|ರಾಘವ ಶರ್ಮ ನಿಡ್ಲೆನವದೆಹಲಿ
ಮಹಾರಾಷ್ಟ್ರದಲ್ಲಿ ಮೈತ್ರಿ ಸರ್ಕಾರದ ವಿರುದ್ಧ ಬಂಡೆದ್ದಿರುವ ಶಿವಸೇನೆ ಶಾಸಕರ ಬಲ ಹೆಚ್ಚಾಗುತ್ತಿರುವಂತೆಯೇ, ಮಹಾ ವಿಕಾಸ್ ಅಘಾಡಿ ಪತನದಂಚಿಗೆ ಬಂದಿದೆ. ರಾಜೀನಾಮೆ ನೀಡಲು ಸಿದ್ಧ ಎಂದು ಸಿಎಂ ಉದ್ಧವ್ ಠಾಕ್ರೆ ಘೋಷಿಸಿದ್ದಾರೆ. ಆದರೆ, ಮಹಾ ಸರ್ಕಾರದ ರಾಜಕೀಯ ಅಸ್ಥಿರತೆ ಇನ್ನಷ್ಟು ದಿನ ಮುಂದುವರಿಯಲಿದೆ.
ಶಿವಸೇನೆಯ 44 ಶಾಸಕರು ತನ್ನೊಂದಿಗಿದ್ದಾರೆ ಎಂದು ಬಂಡಾಯ ನಾಯಕ, ಸಚಿವ ಏಕನಾಥ್ ಶಿಂಧೆ ಬುಧವಾರ ಘೋಷಿಸಿದ್ದಾರೆ. ಏತನ್ಮಧ್ಯೆ ಸರ್ಕಾರ ಉಳಿಸಲು ಹರಸಾಹಸ ಪಡುತ್ತಿರುವ ಎನ್​ಸಿಪಿ ನಾಯಕ ಶರದ್ ಪವಾರ್- ಉದ್ಧವ್ ಠಾಕ್ರೆ ಜೋಡಿ ಏಕನಾಥ್ ಶಿಂಧೆಗೆ ಸಿಎಂ ಹುದ್ದೆ ನೀಡುವ ಬಗ್ಗೆ ಗಂಭೀರ ಚರ್ಚೆ ನಡೆಸಿದ್ದಾರೆ. ಈ ಮೂಲಕ ಬಂಡೆದ್ದಿರುವ ಗುಂಪನ್ನು ವಾಪಸ್ ಕರೆಸಿಕೊಳ್ಳಲು ಯತ್ನಿಸುತ್ತಿದ್ದಾರೆ.
ವಿಧಾನಸಭೆ ವಿಸರ್ಜನೆ ಸಾಧ್ಯವೇ?:ವಿಧಾನಸಭೆ ವಿಸರ್ಜನೆಗೆ ಮುಂದಾಗುತ್ತೇವೆ ಎಂದು ಶಿವಸೇನೆ ಸಂಸದ, ಠಾಕ್ರೆ ಆಪ್ತ ಸಂಜಯ್ ರಾವತ್ ಹೇಳಿದ್ದರೂ, ಈ ಪ್ರಸ್ತಾವನೆ ರಾಜ್ಯಪಾಲರಿಗೆ ತೃಪ್ತಿಪಡಿಸಿದರೆ ಮಾತ್ರ ಜಾರಿಯಾದೀತು. ಬಿಜೆಪಿ ಮತ್ತು ಶಿವಸೇನೆಯ ಏಕನಾಥ ಶಿಂಧೆ ನಾಯಕತ್ವದ ಗುಂಪು ಸರ್ಕಾರ ರಚನೆಯ ಪ್ರಸ್ತಾವ ನೀಡಿ, ಅಗತ್ಯಕ್ಕಿಂತ ಹೆಚ್ಚು ಶಾಸಕರ ಬೆಂಬಲವಿದೆ ಎನ್ನುವುದನ್ನು ಸಹಿ ಮೂಲಕ ದೃಢಪಡಿಸಿದಲ್ಲಿ ರಾಜ್ಯಪಾಲರು ಸರ್ಕಾರ ರಚನೆಗೆ ಅವಕಾಶ ನೀಡಬಹುದು. ಹೀಗಾಗಿ, ಪ್ರಸ್ತುತ ಉದ್ಧವ್ ಠಾಕ್ರೆ ಮುಂದಿರುವ ಎಲ್ಲ ಸಾಧ್ಯತೆಗಳೂ ಅವರ ಪರವಾಗಿಲ್ಲ ಎನ್ನುವುದು ಸ್ಪಷ್ಟ. ಶಿಂಧೆ ತನ್ನೊಂದಿಗೆ 44 ಶಾಸಕರಿದ್ದಾರೆ ಎಂದು ಹೇಳಿಕೊಳ್ಳುತ್ತಿದ್ದರೂ ವಾಸ್ತವದಲ್ಲಿ 35 ಶಾಸಕರಿದ್ದಾರಷ್ಟೇ ಎಂದು ಬಿಜೆಪಿ ಮೂಲಗಳು ಹೇಳುತ್ತಿವೆ. ಇವರಲ್ಲಿ 5 ಪಕ್ಷೇತರರು ಸೇರಿದ್ದಾರೆ. ಹೀಗಾಗಿ, ಮೂರನೇ ಎರಡರಷ್ಟು ಶಾಸಕರ ಬೆಂಬಲ ಶಿಂಧೆಗೆ ಇದೆಯೇ ಎನ್ನುವುದು ಖಚಿತವಾಗುತ್ತಿಲ್ಲ.
ಕಾರಣವೇನು?:ಹಿಂದುತ್ವ ಸಿದ್ಧಾಂತ ಪಾಲನೆಯಲ್ಲಿ ಶಿವಸೇನೆ ಕಾರ್ಯಕರ್ತರು ಬಿಜೆಪಿಗಿಂತ ಒಂದು ಹೆಜ್ಜೆ ಮುಂದೆಯೇ ಇರುತ್ತಾರೆ. ಆದರೆ, ಮಹಾಮೈತ್ರಿ ಸರ್ಕಾರ ರಚನೆ ಬಳಿಕ ಹಿಂದು ಮತಗಳು ತಮ್ಮ ಕೈಜಾರುವ ಆತಂಕ ಶಿವಸೇನೆ ಶಾಸಕರನ್ನು ಕಾಡಿದೆ. ಅಲ್ಲದೆ, ಮಹಾಮೈತ್ರಿ ಸರ್ಕಾರದ ಮೇಲಿನ ಭ್ರಷ್ಟಾಚಾರದ ಆರೋಪ, ಗೃಹ ಸಚಿವ ಜೈಲು ಸೇರಿರುವುದು ಸರ್ಕಾರದ ಇಮೇಜ್​ಗೆ ಭಾರಿ ಹಾನಿ ಮಾಡಿದೆ. ಎನ್​ಡಿಎ ಜತೆ ಕೈಜೋಡಿಸದಿದ್ದಲ್ಲಿ ಮುಂದಿನ ಚುನಾವಣೆಯಲ್ಲಿ ಸೋಲು ಕಟ್ಟಿಟ್ಟ ಬುತ್ತಿ ಎಂಬ ಭಾವನೆಯಿಂದಲೇ ಶಾಸಕರು ಬಂಡೆದ್ದು, ಸರ್ಕಾರದಿಂದ ಹೊರಬರುವ ತೀರ್ಮಾನ ಮಾಡಿದಂತಿದೆ. ಬಿಜೆಪಿ ಜತೆ ಸೇರಿ ಹಿಂದುತ್ವದ ಹೆಸರಲ್ಲೇ ಚುನಾವಣೆಗೆ ಸಿದ್ಧಗೊಳ್ಳುವ ತಂತ್ರವೂ ಇದರ ಹಿಂದಿದೆ.
ಗುವಾಹಟಿಗೆ ಶಿಫ್ಟ್:ಗುಜರಾತ್ ಸೂರತ್​ನ ಹೊಟೇಲ್​ನಲ್ಲಿದ್ದ ಶಾಸಕರನ್ನೆಲ್ಲ ಕಟ್ಟಿಕೊಂಡು ಏಕನಾಥ್ ನಿನ್ನೆ ಮಧ್ಯರಾತ್ರಿ ಅಸ್ಸಾಮ್ ಗುವಾಹಟಿಗೆ ತೆರಳಿದ್ದಾರೆ. ಅಲ್ಲಿ ಬಿಜೆಪಿಯ ಹಿಮಾಂತ ಬಿಸ್ವ ಶರ್ಮ ನೇತೃತ್ವದ ಸರ್ಕಾರವಿದ್ದು, ಶಿಂಧೆ ಅವರೊಂದಿಗೆ ಹಿಮಾಂತ ಈಗಾಗಲೇ ಮಾತುಕತೆ ನಡೆಸಿದ್ದಾರೆ. ಗುಜರಾತ್ ಮತ್ತು ಅಸ್ಸಾಮ್ಲ್ಲಿ ಬಿಜೆಪಿ ಸರ್ಕಾರವಿರುವುದರಿಂದ ಬಂಡಾಯ ಶಾಸಕರ ಮನವೊಲಿಸಲು ಉದ್ಧವ್​ಗೆ ಸಾಧ್ಯವಾಗಿಲ್ಲ.
ಬಿಜೆಪಿಯದ್ದೇ ಅಂತಿಮ ನಗೆ?:2019ರ ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ವರಿಷ್ಠ ನಾಯಕರನ್ನು ಎದುರು ಹಾಕಿಕೊಂಡಿದ್ದ ಉದ್ಧವ್ ಠಾಕ್ರೆ ಅಂತಿಮವಾಗಿ, ಹೈಕಮಾಂಡ್ ನಾಯಕರ ಬೆವರಿಳಿಸಿ ಚುನಾವಣಾಪೂರ್ವ ಮೈತ್ರಿಗೆ ಮುಂದಾಗಿದ್ದರು. ಜನಮತ ಬಿಜೆಪಿ-ಶಿವಸೇನೆ ಮೈತ್ರಿ ಪರವಾಗಿ ಬಂದರೂ ಸಿಎಂ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಉದ್ಧವ್, ಎನ್​ಸಿಪಿ-ಕಾಂಗ್ರೆಸ್ ಜತೆ ಮೈತ್ರಿ ಸರ್ಕಾರ ರಚನೆಗೆ ಮುಂದಾದರು. ಶಿವಸೇನೆಯ ಈ ನಡೆ ಬಿಜೆಪಿ ನಾಯಕರನ್ನು ಕೆರಳಿಸಿತ್ತು. ಶಿವಸೇನೆಯ ಇತರೆ ನಾಯಕರಿಗೆ ಈ ಮೈತ್ರಿ ಬಗ್ಗೆ ಸಮಾಧಾನವಿರಲಿಲ್ಲ. ಎನ್​ಡಿಎ ಜತೆ ಮರುಮೈತ್ರಿಗೆ ಶಾಸಕರು ಒತ್ತಾಯಿಸುತ್ತಿದ್ದರು. ಆದರೆ, ಸಿಎಂ ಸ್ಥಾನದಲ್ಲಿದ್ದ ಉದ್ಧವ್​ಗೆ ಇದು ಬೇಕಿರಲಿಲ್ಲ.
ಸರ್ಕಾರದಲ್ಲೂ ಪುತ್ರ ಆದಿತ್ಯ ಠಾಕ್ರೆ, ಆಪ್ತ ಸಂಜಯ್ ರಾವತ್​ಗೆ ಮಹತ್ವ ನೀಡುತ್ತಿದ್ದುದರಿಂದ ಸಹಜವಾಗಿಯೇ ಅನೇಕ ನಾಯಕರು, ಶಾಸಕರು ಠಾಕ್ರೆ ವಿರುದ್ಧ ಸಿಟ್ಟಾಗಿದ್ದರು. ರಾಜ್ಯಸಭೆ, ಪರಿಷತ್ ಚುನಾವಣೆ ಸಂದರ್ಭದಲ್ಲೂ ಬಿಜೆಪಿಗೆ ಪರೋಕ್ಷವಾಗಿ ನೆರವಾಗಿದ್ದರು. ಒಟ್ಟಿನಲ್ಲಿ ಕಳೆದ 3 ವರ್ಷಗಳಿಂದ ಪರೋಕ್ಷವಾಗಿ ಪಿಎಂ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಷಾರನ್ನು ಗುರಿಯಾಗಿಸಿ ಹೇಳಿಕೆ ನೀಡುತ್ತಿದ್ದ ಉದ್ಧವ್ ಠಾಕ್ರೆ, ಈಗ ತಮ್ಮ ಪಕ್ಷದಲ್ಲೇ ಮೂಲೆ ಗುಂಪಾಗುವ ಅಪಾಯಕ್ಕೆ ಸಿಲುಕಿದ್ದಾರೆ. ಶಿವಸೇನೆ ಶಾಸಕರನ್ನು ತಮ್ಮತ್ತ ಸೆಳೆಯುವಲ್ಲಿ ಬಿಜೆಪಿ ನಾಯಕರು ಯಶಸ್ವಿಯಾಗಿದ್ದಾರೆ. ಹಠಮಾರಿ ಧೋರಣೆಯಿಂದಾಗಿ ಉದ್ಧವ್ ಸಿಎಂ ಸ್ಥಾನ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಿದ್ದು, ಪುತ್ರ ಆದಿತ್ಯ ಠಾಕ್ರೆ ರಾಜಕೀಯ ಭವಿಷ್ಯಕ್ಕೂ ಅಂಧಕಾರ ಕವಿದಿದೆ. ‘ಅಪ್ಪ ಕಟ್ಟಿ ಬೆಳೆಸಿದ ಪಕ್ಷದಲ್ಲಿ ಈಗ ಮಗನೇ ಕಡೆಗಣನೆಗೆ ಒಳಗಾಗಿದ್ದು, ಈ ಸನ್ನಿವೇಶಕ್ಕೆ ತಾನೇ ಕಾರಣ ಎನ್ನುವುದು ಬಹುಶಃ ಉದ್ಧವ್​ಗೆ ಈಗ ಅರ್ಥವಾಗಿರಬಹುದು. 2 ವರ್ಷದ ಬಳಿಕ ಅಂತಿಮ ನಗೆ ಬಿಜೆಪಿಯದ್ದೇ ಆಗುತ್ತಿದೆ’ ಎನ್ನುವುದು ಬಿಜೆಪಿ ಸಂಸದರೊಬ್ಬರ ಅನಿಸಿಕೆ.
ರಾಜೀನಾಮೆ ನೀಡಲು ಸಿದ್ಧ ಉದ್ಧವ್ ಠಾಕ್ರೆ ಘೋಷಣೆ:ಸಿಎಂ ಸ್ಥಾನಕ್ಕೆ ನಾನು ರಾಜೀನಾಮೆ ನೀಡಲು ಸಿದ್ಧ. ಅಧಿಕಾರ ಬರುತ್ತದೆ, ಹೋಗುತ್ತದೆ. ಆದರೆ, ಮುಂದಿನ ಮುಖ್ಯಮಂತ್ರಿ ‘ಶಿವಸೈನಿಕ’ನೇ ಆಗಿರುತ್ತಾನೆ ಎಂಬ ಭರವಸೆ ನೀಡಬಹುದೇ ಎಂದು ಸಿಎಂ ಉದ್ಧವ್ ಠಾಕ್ರೆ ಬಂಡಾಯ ಶಾಸಕರನ್ನು ಪ್ರಶ್ನಿಸಿದ್ದಾರೆ. ನನ್ನ ಬಳಿ ಬಂದು ನೇರವಾಗಿ ರಾಜೀನಾಮೆ ಕೊಡಿ ಎಂದ ಕ್ಷಣವೇ ರಾಜೀನಾಮೆ ಸಲ್ಲಿಸುವೆ. ರಾಜೀನಾಮೆ ಪತ್ರವೂ ಸಿದ್ಧವಿದೆ. ನೀವೇ ಅದನ್ನು ರಾಜ್ಯಪಾಲರಿಗೆ ನೀಡಬಹುದು ಎಂದು ಠಾಕ್ರೆ ಬಂಡಾಯ ಶಾಸಕರ ವಿರುದ್ಧ ಅತೃಪ್ತಿ ಹೊರಹಾಕಿದ್ದಾರೆ. ಶಿವಸೇನೆ ಮತ್ತು ಹಿಂದುತ್ವ ಒಂದು ನಾಣ್ಯದ 2 ಮುಖಗಳು. ಬಾಳಾಸಾಹೇಬರ ವಿಚಾರಧಾರೆಗಳನ್ನೇ ನಾವು ಎತ್ತಿ ಹಿಡಿದ್ದೇವೆ. ಕೆಲದಿನಗಳ ಹಿಂದಷ್ಟೇ ಆದಿತ್ಯ ಠಾಕ್ರೆ, ಏಕನಾಥ ಶಿಂಧೆ ಅಯೋಧ್ಯೆಗೆ ಭೇಟಿ ನೀಡಿದ್ದರು. ಇದು ಠಾಕ್ರೆಯವರ ಶಿವಸೇನೆಯಲ್ಲ ಎಂದು ಕೆಲವರು ಆರೋಪಿಸಿದ್ದಾರೆ. ಹಿಂದುತ್ವಕ್ಕಾಗಿ ನಮ್ಮ ಶಿವಸೇನೆ ಸಾಕಷ್ಟು ಕೆಲಸ ಮಾಡಿದೆ ಎಂದು ಹೆಮ್ಮೆಯಿಂದ ಹೇಳುತ್ತೇನೆ ಎಂದು ಸಮರ್ಥಿಸಿಕೊಂಡಿದ್ದಾರೆ.
ಎನ್​ಸಿಪಿ ಮತ್ತು ಕಾಂಗ್ರೆಸ್ ಜತೆ ನಮ್ಮದು ಅಸಹಜ ಮೈತ್ರಿಯಾಗಿದ್ದು, ಈ ಮೈತ್ರಿಯಿಂದ ಹೊರಬರು ವುದು ಅನಿವಾರ್ಯವಾಗಿತ್ತು. ಶಿವ ಸೈನಿಕರು ಮತ್ತು ಶಿವಸೇನೆಗೆ ಒಳಿತಾಗಲು ಈ ಮಾರ್ಗ ತುಳಿಯಲೇಬೇಕಿತ್ತು. ರಾಜ್ಯದ ಹಿತಾಸಕ್ತಿ ಕಾಪಾಡಲು ಇದು ಅನಿವಾರ್ಯ. ಈ ಮೈತ್ರಿಯಲ್ಲಿ ಎನ್​ಸಿಪಿ ಮತ್ತು ಕಾಂಗ್ರೆಸ್ ಪಕ್ಷ ಬಲಿಷ್ಠವಾಗುತ್ತಿವೆ. ಶಿವಸೇನೆ ಶಾಸಕರು, ಮುಖಂಡರು ಸಾಕಷ್ಟು ಕಡೆಗಣನೆಗೆ ಒಳಗಾಗಿದ್ದಾರೆ.
|ಏಕನಾಥ್ ಶಿಂಧೆಶಿವಸೇನೆ ಬಂಡಾಯ ನಾಯಕ
ಸದ್ಯ ಶಿವಸೇನೆ 55 ಶಾಸಕರನ್ನು ಹೊಂದಿದ್ದು, ಠಾಕ್ರೆ ವಿರುದ್ಧ ಬಂಡೆದ್ದ ಶಾಸಕರ ಸಂಖ್ಯೆ 37 ದಾಟಿದರೆ ಮಾತ್ರ ಪಕ್ಷದ ಮೇಲಿನ ನಿಯಂತ್ರಣ ಬಂಡಾಯ ಗುಂಪಿನ ಪಾಲಾಗುತ್ತದೆ. ಪಕ್ಷಾಂತರ ವಿರೋಧಿ ಕಾಯ್ದೆಯೂ ಇದನ್ನೇ ಹೇಳಿರುವುದರಿಂದ ಏಕನಾಥ್ ಶಿಂಧೆ ಶಿವಸೇನೆಯ ಹೊಸ ನಾಯಕನಾಗಬಹುದು. ಚುನಾವಣಾ ಆಯೋಗ ಕೂಡ ಈ ಪ್ರಸ್ತಾವವನ್ನು ಒಪ್ಪಿಕೊಳ್ಳಬೇಕಾಗುತ್ತದೆ. 287 ಸದಸ್ಯ ಬಲದ ವಿಧಾನಸಭೆಯಲ್ಲಿ ಸರ್ಕಾರ ರಚನೆಗೆ 143 ಶಾಸಕರ ಬೆಂಬಲ ಬೇಕು. ಬಿಜೆಪಿ ಬಳಿ 106 ಶಾಸಕರಿದ್ದು, ಬಂಡಾಯ ಗುಂಪಿನ 44 ಶಾಸಕರ ಬೆಂಬಲದೊಂದಿಗೆ ಸುಲಭವಾಗಿ ಸರ್ಕಾರ ರಚಿಸಬಹುದು ಎಂದು ಕಾನೂನು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ತನ್ನೊಂದಿಗಿರುವ ಶಾಸಕರ ಸಂಖ್ಯೆಯೆಷ್ಟು ಎಂಬುದನ್ನು ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿಗೆ ಮನವರಿಕೆ ಮಾಡಿಕೊಡಲು ಶಿಂಧೆ ಸಮಯ ಕೇಳಿದ್ದಾರೆ. ಆದರೆ, ರಾಜ್ಯಪಾಲರಿಗೆ ಕೋವಿಡ್ ಸೋಂಕು ಹಿನ್ನೆಲೆಯಲ್ಲಿ ವಿಡಿಯೋ ಕಾನ್ಪರೆನ್ಸ್ ಸಭೆಗೆ ಅನುಮತಿ ಕೇಳಿದ್ದಾರೆ. ಬಂಡಾಯ ಶಾಸಕರಿಂದ ರಾಜ್ಯಪಾಲರಿಗೆ ಸಲ್ಲಿಕೆಯಾಗುವ ವರದಿ ರಾಜಕೀಯ ಬೆಳವಣಿಗೆಗಳ ಖಚಿತ ಚಿತ್ರಣ ನೀಡಬಹುದು.
ವಿಶ್ವಪರ್ಯಟನೆಯಲ್ಲಿ ಗಗನಸುಖಿ: ನಮಸ್ಕಾರ ದೇವರು.. ಇದು ಡಾಕ್ಟರ್ ಬ್ರೋ..!

ದೀರ್ಘ ಕಾಲ ಗೈರಾಗಿದ್ದ ತಂದೆ ಕೆಲಸದಿಂದ ವಜಾ, ‘ಅಪ್ಪನಿಗೆ ಕೆಲ್ಸ ಕೊಡಿ’ ಎಂಬ ಪುತ್ರಿಯ ಕೋರಿಕೆಗೆ ಮರುಗಿ ಉದ್ಯೋಗ ಕೊಟ್ಟ ಅಧಿಕಾರಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 − 10 =
Remember me
