ್ಸಿಕ್ಲೋರೊಕ್ವಿನ್ ಮಾತ್ರೆ ಕೋವಿಡ್-19 ಸೋಂಕಿಗೆ ಸದ್ಯ ರಾಮಬಾಣವಾಗಿದೆ. ಹೀಗಾಗಿ ಈ ಔಷಧಕ್ಕೆ ಭಾರಿ ಬೇಡಿಕೆ ಬಂದಿದೆ. ಆದ್ದರಿಂದ ಈ ಮಾತ್ರೆಯ ರಫ್ತಿಗೆ ಭಾರತ ಕಳೆದವಾರ ನಿಷೇಧ ಹೇರಿತ್ತು. ಈ ಮಧ್ಯೆ, ಕಳೆದ ಭಾನುವಾರ ದೂರವಾಣಿ ಮೂಲಕ ಪ್ರಧಾನಿ ಮೋದಿ ಜತೆ ಮಾತುಕತೆ ನಡೆಸಿದ ಟ್ರಂಪ್, ಅಮೆರಿಕದಲ್ಲಿನ ಸಾವು-ನೋವಿನ ಬಗ್ಗೆ ದುಗುಡ ವ್ಯಕ್ತಪಡಿಸಿದ್ದರು. ಜತೆಗೆ ಹೈಡ್ರಾಕ್ಸಿಕ್ಲೋರೊಕ್ವನ್ ಮಾತ್ರೆಯನ್ನು ಸರಬರಾಜು ಮಾಡುವಂತೆ ಮನವಿ ಮಾಡಿದ್ದರು. ಮಾನವೀಯ ದೃಷ್ಟಿಯಿಂದ ರಫ್ತು ನಿಷೇಧವನ್ನು ಭಾಗಶಃ ಸಡಿಲಿಸಿದ ಭಾರತ, ಕರೊನಾದಿಂದ ತೀವ್ರವಾಗಿ ಬಾಧಿತವಾಗಿರುವ ರಾಷ್ಟ್ರಗಳಿಗೆ ಸೂಕ್ತ ಪ್ರಮಾಣದಲ್ಲಿ ಮಾತ್ರೆ ಪೂರೈಕೆ ಮಾಡುವುದಾಗಿ ಸೋಮವಾರ ಹೇಳಿತ್ತು.
ಯಾವ್ಯಾವ ರೋಗಕ್ಕೆ ಬಳಕೆ?
ಮಲೇರಿಯಾ ರೋಗಕ್ಕೆ ಬಳಸುವ ಹೈಡ್ರಾಕ್ಸಿಕ್ಲೋರೊಕ್ವಿನ್ ಮಾತ್ರೆಯು ಕ್ಲೋರೊಕ್ವಿನ್ ಮಾತ್ರೆಗಿಂತ ಕಡಿಮೆ ನಂಜಿನಾಂಶ ಹೊಂದಿರುವ ಕಾರಣ ಇದನ್ನು ಮಲೇರಿಯಾ ಹೊರತಾಗಿ ಇನ್ನಿತರ ಸಾಂಕ್ರಾಮಿಕ ರೋಗಗಳ ತಡೆಗೂ ಶಿಫಾರಸು ಮಾಡಲಾಗಿದೆ. ಸಂಧಿವಾತ ಮತ್ತು ಚರ್ಮ ಕ್ಷಯದಂತಹ (ಲೂಪಸ್) ಕಾಯಿಲೆಗಳಿಗೂ ಈ ಮಾತ್ರೆಯನ್ನು ವೈದ್ಯರು ಶಿಫಾರಸು ಮಾಡಿದ ನಿದರ್ಶನವಿದೆ.
ಮಾತ್ರೆಗೆ ಹೆಚ್ಚಿದ ಬೇಡಿಕೆ
ಹೈಡ್ರಾಕ್ಸಿಕ್ಲೋರೊಕ್ವಿನ್ ಮಾತ್ರೆಗೆ ಪಾಶ್ಚಿಮಾತ್ಯ ದೇಶಗಳಿಂದಲೂ ಬೇಡಿಕೆ ಬರುತ್ತಿದೆ. ನೆರೆಹೊರೆ ದೇಶಗಳಾದ ಶ್ರೀಲಂಕಾ, ನೇಪಾಳ ಮಾತ್ರೆ ಪೂರೈಕೆಗೆ ಮನವಿ ಮಾಡಿದ್ದರೆ, ಬ್ರೆಜಿಲ್ ರಾಮಾಯಾಣದ ಹಿನ್ನೆಲೆ ಮುಂದಿಟ್ಟು ವಿನಂತಿ ಮಾಡಿಕೊಂಡಿದೆ. ರಾಮ-ರಾವಣರ ಯುದ್ಧದ ವೇಳೆ ಇಂದ್ರಜಿತುವಿನ ಬಾಣದಿಂದ ಮೂರ್ಛಿತನಾದ ಲಕ್ಷ್ಮಣನನ್ನು ಬದುಕಿಸಲು ವಿಶೇಷ ಗಿಡಮೂಲಿಕೆ ಅಗತ್ಯವಾದಾಗ ಹನುಮಂತ ಹಿಮಾಲಯದಿಂದ ಸಂಜೀವಿನಿ ತಂದಿದ್ದ. ಈಗ ಇಂಥದ್ದೇ ನೆರವನ್ನು ನಾವು ಬಯಸುತ್ತಿದ್ದೇವೆ. ಭಾರತ ಹೈಡ್ರಾಕ್ಸಿಕ್ಲೋರೊಕ್ವಿನ್ ಮಾತ್ರೆ ಪೂರೈಸಿದರೆ ದೇವರ ಕೃಪೆಯಿಂದ ಸೋಂಕಿತರು ಗುಣಮುಖರಾಗುತ್ತಾರೆ ಎಂದು ಬ್ರೆಜಿಲ್ ಹೇಳಿದೆ. ಕರೊನಾ ವಿರುದ್ಧದ ಹೋರಾಟದಲ್ಲಿ ಬ್ರೆಜಿಲ್ ಮತ್ತು ಭಾರತ ಒಗ್ಗೂಡಬೇಕು ಜನರ ಆರೋಗ್ಯಕ್ಕಾಗಿ ಪರಸ್ಪರರು ಹಾರೈಸಬೇಕು. ಔಷಧ ಪೂರೈಕೆಯ ಬೇಡಿಕೆಯನ್ನು ಪ್ರಧಾನಿ ಮೋದಿಯವರು ಸಹಾನುಭೂತಿಯಿಂದ ಪರಿಗಣಿಸಬೇಕು ಎಂದು ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸನಾರೊ ಪತ್ರದಲ್ಲಿ ಮನವಿ ಮಾಡಿದ್ದಾರೆ.
ಶೇ. 70 ಮಾತ್ರೆ ಭಾರತದಲ್ಲಿ ಉತ್ಪಾದನೆ
ಜಾಗತಿಕವಾಗಿ ಉತ್ಪಾದನೆಯಾಗುವ ಹೈಡ್ರಾಕ್ಸಿಕ್ಲೋರೊಕ್ವಿನ್ ಮಾತ್ರೆಯಲ್ಲಿ ಶೇ. 70 (200ಎಂಜಿಯ 20 ಕೋಟಿ ಮಾತ್ರೆ) ಭಾರತದಲ್ಲೇ ತಯಾರಾಗುತ್ತದೆ. ಈ ಮಾತ್ರೆಯನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಕರೊನಾ ಸೋಂಕಿತರ ಚಿಕಿತ್ಸೆಗೆ ಶಿಫಾರಸು ಮಾಡಿದೆ. ಇದನ್ನು ಅಮೆರಿಕದ ಆಹಾರ ಮತ್ತು ಔಷಧ ಆಡಳಿತ ಕೂಡ ಅನುಮೋದಿಸಿದೆ. ಭಾರತದಲ್ಲಿ ಕಳೆದ ಆರ್ಥಿಕ ವರ್ಷದಲ್ಲಿ (ಫೆಬ್ರವರಿವರೆಗೆ) -ಠಿ; 152.80 ಕೋಟಿ ಮೌಲ್ಯದ ಹೈಡ್ರಾಕ್ಸಿಕ್ಲೋರೊಕ್ವಿನ್ ಮಾತ್ರೆ ಬಿಕರಿಯಾಗಿದೆ. ಮುಂಬೈ ಮೂಲದ ಇಪ್ಕಾ ಲ್ಯಾಬ್ ಈ ಮಾತ್ರೆಯನ್ನು ಶೇ. 82 ಉತ್ಪಾದಿಸುತ್ತದೆ. ಎಚ್​ಸಿಕ್ಯೂಎಸ್ ಮತ್ತು ಎಚ್​ವೈಕ್ಯೂ ಬ್ರಾ್ಯಂಡ್​ಗಳಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು, ಶೇ. 80ರಷ್ಟು ಮಾತ್ರೆ ರಫ್ತಾಗುತ್ತದೆ. ಅಹಮದಾಬಾದ್ ಮೂಲದ ಕ್ಯಾಡಿಲಾ ಹೆಲ್ತ್​ಕೇರ್ (ಜೈಡಸ್ ಕ್ಯಾಡಿಲಾ) ಜೈ ಕ್ಯೂ ಬ್ರಾ್ಯಂಡ್​ನ ಹೈಡ್ರಾಕ್ಸಿಕ್ಲೋರೊಕ್ವಿನ್ ಮಾತ್ರೆಯನ್ನು ಉತ್ಪಾದಿಸುತ್ತದೆ. ಇದು ಶೇ. 8ರಷ್ಟು ಮಾರುಕಟ್ಟೆ ಹೊಂದಿದೆ. ಉಳಿದಂತೆ ವ್ಯಾಲೇಸ್ ಫಾರ್ವಸ್ಯುಟಿಕಲ್ (ಒಎಕ್ಸ್​ಸಿಕ್ಯೂ), ಟೊರೆಂಟ್ ಫಾರ್ವಸ್ಯುಟಿಕಲ್ ಮತ್ತು ಓವರ್​ಸೀಸ್ ಹೆಲ್ತ್​ಕೇರ್ ಕಂಪನಿ (ಕಾರ್ಟಿಕ್ವಿನ್) ಸಣ್ಣ ಪ್ರಮಾಣದಲ್ಲಿ ಹೈಡ್ರಾಕ್ಸಿಕ್ಲೋರೊಕ್ವಿನ್ ಉತ್ಪಾದಿಸುತ್ತವೆ.

ಕಣ್ಮರೆಯಾಗಿದ್ದ ನಿಜಾಮುದ್ದೀನ್ ಮರ್ಕಾಜ್ ಮುಖ್ಯಸ್ಥ ಮೌಲಾನಾ ಸಾದ್​ ಪತ್ತೆ: ದೆಹಲಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದು ಹೇಗೆ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 + 16 =
Remember me
