ಹರೀಶ್ ಬೇಲೂರು ಬೆಂಗಳೂರುದಿನದಿಂದ ದಿನಕ್ಕೆ ಮಾಲಿನ್ಯದ ಪ್ರಮಾಣ ಹೆಚ್ಚಾಗುತ್ತಿದೆ. ಗಾಳಿಯಲ್ಲಿ ವಿಷಾನಿಲಗಳು ಹೆಚ್ಚಾಗುತ್ತಿರುವ ಪರಿಣಾಮ ಶುದ್ಧಗಾಳಿ ಸಿಗದಂತಾಗಿದೆ. ಅದೇರೀತಿ ಜಲಮೂಲಗಳ ನಾಶದಿಂದ ಕುಡಿಯುವ ನೀರು ಮಲಿನವಾಗಿದೆ. ಅತಿ ಹೆಚ್ಚು ರಾಸಾಯನಿಕ ಬಳಕೆಯಿಂದ ಮಣ್ಣು ಕಲುಷಿತವಾಗುತ್ತಿದೆ. ಅಲ್ಲದೆ, ಮನುಷ್ಯನ ಕಣ್ಣಿಗೆ ಹಾನಿ ಉಂಟು ಮಾಡುವ ಬೆಳಕಿನ ಮಾಲಿನ್ಯ, ಕಿವುಡರನ್ನಾಗಿ ಮಾಡುತ್ತಿರುವ ಶಬ್ದ ಮಾಲಿನ್ಯ, ಆರೋಗ್ಯ ಕೆಡಿಸುವ ವಿಕಿರಣ ಮಾಲಿನ್ಯ ಭೂಮಿಯ ಮೇಲೆ ಮನುಷ್ಯನ ಉಳಿವಿಗೆ ಮಾರಕವಾಗುತ್ತಿವೆ.
ಪರಿಹಾರ ಕ್ರಮಗಳಾಗಿ, ಕೇಂದ್ರ ಸರ್ಕಾರ ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿಯನ್ನು ಸ್ಥಾಪಿಸಿದೆ. ಅದೇರೀತಿ, ಆಯಾ ರಾಜ್ಯಗಳಲ್ಲಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗಳಿವೆ. ಆದರೆ, ಕೈಗಾರಿಕೆಗಳು ಮಾಲಿನ್ಯವನ್ನು ನಿಯಂತ್ರಿಸಲು ಸರ್ಕಾರ ಹೊರಡಿಸಿರುವ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಅನುಸರಿಸುತ್ತಿಲ್ಲ. ವರ್ಷದಿಂದ ವರ್ಷಕ್ಕೆ ವಾಹನಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಇದು ವಾಯುಮಾಲಿನ್ಯಕ್ಕೆ ಮುಖ್ಯ ಕಾರಣವಾಗಿದೆ. ಕೀಟನಿಯಂತ್ರಕ ಔಷಧಗಳು, ಬೆಳೆತ್ಯಾಜ್ಯ ಸುಡುವುದು, ರಾಸಾಯನಿಕ ಗೊಬ್ಬರ ಬಳಕೆ, ಕೈಗಾರಿಕೆಗಳು ಹೊರಸೂಸುವ ಅಪಾಯಕಾರಿ ರಾಸಾಯನಿಕಗಳು, ಮಿತಿ ಮೀರಿದ ಪ್ಲಾಸ್ಟಿಕ್ ಬಳಕೆ ಪರಿಸರವನ್ನು ಅಪಾಯಕ್ಕೆ ನೂಕಿವೆ.
ನದಿಗಳಿಗೆ ಕಂಟಕ: ರಾಜ್ಯದ ಜೀವ ನದಿಗಳು, ಉಪ ನದಿಗಳು ಹಾಗೂ ಸಾವಿರಾರು ಕೆರೆಗಳ ನೀರೆಲ್ಲ ಮಲಿನಗೊಂಡಿವೆ. ಚಾಮರಾಜನಗರದಿಂದ ಹಿಡಿದು ಬೀದರ್​ವರೆಗೆ ಹರಿಯುತ್ತಿರುವ ಎಲ್ಲ ನದಿಗಳು ಕಲುಷಿತಗೊಂಡಿವೆ. ಸಾಮಾನ್ಯವಾಗಿ ಕುಡಿಯುವ ನೀರು ‘ಎ’ ಗ್ರೇಡ್​ನಲ್ಲಿ ಇರಬೇಕು. ಆದರೆ, ಬಹುತೇಕ ನದಿಗಳ ನೀರು ‘ಸಿ’ ಗ್ರೇಡ್ ಹಂತಕ್ಕೆ ತಲುಪಿದ್ದು, ಸಂಪೂರ್ಣವಾಗಿ ಮಲಿನವಾಗಿದೆ. ನಾಡಿನ ಜೀವನದಿ ಕಾವೇರಿ ವರ್ಷದಿಂದ ವರ್ಷಕ್ಕೆ ಹೆಚ್ಚು ಕಲುಷಿತಗೊಳ್ಳುತ್ತಿದ್ದು, ಆತಂಕ ಮೂಡಿದೆ. ಕಬಿನಿಯ ಸ್ಥಿತಿಯೂ ಭಿನ್ನವಾಗಿಲ್ಲ. ಕೃಷ್ಣ, ಭೀಮಾ, ತುಂಗಭದ್ರಾ, ಘಟಪ್ರಭಾ, ಮಲಪ್ರಭಾ, ಭದ್ರಾ ಹಾಗೂ ಕಾಳಿ ನದಿಗಳು ಮಲಿನಗೊಂಡಿವೆ.
ಶುದ್ಧಗಾಳಿಗೆ ಸಂಚಕಾರ: ರಾಷ್ಟ್ರ ರಾಜಧಾನಿ ದೆಹಲಿ ಸೇರಿ ದೇಶದ ವಿವಿಧ ರಾಜ್ಯಗಳಲ್ಲಿ ಗಾಳಿ ಗುಣಮಟ್ಟ ಕಳಪೆ ಹಂತಕ್ಕೆ ತಲುಪಿದೆ. ರಾಜ್ಯದಲ್ಲಿ ಒಮ್ಮೆ ಕಳಪೆ ಮಟ್ಟಕ್ಕೆ ಹೋದರೂ ಉತ್ತಮ ಮಟ್ಟಕ್ಕೆ ಬಂದಿದೆ. ಧೂಳಿನ ಕಣ, ವಾಹನಗಳಿಂದ ಹೊರಸೂಸುವ ಹೊಗೆ, ಆಟೋಮೊಬೈಲ್, ತೈಲ ಕಾರ್ಖಾನೆಗಳು ಉಗುಳುವ ಹೊಗೆ, ಕೃಷಿ ತ್ಯಾಜ್ಯ, ಹಾಗೂ ಮರ ಇದ್ದಿಲು ಸುಡುವಿಕೆಯಿಂದ ವಾಯುಮಾಲಿನ್ಯ ಹೆಚ್ಚುತ್ತಿದೆ.
ಆಚರಣೆ ಮಹತ್ವ: 1984ರ ಡಿ.2ರಂದು ಮಧ್ಯಪ್ರದೇಶದ ಭೋಪಾಲ್​ನ ಯೂನಿಯನ್ ಕಾರ್ಬೆಡ್ ಇಂಡಿಯಾ ಲಿಮಿಟೆಡ್​ನ ಕೀಟನಾಶಕ ಘಟಕದಲ್ಲಿ ಅನಿಲ ದುರ್ಘಟನೆ ಸಂಭವಿಸಿತ್ತು. ಈ ದುರಂತದಲ್ಲಿ ಮಡಿದವರ ಸ್ಮರಣಾರ್ಥ ಮತ್ತು ಮಾಲಿನ್ಯ ನಿಯಂತ್ರಣದ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಪ್ರತಿ ವರ್ಷ ಡಿ.2ರಂದು ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ದಿನವನ್ನು ಆಚರಿಸಲಾಗುತ್ತದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − six =
Remember me
