ನವದಹೆಲಿ:ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪೆಟ್ರೋಲ್, ಡೀಸೆಲ್ ಮೇಲಿನ ತೆರಿಗೆಯನ್ನು ಕೇಂದ್ರ ಮತ್ತು ಕೆಲವು ರಾಜ್ಯ ಸರ್ಕಾರಗಳು ಕಡಿಮೆ ಮಾಡಿವೆ. ಪರಿಷ್ಕೃತ ದರ ಗುರುವಾರ ಜಾರಿಗೆ ಬಂದಿದೆ. ಇದರೊಂದಿಗೆ ದೇಶಾದ್ಯಂತ ಸರಾಸರಿ ಪೆಟ್ರೋಲ್ ಬೆಲೆ ಲೀಟರಿಗೆ 5.7 ರೂಪಾಯಿಯಿಂದ 6.35 ರೂಪಾಯಿ ತನಕ ಇಳಿದಿದೆ. ಡೀಸೆಲ್ ಬೆಲೆ ಲೀಟರಿಗೆ ಸರಾಸರಿ 11.16 ರೂಪಾಯಿಯಿಂದ 12.88 ರೂಪಾಯಿಯಷ್ಟು ಕಡಿಮೆ ಆಗಿದೆ. ಅಬಕಾರಿ ಸುಂಕ ಮತ್ತು ಸ್ಥಳೀಯ ತೆರಿಗೆ ಇಳಿಕೆಯ ಪ್ರಯೋಜನವನ್ನು ತೈಲ ಕಂಪನಿಗಳು ಗ್ರಾಹಕರಿಗೆ ವರ್ಗಾವಣೆ ಮಾಡಿವೆ. ತೆರಿಗೆ ಕಡಿತದ ಕ್ರಮದಿಂದಾಗಿ ಕೇಂದ್ರ ಸರ್ಕಾರದ ಬೊಕ್ಕಸಕ್ಕೆ ವಾರ್ಷಿಕ 1.4 ಲಕ್ಷ ಕೋಟಿ ರೂಪಾಯಿ ನಷ್ಟ ಆಗಲಿದೆ ಎಂದು ಮೂಲಗಳು ತಿಳಿಸಿವೆ.
ದೆಹಲಿಯಲ್ಲಿ ಪೆಟ್ರೋಲ್ ದರ 6.97ರೂ. ಇಳಿಕೆಯಾಗಿದ್ದು ಲೀಟರಿಗೆ 103.97 ರೂಪಾಯಿ ಆಗಿದೆ. ಡೀಸೆಲ್ ದರ 11.75 ರೂಪಾಯಿ ಇಳಿದು 86.67 ರೂಪಾಯಿ ಆಗಿದೆ. ಸತತ ಏಳು ದಿನಗಳ ನಿರಂತರ ಏರಿಕೆ ಕಾರಣ ದೆಹಲಿಯಲ್ಲಿ ಬುಧವಾರ ಪೆಟ್ರೋಲ್ ದರ ಲೀಟರಿಗೆ 110.04 ರೂಪಾಯಿ, ಡೀಸೆಲ್​ಗೆ 98.42 ರೂಪಾಯಿ ಆಗಿತ್ತು. ಮುಂಬೈನಲ್ಲಿ ಪೆಟ್ರೋಲ್ ದರ ಈಗ 109.98 ರೂಪಾಯಿ, ಡೀಸೆಲ್ 94.14 ರೂಪಾಯಿ ಆಗಿದೆ. ಚೆನ್ನೈನಲ್ಲಿ ಪೆಟ್ರೋಲ್ ದರ 101.40 ರೂ., ಡೀಸೆಲ್ 91.43 ರೂಪಾಯಿ ಆಗಿದೆ.
ಕಚ್ಚಾ ತೈಲ ಬೆಲೆ:ಜಾಗತಿಕವಾಗಿ ತೈಲ ಬೆಲೆ ಇಳಿಮುಖವಾಗಿದ್ದು, ಅಮೆರಿಕದ ಕಚ್ಚಾತೈಲ ಫ್ಯೂಚರ್ಸ್ ಮಾರುಕಟ್ಟೆಯಲ್ಲಿ ಪ್ರತಿ ಬ್ಯಾರೆಲ್​ಗೆ 80 ಡಾಲರ್ ಆಗಿತ್ತು. ಇರಾನ್ ಜತೆಗೆ ಜಾಗತಿಕ ಶಕ್ತಿಗಳು ಅಣು ಸಂಬಂಧಿ ಮಾತುಕತೆ ಶುರುಮಾಡಿದ ಹಿನ್ನೆಲೆಯಲ್ಲಿ ಅದರ ಮೇಲಿನ ನಿರ್ಬಂಧ ತೆರವುಗೊಳಿಸಿದ್ದು ಇದಕ್ಕೆ ಕಾರಣ. ಅಮೆರಿಕದ ವೆಸ್ಟ್ ಟೆಕ್ಸಾಸ್ ಇಂಟರ್​ವಿುೕಡಿಯೇಟ್ ಕಚ್ಚಾ ತೈಲ ಮಾರುಕಟ್ಟೆಯಲ್ಲಿ ಗುರುವಾರ 92 ಸೆಂಟ್ ಕಡಿಮೆಯಾಗಿ ಪ್ರತಿ ಬ್ಯಾರೆಲ್​ಗೆ 79.94 ಡಾಲರ್ ಆಗಿದೆ. ಬ್ರೆಂಟ್ ಕಚ್ಚಾ ತೈಲ 80 ಸೆಂಟ್ ಕಡಿಮೆಯಾಗಿ ಪ್ರತಿ ಬ್ಯಾರೆಲ್ ಬೆಲೆ 81.19 ಡಾಲರ್ ಆಗಿದೆ.
ವ್ಯಾಟ್ ಇಳಿಕೆ:ಉತ್ತರ ಪ್ರದೇಶದಲ್ಲಿ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ದರದ ಮೇಲಿನ ವ್ಯಾಟ್ ಅನ್ನು ತಲಾ 12 ರೂಪಾಯಿ ಇಳಿಸಿದೆ. ಬಿಹಾರದಲ್ಲಿ ಲೀಟರ್ ಪೆಟ್ರೋಲ್​ಗೆ 3.2 ರೂ., ಡೀಸೆಲ್​ಗೆ 3.9 ರೂಪಾಯಿ ವ್ಯಾಟ್ ಇಳಿಕೆಯಾಗಿದೆ. ಅಸ್ಸಾಂ, ಗುಜರಾತ್, ತ್ರಿಪುರಾ, ಮಣಿಪುರ, ಸಿಕ್ಕಿಂ, ಮಿಜೋರಾಂ, ಪುದುಚೆರಿ ಮತ್ತು ಇತರೆ ಕೆಲವು ರಾಜ್ಯಗಳಲ್ಲಿ ತಲಾ 7 ರೂಪಾಯಿ ವ್ಯಾಟ್ ಇಳಿಕೆಯಾಗಿದೆ. ಒಡಿಶಾ ಸರ್ಕಾರವು ಗುರುವಾರ ಪೆಟ್ರೋಲ್ ಮತ್ತು ಡೀಸೆಲ್ ಲೀಟರಿಗೆ 3 ರೂಪಾಯಿ ವ್ಯಾಟ್ ಕಡಿಮೆ ಮಾಡಿದೆ. ಗೋವಾದಲ್ಲಿ ಇಂಧನದ ಮೇಲಿನ ವ್ಯಾಟ್ ತಲಾ 7 ರೂಪಾಯಿ ಇಳಿಕೆಯಾಗಿದ್ದು, ಪೆಟ್ರೋಲ್​ಗೆ 12 ರೂಪಾಯಿ, ಡೀಸೆಲ್​ಗೆ 17 ರೂಪಾಯಿ ಇಳಿದಿದೆ.
11 ಬಿಜೆಪಿ ಆಳ್ವಿಕೆ ರಾಜ್ಯಗಳಲ್ಲಿ ಕ್ರಮ:ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್ ತೆರಿಗೆ ಇಳಿಸಿದ ಮೇಲೆ ಬಿಜೆಪಿ ಆಳ್ವಿಕೆಯ 11 ರಾಜ್ಯಗಳು ಹೆಚ್ಚುವರಿಯಾಗಿ ವ್ಯಾಟ್ ತೆರಿಗೆ ಇಳಿಸಿವೆ. ಈ ಪಟ್ಟಿಯಲ್ಲಿ ಅಸ್ಸಾಂ, ತ್ರಿಪುರಾ, ಮಣಿಪುರ, ಕರ್ನಾಟಕ, ಗೋವಾ, ಉತ್ತರ ಪ್ರದೇಶ, ಗುಜರಾತ್, ಹಿಮಾಚಲ ಪ್ರದೇಶ, ಹರಿಯಾಣ, ಉತ್ತರಾಖಂಡ, ಅರುಣಾಚಲ ಪ್ರದೇಶಗಳುಸೇರಿವೆ. ಇದರ ಪರಿಣಾಮ, ಈ ರಾಜ್ಯಗಳಲ್ಲಿ ಪೆಟ್ರೋಲ್ ದರ ಲೀಟರಿಗೆ 12 ರೂಪಾಯಿ, ಡೀಸೆಲ್​ಗೆ 17 ರೂಪಾಯಿ ಇಳಿಕೆಯಾಗಿದೆ.
ಕೇರಳದಲ್ಲಿ ತೆರಿಗೆ ಇಳಿಕೆ ಇಲ್ಲ:ಕೇಂದ್ರ ಸರ್ಕಾರ ಅಬಕಾರಿ ಸುಂಕ ಇಳಿಸಿದ ಮಾದರಿಯಲ್ಲಿ ಕೇರಳದಲ್ಲಿ ಇಂಧನದ ಮೇಲಿನ ತೆರಿಗೆ ಇಳಿಸುವುದು ಸಾಧ್ಯವಿಲ್ಲ. ಯಥಾ ಸ್ಥಿತಿಯನ್ನು ಮುಂದುವರಿಸಲಾಗುವುದು ಎಂದು ಕೇರಳ ಸರ್ಕಾರ ಗುರುವಾರ ಸ್ಪಷ್ಟಪಡಿಸಿದೆ. ಕೇಂದ್ರ ಸರ್ಕಾರ ತೆಗೆದುಕೊಂಡ ನಿರ್ಧಾರದ ಫಲವಾಗಿ ಕೇರಳದಲ್ಲಿ ಪೆಟ್ರೋಲ್​ಗೆ ಲೀಟರಿಗೆ 6 ರೂ. ಡೀಸೆಲ್​ಗೆ ಲೀಟರಿಗೆ 12 ರೂಪಾಯಿ ಇಳಿಕೆಯಾಗುತ್ತಿದೆ. ಇದಕ್ಕಿಂತ ಹೆಚ್ಚು ಇಳಿಕೆ ಮಾಡುವುದು ಸಾಧ್ಯವಿಲ್ಲ ಎಂದು ಕೇರಳದ ವಿತ್ತ ಸಚಿವ ಕೆ.ಎನ್. ಬಾಲಗೋಪಾಲ್ ತಿಳಿಸಿದ್ದಾರೆ. ಪಶ್ಚಿಮ ಬಂಗಾಳದ ಸರ್ಕಾರ ಕೂಡ ವ್ಯಾಟ್ ಇಳಿಸಿಲ್ಲ.
ಕೇಂದ್ರ ಸರ್ಕಾರ ಪೆಟ್ರೋಲ್ ಹಾಗೂ ಡೀಸೆಲ್ ದರ ಕಡಿಮೆ ಮಾಡಿದ ತಕ್ಷಣ ರಾಜ್ಯದಲ್ಲಿಯೂ ಪೆಟ್ರೋಲ್, ಡೀಸೆಲ್ ದರ 7 ರೂ. ಇಳಿಸಲಾಗಿದೆ. ಇದರಿಂದ ಬೊಕ್ಕಸಕ್ಕೆ 2,100 ಕೋಟಿ ರೂ. ಕೊರತೆಯಾಗಲಿದೆ.
|ಬಸವರಾಜ ಬೊಮ್ಮಾಯಿಮುಖ್ಯಮಂತ್ರಿ
ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕ ಇಳಿಕೆಯು ಉತ್ತರ ಪ್ರದೇಶ ಸೇರಿ ಐದು ರಾಜ್ಯಗಳ ಚುನಾವಣೆಯಲ್ಲಿ ಸೋಲಿನ ಭಯದಿಂದ ಕೈಗೊಂಡ ನಿರ್ಧಾರವೆ ಹೊರತು. ಜನರಿಗೆ ನೆರವಾಗಬೇಕೆಂದು ಹೃದಯಪೂರ್ವಕವಾಗಿ ಕೈಗೊಂಡಿದ್ದಲ್ಲ.
|ಪ್ರಿಯಾಂಕಾ ಗಾಂಧಿವಾದ್ರಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ
ಏಟು-ಎದುರೇಟು:ತೈಲದ ಮೇಲಿ ಅಬಕಾರಿ ಸುಂಕ ಇಳಿಕೆಯಾಗಿರುವುದು ಬಿಜೆಪಿ ಮತ್ತು ಕಾಂಗ್ರೆಸ್ ಸೇರಿ ಇನ್ನಿತರ ವಿರೋಧ ಪಕ್ಷಗಳ ಮಧ್ಯೆ ವಾಗ್ಯುದ್ಧಕ್ಕೆ ಕಾರಣವಾಗಿದೆ. 13 ರಾಜ್ಯಗಳ 30 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆಯಾಗಿರುವ ಕಾರಣ ರಾತ್ರೋರಾತ್ರಿ ಅಬಕಾರಿ ಸುಂಕ ತಗ್ಗಿಸಲಾಗಿದೆ. ಇದರ ಹಿಂದೆ ಮುಂದಿನ ವರ್ಷ ಫೆಬ್ರವರಿ ಮತ್ತು ಮಾರ್ಚ್​ನಲ್ಲಿ ನಡೆಯಲಿರುವ ಐದು ರಾಜ್ಯಗಳ ಚುನಾವಣೆಯಲ್ಲಿ ಲಾಭಗಳಿಸುವ ಲೆಕ್ಕಾಚಾರ ಇದೆ. ಜನಪರ ಕಾಳಜಿ ಇದ್ದಿದ್ದರೆ ತೈಲದ ಮೇಲಿನ ಅಬಕಾರಿ ಸುಂಕವನ್ನು ಪೂರ್ಣವಾಗಿ ರದ್ದು ಮಾಡಬೇಕಿತ್ತು ಎಂದು ವಿರೋಧ ಪಕ್ಷಗಳು ಟೀಕಿಸಿವೆ. ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಬಿಜೆಪಿ ನಾಯಕರು, ದೀಪಾವಳಿ ಉಡುಗೊರೆಯಾಗಿ ಜನರ ಆರ್ಥಿಕ ಹೊರೆಯನ್ನು ಇಳಿಸಲು ಇಂಧನದ ತೈಲದ ಮಾತ್ರವಲ್ಲ ಕೆಲ ದಿನದ ಹಿಂದೆ ಅಡುಗೆ ಎಣ್ಣೆ ಮೇಲಿನ ಸೀಮಾ ಸುಂಕ ರದ್ದು ಮಾಡಿ, ಕೃಷಿ ಸೆಸ್ ಇಳಿಸಲಾಗಿದೆ. ಈರುಳ್ಳಿ ಬೆಲೆ ನಿಯಂತ್ರಿಸಲು ಸರ್ಕಾರದ ದಾಸ್ತಾನಿನಿಂದ 1.11 ಲಕ್ಷ ಟನ್ ಈರುಳ್ಳಿಯನ್ನೂ ಬಿಡುಗಡೆ ಮಾಡಲಾಗಿದೆ. ಕೇಂದ್ರ ಸರ್ಕಾರ ತೈಲದ ಮೇಲಿ ಸುಂಕ ತಗ್ಗಿಸಿರುವ ಮೇಲ್ಪಂಕ್ತಿಯನ್ನು ರಾಜ್ಯ ಸರ್ಕಾರಗಳು ಅನುಸರಿಸಿ ವ್ಯಾಟ್ ಇಳಿಸಲಿ ಎಂದು ಹೇಳಿದ್ದಾರೆ.
ತೈಲದ ಮೇಲಿನ ಅಬಕಾರಿ ಸುಂಕ ಇಳಿಕೆಯು ಉಪಚುನಾವಣೆಯ ಬೈಪ್ರಾಡಕ್ಟ್. ತೈಲದ ಬೆಲೆ ಹೀಗೆ ಗಗನಮುಖಿಯಾದರೆ ಅಧಿಕಾರ ಕೈತಪು್ಪತ್ತದೆ. ಇನ್ನಿತರ ಕಡೆ ಅಧಿಕಾರ ಪಡೆಯಲು ಆಗುವುದಿಲ್ಲ ಎಂಬ ಸೋಗಲಾಡಿತನದಿಂದ ಕೈಗೊಂಡ ಕ್ರಮ
|ಪಿ.ಚಿದಂಬರಂಕಾಂಗ್ರೆಸ್ ಹಿರಿಯ ನಾಯಕ
ನರೇಂದ್ರ ಮೋದಿ ಸರ್ಕಾರ ಪೆಟ್ರೋಲ್ ಮೇಲೆ 5 ರೂಪಾಯಿ, ಡೀಸೆಲ್ ಮೇಲೆ 10 ರೂಪಾಯಿ ಅಬಕಾರಿ ಸುಂಕ ಇಳಿಸಿದೆ. ಇದಕ್ಕೆ ಪೂರಕವಾಗಿ ಎಲ್ಲ ಎನ್​ಡಿಎ ರಾಜ್ಯ ಸರ್ಕಾರಗಳು ಕೂಡ ವ್ಯಾಟ್ ಇಳಿಕೆ ಮಾಡಿವೆ. ಇಂಧನ ದರ ಏರಿಕೆ ವಿಚಾರವಾಗಿ ಸದಾ ಟೀಕೆ ಮಾಡುತ್ತಿದ್ದ ವಿಪಕ್ಷ ನಾಯಕರು ಮೌನದ ಮೊರೆ ಹೋಗಿರುವುದೇಕೆ? ಅವರ ಆಳ್ವಿಕೆಯ ರಾಜ್ಯಗಳಲ್ಲಿ ಯಾಕೆ ತೆರಿಗೆ ಇಳಿಸಿಲ್ಲ. ಕ್ರಮ ಜರುಗಿಸಬೇಕಾದ ಸಮಯ ಬಂದಾಗ ವಿಪಕ್ಷ ನಾಪತ್ತೆಯಾಗಿಬಿಡುತ್ತದೆ.
|ಬಿ.ಎಲ್. ಸಂತೋಷ್ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ
ಕಳೆದ ಒಂದು ವರ್ಷದಿಂದ ಇಂಧನ ದರ ಏರಿಕೆ ಬಗ್ಗೆ ಟೀಕೆ ಮಾಡುತ್ತಲೇ ಬಂದ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ತೆರಿಗೆ ದರ ಇಳಿಸಿ ರಾಜ್ಯದ ಜನರಿಗೆ ದೀಪಾವಳಿಯ ಕೊಡುಗೆ ನೀಡುವರೆ? ಕೇಂದ್ರ ಸರ್ಕಾರ ಅಬಕಾರಿ ಸುಂಕ ಇಳಿಸಿದೆ. ಬಿಜೆಪಿ, ಎನ್​ಡಿಎ ಆಡಳಿತದ ರಾಜ್ಯಗಳಲ್ಲಿ ವ್ಯಾಟ್ ಇಳಿಕೆಯಾಗಿದೆ. ವಿಪಕ್ಷ ಆಡಳಿತದ ದೆಹಲಿ, ಪಶ್ಚಿಮ ಬಂಗಾಳ, ರಾಜಸ್ಥಾನ, ತೆಲಂಗಾಣ, ಮಹಾರಾಷ್ಟ್ರ, ಪಂಜಾಬ್, ತಮಿಳುನಾಡುಗಳಲ್ಲಿ ವ್ಯಾಟ್ ಇಳಿಕೆ ಯಾವಾಗ?
|ಅಮಿತ್ ಮಾಳವೀಯಬಿಜೆಪಿ ನಾಯಕ
ಬೆಂಗಳೂರು:ಚುನಾವಣೆಗಳಲ್ಲಿ ಮತದಾರರು ಬಿಜೆಪಿಯನ್ನು ಸೋಲಿಸಿದರೆ ಪೆಟ್ರೋಲ್, ಡೀಸೆಲ್ ಬೆಲೆ ಇಳಿಯುತ್ತದೆ ಎನ್ನುವ ಪಾಠವನ್ನು ಪ್ರಧಾನಿ ನರೇಂದ್ರ ಮೋದಿ ಹೇಳಿಕೊಟ್ಟಿದ್ದಾರೆಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ. ಇಂಧನ ಬೆಲೆ ಇಳಿಕೆ ಪ್ರಧಾನಿ ನೀಡಿದ ದೀಪಾವಳಿ ಕೊಡುಗೆ ಅಲ್ಲ, ಇದು ದೇಶಾದ್ಯಂತ ನಡೆದ ಉಪಚುನಾವಣೆಗಳ ಫಲಿತಾಂಶದಿಂದ ಬಂದ ಕೊಡುಗೆ ಎಂದು ಹೇಳಿಕೆಯಲ್ಲಿ ಹರಿಹಾಯ್ದಿದ್ದಾರೆ. ಯುಪಿಎ ಕಾಲದಲ್ಲಿ ಕಚ್ಚಾ ತೈಲ ಬೆಲೆ ಬ್ಯಾರಲ್​ಗೆ 125 ಡಾಲರ್ ಇದ್ದಾಗ ಪೆಟ್ರೋಲ್ ಬೆಲೆ 65 ರೂ.ಗಳಾಗಿತ್ತು. ಬಿಜೆಪಿ ಸರ್ಕಾರದಲ್ಲಿ ಕಚ್ಚಾ ತೈಲ ಬೆಲೆ ಬ್ಯಾರಲ್​ಗೆ 82 ಡಾಲರ್ ಇದ್ದಾಗ ಪೆಟ್ರೋಲ್ ಬೆಲೆ 100 ರೂ.ಗೆ ಇಳಿಸಿದ್ದು ಮೋದಿ ಮಹಾನ್ ಸಾಧನೆ ಎಂದು ಟೀಕಿಸಿದ್ದಾರೆ. ಅಡುಗೆ ಅನಿಲ ಬೆಲೆ ಸಾವಿರ ರೂ. ತಲುಪಿದೆ, ಆಹಾರ ಧಾನ್ಯ, ಖಾದ್ಯತೈಲದ ಬೆಲೆ ಏರುತ್ತಲೇ ಇದೆ. ಈ ಬೆಲೆಗಳು ಕೂಡಾ ಇಳಿಯಬೇಕಾದರೆ, ಬಿಜೆಪಿಯನ್ನು ಇನ್ನಷ್ಟು ಚುನಾವಣೆಗಳಲ್ಲಿ ಮತದಾರರು ಸೋಲಿಸುತ್ತಲೇ ಇರಬೇಕು ಎಂದು ಹೇಳಿದ್ದಾರೆ. ಸದ್ಯದಲ್ಲಿಯೇ ನಮ್ಮ ರಾಜ್ಯದಲ್ಲಿ ತಾಲೂಕು ಮತ್ತು ಜಿಲ್ಲಾ ಪಂಚಾಯತಿಗಳಿಗೆ ಹಾಗೂ ಬೆಂಗಳೂರು ಮಹಾನಗರಪಾಲಿಕೆಗೆ ಚುನಾವಣೆಗಳು ನಡೆಯಲಿವೆ. ಮೋದಿ ಹೇಳಿಕೊಟ್ಟಿರುವ ಪಾಠವನ್ನು ಮತದಾರರು ನೆನಪಲ್ಲಿಟ್ಟುಕೊಂಡು ಮತದಾನ ನಡೆಸಬೇಕು. ಆಗ ಎಲ್ಲ ವಸ್ತುಗಳ ಬೆಲೆ ಇಳಿಯುತ್ತವೆ ಎಂದಿದ್ದಾರೆ.
ದೇಶಾದ್ಯಂತ ನಡೆದ ಉಪ ಚುನಾವಣೆಗಳಲ್ಲಿ ಮತದಾರರು ನೀಡಿದ ತೀರ್ಪಿನಿಂದ ದೀಪಾವಳಿಯ ಬೆಳಕು ಬರಲಾರಂಭಿಸಿದೆ ಎಂದು ಇಂಧನ ದರ ಇಳಿಕೆ ಕುರಿತಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವ್ಯಾಖ್ಯಾನಿಸಿದ್ದಾರೆ. ಮತದಾರನ ತೀರ್ಪಿಗೆ ಪ್ರಜಾಪ್ರಭುತ್ವದಲ್ಲಿ ಎಷ್ಟು ಬೆಲೆ ಇದೆ ಎಂಬುದಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತರಾತುರಿಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕಡಿಮೆ ಮಾಡಿರುವುದೇ ಸಾಕ್ಷಿ ಎಂದರು. ಕೇಂದ್ರ ಹಾಗೂ ರಾಜ್ಯದ ಬಿಜೆಪಿ ಸರ್ಕಾರಗಳಿಗೆ ಮತದಾರರ ಸಂದೇಶ ಸರಿಯಾಗಿಯೇ ರವಾನೆಯಾಗಿದೆ. ಕಾಂಗ್ರೆಸ್ ದೇಶಾದ್ಯಂತ ಜನ ಜಾಗೃತಿ ಅಭಿಯಾನ ನಡೆಸಲು ನಿರ್ಧರಿಸಿತ್ತು. ಅಡುಗೆ ಅನಿಲ ಸೇರಿ ಬೇರೆ ಬೆಲೆಗಳು ಇಳಿಯಬೇಕು. ನಿರುದ್ಯೋಗ ನಿವಾರಣೆಯಾಗಬೇಕೆಂದು ನಮ್ಮ ಹೋರಾಟ ಇದ್ದೆ ಇರುತ್ತದೆ ಎಂದು ಹೇಳಿದರು. ಕಾಂಗ್ರೆಸ್​ನಿಂದ ನ.14ರಂದು ಜನಜಾಗೃತಿ ಮೂಡಿಸುವ ಕೆಲಸ ಮಾಡುತ್ತೇವೆ. ನಿರುದ್ಯೋಗ ನಿವಾರಣೆ ಮಾತು ಇರಲಿ, ಕರೊನಾ ಸಂದರ್ಭದಲ್ಲಿ ಕೆಲಸ ಕಳೆದುಕೊಂಡವರಿಗೆ ಪರಿಹಾರವನ್ನು ಕೊಟ್ಟಿಲ್ಲ ಎಂದು ಕಿಡಿಕಾರಿದರು. ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಸ್ವಲ್ಪ ಮಟ್ಟಿನ ತೆರಿಗೆ ಕಡಿತ ಮಾಡಿರುವುದು ಸ್ವಾಗತಾರ್ಹ. ಆದರೆ ಸಿಮೆಂಟ್, ಕಬ್ಬಿಣ, ದಿನಬಳಕೆ ವಸ್ತುಗಳ ಬೆಲೆ ಇಳಿಯಬೇಕು ಎಂದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 2 =
Remember me
