|ರಾಘವ ಶರ್ಮ ನಿಡ್ಲೆ,ನವದೆಹಲಿ
ಕಾಂಗ್ರೆಸ್ ಜತೆಗಿನ ಮಾತುಕತೆಗಳು ವಿಫಲಗೊಂಡ ಬಳಿಕ ಸ್ವತಂತ್ರ ಸಂಘಟನೆಯೊಂದಿಗೆ ರಾಜಕೀಯ ಅಖಾಡಕ್ಕೆ ಧುಮುಕುವ ಸುಳಿವನ್ನು ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ (ಪಿಕೆ) ನೀಡಿದ್ದಾರೆ. ರಾಜಕೀಯ ಪ್ರವೇಶದ ಪರೋಕ್ಷ ಸುಳಿವು ಸಹಜವಾಗಿಯೇ ಕುತೂಹಲ ಸೃಷ್ಟಿಸಿದೆ. ‘ಪ್ರಜಾಪ್ರಭುತ್ವದಲ್ಲಿ ಅರ್ಥಪೂರ್ಣ ಪಾಲ್ಗೊಳ್ಳುವಿಕೆ ಮತ್ತು ಜನಪರ ನೀತಿಯನ್ನು ರೂಪಿಸಲು ನೆರವಾದ ನನ್ನ ಶೋಧನಾತ್ಮಕ ನಡೆ 10 ವರ್ಷಗಳ ಅಭೂತಪೂರ್ವ ಪ್ರಯಾಣಕ್ಕೆ ಕಾರಣವಾಯಿತು. ಜೀವನದ ಪುಟ ತಿರುಗಿಸುವ ಈ ಹೊತ್ತಿನಲ್ಲಿ, ಉತ್ತಮ ಆಡಳಿತ ಮತ್ತು ಸಮಸ್ಯೆಗಳನ್ನು ಆಳವಾಗಿ ಅರ್ಥಮಾಡಿಕೊಳ್ಳಲು ಪ್ರಜಾಪ್ರಭುತ್ವದ ರಿಯಲ್ ಮಾಸ್ಟರ್​ಗಳ (ಜನರು) ಬಳಿ ತೆರಳುವ ಸಮಯ ಬಂದಿದೆ. ಬಿಹಾರದಿಂದಲೇ ಅದು ಆರಂಭವಾಗಲಿದೆ’ ಎಂದು ಪಿಕೆ ಟ್ವೀಟ್ ಮಾಡಿದ್ದಾರೆ.
ಪ್ರತ್ಯೇಕ ರಾಜಕೀಯ ಪಕ್ಷ ಸ್ಥಾಪನೆ ಅಥವಾ ಯಾವುದಾದರೂ ಪಕ್ಷ ಸೇರುವ ಬಗ್ಗೆ ವಿವರಣೆ ನೀಡದಿದ್ದರೂ, ಬಿಹಾರದಿಂದ ರಾಜಕೀಯ ಪಯಣ ಆರಂಭಿಸುವ ಸುಳಿವನ್ನಂತೂ ಅವರನ್ನು ನೀಡಿದ್ದಾರೆ. ಅಲ್ಲದೆ, ಅದು ಬಿಹಾರಕ್ಕೆ ಸೀಮಿತವಾಗಿಲ್ಲ ಎನ್ನುವುದನ್ನೂ ಪರೋಕ್ಷವಾಗಿ ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಪಿಕೆ ಪತ್ರಿಕಾಗೋಷ್ಠಿ ಮೂಲಕ ವಿವರ ನೀಡುವ ನಿರೀಕ್ಷೆಯಿದೆ.
ಬಿಹಾರವೇ ಏಕೆ?:ಪ್ರಶಾಂತ್ ಕಿಶೋರ್ ಬಿಹಾರದ ರೋಹ್ತಾಸ್ ಜಿಲ್ಲೆಯ ಸಾಸಾರಾಮ್ ಲೋಕಸಭೆ ಕ್ಷೇತ್ರ ವ್ಯಾಪ್ತಿಯ ಕೊರಾನ್ ಎಂಬ ಹಳ್ಳಿಯಲ್ಲಿ ಜನಿಸಿದ್ದರು. ತಂದೆ ಡಾ. ಶ್ರೀಕಾಂತ್ ಪಾಂಡೆ ಬಿಹಾರದ ಬಕ್ಸಾರ್​ಗೆ ತೆರಳಿದ್ದರಿಂದ ಅಲ್ಲಿ ಪ್ರೌಢ ಶಿಕ್ಷಣ ಪೂರ್ಣಗೊಳಿಸಿದ್ದರು. 2014ರ ಲೋಕಸಭೆ ಚುನಾವಣೆಗೆ ಬಿಜೆಪಿಯ ರಣನೀತಿಕಾರನಾಗಿ ಕಾರ್ಯನಿರ್ವಹಿಸಿದ್ದ ಪಿಕೆ 2015ರ ವಿಧಾನಸಭೆ ಚುನಾವಣೆಯಲ್ಲಿ ಜೆಡಿಯು ನಾಯಕ ನಿತೀಶ್ ಕುಮಾರ್ ಪರ ತಂತ್ರಗಾರಿಕೆ ರೂಪಿಸಿದರು. ಜೆಡಿಯು ಉಪಾಧ್ಯಕ್ಷರಾಗಿ ನೇಮಕಗೊಂಡರೂ, ನಿತೀಶ್ ಜತೆಗಿನ ಭಿನ್ನಾಭಿಪ್ರಾಯಗಳಿಂದಾಗಿ ಪಕ್ಷ ತೊರೆದರು. ನಂತರ ಆಮ್ ಆದ್ಮಿ ಪಾರ್ಟಿ, ಪಂಜಾಬ್​ನಲ್ಲಿ ಕಾಂಗ್ರೆಸ್, ಆಂಧ್ರದಲ್ಲಿ ವೈಎಸ್​ಆರ್, ಬಂಗಾಳದಲ್ಲಿ ಟಿಎಂಸಿ ಸೇರಿ ಹಲವು ಪಕ್ಷಗಳಿಗೆ ಚುನಾವಣಾ ತಂತ್ರಗಾರಿಕೆ ರೂಪಿಸಿ ಆ ಪಕ್ಷಗಳ ಗೆಲುವಿನಲ್ಲಿ ಸಾಥಿಯಾಗಿದ್ದಾರೆ. ಸದ್ಯ ಬಿಹಾರದಲ್ಲಿ ಬಿಜೆಪಿ, ಜೆಡಿಯು ಮತ್ತು ಆರ್​ಜೆಡಿ ಪ್ರಾಬಲ್ಯ ಸಾಧಿಸಿದ್ದರೂ, ನಾಲ್ಕನೇ ರಂಗದ ಮೂಲಕ ದೇಶದಲ್ಲಿ ರಾಜಕೀಯ ನೆಲೆ ಸ್ಥಾಪಿಸಲು ಪಿಕೆ ಚಿಂತನೆ ನಡೆಸಿದಂತಿದೆ. ಮಾತೃರಾಜ್ಯದಿಂದಲೇ ರಾಜಕಾರಣ ಆರಂಭಿಸಬೇಕು ಎನ್ನುವುದು ಭಾವನಾತ್ಮಕ ನಿರ್ಧಾರವೂ ಆಗಿರಬಹುದು.
ರಾಷ್ಟ್ರ ರಾಜಕಾರಣ ಗುರಿ?ಭವಿಷ್ಯದ ರಾಜಕೀಯ ನಡೆಯನ್ನು ಬಿಹಾರದಿಂದಲೇ ಶುರು ಮಾಡುತ್ತೇನೆ ಎಂದಿರುವ ಪಿಕೆ ರಾಷ್ಟ್ರ ರಾಜಕಾರಣವನ್ನು ಗುರಿ ಮಾಡಿಕೊಂಡಂತಿದೆ. ತಮ್ಮದೇ ಸಂಘಟನೆಯೊಂದನ್ನು ಸ್ಥಾಪಿಸಿ, ಬಿಜೆಪಿ-ವಿರೋಧಿ ಮೈತ್ರಿಕೂಟದ ರಚನೆಗೆ ವೇದಿಕೆ ನಿರ್ಮಾಣ ಮಾಡುವ ಉದ್ದೇಶವೂ ಅವರಲ್ಲಿದ್ದಂತಿದೆ. 2024ರ ಲೋಕಸಭೆ ಚುನಾವಣೆಗೆ ಆಡಳಿತಾರೂಢ ಬಿಜೆಪಿಯನ್ನು ಎದುರಿಸಲು ವಿಪಕ್ಷಗಳ ರಣನೀತಿ ಹೇಗಿರಬೇಕು ಎಂಬ ಬಗ್ಗೆ ಪಿಕೆ ಈಗಾಗಲೇ ಕಾಂಗ್ರೆಸ್, ಎನ್​ಸಿಪಿ, ಟಿಆರ್​ಎಸ್, ವೈಎಸ್​ಆರ್, ಟಿಎಂಸಿ ನಾಯಕರೊಂದಿಗೆ ಚರ್ಚೆ ನಡೆಸಿದ್ದಾರೆ. ಪ್ರಬಲ ಪ್ರತಿಸ್ಪರ್ಧಿಯಾಗುವ ಶಕ್ತಿ ಕಾಂಗ್ರೆಸ್​ನಲ್ಲಿ ಸದ್ಯಕ್ಕೆ ಕಾಣುತ್ತಿಲ್ಲ. ಹೀಗಾಗಿ, ಬಿಜೆಪಿಗೆ ಲಗಾಮು ಹಾಕಬೇಕೆಂದರೆ, ಪ್ರಾದೇಶಿಕ ಶಕ್ತಿಗಳು ಒಗ್ಗೂಡಬೇಕು. ರಾಜಕೀಯಕ್ಕೆ ಅಧಿಕೃತವಾಗಿ ಸೇರಿಕೊಂಡು, ಆ ಮೂಲಕ ತಮ್ಮೊಂದಿಗೆ ಕೈಜೋಡಿಸುವ ಸಲಹೆಯನ್ನೂ ಪ್ರಾದೇಶಿಕ ನಾಯಕರು ನೀಡಿರಬಹುದು ಎಂಬ ಮಾತುಗಳೂ ಕೇಳಿಬಂದಿವೆ.
ಮುಳ್ಳಿನ ಹಾದಿ:ಬಿಹಾರದಲ್ಲಿ ಪಿಕೆಗೆ ಹಾದಿ ಸುಲಭದ್ದೇನಲ್ಲ. ಕಳೆದ 32 ವರ್ಷಗಳಿಂದ ಲಾಲು ಯಾದವ್ ಮತ್ತು ನಿತಿಶ್ ಕುಮಾರ್ ಸ್ಥಾಪಿಸಿರುವ ಅಧಿಪತ್ಯವನ್ನು ಮೀರಿ ಹೊಸ ಮಾದರಿಯ ರಾಜಕಾರಣಕ್ಕೆ ಪಿಕೆ ಮುಂದಾದರೂ, ಅದನ್ನು ಮತದಾರ ಸ್ವೀಕರಿಸುತ್ತಾನೆಯೇ ಎನ್ನುವುದು ಯಕ್ಷಪ್ರಶ್ನೆ. ಇದುವರೆಗೆ ರಾಜಕಾರಣದಿಂದ ಹೊರ ನಿಂತು ತಂತ್ರಗಾರಿಕೆಗಳನ್ನು ರೂಪಿಸುತ್ತಿದ್ದವರು ಈಗ ರಾಜಕಾರಣದ ಒಳಪ್ರವೇಶಿಸಿ ಪಳಗಿರುವ ಆಟಗಾರರನ್ನು ನೇರವಾಗಿ ಎದುರಿಸಬೇಕು. ಮೇಲಾಗಿ, ಬ್ರಾಹ್ಮಣ ಸಮುದಾಯಕ್ಕೆ ಸೇರಿರುವ ಪಿಕೆಯನ್ನು ಬಿಹಾರದ ಹಿಂದುಳಿದ, ಅಲ್ಪಸಂಖ್ಯಾತ ವರ್ಗದವರು ಒಪ್ಪಬಹುದೇ ಎಂಬ ಬಗ್ಗೆ ಖಾತರಿಯಿಲ್ಲ. ಕಳೆದ ಚುನಾವಣೆಯಲ್ಲಿ ಆರ್​ಜೆಡಿ ಯುವ ನಾಯಕ, ಯಾದವ ಸಮುದಾಯದ ತೇಜಸ್ವಿ ಯಾದವ್ ಏಕಾಂಗಿ ಹೋರಾಟದ ಮೂಲಕ ಹೆಚ್ಚು ಕ್ಷೇತ್ರಗಳನ್ನು ಗೆದ್ದು ಗಮನಸೆಳೆದಿದ್ದರು. ಭೂಮಿಹಾರ್ ಸಮುದಾಯದ ಕನ್ಹಯ್ಯ ಕುಮಾರ್ ಕಾಂಗ್ರೆಸ್ ಸೇರಿ ರಾಜ್ಯ ಕಾಂಗ್ರೆಸ್​ನ ಪ್ರಮುಖ ನಾಯಕರಾಗಲು ಯತ್ನಿಸಿದ್ದಾರೆ. ಬಿಜೆಪಿಯಲ್ಲಿಯೂ ಪ್ರಬಲ ನಾಯಕರಿದ್ದಾರೆ. ಜತೆಗೆ, ಬಿಹಾರದಲ್ಲಿ ಜಾತಿ ರಾಜಕಾರಣ ಪರಾಕಾಷ್ಠೆಯಲ್ಲಿದೆ; ಬಹುತೇಕ ಮತದಾರರು ಕೂಡ ಜಾತಿ ಲೆಕ್ಕಾಚಾರ ಹಾಕಿಯೇ ವೋಟು ಹಾಕುತ್ತಾರೆ. ಪ್ರಶಾಂತ್ ಕಿಶೋರ್​ಗೆ ಈ ಸವಾಲುಗಳನ್ನು ಮೀರಿ ನಿಲ್ಲುವ ಶಕ್ತಿ ಇದೆಯೇ ಎನ್ನುವುದಕ್ಕೆ ಕಾಲವೇ ಉತ್ತರಿಸಲಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten + four =
Remember me
