ವಾರಾಣಸಿ:ಜಗತ್ತಿನಲ್ಲಿ ಯಾರನ್ನೂ ವಿರೋಧ ಮಾಡದೆ ಸರ್ವರನ್ನೂ ಪ್ರೀತಿಯಿಂದ ಕಾಣುವವರೇ ವೀರಶೈವರು ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದರು.
ಕಾಶಿ ಜ್ಞಾನ ಸಿಂಹಾಸನ ಜಂಗಮವಾಡಿ ಮಠದಲ್ಲಿ ಶ್ರೀ ಜಗದ್ಗುರು ವಿಶ್ವರಾಧ್ಯ ಗುರುಕುಲ ಶತಮಾನೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ವೀರಶೈವ ಮಹಾಕುಂಭದಲ್ಲಿ ವೀರಶೈವ ಧರ್ಮಗ್ರಂಥ ‘ಶ್ರೀ ಸಿದ್ಧಾಂತ ಶಿಖಾಮಣಿ’ಯ 19 ಭಾಷೆಗಳ ಮೊಬೈಲ್ ಆಪ್ ಅನ್ನು ಲೋಕಾರ್ಪಣೆ ಮಾಡಿ ಮಾತನಾಡಿದರು. ವೀರ ಎಂಬ ಶಬ್ದವು ಬಲವುಳ್ಳವನು ಎಂದು ಬಳಕೆಯಾಗುತ್ತದೆ. ಆದರೆ ಶ್ರೀ ಸಿದ್ಧಾಂತ ಶಿಖಾಮಣಿಯಲ್ಲಿ ವೀರಶೈವರ ವ್ಯಾಖ್ಯಾನ ಮಾಡುವಾಗ ಜಗದ್ಗುರು ರೇಣುಕಾಚಾರ್ಯರು ವಿರೋಧ ರಹಿತವಾಗಿ ಸಮಾಜದ ಎಲ್ಲರನ್ನೂ ಪ್ರೀತಿಯಿಂದ ಕಾಣುವವರು ವೀರಶೈವರು ಎಂದು ವಿವರಿಸಿದ್ದಾರೆ. ಶ್ರೀ ಸಿದ್ಧಾಂತ ಶಿಖಾಮಣಿ ಗ್ರಂಥವು ಸಮಸ್ತ ಮಾನವರಿಗೆ ಆಧ್ಯಾತ್ಮದ ತಿರುಳನ್ನು ಸಾರುತ್ತದೆ. ಅಂತಹ ಸಿದ್ಧಾಂತ ಶಿಖಾಮಣಿಯನ್ನು ಜಗತ್ತಿನ ಮೂಲೆಮೂಲೆಗೂ ತಲುಪಿಸುವ ಉದ್ದೇಶದಿಂದ ಕಾಶಿ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ವಿನ್ಯಾಸಗೊಳಿಸಿರುವ ಮೊಬೈಲ್ ಆಪ್ ಯುವ ಸಮುದಾಯಕ್ಕೆ ಉತ್ತಮ ಕೊಡುಗೆಯಾಗಿದೆ ಎಂದು ಮೋದಿ ಮೆಚ್ಚುಗೆ ವ್ಯಕ್ತಪಡಿಸಿದರು. ಅಲ್ಲದೆ, ಈ ಆಪ್ ಮೂಲಕ ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಕಾರ್ಯಕ್ರಮವನ್ನು ಮಾಡಿ ಶ್ರೀ ಸಿದ್ಧಾಂತ ಶಿಖಾಮಣಿಯ ತಿರುಳನ್ನು ಹೆಚ್ಚೆಚ್ಚು ಪ್ರಸಾರ ಮಾಡುವಂತೆ ಸಲಹೆ ನೀಡಿದರು.
ಕಾಶಿ ಕ್ಷೇತ್ರವು ಜ್ಞಾನದ ಕಣಿವೆಯಾಗಿದ್ದು, ಇಂಥ ಪುಣ್ಯ ಭೂಮಿಯಲ್ಲಿರುವ ಜಂಗಮವಾಡಿ ಮಠ ಸಾವಿರಾರು ವರ್ಷಗಳಿಂದ ಧಾರ್ವಿುಕ, ಶೈಕ್ಷಣಿಕ, ಸಾಮಾಜಿಕ ಸೇವೆ ಸಲ್ಲಿಸುತ್ತಿರುವುದು ದೇಶದ ಸಂಸ್ಕೃತಿಯನ್ನು ಬಿಂಬಿಸುತ್ತದೆ. ಶ್ರೀ ಜಗದ್ಗುರು ವಿಶ್ವರಾಧ್ಯ ಗುರುಕುಲದ ಮೂಲಕ ಸಾವಿರಾರು ವಿದ್ವಾಂಸರನ್ನು ದೇಶಕ್ಕೆ ನೀಡಿರುವ ಶ್ರೇಯಸ್ಸು ಶ್ರೀ ಕಾಶಿ ಪೀಠಕ್ಕೆ ಸಲ್ಲುತ್ತದೆ. ಅಂತಹ ಗುರುಕುಲ ಶತಮಾನೋತ್ಸವದಲ್ಲಿ ಪಾಲ್ಗೊಳ್ಳುತ್ತಿರುವುದು ಅತ್ಯಂತ ಸಂತಸತಂದಿದೆ ಎಂದು ಮೋದಿ ಹರ್ಷ ವ್ಯಕ್ತಪಡಿಸಿದರು. ಸಮಾರಂಭದಲ್ಲಿ ಕಾಶಿ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು, ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಭಗವತ್ಪಾದರು, ಉಜ್ಜಯಿನಿ ಜಗದ್ಗುರು ಶ್ರೀ ಸಿದ್ಧಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಸಾನಿಧ್ಯ ವಹಿಸಿದ್ದರು. ಕರ್ನಾಟಕದ ಸಿಎಂ ಬಿ.ಎಸ್.ಯಡಿಯೂರಪ್ಪ, ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ, ರಾಜ್ಯಪಾಲರಾದ ಆನಂದಿಬೆನ್ ಪಟೇಲ್, ಅಖಿಲ ಭಾರತ ವೀರಶೈವ ಮಹಾಸಭೆ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಸೊಲ್ಲಾಪುರ ಎಂ.ಪಿ ಜಯಸಿದ್ದೇಶ್ವರ ಸ್ವಾಮೀಜಿ ಕಾರ್ಯಕ್ರಮ ನಿರೂಪಿಸಿದರು.
ಸಿದ್ಧಾಂತ ಶಿಖಾಮಣಿ ಆಪ್ ಡೌನ್​ಲೋಡ್​ಗೆ
http://play.google.com/store/apps/details?id=com. vworld.shrisiddhanthashikhamani
ಪಂಚ ಭಾಷೆಯಲ್ಲಿ ಮೋದಿ ಭಾಷಣ
ಕಾಶಿಯಲ್ಲಿ ನಡೆದ ವೀರಶೈವ ಮಹಾಕುಂಭ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ 5 ಭಾಷೆಗಳಲ್ಲಿ ಭಾಷಣ ಮಾಡಿದರು. ಮೊದಲಿಗೆ ಕನ್ನಡದಲ್ಲಿ ಭಾಷಣ ಆರಂಭಿಸಿದ ಅವರು, ನಂತರ ಸಂಸ್ಕೃತ, ಹಿಂದಿ, ಮರಾಠಿ, ತೆಲುಗು ಭಾಷೆಯಲ್ಲಿ ಮಾತನಾಡಿದರು. ಆಯಾ ಭಾಷೆಯಲ್ಲಿ ಮಾತನಾಡಿದಾಗ ಆಯಾ ಭಾಷಿಗರ ಚಪ್ಪಾಳೆ, ಹಷೋದ್ಗಾರ ಮುಗಿಲು ಮುಟ್ಟುತ್ತಿತ್ತು.
ಸಮಸ್ತ ವೀರಶೈವರ ಪಾಲಿನ ಸುದಿನ
ಕಾಶಿಪೀಠ ಗುರುಕುಲದ ಶತಮಾನೋತ್ಸವಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಿರುವುದು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವವರಿಗೆ ಮಾತ್ರವಲ್ಲದೆ, ಇಡೀ ದೇಶದ ತುಂಬೆಲ್ಲ ಇರುವ ಸುಮಾರು ಮೂರು ಕೋಟಿ ವೀರಶೈವ ಧರ್ವಿುಯರಿಗೆ ಸಂತಸ ಉಂಟುಮಾಡಿದೆ. ವೀರಶೈವರ ಪಾಲಿಗೆ ಈ ದಿನ ಸುವರ್ಣಾಕ್ಷರಗಳಿಂದ ಬರೆದಿಡುವ ಸುದಿನ.
| ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು
ಸಂಸ್ಕೃತಿಯ ಸಂಗಮ ಭಾರತ
ಭಾರತೀಯ ಸಂಸ್ಕೃತಿಯಲ್ಲಿ ಹಲವು ವೈವಿದ್ಯತೆಗಳಿವೆ. ಆದರೆ ಅಂತ ವಿವಿಧತೆಯ ಏಕತೆಯನ್ನು ಕಾಣುವುದೇ ಭಾರತದ ಹಿರಿಮೆ. ಒಬ್ಬರು ಇನ್ನೊಬ್ಬರನ್ನು. ಒಂದು ಸಮುದಾಯ ಮತ್ತೊಂದು ಸಮುದಾಯವನ್ನು ಖಂಡಿಸುವ ಬದಲು, ಪರಸ್ಪರ ಪ್ರೀತಿ, ವಿಶ್ವಾಸ, ಪುರಸ್ಕಾರದ ಮೂಲಕ ದೇಶವನ್ನು, ದೇಶದ ಸಂಸ್ಕೃತಿಯನ್ನು ಬೆಸೆಯುವ ಕಾರ್ಯ ಆಗಬೇಕಿದ್ದು, ಅಂತಹ ಕಾರ್ಯವನ್ನು ಅನಾದಿ ಕಾಲದಿಂದ ವೀರಶೈವ ಸಮಾಜ ಮಾಡುತ್ತಿರುವುದು ಶ್ಲಾಘನೀಯ.
| ನರೇಂದ್ರ ಮೋದಿ ಪ್ರಧಾನಿ
ಧರ್ಮ, ಜ್ಞಾನ ಪ್ರಸಾರಕ್ಕೆ ಪ್ರಸಿದ್ಧಿ
ವಾರಣಾಸಿಯ ಶ್ರೀಮದ್ ಕಾಶಿ ಜ್ಞಾನ ಸಿಂಹಾಸನ ವಿಶ್ವಾರಾಧ್ಯ ಜಂಗಮವಾಡಿ ಪೀಠವು ಧರ್ಮ ಪ್ರಸಾರದೊಂದಿಗೆ ಜ್ಞಾನ ಪ್ರಸಾರಕ್ಕೂ ಪ್ರಸಿದ್ಧಿ ಪಡೆದಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅಭಿಪ್ರಾಯಪಟ್ಟರು. ವೀರಶೈವ ಧರ್ಮವು ಅತ್ಯಂತ ಪ್ರಾಚೀನ ಧರ್ಮದಲ್ಲಿ ಒಂದಾಗಿದೆ. ಪ್ರಸ್ತುತ ಪೀಠಾಧ್ಯಕ್ಷರಾಗಿರುವ ಡಾ.ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅವರು ಸ್ವತಃ ಶ್ರೇಷ್ಠ ವಿದ್ವಾಂಸರಾಗಿದ್ದಾರೆ. ಶ್ರೀ ಜಗದ್ಗುರು ವಿಶ್ವಾರಾಧ್ಯ ಶತಮಾನೋತ್ಸವದ ಸಮಾರೋಪ ಸಮಾರಂಭದಲ್ಲಿ ವೀರಶೈವ ಶ್ರೇಷ್ಠ ಧರ್ಮಗ್ರಂಥ ಸಿದ್ಧಾಂತ ಶಿಖಾಮಣಿಯನ್ನು 19 ಭಾಷೆ ಗಳಲ್ಲಿ ಬಿಡುಗಡೆ ಮಾಡುತ್ತಿರುವುದು ಹಾಗೂ ಸಿದ್ದಾತ ಶಿಖಾಮಣಿ ಮೊಬೈಲ್ ಆಪ್ ಬಿಡುಗಡೆ ಮಾಡಿರುವುದು ಸಂತಸ ತಂದಿದೆ ಎಂದರು. ಸಿದ್ಧಾಂತ ಶಿಖಾಮಣಿ ಗ್ರಂಥದಲ್ಲಿ ಪ್ರಾಚೀನತೆ ಹಾಗೂ ಆಧುನಿಕತೆಯ ಬಗ್ಗೆ ಸಾಕಷ್ಟು ಮಾಹಿತಿಗಳಿವೆ ಎಂದು ವಿವರಿಸಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − 4 =
Remember me
