ಬಾಂಗ್ಲಾದೇಶದಲ್ಲಿ ಕಳೆದ ಆರು ತಿಂಗಳಲ್ಲಿ ಎರಡು ಬಾರಿ ಇಸ್ಕಾನ್​ನ ರಾಧಾಕೃಷ್ಣ ಮಂದಿರದ ಮೇಲೆ ದಾಳಿ ಮಾಡಲಾಗಿದೆ. ಅಷ್ಟೇ ಅಲ್ಲ, ಹಿಂದೂಗಳ ಮನೆ, ಅಂಗಡಿಗಳಿಗೆ ಬೆಂಕಿ ಹಚ್ಚುವ ಕೃತ್ಯಗಳು ಆಗಾಗ ಮರುಕಳಿಸುತ್ತಲೇ ಇವೆ. ವರ್ಷದಿಂದ ವರ್ಷಕ್ಕೆ ಬಾಂಗ್ಲಾದೇಶದಲ್ಲಿ ಹಿಂದೂಗಳ ಸಂಖ್ಯೆ ಕಡಿಮೆಯಾಗುತ್ತಿದ್ದು, ಅಲ್ಪಸಂಖ್ಯಾತರ ರಕ್ಷಣೆಗೆ ಬರಬೇಕಾದ ಸರ್ಕಾರ ಮೂಲಭೂತವಾದಿಗಳ ಎದುರು ಮಂಡಿಯೂರಿದೆ. ಹಿಂಸಾಚಾರದಲ್ಲಿ ಭಾಗಿಯಾಗಿರುವ ಸಂಘಟನೆಗಳ ಯಾವವು ಅಂತ ಸ್ಪಷ್ಟವಾಗಿ ಗೊತ್ತಿದ್ದರೂ, ಅವುಗಳ ವಿರುದ್ಧ ಯಾವುದೇ ಕ್ರಮಕ್ಕೆ ಸರ್ಕಾರ ಮುಂದಾಗುತ್ತಿಲ್ಲ.
ನಿತ್ಯ 750 ಜನರ ಪಲಾಯನ!:ಢಾಕಾ ವಿಶ್ವವಿದ್ಯಾಲಯದ ಅರ್ಥಶಾಸ್ತ್ರಜ್ಞ ಪ್ರೊ.ಅಬ್ದುಲ್ ಬರ್ಕತ್ ಕೈಗೊಂಡಿರುವ ಅಧ್ಯಯನದಂತೆ, ಸುರಕ್ಷತೆಯ ಕೊರತೆ ಮತ್ತು ಆರ್ಥಿಕ ಸಂಕಷ್ಟದಿಂದ ಕಂಗೆಟ್ಟು ಪ್ರತಿದಿನ ಸರಾಸರಿ 750 ಹಿಂದೂಗಳು ಬಾಂಗ್ಲಾದೇಶ ತೊರೆಯುತ್ತಿದ್ದಾರೆ ಮತ್ತು ಈ ಪೈಕಿ ಹೆಚ್ಚಿನವರು ಭಾರತಕ್ಕೆ ಬರುತ್ತಿದ್ದಾರೆ.
ಕುಸಿದ ಹಿಂದೂ ಜನಸಂಖ್ಯೆ:1947ರಲ್ಲಿ ಭಾರತ ವಿಭಜನೆಗೊಂಡು ಪಾಕಿಸ್ತಾನ ಅಸ್ತಿತ್ವಕ್ಕೆ ಬಂತು. ಆಗ ಪೂರ್ವ ಪಾಕಿಸ್ತಾನದಲ್ಲಿದ್ದ (ಈ ಪ್ರದೇಶವೇ 1971ರಲ್ಲಿ ಬಾಂಗ್ಲಾದೇಶವಾಯಿತು) ಹಿಂದೂಗಳ ಜನಸಂಖ್ಯೆ ಶೇಕಡ 30ರಷ್ಟು. ಬಾಂಗ್ಲಾದೇಶ ಸರ್ಕಾರದ ಅಂಕಿಅಂಶಗಳ ಪ್ರಕಾರ 1980ರ ದಶಕದಲ್ಲಿ ಹಿಂದೂಗಳ ಜನಸಂಖ್ಯೆ ಶೇಕಡ 13.5 ಇತ್ತು. 2011ರ ಜನಗಣತಿ ವರದಿಯ ಪ್ರಕಾರ 16.5 ಕೋಟಿ ಜನಸಂಖ್ಯೆಯ ಬಾಂಗ್ಲಾದೇಶದಲ್ಲಿ ಹಿಂದೂಗಳ ಸಂಖ್ಯೆ ಕೇವಲ ಶೇ.8.5. ಅಂದರೆ, ನಾಲ್ಕೇ ದಶಕಗಳಲ್ಲಿ ಶೇ.5ರಷ್ಟು ಕಡಿಮೆಯಾಯಿತು. 2011ರ ಜನಗಣತಿ ವರದಿ ಪ್ರಕಾರ ಒಂದೇ ದಶಕದಲ್ಲಿ ಹಿಂದೂಗಳ ಸಂಖ್ಯೆ 10 ಲಕ್ಷದಷ್ಟು ಕಡಿಮೆಯಾಯಿತು. ಶೇ.90ಕ್ಕಿಂತ ಹೆಚ್ಚು ಸಂಖ್ಯೆ ಮುಸ್ಲಿಂರದ್ದು. ಬೌದ್ಧರು ಶೇ.0.6, ಕ್ರೖೆಸ್ತರ ಸಂಖ್ಯೆ ಶೇ.0.4ರಷ್ಟಿದೆ. ಇಲ್ಲಿ ಹಿಂದೂಗಳು ಮತ್ತು ಮುಸ್ಲಿಂರ ಭಾಷೆ ಬಂಗಾಳಿಯೇ. ಸಾಂಸ್ಕೃತಿಕವಾಗಿಯೂ ಬಹುತೇಕ ಸಮಾನ ಸಂಗತಿಗಳಿವೆ. ಆದರೆ, ಧರ್ಮ ಬೇರೆ ಎಂಬ ಒಂದೇ ಕಾರಣಕ್ಕೆ ಹಿಂದೂಗಳನ್ನು ಗುರಿಯಾಗಿಸಲಾಗುತ್ತಿದೆ.
ಹಿಂಸೆ ಹರಡಲು ಹೊಸ ಪ್ಯಾಟರ್ನ್:ಇತ್ತೀಚಿನ ವರ್ಷಗಳಲ್ಲಿ ದಾಳಿಗೆ ಹೊಸ ಕುತಂತ್ರ ಹೆಣೆಯಲಾಗಿದೆ. ಮೊದಲಿಗೆ, ‘ಇಸ್ಲಾಂಗೆ ಅವಮಾನ ಮಾಡಲಾಗಿದೆ’ ಎಂದು ಸಾಮಾಜಿಕ ಮಾಧ್ಯಮಗಳ ಮುಖೇನ ವದಂತಿ ಹಬ್ಬಿಸಲಾಗುತ್ತದೆ. ಎರಡನೇ ಹಂತದಲ್ಲಿ ಮೂಲಭೂತವಾದಿಗಳು, ಹಿಂದೂಗಳು ವಾಸಿಸುವ ಕ್ಷೇತ್ರಗಳನ್ನು ಗುರುತಿಸಿ, ದಾಳಿ ಮಾಡುತ್ತಾರೆ, ಅವರ ಆಸ್ತಿಪಾಸ್ತಿಗಳನ್ನು ನಾಶಮಾಡುತ್ತಾರೆ. ಹೀಗೆ ಹಿಂಸೆಯ ದಳ್ಳುರಿಗೆ ಸಾವಿರಾರು ಹಿಂದೂಗಳು ಮನೆ, ಇತರ ಆಸ್ತಿಪಾಸ್ತಿ ಕಳೆದುಕೊಂಡಿದ್ದಾರೆ. ಚುನಾವಣೆ ಸಮೀಪಿಸಿದಾಗಲಂತೂ ದಾಳಿಗಳು ಇನ್ನಷ್ಟು ಹೆಚ್ಚುತ್ತವೆ. ‘ಆಡಳಿತಾರೂಢ ಆವಾಮಿ ಲೀಗ್ ಮತ್ತು ಜಮಾತ್-ಎ-ಇಸ್ಲಾಂ ತಮ್ಮ ಸ್ವಾರ್ಥಕ್ಕಾಗಿ ಕಳೆದ ಒಂದು ದಶಕದಿಂದ ಎರಡೂ ಧರ್ಮಗಳ ನಡುವೆ ಕಂದಕ ಸೃಷ್ಟಿಸುವ ಕೆಲಸ ಮಾಡುತ್ತಿವೆ. ಪ್ರಧಾನಿ ಶೇಖ್ ಹಸೀನಾ ಹಿಂದೂಗಳ ಮೇಲಿನ ದಾಳಿಗೆ ಮೂಲಭೂತವಾದಿಗಳನ್ನು ಹೊಣೆಯಾಗಿಸುತ್ತಾರೆ ವಿನಾ, ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ’ ಎನ್ನುತ್ತಾರೆ ಬಾಂಗ್ಲಾದೇಶದ ರಾಜಕೀಯ ವಿಶ್ಲೇಷಕರು.
ಆ ನೋವು ಮರೆಯಲು ಸಾಧ್ಯವಿಲ್ಲ:2021ರ ಅಕ್ಟೋಬರ್ 13ರಂದು ದುರ್ಗಾ ಪೂಜೆಯ ಸಂದರ್ಭದಲ್ಲಿ ಕುರಾನ್​ಗೆ ಅವಮಾನ ಮಾಡಲಾಗಿದೆ ಎಂದು ಮೂಲಭೂತವಾದಿಗಳು ಸುಳ್ಳುಸುದ್ದಿ ಹಬ್ಬಿಸಿದ ಪರಿಣಾಮ ದೇಶದ ಅನೇಕ ಕಡೆಗಳಲ್ಲಿ ಹಿಂದೂಗಳ ಮೇಲೆ ಮತ್ತು ಅವರ ಆಸ್ತಿಪಾಸ್ತಿಗಳ ಮೇಲೆ ದಾಳಿಗಳು ನಡೆದವು. ಅಷ್ಟೇ ಅಲ್ಲ, ನೂರಾರು ದೇಗುಲಗಳನ್ನು ಧ್ವಂಸ ಮಾಡಲಾಯಿತು. ಈ ಹಿಂಸಾಚಾರದಲ್ಲಿ 6 ಜನರು ಮೃತಪಟ್ಟರು ಮತ್ತು ನೂರಾರು ಜನ ಗಾಯಗೊಂಡರು. ಒಂದು ಬೌದ್ಧ ಮಠಕ್ಕೂ ಬೆಂಕಿ ಹಚ್ಚಲಾಯಿತು.
ಮೋದಿ ಭೇಟಿಗೆ ವಿರೋಧ:2021ರ ಮಾರ್ಚ್​ನಲ್ಲಿ ಪ್ರಧಾನಿ ನರೇಂದ್ರ ಮೋದಿ ಬಾಂಗ್ಲಾದೇಶಕ್ಕೆ ಭೇಟಿ ನೀಡುವುದನ್ನು ಮೂಲಭೂತವಾದಿಗಳು ವಿರೋಧಿಸಿ, ಭಾರಿ ಪ್ರತಿಭಟನೆ ನಡೆಸಿದ್ದರು. ಈ ವಿರೋಧ ಹಿಂಸಾತ್ಮಕ ರೂಪ ತಳೆದ ಪರಿಣಾಮ 12 ಜನರು ಪ್ರಾಣ ಕಳೆದುಕೊಂಡರು.
(ಮಾಹಿತಿ: ain o salish kendra (ask))
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − eleven =
Remember me
