ಪಶ್ಚಿಮ ಬಂಗಾಳದ ರಾಜಕಾರಣದಲ್ಲಿ ಹಿಂಸಾಚಾರ ಹೊಸತೇನಲ್ಲ. ಮೂರು ದಶಕಗಳ ಕಾಲ ಆಡಳಿತದಲ್ಲಿದ್ದ ಸಿಪಿಎಂ ಸರ್ಕಾರದ ಅವಧಿಯಲ್ಲೂ, ಆ ಬಳಿಕ ಅಧಿಕಾರಕ್ಕೇರಿದ ತೃಣಮೂಲ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲೂ ರಾಜಕೀಯ ಹಿಂಸಾಚಾರ ಮುಂದುವರಿದೇ ಇದೆ. ವ್ಯತ್ಯಾಸ ಇಷ್ಟೇ-ಮೊದಲು ಸಿಪಿಎಂ ಮತ್ತು ಟಿಎಂಸಿ ಕಾರ್ಯಕರ್ತರ ನಡುವೆ ಘರ್ಷಣೆ ನಡೆಯುತ್ತಿತ್ತು. ಕೆಲ ವರ್ಷಗಳಿಂದ ಅದು ಟಿಎಂಸಿ-ಬಿಜೆಪಿ ಸಂಘರ್ಷವಾಗಿ ಮಾರ್ಪಟ್ಟಿದೆ. ಈ ಬಾರಿಯ ವಿಧಾನಸಭೆ ಚುನಾವಣೆಯಂತೂ ಭಾರಿ ಕುತೂಹಲ ಮೂಡಿಸಿತ್ತು. ಆದರೆ, ದುರದೃಷ್ಟದ ಸಂಗತಿ ಎಂದರೆ ಮೇ 2ರಂದು ಫಲಿತಾಂಶ ಘೋಷಣೆಯಾದ ಬಳಿಕ ರಾಜಕೀಯ ಹಿಂಸಾಚಾರ ಕಡಿಮೆಯಾಗುವ ಬದಲು, ಮತ್ತಷ್ಟು ಭುಗಿಲೆದ್ದಿತು. ಈ ಕಿಚ್ಚಿನಲ್ಲಿ ಅಮಾಯಕರು ಪ್ರಾಣ ಕಳೆದುಕೊಂಡರೆ, ಸಾವಿರಾರು ಜನರು ಮನೆಗಳನ್ನು ಕಳೆದುಕೊಂಡು ನಿರ್ಗತಿಕರಾದರು. ಫಲಿತಾಂಶದ ಬಳಿಕ ಹಿಂಸಾಚಾರ ನಡೆದೇ ಇಲ್ಲ ಎಂದು ಆರಂಭದಲ್ಲಿ ಟಿಎಂಸಿ ಸರ್ಕಾರ ವಾದಿಸಿಕೊಂಡು ಬಂತು. ಆದರೆ, ರಾಷ್ಟ್ರೀಯ ಮಾನವ ಹಕ್ಕು ಆಯೋಗ ಮೇ 4ರಂದು ಸಮಿತಿ ರಚಿಸಿ, ಘಟನಾ ಸ್ಥಳಗಳಿಗೆ ಹಿರಿಯ ಅಧಿಕಾರಿಗಳನ್ನು ಕಳಿಸಿತು. ಇದರ ವರದಿಯನ್ನೇ ತನ್ನ ತೀರ್ಪಿನಲ್ಲಿ ಉಲ್ಲೇಖಿಸಿದ ಕಲ್ಕತ್ತ ಹೈಕೋರ್ಟ್ ಹಿಂಸಾಚಾರ ಪ್ರಕರಣ ಸಂಬಂಧ ತನಿಖೆಯನ್ನು ಸಿಬಿಐಗೆ ವಹಿಸಿತು.
ಯಾವುದೇ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕಾದರೆ, ಅದಕ್ಕೆ ರಾಜ್ಯ ಸರ್ಕಾರದ ಅನುಮತಿ ಅಗತ್ಯ. ಆದರೆ, ಈ ಪ್ರಕರಣದಲ್ಲಿ ಹಾಗೆ ಮಾಡಲಾಗಿಲ್ಲ. ಅಲ್ಲದೆ, ಹಿಂಸಾಚಾರ ಘಟನೆ ಸಂಬಂಧ ವಿಶೇಷ ತನಿಖಾ ತಂಡ (ಎಸ್​ಐಟಿ) ಈಗಾಗಲೇ ತನಿಖೆ ನಡೆಸುತ್ತಿದೆ. ಹೀಗಿರುವಾಗ ಸಿಬಿಐ ತನಿಖೆಯ ಅಗತ್ಯವೇನು ಎಂದು ವಾದಿಸಿದೆ. ಹೈಕೋರ್ಟ್ ಆದೇಶ ಪ್ರಶ್ನಿಸಿ ಸೆ.1ರಂದು ಸುಪ್ರೀಂ ಕೋರ್ಟ್​ಗೆ ಅರ್ಜಿ ಸಲ್ಲಿಸಿದೆ. ಆದರೆ, ಸುಪ್ರೀಂ ಕೋರ್ಟ್ ಇನ್ನೂ ಅರ್ಜಿಯ ವಿಚಾರಣೆ ಕೈಗೆತ್ತಿಕೊಂಡಿಲ್ಲ. ಈ ಮಧ್ಯೆ, ಎಸ್​ಐಟಿ ತನಿಖೆಗೆ ಸಹಕರಿಸಲು ಪ.ಬಂಗಾಳ ಸರ್ಕಾರ ಗುರುವಾರ ಹತ್ತು ಹಿರಿಯ ಐಪಿಎಸ್ ಅಧಿಕಾರಿಗಳನ್ನು ನಿಯೋಜಿಸಿ, ಆದೇಶ ಹೊರಡಿಸಿದೆ.
ಮೇ 2ರಂದು ಫಲಿತಾಂಶ ಘೋಷಣೆಯಾಗಿ, ತೃಣಮೂಲ ಕಾಂಗ್ರೆಸ್ ಭಾರಿ ಬಹುಮತವನ್ನು ಪಡೆದುಕೊಂಡಿತು. ಮೇ 3ರಿಂದಲೇ ರಾಜ್ಯದ ಹಲವು ಜಿಲ್ಲೆಗಳಲ್ಲಿ ಆರಂಭವಾದ ಹಿಂಸಾಚಾರ ಮೇ 5ರವರೆಗೂ ಮುಂದುವರಿಯಿತು. ವರ್ಧಮಾನ್, ಹೂಗ್ಲಿ, ಉತ್ತರ 24 ಪರಗಣ, ದಕ್ಷಿಣ 24 ಪರಗಣ, ಪೂರ್ವ-ಪಶ್ಚಿಮ ಮೇದಿನಿಪುರ-ಈ ಐದು ಜಿಲ್ಲೆಗಳಲ್ಲಿ ಭಾರಿ ಪ್ರಮಾಣದ ಹಾನಿ ಸಂಭವಿಸಿತು. ರಾಜ್ಯ ಸರ್ಕಾರದ ವರದಿಯಂತೆ ಹಿಂಸಾಚಾರದಲ್ಲಿ ಪ್ರಾಣ ಕಳೆದುಕೊಂಡವರ ಸಂಖ್ಯೆ 17. ಆದರೆ, ಈ ಸಂಖ್ಯೆ 50ನ್ನು ದಾಟಿದೆ ಎಂಬುದು ಬಿಜೆಪಿ ವಾದ. ತೃಣಮೂಲ ಕಾಂಗ್ರೆಸ್ ಗೆದ್ದ ಕ್ಷೇತ್ರಗಳಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ, ಬಿಜೆಪಿ ಗೆದ್ದ ಕೆಲ ಕಡೆ ಟಿಎಂಸಿ ಕಾರ್ಯಕರ್ತರ ಮೇಲೆ ಮಾರಣಾಂತಿಕ ಹಲ್ಲೆ ಘಟನೆಗಳು ನಡೆದವು. ಮನೆಗಳು, ಅಂಗಡಿ-ಮುಂಗಟ್ಟುಗಳು ಬೆಂಕಿಗೆ ಆಹುತಿಯಾದವು. ಪ್ರಧಾನಿ ನರೇಂದ್ರ ಮೋದಿ ರಾಜ್ಯಪಾಲರಿಗೆ ಫೋನ್ ಮಾಡಿ, ಘಟನೆ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು.
ತನಿಖೆ ಆರಂಭಿಸಿರುವ ಸಿಬಿಐ ತಂಡ ಹಿಂಸಾಚಾರ ಸಂಭವಿಸಿದ ಐದು ಜಿಲ್ಲೆಗಳಿಗೂ ಭೇಟಿ ನೀಡಿದೆ. ಹಲ್ಲೆಗೊಳಗಾದವರ ವಿಚಾರಣೆ ನಡೆಸಿ, ಘಟನೆಯ ಮಾಹಿತಿ ಕಲೆ ಹಾಕುತ್ತಿದೆ. ಫೋಟೋ, ವಿಡಿಯೋ ದಾಖಲೆಗಳನ್ನು ಸಂಗ್ರಹಿಸುತ್ತಿದೆ. ಮೃತ ಕಾರ್ಯಕರ್ತರ ಕುಟುಂಬವರ್ಗಕ್ಕೆ ಭೇಟಿಯಾಗಿ, ವಾಸ್ತವಾಂಶ ಅರಿಯುತ್ತಿದೆ. ಸಿಬಿಐ ಗುರುವಾರ ನದಿಯಾದಲ್ಲಿ ಒಂದು ಮತ್ತು ಉತ್ತರ 24 ಪರಗಣ ಜಿಲ್ಲೆಯಲ್ಲಿ ಎರಡು ಎಫ್​ಐಆರ್​ಗಳನ್ನು ದಾಖಲಿಸಿದೆ. ಈವರೆಗೆ ಒಟ್ಟು 34 ಎಫ್​ಐಆರ್​ಗಳನ್ನು ದಾಖಲಿಸಲಾಗಿದೆ. ನಿವೃತ್ತ ನ್ಯಾಯಾಧೀಶರು ಮತ್ತು ನಿವೃತ್ತ ಹಿರಿಯ ಅಧಿಕಾರಿಗಳು ಕೂಡ ಬಂಗಾಳ ಹಿಂಸಾಚಾರದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು. ಮೂರು ತಿಂಗಳ ಹಿಂದೆ 17 ನಿವೃತ್ತ ನ್ಯಾಯಾಧೀಶರು, 63 ನಿವೃತ್ತ ಹಿರಿಯ ಅಧಿಕಾರಿಗಳು ಸೇರಿ 146 ಜನರ ತಂಡವು ರಾಷ್ಟ್ರಪತಿ ರಾಮನಾಥ ಕೋವಿಂದ ಅವರಿಗೆ ಪತ್ರ ಬರೆದು, ಘಟನೆ ಬಗ್ಗೆ ಎಸ್​ಐಟಿಯಿಂದ ತನಿಖೆ ನಡೆಸುವಂತೆ, ಬಂಗಾಳದ ಸಾಂಸ್ಕೃತಿಕ, ರಾಜನೀತಿಯ ಮೌಲ್ಯಗಳನ್ನು ಕಾಪಾಡುವಂತೆ ಆಗ್ರಹಿಸಿದ್ದರು.
ತನಿಖೆಗೆ ನಿಯೋಜಿಸಿರುವ ಸಿಬಿಐ ತಂಡದಲ್ಲಿ 108 ಅಧಿಕಾರಿಗಳಿದ್ದಾರೆ. ರಕ್ಷಣೆಗಾಗಿ ಈ ಅಧಿಕಾರಿಗಳ ಪ್ರತಿ ವಾಹನದಲ್ಲಿ ಸಿಆರ್​ಪಿಎಫ್​ನ ತಲಾ ಇಬ್ಬರು ಸಿಬ್ಬಂದಿ ಇದ್ದಾರೆ. ತನಿಖೆ ಆರಂಭವಾಗಿ ಇಂದಿಗೆ (ಶುಕ್ರವಾರ) 4 ದಿನ ಗಳಾಗಿದ್ದು, 42 ದಿನಗಳ ಒಳಗೆ ಹೈಕೋರ್ಟ್​ಗೆ ವರದಿ ಸಲ್ಲಿಸಬೇಕಿದೆ. ಸಿಬಿಐ ತಂಡವೂ ರಾಜಕೀಯ ಪ್ರತಿರೋಧ ಎದುರಿಸುತ್ತಿದೆ. ನಾದಿಯಾ ಜಿಲ್ಲೆಯ ಛಪರಾಗೆ ಸಿಬಿಐ ತಂಡ ತನಿಖೆಗೆಂದು ತಲುಪಿದಾಗ, ಅಧಿಕಾರಿಗಳ ವಾಹನವನ್ನೇ ಪಂಕ್ಚರ್ ಮಾಡಿ, ಟಿಎಂಸಿ ಕಾರ್ಯಕರ್ತರ ಗುಂಪು ಅವರಿಗೆ ಮುತ್ತಿಗೆ ಹಾಕಿ, ವಿರೋಧಿ ಘೋಷಣೆಗಳನ್ನು ಕೂಗಿತು. ಈ ಸಂಬಂಧ ಎರಡು ಎಫ್​ಐಆರ್ ದಾಖಲಾಗಿದೆ.
ಫಲಿತಾಂಶ ಘೋಷಣೆ ಬಳಿಕ ಬಂಗಾಳ ದಲ್ಲಿ ನಡೆದ ಘಟನೆಗಳಿಂದ ನಾಗರಿಕ ಸಮಾಜ ತಲೆ ತಗ್ಗಿಸುವಂತಾಯಿತು. ತೃಣಮೂಲ ಕಾಂಗ್ರೆಸಿನ ಪೈಶಾಚಿಕ ವರ್ತನೆ ಯಿಂದ ಜನರು ಭಯಭೀತರಾಗಿದ್ದಾರೆ. ಈಗ ತನಿಖೆ ಸಿಬಿಐ ಹೆಗಲಿಗೆ ಏರಿರುವುದರಿಂದ, ಸತ್ಯ ಬಯಲಾಗಿ, ಮುಖವಾಡ ಕಳಚಲಿದೆ ಎಂಬ ಆತಂಕ ಸಿಎಂ ಮಮತಾ ಬ್ಯಾನರ್ಜಿಗೆ ಕಾಡುತ್ತಿದೆ. ಆದ್ದರಿಂದಲೇ, ಅವರು ತನಿಖೆಗೆ ವಿರೋಧಿಸುತ್ತಿದ್ದಾರೆ. ಆದರೆ, ಸತ್ಯವನ್ನು ಅದುಮುವ ಅವರ ಪ್ರಯತ್ನ ಈ ಬಾರಿ ಸಫಲವಾಗು ವುದಿಲ್ಲ ಎಂದು ಬಿಜೆಪಿ ಪ್ರತಿಕ್ರಿಯಿಸಿದೆ.
ರಾಷ್ಟ್ರೀಯ ಮಾನವ ಹಕ್ಕು ಆಯೋಗ ಜುಲೈ ಅಂತ್ಯದಲ್ಲಿ ಕಲ್ಕತ್ತ ಹೈಕೋರ್ಟ್​ಗೆ ತನ್ನ ವರದಿ ಸಲ್ಲಿಸಿತು. ಮೇ 2ರಿಂದ ಜೂನ್ 20ರವರೆಗೆ ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ 1934 ಪ್ರಕರಣಗಳು ದಾಖಲಾಗಿವೆ. ಈ ಪೈಕಿ 29 ಹತ್ಯೆ ಪ್ರಕರಣ, ಅತ್ಯಾಚಾರದ 12, ಲೂಟಿ ಮತ್ತು ಅಗ್ನಿಸ್ಪರ್ಶದ 940 ಪ್ರಕರಣಗಳಿವೆ ಎಂದು ವರದಿಯಲ್ಲಿ ತಿಳಿಸಿತು.
ಈಗ ರಾಜಕೀಯ ಪಕ್ಷಗಳ ಚಿತ್ತ ಸುಪ್ರೀಂ ಕೋರ್ಟ್ ನತ್ತ ನೆಟ್ಟಿದೆ. ಒಂದು ವೇಳೆ, ಹೈಕೋರ್ಟ್ ತೀರ್ಪನ್ನು ಸುಪ್ರೀಂ ಎತ್ತಿ ಹಿಡಿದರೆ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಸರ್ಕಾರ ಮುಖಭಂಗ ಅನುಭವಿಸಬೇಕಾಗುತ್ತದೆ. ಸಿಬಿಐ ತನಿಖೆ ರದ್ದು ಮಾಡಿದರೆ, ಬಿಜೆಪಿ ಎಸ್​ಐಟಿ ತನಿಖೆಯನ್ನು ಸಮರ್ಥಿಸಿಕೊಳ್ಳಬೇಕಾಗುತ್ತದೆ.




ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:19 + six =
Remember me
