ಭಾಗ-1
ನ್ಯೂಯಾರ್ಕ್​ನ ವಿಶ್ವ ವ್ಯಾಪಾರ ಕೇಂದ್ರ ಮತ್ತು ವಾಷಿಂಗ್ಟನ್​ನಲ್ಲಿನ ರಕ್ಷಣಾ ಇಲಾಖೆಯ ಕಚೇರಿ ಪೆಂಟಗನ್ ಮೇಲೆ ಅಲ್-ಖಯೀದಾ ಉಗ್ರರು ದಾಳಿಯೆಸಗಿ ಇನ್ನೆರಡು ತಿಂಗಳುಗಳಿಗೆ ಎರಡು ದಶಕಗಳಾಗಲಿವೆ (2001ರ ಸೆಪ್ಟೆಂಬರ್ 11ರಂದು ದಾಳಿ ನಡೆದಿತ್ತು). ಅಮೆರಿಕ ಒಂದು ಸ್ವತಂತ್ರ ರಾಷ್ಟ್ರವಾಗಿ ಇನ್ನೂ ಶೈಶವಾವಸ್ಥೆಯಲ್ಲಿದ್ದಾಗ ಆಗಿನ ಜಾಗತಿಕ ಸೂಪರ್​ಪವರ್ ಬ್ರಿಟನ್ 1812-16ರ ಯುದ್ಧದ ಸಮಯದಲ್ಲಿ ರಾಜಧಾನಿ ವಾಷಿಂಗ್ಟನ್ ಮೇಲೆ ಎರಗಿದ್ದನ್ನು ಹೊರತುಪಡಿಸಿದರೆ 9/11 ದಾಳಿಗಳು ಅಮೆರಿಕದ ನೆಲದ ಮೇಲೆ ಯಾವುದೇ ವಿದೇಶೀ ಶಕ್ತಿಯ ಮೊದಲ ದಾಳಿ. ಹಿಂದಿನ ಬಲಾಢ್ಯ ಶತ್ರುಗಳಾದ ಜರ್ಮನಿ, ಜಪಾನ್, ಸೋವಿಯತ್ ಯೂನಿಯನ್​ಗಳಿಗೂ ಸಾಧ್ಯವಾಗದ ಈ ಕೃತ್ಯವನ್ನು ಭಯೋತ್ಪಾದಕ ಸಂಘಟನೆಯೊಂದು ಎಸಗಿದಾಗ ಸಹಜವಾಗಿಯೇ ಆಘಾತ ಹಾಗೂ ಅವಮಾನದಿಂದ ಹುಚ್ಚೆದ್ದುಹೋದ ಈ ಸೂಪರ್​ಪವರ್ ಸೇಡಿಗಾಗಿ ಹಾತೊರೆಯಿತು. ಅಧ್ಯಕ್ಷ ಕಿರಿಯ ಜಾರ್ಜ್ ಬುಷ್ ‘ಭಯೋತ್ಪಾದನೆಯ ವಿರುದ್ಧ ಸಮರ’ ಘೊಷಿಸಿದರು. ಅಲ್-ಖಯೀದಾ ಉಗ್ರರನ್ನೂ, ಅವರಿಗೆ ಆಶ್ರಯ ನೀಡಿದ್ದ ತಾಲಿಬಾನ್ ಅನ್ನೂ ಶಿಕ್ಷಿಸಲು ಅಫ್ಘಾನಿಸ್ತಾನದ ಮೇಲೆ ಅಮೆರಿಕನ್ ರಕ್ಷಣಾಪಡೆಗಳು ಎರಗಿದವು. ಆಗ ಅಧ್ಯಕ್ಷ ಬುಷ್ ಘೊಷಿಸಿದ್ದು ಹೀಗೆ: ‘ತಾಲಿಬಾನ್ ಭಾರಿ ಬೆಲೆ ತೆರಲಿದೆ. ಅವರ ಶಿಬಿರಗಳನ್ನು ಹಾಳುಗೆಡಗಿ, ಅವರ ಸಂಪರ್ಕಜಾಲಗಳನ್ನು ಅಸ್ತವ್ಯಸ್ತಗೊಳಿಸುವ ಮೂಲಕ ಅವರು ತಮ್ಮ ಭಯೋತ್ಪಾದಕ ಕೃತ್ಯಗಳಿಗಾಗಿ ಹೊಸಬರನ್ನು ಸೇರಿಸಿಕೊಂಡು ತರಬೇತಿಗೊಳಿಸದಂತೆ ಮಾಡುತ್ತೇವೆ…’. ಈ ಮಾತುಗಳನ್ನು ಜಗತ್ತು ಕೇಳಿದ ನಂತರದ ಈ ಸರಿಸುಮಾರು ಇಪ್ಪತ್ತು ವರ್ಷಗಳಲ್ಲಿ ಅತ್ತ ಪೊಟೋಮಾಕ್ ನದಿಯಲ್ಲಿ, ಇತ್ತ ಕಾಬೂಲ್ ನದಿಯಲ್ಲಿ ಅದೆಷ್ಟು ನೀರು ಹರಿದುಹೋಗಿದೆ! ಅದರ ಅಂದಾಜು ಸಿಗಬೇಕಾದರೆ ಎರಡು ವಾರಗಳ ಹಿಂದೆ ಪತ್ರಿಕಾಗೋಷ್ಠಿಯೊಂದರಲ್ಲಿ ಹಾಲಿ ಅಧ್ಯಕ್ಷ ಜೋ ಬೈಡನ್ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತ ಅಲವತ್ತುಕೊಂಡ ಈ ಬಗೆಯನ್ನು ನೋಡಿ- ‘ನಾನು ಸಂತೋಷದ ಸುದ್ದಿಗಳ ಬಗ್ಗೆ ಮಾತಾಡಬಯಸುತ್ತೇನೆ ಕಣಪ್ಪ. ಅಫ್ಘಾನಿಸ್ತಾನದ ಬಗ್ಗೆ ಇನ್ನು ಯಾವ ಪ್ರಶ್ನೆಗೂ ನಾನು ಉತ್ತರಿಸಲು ಹೋಗಲಾರೆ.’
ಹೌದು, ಇಂದು ಅಫ್ಘಾನಿಸ್ತಾನದ ಬಗ್ಗೆ ಮಾತಾಡುವುದು ಅಮೆರಿಕದ ಅಧ್ಯಕ್ಷರಿಗೆ ಸಂತೋಷದ ವಿಷಯವೇನಲ್ಲ. ತಾಲಿಬಾನನ್ನು ಸೋಲಿಸುತ್ತೇವೆ ಎಂಬ ಹುಮ್ಮಸ್ಸಿನಲ್ಲಿ ಮಧ್ಯ ಏಷ್ಯಾದ ಪರ್ವತಮಯ ರಾಷ್ಟ್ರವನ್ನು ಪ್ರವೇಶಿಸಿದ ಅಮೆರಿಕನ್ ಸೇನೆ ಈಗ ಅಲ್ಲಿಂದ ಹೊರನಡೆಯುತ್ತಿದೆ. ಅದು ಹೀಗೆ ಮಾಡುತ್ತಿರುವುದು ತನ್ನ ಗುರಿಯನ್ನು ಸಾಧಿಸಿಯೇನಲ್ಲ, ಶತ್ರುವನ್ನು ಬಗ್ಗುಬಡಿದೇನಲ್ಲ. ಬದಲಾಗಿ, ‘ನನಗೆ ಸಾಕಾಗಿಹೋಗಿದೆ, ಇನ್ನು ನಾನು ಹೋರಾಡಲಾರೆ’ ಎಂಬ ಅಸಹಾಯಕತೆಯಲ್ಲಿ! ಇದಾದದ್ದು ಹೇಗೆ?
ಅಫ್ಘಾನಿಸ್ತಾನದಲ್ಲಿ ಅಮೆರಿಕನ್ ಸೇನೆ ವಿಫಲಗೊಂಡು ಹೊರನಡೆಯುತ್ತಿರುವುದಕ್ಕೆ, ಆ ದುರದೃಷ್ಟಶಾಲಿ ದೇಶ ಮತ್ತೊಮ್ಮೆ ಅನಾಗರಿಕ, ಕ್ರೂರ ಭಯೋತ್ಪಾದಕ ಸಂಘಟನೆಯ ಕಪಿಮುಷ್ಟಿಗೆ ಸಿಲುಕಿಹೋಗಲಿರುವುದಕ್ಕೆ ಒಂದು ನಿರ್ದಿಷ್ಟ ಕಾರಣವನ್ನು ಹುಡುಕಹೋದರೆ ನಮಗೆ ಕಾಣುವ ಕರಾಳ ಉತ್ತರ ಪಾಕಿಸ್ತಾನ ಎಂಬ ದೇಶ.
ಐತಿಹಾಸಿಕವಾಗಿ ಅಫ್ಘನ್ನರು ತಮ್ಮನ್ನು ತಾವು ಆಳಿಕೊಂಡಷ್ಟೇ ಸಹಜವಾಗಿ ವಿದೇಶೀಯರ ಆಡಳಿತಕ್ಕೂ ಒಡ್ಡಿಕೊಳ್ಳುತ್ತಿದ್ದರು. ಮೌರ್ಯರು, ಕುಶಾನರು, ಖಿಲ್ಜಿಗಳು, ಮೊಘಲರ ಕಾಲದಲ್ಲಿ ಆ ದೇಶ ಭಾರತೀಯ ಸಾಮ್ರಾಜ್ಯಗಳ ಭಾಗವಾದರೆ ಇನ್ನಿತರ ಕಾಲಘಟ್ಟಗಳಲ್ಲಿ ಮಂಗೋಲರು, ತುರ್ಕರು ಅಫ್ಘಾನಿಸ್ತಾನದಲ್ಲಿ ನೆಲೆಯೂರಿ, ಬಲಿಷ್ಠ ಸಾಮ್ರಾಜ್ಯಗಳನ್ನು ಕಟ್ಟಿ ಸುತ್ತಲ ನಾಡುಗಳ ಮೇಲೂ ಆಕ್ರಮಣವೆಸಗಿ ದಬ್ಬಾಳಿಕೆ ನಡೆಸಿದ್ದುಂಟು. ನಡುನಡುವೆ ಪಶ್ಚಿಮದ ಪರ್ಶಿಯನ್ನರು, ಉತ್ತರದ ಉಝೆ್ಬೕಗರು ಮತ್ತು ತಾಜಿಕರು ತಂತಮ್ಮ ಶಕ್ತಾ್ಯನುಸಾರ ಅಫ್ಘನ್ನರ ಮೇಲೆ ಅಧಿಕಾರ ಚಲಾಯಿಸಿದ್ದೂ ಉಂಟು. ಒಟ್ಟಿನಲ್ಲಿ ಅಫ್ಘಾನಿಸ್ತಾನ ಎಂದು ಕರೆಸಿಕೊಳ್ಳುವ ಭೂಪ್ರದೇಶ ಸುತ್ತಲ ಬೃಹತ್ ಸಾಮ್ರಾಜ್ಯಗಳ ನಡುವಿನ ಹಗ್ಗಜಗ್ಗಾಟದ ಕಣವಾದದ್ದೇ ಹೆಚ್ಚು. ಸುತ್ತಲ ಯಾರ ಕಾಟವೂ ಇಲ್ಲದಾಗ ಅಫ್ಘನ್ನರು ತಮ್ಮತಮ್ಮಲ್ಲೇ ಕಚ್ಚಾಡಿಕೊಳ್ಳುತ್ತಿದ್ದ ಸಣ್ಣಪುಟ್ಟ ರಾಜ್ಯಗಳಲ್ಲಿ ಹಂಚಿಹೋಗುತ್ತಿದ್ದರು. ಹೀಗೇಕೆಂದರೆ ‘ಅಫ್ಘನ್ನರು’ ಎಂಬ ಒಂದು ನಿರ್ದಿಷ್ಟ ಜನಾಂಗವೇ ಇಲ್ಲದಿರುವುದು. ಸುಮೇರಿಯನ್ ಮೂಲದ, ಎತ್ತರದ ಪ್ರದೇಶ ಎಂಬರ್ಥದ ‘ಅಬ್​ದಗಾನ್’ ಎಂಬ ಪದದಿಂದ ಬಂದಿರಬಹುದೆಂದು ಊಹಿಸಲಾಗಿರುವ ‘ಅಫ್ಘನ್’ ಎಂಬ ಹೆಸರು ಸೂಚಿಸುವ ಪ್ರದೇಶದಲ್ಲಿ ಐತಿಹಾಸಿಕ ಕಾಲದಿಂದಲೂ ವಾಸಿಸುತ್ತಿರುವುದು ದಕ್ಷಿಣದಲ್ಲಿ ಪಠಾಣರು (ಪಖ್ತೂನಿಗಳು), ಉತ್ತರದಲ್ಲಿ ಉಝೆ್ಬೕಗರು, ಪೂವೋತ್ತರದಲ್ಲಿ ತಾಜಿಕರು ಮತ್ತು ಪಶ್ಚಿಮದಲ್ಲಿ ಹಝಾರರು ಮತ್ತು ಒಂದಷ್ಟು ಪರ್ಶಿಯನ್ನರು. ಇವರೆಲ್ಲರನ್ನೂ ಒಟ್ಟುಗೂಡಿಸಿ ಈಗಿರುವ ಗಡಿಗಳೊಂದಿಗೆ ‘ಅಫ್ಘಾನಿಸ್ತಾನ’ ಎಂಬ ದೇಶವನ್ನು ಸೃಷ್ಟಿಸಿದ್ದು ಹತ್ತೊಂಬತ್ತನೇ ಶತಮಾನದ ಕೊನೆಯ ದಶಕದಲ್ಲಿ ಬ್ರಿಟಿಷರು ಮತ್ತು ರಷಿಯನ್ನರು, ತಂತಮ್ಮ ಸಾಮ್ರಾಜ್ಯಶಾಹಿ ಹಂಚಿಕೆಗಳಿಗನುಗುಣವಾಗಿ. ಆ ಸಮಯದಲ್ಲಿ ಝಾರಿಸ್ಟ್ ರಷಿಯನ್ ಸಾಮ್ರಾಜ್ಯ ಮತ್ತು ಭಾರತದಲ್ಲಿದ್ದ ಬ್ರಿಟಿಷ್ ವಸಾಹತುಶಾಹಿ ಸಾಮ್ರಾಜ್ಯಗಳ ಗಡಿಗಳು ಒಂದನ್ನೊಂದು ರ್ಸ³ಸುವ ಸ್ಥಿತಿ ನಿರ್ವಣವಾದಾಗ ಅದು ಯಾವುದೇ ಸಮಯದಲ್ಲಿ ತಮ್ಮ ನಡುವೆ ಘರ್ಷಣೆಗೆ ಕಾರಣವಾಗಬಹುದೆಂದು ಆತಂಕಗೊಂಡ ಆ ಎರಡು ಸಾಮ್ರಾಜ್ಯಗಳು ತಮ್ಮ ನಡುವೆ ಒಂದು ‘ಆfಛ್ಟಿ ಖಠಿಚಠಿಛಿ‘ (ಮೆತ್ತೆ ರಾಷ್ಟ್ರ) ಇರುವುದು ಅನುಕೂಲಕರ ಎಂದು ಭಾವಿಸಿ ಎರಡು ಒಪ್ಪಂದಗಳ ಮೂಲಕ ಈಗಿರುವ ಭೌಗೋಳಿಕ ವಿಸ್ತಾರದ ಅಫ್ಘಾನಿಸ್ತಾನವನ್ನು ಸೃಷ್ಟಿಸಿದವು. ಅಷ್ಟರಲ್ಲಾಗಲೇ ಪಖ್ತೂನಿಗಳ ದಕ್ಷಿಣದ ಬಹುತೇಕ ಪ್ರದೇಶಗಳನ್ನು ಬ್ರಿಟನ್ ಆಕ್ರಮಿಸಿಕೊಂಡು ಭಾರತಕ್ಕೆ ಸೇರಿಸಿಕೊಂಡಾಗಿತ್ತು. ಹೀಗಾಗಿಯೇ ಪಖ್ತೂನಿ ಪ್ರದೇಶದ ಸರಿಸುಮಾರು ನಡುಮಧ್ಯದಲ್ಲಿ ಹಾದುಹೋಗುವ ‘ಡ್ಯೂರಾಂಡ್’ ಗಡಿರೇಖೆಯನ್ನು ಅಫ್ಘಾನಿಸ್ತಾನದ ಸರ್ಕಾರಗಳು 1979ರವರೆಗೂ ಒಪ್ಪಿಕೊಂಡಿರಲಿಲ್ಲ.
ಅರ್ಧ ಶತಮಾನದವರೆಗೆ ನೆಮ್ಮದಿಯಾಗಿಯೇ ಇದ್ದ ಅಫ್ಘಾನಿಸ್ತಾನದ ದುರಂತ ಇತಿಹಾಸ ಆರಂಭವಾದದ್ದು ಅದರ ನೆರೆಯಲ್ಲಿ ಪಾಕಿಸ್ತಾನ ಸೃಷ್ಟಿಯಾದಾಗ. ಅಫ್ಘನ್ನರು ಮುಸ್ಲಿಮರಾಗಿರುವ ಕಾರಣಕ್ಕಾಗಿಯೇ ಆ ದೇಶ ಭಾರತದ ವಿರುದ್ಧದ ವೈರದಲ್ಲಿ ತಮ್ಮ ಪರವಾಗಿರಬೇಕು ಎಂದು ಮೊದಲಿಗೆ ಬಯಸಿದ ಪಾಕ್ ಆಳರಸರು ನಂತರ ಆ ದೇಶದ ನೆಲವೂ ಅಗತ್ಯ ಸನ್ನಿವೇಶಗಳಲ್ಲಿ ತಮ್ಮ ಉಪಯೋಗಕ್ಕಿರಬೇಕು ಎಂಬ ನಿಲುವು ತಳೆದರು. ಇದಕ್ಕಿದ್ದ ಕಾರಣ ಪಾಕಿಸ್ತಾನೀ ಸೇನಾಧಿಕಾರಿಗಳ ಪ್ರಳಯಾಂತಕ ಬುದ್ಧಿವಂತಿಕೆ. ಭಾರತದ ಸೇನೆಯೇನಾದರೂ ಪಾಕಿಸ್ತಾನ ಪ್ರವೇಶಿಸಿದರೆ ತಾವು ಅಫ್ಘಾನಿಸ್ತಾನದಲ್ಲಿ ನೆಲೆ ಗಳಿಸಿಕೊಂಡು, ಶಕ್ತಿವರ್ಧನೆ ಮಾಡಿಕೊಂಡು ಭಾರತದ ವಿರುದ್ಧ ಕಾದಾಡಬಹುದೆಂದು ಪಾಕ್ ಸೇನಾಧಿಕಾರಿಗಳು ಹಂಚಿಕೆ ಹೂಡಿದ್ದನ್ನು ರಕ್ಷಣಾ ವಿಶ್ಲೇಷಕರು ವರ್ಣಿಸುವುದು ಅಫ್ಘಾನಿಸ್ತಾನದಲ್ಲಿ ಪಾಕಿಸ್ತಾನ ‘ಖಠ್ಟಿಚಠಿಛಿಜಜ್ಚಿ ಈಛಿಟಠಿಜ‘ ಬಯಸಿತು ಎಂದು. ಇದನ್ನು ನಾವು ಸರಳವಾಗಿ ಅಫ್ಘಾನಿಸ್ತಾನ ತನಗೆ ಸಾಮರಿಕ ಹಿತ್ತಲು ಆಗಿರಬೇಕೆಂದು ಪಾಕಿಸ್ತಾನ ಬಯಸಿತು ಎಂದು ಅರ್ಥೈಸಿಕೊಳ್ಳೋಣ. ಪಾಕಿಸ್ತಾನೀಯರ ಈ ಕುತರ್ಕಕ್ಕೆ ಅಫ್ಘನ್ ಸರ್ಕಾರಗಳು ಯಾವ ಬೆಲೆಯನ್ನೂ ಕೊಡಲಿಲ್ಲ. ಅಷ್ಟೇ ಅಲ್ಲ, 1947ರಿಂದ 1979ರವರೆಗೆ ಪಾಕಿಸ್ತಾನವನ್ನು ನಿರಂತರವಾಗಿ ವಿರೋಧಿಸುತ್ತಲೇ ಬಂದವು. 1947ರಲ್ಲಿ ಪಾಕಿಸ್ತಾನ ವಿಶ್ವಸಂಸ್ಥೆಯ ಸದಸ್ಯತ್ವಕ್ಕೆ ಅರ್ಜಿ ಹಾಕಿದಾಗ ಅದನ್ನು ವಿರೋಧಿಸಿದ ಏಕೈಕ ರಾಷ್ಟ್ರ ಅಫ್ಘಾನಿಸ್ತಾನವಾದದ್ದರಿಂದ ಹಿಡಿದು 1979ರಲ್ಲಿ ಅಫ್ಘನ್ ಅಧ್ಯಕ್ಷ ಹಫೀಜುಲ್ಲಾ ಅಮೀನ್ ಉತ್ತರ ಪಾಕಿಸ್ತಾನವೆಲ್ಲವೂ ಅಫ್ಘಾನಿಸ್ತಾನಕ್ಕೆ ಸೇರಬೇಕು ಎಂದು ಘೊಷಿಸಿದ್ದರ ನಡುವಿನ ಮೂವತ್ತೆರಡು ವರ್ಷಗಳಲ್ಲಿ ಕನಿಷ್ಠ ಎರಡು ಬಾರಿ ಅವೆರಡು ದೇಶಗಳು ಕಾದಾಡುವ ಸ್ಥಿತಿ ತಲುಪಿದ್ದವು. ಒಮ್ಮೆಯಂತೂ ಉದ್ರಿಕ್ತ ಅಫ್ಘನ್ನರು ಕಾಬೂಲ್​ನಲ್ಲಿದ್ದ ಪಾಕ್ ರಾಯಭಾರ ಕಚೇರಿಗೆ ನುಗ್ಗಿ ದಾಂಧಲೆ ಎಬ್ಬಿಸಿದ್ದರು. ಆ ದಿನಗಳಲ್ಲಿ ಅಫ್ಘಾನಿಸ್ತಾನ ಭಾರತದೊಂದಿಗೆ ಘನಿಷ್ಟ ಸ್ನೇಹ-ಸಹಕಾರ ಹೊಂದಿತ್ತು. ಅದೆಲ್ಲವನ್ನೂ ಹಾಳುಗೆಡವಿದ್ದು ಸೋವಿಯತ್ ಯೂನಿಯನ್.
ಮೊದಲಿಗೆ ಅಧ್ಯಕ್ಷ ಮಹಮದ್ ದಾವೂದ್​ರನ್ನು 1978 ಏಪ್ರಿಲ್​ನಲ್ಲಿ, ನಂತರ, ಕಮ್ಯೂನಿಸ್ಟನಾಗಿದ್ದೂ ತನ್ನ ಮಾತು ಕೇಳದ ಅಧ್ಯಕ್ಷ ಹಫೀಜುಲ್ಲಾ ಅಮೀನ್​ರನ್ನು 1979 ಡಿಸೆಂಬರ್​ನಲ್ಲಿ ನಿವಾರಿಸಿಕೊಂಡ ಸೋವಿಯತ್ ಯೂನಿಯನ್ ತನ್ನ ಕೈಗೊಂಬೆ ಬಬ್ರಾಕ್ ಕರ್ವಲ್ ಸರ್ಕಾರವನ್ನು ಉಳಿಸಲು 1979 ಡಿಸೆಂಬರ್ 27ರಂದು ತನ್ನ ಸೇನೆಯನ್ನು ಅಫ್ಘಾನಿಸ್ತಾನಕ್ಕೆ ಕಳಿಸಿದ್ದೇ ಮುಂದಿನ ಎಲ್ಲ ಅನಾಹುತಗಳಿಗೂ ಮೂಲವಾಯಿತು. ಸೋವಿಯತ್ ಸೇನೆಯನ್ನು ಅಫ್ಘನ್ ನೆಲದಿಂದ ಕಾಲ್ತೆಗೆಸುವ ಯೋಜನೆ ರೂಪಿಸಿದ ಅಮೆರಿಕ ಅದರಲ್ಲಿ ಪಾಕಿಸ್ತಾನವನ್ನು ಸೇರಿಸಿಕೊಂಡಾಗ ಈ ಕುತಂತ್ರಿ ರಾಷ್ಟ್ರದ ಅದೃಷ್ಟ ಖುಲಾಯಿಸಿತು. ಪಾಕಿಸ್ತಾನವನ್ನು ಖುಷಿಯಾಗಿರಿಸುವ ಉದ್ದೇಶದಿಂದ ಸೋವಿಯತ್ ಬೆಂಬಲಿತ ಬಬ್ರಾಕ್ ಕರ್ವಲ್ ಸರ್ಕಾರ ಹಿಂದಿನ ಸರ್ಕಾರಗಳ ನೀತಿಯನ್ನು ಬದಲಿಸಿ, ತಾನು ಯಾವುದೇ ಪಾಕ್ ಪ್ರದೇಶದ ಮೇಲೆ ಕಣ್ಣುಹಾಕುವುದಿಲ್ಲವೆಂದು ಘೊಷಿಸಿತು. ಆದರೆ ಚಾಣಾಕ್ಷ ಪಾಕ್ ಸರ್ವಾಧಿಕಾರಿ ಜಿಯಾ-ಉಲ್-ಹಕ್​ರ ಬಾಯಲ್ಲಿ ನೀರೂರಿಸಿದ್ದು ಅಮೆರಿಕ ಜತೆ ಸೇರಿದರೆ ತನಗೆ ಸಿಗಬಹುದಾದ ಲಾಭಗಳು. ಸೋವಿಯತ್ ಸೇನೆಯ ವಿರುದ್ಧ ಹೋರಾಡುತ್ತಿದ್ದ ಅಫ್ಘನ್ ಮುಜಾಹಿದೀನ್ ಅಂದರೆ ಧಾರ್ವಿುಕ ಹೋರಾಟಗಾರರಿಗೆ ನೀಡಲೆಂದು ಅಮೆರಿಕ ನೀಡಿದ ಬಹುತೇಕ ಶಸ್ತ್ರಾಸ್ತ್ರಗಳನ್ನು ಮತ್ತು ಹಣವನ್ನು ಪಾಕಿಸ್ತಾನ ತನ್ನ ಬತ್ತಳಿಕೆಗೆ ಮತ್ತು ಬೊಕ್ಕಸಕ್ಕೆ ಸೇರಿಸಿಕೊಂಡಿತು. ಹತ್ತುವರ್ಷಗಳ ಯುದ್ಧದ ನಂತರ ಸೋವಿಯತ್ ಸೇನೆ 1989ರಲ್ಲಿ ಕಾಲ್ತೆಗೆದು, ತನ್ನ ಉದ್ದೇಶಸಾಧನೆಯಾಯಿತೆಂದು ಅಮೆರಿಕವೂ ಅಫ್ಘನ್ ವ್ಯವಹಾರಗಳಲ್ಲಿ ಆಸಕ್ತಿ ಕಳೆದುಕೊಳ್ಳುವ ಹೊತ್ತಿಗೆ ಅಫ್ಘನ್ ಮುಜಾಹಿದೀನ್​ಗಳು ತಂತಮ್ಮ ಜನಾಂಗನಿಷ್ಠೆಗೆ ಅನುಗುಣವಾಗಿ ಪ್ರಮುಖವಾಗಿ ಮೂರು ಬಣಗಳಾಗಿದ್ದರು- ಪಖ್ತೂನಿಗಳು ಗುಲ್​ಬುದೀನ್ ಹೆಕ್ಮತ್ಯಾರ್ ನೇತೃತ್ವದಲ್ಲಿ, ತಾಜಿಕರು ಅಹ್ಮದ್ ಶಾ ಮಾಸೂದ್ ನೇತೃತ್ವದಲ್ಲಿ ಮತ್ತು ಉಝೆ್ಬೕಗರು ತನ್ನನ್ನು ತಾನು ಜನರಲ್ ಎಂದು ಕರೆದುಕೊಂಡ ಸುಳ್ಳುಬುರುಕ ಬೊಗಳೆವೀರ ಅಬ್ದುಲ್ ರಶೀದ್ ದೋಸ್ತುಂ ನೇತೃತ್ವದಲ್ಲಿ. ಇಂತಹ ಅರಾಜಕ ಪರಿಸ್ಥಿತಿಯಲ್ಲಿ ಅವರೆಲ್ಲರೂ ಒಂದುಗೂಡಿ ಮೊದಲಿಗೆ ಪೊ›. ಶಿಬ್ಗತ್ ಉಲ್ಲಾ ಮುಜಾದೀದಿ, ನಂತರ ಪೊ›. ಬುರ್ಹಾನುದ್ದೀನ್ ರಬ್ಬಾನಿ ನೇತೃತ್ವದಲ್ಲಿ ರಾಷ್ಟ್ರೀಯ ಸರ್ಕಾರಗಳನ್ನು ಸ್ಥಾಪಿಸಿದರೇನೋ ನಿಜ. ಆದರೆ ಆ ಸರ್ಕಾರಗಳು ತನಗೆ ಅನುಕೂಲಕರವಲ್ಲ ಎಂದು ಬಗೆದ ಪಾಕಿಸ್ತಾನದ ಸೇನೆ ಪ್ರಧಾನಿ ಬೇನಜೀರ್ ಭುಟ್ಟೋರ ಸಕ್ರಿಯ ಸಹಕಾರದೊಂದಿಗೆ ‘ತಾಲಿಬಾನ್’ ಎಂಬ ಭಯೋತ್ಪಾದಕ ಸಂಘಟನೆಯನ್ನು ಸೃಷ್ಟಿಸಿ ಅಫ್ಘಾನಿಸ್ತಾನದ ಮೇಲೆ ಛೂಬಿಟ್ಟರು. ‘ವಿದ್ಯಾರ್ಥಿಗಳು’ ಎಂಬರ್ಥದ ಆದರೆ ಕ್ರೂರ ವರ್ತನೆಯ, ಅನಾಗರಿಕ ಮನೋಭಾವದ ಭಯೋತ್ಪಾದಕ ತಾಲಿಬಾನಿಗಳು ಪಾಕಿಸ್ತಾನದ ಎಲ್ಲ ಬಗೆಯ ಸಹಕಾರದೊಂದಿಗೆ 1996ರಲ್ಲಿ ಅಫ್ಘಾನಿಸ್ತಾನದಲ್ಲಿ ಅಧಿಕಾರ ಗಳಿಸಿಕೊಂಡರು. ಅಲ್ಲಿಗೆ ತಾವು ಬಯಸಿದಂತೆ ಉತ್ತರದ ಆ ದೇಶ ತಮಗೆ ಸಾಮರಿಕ ಹಿತ್ತಲು ಆಯಿತು ಎಂದು ಪಾಕಿಸ್ತಾನೀಯರು ಬೀಗುವಂತಾಯಿತು. ಆದರೆ ಮುಂದಿನ ಐದು ವರ್ಷಗಳಲ್ಲಿ ಪಾಕಿಸ್ತಾನವೇ ಅಫ್ಘನ್ ತಾಲಿಬಾನಿಗಳಿಗೆ ಸಾಮರಿಕ ಹಿತ್ತಲಾಗಿ ಬದಲಾಗುವ ವಿಪರ್ಯಾಸ ಘಟಿಸಿಹೋಯಿತು.
ಆಂತರಿಕವಾಗಿ ಕಟ್ಟಾ ಇಸ್ಲಾಮಿಕ್ ಕಾನೂನುಗಳನ್ನು ಜಾರಿಗೆ ತಂದ ತಾಲಿಬಾನ್ ಸರ್ಕಾರ ಮಹಿಳೆಯರು, ಅಲ್ಪಸಂಖ್ಯಾತರ ಹಲವು ಸ್ವಾತಂತ್ರ್ಯಗಳನ್ನು ಮೊಟಕುಗೊಳಿಸಿತು. ಆಧುನಿಕ ಶಿಕ್ಷಣಕ್ರಮವನ್ನು ಇಸ್ಲಾಂ-ವಿರೋಧಿ ಎಂದು ತೀರ್ವನಿಸಿ, ಶಾಲೆ-ಕಾಲೇಜುಗಳನ್ನು ಮುಚ್ಚಿ ಅಥವಾ ಹಾಳುಗೆಡವಿ ವಿದ್ಯಾಭ್ಯಾಸವನ್ನೇ ಸರಿಸುಮಾರು ನಿಲುಗಡೆಗೆ ತಂದಿತು. ಒಟ್ಟಿನಲ್ಲಿ ದೇಶದ ಹಿಮ್ಮುಖ ಚಲನೆ ಆರಂಭವಾಯಿತು ಮತ್ತು ಅದು ವೇಗವೂ ಆಗಿತ್ತು. ವಿದೇಶನೀತಿಯ ವಿಚಾರಕ್ಕೆ ಬಂದರೆ ತಾಲಿಬಾನ್​ನ ಕ್ರೂರ ಆಡಳಿತವಿಧಾನವನ್ನು ತಿರಸ್ಕರಿಸಿದ ಹೊರಜಗತ್ತು ಆ ಸರ್ಕಾರದ ಜತೆ ಸಂಪರ್ಕ ಸ್ಥಾಪನೆಗೇ ಮುಂದಾಗಲಿಲ್ಲ. ತಾಲಿಬಾನ್ ಸರ್ಕಾರಕ್ಕೆ ರಾಜತಾಂತ್ರಿಕ ಮಾನ್ಯತೆ ನೀಡಿದ್ದು ಅದರ ಸೃಷ್ಟಿಕರ್ತ ಪಾಕಿಸ್ತಾನದ ಜತೆಗೆ ಸೌದಿ ಅರೇಬಿಯಾ ಮತ್ತು ಯುಎಇ ಮಾತ್ರ ಎಂಬ ವಾಸ್ತವ ಹೊರಜಗತ್ತಿನ ದೃಷ್ಟಿಯಲ್ಲಿ ಆ ಕ್ರೂರ ಭಯೋತ್ಪಾದಕ ಸಂಘಟನೆಯ ಸರ್ಕಾರ ಅದೆಷ್ಟು ಕೀಳುಸ್ಥಾನ ಗಳಿಸಿತ್ತು ಎನ್ನುವುದರ ದ್ಯೋತಕ.
ಇಂತಹ ಭಯೋತ್ಪಾದಕ ಸಂಘಟನೆ ಮತ್ತೊಂದು ಭಯೋತ್ಪಾದಕ ಸಂಘಟನೆಯಾದ ಅಲ್-ಖಯೀದಾಗೆ ನೆಲೆ ಮತ್ತು ಬೆಂಬಲ ನೀಡಲು ಮುಂದಾದದ್ದರಲ್ಲಿ ಅಚ್ಚರಿಯೇನಿಲ್ಲ. ಈ ಬೆಂಬಲದಿಂದ ಅಲ್-ಖಯೀದಾ ಅಮೆರಿಕ ಮೇಲೇ ದಾಳಿಯೆಸಗಿದಾಗ ಇತಿಹಾಸ ಮತ್ತೊಂದು ತಿರುವು ಪಡೆಯಿತು. ನಂತರದ ಇತಿಹಾಸದ ವಿಶ್ಲೇಷಣೆ ಮತ್ತು ಭವಿಷ್ಯದ ಬಗೆಗಿನ ಒಳನೋಟ ಮುಂದಿನವಾರ, ಲೇಖನದ ಎರಡನೆಯ ಹಾಗೂ ಅಂತಿಮ ಭಾಗದಲ್ಲಿ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven + twelve =
Remember me
