ಕಾಬುಲ್:ಅಫ್ಘಾನಿಸ್ತಾನದಲ್ಲಿ ಉಗ್ರ ಸಂಘಟನೆಗಳ ನಡುವೆ ‘ಒಮ್ಮತ’ ಮೂಡದ ಕಾರಣ ಎಲ್ಲರಿಗೂ ‘ಸಮ್ಮತ’ವಾಗುವ ಸರ್ಕಾರ ರಚನೆಗೆ ಈಗ ಕಸರತ್ತು ನಡೆಯುತ್ತಿದೆ. ಅಧಿಕಾರ ಹಂಚಿಕೆ ವಿಚಾರದಲ್ಲಿ ಭಿನ್ನಮತ ಏರ್ಪಟ್ಟ ಕಾರಣ, ಸಭೆಯಲ್ಲೇ ಗುಂಡಿನ ಚಕಮಕಿ ನಡೆದಿದೆ. ತಾಲಿಬಾನ್ ಸಹ ಸಂಸ್ಥಾಪಕ ಮುಲ್ಲಾ ಅಬ್ದುಲ್ಲ ಘನಿ ಬರದಾರ್ ಗಾಯಾಳುವಾಗಿದ್ದು, ಚಿಕಿತ್ಸೆಗಾಗಿ ಪಾಕಿಸ್ತಾನಕ್ಕೆ ಕರೆದೊಯ್ಯಲಾಗಿದೆ ಎಂದು ವರದಿಯಾಗಿದೆ.
ಪಾಕ್ ಬೆಂಬಲದೊಂದಿಗೆ ಮುನ್ನಡೆಯುತ್ತಿರುವ ಹಕ್ಕಾನಿ ನೆಟ್​ವರ್ಕ್ ಕಾಬುಲನ್ನು ಹಿಡಿತದಲ್ಲಿರಿಸಿಕೊಂಡಿದೆ. ಇಲ್ಲಿ ಏನಿದ್ದರೂ ಕಟ್ಟಾ ಸಂಪ್ರದಾಯವಾದಿ ಸುನ್ನಿ ಪಶ್ತೂನ್ ಸರ್ಕಾರವೇ ರಚನೆಯಾಗಬೇಕು ಎಂಬುದು ಹಕ್ಕಾನಿ ಆಗ್ರಹ. ಈ ವಿಷಯದಲ್ಲಿ ರಾಜಿ ಆಗಲು ಅದು ಸಿದ್ಧವಿಲ್ಲ. ಇದೇ ವೇಳೆ, ತಾಲಿಬಾನ್ ನಾಯಕ ಮುಲ್ಲಾ ಬರದಾರ್​ಗೆ ಎಲ್ಲರನ್ನೂ ಒಳಗೊಂಡ ಸುಧಾರಣಾವಾದಿ ಸರ್ಕಾರ ರಚಿಸಬೇಕಾದ ಅನಿವಾರ್ಯತೆ. ಸರ್ಕಾರದಲ್ಲಿ ಅಲ್ಪಸಂಖ್ಯಾತ ಸಮುದಾಯಕ್ಕೂ ಪ್ರಾತಿನಿಧ್ಯ ನೀಡುವುದಾಗಿ ದೋಹಾದಲ್ಲಿ ಅಂತಾರಾಷ್ಟ್ರೀಯ ಸಮುದಾಯದ ಜತೆಗೆ ನಡೆದ ಸಂಧಾನ ಮಾತುಕತೆ ವೇಳೆ ಬರದಾರ್ ಈ ಬಗ್ಗೆ ಭರವಸೆ ನೀಡಿದ್ದರು. ಆದರೆ, ಹಕ್ಕಾನಿ ನೆಟ್​ವರ್ಕ್​ನ ಹಟದಿಂದಾಗಿ ಈಗ ಬರದಾರ್ ವಚನಭ್ರಷ್ಟತೆಯ ಸಂಕಟವನ್ನು ಎದುರಿಸುತ್ತಿದ್ದಾರೆ.
ಕಾಬುಲನ್ನು ಹಕ್ಕಾನಿಗಳೇ ಗೆದ್ದುಕೊಂಡಿದ್ದು, ಅದು ಅವರ ನಿಯಂತ್ರಣದಲ್ಲಿದೆ. ಹಕ್ಕಾನಿ ನೆಟ್​ವರ್ಕ್​ನ್ನು ತಾಲಿಬಾನ್​ನ ಡೆಪ್ಯೂಟಿ ಲೀಡರ್ ಸಿರಾಜುದ್ದೀನ್ ಮತ್ತು ಸಂಗಡಿಗರು ಮುನ್ನಡೆಸುತ್ತಿದ್ದಾರೆ. ಇದೇ ವೇಳೆ ಮುಲ್ಲಾ ಯಾಕೂಬ್ ಕಂದಹಾರ್​ನಲ್ಲಿದ್ದು, ಸರ್ಕಾರ ರಚನೆ ವಿಚಾರದಲ್ಲಿ ಭಿನ್ನಮತ ಹೊಂದಿರುವುದನ್ನು ಬಹಿರಂಗಪಡಿಸಿದ್ದಾನೆ. ತಾಲಿಬಾನ್​ನಲ್ಲಿರುವ ಕಟ್ಟಾ ಸಂಪ್ರದಾಯವಾದಿಗಳು ಅಲ್​ಖೈದಾ ಜತೆಗಿನ ನಂಟು ಮುರಿಯಲು ಸಿದ್ಧರಿಲ್ಲ. ಅಷ್ಟೇ ಅಲ್ಲ, ಕಟ್ಟಾ ಸಂಪ್ರದಾಯವಾದಿ ಸರ್ಕಾರವೇ ರಚನೆಯಾಗಬೇಕೆಂದು ಆಗ್ರಹಿಸಿದ್ದಾರೆ. ಇದು ಹೊಸ ಸರ್ಕಾರ ರಚನೆಯನ್ನು ಅಕ್ಷರಶಃ ಕಸರತ್ತನ್ನಾಗಿಸಿದೆ.
ಐಎಸ್​ಐ ಮುಖ್ಯಸ್ಥರ ಮಧ್ಯಸ್ಥಿಕೆ:ತಾಲಿಬಾನ್ ಮುಖ್ಯ ಪೋಷಕ ಐಎಸ್​ಐನ ಡೈರೆಕ್ಟರ್ ಜನರಲ್ ಲೆಫ್ಟಿನೆಂಟ್ ಫೈಜ್ ಹಮೀದ್ ಈಗ ಮಧ್ಯಸ್ಥಿಕೆದಾರನಾಗಿ ಕೆಲಸ ಶುರುಮಾಡಿದ್ದಾರೆ. ಕಾಬುಲ್​ಗೆ ಎರಡು ದಿನಗಳ ಹಿಂದೆ ಆಗಮಿಸಿದ ಅವರು, ಹಕ್ಕಾನಿ ನೆಟ್​ವರ್ಕ್ ನಾಯಕರು ಮತ್ತು ತಾಲಿಬಾನ್ ನಾಯಕರ ನಡುವೆ ಒಮ್ಮತ ಮೂಡಿಸಲು ಪ್ರಯತ್ನಿಸುತ್ತಿದ್ದಾರೆ.
‘ಒಮ್ಮತದ ನಿಲುವಿಗೆ ಬನ್ನಿ’:ಅಫ್ಘಾನಿಸ್ತಾನದ ಜತೆಗೆ ಗಡಿ ಹಂಚಿಕೊಂಡಿರುವ ಚೀನಾ, ಪಾಕಿಸ್ತಾನ ಮತ್ತು ರಷ್ಯಾಗಳು, ಅಫ್ಘನ್ ವಿಚಾರದಲ್ಲಿ ಒಮ್ಮತದ ನಿಲುವನ್ನು ಹೊಂದಲು ಪ್ರಯತ್ನಿಸಿವೆ. ಇದೇ ವೇಳೆ, ಇರಾನ್​ಗೂ ಇದೇ ನಿಲುವಿಗೆ ಬರುವಂತೆ ಚೀನಾ ಆಗ್ರಹಿಸಿದೆ. ಪಾಶ್ಚಿಮಾತ್ಯ ರಾಷ್ಟ್ರಗಳಾದ ಅಮೆರಿಕ, ಬ್ರಿಟನ್ ಮತ್ತು ಇತರೆ ದೇಶಗಳು ಅಫ್ಘನ್ ಸರ್ಕಾರಕ್ಕೆ ಶೀಘ್ರವೇ ಮಾನ್ಯತೆ ನೀಡುವುದು ಕಷ್ಟ. ಹೀಗಾಗಿ ನೆರೆ ರಾಷ್ಟ್ರಗಳೇ ಈಗ ಅಫ್ಘನ್ ನೆರವಿಗೆ ಧಾವಿಸಬೇಕಾಗುತ್ತದೆ ಎಂದು ಚೀನಾದ ವಿದೇಶಾಂಗ ಸಚಿವ ವಾಂಗ್ ಯೀ ಇರಾನ್​ನ ವಿದೇಶಾಂಗ ಸಚಿವ ಹುಸೇನ್ ಆಮೀರ್ ಅಬ್ದೊಲ್ಲಾಹಿಯಾನ್ ಜತೆಗೆ ದೂರವಾಣಿ ಸಂಭಾಷಣೆ ವೇಳೆ ತಿಳಿಸಿದ್ದಾಗಿ ವರದಿಯಾಗಿದೆ.
ಸರ್ಕಾರ ರಚನೆ ವಿಳಂಬಕ್ಕೆ ಪಂಜ್​ಶೀರ್ ಕಾರಣ?:ತಾಲಿಬಾನ್ ಸರ್ಕಾರ ರಚನೆ ವಿಳಂಬವಾಗುತ್ತಿ ರುವುದಕ್ಕೆ ಪಂಜ್​ಶೀರ್ ಸಮರವೂ ಒಂದು ಕಾರಣ ಎಂದು ಹೇಳಲಾಗುತ್ತಿದೆ. ಅಲ್ಲಿ ಅಹ್ಮದ್ ಮಸೂದ್ ನೇತೃತ್ವದ ನ್ಯಾಷನಲ್ ರೆಸಿಸ್ಟನ್ಸ್ ಫ್ರಂಟ್ (ಎನ್​ಆರ್​ಎಫ್) ತಾಲಿಬಾನಿಗಳಿಗೆ ತೀವ್ರ ವಿರೋಧ ವ್ಯಕ್ತಪಡಿಸಿದೆ. ಈ ವಿಚಾರ ತಾಲಿಬಾನ್ ಮತ್ತು ಇತರೆ ಉಗ್ರ ಸಂಘಟನೆಗಳ ನಡುವಿನ ಭಿನ್ನಮತಕ್ಕೂ ಕಾರಣವಾಗಿದೆ. ಈ ಎಲ್ಲ ವಿದ್ಯಮಾನಗಳ ಮೇಲೆ ಚೀನಾ ಕಣ್ಣಿರಿಸಿದೆ.
ಗರ್ಭಿಣಿ ಪೊಲೀಸ್ ದಾರುಣ ಹತ್ಯೆ:ಅಫ್ಘನ್​ನ ಘೋರ್ ಪ್ರಾಂತ್ಯದ ರಾಜಧಾನಿ ಫಿರೋಝå್ಕೋಹ್​ನಲ್ಲಿ ತಾಲಿಬಾನಿ ಉಗ್ರರು ಮಹಿಳಾ ಪೊಲೀಸ್ ಅಧಿಕಾರಿ ನಿಗರಾ ಅವರನ್ನು ಶನಿವಾರ ರಾತ್ರಿ 10 ಗಂಟೆಗೆ ದಾರುಣವಾಗಿ ಹತ್ಯೆ ಮಾಡಿರುವುದಾಗಿ ವರದಿಯಾಗಿದೆ. ಮನೆ ಮನೆ ಶೋಧ ನಡೆಸುತ್ತಿದ್ದ ಉಗ್ರರು, ನಿಗರಾ ಅವರನ್ನು ಮಕ್ಕಳು ಮತ್ತು ಪತಿಯ ಎದುರೇ ಮುಖವನ್ನು ವಿಕಾರಗೊಳಿಸಿ ಹತ್ಯೆ ಮಾಡಿದರು. ಆಕೆ ಆರು ತಿಂಗಳ ಗರ್ಭಿಣಿಯಾಗಿದ್ದರು ಎಂದು ದ ಸನ್ ವರದಿ ಮಾಡಿದೆ.
ಪಂಜ್​ಶೀರ್ ಪರ ಸುನ್ನಿ ಇಸ್ಲಾಮಿಸ್ಟ್:ಪಂಜ್​ಶೀರ್ ವಶಪಡಿಸಲು ತಾಲಿಬಾನಿಗಳು ಬಲಿಷ್ಠ ನೆರವು ಪಡೆದು ಯುದ್ಧ ನಡೆಸುತ್ತಿರುವುದನ್ನು ವಿರೋಧಿಸಿ ಮಾಸ್ಕೋದಲ್ಲಿ ಸೆಂಟ್ರಲ್ ಏಷ್ಯನ್ ರಿಪಬ್ಲಿಕನ್ಸ್ ಸಂಘಟನೆ ಸುನ್ನು ಇಸ್ಲಾಮಿಸ್ಟ್ ಗಳ ಜತೆ ಸೇರಿ ನಿರಶನ ಆರಂಭಿಸಿದೆ. ಯುರೋಪ್ ಒಕ್ಕೂಟದಲ್ಲೂ ಅಫ್ಘನ್ ಬೆಳವಣಿಗೆ ವಿಚಾರದಲ್ಲಿ ಅಸಮಾಧಾನ ವ್ಯಕ್ತವಾಗಿದೆ. ಪಾಕಿಸ್ಥಾನದಲ್ಲಿ 27 ಜನ ನಿರಶನ ಆರಂಭಿಸಿದ್ದಾರೆ.
ಚುನಾವಣೆ ನಡೆಯಲಿ ಎಂದ ಇರಾನ್:ಅಫ್ಘಾನ್​ನ ಭವಿಷ್ಯದ ಹಿತ ದೃಷ್ಟಿಯಿಂದ ಅಲ್ಲಿ ಚುನಾವಣೆ ನಡೆಯಬೇಕಾದ್ದು ಅವಶ್ಯ. ಪಶ್ಚಿಮದ ಸೈನ್ಯಗಳು ವಾಪಸ್ ಹೋಗಿರುವ ಕಾರಣ ಅಲ್ಲಿ ಶಾಂತಿ ನೆಲೆಸಬೇಕಾಗಿದೆ. ದೇಶವನ್ನು ಈಗ ತಾಲಿಬಾನ್ ನಿಯಂತ್ರಿಸುತ್ತಿದೆ. ಅಫ್ಘನ್ ಜನ ಮತ ಚಲಾಯಿಸಿ ಸರ್ಕಾರವನ್ನು ಆಯ್ಕೆ ಮಾಡಲಿ. ಜನರ ಇಚ್ಛೆಯಂತೆ ಸರ್ಕಾರ ರಚನೆಯಾಗಬೇಕು. ಇಸ್ಲಾಮಿಕ್ ರಿಪಬ್ಲಿಕ್ ಯಾವತ್ತೂ ಆಫ್ಘನ್​ನಲ್ಲಿ ಶಾಂತಿ ಮತ್ತು ನೆಮ್ಮದಿಯನ್ನು ಬಯಸುತ್ತದೆ. ರಕ್ತಪಾತ ಕೊನೆಗೊಂಡು ಜನರೇ ಸಾರ್ವಭೌಮರೆಂದು ನಿರೂಪಿತವಾಗಬೇಕು. ಅಫ್ಘನ್ ಜನರಿಂದ ಆಯ್ಕೆಯಾಗುವ ಸರ್ಕಾರವನ್ನು ನಾವು ಬೆಂಬಲಿಸುತ್ತೇವೆ ಎಂದು ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಹೇಳಿದ್ದಾರೆ.
ಸಂಧಾನ ಸಭೆಯಲ್ಲೇ ನಡೆಯಿತಾ ಫೈರಿಂಗ್?:ಪಂಜ್​ಶೀರ್ ಆಬ್ಸರ್ವರ್ ವರದಿ ಪ್ರಕಾರ, ಸರ್ಕಾರ ರಚನೆಗೆ ಸಂಬಂಧಿಸಿದ ಮಾತುಕತೆ ಸಂದರ್ಭದಲ್ಲಿ ಹಕ್ಕಾನಿ ನೆಟ್​ವರ್ಕ್​ನ ಕೆಲವು ನಾಯಕರು ಮತ್ತು ತಾಲಿಬಾನ್ ಸಹ ಸಂಸ್ಥಾಪಕ ಮುಲ್ಲಾ ಅಬ್ದುಲ್ ಘನಿ ಬರದಾರ್ ನಡುವೆ ಭಿನ್ನಮತ ಏರ್ಪಟ್ಟಿತ್ತು. ಇದು ವಾಕ್ಸಮರಕ್ಕೆ ತಿರುಗಿದ ವೇಳೆ ಕುಪಿತರಾದ ಹಕ್ಕಾನಿ ನಾಯಕರು ಗುಂಡಿನ ದಾಳಿ ನಡೆಸಿದರು. ಆಗ, ಅನಾಸ್ ಹಕ್ಕಾನಿ ರೈಫಲ್​ನಿಂದ ಹೊರಬಿದ್ದ ಗುಂಡು ಬರದಾರ್​ಗೆ ತಗುಲಿದೆ. ಗಾಯಾಳುವಾದ ಬರದಾರ್ ಅನ್ನು ಚಿಕಿತ್ಸೆಗಾಗಿ ಪಾಕಿಸ್ತಾನಕ್ಕೆ ಕರೆದೊಯ್ದಿದ್ದಾರೆ. ಈ ವಿದ್ಯಮಾನದ ಕಾರಣವೇ ಪಾಕಿಸ್ತಾನದ ಐಎಸ್​ಐ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಫೈಜ್ ಹಮೀದ್ ತುರ್ತಾಗಿ ಕಾಬುಲ್ ಪ್ರಯಾಣ ಬೆಳೆಸಿದ್ದು ಎನ್ನಲಾಗಿದೆ.
ಚೀನಾ, ಪಾಕ್ ಜತೆಗಿದ್ದರೆ ಸಾಕು!:ಕಾಬುಲನ್ನು ಬಲವಂತವಾಗಿ ವಶಪಡಿಸಿಕೊಳ್ಳಲಾಗಿದೆ. ಚೀನಾ ಮತ್ತು ಪಾಕಿಸ್ತಾನದ ಬೆಂಬಲ ಇರುವಾಗ ಅಂತಾರಾಷ್ಟ್ರೀಯ ಸಮುದಾಯದ ಜತೆಗಿನ ಬಾಂಧವ್ಯದ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಉಗ್ರ ಸಂಘಟನೆ ಹಕ್ಕಾನಿ ನೆಟ್​ವರ್ಕ್ ದೋಹಾದಲ್ಲಿ ಹೇಳಿರುವುದಾಗಿ ವರದಿಯಾಗಿದೆ. ಹಕ್ಕಾನಿ ನಿಯಂತ್ರಣದ ತಾಲಿಬಾನ್ ಸರ್ಕಾರ ಕಾಬುಲ್​ನಲ್ಲಿ ರಚನೆಯಾದರೆ ಪಾಕಿಸ್ತಾನ ಸೇನೆಗೆ ಹೆಚ್ಚು ಪ್ರಯೋಜನ. ಅದು ಭಾರತದ ವಿರುದ್ಧ ಕಾರ್ಯಾಚರಿಸುವುದು ಸುಲಭ ಎಂಬ ವಿಶ್ಲೇಷಣೆಯನ್ನು ಪರಿಣತರು ಮಾಡಿದ್ದಾರೆ.
ಅಫ್ಘನ್ ಗಡಿಯಲ್ಲಿ ಆತ್ಮಾಹುತಿ ದಾಳಿ:ಪಾಕಿಸ್ತಾನ ಮತ್ತು ಅಫ್ಘನ್ ಗಡಿಭಾಗದಲ್ಲಿ ಮಿಯಾನ್ ಗಡಿಗೆ ಸಮೀಪ ಆತ್ಮಾಹುತಿ ಬಾಂಬ್ ದಾಳಿ ನಡೆದಿದೆ. ಪಾಕಿಸ್ತಾನದ ನಾಲ್ವರು ಅರೆಸೇನಾ ಯೋಧರು ಮೃತಪಟ್ಟಿದ್ದಾರೆ. 17 ಯೋಧರು ಮತ್ತು ಇಬ್ಬರು ನಾಗರಿಕರು ಗಾಯಗೊಂಡಿದ್ದಾರೆ.
ವಿಮಾನ ಹಾರಾಟ ಶುರು:ಕಾಬುಲ್​ನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಅರಿಯಾನಾ ಅಫ್ಘನ್ ಏರ್​ಲೈನ್ಸ್​ನ ಕೆಲವು ವಿಮಾನಗಳು ಮೂರು ಪ್ರಾಂತ್ಯಗಳಿಗೆ ಪ್ರಾದೇಶಿಕ ವಿಮಾನ ಹಾರಾಟ ಶುರುಮಾಡಿದೆ. ಶನಿವಾರ ಹೇರಾತ್, ಕಂದಹಾರ್, ಬಲ್ಖ್ ಪ್ರಾಂತ್ಯಗಳಿಗೆ ವಿಮಾನ ಹಾರಾಟ ನಡೆದಿತ್ತು. ಭಾನುವಾರವೂ 3 ವಿಮಾನ ಹಾರಾಟ ನಿಗದಿಯಾಗಿದೆ.
600 ತಾಲಿಬಾನಿಗಳು ಬಲಿ:ಪಂಜ್​ಶೀರ್ ಯುದ್ಧದಲ್ಲಿ ತಾಲಿಬಾನ್​ನ 600 ಉಗ್ರರು ಹತರಾಗಿದ್ದಾರೆ. 1,000ಕ್ಕೂ ಹೆಚ್ಚು ಉಗ್ರರು ಯುದ್ಧ ಕೈದಿಗಳಾಗಿದ್ದಾರೆ ಎಂದು ನ್ಯಾಷನಲ್ ರೆಸಿಸ್ಟೆನ್ಸ್ ಫೋರ್ಸ್ ವಕ್ತಾರ ಫಾಹಿಮ್ ದಷ್ಟಿ ಟ್ವೀಟ್ ಮಾಡಿದ್ದಾನೆ. ಪಂಜ್​ಶೀರ್​ನಲ್ಲಿ ಯುದ್ಧ ಮುಂದುವರಿದಿದೆ. ರಾಜಧಾನಿ ಬಝುರಕ್ ಮತ್ತು ಪ್ರಾಂತೀಯ ಗವರ್ನರ್ ಕಚೇರಿ/ನಿವಾಸಕ್ಕೆ ಹೋಗುವ ರಸ್ತೆಯಲ್ಲಿ ಲ್ಯಾಂಡ್ ಮೈನ್ ಇರಿಸಲಾಗಿದೆ ಎಂದು ತಾಲಿಬಾನ್ ಹೇಳಿಕೊಂಡಿದೆ.
ಮಾತುಕತೆಗೆ ಸಿದ್ಧ:ಪಂಜ್​ಶೀರ್​ಗೆ ಮುತ್ತಿಗೆ ಹಾಕಿರುವ ತಾಲಿಬಾನಿಗಳನ್ನು ಮತ್ತು ಸೇನೆಯನ್ನು ಹಿಂದಕ್ಕೆ ಕರೆಯಿಸಿಕೊಳ್ಳಿ. ನಾವು ಮಾತುಕತೆ ಸಿದ್ಧ ಇದ್ದೇವೆ. ಶಾಂತಿ ಸಮಾಧಾನ ನೆಲೆಗೊಳಿಸುವುದಕ್ಕೆ ನಮ್ಮ ಕಡೆಯಿಂದ ಇಷ್ಟು ಮಾತ್ರ ನಾವು ಮಾಡಬಹುದು ಎಂದು ನ್ಯಾಷನಲ್ ರೆಸಿಸ್ಟೆಂಟ್ ಫೋರ್ಸ್​ನ ನಾಯಕ ಅಹ್ಮದ್ ಮಸೂದ್ ಹೇಳಿದ್ದಾರೆ. ಇದಕ್ಕೂ ಮುನ್ನ, ಯಾವುದೇ ಕಾರಣಕ್ಕೂ ಪಂಜ್​ಶೀರ್ ಅನ್ನು ತಾಲಿಬಾನಿಗಳಿಗೆ ಒಪ್ಪಿಸಲಾಗದು. ಪ್ರಾಣ ಒತ್ತೆ ಇಟ್ಟಾದರೂ ಪಂಜ್​ಶೀರ್ ಅನ್ನು ರಕ್ಷಿಸುತ್ತೇವೆ ಎಂದು ಘೋಷಿಸಿದ್ದರು.
ನನ್ನ ಲೆಕ್ಕಾಚಾರ ಹೊಂದಿಕೆ ಯಾಗುತ್ತಿದೆ. ಉಗ್ರ ಸಂಘಟನೆಗಳ ನಡುವೆ ಹೊಡೆದಾಟ ಶುರುವಾಗಿದೆ. ಶೀಘ್ರವೇ ಅಫ್ಘನ್​ನಲ್ಲಿ ಬೃಹತ್ ಪ್ರಮಾಣದ ಆಂತರಿಕ ಕಲಹ ಏರ್ಪಡಲಿದೆ. ಇದು ಐಸಿಸ್ ಅಥವಾ ಅಲ್​ಖೈದಾ ಅಥವಾ ಇನ್ನುಳಿದ ಉಗ್ರ ಸಂಘಟನೆಗಳ ಮರುಹುಟ್ಟಿಗೆ ಕಾರಣವಾಗಲಿದೆ.
|ಜನರಲ್ ಮಾರ್ಕ್ ಮಿಲ್ಲಿಅಮೆರಿಕದ ಸೇನಾಧಿಕಾರಿ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × four =
Remember me
