ಭೋಪಾಲ್ : ಗಂಭೀರ ಸ್ಥಿತಿಯಲ್ಲಿ ಟ್ರಾಮಾ ವಾರ್ಡ್​ ಸೇರಿದ್ದ ಕರೊನಾ ರೋಗಿ ಸಾವಪ್ಪಿದ್ದಕ್ಕೆ ಕಾಂಗ್ರೆಸ್ ನಾಯಕರು ತಮ್ಮ ಮೇಲೆ ಕೂಗಾಡಿದ ಹಿನ್ನೆಲೆಯಲ್ಲಿ ಮಧ್ಯಪ್ರದೇಶದ ಸರ್ಕಾರಿ ವೈದ್ಯರೊಬ್ಬರು ರಾಜೀನಾಮೆ ನೀಡಿದ್ದಾರೆ. ಈ ಘಟನಾವಳಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್ ಅವರು, ಕರೊನಾ ವಿರುದ್ಧ ಹೋರಾಡುತ್ತಿರುವ ಈ ಸಂದರ್ಭದಲ್ಲಿ ವೈದ್ಯರ ಮನೋಬಲವನ್ನು ಕುಗ್ಗಿಸುವ ಬದಲು ಹೆಚ್ಚಿಸಬೇಕು ಎಂದು ಆಗ್ರಹಿಸಿದ್ದಾರೆ.
ಭೋಪಾಲ್​ನ ಕರೊನಾ ರೋಗಿಯೊಬ್ಬರು ಗಂಭೀರ ಸ್ಥಿತಿಯಲ್ಲಿ ಶನಿವಾರ ಅಲ್ಲಿನ ಜೆಪಿ ಸರ್ಕಾರಿ ಆಸ್ಪತ್ರೆಯ ಟ್ರಾಮಾ ವಾರ್ಡ್ ತಲುಪಿದ್ದರು. ಚಿಕಿತ್ಸೆಯ ವೇಳೆ ಸಾವನ್ನಪ್ಪಿದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಆಸ್ಪತ್ರೆಯ ಕೋವಿಡ್ ವಾರ್ಡ್​ನ ಇನ್​ಚಾರ್ಜ್​ ಆಗಿದ್ದ ನೋಡಲ್ ಆಫೀಸರ್ ಡಾ. ಯೋಗೇಂದ್ರ ಶ್ರೀವಾಸ್ತವ್ ಮತ್ತು ಸಿಬ್ಬಂದಿಯ ಮೇಲೆ ಕಾಂಗ್ರೆಸ್ ಶಾಸಕ ಪಿ.ಸಿ.ಶರ್ಮಾ, ಕಾರ್ಪೋರೇಟರ್ ಗುಡ್ಡು ಶರ್ಮಾ ಮತ್ತು ಇತರರು ಕೂಗಾಡಿದ್ದಾರೆ ಎನ್ನಲಾಗಿದೆ. ಈ ಪ್ರಸಂಗದ ವಿಡಿಯೋವನ್ನು ಅಲ್ಲಿ ಡ್ಯೂಟಿಯಲ್ಲಿದ್ದ ಡಾ.ರಿತಿಕಾ ಪಾಂಡೆ ಎಂಬುವರು ಟ್ವಿಟರ್​ನಲ್ಲಿ ಶೇರ್​ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
https://twitter.com/DrRitikaPandey/status/1380910880070660099?s=20

“ಇದು ಅವರು ನಮ್ಮನ್ನು ನಡೆಸಿಕೊಳ್ಳುವ ರೀತಿ. ಕಳೆದ ಒಂದು ವರ್ಷದಿಂದ ಅಹೋರಾತ್ರಿ ಕೋವಿಡ್ ರೋಗಿಗಳ ಸೇವೆಯಲ್ಲಿ ನಿರತರಾಗಿದ್ದ ಡಾ. ಯೋಗೇಂದ್ರ ಶ್ರೀವಾಸ್ತವ್​ ಸರ್​​ ಅವರ ಮೇಲೆ ಕೂಗಾಡುತ್ತಿದ್ದಾರೆ. ಅವರು ಕೋವಿಡ್​​ನ ನೋಡಲ್ ಇನ್​ಚಾರ್ಜ್ ಆಗಿದ್ದಾರೆ. ಇಂದು ಅವರು ಕರ್ತವ್ಯದಿಂದ ರಾಜೀನಾಮೆ ನೀಡಿದ್ದಾರೆ” ಎಂದು ಡಾ. ಪಾಂಡೆ ಬರೆದಿದ್ದಾರೆ. “ರೋಗಿಯು 12.30 ಕ್ಕೆ ಶೇ.33 ರಷ್ಟು ಎಸ್​ಪಿಒ2 ದೊಂದಿಗೆ ನಮ್ಮ ಬಳಿಗೆ ಬಂದರು. ಅವರಿಗೆ ಕೂಡಲೇ ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು ಮತ್ತು ಅವರ ಪರಿಸ್ಥಿತಿಯ ಬಗ್ಗೆ ಸಂಬಂಧಿಕರಿಗೆ ತಿಳಿಸಲಾಯಿತು. ನಮ್ಮ ಐಸಿಯು ಫುಲ್ ಆಗಿದ್ದು, ಇಲ್ಲಿ ಅಡ್ಮಿಟ್ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದೆವು. ಇದೆಲ್ಲಾ ಒಂದು ಗಂಟೆಯ ಅವಧಿಯಲ್ಲಿ ನಡೆಯಿತು” ಎಂದು ಮತ್ತೊಂದು ಟ್ವೀಟ್​ನಲ್ಲಿ ವಿವರಿಸಿದ್ದಾರೆ.
ಇದನ್ನೂ ಓದಿ:ಆಂಬುಲೆನ್ಸ್‌ನಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ ತಾಯಿ: ಸಹಜ ಹೆರಿಗೆ ಮಾಡಿಸಿದ ಶುಶ್ರೂಷಕ, ಆಶಾ ಕಾರ್ಯಕರ್ತೆ
ಮಾಜಿ ಸಚಿವರೂ ಆದ ಪಿ.ಸಿ.ಶರ್ಮಾ ಅವರು ತಾವು ವೈದ್ಯರೊಂದಿಗೆ ಒರಟಾಗಿ ಮಾತನಾಡಿಲ್ಲ. ರೋಗಿಯು ತಮ್ಮ ಕ್ಷೇತ್ರದ ಸದಸ್ಯರಾಗಿದ್ದರಿಂದ ವಿಚಾರಿಸಲು ಹೋಗಿದ್ದಾಗಿ ಹೇಳಿದ್ದಾರೆ. “ಬೆಳಿಗ್ಗೆ ಗಂಭೀರ ಅವಸ್ಥೆಯಲ್ಲಿದ್ದ ರೋಗಿಯ ಕುಟುಂಬದವರು ಕರೆ ಮಾಡಿ ಮಾತನಾಡಿಸಲು ಪ್ರಯತ್ನಿಸಿದಾಗ ಆ ವೈದ್ಯರು ನನ್ನೊಡನೆ ಮಾತನಾಡಲಿಲ್ಲ. ಬದಲಿಗೆ ರೋಗಿಯನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲು ಹೇಳಿದರು” ಎಂದು ಶರ್ಮಾ ಹೇಳಿದ್ದಾರೆ. “ನನ್ನ ಬೆಂಬಲಿಗರೊಬ್ಬರು ವೈದ್ಯರೊಂದಿಗೆ ಜೋರಾಗಿ ಮಾತನಾಡಿದರು. ನಂತರ ನಾನು ಅವರ ಕ್ಷಮೆ ಕೋರಿದೆ. ನನ್ನ ಕ್ಷೇತ್ರದ ರೋಗಿಯೊಬ್ಬರು ಇಂದು ಮಧ್ಯಾಹ್ನ ಸತ್ತುಹೋದರು. ಈ ಪರಿಸ್ಥಿತಿಯಲ್ಲಿ ಯಾವುದೇ ಸಂವೇದನೆಯುಳ್ಳ ವ್ಯಕ್ತಿಯು ಕೋಪಗೊಳ್ಳುವುದಿಲ್ಲವಾ ? ಬಡ ರೋಗಿಯೊಬ್ಬರಿಗೆ ಖಾಸಗಿ ಆಸ್ಪತ್ರೆಗೆ ಹೋಗಲು ಹೇಳಲಾಗಿದೆ. ಈ ಬಗ್ಗೆ ಯಾರೂ ಮಾತನಾಡುತ್ತಿಲ್ಲ” ಎಂದಿದ್ದಾರೆ.
ಈ ಘಟನೆಯನ್ನು ತೀವ್ರವಾಗಿ ಖಂಡಿಸಿರುವ ಸಿಎಂ ಚೌಹಾನ್​, ಹಲವು ಟ್ವೀಟ್​ಗಳಲ್ಲಿ, “ನಾವು ನಾಗರೀಕರಾಗಿ ವರ್ತಿಸುವ ಅಗತ್ಯವಿದೆ. ಕರೊನಾ ವಿರುದ್ಧ ಅಹೋರಾತ್ರಿ ದುಡಿಯುತ್ತಿರುವ ಆರೋಗ್ಯ ಕಾರ್ಯಕರ್ತರ ಮನೋಬಲವನ್ನು ಕುಗ್ಗಿಸುವ ರೀತಿ ವರ್ತಿಸಬಾರದು. ಎಲ್ಲರೂ ಒಂದಾಗಿ ನಿಲ್ಲುವಂಥ ಸಮಯದಲ್ಲಿ ಈ ರೀತಿ ಹಂಗಾಮ ಮಾಡುವುದು ಸರಿಯಲ್ಲ” ಎಂದಿದ್ದಾರೆ.(ಏಜೆನ್ಸೀಸ್)
ಶಾಕಿಂಗ್ : ಯುವಕನ ಮರ್ಮಾಂಗವನ್ನು ಕತ್ತರಿಸಿದ ತೃತೀಯಲಿಂಗಿಗಳು
ಕರೊನಾ ಲಸಿಕೆ : ಅತಿ ವೇಗದಲ್ಲಿ 10 ಕೋಟಿ ಡೋಸ್​ ನೀಡಿರುವ ಭಾರತ !


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − 13 =
Remember me
