ನವದೆಹಲಿ:ಹೊಸ ಪ್ರಭೇದಗಳ ಹಾವಳಿ ಹಾಗೂ ಕರೊನಾ ಸಾಂಕ್ರಾಮಿಕತೆಯ ಅಬ್ಬರವನ್ನು ಪರಿಣಾಮಕಾರಿಯಾಗಿ ಎದುರಿಸಲು ಕೋವಿಡ್ ಲಸಿಕೆಯ ಬೂಸ್ಟರ್ ಡೋಸ್ ನೀತಿಯನ್ನು ಕೇಂದ್ರ ಸರ್ಕಾರ ಜಾರಿಗೊಳಿಸುವ ಸಾಧ್ಯತೆಯಿದೆ. ಈ ಸಂಬಂಧ ಅಧ್ಯಯನ ನಡೆಸಲಾಗುತ್ತಿದ್ದು 1,200 ಜನರಿಗೆ ಪ್ರಾಯೋಗಿಕವಾಗಿ ಮೂರನೇ ಡೋಸ್ ಲಸಿಕೆ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಕೇಂದ್ರದ ಜೈವಿಕ ತಂತ್ರಜ್ಞಾನ ಇಲಾಖೆ ಈ ಅಧ್ಯಯನ ನಡೆಸುತ್ತಿದ್ದು ಬೂಸ್ಟರ್ ಡೋಸ್ ನೀತಿಯತ್ತ ಇದೊಂದು ಮಹತ್ವದ ವಿದ್ಯಮಾನವಾಗಿದೆ. ಆರು ತಿಂಗಳಿಗಿಂತ ಹಿಂದೆ ಕೋವಿಡ್ ಲಸಿಕೆಯ ಎರಡೂ ಡೋಸ್ ಪಡೆದ ಜನರು ಈ ಅಧ್ಯಯನದಲ್ಲಿ ಭಾಗವಹಿಸುತ್ತಿದ್ದಾರೆ. ಆ ಪೈಕಿ 1,200 ಮಂದಿಗೆ ಈಗಾಗಲೇ ಬೂಸ್ಟರ್ ಡೋಸ್ ನೀಡಲಾಗಿದೆ. 40 ವರ್ಷಕ್ಕಿಂತ ಕೆಳಗಿನವರು, 40 ವರ್ಷ ಮೇಲ್ಪಟ್ಟವರು, ಕೋವಿಡ್-19 ಸೋಂಕಿತರು ಮತ್ತು ಅನ್ಯವ್ಯಾಧಿ ಪೀಡಿತರು -ಹೀಗೆ ಅಧ್ಯಯನದಲ್ಲಿ ಪಾಲ್ಗೊಂಡವರನ್ನು ನಾಲ್ಕು ವರ್ಗವಾಗಿ ವಿಂಗಡಿಸಲಾಗಿದೆ. ಒಮಿಕ್ರಾನ್ ಭೀತಿಯ ಹಿನ್ನೆಲೆಯಲ್ಲಿ, ಈಗಾಗಲೇ ಸಂಪೂರ್ಣ ಲಸಿಕೆ ಪಡೆದವರಿಗೆ ಮೂರನೇ ಡೋಸ್ ನೀಡಬೇಕೆಂಬ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರದ ಕ್ರಮ ಮಹತ್ವ ಪಡೆದಿದೆ. ವೈದ್ಯರಿಗೆ ಬೂಸ್ಟರ್ ಡೋಸ್ ನೀಡುವಂತೆ ಕೋರಿ ಭಾರತೀಯ ವೈದ್ಯಕೀಯ ಸಂಘ (ಐಎಂಎ) ಗುರುವಾರ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿತ್ತು.
ಒಮಿಕ್ರಾನ್ ಜಾಗತಿಕ ಪ್ರಭೇದ:2022ರಲ್ಲಿ ಒಮಿಕ್ರಾನ್ ಪ್ರಭೇದ ಜಾಗತಿಕವಾಗಿ ಪ್ರಮುಖ ತಳಿಯಾಗಲಿದೆ ಎಂದು ಸಿಂಗಾಪುರದ ತಜ್ಞರು ಎಚ್ಚರಿಸಿದ್ದಾರೆ. ಮಹಾಮಾರಿ ಯಾವಾಗ ಕೊನೆಗೊಳ್ಳುತ್ತದೆ ಎಂದು ಭವಿಷ್ಯ ನುಡಿಯುವುದು ‘ನಿಷ್ಪಲ’ ಎಂದು ಸಿಂಗಾಪುರ ಮೂಲದ ಸಾರ್ವಜನಿಕ ಆರೋಗ್ಯ ತಜ್ಞ, ಸಹಾಯಕ ಪ್ರೊಫೆಸರ್ ನತಾಶಾ ಹೊವಾರ್ಡ್ ಅಭಿಪ್ರಾಯ ಪಟ್ಟಿದ್ದಾರೆ. ಒಮಿಕ್ರಾನ್ ಪ್ರಭೇದದ ಸಾಮರ್ಥ್ಯ ಏನು ಎಂಬುದನ್ನು ಅದು ಅವಲಂಬಿಸುತ್ತದೆ ಎಂದಿದ್ದಾರೆ. ಡೆಲ್ಟಾಕ್ಕೆ ಹೋಲಿಸಿದರೆ, ಒಮಿಕ್ರಾನ್ ರೂಪಾಂತರಿಯು ಹೆಚ್ಚು ಪ್ರಮಾಣದಲ್ಲಿ ಹರಡುವಂಥದ್ದಾಗಿದ್ದು ರೋಗ ನಿರೋಧಕ ಶಕ್ತಿಯಿಂದ (ಇಮ್ಯುನಿಟಿ) ತಪ್ಪಿಸಿ ಕೊಳ್ಳುವ ಸಾಮರ್ಥ್ಯವೂ ಹೆಚ್ಚಿದೆ ಎಂದು ಹೊವಾರ್ಡ್ ಹೇಳಿದ್ದಾರೆ.
ಪ್ಯಾರಾಸಿಟಮಲ್ ಚಿಕಿತ್ಸೆ:ದೆಹಲಿಯ ಲೋಕನಾಯಕ ಜಯಪ್ರಕಾಶ್ ನಾರಾಯಣ ಆಸ್ಪತ್ರೆಯಲ್ಲಿರುವ 40 ಒಮಿಕ್ರಾನ್ ಸೋಂಕಿತ ರೋಗಿಗಳಿಗೆ ಮಲ್ಟಿ-ವಿಟಮಿನ್ ಮತ್ತು ಪ್ಯಾರಾಸಿಟಮಲ್ ಚಿಕಿತ್ಸೆ ಮಾತ್ರವೇ ನೀಡಲಾಗುತ್ತಿದೆ ಎಂದು ವೈದ್ಯರು ಶುಕ್ರವಾರ ತಿಳಿಸಿದ್ದಾರೆ. ದೆಹಲಿಯಲ್ಲಿ ಇದುವರೆಗೆ 67 ಒಮಿಕ್ರಾನ್ ಕೇಸ್​ಗಳು ದೃಢಪಟ್ಟಿವೆ. ಶೇಕಡ 90ರಷ್ಟು ರೋಗಿಗಳು ‘ಲಕ್ಷಣರಹಿತರು’ ಹಾಗೂ ಉಳಿದವರಲ್ಲಿ ಗಂಟಲು ಕೆರೆತ, ಅಲ್ಪ ಜ್ವರ, ಮೈ ಕೈ ನೋವಿನಂಥ ಲಘು ಲಕ್ಷಣಗಳಿವೆ.
ಚೀನಿ ಅಧಿಕಾರಿಗಳಿಗೆ ಶಿಕ್ಷೆ:ಕರೊನಾ ತಡೆಯಲು ವಿಫಲರಾದ ಆರೋಪದ ಮೇಲೆ ಚೀನಾದಲ್ಲಿ ಅಧಿಕಾರಿಗಳ ಮೇಲೆ ಕಠಿಣ ಶಿಸ್ತು ಕ್ರಮ ಕೈಗೊಳ್ಳಲಾಗಿದೆ. 2019ರಲ್ಲಿ ಜಗತ್ತಿನಲ್ಲೇ ಚೀನಾದಲ್ಲಿ ಮೊದಲ ಬಾರಿಗೆ ಸೋಂಕಿನ ವೈರಸ್ ಹಾವಳಿ ನಡೆಸಿತ್ತು. ನಂತರ ಚೀನಾ ಸರ್ಕಾರ ಕೈಗೊಂಡ ಕಟ್ಟುನಿಟ್ಟಿನ ಕ್ರಮಗಳಿಂದ ಸೋಂಕನ್ನು ಬಹುತೇಕವಾಗಿ ಕಟ್ಟಿ ಹಾಕಿತ್ತು. ಇದೀಗ ಕ್ಸಿಯಾನ್ ಪ್ರಾಂತ್ಯದಲ್ಲಿ ಮಹಾಮಾರಿ ಉಲ್ಬಣಿಸಿದ್ದು ಸೋಂಕಿನ ನಿಯಂತ್ರಣಕ್ಕೆ ವಿಫಲರಾದ ಅಧಿಕಾರಿಗಳನ್ನು ಶಿಕ್ಷಿಸಿರುವುದಾಗಿ ಕೇಂದ್ರೀಯ ಶಿಸ್ತು ಆಯೋಗ ಶುಕ್ರವಾರ ತಿಳಿಸಿದೆ. ಸೋಂಕು ವ್ಯಾಪಿಸುವುದನ್ನು ತಡೆಯಲು ಕಠಿಣ ಕ್ರಮ ಕೈಗೊಳ್ಳಲು ವಿಫಲರಾದ ಕಮ್ಯೂನಿಸ್ಟ್ ಪಕ್ಷದ 26 ಅಧಿಕಾರಿಗಳನ್ನು ಶಿಕ್ಷೆಗೆ ಗುರಿಪಡಿಸಲಾಗಿದೆ. ರಾಜಧಾನಿ ಬೀಜಿಂಗ್​ನಲ್ಲಿ ಫೆಬ್ರವರಿಯಲ್ಲಿ ಚಳಿಗಾಲದ ಒಲಿಂಪಿಕ್ಸ್ ಕೂಟಕ್ಕೆ ಸಜ್ಜಾಗುತ್ತಿರುವ ಸಂದರ್ಭದಲ್ಲಿ ಕೋವಿಡ್ ಪ್ರಕರಣಗಳ ಏರಿಕೆಯಾಗುತ್ತಿರುವುದು ಸರ್ಕಾರದ ನಿದ್ದೆಗೆಡಿಸಿದೆ.
ರೆಸ್ಟೋರೆಂಟ್ ಸೀಜ್:ದೆಹಲಿಯಲ್ಲಿ ಕರೊನಾ ನಿಯಮ ಉಲ್ಲಂಘಿಸಿ ಸುಮಾರು 600 ಜನರ ಪಾರ್ಟಿ ನಡೆಸಲು ಅವಕಾಶ ನೀಡಿದ ಡಿಯಾಬ್ಲೋ ರೆಸ್ಟೋರೆಂಟ್​ಗೆ ಅಧಿಕಾರಿಗಳು ಬೀಗ ಜಡಿದಿದ್ದಾರೆ. ಮೆಹರೌಲಿಯಲ್ಲಿರುವ ರೆಸ್ಟೋರೆಂಟ್ ಮೇಲೆ ಜಿಲ್ಲಾ ಮ್ಯಾಜಿಸ್ಟ್ರೇಟ್ ಸೋನಾಲಿಕಾ ಜೀವಾನಿ ನೇತೃತ್ವದ ತಂಡ ಗುರುವಾರ ರಾತ್ರಿ 10.45ರ ಸುಮಾರಿಗೆ ಹಠಾತ್ ದಾಳಿ ನಡೆಸಿದಾಗ ನಿಯಮ ಉಲ್ಲಂಘನೆ ಬೆಳಕಿಗೆ ಬಂದಿತ್ತು.
ಜಗತ್ತಿನಲ್ಲಿ ಕರೊನಾ ಮಹಾಮಾರಿಯ ನಾಲ್ಕನೇ ಅಲೆ ಹಾವಳಿ ನಡೆಸುತ್ತಿದೆ. ವರ್ಷಾಂತ್ಯದ ಹಬ್ಬದ ಸಂಭ್ರಮದ ಸಮಯದಲ್ಲಿ ಸೋಂಕು ನಿಯಂತ್ರಣ ಕ್ರಮಗಳನ್ನು ಸಡಿಲಗೊಳಿಸದಂತೆ ಕೇಂದ್ರ ಸರ್ಕಾರ ಶುಕ್ರವಾರ ಎಚ್ಚರಿಕೆ ನೀಡಿದೆ. ಗುಂಪುಗೂಡುವುದನ್ನು ಹಾಗೂ ಅನಗತ್ಯವಾಗಿ ಪ್ರಯಾಣಿಸುವುದನ್ನು ನಿವಾರಿಸುವಂತೆ ಹೇಳಿದೆ. ಆದಷ್ಟು ಬೇಗ ಲಸಿಕೆಯನ್ನು ಹಾಕಿಸಿಕೊಳ್ಳುವಂತೆಯೂ ಸರ್ಕಾರ ಜನರಿಗೆ ಮನವಿ ಮಾಡಿದೆ. ಸದ್ಯಕ್ಕೆ ದೇಶದಲ್ಲಿ ಡೆಲ್ಟಾ ಪ್ರಭೇದವೇ ಪ್ರಮುಖವಾಗಿ ಕಾಡುತ್ತಿದೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:1 × 3 =
Remember me
