ಮಾಜಿ ರಾಷ್ಟ್ರಪತಿ ದಿವಂಗತ ಪ್ರಣಬ್ ಮುಖರ್ಜಿ ಅವರ ಆತ್ಮಚರಿತ್ರೆ ‘ದ ಪ್ರೆಸಿಡೆನ್ಶಿಯಲ್ ಈಯರ್ಸ್, 2012-2017’ ಮಂಗಳವಾರ ಲೋಕಾರ್ಪಣೆಗೊಂಡಿದೆ. ಕಳೆದ ವರ್ಷ ನಿಧನಕ್ಕೂ ಮುನ್ನ ಮುಖರ್ಜಿ ಬರೆದು ಮುಗಿಸಿದ್ದ ಈ ಕೃತಿಯನ್ನು ರೂಪಾ ಪಬ್ಲಿಕೇಶನ್ ಪ್ರಕಟಿಸಿದೆ. 2012ರ ಜುಲೈ 25ರಿಂದ 2017ರ ಜುಲೈ 25ರ ತನಕ ರಾಷ್ಟ್ರಪತಿಯಾಗಿದ್ದ ಅವರು, ಇಬ್ಬರು ಪ್ರಧಾನಿಗಳ ಕಾರ್ಯವೈಖರಿಯನ್ನು ಹತ್ತಿರದಿಂದ ಕಂಡವರು. ಆ ಕುರಿತ ಕುತೂಹಲಕಾರಿ ಸಂಗತಿಗಳು ಈ ಕೃತಿಯಲ್ಲಿದ್ದು, ಕೆಲ ಪ್ರಮುಖಾಂಶಗಳು ಇಲ್ಲಿವೆ.
ದೇಶ ಕಂಡ ಇದುವರೆಗಿನ ಸಾರ್ವತ್ರಿಕ ಚುನಾವಣೆಗಳ ಪೈಕಿ 2014 ಮತ್ತು 2019ರ ಚುನಾವಣೆಗಳು ಅತ್ಯಂತ ನಿರ್ಣಾಯಕವೆನಿಸಿವೆ. ರಾಜಕೀಯ ಸ್ಥಿರತೆಯನ್ನು ಮತದಾರರು ಬಯಸಿದ್ದು ಸ್ಪಷ್ಟವಾಗಿತ್ತು. ಅಷ್ಟೇ ಅಲ್ಲ, ಪ್ರಧಾನಿ ಪಟ್ಟದ ಹೊಣೆಗಾರಿಕೆಯನ್ನು ನರೇಂದ್ರ ಮೋದಿಯವರು ಸ್ವತಃ ಗಳಿಸಿದ್ದು ಮತ್ತು ಅದು ಅವರ ಸಾಧನೆಗೆ ಸಿಕ್ಕ ಫಲ ಎಂದು ಮಾಜಿ ರಾಷ್ಟ್ರಪತಿ ದಿವಂಗತ ಪ್ರಣಬ್ ಮುಖರ್ಜಿ ತಮ್ಮ ಆತ್ಮಚರಿತ್ರೆಯಲ್ಲಿ ಪ್ರತಿಪಾದಿಸಿದ್ದಾರೆ.
ಚುನಾವಣೆ ಸಂದರ್ಭದಲ್ಲಿ ಮತದಾರರ ಗ್ರಹಿಕೆಗಳು ಮತ್ತು ವಿವಿಧ ದೃಷ್ಟಿಕೋನಗಳು ಚರ್ಚೆಗೆ ಒಳಗಾಗುತ್ತವೆ. ಹೀಗಾಗಿ ಪ್ರತಿಯೊಂದು ಸಾರ್ವತ್ರಿಕ ಚುನಾವಣೆಗೂ ಅದರದ್ದೇ ಆದ ಪ್ರಾಮುಖ್ಯ ಇದೆ. ಅದೇ ರೀತಿ 2014ರ ಚುನಾವಣೆಯ ಫಲಿತಾಂಶವೂ ಎರಡು ಕಾರಣಗಳಿಗೆ ಐತಿಹಾಸಿಕವೆನಿಸುತ್ತದೆ.
ಮೊದಲನೆಯದು, ಮೂರು ದಶಕಗಳ ನಂತರ ರಾಜಕೀಯ ಪಕ್ಷ ಒಂದಕ್ಕೆ ಅತಂತ್ರ ಜನಾದೇಶದ ಬದಲು ನಿರ್ಣಾಯಕ ಜನಾದೇಶ ಲಭಿಸಿದೆ. ಎರಡನೆಯದು, ಲೋಕಸಭೆಯಲ್ಲಿ ಅದೇ ಮೊದಲ ಬಾರಿಗೆ ಬಿಜೆಪಿಗೆ ಸರಳ ಬಹುಮತ ಸಿಕ್ಕಿತ್ತು. ಆದರೂ ಅದು ಮಿತ್ರಪಕ್ಷಗಳನ್ನೂ ಒಟ್ಟಿಗೆ ಸೇರಿಸಿಕೊಂಡೇ ಆಡಳಿತ ಚುಕ್ಕಾಣಿ ಹಿಡಿಯಿತು.
ಮತದಾರರ ಗೆಲುವುಸಾಮಾನ್ಯವಾಗಿ ಅತಂತ್ರ ಜನಾದೇಶ ಬಂದಾಗ ಒಂದು ಪಕ್ಷವನ್ನೋ ಅಥವಾ ಒಬ್ಬ ವ್ಯಕ್ತಿಯನ್ನೋ ಅಧಿಕಾರಕ್ಕೆ ಬಾರದಂತೆ ತಡೆಯುವ ಏಕೈಕ ಕಾರ್ಯಸೂಚಿ ಇಟ್ಟುಕೊಂಡು ಮೈತ್ರಿಗಳು ಏರ್ಪಡುತ್ತವೆ. ಇದನ್ನು ಮತದಾರರು ಗಮನಿಸಿದ್ದಾರೆ. ಪರಿಣಾಮ, ದೇಶದಲ್ಲಿ 2014ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ನಿಜವಾಗಲೂ ಗೆದ್ದವರು ಮತದಾರರು. ರಾಜಕೀಯ ಸ್ಥಿರತೆ ಬಯಸಿ ಅವರು ನಿರ್ಣಾಯಕ ಜನಾದೇಶ ನೀಡಿದ್ದು, ಅಭಿವೃದ್ಧಿ ರಾಜಕಾರಣದ ಫಲ ಸಿಗುವುದೆಂಬ ನಂಬಿಕೆ ಇರಿಸಿದ್ದರು.
ಮೋದಿ ಅಲೆಗೆ ಕಳೆಗುಂದಿದ ಕೈಮೋದಿಯವರು 2014ರಲ್ಲಿ ಪ್ರವರ್ಧಮಾನಕ್ಕೆ ಬರುತ್ತಿರುವ ವೇಳೆಗೆ, ಜನರ ಆಸೆ ಆಕಾಂಕ್ಷೆಗಳಿಗೆ ತಕ್ಕಂತೆ ಕೆಲಸ ಮಾಡುವಲ್ಲಿ ಮತ್ತು ಫಲಿತಾಂಶ ನೀಡುವಲ್ಲಿ ಕಾಂಗ್ರೆಸ್ ಹೇಳ ಹೆಸರಿಲ್ಲದಂತೆ ಸೋತುಹೋಗಿತ್ತು. ಇದು ಕಹಿ ಸತ್ಯವಾದರೂ ವಾಸ್ತವ ಹೇಳುವುದರಿಂದ ಹಿಂಜರಿಯಲಾರೆ. ವಾಸ್ತವದಲ್ಲಿ ಚುನಾವಣಾ ಪ್ರಚಾರ ಮುಗಿದ ಬಳಿಕ ಕಾಂಗ್ರೆಸ್ ಪಕ್ಷದ ಅನೇಕ ಪ್ರಮುಖ ನಾಯಕರು ರಾಷ್ಟ್ರಪತಿ ಭವನದಲ್ಲಿ ವಿವಿಧ ಕಾರಣಗಳಿಗಾಗಿ ನನ್ನನ್ನು ಭೇಟಿ ಮಾಡಿದ್ದರು. ಕಾಂಗ್ರೆಸ್ ಅಥವಾ ಯುಪಿಎಗೆ ಸ್ಪಷ್ಟ ಬಹುಮತ ಸಿಗಬಹುದೆಂಬ ನಿರೀಕ್ಷೆ ಅವರಲ್ಲಿ ಯಾರೊಬ್ಬರಿಗೂ ಇರಲಿಲ್ಲ ಎಂಬುದು ಆಸಕ್ತಿದಾಯಕ ವಿಚಾರವಾಗಿ ಕಂಡಿತು.
ಮೋದಿ ಸೂಕ್ಷ್ಮಗ್ರಾಹಿನನಗೆ ಸರ್ಕಾರದ ಸಂಸದೀಯ ಮಾದರಿಯಲ್ಲಿ ಮತ್ತು ಅದರ ತತ್ತ್ವಗಳಲ್ಲಿ ನಂಬಿಕೆ ಇದೆ. ಇದೇ ನಂಬಿಕೆಯೊಂದಿಗೆ ದೇಶದ ನೀತಿಗಳಿಗೆ ಸಂಬಂಧಿಸಿದ ಸಭೆಗಳಲ್ಲಿ ನಾನು ನನ್ನ ಸಲಹೆಗಳನ್ನು ನೀಡಲು ಹಿಂದೇಟು ಹಾಕುತ್ತಿರಲಿಲ್ಲ. ನನ್ನ ಕಾಳಜಿಯನ್ನು ಅವರು ಅರ್ಥಮಾಡಿಕೊಂಡು ಅದನ್ನು ಅನುಸರಿಸಿದ ಅನೇಕ ಸಂದರ್ಭಗಳಿವೆ. ವಿದೇಶ ನೀತಿಗಳ ಸೂಕ್ಷ್ಮ ವ್ಯತ್ಯಾಸಗಳನ್ನು ಅವರು ಬಹುಬೇಗನೆ ಅರ್ಥಮಾಡಿಕೊಂಡು ಆಡಳಿತ ನಿರ್ವಹಣೆಯನ್ನು ಅವರು ನಿಭಾಯಿಸಿದ್ದಾರೆ.
ವರ್ಚಸ್ವಿ ನಾಯಕತ್ವದ ಕೊರತೆಪಕ್ಷದ ವರ್ಚಸ್ವಿ ನಾಯಕತ್ವ ಅಂತ್ಯಗೊಂಡಿರುವುದನ್ನು ಗುರುತಿಸುವಲ್ಲಿ ಕಾಂಗ್ರೆಸ್ ವಿಫಲವಾಗಿದ್ದು ಕೂಡ 2014ರ ಲೋಕಸಭೆ ಚುನಾವಣೆಯಲ್ಲಿ ಅದು ಹೀನಾಯ ಸೋಲನುಭವಿಸಲು ಒಂದು ಕಾರಣವಾಗಿತ್ತು. ಅಸಾಮಾನ್ಯ ನಾಯಕರ ಕೊರತೆಯಿಂದಾಗಿ ವ್ಯವಸ್ಥೆಯು ಒಂದು ‘ಸಾಧಾರಣ ಸರ್ಕಾರ’ದ ಮಟ್ಟಕ್ಕೆ ಇಳಿಯಿತು.
ಅಚ್ಚರಿಯ ನಡೆ…ಮೋದಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದಾಗ ಅವರಿಗೆ ವಿದೇಶ ವ್ಯವಹಾರಗಳ ತಿಳಿವಳಿಕೆ ಇರಲಿಲ್ಲ. ಗುಜರಾತಿನ ಮುಖ್ಯಮಂತ್ರಿಯಾಗಿ ಅವರು ಕೆಲವು ದೇಶಗಳಿಗೆ ಭೇಟಿ ನೀಡಿರಬಹುದಷ್ಟೆ. ಆದರೆ ಆ ಭೇಟಿಗಳು ಅವರ ರಾಜ್ಯಕ್ಕೆ ಒಳಿತುಮಾಡುವ ದೃಷ್ಟಿಯಿಂದ ಪ್ರಯೋಜನವಾದೀತೆ ಹೊರತು ದೇಶಕ್ಕಲ್ಲ. ಆದರೆ, ಅವರು ಇದುವರೆಗಿನ ಯಾವುದೇ ಪ್ರಧಾನಿ ಮಾಡದ ಕೆಲಸವನ್ನು ಮಾಡಿಬಿಟ್ಟರು. ಪ್ರಮಾಣ ವಚನ ಸಮಾರಂಭಕ್ಕೆ ನೆರೆ ರಾಷ್ಟ್ರಗಳ, ಸಾರ್ಕ್ ದೇಶಗಳ ಮುಖ್ಯಸ್ಥರನ್ನು ಆಹ್ವಾನಿಸಿಬಿಟ್ಟರು. ಇದು ಅನೇಕ ವಿದೇಶನೀತಿ ಪರಿಣತರ ಪಾಲಿಗೆ ಔಟ್ ಆಫ್ ಬಾಕ್ಸ್ ಅಚ್ಚರಿಯಾಗಿತ್ತು.
ನಮೋv/sಡಾ.ಸಿಂಗ್ಪ್ರಧಾನಿ ಪಟ್ಟ ನರೇಂದ್ರ ಮೋದಿಯವರ ಗಳಿಕೆ ಮತ್ತು ಸಾಧನೆ. ಆದರೆ, ಡಾ.ಮನಮೋಹನ್ ಸಿಂಗ್ ಅವರದ್ದು ಹಾಗಲ್ಲ. ಅವರಿಗೆ ಅದು ಸೋನಿಯಾ ಗಾಂಧಿ ಅವರಿಂದ ಕೊಡುಗೆಯಾಗಿ ದಕ್ಕಿದ್ದು. ಕಾಂಗ್ರೆಸ್ ಶಾಸಕಾಂಗ ಪಕ್ಷ ಮತ್ತು ಯುಪಿಎ ಮಿತ್ರಪಕ್ಷಗಳು ಸೋನಿಯಾರನ್ನು ಪ್ರಧಾನಿ ಹುದ್ದೆಗೆ ಆಯ್ಕೆ ಮಾಡಿದಾಗ, ಅವರು ಅದನ್ನು ನಿರಾಕರಿಸಿ ಡಾ.ಸಿಂಗ್ ಅವರಿಗೆ ಬಿಟ್ಟುಕೊಟ್ಟರು. ಇನ್ನೊಂದೆಡೆ, 2014ರ ಚುನಾವಣೆ ಫಲಿತಾಂಶ ಬರುತ್ತಲೇ ಪ್ರಧಾನಿ ಪಟ್ಟಕ್ಕೆ ಜನಪ್ರಿಯ ಆಯ್ಕೆಯಾಗಿದ್ದರುನರೇಂದ್ರ ಮೋದಿ. ಅವರು ರಾಜಕೀಯ ಮುತ್ಸದಿಯಾಗಿದ್ದು, ಪಕ್ಷ ಚುನಾವಣಾ ಪ್ರಚಾರ ಆರಂಭಿಸಿದಾಗಲೇ ಪ್ರಧಾನಿ ಅಭ್ಯರ್ಥಿಯಾಗಿ ಅವರ ಹೆಸರನ್ನೇ ಘೋಷಿಸಿತ್ತು. ಆಗ ಅವರು ಗುಜರಾತಿನ ಸಿಎಂ ಆಗಿದ್ದು, ಜನಸಮೂಹದ ನಡುವೆ ಉತ್ತಮ ವರ್ಚಸ್ಸು ರೂಪಿಸಿಕೊಂಡಿದ್ದರು. ಅವರು ಅರ್ಹವಾಗಿಯೇ ಪ್ರಧಾನಿ ಪಟ್ಟವನ್ನು ಗಳಿಸಿದ್ದಾರೆ. ಅದು ಅವರ ಸಾಧನೆ.
ಜನರಲ್ಲಿ ಮನವಿ ಮಾಡಿದ್ದೆರಾಷ್ಟ್ರಪತಿಯಾಗಿದ್ದುಕೊಂಡು 2014ರ ಗಣರಾಜ್ಯೋತ್ಸವ ಭಾಷಣದಲ್ಲಿ ನಾನು ದೇಶದ ಜನರಲ್ಲಿ ನಿರ್ಣಾಯಕ ಜನಾದೇಶ ನೀಡುವಂತೆ ಮನವಿ ಮಾಡಿಕೊಂಡಿದ್ದೆ. ಚುನಾವಣಾ ಫಲಿತಾಂಶ ಬಂದಾಗ ಪ್ರಬುದ್ಧ ಮತದಾರರು ಅದನ್ನು ಅಂಗೀಕರಿಸಿದಂತೆ ಭಾಸವಾಯಿತು ನನಗೆ. ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ನಿರ್ಣಾಯಕ ಜನಾದೇಶ ನೀಡಿ, ಸ್ವಂತ ಬಲದ ಮೇಲೆ ಸರ್ಕಾರ ರಚಿಸುವುದಕ್ಕೆ ಅನುವು ಮಾಡಿಕೊಟ್ಟಿದ್ದರು. 2014ರ ಚುನಾವಣೆಗೆ ಮೊದಲು ಬಿಜೆಪಿಗೆ ಸ್ಪಷ್ಟ ಜನಾದೇಶವನ್ನು ನಿರೀಕ್ಷಿಸಿರಲಿಲ್ಲ. ಆದರೂ, ಮೋದಿಯವರ ಯೋಜನೆ ಮತ್ತು ಪರಿಶ್ರಮ ನನ್ನನ್ನು ಬಹಳ ಇಂಪ್ರೆಸ್ ಮಾಡಿದ್ದವು. ಬಿಜೆಪಿಯ ರಾಷ್ಟ್ರೀಯ ಖಜಾಂಚಿಯಾಗಿದ್ದ ಪಿಯೂಷ್ ಗೋಯೆಲ್, ಈಗವರು ಕ್ಯಾಬಿನೆಟ್ ಸಚಿವರು. ಅವರಿಗಷ್ಟೇ ಬಿಜೆಪಿ 265ಕ್ಕಿಂತ ಹೆಚ್ಚು ಸ್ಥಾನಗಳಲ್ಲಿ ಗೆಲುವು ದಾಖಲಿಸುವ ವಿಶ್ವಾಸವಿತ್ತು. ನನಗೆ ಇರಲಿಲ್ಲ. ಅವರ ಆಶಾವಾದಕ್ಕೆ ಕಾರಣಗಳು ಕಾಣಲಿಲ್ಲ ನನಗೆ. ಆದಾಗ್ಯೂ, ಅವರು ನನಗೆ ಮೋದಿಯವರ ಪ್ರಚಾರ ಸಮಯಸಾರಿಣಿ ಕೊಟ್ಟಾಗ ಅವರ ವಿಶ್ವಾಸವನ್ನು ಗಂಭೀರವಾಗಿ ಪರಿಗಣಿಸಬೇಕಾಯಿತು. ಮೋದಿಯವರ ಶ್ರಮ ಅಷ್ಟಿತ್ತು ಅಲ್ಲಿ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve − eight =
Remember me
