ಮುಂಬೈ:ಚಿತ್ರಕಲಾವಿದ ಎಂ.ಎಫ್. ಹುಸೇನ್ ಅವರ ಒಂದು ಪೇಂಟಿಂಗನ್ನು ಎರಡು ಕೋಟಿ ರೂಪಾಯಿಗೆ ಖರೀದಿಸುವಂತೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ತನ್ನ ಮೇಲೆ ‘ಒತ್ತಡ’ ಹೇರಿದ್ದರು ಎಂದು 5,000 ಕೋಟಿ ರೂಪಾಯಿ ಹಣಕಾಸು ದುರುಪಯೋಗ ಹಗರಣದ ಆರೋಪಿಗಳಲ್ಲಿ ಒಬ್ಬರಾದ ಯೆಸ್ ಬ್ಯಾಂಕ್​ನ ಸಹ-ಸಂಸ್ಥಾಪಕ ರಾಣಾ ಕಪೂರ್ ಜಾರಿ ನಿರ್ದೇಶನಾಲಯ (ಇ.ಡಿ.) ಅಧಿಕಾರಿಗಳಿಗೆ ತಿಳಿಸಿದ್ದಾರೆ. ಈ ವಿಷಯ ಈಗ ರಾಜಕೀಯ ವಾಗ್ವಾದಕ್ಕೆ ವೇದಿಕೆ ಕಲ್ಪಿಸಿದೆ. ಆ ಪೇಂಟಿಂಗ್​ನ ಮಾರಾಟದಿಂದ ಬಂದ ಹಣವನ್ನು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ನ್ಯೂಯಾರ್ಕ್​ನಲ್ಲಿ ಚಿಕಿತ್ಸೆ ಪಡೆಯಲು ಬಳಸಲಾಗಿದೆ ಎಂದು ರಾಣಾ ಹೇಳಿರುವುದಾಗಿ ವಿಶೇಷ ಕೋರ್ಟ್​ಗೆ ಸಲ್ಲಿಸಿರುವ ಎರಡನೇ ಹೆಚ್ಚುವರಿ ಆರೋಪಪಟ್ಟಿಯಲ್ಲಿ ಇ.ಡಿ. ಹೇಳಿದೆ. ಹುಸೇನ್​ರ ಕಲಾಕೃತಿಯನ್ನು ಖರೀದಿಸದಿದ್ದರೆ ಸೋನಿಯಾ ಜೊತೆ ಬಾಂಧವ್ಯ ಬೆಳೆಸಲು ಆಗುವುದಿಲ್ಲ ಹಾಗೂ ‘ಪದ್ಮಭೂಷಣ’ ಪಡೆಯುವುದಕ್ಕೂ ಅಡ್ಡಿಯಾಗುತ್ತದೆ ಎಂದು ಅಂದಿನ ಪೆಟ್ರೋಲಿಯಂ ಖಾತೆ ಸಚಿವ ದಿವಂಗತ ಮುರಳಿ ದೇವರಾ ತನಗೆ ಹೇಳಿದ್ದರೆಂದೂ ರಾಣಾ ತಿಳಿಸಿರುವುದಾಗಿ ತನಿಖಾ ಸಂಸ್ಥೆ ವಿವರಿಸಿದೆ. ಈ ಪ್ರಕರಣದಲ್ಲಿ, ರಾಣಾ ಕಪೂರ್ ಮತ್ತು ಕುಟುಂಬ ಹಾಗೂ ದಿವಾನ್ ಹೌಸಿಂಗ್ ಫೈನಾನ್ಸ್ ಸಂಸ್ಥೆಯ (ಡಿಎಚ್​ಎಫ್​ಎಲ್) ಕಪಿಲ್ ಹಾಗೂ ಧೀರಜ್ ವಾಧ್ವಾನ್ ಮತ್ತಿತರರ ವಿರುದ್ಧ ಒಟ್ಟು ಮೂರು ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ.
ಯೆಸ್ ಬ್ಯಾಂಕ್ ಅನ್ನು ದಿವಾಳಿ ಅಂಚಿಗೆ ತೆಗೆದುಕೊಂಡು ಹೋದ 4,300 ಕೋಟಿ ರೂಪಾಯಿ ಹಗರಣದಲ್ಲಿ ರಾಣಾ ಕಪೂರ್​ರನ್ನು ಬಂಧಿಸಲಾಗಿತ್ತು. ಬ್ಯಾಂಕ್​ನಿಂದ ದೊಡ್ಡ ಪ್ರಮಾಣದಲ್ಲಿ ಸಾಲ ಪಡೆದಿದ್ದವರು ಮರುಪಾವತಿ ಮಾಡದಿರುವುದರಿಂದ ಬ್ಯಾಂಕ್ ದಿವಾಳಿ ಅಂಚಿಗೆ ಬಂದು ಗ್ರಾಹಕರು ಕಂಗಾಲಾಗಿದ್ದರು. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕಪೂರ್ ಪತ್ನಿ ಹಾಗೂ ಮೂವರು ಪುತ್ರಿಯರೂ ಆರೋಪಿಗಳಾಗಿದ್ದು ಕೇಂದ್ರೀಯ ತನಿಖಾ ದಳ (ಸಿಬಿಐ) ತನಿಖೆ ನಡೆಸುತ್ತಿದೆ. ದಿವಾನ್ ಹೌಸಿಂಗ್ ಆಂಡ್ ಫೈನಾನ್ಸ್ ಸಂಸ್ಥೆಯಲ್ಲಿ (ಡಿಎಚ್​ಎಫ್​ಎಲ್) ಯೆಸ್ ಬ್ಯಾಂಕ್ ಸುಮಾರು 3,700 ಕೋಟಿ ರೂ. ಹೂಡಿಕೆ ಮಾಡಿತ್ತು. ಕಪೂರ್ ಪುತ್ರಿಯರಾದ ರೋಷನಿ, ರಾಖಿ ಮತ್ತು ರಾಧಾ ಕಪೂರ್ ಮಾಲಿಕತ್ವದ ಡೂಇಟ್ ಎಂಬ ಕಂಪನಿಗೆ 600 ಕೋಟಿ ರೂ. ಸಾಲ ಮಂಜೂರು ಮಾಡಿದ್ದ ಸಮಯದಲ್ಲೇ ಈ ಹೂಡಿಕೆ ಮಾಡಲಾಗಿತ್ತು. ಯೆಸ್ ಬ್ಯಾಂಕ್ ಖರೀದಿಸಿದ್ದ 3,700 ಕೋಟಿ ರೂ. ಮೊತ್ತದ ಡಿಬೆಂಚರ್​ಗಳನ್ನು ಡಿಎಎಫ್​ಎಲ್ ರಿಡೀಮ್ ಮಾಡಿರಲಿಲ್ಲ. ಅದು ಭ್ರಷ್ಟಾಚಾರಕ್ಕೆ ಸಮನಾದುದು ಎಂದು ಸಿಬಿಐ ವಾದಿಸಿತ್ತು.
ಆರೋಪಕ್ಕೆ ಕಾಂಗ್ರೆಸ್ ಆಕ್ರೋಶ:ಈ ಎಲ್ಲ ಆರೋಪಗಳಿಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್, ‘ಮೃತರ ಹೆಸರಿನಲ್ಲಿ ರಾಣಾ ಕಪೂರ್ ಬಹಳ ಬುದ್ಧಿವಂತಿಕೆಯಿಂದ ಆರೋಪ ಮಾಡಿದ್ದಾರೆ’ ಎಂದು ಟೀಕಿಸಿದೆ. 5,000 ಕೋಟಿ ರೂಪಾಯಿ ಹಣ ದುರುಪಯೋಗ ಹಗರಣದಲ್ಲಿ ಭಾಗಿಯಾಗಿರುವ ವ್ಯಕ್ತಿಯಿಂದ ಇನ್ನೇನನ್ನು ನಿರೀಕ್ಷಿಸಲು ಸಾಧ್ಯ ಎಂದೂ ಕಾಂಗ್ರೆಸ್ ಪ್ರಶ್ನಿಸಿದ್ದು, ದಿವಂಗತ ಮುರಳಿ ದೇವರಾ ಮತ್ತು ಅಹ್ಮದ್ ಪಟೇಲ್ ವಿರುದ್ಧ ಆರೋಪ ಮಾಡಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದೆ.
ಲೂಟಿಕೋರರು ಎಂದ ಬಿಜೆಪಿ:ಕಾಂಗ್ರೆಸ್ ಮತ್ತು ‘ಗಾಂಧಿ’ ಕುಟುಂಬಸ್ಥರು ‘ಲೂಟಿಕೋರರು’. ಅವರು ಪದ್ಮಭೂಷಣ ಪ್ರಶಸ್ತಿಯನ್ನೂ ಮಾರಾಟ ಮಾಡುತ್ತಾರೆ ಎಂದು ಬಿಜೆಪಿ ಭಾನುವಾರ ವಾಗ್ದಾಳಿ ಮಾಡಿದೆ. ಕಾಂಗ್ರೆಸ್​ನ ಚುನಾವಣಾ ಚಿಹ್ನೆಯಾದ ‘ಹಸ್ತ’ವನ್ನು ಉಲ್ಲೇಖಿಸಿರುವ ಬಿಜೆಪಿ ವಕ್ತಾರ ಗೌರವ್ ಭಾಟಿಯಾ, ‘ಕಾಂಗ್ರೆಸ್ ಕೈ ಭ್ರಷ್ಟವಾಗಿದೆ. ಜನರು ಸಂಕಷ್ಟದಲ್ಲಿರುವಾಗ ಕಾಂಗ್ರೆಸ್ ಮತ್ತು ಗಾಂಧಿ ಕುಟುಂಬದವರು ಮೋಜು ಮಾಡುತ್ತಿದ್ದರು’ ಎಂದು ಟೀಕಿಸಿದ್ದಾರೆ.
ಇಂಡಿಯಾ ಟ್ರೆಂಡಿಂಗ್​ನಲ್ಲಿ #DrRajkumar; ಡಾ.ರಾಜ್​ಗೆ ಜನ್ಮದಿನದ ಶುಭಾಶಯಗಳ ಸುರಿಮಳೆ..
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 3 =
Remember me
