ಬೆಂಗಳೂರು:ರಾಜಸ್ಥಾನದಲ್ಲಿ ನಡೆದಿರುವ ಕಾಂಗ್ರೆಸ್ ಚಿಂತನಾ ಶಿಬಿರದಲ್ಲಿ ಕರ್ನಾಟಕವನ್ನು ಗೆಲ್ಲುವ ಬಗ್ಗೆ ಚಿಂತನ ಮಂಥನ ಕೂಡ ನಡೆದಿದೆ. ಈ ವರ್ಷದ ನವೆಂಬರ್​ನಲ್ಲಿ ನಡೆಯಲಿರುವ ಗುಜರಾತ್ ವಿಧಾನಸಭಾ ಚುನಾವಣೆ ಹಾಗೂ 2023ರ ಮಾರ್ಚ್-ಏಪ್ರಿಲ್​ನಲ್ಲಿ ನಡೆಯುವ ಕರ್ನಾಟಕ ವಿಧಾನಸಭಾ ಚುನಾವಣೆ ಬಗ್ಗೆ ಕಾಂಗ್ರೆಸ್ ಗಂಭೀರವಾಗಿದ್ದು, 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಮಣಿಸಲು ಈ ಎರಡು ರಾಜ್ಯಗಳನ್ನು ಕೈ ವಶಮಾಡಿಕೊಳ್ಳಲೇಬೇಕೆಂದು ಪಕ್ಷದ ನಾಯಕರು ಸಂಕಲ್ಪ ಮಾಡಿದ್ದಾರೆ. ಈ ಎರಡು ರಾಜ್ಯಗಳ ಕುರಿತಂತೆ ಪ್ರಮುಖ ಅಜೆಂಡವಾಗಿ ಸಭೆಯಲ್ಲಿ ಚರ್ಚೆಯಾಗಿಲ್ಲ. ಬದಲಾಗಿ ಅನೌಪಚಾರಿಕ ಚರ್ಚೆ ಸಂದರ್ಭದಲ್ಲಿ ಕರ್ನಾಟಕದ ಬಗ್ಗೆ ಹೈಕಮಾಂಡ್ ಆಸಕ್ತಿ ತೋರಿರುವುದು ರಾಜ್ಯ ನಾಯಕರ ಗಮನಕ್ಕೆ ಬಂದಿದೆ. ಕಾಂಗ್ರೆಸ್ ಪೈಪೋಟಿ ನೀಡಬಹುದಾದ ಹಾಗೂ ಗೆಲ್ಲಲು ಸಾಧ್ಯವಿರುವ ರಾಜ್ಯಗಳಲ್ಲಿ ಕರ್ನಾಟಕವೂ ಒಂದು. 2018ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್​ಗೆ ಅಗತ್ಯವಿರುವಷ್ಟು ಸ್ಥಾನಗಳು ಬಾರದೇ ಇದ್ದರು ಶೇಕಡವಾರು ಮತಗಳಿಕೆಯಲ್ಲಿ ಮುಂದಿತ್ತು. ಹೀಗಾಗಿ ಪಕ್ಷದ ಬೇರು ಇಲ್ಲಿ ಗಟ್ಟಿಯಾಗಿದೆ ಎಂದು ಭಾವಿಸಿರುವ ಕಾಂಗ್ರೆಸ್, ಈ ಬಾರಿ ಮತಗಳನ್ನು ಸ್ಥಾನಗಳಾಗಿ ಪರಿವರ್ತನೆಯಾಗಿಸುವ ನಿಟ್ಟಿನಲ್ಲಿ ಗಮನ ಹರಿಸಿದೆ ಎಂದು ಪಕ್ಷದ ಹಿರಿಯ ಮುಖಂಡರು ವಿಜಯವಾಣಿಗೆ ತಿಳಿಸಿದ್ದಾರೆ.
ಒಟ್ಟಾರೆ ಪಕ್ಷದ ಬಗ್ಗೆ ಚರ್ಚೆ ನಡೆಯುವ ಜತೆಗೆ ಚುನಾವಣೆ ತಯಾರಿ ಬಗ್ಗೆ ಹೈಕಮಾಂಡ್ ಗಮನಹರಿಸಿದೆ. ಮುಂಬರುವ ಚುನಾವಣೆ ಗೆಲ್ಲುವುದು ಅತೀ ಮುಖ್ಯ. ಇದೇ ಕಾರಣಕ್ಕೆ ಕರ್ನಾಟಕವನ್ನು ಗೆಲ್ಲಲು ಅಗತ್ಯವಾದ ಅಂಶಗಳನ್ನು ಪಕ್ಷದ ಪ್ರಮುಖ ನಾಯಕರು ಪಟ್ಟಿಮಾಡಿಕೊಂಡು ಅಭಿಪ್ರಾಯ ಸಂಗ್ರಹಿಸುತ್ತಿದ್ದಾರೆ.
ಕರ್ನಾಟಕದ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಜತೆ ಇನ್ನಿಬ್ಬರು ಸಹ ಉಸ್ತುವಾರಿಗಳು ನೇಮಕಗೊಳ್ಳುವ ಜತೆಗೆ, ಪ್ರಿಯಾಂಕಾ ವಾದ್ರಾ ಅವರನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸಬೇಕೆಂಬುದು ರಾಜ್ಯ ನಾಯಕರ ಬೇಡಿಕೆಯಾಗಿದೆ. ಕಳೆದ 10 ವರ್ಷಗಳಿಂದ ಉತ್ತರಪ್ರದೇಶದ ಜವಾಬ್ದಾರಿ ತೆಗೆದು ಕೊಂಡಿರುವ ಪ್ರಿಯಾಂಕಾ ವಾದ್ರಾ, ಅಲ್ಲಿ ಕಾಂಗ್ರೆಸ್​ಗೆ ಅಲ್ಪಮಟ್ಟಿನ ಚೇತರಿಕೆ ಒದಗಿಸಿದ್ದಾರೆ. ಮುಂಬರುವ ರಾಜ್ಯ ಸಭಾ ಚುನಾವಣೆಯಲ್ಲಿ ಪ್ರಿಯಾಂಕಾ ವಾದ್ರಾ ಅವರನ್ನು ಕಣಕ್ಕಿಳಿಸುವುದು ಒಂದು ಭಾಗವಾದರೆ ಕರ್ನಾಟಕದಲ್ಲಿ ಅವರು ಹೆಚ್ಚೆಚ್ಚು ತೊಡಗಿಕೊಂಡರೆ ಪಕ್ಷದ ಗೆಲುವು ಸುಲಭವಾಗಲಿದೆ ಎಂದು ರಾಜ್ಯ ನಾಯಕರು ಅಭಿಪ್ರಾಯ ಮಂಡಿಸಿದ್ದಾರೆಂದು ಗೊತ್ತಾಗಿದೆ.
ಈ ಹಿಂದೆ ಇಂದಿರಾ ಗಾಂಧಿ, ಸೋನಿಯಾ ಗಾಂಧಿ ಕೂಡ ಕರ್ನಾಟಕದಿಂದ ಲೋಕಸಭೆಗೆ ಸ್ಪರ್ಧಿಸಿ ಪಕ್ಷಕ್ಕೆ ಶಕ್ತಿ ತುಂಬಿದ್ದರು. ಈಗ ಪ್ರಿಯಾಂಕಾ ಕೂಡ ಕರ್ನಾಟಕದಿಂದ ಸ್ಪರ್ಧಿಸಿ, ರಾಜ್ಯದ ಜವಾಬ್ದಾರಿ ತೆಗೆದುಕೊಂಡರೆ ಅನುಕೂಲವಾಗಲಿದೆ ಎಂಬುದು ರಾಜ್ಯನಾಯಕರ ಅಭಿಪ್ರಾಯ. ಇಂದಿರಾ ಗಾಂಧಿಯವರು 1978ರಲ್ಲಿ ಚಿಕ್ಕಮಗಳೂರಿಂದ ಸ್ಪರ್ಧಿಸಿ ಸಂಚಲನ ಮೂಡಿಸಿದ್ದರು. ಎರಡು ದಶಕದ ಬಳಿಕ 1999ರಲ್ಲಿ ಇಂದಿರಾ ಸೊಸೆ ಸೋನಿಯಾ ಬಳ್ಳಾರಿಯಿಂದ ಸ್ಪರ್ಧಿಸಿ ಹೈವೋಲ್ಟೇಜ್ ಕ್ಷೇತ್ರವಾಗಿ ದೇಶಕ್ಕೆ ಪರಿಚಯಿಸಿದ್ದರು. ಇದೀಗ ಎರಡು ದಶಕದ ಬಳಿಕ ನೆಹರು ಕುಟುಂಬದ ಕುಡಿ ಪ್ರಿಯಾಂಕಾ ವಾದ್ರಾರನ್ನು ಕಣಕ್ಕಿಳಿಸಬೇಕು. ಆ ಮೂಲಕ ರಾಜ್ಯದಲ್ಲಿ ಪಕ್ಷವು ಅಧಿಕಾರದ ಚುಕ್ಕಾಣಿ ಹಿಡಿಯಲು ಸಾಧ್ಯವಿದೆ ಎಂಬ ಲೆಕ್ಕಾಚಾರವನ್ನೂ ಹೈಕಮಾಂಡ್ ಮುಂದೆ ಪ್ರಸ್ತುತಪಡಿಸಲಾಗಿದೆ. ಪಕ್ಷದ ರಾಜ್ಯ ಘಟಕದ ನಾಯಕರ ನಡುವಿನ ಕಂದಕ ಕಡಿಮೆ ಮಾಡಲು ಹರಸಾಹಸ ಪಡುತ್ತಿರುವಾಗಲೇ ಇಂಥದ್ದೊಂದು ಪ್ರಸ್ತಾಪ ಮುಂದೆ ಬಂದಿರುವ ಬಗ್ಗೆ ಹೈಕಮಾಂಡ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ, ಚರ್ಚೆ ಮಾಡಿ ನಂತರ ತಿಳಿಸಲಾಗುತ್ತದೆ ಎಂದು ಭರವಸೆ ನೀಡಿದೆ ಎಂದು ಮೂಲಗಳು ತಿಳಿಸಿವೆ.
ಬಿಬಿಎಂಪಿ ಕಸದ ಲಾರಿಗೆ ಮತ್ತೊಂದು ಬಲಿ; ಕಳೆದೆರಡು ತಿಂಗಳಲ್ಲಿ ನಾಲ್ವರ ಸಾವು…
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − eight =
Remember me
