ನವದೆಹಲಿ:ಜಮ್ಮು-ಕಾಶ್ಮೀರದಲ್ಲಿ ಸಂವಿಧಾನದ 370ನೇ ವಿಧಿ ನಿಷ್ಕ್ರಿಯಗೊಳಿಸಿದ ಬಳಿಕ ಕಣಿವೆ ಪ್ರದೇಶದಲ್ಲಿ ಕ್ಷೇತ್ರ ಮರುವಿಂಗಡಣೆ ಕಾರ್ಯವನ್ನೂ ಪೂರ್ಣಗೊಳಿಸಿರುವ ಕೇಂದ್ರ ಸರ್ಕಾರ, ಮಂಗಳವಾರ ಲೋಕಸಭೆಯಲ್ಲಿ ಜಮ್ಮು-ಕಾಶ್ಮೀರ ಪುನರ್ ವಿಂಗಡಣೆ ತಿದ್ದುಪಡಿ ವಿಧೇಯಕಕ್ಕೆ ಅನುಮೋದನೆ ಪಡೆದುಕೊಂಡಿದೆ. ಮುಖ್ಯ ವಾಗಿ, ಭಾರತ-ಪಾಕಿಸ್ತಾನ ನಡುವಿನ ಸಂಘರ್ಷಕ್ಕೆ ಕಾರಣವಾಗಿರುವ ಪಾಕ್ ಆಕ್ರಮಿತ ಕಾಶ್ಮೀರ ಭಾರತದ ಭಾಗವೇ ಆಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಹೇಳಿಕೆ ನೀಡುವ ಮೂಲಕ ಮತ್ತೊಮ್ಮೆ ಪಾಕಿಸ್ತಾನಕ್ಕೆ ಕಟು ಸಂದೇಶ ರವಾನಿಸಿದ್ದಾರೆ.
ಲೋಕಸಭೆಯಲ್ಲಿ ತಿದ್ದುಪಡಿ ಮಸೂದೆ ಮೇಲಿನ ಚರ್ಚೆ ಸಂದರ್ಭದಲ್ಲಿ ಮಾತನಾಡಿದ ಅವರು, ಜಮ್ಮು-ಕಾಶ್ಮೀರ ವಿಧಾನಸಭೆಯಲ್ಲಿ 24 ಸ್ಥಾನಗಳನ್ನು ಪಾಕ್ ಆಕ್ರಮಿತ ಕಾಶ್ಮೀರಕ್ಕೆ (ಪಿಒಕೆ) ಮೀಸಲಿಡಲಾಗಿದೆ ಎಂದು ಘೊಷಿಸಿದರು. ಈ ಹಿಂದೆ ಜಮ್ಮು 37 ಸ್ಥಾನಗಳನ್ನು ಹೊಂದಿತ್ತು. ಈಗ 43 ಸ್ಥಾನಗಳನ್ನು ಮೀಸಲಿಡಲಾಗಿದೆ. 46 ಸ್ಥಾನಗಳನ್ನು ಹೊಂದಿದ್ದ ಕಾಶ್ಮೀರಕ್ಕೆ 47 ಸ್ಥಾನಗಳನ್ನು ನಿಗದಿಪಡಿಸಲಾಗಿದೆ ಎಂದು ಮಾಹಿತಿ ನೀಡಿದರು. ಕಾಶ್ಮೀರಿ ಪಂಡಿತರು ತಮ್ಮ ನೆಲೆಯಿಂದ ಸ್ಥಳಾಂತರಗೊಂಡು, ತಮ್ಮದೇ ದೇಶದಲ್ಲಿ ನಿರಾಶ್ರಿತರಾಗಿ ಬದುಕುವಂತಹ ದಯನೀಯ ಸ್ಥಿತಿ ನಿರ್ವಣವಾಯಿತು. 46,631 ಕುಟುಂಬಗಳು ನಿರಾಶ್ರಿತ
ವಾಗಿದ್ದವು. ಈ ತಿದ್ದುಪಡಿ ಮಸೂದೆ ಅವರ ಹಕ್ಕುಗಳನ್ನು ವಾಪಸ್ ಪಡೆಯಲು ನೆರವಾಗಲಿದೆ. ಅವರಿಗೆ ಹೆಚ್ಚಿನ ಪ್ರಾತಿನಿಧ್ಯವನ್ನು ನೀಡಲಿದೆ. ಕಳೆದ 70 ವರ್ಷಗಳಿಂದ ಹಕ್ಕುಗಳಿಂದ ವಂಚಿತರಾಗಿರುವ ಜನರಿಗೆ ನ್ಯಾಯ ಒದಗಿಸುವ ಉದ್ದೇಶವನ್ನು ಈ ಮಸೂದೆಗಳು ಹೊಂದಿವೆ ಎಂದು ಸಂತಸ ವ್ಯಕ್ತಪಡಿಸಿದರು.
ಅಂದಿನ ಪ್ರಧಾನಿ ಜವಹರಲಾಲ್ ನೆಹರು ಎರಡು ಐತಿಹಾಸಿಕ ಪ್ರಮಾದಗಳನ್ನು ಎಸಗಿದರು. ಮೊದಲನೆಯದು, ನಮ್ಮ ಸೈನ್ಯ ಗೆದ್ದಾಗ ಕದನವಿರಾಮ ಘೊಷಿಸಿದರು. ಮೂರು ದಿನಗಳ ನಂತರ ಕದನ ವಿರಾಮ ಘೊಷಿಸಿದ್ದರೆ ಇಂದು ಪಾಕ್ ಆಕ್ರಮಿತವಾಗಿರುವ ಕಾಶ್ಮೀರದ ಭಾಗ ಭಾರತದ ಭಾಗವಾಗುತ್ತಿತ್ತು. ಎರಡನೆಯದು, ನಮ್ಮ ಆಂತರಿಕ ಸಮಸ್ಯೆಯನ್ನು ವಿಶ್ವಸಂಸ್ಥೆಗೆ ಕೊಂಡೊಯ್ದರು ಎಂದು ಸಚಿವ ಷಾ ಇತಿಹಾಸದ ಮೇಲೆ ಬೆಳಕು ಚೆಲ್ಲಿದರು. ಮರುವಿಂಗಡಣೆ ತಿದ್ದುಪಡಿ ಮಸೂದೆಯ ಚರ್ಚೆಯುದ್ದಕ್ಕೂ ಯಾವ ಸದಸ್ಯನೂ ಮಸೂದೆಯ ಉದ್ದೇಶ ವಿರೋಧಿಸಿಲ್ಲ ಎನ್ನುವುದು ನನಗೆ ಖುಷಿ ತಂದಿದೆ. ಹಕ್ಕುಗಳನ್ನು ನೀಡುವುದಕ್ಕೂ ಗೌರವಯುತವಾಗಿ ಹಕ್ಕುಗಳನ್ನು ನೀಡುವುದಕ್ಕೂ ಭಾರಿ ಅಂತರವಿದೆ ಎನ್ನುತ್ತಾ ವಿಪಕ್ಷಗಳಿಗೆ ತಿವಿದರು.
ಮುಂದೇನು?:ಈ ಮಸೂದೆಗಳಿಗೆ ಸಂಸತ್ತಿನ ಎರಡೂ ಸದನಗಳ ಒಪ್ಪಿಗೆ ಸಿಕ್ಕ ಬಳಿಕ ರಾಷ್ಟ್ರಪತಿ ಅನುಮೋದನೆ ಪಡೆದು ಅಧಿಸೂಚನೆ ಪ್ರಕಟವಾಗಲಿದೆ. ನಂತರ, ಜಮ್ಮು-ಕಾಶ್ಮೀರದಲ್ಲಿ ವಿಧಾನಸಭೆ ಚುನಾವಣೆ ನಡೆಸುವ ಬಗ್ಗೆ ಕೇಂದ್ರ ಸರ್ಕಾರ ಮತ್ತು ಕೇಂದ್ರ ಚುನಾವಣಾ ಆಯೋಗ ಮಾತುಕತೆ ನಡೆಸಿ ಚುನಾವಣೆಗೆ ದಿನಾಂಕ ಘೊಷಿಸುವ ನಿರ್ಧಾರ ಮಾಡಬಹುದು. 2019ರಲ್ಲಿ ವಿಶೇಷ ಸ್ಥಾನಮಾನ ನಿಷ್ಕ್ರಿಯಗೊಂಡ ಬಳಿಕ ಕೇಂದ್ರಾಡಳಿತ ಪ್ರದೇಶದಲ್ಲಿ ಲೆ.ಗವರ್ನರ್ ನೇತೃತ್ವ ಆಡಳಿತವಿದೆ. ಚುನಾವಣೆ ನಡೆಸಬೇಕು ಎಂದು ವಿವಿಧ ರಾಜಕೀಯ ಪಕ್ಷಗಳಿಂದ ಬೇಡಿಕೆ ಬಂದಿದ್ದು, ಕೆಲ ತಿಂಗಳುಗಳ ಹಿಂದೆ ಸುಪ್ರೀಂಕೋರ್ಟ್ ಕೂಡ ಚುನಾವಣೆ ನಡೆಸುವ ಬಗ್ಗೆ ನಿಮ್ಮ ತೀರ್ವನವೇನು ಎಂದು ಕೇಂದ್ರವನ್ನು ಪ್ರಶ್ನಿಸಿತ್ತು. ಮುಂದಿನ ದಿನಗಳಲ್ಲಿ ಚುನಾವಣೆ ಬಗ್ಗೆ ತೀರ್ವನವಾದರೂ, ಕಣಿವೆ ಪ್ರದೇಶಕ್ಕೆ ರಾಜ್ಯ ಸ್ಥಾನಮಾನ ವಾಪಸ್ ಬರುವುದೇ ಎಂಬ ಬಗ್ಗೆ ಖಚಿತತೆ ಇಲ್ಲ.
ಮೂರು ವರ್ಷದಲ್ಲಿ ಭಯೋತ್ಪಾದನೆ ಅಂತ್ಯ:2024ರ ಸಾರ್ವತ್ರಿಕ ಚುನಾವಣೆಯಲ್ಲೂ ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಮರಳಲಿದ್ದು, 2026ರ ವೇಳೆಗೆ ಜಮ್ಮು ಮತ್ತು ಕಾಶ್ಮೀರ ಭಯೋತ್ಪಾದನೆಯಿಂದ ಸಂಪೂರ್ಣವಾಗಿ ಮುಕ್ತವಾಗಲಿದೆ ಎಂದು ಸಚಿವ ಅಮಿತ್ ಷಾ ಹೇಳಿದ್ದಾರೆ. ಭಯೋತ್ಪಾದನೆಗೆ ಸಹಾಯ ಮತ್ತು ಪ್ರೋತ್ಸಾಹ ನೀಡುವವರ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳುತ್ತಿದೆ. 370ನೇ ವಿಧಿಯನ್ನು ರದ್ದುಗೊಳಿಸುವುದರೊಂದಿಗೆ ಕೇಂದ್ರಾಡಳಿತ ಪ್ರದೇಶದಲ್ಲಿ ಪ್ರತ್ಯೇಕತಾವಾದ ಕೊನೆಗೊಂಡಿದೆ. ಭಯೋತ್ಪಾದನೆ ಗಮನಾರ್ಹವಾಗಿ ಕಡಿಮೆಯಾಗಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆಯಿಂದಾಗಿ ಇದುವರೆಗೆ 45,000 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಆದರೆ, 2023ರಲ್ಲಿ ಒಂದೇ ಒಂದು ಕಲ್ಲು ತೂರಾಟದ ಘಟನೆಯೂ ನಡೆದಿಲ್ಲ. ಬಂದ್ ಕೂಡ ನಡೆದಿಲ್ಲ.
ಕಾಂಗ್ರೆಸ್​ಗೆ ಗುದ್ದು:ಜಮ್ಮು-ಕಾಶ್ಮೀರ 1980ರ ದಶಕದಲ್ಲಿ ಭಾರಿ ಭಯೋತ್ಪಾದನೆಗೆ ಸಾಕ್ಷಿಯಾಯಿತು. ಈ ಉಗ್ರವಾದಕ್ಕೆ ಕಡಿವಾಣ ಹಾಕಬೇಕಾದ ಜವಾಬ್ದಾರಿ ಹೊಂದಿದ್ದವರು ಇಂಗ್ಲೆಂಡ್​ನಲ್ಲಿ ರಜಾದಿನಗಳನ್ನು ಅನುಭವಿಸುತ್ತಿದ್ದರು ಎಂದು ಅಂದಿನ ಕಾಂಗ್ರೆಸ್ ಸರ್ಕಾರದ ವಿರುದ್ಧ ಅಮಿತ್ ಷಾ ವಾಗ್ದಾಳಿ ನಡೆಸಿದರು. ಮತ ಬ್ಯಾಂಕ್ ರಾಜಕೀಯ ಪರಿಗಣಿಸದೆ ಆರಂಭದಲ್ಲೇ ಭಯೋತ್ಪಾದನೆಯನ್ನು ಚಿವುಟಿ ಹಾಕಿದ್ದರೆ ಕಾಶ್ಮೀರಿ ಪಂಡಿತರು ಕಣಿವೆ ತೊರೆದು ಬೇರೆಡೆಗೆ ಸ್ಥಳಾಂತರಗೊಳ್ಳಬೇಕಾಗಿ ಬರುತ್ತಿರಲಿಲ್ಲ ಎಂದು ಸಚಿವ ಷಾ ಕಿಡಿಕಾರಿದರು.
ವಲಸಿಗರಿಗೆ ಪ್ರಾತಿನಿಧ್ಯ:ಜಮ್ಮು-ಕಾಶ್ಮೀರ ಮೀಸಲಾತಿ (ತಿದ್ದುಪಡಿ) ಮಸೂದೆ 2023 ಮತ್ತು ಜಮ್ಮು-ಕಾಶ್ಮೀರ ಪುನರ್ ವಿಂಗಡಣೆ (ತಿದ್ದುಪಡಿ) ಮಸೂದೆ 2023 ಎರಡನ್ನೂ ಲೋಕಸಭೆ ಅನುಮೋದಿಸಿರುವುದು ಮಹತ್ವದ ಬೆಳವಣಿಗೆ. ಗೃಹ ಸಚಿವ ಅಮಿತ್ ಷಾ ಅವರು ಈ ಎರಡು ಮಸೂದೆಗಳನ್ನು ಮಂಗಳವಾರ ಮಂಡಿಸಿದ್ದರು. ನಂತರ ಚರ್ಚೆಗಳು ನಡೆದಿದ್ದವು. ಒಂದು ಮಸೂದೆಯ ಮೂಲಕ ಕಾಶ್ಮೀರಿ ವಲಸಿಗ ಸಮುದಾಯದ ಇಬ್ಬರನ್ನು (ಓರ್ವ ಮಹಿಳೆ) ವಿಧಾನಸಭೆಗೆ ನಾಮನಿರ್ದೇಶನ ಮಾಡುವ ಅವಕಾಶವಿದೆ. ವಲಸಿಗ ಸಮುದಾಯ ಎಂದರೆ ಪಾಕ್ ಆಕ್ರಮಿತ ಕಾಶ್ಮೀರದಿಂದ ಸ್ಥಳಾಂತರಗೊಂಡು ಕಣಿವೆ ರಾಜ್ಯಕ್ಕೆ ಬಂದ ಸಮುದಾಯವಾಗಿದ್ದು, ಆ ಸಮುದಾಯ ಪ್ರತಿನಿಧಿಸುವ ಓರ್ವ ವ್ಯಕ್ತಿಗೆ ಸ್ಥಾನವೊಂದನ್ನು ಮೀಸಲಿಡಲಾಗುತ್ತದೆ.
ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅಂದು ಸರಿಯಾದ ಕ್ರಮಗಳನ್ನು ತೆಗೆದುಕೊಂಡಿದ್ದರೆ, ಪಾಕ್ ಆಕ್ರಮಿತ ಕಾಶ್ಮೀರ ಈಗ ಭಾರತದ ಭಾಗವಾಗಿರುತ್ತಿತ್ತು. ನೆಹರು ಐತಿಹಾಸಿಕ ಪ್ರಮಾದದಿಂದ ಇದು ಸಾಧ್ಯವಾಗಲಿಲ್ಲ.
| ಅಮಿತ್ ಷಾ ಕೇಂದ್ರ ಗೃಹ ಸಚಿವ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three + 18 =
Remember me
