ಮುಂಬೈ:ಮಹಾರಾಷ್ಟ್ರದ ಮುಂಬೈ ನಗರದಲ್ಲಿ ಸೋಮವಾರ ಬೆಳಗ್ಗೆ ಏಕಾಏಕಿ ಸುಮಾರು 2 ತಾಸಿಗೂ ಹೆಚ್ಚು ಕಾಲ ವಿದ್ಯುತ್ ಸಂಪರ್ಕ ಸ್ಥಗಿತಗೊಂಡು, ಜನಜೀವನ ಅಸ್ತವ್ಯಸ್ತವಾಗಿತ್ತು. ಮುಂಬೈ ನಗರ, ಉಪನಗರ, ಥಾಣೆ, ಪಾಲ್ಗಢ ಮತ್ತು ರಾಯ್ಘಡ ಸುತ್ತಮುತ್ತಲ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿ, ಜನರು ಪರದಾಡುವಂತಾಗಿತ್ತು. ಮಧ್ಯಾಹ್ನದ ವೇಳೆಗೆ ಹಂತ ಹಂತವಾಗಿ ಬಹುತೇಕ ಭಾಗಗಳಲ್ಲಿ ವಿದ್ಯುತ್ ಸಂಪರ್ಕವನ್ನು ಪುನಃ ಸ್ಥಾಪಿಸುವಲ್ಲಿ ಸಿಬ್ಬಂದಿ ಯಶಸ್ವಿಯಾದರು. ಘಟನೆ ಕುರಿತು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ತನಿಖೆಗೆ ಆದೇಶಿಸಿದ್ದಾರೆ. ಪರಿಶೀಲನೆ ನಡೆಸಲು ಕೇಂದ್ರದ ತಂಡ ಕಳುಹಿಸುವುದಾಗಿ ಇಂಧನ ಸಚಿವ ಆರ್.ಕೆ. ಸಿಂಗ್ ಕೂಡ ತಿಳಿಸಿದ್ದಾರೆ.
ಥಾಣೆ ಬಳಿಯ ಕಲ್ವಾ-ಪದಘಾದಲ್ಲಿರುವ ಮಹಾರಾಷ್ಟ್ರ ರಾಜ್ಯ ವಿದ್ಯುತ್ ಪ್ರಸರಣ ಕಂಪನಿಯ 400 ಕೆ.ವಿ ವಿದ್ಯುತ್ ಪೂರೈಕೆ ಕೇಂದ್ರದಲ್ಲಿನ ಸರ್ಕ್ಯೂಟ್​ಗಳಲ್ಲಿನ ತಾಂತ್ರಿಕ ವೈಫಲ್ಯದಿಂದಾಗಿ ವಿದ್ಯುತ್ ಕಡಿತ ಉಂಟಾಗಿದೆ ಎಂದು ಮಹಾರಾಷ್ಟ್ರದ ಇಂಧನ ಸಚಿವ ನಿತಿನ್ ರಾವತ್ ಹೇಳಿದ್ದಾರೆ. ಇತರ ವಿದ್ಯುತ್ ಸರಬರಾಜು ಸರ್ಕ್ಯೂಟ್​ನಲ್ಲಿ ದುರಸ್ತಿ ಮತ್ತು ನಿರ್ವಹಣಾ ಕಾರ್ಯಗಳು ನಡೆಯುತ್ತಿರುವುದರಿಂದ ವಿದ್ಯುತ್ ಹೊರೆ ಹೆಚ್ಚಾಗಿ ಘಟನೆ ಸಂಭವಿಸಿದೆ ಎಂದು ಅವರು ತಿಳಿಸಿದ್ದಾರೆ.
ಜಾಲತಾಣಗಳಲ್ಲಿ ಟ್ರೆಂಡ್:ವಿದ್ಯುತ್ ವ್ಯತ್ಯಯದ ಬಗ್ಗೆ ಜಾಲತಾಣಗಳಲ್ಲಿ ಜನರು ಪೋಸ್ಟ್​ಗಳನ್ನು ಮಾಡಿ ಪವರ್​ಕಟ್ ಮುಂಬೈ ಸೇರಿ ಹಲವು ಹ್ಯಾಷ್​ಟ್ಯಾಗ್​ಗಳನ್ನು ಟ್ರೆಂಡ್ ಮಾಡಿದ್ದರು. ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಸೇರಿ ಹಲವು ಗಣ್ಯರು ಕೂಡ ಈ ಬಗ್ಗೆ ಟ್ವಿಟ್ ಮಾಡಿದ್ದರು.
ಕೈಕೊಟ್ಟ ಸಿಗ್ನಲ್:ವಿದ್ಯುತ್ ಸಂಪರ್ಕ ಸ್ಥಗಿತಗೊಂಡಿದ್ದರಿಂದಾಗಿ ಮುಂಬೈ ಕೇಂದ್ರ ರೈಲ್ವೆ ಮತ್ತು ಪಶ್ಚಿಮ ರೈಲ್ವೆ ನಡುವಿನ ಸಂಚಾರ ಅಸ್ತವ್ಯಸ್ತವಾಗಿತ್ತು. ಸಾವಿರಾರು ಸರ್ಕಾರಿ ನೌಕರರು ಕಚೇರಿ ತಲುಪಲು ಪರದಾಡಿದರು. ಮುಂಬೈನಲ್ಲಿ ಲಕ್ಷಾಂತರ ಜನರ ನಿತ್ಯದ ಓಡಾಟಕ್ಕೆ ಪ್ರಮುಖ ಸಾಧನವಾಗಿರುವುದು ರೈಲ್ವೆ. ಆದರೆ ವಿದ್ಯುತ್ ವ್ಯತ್ಯಯದಿಂದ ರೈಲ್ವೆ ಸೇವೆ ಏಕಾಏಕಿ ಸ್ಥಗಿತಗೊಂಡಿದ್ದರಿಂದ ಅವರು ಪರದಾಡಿದರು. ರೈಲುಗಳು ನಿಂತಲ್ಲಿಂದ ಜನರು ಇಳಿದು ನಡೆದುಕೊಂಡು ತಮ್ಮ ಕೆಲಸಗಳಿಗೆ ತೆರಳಿದರು. ಮಧ್ಯಾಹ್ನದ ವೇಳೆಗೆ ರೈಲ್ವೆ ಸೇವೆ ಯಥಾಸ್ಥಿತಿಗೆ ಮರಳಿತು. ವಿದ್ಯುತ್ ವ್ಯತ್ಯಯದಿಂದ ಸಮಸ್ಯೆಗೆ ಸಿಲುಕಿದ್ದವರ ನೆರವಿಗೆ ಸಹಾಯವಾಣಿಯನ್ನೂ ನೀಡಲಾಗಿತ್ತು. ವಿದ್ಯುತ್ ವ್ಯತ್ಯಯ ಟ್ರಾಫಿಕ್ ಸಿಗ್ನಲ್​ಗಳ ಮೇಲೆಯೂ ಪರಿಣಾಮಬೀರಿದ್ದು, ರಸ್ತೆ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿತ್ತು. ಹಲವೆಡೆ ಟ್ರಾಫಿಕ್ ಜಾಮ್ ಉಂಟಾಗಿ ಸಂಚಾರಿ ಪೊಲೀಸರು ಪರಿಸ್ಥಿತಿ ನಿಭಾಯಿಸುವಷ್ಟರಲ್ಲಿ ಹೈರಾಣಾದರು. ಆದರೆ ವಿಮಾನ ಸಂಚಾರ, ಷೇರುಪೇಟೆ ಮೇಲೆ ವಿದ್ಯುತ್ ವ್ಯತ್ಯಯ ಪರಿಣಾಮ ಬೀರಿಲ್ಲ.
ಆಸ್ಪತ್ರೆಗಳ ಬಗ್ಗೆ ಆತಂಕ:ಕರೊನಾ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ಆಸ್ಪತ್ರೆಗಳು ಸೇರಿ ಮುಂಬೈ ನಗರದಲ್ಲಿನ ಸಾವಿರಾರು ಆಸ್ಪತ್ರೆಗಳ ಮೇಲೆ ವಿದ್ಯುತ್ ವ್ಯತ್ಯಯ ಪರಿಣಾಮ ಬೀರುವ ಆತಂಕ ದಟ್ಟವಾಗಿತ್ತು. ಆದರೆ ಅದೃಷ್ಟವಶಾತ್ ಎಲ್ಲೂ ಗಂಭೀರ ಸಮಸ್ಯೆ ಉಂಟಾಗಿಲ್ಲ. ಈ ನಡುವೆ ಮುಂಬೈ ಮಹಾನಗರ ಪಾಲಿಕೆ ಆಯುಕ್ತ ಇಕ್ಬಾಲ್ ಸಿಂಗ್ ಚಾಹಲ್, 8 ತಾಸಿಗೆ ಜನರೇಟರ್ ಕಾರ್ಯನಿರ್ವಹಿಸಲು ಅಗತ್ಯವಿರುವಷ್ಟು ಡೀಸೆಲ್ ಸಂಗ್ರಹಿಸಿಟ್ಟುಕೊಳ್ಳುವಂತೆ ಎಲ್ಲ ಆಸ್ಪತ್ರೆಗಳಿಗೆ ಸೂಚನೆ ನೀಡಿದ್ದರು. ಜತೆಗೆ ಪ್ರತಿ ಅರ್ಧ ಗಂಟೆಗೊಮ್ಮೆ ಆಸ್ಪತ್ರೆಯಲ್ಲಾಗುವ ಬೆಳವಣಿಗೆಗಳ ಬಗ್ಗೆ ಪಾಲಿಕೆಗೆ ಮಾಹಿತಿ ನೀಡುವಂತೆ ಸೂಚಿಸಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − nine =
Remember me
