|ರಾಘವ ಶರ್ಮ ನಿಡ್ಲೆ,ಪಟಿಯಾಲ (ಪಂಜಾಬ್)
52 ವರ್ಷಗಳಿಂದ ಪಂಜಾಬ್​ನ ಚಿರಪರಿಚಿತ ಮುಖ ಮಾಜಿ ಸಿಎಂ ಕ್ಯಾಪ್ಟನ್ ಅಮರಿಂದರ್ ಸಿಂಗ್ ಕಾಂಗ್ರೆಸ್ ತೊರೆದು ಪಂಜಾಬ್ ಲೋಕಕಾಂಗ್ರೆಸ್ ಪಕ್ಷ ಸ್ಥಾಪಿಸಿದ್ದಲ್ಲದೆ, ಬಿಜೆಪಿ ಜತೆ ಮೈತ್ರಿ ಮಾಡಿಕೊಂಡು ಕಾಂಗ್ರೆಸ್ ಸೋಲಿಸಲು ಪಣತೊಟ್ಟಿದ್ದಾರೆ. ಕಳೆದ 4 ಅವಧಿಗಳಲ್ಲಿ ತಮ್ಮನ್ನು ಆಯ್ಕೆ ಮಾಡಿರುವ ರಾಜ್ಯದ ಪಟಿಯಾಲಾ ನಗರ ಕ್ಷೇತ್ರದಿಂದ ಹೊಸ ಪಕ್ಷದಿಂದ ಕಣಕ್ಕಿಳಿದಿರುವ ಕ್ಯಾಪ್ಟನ್​ಗೆ ಇದು ಪ್ರತಿಷ್ಠೆಯ ಚುನಾವಣೆ. ಆದರೆ, ಸಿಎಂ ಆಗಿದ್ದಾಗ ಜನರ ಮಧ್ಯೆ ಕಾಣಿಸಿಕೊಳ್ಳುವುದಕ್ಕಿಂತ ಹೆಚ್ಚು ತಮ್ಮ ಮಹಲ್​ನಲ್ಲೇ ಹೆಚ್ಚು ಕಾಲ ಕಳೆದ ಕ್ಯಾಪ್ಟನ್​ಗೆ ಕ್ಷೇತ್ರದ ಮತದಾರ ಮತ್ತೊಂದು ಅವಕಾಶ ನೀಡುತ್ತಾನೋ ಇಲ್ಲವೋ ಎಂಬುದು ಕುತೂಹಲದ ಪ್ರಶ್ನೆ.
ರಾಜಮನೆತನದ ಕ್ಯಾಪ್ಟನ್ ಸಿಂಗ್ ನೆಲೆಸಿರುವುದು ಪಟಿಯಾಲದ ನ್ಯೂ ಮೋತಿಭಾಗ್ ರಸ್ತೆಯಲ್ಲಿರುವ ಐಷಾರಾಮಿ ಮಹಲ್​ನಲ್ಲಿ. ಕಾಂಗ್ರೆಸ್ ಅಧ್ಯಕ್ಷ ಹಾಗೂ ಸರ್ಕಾರದ ಮುಖ್ಯಮಂತ್ರಿಯಾಗಿದ್ದಾಗಲೂ ಇದು ಕ್ಯಾಪ್ಟನ್ ಅಧಿಕಾರದ ಶಕ್ತಿ ಕೇಂದ್ರ. ಸಾಮಾನ್ಯರಿಗೆ ಇಲ್ಲಿ ಪ್ರವೇಶಕ್ಕೆ ಅವಕಾಶ ಕಡಿಮೆ. ಸಂಜೆ 6 ಗಂಟೆ ಬಳಿಕವಂತೂ ಕ್ಯಾಪ್ಟನ್ ಕಾಣಿಸಿಕೊಳ್ಳುವುದೇ ಕಡಿಮೆ ಎಂದು ಸ್ಥಳೀಯರೇ ಮಾತನಾಡಿಕೊಳ್ಳುತ್ತಾರೆ. 2017ರಲ್ಲಿ ಏಕಾಂಗಿ ಹೋರಾಟದಿಂದ ಕಾಂಗ್ರೆಸ್​ನ್ನು ಅಧಿಕಾರದ ಗದ್ದುಗೆ ಏರಿಸಿದರೂ, ಜನರ ನಿರೀಕ್ಷೆಗಳನ್ನು ಈಡೇರಿಸುವಲ್ಲಿ ಕ್ಯಾಪ್ಟನ್ ವಿಫಲರಾದರೆಂದೇ ಸಿಧು ಸೇರಿ ಅನೇಕರು ಹೈಕಮಾಂಡ್ ಮೇಲೆ ಒತ್ತಡ ಹೇರಿ ರಾಜೀನಾಮೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾದರು. ಕ್ಯಾಪ್ಟನ್ ಸಿಎಂ ಸ್ಥಾನದಲ್ಲಿ ಮುಂದುವರಿಯುತ್ತಿದ್ದರೆ ಚುನಾವಣೆಗೆ ಮುನ್ನವೇ ನಾವು ಶಸ್ತ್ರಾಸ್ತ್ರಗಳನ್ನು ಬದಿಗಿಟ್ಟು ಶರಣಾಗಬೇಕಿತ್ತು ಎನ್ನುತ್ತಾರೆ ಪಟಿಯಾಲಾ ಕಾಂಗ್ರೆಸ್ ಕಾರ್ಯಕರ್ತ ಗುರುಮುಖ್ ಸಿಂಗ್.
‘1763ರಲ್ಲಿ ಪಟಿಯಾಲ ನಗರ ನಿರ್ಮಾಣ ಬಾಬಾ ಆಲಾ ಸಿಂಗ್ ಕುಟುಂಬ ತಮ್ಮ ಸಂಸ್ಥಾನವನ್ನು ರಕ್ಷಣೆ ಮಾಡಿಕೊಳ್ಳುವುದಕ್ಕೆ ಬ್ರಿಟಿಷರ ಗುಲಾಮರಂತೆ ನಡೆದುಕೊಳ್ಳುತ್ತಿತ್ತು. ನಾವು ಕ್ಯಾಪ್ಟನ್​ರನ್ನು ಪದೇ ಪದೆ ಆಯ್ಕೆ ಮಾಡಿ ಗುಲಾಮರಂತೆ ಬದುಕಿದೆವೇ ವಿನಃ ಮೂಲಭೂತ ಸಮಸ್ಯೆಗಳಿಗೆ ಪರಿಹಾರ ಸಿಗಲೇ ಇಲ್ಲ. ಡ್ರಗ್ ಮಾಫಿಯಾ, 2015ರಲ್ಲಿ ಗುರುಗ್ರಂಥ ಸಾಹಿಬ್ ಅಪವಿತ್ರಗೊಳಿಸಿದ ಪ್ರಕರಣದ ತಪ್ಪಿತಸ್ಥರಿಗೆ ಶಿಕ್ಷೆ, ನಿರುದ್ಯೋಗ ನಿವಾರಣೆ ಸೇರಿ ಹಲವು ಭರವಸೆಗಳನ್ನು ನೀಡಿದರೂ ಒಂದೂ ಈಡೇರಲಿಲ್ಲ. ಇಂಥವರಿಗೆ ಮತ್ತೆ ಹಾಕಬೇಕೆ’ ಎಂದು ಪಟಿಯಾಲ ನಗರ ನಿವಾಸಿ ಅಮರ್​ಜಿತ್ ಸಿಂಗ್ ಪ್ರಶ್ನಿಸುತ್ತಾರೆ.
2015ರಲ್ಲಿ ಶಿರೋಮಣಿ ಅಕಾಲಿದಳ-ಬಿಜೆಪಿ ಮೈತ್ರಿ ಸರ್ಕಾರವಿದ್ದಾಗ ಫರೀದ್​ಕೋಟ್​ನ ಬುರ್ಜ್ ಜವಾಹರ್ ಸಿಂಗ್​ವಾಲಾ ಹಳ್ಳಿಯಲ್ಲಿ ಸಿಖ್ಖರ ಪವಿತ್ರ ಗುರುಗ್ರಂಥ ಸಾಹಿಬ್ ಅಪವಿತ್ರಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿ ಪ್ರತಿಭಟನಾಕಾರರ ವಿರುದ್ಧ ಪೊಲೀಸರು ಗುಂಡಿನ ದಾಳಿ ನಡೆಸಿದ್ದರು. ಇದು ರಾಜ್ಯಾದ್ಯಂತ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿ, 2017ರಲ್ಲಿ ಕ್ಯಾಪ್ಟನ್ ಅಧಿಕಾರಕ್ಕೇರುತ್ತಿದ್ದಂತೆಯೇ ಅಕಾಲಿದಳ ಮುಖಂಡರ ವಿರುದ್ಧ ಕ್ರಮ ಕೈಗೊಳ್ಳುವ ವಚನ ನೀಡಿದರು. ಆದರೆ, 5 ವರ್ಷಗಳಲ್ಲಿ ಅಕಾಲಿದಳ ಒಬ್ಬನೇ ಒಬ್ಬ ವ್ಯಕ್ತಿ ಬಂಧನಕ್ಕೀಡಾಗಿಲ್ಲ ಎನ್ನುವುದನ್ನೇ ಅಸ್ತ್ರವನ್ನಾಗಿಸಿಕೊಂಡಿರುವ ವಿಪಕ್ಷಗಳು, ಕ್ಯಾಪ್ಟನ್ ಸಿಎಂ ಆಗಿದ್ದಾಗ ಅಕಾಲಿದಳ ಮುಖಂಡರನ್ನು ರಕ್ಷಿಸಿದರು ಎಂದು ದೂರುತ್ತಾರೆ. ಪ್ರಕರಣ ಸಿಖ್ ಧಾರ್ವಿುಕ ಭಾವನೆಗೆ ಸಂಬಂಧಿಸಿದ್ದಾಗಿರುವುದರಿಂದ ತಪ್ಪಿತಸ್ಥರಿಗೆ ಶಿಕ್ಷೆ ನೀಡುವಲ್ಲಿ ಕ್ಯಾಪ್ಟನ್ ಹಿಂದೇಟು ಹಾಕಿದರು ಎಂಬ ಆಕ್ರೋಶ ಸಾರ್ವಜನಿಕರಲ್ಲೂ ಇದೆ.
ಹಾಗಂತ ಕ್ಯಾಪ್ಟನ್ ಈ ಎಲ್ಲಾ ಆರೋಪಗಳನ್ನು ತಳ್ಳಿಹಾಕಿದ್ದಾರೆ. ಸಿಎಂ ಆಗಿ 4.5 ವರ್ಷಗಳ ಅವಧಿಯಲ್ಲಿ ಡ್ರಗ್ ಮಾಫಿಯಾದ 40 ಸಾವಿರಕ್ಕೂ ಹೆಚ್ಚು ಮಂದಿಯನ್ನು ಬಂಧಿಸಲಾಗಿದೆ. ತಮ್ಮ ಪಕ್ಷ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿರುವುದರಿಂದ ಪಂಜಾಬ್​ನ್ನು ಮಾಫಿಯಾಗಳಿಂದ ರಕ್ಷಿಸುವುದಲ್ಲದೆ, ಪಾಕಿಸ್ತಾನ ಗಡಿಯಿಂದ ಪಂಜಾಬ್​ಗೆ ಪೂರೈಕೆಯಾಗುತ್ತಿರುವ ಡ್ರಗ್ಸ್​ಗಳಿಗೂ ಕಡಿವಾಣ ಹಾಕಲಿದೆ ಎಂದು ಹೇಳುತ್ತಾರೆ.
2017ರಲ್ಲಿ ಈ ಕ್ಷೇತ್ರದಿಂದ ಕ್ಯಾಪ್ಟನ್ 52 ಸಾವಿರ ಮತಗಳಿಂದ ಗೆದ್ದಿದ್ದರು. ಇಲ್ಲಿ ಹಿಂದು ಮತಗಳು ಗಣನೀಯ ಪ್ರಮಾಣದಲ್ಲಿದ್ದು, ಬಿಜೆಪಿ ಜತೆಗಿನ ಮೈತ್ರಿಯಿಂದಾಗಿ ರಾಷ್ಟ್ರವಾದ ಸಮರ್ಥಿಸುವ ಮತಗಳು ಕ್ಯಾಪ್ಟನ್ ಪರ ಬೀಳುವ ಸಾಧ್ಯತೆಗಳಿವೆ. ಆದರೆ ಹಿಂದು ಮತಗಳನ್ನು ವಿಭಜಿಸುವ ಉದ್ದೇಶದಿಂದಲೇ ಅಕಾಲಿದಳ ಹರ್ಪಾಲ್ ಜುನೇಜಾ ಮತ್ತು ಕಾಂಗ್ರೆಸ್ ಮಾಜಿ ಮೇಯರ್ ವಿಷ್ಣು ಶರ್ಮ ಎಂಬ ಸಿಖ್ ಹಿಂದು ಅಭ್ಯರ್ಥಿಗಳಿಗೆ ಟಿಕೆಟ್ ನೀಡಿವೆ. ಕ್ಯಾಪ್ಟನ್ ಮೇಲಿನ ಮುನಿಸಿನಿಂದಾಗಿ ವಿಷ್ಣು ಶರ್ಮ ಕಾಂಗ್ರೆಸ್ ತೊರೆದಿದ್ದರು. ಆದರೆ, ಕ್ಯಾಪ್ಟನ್ ರಾಜೀನಾಮೆ ಬಳಿಕ ಪಕ್ಷಕ್ಕೆ ವಾಪಸಾದ ವಿಷ್ಣುಶರ್ಮ, ಕ್ಯಾಪ್ಟನ್ ವಿರುದ್ಧವೇ ತೊಡೆತಟ್ಟಿದ್ದಾರೆ. ಆಮ್ ಆದ್ಮಿ ಪಾರ್ಟಿಯಿಂದ ಪಟಿಯಾಲ ನಗರದ ಮಾಜಿ ಮೇಯರ್ (ಆಗ ಅಕಾಲಿದಳದಲ್ಲಿದ್ದರು) ಅಜಿತ್​ಪಾಲ್ ಸಿಂಗ್ ಕೋಹ್ಲಿ ಸ್ಪರ್ಧೆಯಲ್ಲಿದ್ದಾರೆ. ಅಜಿತ್​ಪಾಲ್ ಸಿಂಗ್ ತಂದೆ ಸುರ್ಜೀತ್ ಸಿಂಗ್ ಕೋಹ್ಲಿ ಮತ್ತು ಅಜ್ಜ ಸರ್ದಾರ ಸಿಂಗ್ ಕೋಹ್ಲಿ ಇಬ್ಬರೂ ಅಕಾಲಿದಳದಿಂದ ಶಾಸಕರಾಗಿ ಆಯ್ಕೆಯಾಗಿದ್ದರು.
ಕ್ಯಾಪ್ಟನ್ ರಾಜಕೀಯ ಜೀವನ:ಕ್ಯಾಪ್ಟನ್ ಸಿಂಗ್ ತಾಯಿ ಮೊಹಿಂದರ್ ಕೌರ್ ಹಳೆ ತಲೆಮಾರಿನ ಕಾಂಗ್ರೆಸ್ ನಾಯಕರ ಒಡನಾಟದಿಂದಾಗಿ 1962ರಲ್ಲಿ ರಾಜ್ಯಸಭೆ ಸದಸ್ಯರಾದರು. 1967ರಲ್ಲಿ ಕ್ಯಾಪ್ಟನ್ ತಂದೆ ದಕಾಲಾ ವಿಧಾನಸಭೆ ಕ್ಷೇತ್ರದಿಂದ ಶಾಸಕರಾದರೆ, ತಾಯಿ ಕೌರ್ ಪಟಿಯಾಲ ಲೋಕಸಭೆಯಿಂದ ಸಂಸದರಾದರು. ಭಾರತೀಯ ಸೇನೆಯಲ್ಲಿ ಅಧಿಕಾರಿಯಾಗಿದ್ದ ಕ್ಯಾಪ್ಟನ್ ಅಮರಿಂದರ್ ಸಿಂಗ್, ಸೇನೆಯಿಂದ ಸ್ವಯಂ ನಿವೃತ್ತಿಯಾಗಿ ತಂದೆಯ ರಾಜಕೀಯ ಹಾದಿ ತುಳಿದರು. 1970ರ ವಿಧಾನಸಭೆ ಚುನಾವಣೆ, 1977ರಲ್ಲಿ ಪಟಿಯಾಲ ಕ್ಷೇತ್ರದಿಂದ ಲೋಕಸಭೆಗೆ ಸ್ಪರ್ಧಿಸಿದರೂ ಗೆಲ್ಲಲಾಗಲಿಲ್ಲ. ಆದರೆ 1980ರ ಲೋಕಸಭೆ ಚುನಾವಣೆಯಲ್ಲಿ ಮೊದಲ ಗೆಲುವು ಸಾಧಿಸಿದ ಬಳಿಕ ಹಿಂತಿರುಗಿ ನೋಡಲಿಲ್ಲ.
1984ರಲ್ಲಿ ಕೇಂದ್ರ ಕಾಂಗ್ರೆಸ್ ಸರ್ಕಾರದ ಅಪರೇಷನ್ ಬ್ಲೂಸ್ಟಾರ್ ಖಂಡಿಸಿ ಪಕ್ಷಕ್ಕೆ ರಾಜೀನಾಮೆ ನೀಡಿದ್ದ ಕ್ಯಾಪ್ಟನ್, ನಂತರದ ವಿಧಾನಸಭೆ ಚುನಾವಣೆಯಲ್ಲಿ ಬಠಿಂಡಾದ ತಲ್ವಾಂಡಿ ಸಾಬೋದಲ್ಲಿ ಶಿರೋಮಣಿ ಅಕಾಲಿದಳ ಪಕ್ಷದಿಂದ ಸ್ಪರ್ಧಿಸಿ ಶಾಸಕರಾಗಿ, ಸಚಿವರಾದರು. ಆದರೆ, 1986ರಲ್ಲಿ ಅಕಾಲಿದಳದೊಂದಿಗೆ ಮುನಿಸಿಕೊಂಡು ಶಿರೋಮಣಿ ಅಕಾಲಿದಳ (ಪಂಥಿಕ್) ಪಕ್ಷ ಸ್ಥಾಪಿಸಿದ ಕ್ಯಾಪ್ಟನ್, ಕೆಲ ವರ್ಷಗಳ ಬಳಿಕ ಮೂಲ ಅಕಾಲಿದಳದೊಂದಿಗೆ ತಮ್ಮ ಪಕ್ಷವನ್ನು ವಿಲೀನಗೊಳಿಸಿದರು. 1997ರಲ್ಲಿ ಅಕಾಲಿದಳ ಅಧ್ಯಕ್ಷ ಪ್ರಕಾಶ್ ಸಿಂಗ್ ಬಾದಲ್ ಟಿಕೆಟ್ ನೀಡಲಿಲ್ಲ ಎಂಬ ಕಾರಣಕ್ಕಾಗಿ ಪಕ್ಷ ತೊರೆದು ಕಾಂಗ್ರೆಸ್​ಗೆ ವಾಪಸಾದರು. 1999ರಲ್ಲಿ ಕ್ಯಾಪ್ಟನ್ ಪಕ್ಷದ ರಾಜ್ಯಾಧ್ಯಕ್ಷರಾದರು, 2002ರ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೇರಿತು, ಮೊದಲ ಬಾರಿಗೆ ಕ್ಯಾಪ್ಟನ್ ಸಿಎಂ ಸ್ಥಾನದಲ್ಲಿ ಕುಳಿತರು. 10 ವರ್ಷಗಳ ನಂತರ ಮತ್ತೆ ಮುಖ್ಯಮಂತ್ರಿಯಾದರು. ರಾಜಕೀಯ ಜೀವನದಲ್ಲಿ ಹಲವು ಏಳುಬೀಳುಗಳನ್ನು ಕಂಡಿರುವ ಕ್ಯಾಪ್ಟನ್ ತಮ್ಮ ರಾಜಕೀಯ ಜೀವನದ ಸಂಧ್ಯಾಕಾಲದಲ್ಲಿ ಕಾಂಗ್ರೆಸ್​ನ್ನು ಮುಗಿಸಬೇಕೆಂಬ ಹಠಕ್ಕೆ ಬಿದ್ದಿದ್ದಾರೆ. ಆದರೆ, ಅಕಾಲಿದಳ-ಕಾಂಗ್ರೆಸ್ ಇಬ್ಬರಿಂದಲೂ ಹೈರಾಣಾಗಿರುವ ಮತದಾರನ ಮನಸ್ಸಿನಲ್ಲಿ ಏನಿದೆಯೋ?
ಕರೊನಾದಿಂದ ಹೆಣಗಳು ಉರುಳುತ್ತಿದ್ದಾಗ ನಾನು ಆಸ್ಪತ್ರೆಯೊಂದರಲ್ಲಿ ಗಾರ್ಡ್ ಆಗಿದ್ದೆ. ಕರೊನಾ ಪರಿಹಾರಾರ್ಥವಾಗಿ ಕೇಂದ್ರದ ರೇಷನ್ ಬಡವರ ಮನೆಗೆ ಬಂದಿದೆ. ಆದರೆ, ಈ ಕ್ಯಾಪ್ಟನ್ ಸಾಬ್ ಜನರಿಗೆ ಏನು ಮಾಡಿದರು? ಕೇಂದ್ರದಿಂದ ಬರುತ್ತಿದ್ದ ರೇಷನ್ ಮೇಲೆ ತಮ್ಮ ಫೋಟೋ ಹಾಕಿ ಜನರಿಗೆ ಕೊಟ್ಟರು. ಅದರಲ್ಲಿ ಕೆಲವನ್ನು ಅವರ ಹಿಂಬಾಲಕರೇ ನುಂಗಿ ಹಾಕಿದರು.
ಬಡವರ ಬದುಕು ಬದಲಾಗಿಲ್ಲ:
ಬ್ಯಾಟರಿ ಆಟೋಗಳು ಬಂದ ಮೇಲೆ ಸೈಕಲ್ ರಿಕ್ಷಾಗಳತ್ತ ಗ್ರಾಹಕರು ಬರುತ್ತಿಲ್ಲ. ಹೀಗಾಗಿ ನನ್ನ ಸೈಕಲ್ ರಿಕ್ಷಾ ಮಾರಿದೆ. ಬ್ಯಾಟರಿ ಆಟೋ ಖರೀದಿಗೆ ದುಡ್ಡಿಲ್ಲ. ಹೆಂಡತಿಗೆ ಕ್ಯಾನ್ಸರ್. ಮಾತ್ರೆಗೇ ದುಡ್ಡು ಸಾಕಾಗುತ್ತಿಲ್ಲ. ಹೀಗಾಗಿ ದಿನವೂ ನಾನು-ಪತ್ನಿ ಗುರುದ್ವಾರದಲ್ಲಿ ಊಟ ಮಾಡುತ್ತೇವೆ ಎನ್ನುತ್ತಾರೆ ಪಟಿಯಾಲದ ಸಂಜಯ್ ನಗರ ಕಾಲನಿಯ ವೃದ್ಧ ಓಂ ಪ್ರಕಾಶ್. ಈವರೆಗೆ ಅಕಾಲಿದಳ ಮತ್ತು ಕಾಂಗ್ರೆಸ್​ಗೆ ಮತ ಹಾಕುತ್ತಿದ್ದೆವು. ಆದರೆ, ನಮ್ಮಂಥವರ ಜೀವನ ಬದಲಾಗಲೇ ಇಲ್ಲ. ಆಪ್​ನ್ನು ಬೆಂಬಲಿಸುವ ಹೊರತು ಬೇರೆ ಆಯ್ಕೆಗಳಿಲ್ಲ ಎನ್ನುತ್ತಾರೆ ಅವರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 4 =
Remember me
