ಅಹಮದಾಬಾದ್:‘ಪವರ್​ಫುಲ್ ಫ್ರೆಂಡ್​ಶಿಪ್, ಬ್ರೖೆಟ್ ಫ್ಯೂಚರ್…’ ಅಹಮದಾಬಾದ್​ನ ಸರ್ದಾರ್ ವಲ್ಲಭಭಾಯ್ ಪಟೇಲ್ ವಿಮಾನ ನಿಲ್ದಾಣದಿಂದ ಆರಂಭಗೊಂಡು ಇಡೀ ನಗರವನ್ನು ಆವರಿಸಿರುವ ಸಾವಿರಾರು ದೈತ್ಯ ಪೋಸ್ಟರ್​ಗಳು ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಲಿಷ್ಠ ಸ್ನೇಹ ಸಂಬಂಧ ಉಭಯ ದೇಶಗಳ ಉಜ್ವಲ ಭವಿಷ್ಯಕ್ಕೆ ನಾಂದಿ ಹಾಡಲಿದೆ ಎಂಬ ಸಂದೇಶ ಸಾರುತ್ತಿವೆ. ಅಮೆರಿಕದಲ್ಲಿ ನಡೆದಿದ್ದ ‘ಹೌಡಿ ಮೋದಿ’ ಕಾರ್ಯಕ್ರಮದ ತುಣುಕುಗಳಿರುವ ಫೋಟೋ ಬಳಸಿಕೊಂಡು ಈ ಪೋಸ್ಟರ್ ಸಿದ್ಧಪಡಿಸಲಾಗಿದೆ. ‘ಹೌಡಿ ಮೋದಿ’ ಮೀರಿಸುವ ಮಟ್ಟದಲ್ಲಿ ‘ನಮಸ್ತೆ ಟ್ರಂಪ್’ ಕಾರ್ಯಕ್ರಮ ರೂಪಿಸಬೇಕೆಂಬ ಆಯೋಜಕರ ಲೆಕ್ಕಾಚಾರಕ್ಕೆ ಪೂರಕವಾಗಿಯೇ ಸಕಲ ತಯಾರಿ ಮಾಡಿಕೊಳ್ಳಲಾಗಿದೆ. ಅಮೆರಿಕ ಅಧ್ಯಕ್ಷರಾದ ಬಳಿಕ ಟ್ರಂಪ್ ಭಾರತಕ್ಕೆ ನೀಡುತ್ತಿರುವ ಮೊದಲ ಭೇಟಿಯಿದು. ಈ ಭೇಟಿಯಿಂದ ಉಭಯ ದೇಶಗಳ ದ್ವಿಪಕ್ಷೀಯ ಸಂಬಂಧ ಹೊಸ ಎತ್ತರ ತಲುಪಲಿದೆ ಎಂದು ಬಿಜೆಪಿ ಮುಖಂಡರು ವ್ಯಾಖ್ಯಾನಿಸುತ್ತಿದ್ದರೂ, ವ್ಯಾಪಾರ ಒಪ್ಪಂದ ಏರ್ಪಡುವ ಸಾಧ್ಯತೆ ಯನ್ನು ಶ್ವೇತಭವನವೇ ತಳ್ಳಿಹಾಕಿದ ಮೇಲೆ ಈ ಪರಿಯಲ್ಲಿ ಕೋಟಿ ಕೋಟಿ ಹಣ ಖರ್ಚು ಮಾಡಿ ಟ್ರಂಪ್​ರನ್ನು ಖುಷಿಪಡಿಸಿ ಮೋದಿ ಸಾಧಿಸುತ್ತಿರುವುದೇನೆಂಬುದು ವಿಪಕ್ಷಗಳ ಪ್ರಶ್ನೆ.
ಸೋಮವಾರ ಮಧ್ಯಾಹ್ನ 12 ಗಂಟೆಗೆ ಅಹಮದಾಬಾದ್ ವಿಮಾನ ನಿಲ್ದಾಣಕ್ಕೆ ಟ್ರಂಪ್ ಮತ್ತು ಕುಟುಂಬ ಬಂದಿಳಿಯಲಿದೆ. ಇವರನ್ನು ಪ್ರಧಾನಿ ಮೋದಿ ಜತೆಗೆ ಅಹಮದಾಬಾದ್​ನ ಮೇಯರ್ ನೇತೃತ್ವದಲ್ಲಿ ರಚನೆಯಾಗಿರುವ ನಾಗರಿಕ್ ಅಭಿನಂದನ್ ಸಮಿತಿ ಸದಸ್ಯರು ಸ್ವಾಗತಿಸಲಿದ್ದಾರೆ. ವಿಮಾನ ನಿಲ್ದಾಣದಿಂದ ರೋಡ್ ಶೋ ಮೂಲಕ ಸಾಬರಮತಿಯಲ್ಲಿರುವ ಮಹಾತ್ಮ ಗಾಂಧಿ ಆಶ್ರಮ ಹಾಗೂ ಅಲ್ಲಿಂದ ಮೊಟೇರಾದ ಸರ್ದಾರ್ ವಲ್ಲಭಭಾಯ್ ಕ್ರಿಕೆಟ್ ಸ್ಟೇಡಿಯಂಗೆ ಅಮೆರಿಕ ಅಧ್ಯಕ್ಷರನ್ನು ಕರೆದುಕೊಂಡು ಬರುವ ಯೋಜನೆ ರೂಪಿಸಲಾಗಿದೆ. ಆದರೆ, ಟ್ರಂಪ್ ಗಾಂಧಿ ಆಶ್ರಮಕ್ಕೆ ಭೇಟಿ ಬಗ್ಗೆ ಆಯೋಜಕರಲ್ಲಿ ಸ್ಪಷ್ಟತೆಯಿಲ್ಲ. ಆ ನಿರ್ಧಾರವನ್ನು ಶ್ವೇತಭವನವೇ ತೆಗೆದುಕೊಳ್ಳಲಿದೆ ಎಂದು ಸಿಎಂ ವಿಜಯ್ ರೂಪಾನಿ ಹೇಳಿದ್ದಾರೆ.
ನಿಮಗಿದೋ ಸ್ವಾಗತ!:ಏರ್​ಪೋರ್ಟ್​ನಿಂದ ಮೊಟೇರಾ ಸ್ಟೇಡಿಯಂಗೆ ಟ್ರಂಪ್ ತಮ್ಮ ಬೀಸ್ಟ್ ಕಾರ್​ನಲ್ಲಿ ಬರಲಿದ್ದಾರೆ. 22 ಕಿಮೀ ಉದ್ದಕ್ಕೂ ಹಾಕಲಾಗಿರುವ ಬ್ಯಾರಿಕೇಡ್​ಗಳ ಬಳಿ ಜನರು ಕೈ ಮುಗಿದು ‘ನಮಸ್ತೆ ಟ್ರಂಪ್’ ಎಂದು ಘೊಷಣೆ ಕೂಗುವ ಮೂಲಕ ಅಮೆರಿಕದ ಅಧ್ಯಕ್ಷರನ್ನು ಸ್ವಾಗತಿಸಲಿದ್ದಾರೆ. ರೋಡ್ ಶೋ ಸಾಗುವ ರಸ್ತೆಯುದ್ದಕ್ಕೂ 50 ವೇದಿಕೆ ನಿರ್ವಿುಸಲಾಗುತ್ತಿದ್ದು, ಇಲ್ಲಿ ವಿವಿಧ ರಾಜ್ಯಗಳ ಜಾನಪದ ಮತ್ತು ಸಾಂಪ್ರದಾಯಿಕ ನೃತ್ಯಗಳನ್ನು ಪ್ರದರ್ಶಿಸಿ ಅಮೆರಿಕದ ಮೊದಲ ಕುಟುಂಬವನ್ನು ಬರಮಾಡಿಕೊಳ್ಳಲಾಗುವುದು. ಗುಜರಾತ್​ನಲ್ಲಿರುವ ವಿವಿಧ ರಾಜ್ಯಗಳ ಸಂಘ-ಸಂಸ್ಥೆಗಳಿಗೂ ಆಹ್ವಾನ ನೀಡಲಾಗಿದ್ದು, ಅವರೆಲ್ಲರನ್ನೂ ವಿಶೇಷ ಬಸ್ಸಿನಲ್ಲೇ ಮೊಟೇರಾ ಸ್ಟೇಡಿಯಂ ಬಳಿ ಕರೆ ತರಲಾಗುವುದು. ಇದಕ್ಕಾಗಿ 2450 ಬಸ್ ಕಾಯ್ದಿರಿಸಲಾಗಿದೆ. ಅದೇ ರೀತಿಯಾಗಿ ಗುಜರಾತ್ ಕರ್ನಾಟಕ ಸಂಘವನ್ನೂ ಆಹ್ವಾನಿಸಲಾಗಿದೆ. ಟ್ರಂಪ್ ಭಾರತ ಭೇಟಿ ಬಗ್ಗೆ ಅಧಿಕೃತ ಮಾಹಿತಿ ಹೊರಬಿದ್ದ ಬೆನ್ನಲ್ಲೇ ಗುಜರಾತ್​ನ 8 ಜಿಲ್ಲೆಗಳ ಸರ್ಕಾರಿ ಸಿಬ್ಬಂದಿಯನ್ನು ಅಹಮದಾಬಾದ್​ಗೆ ಕರೆಸಿ ‘ನಮಸ್ತೆ ಟ್ರಂಪ್’ ಕಾರ್ಯಕ್ರಮದ ವಿವಿಧ ಜವಾಬ್ದಾರಿಗಳನ್ನು ಹೊರಿಸಲಾಗಿದೆ. ರೋಡ್ ಶೋ ಮತ್ತು ಸ್ಟೇಡಿಯಂ ಕಾರ್ಯಕ್ರಮದ ಭದ್ರತೆಗೆಂದೇ ರಾಜ್ಯದ 25 ಸಾವಿರ ಪೊಲೀಸರು ಕಳೆದೊಂದು ವಾರದಿಂದ ಅಹಮದಾಬಾದ್​ನಲ್ಲಿ ಬೀಡು ಬಿಟ್ಟಿದ್ದಾರೆ. ರೋಡ್ ಶೋಗೆಂದೇ 125 ಕೋಟಿ ರೂ. ಖರ್ಚು ಮಾಡಲಾಗುತ್ತಿದೆ ಎಂಬ ಚರ್ಚೆಗಳಿವೆ.
ಸ್ಟೇಡಿಯಂ ಉದ್ಘಾಟನೆಯಿಲ್ಲ:ವಿಶ್ವದ ಅತ್ಯಂತ ದೊಡ್ಡ ಹಾಗೂ ಅತಿ ಹೆಚ್ಚು ಸಂಖ್ಯೆಯ (1.10 ಲಕ್ಷ) ಪ್ರೇಕ್ಷಕರ ಸಾಮರ್ಥ್ಯ ಹೊಂದಿರುವ ಸರ್ದಾರ್ ವಲ್ಲಭಭಾಯ್ ಕ್ರಿಕೆಟ್ ಸ್ಟೇಡಿಯಂ ಅನ್ನು ಟ್ರಂಪ್ ಉದ್ಘಾಟಿಸಲಿದ್ದಾರೆ ಎಂದು ಈ ಮೊದಲು ತಿಳಿಸಲಾಗಿತ್ತು. ಆದರೆ ಕೊನೇ ಕ್ಷಣದಲ್ಲಿ ಈ ನಿರ್ಧಾರ ಬದಲಾಗಿದ್ದು, ಉದ್ಘಾಟನೆಯನ್ನು 6 ತಿಂಗಳು ಮುಂದೂಡಲಾಗಿದೆ. ಕ್ರಿಕೆಟ್ ಸ್ಟೇಡಿಯಂನ್ನು ಹೊಸದಾಗಿ ವಿಶ್ವದರ್ಜೆಯ ಮಟ್ಟದಲ್ಲಿ ಅಭಿವೃದ್ಧಿಪಡಿಸಲು ಒಟ್ಟು 750 ಕೋಟಿ ರೂ ವ್ಯಯಿಸಲಾಗಿದೆ. ಈ ಸ್ಟೇಡಿಯಂನ ಹಿಂಭಾಗದಲ್ಲಿ ಸಾಬರಮತಿ ನದಿ ಹರಿಯುವ ದೃಶ್ಯ ಮನಮೋಹಕ.
ಗೋಡೆ ಕಟ್ಟುವುದಷ್ಟೇ ಅಲ್ಲ!: ಟ್ರಂಪ್ ರೋಡ್ ಶೋ ಮೂಲಕ ಸಾಗುವಾಗ ಸರ್ದಾರ್ ನಗರದ ಇಂದ್ರಾ ಬ್ರಿಜ್ ಬಳಿ ಸರಣಿಯಾ ಆವಾಸ್ ಅನ್ನೂ ಹಾದು ಹೋಗಬೇಕು. ಆದರೆ, ಇಲ್ಲಿನ ಕೊಳೆಗೇರಿ ನಿವಾಸಿಗರ ಬಡತನ ಟ್ರಂಪ್​ಗೆ ಕಾಣುವುದು ಬೇಡ ಎಂದೇ ಕಾಲನಿಗೆ ಅಡ್ಡಲಾಗಿ ಗೋಡೆ ನಿರ್ವಿುಸಲಾಗಿದೆ. ಈ ವಿಷಯ ರಾಷ್ಟ್ರಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ಇಲ್ಲಿ ಗೋಡೆ ನಿರ್ವಣಕ್ಕೆ ಮುನ್ನ ಹಸಿರು ಬಣ್ಣದ ನೆಟ್ ಹೊದಿಸಲಾಗಿತ್ತು. ‘ಟ್ರಂಪ್​ಗೆ ನಮ್ಮ ಶೋಚನೀಯ ಸ್ಥಿತಿ ಗೊತ್ತಾಗಲಿ ಬಿಡಿ. ಸಾವಿರಾರು ರೂಪಾಯಿ ಖರ್ಚು ಮಾಡಿ ಗೋಡೆ ಕಟ್ಟುವ ಪಾಲಿಕೆ, ಸರ್ಕಾರಕ್ಕೆ ನಮ್ಮ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕೆಂದು ಏಕೆ ಯಾವತ್ತಿಗೂ ಅನಿಸಿಲ್ಲ? ನಾವೂ ಮನುಷ್ಯರಲ್ಲವೇ? ನಮಗೂ ಟ್ರಂಪ್ ನೋಡಬೇಕೆಂದಿರುವುದಿಲ್ಲವೇ? ಟ್ರಂಪ್ ನಮ್ಮನ್ನು ನೋಡಲಿ ಬಿಡಿ. ನಾವೂ ಅವರನ್ನು ನೋಡುತ್ತೇವೆ’ ಎಂದು ಕಾಲನಿ ನಿವಾಸಿ ಸಂಜಯ್ ಭಾಯ್ ವ್ಯಂಗ್ಯವಾಡುತ್ತಾರೆ. ‘ಗೋಡೆ ಕಟ್ಟಿರುವ ಬಗ್ಗೆ ಮಾಧ್ಯಮಕ್ಕೆ ಮಾತನಾಡಬೇಡಿ. ಕೊಳೆಗೇರಿಯನ್ನೇ ನಾಶಮಾಡುತ್ತೇವೆ ಎಂದು ಕೆಲ ದಿನಗಳ ಹಿಂದೆ ಯಾರೋ ಕಿಡಿಗೇಡಿಗಳು ಧಮಕಿ ಹಾಕಿದ್ದರು. ಏಕೆ ನಾವು ಸತ್ಯ ಮಾತನಾಡಬಾರದೇ? ನಾನಂತೂ ಸುಮ್ಮನಿರುವುದಿಲ್ಲ. ಸತ್ಯ ಹೇಳುತ್ತೇನೆ. ಟ್ರಂಪ್ ಅಮೆರಿಕಕ್ಕೆ ವಾಪಸ್ ಹೋದ ಮೇಲಾದರೂ ಸರ್ಕಾರಕ್ಕೆ ಒಳ್ಳೆ ಬುದ್ಧಿ ಬಂದು ನಮ್ಮ ಮಕ್ಕಳ ಏಳಿಗೆಗೆ ಕೆಲಸ ಮಾಡಲಿ’ ಎಂದು ಕಾಲನಿಯ ಮತ್ತೋರ್ವ ನಿವಾಸಿ ಜಗ್ಗ ಭಾಯ್ ಹೇಳುತ್ತಾರೆ. ಸುಮಾರು 5000 ಮಂದಿ ಸರಣಿಯಾ ಆವಾಸ್​ನಲ್ಲಿ ನೆಲೆಸಿದ್ದಾರೆ. ಚಾಕು, ಚೂರಿ, ಕತ್ತರಿಗೆ ಸಾಣೆ ಹಿಡಿದು ಚೂಪುಗೊಳಿಸುವ ವೃತ್ತಿಯಲ್ಲೇ ಬಹುತೇಕರು ತೊಡಗಿಕೊಂಡಿದ್ದಾರೆ.
ಗುಜರಾತ್​ಗೆ ಲಾಭ ಇದೆ
ಟ್ರಂಪ್ ಭೇಟಿಯ ಲಾಭವೇನು ಎನ್ನುವುದು ಅನೇಕರ ಪ್ರಶ್ನೆ. ವಿಶ್ವದ ದೊಡ್ಡಣ್ಣ ಬರುವಾಗ ಈ ರೀತಿ ತಯಾರಾಗುವುದು ತಪ್ಪೇನಲ್ಲ. ಗುಜರಾತ್ ಮಟ್ಟಿಗೆ ಟ್ರಂಪ್ ಭೇಟಿ ಲಾಭಕರವೆನಿಸಲಿದೆ. ಏಕೆಂದರೆ ಇಲ್ಲಿ ದೂತಾವಾಸ ಕಚೇರಿ ಆರಂಭಿಸಲು ಅಮೆರಿಕ ಸರ್ಕಾರ ಚಿಂತನೆ ನಡೆಸಿದೆ. ಇದುವರೆಗೆ ಅಮೆರಿಕ ವೀಸಾ ಪಡೆಯಲು ಗುಜರಾತ್ ಮಂದಿ ಮುಂಬೈಗೆ ಹೋಗಬೇಕಿತ್ತು. ಅಹ್ಮದಾಬಾದ್​ನಲ್ಲೇ ಕಚೇರಿ ತೆರೆದರೆ ಮುಂಬೈಗೆ ಹೋಗುವ ಪ್ರಮೇಯ ಬರುವುದಿಲ್ಲ. ಅದಲ್ಲದೆ ಇದರಿಂದ ಬೇರೆ ಬೇರೆ ರೀತಿಯ ಅನುಕೂಲಗಳೂ ಇವೆ ಎಂಬುದು ಹವ್ಯಾಸಿ ಪತ್ರಕರ್ತ ಸಾಗರ್ ಪಟೇಲ್ ಅಭಿಪ್ರಾಯ.
| ರಾಘವ ಶರ್ಮ ನಿಡ್ಲೆ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × four =
Remember me
