ಆಂಗ್ಲ ಕ್ಯಾಲೆಂಡರ್ ಪ್ರಕಾರ ಹೊಸ ವರ್ಷ ಆರಂಭವಾಗಿದೆ. 2024ನೇ ಸಾಲಿನಲ್ಲಿ ಸಂಭವಿಸಬಹುದಾದ ನೈಸರ್ಗಿಕ ವಿಪತ್ತುಗಳು, ಅಪಘಾತಗಳು, ರೋಗೋತ್ಪತ್ತಿಗಳು, ಭಯೋತ್ಪಾದಕ ದಾಳಿ, ಯುದ್ಧಗಳು, ಧಾರ್ವಿುಕ ಧ್ರುವೀಕರಣಗಳು, ಭೂಕಂಪಗಳು, ರಾಷ್ಟ್ರ ಮತ್ತು ರಾಜ್ಯ ರಾಜಕೀಯ ಬೆಳವಣಿಗೆಗಳನ್ನು ಜ್ಯೋತಿಷ ರೀತ್ಯಾ ಸಂಕ್ಷಿಪ್ತವಾಗಿ ಕಟ್ಟಿಕೊಡುವ ಪ್ರಯತ್ನ ಮಾಡಲಾಗಿದೆ.
ಫಲಾಫಲಗಳನ್ನು ವಿಶ್ಲೇಷಿಸಲು ಇಲ್ಲಿ 2024ನೇ ಸಾಲಿನ ಎರಡು ಸಂವತ್ಸರಗಳ, ಅಂದರೆ ಶ್ರೀ ಶೋಭಕೃತ್​ನಾಮ ಸಂವತ್ಸರ (ಏಪ್ರಿಲ್ 8, 2024ರವರೆಗೆ) ಹಾಗೂ ಶ್ರೀ ಕ್ರೋಧಿನಾಮ ಸಂವತ್ಸರ (ಚಾಂದ್ರಮಾನ ಯುಗಾದಿಯಿಂದ ಮುಂದಿನ 2025ರ ಯುಗಾದಿಯವರೆಗೆ) ಕಾಲಗಣನೆಯನ್ನು ಪರಿಗಣಿಸಲಾಗಿದೆ. ನೂತನ ವರ್ಷವು ಸೋಮವಾರ, ಪಂಚಮಿ ತಿಥಿ, ಮಘಾ ನಕ್ಷತ್ರ, ಆಯುಷ್ಮಾನ್ ಯೋಗ ತೈತಲೆ ಕರಣದಿಂದ ಪ್ರಾರಂಭವಾಗುವುದರಿಂದ ಆ ದಿನದ (ಜನವರಿ 1) ಚಂದ್ರನಿಗೆ ಗುರು-ಶನಿ ದೃಷ್ಟಿ ಇರುವುದರಿಂದ ಧರ್ಮ-ಕರ್ವಧಿಪತಿಯರ ಯೋಗ ಉಂಟಾಗಿ ನಮ್ಮ ರಾಷ್ಟ್ರವು ಧರ್ಮ-ಕರ್ಮಗಳ ಅನುಷ್ಠಾನದಲ್ಲಿ ಪ್ರಗತಿ ಹೊಂದುತ್ತದೆ.
ಭೂಮಾತೆಯ ಅನುಗ್ರಹ ದೊರೆತು ನಮ್ಮ ರಾಷ್ಟ್ರದಲ್ಲಿ ಆಹಾರದ ಕೊರತೆ ಇರುವುದಿಲ್ಲ. ಹಸಿವುಮುಕ್ತ ಭಾರತ ನಿರ್ಮಾಣ ಮಂದಗತಿಯಲ್ಲಿ ಸಾಗಿ ಗುರಿ ತಲುಪುತ್ತದೆ. ಆಧ್ಯಾತ್ಮಿಕ ಶಕ್ತಿ ಕೇತು ಗ್ರಹದಿಂದ ಬಲಗೊಳ್ಳುತ್ತದೆ. ನಮ್ಮ ಆಧ್ಯಾತ್ಮಿಕ ಶಕ್ತಿಯನ್ನು ವಿಶ್ವದ ಅನೇಕ ದೇಶಗಳು ಅನುಸರಿಸಲು ಮುಂದಾಗುತ್ತವೆ.
ದೇಶದ ಆರ್ಥಿಕತೆ ಬಲಗೊಳ್ಳುತ್ತದೆ. ಜ್ಞಾನ ಮತ್ತು ವಿದ್ಯಾ ಕ್ಷೇತ್ರದಲ್ಲಿ ಬಹುಸಾಧನೆಯಾಗುವ ನಿರೀಕ್ಷೆಯಿದೆ. ಅತಿ ದೊಡ್ಡ ಸಿನಿಮಾ ನಟರು ರಾಜಕೀಯ ಪ್ರವೇಶಿಸಿ ಸುದ್ದಿ ಮಾಡುತ್ತಾರೆ. ರಾಷ್ಟ್ರವನ್ನು ಮುನ್ನಡೆಸುವ ರಾಜನಿಗೆ ರಾಷ್ಟ್ರದ ಒಳಗೆ ಹಾಗೂ ಹೊರಗೆ ಕಷ್ಟಗಳು ಉಂಟಾಗುವ ಸಾಧ್ಯತೆಯಿದೆ. ಚುನಾವಣೆಯಲ್ಲಿ ಗೆಲುವು ಸಿಕ್ಕರೂ ಹಿಂದಿನಷ್ಟು ದೊಡ್ಡ ಗೆಲುವು ಕಷ್ಟ ಸಾಧ್ಯ. ಅಲ್ಲದೇ ಮಧ್ಯಂತರದಲ್ಲಿ ಆಧ್ಯಾತ್ಮಿಕ ಕಾರಣಕ್ಕೆ ನೇತೃತ್ವದ ಹಸ್ತಾಂತರವಾಗುವ ಲಕ್ಷಣ ಕಾಣಿಸುತ್ತಿವೆ.
ಭಾರತವು ತನ್ನ ಪ್ರಗತಿಪಥದಲ್ಲಿ ಸಾಗುತ್ತದೆ. ವಿಶ್ವ ನಾಯಕತ್ವ ಹಾಗೂ ಹಿಂದುತ್ವದ ಸಂದೇಶಗಳು ವಿಶ್ವದಲ್ಲಿ ದೊಡ್ಡ ಮಟ್ಟಿಗೆ ತಲುಪುತ್ತವೆ. ನಮ್ಮ ಪೂರ್ವಜರ ಮಹತ್ವಾಕಾಂಕ್ಷೆ ರಾಮ ರಾಜ್ಯದ ಪರಿಕಲ್ಪನೆ ಶ್ರೀರಾಮ ಮಂದಿರದ ಉದ್ಘಾಟನೆಯಿಂದ ಪ್ರಾರಂಭವಾಗುತ್ತದೆ. ಆದರೆ ರಾಮರಾಜ್ಯ ನಿರ್ವಣದಲ್ಲಿ ಅನೇಕ ಶತ್ರುಗಳ ಕಾಟದಿಂದ ನರಳಿದರೂ ಆಧ್ಯಾತ್ಮಿಕ ನಾಯಕರು ದೇಶವನ್ನು ಮುನ್ನಡೆಸುವಲ್ಲಿ ಎದೆಗುಂದುವುದಿಲ್ಲ್ಲ ದೇಶವು ಇತರ ದೇಶಗಳೊಂದಿಗೆ ಇನ್ನಷ್ಟು ಉತ್ತಮ ಬಾಂಧವ್ಯ ಹೊಂದುತ್ತದೆ. ಇಷ್ಟೆಲ್ಲದರ ನಡುವೆಯೂ ನಮ್ಮ ರಾಷ್ಟ್ರಧ್ವಜವು ಅರ್ಧಕ್ಕೆ ಇಳಿದು ಹಾರಾಡುವ ಸ್ಥಿತಿಯನ್ನು ಜನತೆ ನೋಡುವ ಸಾಧ್ಯತೆಯಿದೆ.
ಯುದ್ಧೋನ್ಮಾದಶನಿ ಮೀನರಾಶಿಯಲ್ಲಿ ರಾಹುವನ್ನು ಸಂರ್ಪಸುವಾಗ ಯುದ್ಧ ಭಯದ ವಾತಾವರಣ ಉಂಟಾಗುತ್ತದೆ. ಮುಸ್ಲಿಂ ರಾಷ್ಟ್ರಗಳಲ್ಲಿ ಬಹು ದೊಡ್ಡ ಸಮಸ್ಯೆಗಳು ಉಂಟಾಗುತ್ತವೆ. ಈ ರಾಷ್ಟ್ರಗಳಲ್ಲಿ ಎಂದೂ ಕಾಣದ ದೊಡ್ಡ ಮಳೆ ಸಾಧ್ಯತೆ ಹೆಚ್ಚು. ಒಂದೇ ಕಡೆ ಭೂಕಂಪನಗಳು ಮರುಕಳಿಸುವ ಸಾಧ್ಯತೆ ಹೆಚ್ಚು ಕಂಡುಬರುತ್ತದೆ. ಭಾರತ ದೇಶವು ದೈವ ಬಲದಿಂದ ಈ ಸಂಕಷ್ಟಗಳಿಂದ ಪಾರಾಗುತ್ತದೆ.
ವೈದ್ಯ ಕ್ಷೇತ್ರದಲ್ಲಿ ದೊಡ್ಡ ಬೆಳವಣಿಗೆಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನದ ಮುಖಾಂತರ ವೈದ್ಯಕೀಯ ಕ್ಷೇತ್ರದಲ್ಲಿ ಅನೇಕ ರೋಗಗಳಿಗೆ ಔಷಧಗಳನ್ನು ಕಂಡು ಹಿಡಿಯುವ ಸಾಧ್ಯತೆಗಳಿವೆ. ಕ್ಯಾನ್ಸರ್ ಗುಣಪಡಿಸುವ ಔಷಧ ಕಂಡು ಹಿಡಿಯುವರು. ಮೂತ್ರಪಿಂಡ, ಯಕೃತ್ತು, ಮೇದೋಜೀರಕ ಗ್ರಂಥಿ, ಹೃದಯ, ಶ್ವಾಸಕೋಶ ಈ ಅಂಗಗಳ ಅಂಗ ಬದಲಾವಣೆಯನ್ನು ತಡೆಯಲು ನೂತನ ತಾಂತ್ರಿಕ ಜ್ಞಾನ ಬಹು ದೊಡ್ಡ ಸಾಧನೆಯಾಗಿ ವಿಶ್ವವು ಸಂಭ್ರಮಿಸುವ ಸಾಧ್ಯತೆ ಹೆಚ್ಚು ಕಂಡುಬರುತ್ತದೆ. ಇದೇ ವೇಳೆ ಕಸದ ರಸದಿಂದ ವೈರಾಣು ಉಂಟಾಗಿ ಜನರ ಮತ್ತು ಪ್ರಾಣಿಗಳ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ. ಶನಿ-ರಾಹು ಸಂಬಂಧದಿಂದಾಗಿ, ಮಾಂಸಾಹಾರದಿಂದ ಉತ್ಪತ್ತಿ ಯಾಗುವ ಬ್ಯಾಕ್ಟೀರಿಯಾಗಳಿಂದ ಅಮೆರಿಕಾ ಹಾಗೂ ಮಧ್ಯ ಯುರೋಪ್ ರಾಷ್ಟ್ರಗಳ ಜನತೆಯು ಬಳಲುವ ಸಾಧ್ಯತೆಯಿದೆ.
ಅವಘಡಗಳು2024ರಲ್ಲಿ ವಿಶ್ವದ ವಿವಿಧ ಭಾಗಗಳಲ್ಲಿ ಬಹು ದೊಡ್ಡ ರೈಲು ಅಪಘಾತಗಳ ಸಾಧ್ಯತೆಗಳಿವೆ. ನೌಕಾಪಡೆಗೂ ಆಪತ್ತಿದೆ. ಭೂಪ್ರದೇಶದ ಬಹು ಭಾಗಗಳಲ್ಲಿ ವಿದ್ಯುತ್ ಗ್ರಿಡ್ ವೈಫಲ್ಯ ಉಂಟಾಗಿ ಕತ್ತಲು ಆವರಿಸುವ ಘಟನೆಗಳು ಏಷ್ಯಾದ ದಕ್ಷಿಣ-ಪೂರ್ವ ಭಾಗಗಳಲ್ಲಿ ಹೆಚ್ಚಾಗಿ ಸಂಭವಿಸುವ ಸಾಧ್ಯತೆಗಳಿವೆ. ಶನಿ ಕುಂಭ ರಾಶಿಯಲ್ಲಿ (ಕುಂಭ ವಾಯುತತ್ವ ರಾಶಿ) ಶತಭಿಷ ರಾಹು ನಕ್ಷತ್ರದಲ್ಲಿ ಸಂಚರಿಸುವಾಗ ಅಗ್ನಿ ಗ್ರಹ ಕುಜನು ಈ ರಾಶಿಯಲ್ಲಿ ಸಂಚರಿಸುವಾಗ 2024ರಲ್ಲಿ ಬಹು ದೊಡ್ಡ ವಿಮಾನ ಅಪಘಾತ ಸಂಭವಿಸುವ ಸಾಧ್ಯತೆಯಿದೆ.
ನೈಸರ್ಗಿಕ ವಿಪತ್ತುಗಳುರಾಹು ಗ್ರಹವು ಮೀನ ರಾಶಿಯಲ್ಲಿ ಚಲಿಸುತ್ತಿದೆ. ಈ ರಾಶಿಯು ಭೂಮಂಡಲದ ಸಮುದ್ರವನ್ನು ಪ್ರತಿನಿಧಿಸುತ್ತದೆ. ಆದುದರಿಂದ ಸಮುದ್ರದಲ್ಲಿ ಜಲಕಂಟಕಗಳು ಹೆಚ್ಚಾಗಿ ಕಂಡುಬಂದು ಅಲ್ಲಲ್ಲಿ ಸಮುದ್ರಗಳು ಉಕ್ಕುವ ಸಾಧ್ಯತೆ ಮತ್ತು ಸುನಾಮಿಗಳ ಬಗ್ಗೆ ಮುನ್ನೆಚ್ಚರಿಕೆ ವಹಿಸಬೇಕು. ನಮ್ಮದೇಶದಲ್ಲಿ ಪಶ್ಚಿಮ ಕರಾವಳಿ ಮತ್ತು ದಕ್ಷಿಣದ ರಾಜ್ಯಗಳು ಈ ಜಲಕಂಟಕದ ವಿಪತ್ತುಗಳನ್ನು ಹೆಚ್ಚಾಗಿ ಎದುರಿಸಬೇಕಾಗಿ ಬರಬಹುದು. ಭೂಮಂಡಲದ ಅನೇಕ ಭಾಗಗಳು ಜಲಪ್ರಳಯದಲ್ಲಿ ಮುಳುಗುವ ಸಾಧ್ಯತೆ ಇದೆ. ಸೈಕ್ಲೋನ್ ತರಹದ ಕಷ್ಟನಷ್ಟಗಳನ್ನು ಎದುರಿಸಬೇಕಾಗಬಹುದು. 2024ರಲ್ಲಿ ಭೂಮಂಡಲದ ಅನೇಕ ಭಾಗಗಳಲ್ಲಿ ಚಂಡಮಾರುತ ಬೀಸುವ ಸಾಧ್ಯತೆಗಳಿವೆ. ಅಕ್ಟೋಬರ್-ಸೆಪ್ಟೆಂಬರ್​ನಲ್ಲಿ ದೊಡ್ಡ ಮಟ್ಟದ ಸಮುದ್ರದ ಆಘಾತಗಳು ಭೂಮಿಯ ಹಲವು ಭಾಗಗಳಲ್ಲಿ ಸಂಭವಿಸುವ ಸಾಧ್ಯತೆಗಳಿವೆ.
ಭೂಮಿಯ ಹಲವು ಭಾಗಗಳಲ್ಲಿ ದೊಡ್ಡ ದೊಡ್ಡ ಸ್ಪೋಟಗಳು ಸಂಭವಿಸುವ ಸಾಧ್ಯತೆಗಳಿವೆ. ಅದೇ ರೀತಿ ಉತ್ತರ ಭಾರತದ ಪ್ರದೇಶಗಳು, ಹಿಮಾಲಯ, ಕಾಶ್ಮೀರ, ಉತ್ತರಾಖಂಡ, ಹಿಮಾಚಲಪ್ರದೇಶ, ನೇಪಾಳ, ಅಫ್ಘಾನಿಸ್ತಾನ, ಇರಾನ್ ಮುಂತಾದವು ಭೂಕಂಪನ ಪ್ರದೇಶಗಳು. ಚೈತ್ರ, ವೈಶಾಖ ಮಾಸದಲ್ಲಿ ಜಲಪ್ರವಾಹ, ಜ್ಯೇಷ್ಠ ಮಾಸದಲ್ಲಿ ಮಾರಣಾಂತಿಕ ರೋಗಗಳು ಉಂಟಾಗಬಹುದು.
ಧಾನ್ಯಗಳ ಬೆಲೆಗಳು ಹೆಚ್ಚಾಗಿ ಗಗನಕ್ಕೇರುತ್ತವೆ. ಶ್ರಾವಣ ಮಾಸದಲ್ಲಿ ಬರ ಪರಿಸ್ಥಿತಿ ಎದುರಿಸಬೇಕಾಗುತ್ತದೆ. ಮುಂಜಾಗ್ರತೆಯಾಗಿ ಕೆರೆ-ಬಾವಿಗಳ ಶುದ್ಧೀಕರಣ ಮಾಡಿದರೆ ಜನತೆ ಕುಡಿಯುವ ನೀರಿನ ಬಾಧೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗುತ್ತದೆ. ಕುಂಭ ರಾಶಿಯಲ್ಲಿ ಶನಿ ಸಂಚರಿಸುವಾಗ ಪರಿಸರದಲ್ಲಿ ಶುದ್ಧ ಗಾಳಿಯನ್ನು ಪಡೆಯಲು ಕ್ರಮ ವಹಿಸುವುದು ಸೂಕ್ತ (2026ರವರೆಗೆ ಈ ಸಮಸ್ಯೆ ಎದುರಾಗುತ್ತದೆ).
ಭಯೋತ್ಪಾದನೆ ಬಗ್ಗೆ ಇರಲಿ ಎಚ್ಚರಮಂಗಳ ಗ್ರಹವು ನೂತನ ಸಂವತ್ಸರದ ರಾಜನಾಗಿರುವುದರಿಂದ (ನೂತನ ಸಂವತ್ಸರವು ಮಂಗಳವಾರ ಉದಯಿಸುವುದರಿಂದ) ಭೂಮಂಡಲದ ಬಹು ಭಾಗದಲ್ಲಿ ಭಯೋತ್ಪಾದಕರ ಚಟುವಟಿಕೆ ಗಳು ಚುರುಕುಗೊಳ್ಳುತ್ತವೆ. ಯೂರೋಪ್- ಭಾರತ- ದಕ್ಷಿಣ- ಪೂರ್ವ ಏಷ್ಯಾ- ಮಧ್ಯಪೂರ್ವ ಪ್ರದೇಶಗಳು ಹಾಗೂ ಸಿರಿಯಾ, ಲೆಬನಾನ್, ಜೋರ್ಡಾನ್ ಈ ಪ್ರದೇಶಗಳು ಭಯೋತ್ಪಾದನೆಯ ಮುಖ್ಯ ಕೇಂದ್ರ ಬಿಂದುಗಳಾಗುವ ಸಾಧ್ಯತೆಗಳಿವೆ. ಫ್ರಾನ್ಸ್ ದೇಶದಲ್ಲಿ ಗುಂಪುಗಲಭೆಗಳು ಮರುಕಳಿಸುವ ಸಾಧ್ಯತೆಗಳು ಹೆಚ್ಚು ಕಂಡು ಬರುತ್ತವೆ. ಮುಸ್ಲಿಂ ರಾಷ್ಟ್ರಗಳಲ್ಲಿ ಹೆಚ್ಚು ಯುದ್ಧಗಳು ಸಂಭವಿಸುವ ಸಾಧ್ಯತೆಯಿದೆ. ಮೇವರೆಗೂ ಪ್ರಸ್ತುತ ನಡೆಯು ತ್ತಿರುವ ಯುದ್ಧಗಳು ಮುಂದುವರಿಯುತ್ತವೆ. ಈ ಸಾಲಿನಲ್ಲಿ ಒಂದು ದೇಶವು ಸಂಪೂರ್ಣ ನಾಶ ಹೊಂದುವ ಸಾಧ್ಯತೆಗಳಿವೆ. ಜಪಾನ್, ಚೀನಾ ಪ್ರದೇಶಗಳಲ್ಲಿ ಯುದ್ಧ ಭೀತಿಯುಂಟಾಗುತ್ತದೆ.
ಗ್ರಹಣ ವಿಚಾರಭೂಮಂಡಲದಲ್ಲಿ ಜರುಗುವ ಶುಭ-ಅಶುಭ ಫಲಗಳು ಆ ಸಂವತ್ಸರದಲ್ಲಿ ಜರುಗುವ ಸೂರ್ಯ-ಚಂದ್ರ ಗ್ರಹಣಗಳಿಂದ ವಿಶ್ಲೇಷಿಸುವ ಸೂತ್ರಗಳನ್ನು ನಮ್ಮ ಋಷಿಮುನಿಗಳು ವಿವರಿಸಿದ್ದಾರೆ. ಪ್ರಸಕ್ತ ಸಾಲಿನಲ್ಲಿ ನಾಲ್ಕು ಗ್ರಹಣಗಳು ಸಂಭವಿಸುತ್ತವೆ.
1. ಸೂರ್ಯ ಗ್ರಹಣ : 08.04.2024
2. ಸೂರ್ಯ ಗ್ರಹಣ : 02.10.2024
3. ಚಂದ್ರ ಗ್ರಹಣ : 25.03.2024
4. ಚಂದ್ರ ಗ್ರಹಣ : 18.09.2024
ಈ ಸೂರ್ಯ-ಚಂದ್ರ ಗ್ರಹಣಗಳು ಭಾರತದಲ್ಲಿ ಗೋಚರಿಸುವುದಿಲ್ಲ.
ಭೂಕಂಪತಮಿಳುನಾಡು-ಕರ್ನಾಟಕದಲ್ಲಿ ಭೂಕಂಪ ಸಂಭವಿಸುವ ಸಾಧ್ಯತೆಯಿದೆ. ಉತ್ತರ ಭಾರತದ ಪ್ರದೇಶಗಳು, ಹಿಮಾಲಯ, ಕಾಶ್ಮೀರ, ಉತ್ತರಾಖಂಡ, ಹಿಮಾಚಲಪ್ರದೇಶ ಇತ್ಯಾದಿ ಭೂಕಂಪನ ಪ್ರದೇಶಗಳು.
ಸಾಮಾನ್ಯ ಫಲಗಳುಜನತೆಯು ಕೋಪ, ಕ್ರೋಧ, ಆಸೆ-ಆಕಾಂಕ್ಷೆ, ಸ್ವಾರ್ಥ ಮನೋಭಾವ ಪ್ರದರ್ಶಿಸುತ್ತಾರೆ. ಮಳೆ ಮತ್ತು ಬೆಳೆಗಳ ಅಭಾವ ಉಂಟಾಗುತ್ತದೆ. ಯುವ ರಾಜಕಾರಣಿಗಳಿಗೆ, ಬೃಹತ್ ಕೈಗಾರಿಕೋದ್ಯಮಿಗಳಿಗೆ, ಸಮಾಜ ಸೇವಕರಿಗೆ, ಮಠಾಧಿಪತಿಗಳಿಗೆ ಈ ಸಾಲಿನಲ್ಲಿ ಅಶುಭ ಫಲ ಹಾಗೂ ಅಧ್ಯಾತ್ಮ ಬೋಧಕರ ಕ್ಷೇತ್ರದಲ್ಲಿರುವವರು ಹೆಚ್ಚಾಗಿ ಸುದ್ದಿಯಲ್ಲಿರುತ್ತಾರೆ. ಪ್ರಮುಖ ರಾಷ್ಟ್ರದ ಅಧ್ಯಕ್ಷರಿಗೆ, ಜನನಾಯಕರಿಗೆ ತೊಂದರೆ ಎದುರಾಗಬಹುದು, ಆ ದೇಶದಲ್ಲಿ ಧಾರ್ವಿುಕ ಸಂಘರ್ಷ, ಐಟಿ ಕ್ಷೇತ್ರದಲ್ಲಿ ಅನೇಕ ಸಮಸ್ಯೆಗಳು ಉದ್ಭವಿಸುತ್ತವೆ. ಸ್ತ್ರೀಯರಿಗೆ ಹೆಚ್ಚು ಅಭಿವೃದ್ಧಿ ಕಾಣಲಿದ್ದು, ರಾಜಕೀಯದಲ್ಲಿ ಸ್ತ್ರೀಯರು ಉನ್ನತ ಹುದ್ದೆಗಳನ್ನು ಅಲಂಕರಿಸುತ್ತಾರೆ. ಈ ಸಾಲಿನಲ್ಲಿ ಭೂಮಿಯ ಬೆಲೆ, ಮೂಲಸೌಕರ್ಯ ಕ್ಷೇತ್ರ ಬಹು ದೊಡ್ಡ ಪ್ರಮಾಣದಲ್ಲಿ ಅಭಿವೃದ್ಧಿ ಹೊಂದುತ್ತವೆ. ಹೊಸ, ಹೊಸ ಹಣದ ಹೂಡಿಕೆಯಲ್ಲಿ ಜಾಗೃತರಾಗಿರಬೇಕು. ಮೋಸ ಹೋಗುವ ಸಾಧ್ಯತೆ ಹೆಚ್ಚು ಕಂಡುಬರುತ್ತದೆ. ಚಿನ್ನದ ಮೇಲಿನ ಹೂಡಿಕೆಗಳಿಗೆ ಭದ್ರತೆ ಇರುತ್ತದೆ. ಮಿಲಿಟರಿ, ಪೊಲೀಸ್ ಕ್ಷೇತ್ರದಲ್ಲಿ ಅತಿ ಹೆಚ್ಚಿನ ತಾಂತ್ರಿಕ ಜ್ಞಾನ ಅಳವಡಿಸಿ ಬಹುದೊಡ್ಡ ಸಾಧನೆಯತ್ತ ಜಗವು ಸಾಗುತ್ತದೆ. ಧಾರ್ವಿುಕ ಧ್ರುವೀಕರಣದ ವಿಷಯಗಳಲ್ಲಿ ಭೂಮಂಡಲದ ದೇಶಗಳು 2 ಹೋಳಾಗಿ ತಮ್ಮ ತಮ್ಮ ಧಾರ್ವಿುಕ ಸತ್ವಗಳನ್ನು ಪ್ರದರ್ಶಿಸುತ್ತವೆ.
ರಾಜ್ಯದ ರಾಜಕೀಯ20.05.2023ರ ಶನಿವಾರ 12-50ರ ಸಿಂಹ ಲಗ್ನದ ಶುಭ ಮುಹೂರ್ತದಲ್ಲಿ ಕರ್ನಾಟಕ ಸರ್ಕಾರವು ಅಸ್ತಿತ್ವಕ್ಕೆ ಬಂದಿದೆ. 10.05.2024ರವರೆಗೆ ಚಂದ್ರ ದಶಾ- ಗುರು ಭುಕ್ತಿ ನಡೆಯುತ್ತಿದ್ದು ಈ ಅವಧಿಯಲ್ಲಿ ಸರ್ಕಾರವು ಅನೇಕ ದೊಡ್ಡ ಮೊಟ್ಟದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಫೆಬ್ರವರಿ 2024ರಿಂದ ಯುಗಾದಿಯವರೆಗೆ ಮತ್ತು ಮೇ, ಜೂನ್ ಅಂತ್ಯದವರೆಗೆ ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷಗಳಿಗೆ ಒಳ್ಳೆಯ ಸಮಯವಲ್ಲ. ಅನೇಕ ಆಂತರಿಕ ಭಿನ್ನಾಭಿಪ್ರಾಯಗಳು ಭುಗಿಲೆದ್ದು ಜನರ ನಿಂದನೆಗೆ ಒಳಪಡಬೇಕಾಗುತ್ತದೆ. ಮೇ ತಿಂಗಳ ನಂತರ ಗುರು ಗ್ರಹವು ವೃಷಭ ರಾಶಿಯನ್ನು ಪ್ರವೇಶಿಸಿ ನಂತರ ಸರ್ಕಾರದಲ್ಲಿ ಪ್ರಗತಿಪರ ಪರಿವರ್ತನೆ ಕಂಡು ಶ್ರೀ ಕ್ರೋಧಿನಾಮ ಸಂವತ್ಸರದ ಫಲಗಳನುಸಾರ ಸರ್ಕಾರವು ಆಮೆ ಹೆಜ್ಜೆಯಲ್ಲಿ ಮುನ್ನಡೆಯುವ ಸಾಧ್ಯತೆಗಳಿವೆ.
ಧಾರ್ವಿುಕ ಧ್ರುವೀಕರಣಈ ಸಾಲಿನಲ್ಲಿ ಪ್ರಪಂಚದಾದ್ಯಂತ ಧಾರ್ವಿುಕ ಧ್ರುವೀಕರಣ ನೂತನ ರೀತಿಯಲ್ಲಿ ಪ್ರಾರಂಭವಾಗಿ ಪಶ್ಚಿಮ ಯುರೋಪ್ ದೇಶಗಳಲ್ಲಿ ಭಯೋತ್ಪಾದಕರಿಂದ ಧಾರ್ವಿುಕ ಕಿರುಕುಳಗಳು ಸ್ಪೋಟಗೊಳ್ಳುತ್ತವೆ. ಭಾರತ ದೇಶವು ಸಹ ಇದರಿಂದ ಹೊರತಾಗಿರುವುದಿಲ್ಲ. ಧಾರ್ವಿುಕ ಗುಂಪುಗಳ ನಡುವೆ ಹೋರಾಟ, ಗುಂಪು ಗಲಾಟೆಗೆ ಕೇಂದ್ರ ಬಿಂದುವಾಗಿರುತ್ತದೆ.
ಲೇಖಕರು ಸಂಸ್ಥಾಪಕರು, ಆದಿತ್ಯ ಜೋತಿರ್ ವಿಜ್ಞಾನ ಶಾಲೆ, ಬೆಂಗಳೂರು
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × two =
Remember me
